ಕೃಷಿ ವಲಯಕ್ಕೆ ೧ ಲಕ್ಷ ಕೋಟಿ ರೂಪಾಯಿ: ವಿಶೇಷ ಕೊಡುಗೆಯ ೩ನೇ ಕಂತು
ಕೃಷಿಕರ ರಕ್ಷಣೆಗೆ ಕೇಂದ್ರೀಯ ಕಾನೂನು, ಮೀನುಗಾರಿಕೆ, ಹೈನುಗಾರಿಕೆ, ಪಶುಸಂಗೋಪನೆ, ಆಹಾರ ಸಂಸ್ಕರಣೆ, ಜೇನುಸಾಕಣೆ, ಔಷಧೀಯ ಕೃಷಿಗೂ ಒತ್ತು,
ನವದೆಹಲಿ: ಕೊರೋನಾವೈರಸ್ ದಿಗ್ಬಂಧನದಿಂದಾಗಿ (ಲಾಕ್ ಡೌನ್) ರಾಷ್ಟ್ರದಲ್ಲಿ ಸೃಷ್ಟಿಯಾಗಿರುವ ಆರ್ಥಿಕ ಬಿಕ್ಕಟ್ಟು ಶಮನಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದ ೨೦ ಲಕ್ಷ ಕೋಟಿ ರೂಪಾಯಿಗಳ ವಿಶೇಷ ಕೊಡುಗೆಯ ಮೂರನೇ ಕಂತಿನ ವಿವರಗಳನ್ನು 2020 ಮೇ 15ರ ಶುಕ್ರವಾರ ಪ್ರಕಟಿಸಿದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೃಷಿ ಮತ್ತು ಪೂರಕ ವಲಯಕ್ಕೆ ೧ ಲಕ್ಷ ಕೋಟಿ ರೂಪಾಯಿಗಳ ಸಹಾಯಧನವನ್ನು ಘೋಷಿಸಿದರು.
ಕೃಷಿ, ಮೀನುಗಾರಿಕೆ, ಹೈನುಗಾರಿಕೆ, ಪಶುಸಂಗೋಪನೆ ಮತ್ತು ಆಹಾರ ಸಂಸ್ಕರಣೆ ಮತ್ತು ಪೂರಕ ಚಟುವಟಿಕೆಗಳಿಗೆ ಉತ್ತೇಜನ ನೀಡುವತ್ತ ಸಚಿವರು ಹೆಚ್ಚಿನ ಬೆಳಕು ಚೆಲ್ಲಿದರು. ಆಕರ್ಷಕ ಬೆಲೆಗೆ ಉತ್ಪನ್ನಗಳನ್ನು ಮಾರಾಟ ಮಾಡಲು ರೈತರಿಗೆ ಸಾಕಷ್ಟು ಆಯ್ಕೆಗಳನ್ನು ಒದಗಿಸಲು ತಡೆರಹಿತ ಮುಕ್ತ ಅಂತರರಾಜ್ಯ ವ್ಯಾಪಾರ ಮತ್ತು ಕೃಷಿ ಉತ್ಪನ್ನಗಳ ಮಾರಾಟ ಮತ್ತು ಕೃಷಿ ಉತ್ಪನ್ನಗಳ ಇ-ವ್ಯಾಪಾರಕ್ಕಾಗಿ ಚೌಕಟ್ಟು ಒದಗಿಸುವ ಸಲುವಾಗಿ ಕೇಂದ್ರ ಮಟ್ಟದಲ್ಲಿ ಕಾನೂನು ರೂಪಿಸಲಾಗುವುದು ಎಂದು ಅವರು ನುಡಿದರು.
ದೇಶದ ಅತಿದೊಡ್ಡ ವಲಯವಾಗಿರುವ ಕೃಷಿ ವಲಯದಲ್ಲಿ ಕೃಷಿ ಮೂಲ ಸವಲತ್ತು ಮತ್ತು ಸಾಮರ್ಥ್ಯ ವೃದ್ಧಿ ಯೋಜನೆಗಳಿಗೆ ೧ ಲಕ್ಷ ಕೋಟಿ ರೂಪಾಯಿ ಸಹಾಯ ಧನ ಒದಗಿಸಲಾಗಿದ್ದು ಇದರ ಅಡಿಯಲ್ಲಿ ಕೃಷಿ ಚಟುವಟಿಕೆಗಳಿಗೆ ಆರ್ಥಿಕ ನೆರವು ಒದಗಿಸಲಾಗುವುದು ಎಂದು ಸಚಿವರು ನುಡಿದರು.
ಮೂರನೇ ಕಂತಿನಲ್ಲಿ ೧೧ ಉಪಕ್ರಮಗಳನ್ನು ಸಚಿವರು ಘೋಷಿಸಿದ್ದಾರೆ. ಇವುಗಳಲ್ಲಿ ೮ ಉಪಕ್ರಮಗಳು ಮೂಲಸೌಕರ್ಯ, ಸರಕು ಸಾಗಣೆ ವ್ಯವಸ್ಥೆ ಉತ್ತಮಗೊಳಿಸುವುದಕ್ಕೆ ಸಂಬಂಧಿಸಿದ್ದರೆ, ಉಳಿದ ಮೂರು ಉಪಕ್ರಮಗಳು ಆಡಳಿತ ಹಾಗೂ ಆಡಳಿತಾತ್ಮಕ ಸುಧಾರಣೆಗಳಿಗೆ ಸಂಬಂಧಿಸಿವೆ.
ಕೃಷಿ ವಲಯದ ರೈತರು, ಹೈನುಗಾರರು ಮತ್ತು ಮೀನುಗಾರರಿಗೆ ಶುಕ್ರವಾರದ ಕಂತಿನಲ್ಲಿ ಆದ್ಯತೆ ನೀಡಲಾಗಿದೆ ಎಂದು ಸಚಿವರು ವಿವರಿಸಿದರು.
ರೈತರಿಗೆ ಕೃಷಿ ಉತ್ಪನ್ನಗಳ ಮೂಲಸೌಕರ್ಯಕ್ಕಾಗಿ ೧ ಲಕ್ಷ ಕೋಟಿ ರೂಪಾಯಿಗಳ ಕೃಷಿ ಮೂಲಸಲವತ್ತು ನಿಧಿ ಒದಗಿಸಲಾಗುವುದು. ’ಮೊದಲು ಕೃಷಿಕ’ (ಫಾರ್ಮರ್ ಫಸ್ಟ್) ನೀತಿಯಡಿಯಲ್ಲಿ ಒದಗಿಸಲಾಗುವ ಈ ನಿಧಿಯನ್ನು ಮೂಲಸವಲತ್ತು ವೃದ್ಧಿ, ಕೈಗೆಟುಕುವ ಮತ್ತು ಆರ್ಥಿಕವಾಗಿ ಕಾರ್ಯಸಾಧ್ಯವಾದ ಸುಗ್ಗಿಯ ನಂತರದ ನಿರ್ವಹಣಾ ಮೂಲಸೌಕರ್ಯಗಳ ಅಭಿವೃದ್ಧಿಗೆ ಒದಗಿಸಲಾಗುವುದು ಎಂದು ಸೀತಾರಾಮನ್ ನುಡಿದರು.
ರೈತರಿಗೆ ಲಿಕ್ವಿಡಿಟಿ ಸುಧಾಣೆಗಾಗಿ ಸರ್ಕಾರವು ೭೪,೩೦೦ ಕೋಟಿ ರೂಪಾಯಿಗಳನ್ನು ಕನಿಷ್ಠ ಬೆಂಬಲ ಬೆಲೆ ಸಲುವಾಗಿ ಒದಗಿಸಲಿದೆ. ಕಳೆದ ೨ ತಿಂಗಳಲ್ಲಿ ಪಿಎಂ ಕಿಸಾನ್ ಸಮ್ಮಾನ್ ಯೋಜನೆ ಅಡಿಯಲ್ಲಿ ೧೮,೭೦೦ ಕೋಟಿ ರೂ.ಗಳ ಹಣ ವರ್ಗಾವಣೆ ಮಾಡಲಾಗಿದೆ ಮತ್ತು ಪಿಎಂ ಕಿಸಾನ್ ಬಿಮಾ ಯೋಜನೆಯಡಿಯಲ್ಲಿ ಕಳೆದ ೨ ತಿಂಗಳಲ್ಲಿ ಒಟ್ಟು ೬,೪೦೦ ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ ಎಂದು ಅವರು ಹೇಳಿದರು.
ಕೋವಿಡ್-೧೯ ದಿಗ್ಬಂಧನದ ಅವಧಿಯಲ್ಲಿ ಹಾಲಿನ ಬೇಡಿಕೆ ಶೇ ೨೦-೨೫ರಷ್ಟು ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಹಾಲು ಉತ್ಪಾದಕರ ಸಾಲದ ಮೇಲಿನ ಬಡ್ಡಿಯಲ್ಲಿ ಶೇ ೨ರಷ್ಟು ಮೊತ್ತವನ್ನು ಸರ್ಕಾರವೇ ಪಾವತಿ ಮಾಡುವ ಹೊಸ ಯೋಜನೆ ರೂಪಿಸಲಾಗಿದ್ದು, ಇದು ೨೦೨೦-೨೧ ರ ಹಣಕಾಸು ವರ್ಷಕ್ಕೆ ಅನ್ವಯವಾಗಲಿದೆ. ಈ ಯೋಜನೆಯು ೨ ಕೋಟಿ ರೈತರಿಗೆ ಅನುಕೂಲ ಉಂಟು ಮಾಡಲಿದೆ ಎಂದು ನಿರ್ಮಲಾ ಸೀತರಾಮನ್ ನುಡಿದರು.೫,೦೦೦ ಕೋಟಿ ರೂಪಾಯಿ ಹೆಚ್ಚುವರಿ ಹಣವನ್ನು ಇದಕ್ಕಾಗಿ ಮೀಸಲು ಇಡಲಾಗಿದೆ.
ಹೈನುಗಾರಿಕೆ ಮೂಲಸೌಕರ್ಯಕ್ಕಾಗಿ ೧೫,೦೦೦ ಕೋಟಿ ರೂಪಾಯಿಗಳನ್ನು ಒದಗಿಸಲಾಗುತ್ತಿದೆ ಎಂದು ವಿತ್ತ ಸಚಿವರು ನುಡಿದರು.
ಆರೋಗ್ಯಕರ, ಸಾವಯವ ಆಹಾರ ಉತ್ಪಾದನೆಗೆ ಬೆಂಬಲ
ಭಾರತದಾದ್ಯಂತ ಆರೋಗ್ಯಕರ ಮತ್ತು ಸಾವಯವ ಆಹಾರ ಉತ್ಪಾದನೆ ವೃದ್ಧಿಗೆ ನೆರವಾಗಲು ಸರ್ಕಾರವು ೧೦,೦೦೦ ಕೋಟಿ ರೂಪಾಯಿಗಳ ಕಿರು ನಿಧಿಯೊಂದನ್ನು ರಚಿಸಲಿದೆ. ಇದರ ಅಡಿಯಲ್ಲಿ ವಿವಿಧ ರಾಜ್ಯಗಳಲ್ಲಿ ಪ್ರಕೃತಿಗೆ ಅನುಗುಣವಾಗಿ ಬೆಳೆಯುವ ವಿಶೇಷ ಬೆಳೆಗಳನ್ನು ಸಮುದಾಯ ಮಟ್ಟದಲ್ಲಿ ಬೆಳೆಸಲು ಪ್ರೋತ್ಸಾಹ ನೀಡಲಾಗುವುದು. ಉದಾಹರಣೆಗೆ ಕಾಶ್ಮೀರದಲ್ಲಿ ಕೇಸರಿ, ತೆಲಂಗಾಣದಲ್ಲಿ ಅರಶಿನ, ಬಿಹಾರದಲ್ಲಿ ತಾವರೆ ಬೀಜ (ಮಖಾನ) ಬೆಳೆಯುವ ರೈತರಿಗೆ ಉತ್ತೇಜನ ನೀಡಲಾಗುವುದು. ಸುಮಾರು ೨ ಲಕ್ಷ ಕಿರು, ಸಣ್ಣ ಮತ್ತು ಮರ್ಧಯಮ ಉದ್ಯಮಗಳು ಈ ಉಪಕ್ರಮದ ಲಾಭ ಪಡೆಯಲಿವೆ ಎಂದು ನಿರೀಕ್ಷಿಸಲಾಗಿದೆ ಎಂದು ಸಚಿವರು ಹೇಳಿದರು.
ಈ ಉತ್ಪನ್ನಗಳನ್ನು ಬೆಳೆಯುವಲ್ಲಿ ಮಹಿಳೆಯರು, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳನ್ನು ಶಾಮೀಲುಗೊಳಿಸುವ ನಿಟ್ಟಿನಲ್ಲಿ ಹೆಚ್ಚಿನ ಗಮನ ಹರಿಸಲಾಗುವುದು ಎಂದು ಸಚಿವರು ನುಡಿದರು.
ಆಪರೇಷನ್ ಗ್ರೀನ್ ವಿಸ್ತರಣೆ
ಹಸಿರು ಕಾರ್‍ಯಾಚರಣೆ (ಆಪರೇಷನ್ ಗ್ರೀನ್) ಯೋಜನೆಯನ್ನು ಟೊಮೆಟೋ, ಈರುಳ್ಳಿ ಮತ್ತು ಆಲೂಗಡ್ಡೆಗಳಿಂದ (ಟಾಪ್) ಎಲ್ಲ ಹಣ್ಣುಗಳು ಮತ್ತು ತರಕಾರಿಗಳಿಗೆ (ಟೋಟಲ್) ವಿಸ್ತರಿಸಲಾಗುತ್ತಿದೆ. ಇದಕ್ಕಾಗಿ ೫೦೦ ಕೋಟಿ ರೂಪಾಯಿಗಳ ಹೆಚ್ಚುವರಿ ನಿಧಿ ಒದಗಿಸಲಾಗುವುದು ಮತ್ತು ಸಾಗಣೆ, ಸಂಗ್ರಹಕ್ಕೆ ಶೇಕಡಾ ೫೦ರಷ್ಟು ಸಬ್ಸಿಡಿ ನೀಡಲಾಗುವುದು ಎಂದು ಸಚಿವರು ನುಡಿದರು.
ಜೇನು ಸಾಕಣೆ ಕೃಷಿಗೆ ೫೦೦ ಕೋಟಿ
ಸರ್ಕಾರವು ಸಮಗ್ರ ಜೇನು ನೊಣಗಳ ಸಾಕಣೆ ಕೇಂದ್ರ ಅಭಿವೃದ್ಧಿ,
ಜೇನು ಸಂಗ್ರಹ, ಮಾರುಕಟ್ಟೆ ಮತ್ತು ದಾಸ್ತಾನು ಕೇಂದ್ರಗಳು, ಶೇಖರಣೆ ಬಳಿಕದ ಮೌಲ್ಯ ವರ್ಧನಾ ಸವಲತ್ತುಗಳನ್ನು ಒದಗಿಸುವ ಸಲುವಾಗಿ ೫೦೦ ಕೋಟಿ ರೂಪಾಯಿಗಳ ಜೇನು ಸಾಕಣೆ ಮೂಲಸವಲತ್ತು ಅಭಿವೃದ್ಧಿ ಯೋಜನೆ ರೂಪಿಸಿದೆ. ಇದು ೨ ಲಕ್ಷ ಜೇನು ಸಾಕಣೆದಾರರಿಗೆ ಹೆಚ್ಚುವರಿ ಆದಾಯ ತಂದು ಕೊಡಲಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.
ಔಷಧೀಯ ಸಸ್ಯ ಕೃಷಿಗೆ ೪೦೦೦ ಕೋಟಿ ರೂಪಾಯಿ
ಗಂಗಾನದಿ ದಂಡೆಯಲ್ಲಿ ಔಷಧೀಯ ಸಸ್ಯಗಳ ಕಾರಿಡಾರ್ ಅಭಿವೃದ್ಧಿ ಪಡಿಸಲು ಔಷಧೀಯ ಸಸ್ಯ ಕೃಷಿಗೆ ೪೦೦೦ ಕೋಟಿ ರೂಪಾಯಿಗಳನ್ನು ಒದಗಿಸಲಾಗುವುದು ಎಂದು ವಿತ್ತ ಸಚಿವೆ ನುಡಿದರು.
ರಾಷ್ಟ್ರೀಯ ಔಷಧೀಯ ಸಸ್ಯಗಳ ಮಂಡಳಿಯು ಗಂಗಾನದಿ ದಂಡೆಯುದ್ದಕ್ಕೂ ಸುಮಾರು ೮೦೦ ಹೆಕ್ಟೃರ್ ಪ್ರದೇಶದಲ್ಲಿ ಔಷಧೀಯ ಸಸ್ಯಗಳ ಕಾರಿಡಾರನ್ನು ನಿರ್ಮಿಸಲಿದೆ. ಮುಂದಿನ ೨ ವರ್ಷಗಳಲ್ಲಿ ೧೦ ಲಕ್ಷ ಹೆಕ್ಟೇರಿಗೆ ಈ ಔಷಧೀಯ ಸಸ್ಯ ಕೃಷಿಯನ್ನು ವಿಸ್ತರಿಸಲಾಗುವುದು ಎಂದು ಅವರು ನುಡಿದರು.
ಪಶು ಸಂಗೋಪನಾ ಮೂಲಸವಲತ್ತು ನಿಧಿ
ಪಶು ಸಂಗೋಪನಾ ಮೂಲಸವಲತ್ತು ವೃದ್ಧಿಗಾಗಿ ೧೫,೦೦೦ ಕೋಟಿ ರೂಪಾಯಿಗಳ ’ಪಶು ಸಂಗೋಪನಾ ಮೂಲಸವಲತ್ತು ನಿಧಿ’ ರೂಪಿಸಲಾಗುವುದು ಎಂದು ನಿರ್ಮಲಾ ಸೀತಾರಾಮನ್ ನುಡಿದರು.
ಜಾನುವಾರುಗಳ ಕಾಲು ಮತ್ತು ಬಾಯಿ ರೋಗ ಹಾಗೂ ದನಗಳ ಗರ್ಭಪಾತ ನಿವಾರಣೆಗಗಿ ಒಟ್ಟು ೧೩,೩೪೩ ಕೋಟಿ ರೂಪಾಯಿ ವೆಚ್ಚದಲ್ಲಿ ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್‍ಯಕ್ರಮವನ್ನು ಅನುಷ್ಠಾನಗೊಳಿಸಲಾಗುವುದು ಎಂದು ವಿತ್ತ ಸಚಿವೆ ನುಡಿದರು.
೨ ಕೋಟಿ ರೈತರಿಗೆ ೫೦೦೦ ಕೋಟಿ ರೂ
ಹೈನುಗಾರಿಕೆ ಸಹಕಾರಿ ಸಂಸ್ಥೆಗಳಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಲು ಹೊಸ ಯೋಜನೆಯನ್ನು ಪರಿಚಯಿಸಲಾಗಿರುವ ರಿಯಾಯ್ತಿ ಬಡ್ಡಿ ಯೋಜನೆ ಮುಂದುವರೆಯಲಿದ್ದು, ತನ್ಮೂಲಕ ಸರ್ಕಾರವು ಇದಕ್ಕಾಗಿ
೫,೦೦೦ ಕೋಟಿ ರೂಪಾಯಿಗಳನ್ನು ಹೆಚ್ಚುವರಿ ಹಣವನ್ನು ೨ ಕೋಟಿ ರೈತರಿಗೆ ಒದಗಿಸಲಿದೆ ಎಂದು ಸಚಿವರು ಹೇಳಿದರು.
ಸೀಗಡಿ ಕೃಷಿ
೨೪೨ ಸೀಗಡಿ ಮೊಟ್ಟೆಕೇಂದ್ರಗಳ ನೋಂದಣಿ, ನೌಪಾಲಿ ಪಾಲನೆ ಮೊಟ್ಟೆಕೇಂದ್ರಗಳನ್ನು ವಿಸ್ತರಿಸಲಾಗಿದೆ
ಮಾರ್ಚ್ ೩೧, ೨೦೨೦ ರಂದು ಮುಕ್ತಾಯಗೊಂಡ ೨೪೨ ಸೀಗಡಿ ಮೊಟ್ಟೆಕೇಂದ್ರಗಳು ಮತ್ತು ನೌಪಾಲಿ ಪಾಲನೆ ಮೊಟ್ಟೆಕೇಂದ್ರಗಳ ನೋಂದಣಿಯನ್ನು ೩ ತಿಂಗಳವರೆಗೆ ವಿಸ್ತರಿಸಲಾಗಿದೆ.
’ವೋಕಲ್ ಫಾರ್ ಲೋಕಲ್ ವಿತ್ ಗ್ಲೋಬಲ್ ಡಿe ಟ್ರೀಚ್’
ಮೈಕ್ರೋ ಫುಡ್ ಎಂಟರ್‌ಪ್ರೈಸಸ್ (ಎಂಎಫ್‌ಇ) ಅಭಿವೃದ್ಧಿಗಾಗಿ ಸರ್ಕಾರವು
೧೦,೦೦೦ ಕೋಟಿ ರೂಪಾಯಿಗಳ ಯೋಜನೆಯನ್ನು ಆರಂಭಿಸುತ್ತಿದೆ. ಈ ಯೋಜನೆಯು ’ವೋಕಲ್ ಫಾರ್ ಲೋಕಲ್ ವಿಥ್ ಗ್ಲೋಬಲ್ ಔಟ್ ರೀಚ್’ ಎಂಬ ಪ್ರಧಾನಮಂತ್ರಿಯವರ ದೃಷ್ಟಿಕೋನಕ್ಕೆ ಅನುಗುಣವಾಗಿದೆ ಎಂದು ನಿರ್ಮಲಾ ಸೀತಾರಾಮನ್ ನುಡಿದರು.
ಸಮುದ್ರ ಮತ್ತು ಕರಾವಳಿ ರೈತರಿಗಾಗಿ
ಹಲವು ಸಾಗರೋತ್ತರ ಒಪ್ಪಂದಗಳನ್ನು ಒಳಗೊಂಡಂತೆ ಮೀನುಗಾರಿಕೆ ಚಟುವಟಿಕೆಗಳಿಗೆ ಸಂಬಂಧಿಸಿದ ಎಲ್ಲಾ ಕೋವಿಡ್ -೧೯ ಸಂಬಂಧಿತ ಗಡುವು ವಿಸ್ತರಣೆ ಸಹಿತವಾಗಿ ಸಾಗರ ಮತ್ತು ಕರಾವಳಿ ರೈತರಿಗೆ ಸಹಾಯ ಮಾಡುವ ಹಲವು ಕ್ರಮಗಳನ್ನು ಭರವಸೆಯಂತೆ ಕೈಗೊಳ್ಳಲಾಗಿದೆ ಎಂದು ಸಚಿವರು ನುಡಿದರು.
ಪಿಎಂ ಮತ್ಸ್ಯ ಸಂಪದ ಯೋಜನೆ:
ಸಮುದ್ರ ಮತ್ತು ಒಳನಾಡಿನ ಮೀನುಗಾರಿಕೆ ಅಭಿವೃದ್ಧಿಗಾಗಿ ೨೦,೦೦೦ ಕೋಟಿ ರೂಪಾಯಿಗಳ ಪ್ರಧಾನ್ ಮಂತ್ರಿ ಮತ್ಸ್ಯ ಸಂಪದ ಯೋಜನೆಯನ್ನು ಸರ್ಕಾರ ಪ್ರಾರಂಭಿಸಿದೆ. ಮೀನುಗಾರಿಕೆ ಮೌಲ್ಯ ಸರಪಳಿಯಲ್ಲಿ ನಿರ್ಣಾಯಕ ಅಂತರವನ್ನು ತುಂಬಲು ಸಮುದ್ರ ಮತ್ತು ಒಳನಾಡಿನ ಮೀನುಗಾರಿಕೆಯ ಸಮಗ್ರ, ಸುಸ್ಥಿರ, ಅಭಿವೃದ್ಧಿಗಾಗಿ ಈ ಯೋಜನೆ ರೂಪಿಸಲಾಗಿದ್ದು ಇದು ೫೫ ಲಕ್ಷಕ್ಕೂ ಹೆಚ್ಚು ಜನರಿಗೆ ಉದ್ಯೋಗವನ್ನು ನೀಡುತ್ತದೆ ಮತ್ತು ರಫ್ತನ್ನು ದುಪ್ಪಟ್ಟುಗೊಳಿಸಿ ೧ ಲಕ್ಷ ಕೋಟಿ ರೂಪಾಯಿಗಳಿಗೆ ಏರಿಸಲಿದೆ ಎಂದು ಸಚಿವರು ಹೇಳಿದರು.
ರೈತರಿಗೆ ಕಾನೂನು ಚೌಕಟ್ಟಿನ ನೆರವು
ಆಕರ್ಷಕ ಬೆಲೆಗೆ ಉತ್ಪನ್ನಗಳನ್ನು ಮಾರಾಟ ಮಾಡಲು ರೈತರಿಗೆ ಸಾಕಷ್ಟು ಆಯ್ಕೆಗಳನ್ನು ಒದಗಿಸಲು ತಡೆರಹಿತ ಮುಕ್ತ ಅಂತರರಾಜ್ಯ ವ್ಯಾಪಾರ ಮತ್ತು ಕೃಷಿ ಉತ್ಪನ್ನಗಳ ಮಾರಾಟ ಮತ್ತು ಕೃಷಿ ಉತ್ಪನ್ನಗಳ ಇ-ವ್ಯಾಪಾರಕ್ಕಾಗಿ ಚೌಕಟ್ಟು ಒದಗಿಸುವ ಸಲುವಾಗಿ ಕೇಂದ್ರ ಮಟ್ಟದಲ್ಲಿ ಕಾನೂನು ರೂಪಿಸಲಾಗುವುದು ಎಂದು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಹೇಳಿದರು.
ಸಂಸ್ಕಾರಣೆಗಾರರು, ಸಂಗ್ರಾಹಕರು, ದೊಡ್ಡ ಚಿಲ್ಲರೆ ವ್ಯಾಪಾರಿಗಳು, ರಫ್ತುದಾರರೊಂದಿಗೆ ನ್ಯಾಯಯುತ ಮತ್ತು ಪಾರದರ್ಶಕ ರೀತಿಯಲ್ಲಿ ತೊಡಗಿಸಿಕೊಳ್ಳಲು ರೈತರಿಗೆ ಅನುಕೂಲವಾಗುವಂತೆ ಅನುಕೂಲಕರ ಕಾನೂನು ಚೌಕಟ್ಟನ್ನು ರಚಿಸಲಾಗುವುದು ಎಂದು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ನುಡಿದರು.
೬ ಲಕ್ಷ ಕೋಟಿ ರೂಪಾಯಿ ಮೊತ್ತದ ಪರಿಹಾರ ಕೊಡುಗೆಯನ್ನು ನಿರ್ಮಲಾ ಸೀತಾರಾಮನ್ ಅವರು ಬುಧವಾರ ಪ್ರಕಟಿಸಿದ್ದರು. ಇದರ ಪೈಕಿ ೩ ಲಕ್ಷ ಕೋಟಿ ರೂಪಾಯಿಗಳನ್ನು
ಸಣ್ಣ ಉದ್ಯಮಗಳಿಗೆ ಖಾತರಿರಹಿತ ಸಾಲ ನೀಡಲು ಒದಗಿಸಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮೊದಲ ಕೊಡುಗೆ ಪ್ರಕಟಿಸುತ್ತಾ
ಘೋಷಿಸಿದ್ದರು.
ಎರಡನೇ ಕಂತಿನಲ್ಲಿ ಸಣ್ಣ ಕೃಷಿಕರಿಗೆ ರಿಯಾಯ್ತಿ ದರದ ಬೆಳೆಸಾಲಕ್ಕಾಗಿ ಮೂಲ ಬಂಡವಾಳ, ವಲಸೆ ಕಾರ್ಮಿಕರಿಗೆ ಆಹಾರ ಧಾನ್ಯ ಉಚಿತ ವಿತರಣೆ, ಬೀದಿಬದಿ ವ್ಯಾಪಾರಿಗಳಿಗೆ ಸಾಲ ಮುಂತಾದ ಅಂಶಗಳನ್ನು ಒಳಗೊಂಡ ೩.೧೬ ಲಕ್ಷ ಕೋಟಿಯ ಯೋಜನೆಗಳನ್ನು ಪ್ರಕಟಿಸಿದ್ದರು.
ಬ್ಯಾಂಕುಗಳಲ್ಲಿ ನಗದು ಹೆಚ್ಚಳಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಪ್ರಕಟಿಸಿದ ಉಪಕ್ರಮಗಳು, ಆಹಾರ ಭದ್ರತೆ ಮತ್ತು ಇತರ ಪರಿಹಾರವಾಗಿ ನೀಡಲಾದ ಮೊತ್ತವೂ ಸೇರಿ ಒಟ್ಟು ೨೦ ಲಕ್ಷ ಕೋಟಿ ರೂಪಾಯಿಗಳ ಕೊಡುಗೆ ಕಂತುಗಳಲ್ಲಿ ಪ್ರಕಟವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರಕಟಿಸಿದ್ದರು.
ಮಾರ್ಚ್ ೨೫ರಿಂದ ರಾಷ್ಟ್ರವ್ಯಾಪಿ ದಿಗ್ಬಂಧನ ಜಾರಿಯಲ್ಲಿದೆ. ಇದರಿಂದಾಗಿ ಆರ್ಥಿಕ ಚಟುವಟಿಕೆಗಳೆಲ್ಲ ಸ್ಥಗಿತಗೊಂಡಿದ್ದವು. ದಿಗ್ಬಂಧನದ ಹಲವು ನಿರ್ಬಂಧಗಳನ್ನು ಈಗ ಸಡಿಲಿಸಿ, ಆರ್ಥಿಕ ಚಟುವಟಿಕೆಗಳು ಆರಂಭವಾಗಲು ಅನುವು ಮಾಡಿಕೊಡಲಾಗುತ್ತಿದೆ. ಆದರೆ, ದಿಗ್ಬಂಧನದಿಂದಾಗಿ ೧೨.೨ ಕೋಟಿ ಜನರು ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ಅಂದಾಜಿಸಲಾಗಿದೆ. ಇದರಿಂದಾಗಿ, ಗ್ರಾಹಕ ಬೇಡಿಕೆಯಲ್ಲಿ ಭಾರಿ ಕುಸಿತ ಕಂಡು ಬಂದಿದೆ.
No comments:
Post a Comment