Wednesday, July 29, 2020

ಮಾತೃಭಾಷೆಯಲ್ಲೇ ಪ್ರಾಥಮಿಕ ಶಿಕ್ಷಣ: ನೂತನ ಶಿಕ್ಷಣ ನೀತಿಗೆ ಅಸ್ತು

ಮಾತೃಭಾಷೆಯಲ್ಲೇ ಪ್ರಾಥಮಿಕ ಶಿಕ್ಷಣ:
ನೂತನ ಶಿಕ್ಷಣ ನೀತಿಗೆ ಅಸ್ತು

ನವದೆಹಲಿ: ಕನಿಷ್ಠ ೫ನೇ ತರಗತಿವರೆಗೆ ಮತ್ತು ಆದ್ಯತೆ ಆಧಾರದಲ್ಲಿ ೮ನೇ ತರಗತಿವರೆಗೆ ಮನೆಭಾಷೆ/ ಮಾತೃಭಾಷೆ ಅಥವಾ ಪ್ರಾದೇಶಿಕ ಭಾಷಾ ಮಾಧ್ಯಮದಲ್ಲಿ  ಶಿಕ್ಷಣ ಕಲಿಕಾ ವ್ಯವಸ್ಥೆಗೆ ಅವಕಾಶ ಕಲ್ಪಿಸುವ ನೂತನ ಶಿಕ್ಷಣ ನೀತಿಗೆ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು 2020 ಜುಲೈ 29ರ ಬುಧವಾರ ಒಪ್ಪಿಗೆ ನೀಡಿತು.

ಸಚಿವ ಸಂಪುಟ ಸಭೆಯ ಬಳಿಕ ವಾರ್ತಾ ಮತ್ತು ಪ್ರಸಾರ ಸಚಿವ ಪ್ರಕಾಶ ಜಾವಡೇಕರ್ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರ ರಮೇಶ ನಿಶಾಂಕ್ ಪೋಖ್ರಿಯಾಲ್ ಅವರು ವಿಚಾರವನ್ನು ಪ್ರಕಟಿಸಿದರು.

ಕಳೆದ ೩೪ ವರ್ಷಗಳಷ್ಟು ಹಳೆಯದಾದ ರಾಷ್ಟ್ರೀಯ ಶಿಕ್ಷಣ ನೀತಿ ಈಗ ಬದಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟ ೨೧ನೇ ಶತಮಾನದ ಹೊಸ ಶಿಕ್ಷಣ ನೀತಿಗೆ ಅನುಮೋದನೆ ನೀಡಿದೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದರು.

ಶಿಕ್ಷಣದಲ್ಲಿ ಏಕರೂಪತೆ ತರುವುದು, ಎಲ್ಲರಿಗೂ ಗುಣಮಟ್ಟದ ಶಿಕ್ಷಣ ಒದಗಿಸುವುದು ಮತ್ತು ಪ್ರಾಥಮಿಕ ಶಿಕ್ಷಣದ ಗುಣಮಟ್ಟ ಸುಧಾರಿಸುವತ್ತ ಗಮನಹರಿಸುವುದು ಹೊಸ ನೀತಿಯ ಗುರಿಯಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ೧೯೮೬ರಲ್ಲಿ ರೂಪಿಸಲಾಗಿದ್ದು, ೧೯೯೨ರಲ್ಲಿ ಮಾರ್ಪಾಡು ಮಾಡಲಾಯಿತು. ಅದು ಜಾರಿಗೆ ಬಂದ ಸುಮಾರು ಮೂರು ದಶಕಗಳ ನಂತರ ಹೊಸ ಶಿಕ್ಷಣ ನೀತಿಗೆ ಅನುಮೋದನೆ ನೀಡಲಾಗಿದೆ ಎಂದು ಅವರು ನುಡಿದರು.

ಮಾನವ ಸಂಪನ್ಮೂಲ ಮತ್ತು ಅಭಿವೃದ್ಧಿ ಸಚಿವಾಲಯವನ್ನು (ಎಂಎಚ್ಆರ್ ಡಿ) ಈಗಶಿಕ್ಷಣ ಸಚಿವಾಲಯ ಎಂಬುದಾಗಿ ಮರುನಾಮಕರಣ ಮಾಡಲಾಗಿದೆ ಎಂದೂ ಸಚಿವರು ತಿಳಿಸಿದರು.

"ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಸಚಿವ ಸಂಪುಟವು ೨೧ ನೇ ಶತಮಾನದ ಹೊಸ ಶಿಕ್ಷಣ ನೀತಿಗೆ ಅನುಮೋದನೆ ನೀಡಿದೆ. ೩೪ ವರ್ಷಗಳಿಂದ ಶಿಕ್ಷಣ ನೀತಿಯಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ ಎಂಬುದು ಮುಖ್ಯ" ಎಂದು ಜಾವಡೇಕರ್ ಹೇಳಿದರು.

ಸಚಿವ ಸಂಪುಟವು ಅನುಮೋದನೆ ನೀಡಿರುವ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ರ ಪ್ರಮುಖ ಸುಧಾರಣೆಗಳಲ್ಲಿ ೨೦೩೫ರ ವೇಳೆಗೆ ಶೇಕಡಾ ೫೦ ಒಟ್ಟು ದಾಖಲಾತಿ ಅನುಪಾತ ಮತ್ತು ಬಹು ಪ್ರವೇಶ / ನಿರ್ಗಮನಕ್ಕೆ ಅವಕಾಶವಿದೆ. "ಹೊಸ ಶಿಕ್ಷಣ ನೀತಿ ಮತ್ತು ಸುಧಾರಣೆಗಳನ್ನು ಅನುಸರಿಸಿ, ನಾವು ೨೦೩೫ ವೇಳೆಗೆ ಶೇಕಡಾ ೫೦ ಒಟ್ಟು ದಾಖಲಾತಿ ಅನುಪಾತವನ್ನು (ಜಿಇಆರ್) ಸಾಧಿಸುತ್ತೇವೆ" ಎಂದು ಉನ್ನತ ಶಿಕ್ಷಣ ಕಾರ್ಯದರ್ಶಿ ಅಮಿತ್ ಖರೆ ಹೇಳಿದರು.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಮಾಜಿ ಮುಖ್ಯಸ್ಥ ಕೆ ಕಸ್ತುರಿರಂಗನ್ ನೇತೃತ್ವದ ಸಮಿತಿಯು ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ (ಎನ್ಇಪಿ) ಕರಡನ್ನು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್ ಪೋಖ್ರಿಯಾಲ್ ಅವರಿಗೆ ಕಳೆದ ವರ್ಷ ಅಧಿಕಾರ ವಹಿಸಿಕೊಂಡಾಗ ಸಲ್ಲಿಸಿತ್ತು.

ನಂತರ ವಿವಿಧ ಪಾಲುದಾರರ ಪ್ರತಿಕ್ರಿಯೆ ಪಡೆಯಲು ಕರಡನ್ನು ಸಾರ್ವಜನಿಕ ವಲಯದಲ್ಲಿ ಪ್ರಕಟಿಸಲಾಗಿತ್ತು ಮತ್ತು ಅದರ ಬಗ್ಗೆ ಎರಡು ಲಕ್ಷಕ್ಕೂ ಹೆಚ್ಚಿನ ಸಲಹೆಗಳನ್ನು ಮಾನವ ಸಂಪನ್ಮೂಲ ಸಚಿವಾಲಯ ಸ್ವೀಕರಿಸಿತ್ತು.

"ನೀತಿ ಕರಡನ್ನು ಅನುಮೋದಿಸಲಾಗಿದೆ. ಸಚಿವಾಲಯವನ್ನು ಶಿಕ್ಷಣ ಸಚಿವಾಲಯ ಎಂದು ಮರುನಾಮಕರಣ ಮಾಡಲಾಗಿದೆ" ಎಂದು ಮಾನವ ಸಂಪನ್ಮೂಲ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಹೊಸ ಶಿಕ್ಷಣ ನೀತಿಯು ೨೦೧೪ ಸಾರ್ವತ್ರಿಕ ಚುನಾವಣೆಗೆ ಮುನ್ನ ಭಾರತೀಯ ಜನತಾ ಪಕ್ಷದ ಪ್ರಣಾಳಿಕೆಯ ಭಾಗವಾಗಿತ್ತು.

ಸ್ಮೃತಿ ಇರಾನಿ ಅವರು ಮಾನವ ಸಂಪನ್ಮೂಲ ಸಚಿವರಾಗಿದ್ದಾಗ, ಮಾಜಿ ಸಂಪುಟ ಕಾರ್ಯದರ್ಶಿ ಟಿ.ಎಸ್.ಆರ್ ಸುಬ್ರಮಣಿಯನ್ ನೇತೃತ್ವzಲ್ಲಿ ರಚಿಸಲಾಗಿದ್ದ ಸಮಿತಿಯ ವರದಿಯನ್ನು ಕೂಡಾ ಕರಡು ತಜ್ಞರು ಗಣನೆಗೆ ತೆಗೆದುಕೊಂಡರು. 

ಕರಡು ನೀತಿಯ ಪ್ರಕಾರ, ಪಠ್ಯಕ್ರಮದ ವಿಷಯದಲ್ಲಿ ವಿಜ್ಞಾನ ಮತ್ತು ಮಾವೀಯತೆಯಂತಹ ಕಲಿಕೆಯ ಕ್ಷೇತ್ರಗಳನ್ನು ಕಠಿಣವಾಗಿ ಬೇರ್ಪಡಿಸಲಾಗುವುದಿಲ್ಲ. ಸಹಪಠ್ಯ ಮತ್ತು ಪಠ್ಯೇತರ ಕ್ಷೇತ್ರಗಳ ನಡುವೆ ಯಾವುದೇ ಪ್ರತ್ಯೇಕತೆ ಇರುವುದಿಲ್ಲ ಮತ್ತು ಕಲೆ, ಸಂಗೀತ, ಕರಕುಶಲ ವಸ್ತುಗಳು, ಕ್ರೀಡೆ, ಯೋಗ, ಸಮುದಾಯ ಸೇವೆ ಇತ್ಯಾದಿ ಸೇರಿದಂತೆ ಎಲ್ಲಾ ವಿಷಯಗಳು ಪಠ್ಯಕ್ರಮವಾಗಿರುತ್ತವೆ.

 ಹೊಸ ರಾಷ್ಟ್ರೀಯ ಶಿಕ್ಷಣ ನೀತಿ: ಮುಖ್ಯಾಂಶಗಳು

* ಮಕ್ಕಳಿಗೆ ಕನಿಷ್ಠ ೫ನೇ ತರಗತಿಯವರೆಗೆ, ಆದ್ಯತೆ ಆಧಾರದಲ್ಲಿ ೮ನೇ ತರಗತಿವರೆಗೆ ಮನೆಭಾಷೆ/ ಮಾತೃ ಭಾಷೆ ಅಥವಾ ಪ್ರಾದೇಶಿಕ ಭಾಷೆಯಲ್ಲಿ ಶಿಕ್ಷಣ ನೀಡಬೇಕು.

* ಉನ್ನತ ಶಿಕ್ಷಣ ಸಂಸ್ಥೆಗಳು ಹಾಗೂ ವಿಶ್ವವಿದ್ಯಾಲಯಗಳ ಪ್ರವೇಶಕ್ಕೆ ಏಕ ರೂಪ (ಸಾಮಾನ್ಯ) ಪ್ರವೇಶ ಪರೀಕ್ಷೆ ನಡೆಸಲಾಗುತ್ತದೆ.

* ಖಾಸಗಿ ಮತ್ತು ಸಾರ್ವಜನಿಕ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಒಂದೇ ರೀತಿಯ ನಿಯಮಗಳು ಅನ್ವಯವಾಗಲಿವೆ.

* ಎಂಫಿಲ್ ಕೋರ್ಸುಗಳ ಮುಂದುವರಿಕೆ ಇಲ್ಲ.

* ಕಲಿಕೆಯನ್ನು ಅನ್ವಯಿಸುವುದರ ಆಧಾರದ ಮೇಲೆ ಮಂಡಳಿ (ಬೋರ್ಡ್) ಪರೀಕ್ಷೆಗಳು.

* ಪ್ರಾದೇಶಿಕ ಭಾಷೆಗಳಲ್ಲಿ -ಕೋರ್ಸುಗಳ ಅಭಿವೃದ್ಧಿ. ವರ್ಚುವಲ್ ಲ್ಯಾಬ್ಗಳು, ರಾಷ್ಟ್ರೀಯ ಶೈಕ್ಷಣಿಕ ತಂತ್ರಜ್ಞಾನ ವೇದಿಕೆ (ಎನ್ಇಟಿಎಫ್) ರೂಪಿಸಲಾಗುತ್ತದೆ.

* ೨೦೩೫ರ ವೇಳೆಗೆ ಶೇ ೫೦ರಷ್ಟು ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಸಿಗುವಂತೆ ಮಾಡುವ ಗುರಿ.

* ಎಲ್ಲ ಉನ್ನತ ಶಿಕ್ಷಣಗಳಿಗೆ ಒಂದೇ ನಿಯಂತ್ರಣ ಸಂಸ್ಥೆ..

* ದೇಶದಲ್ಲಿ ಸುಮಾರು ೪೫,೦೦೦ ಕಾಲೇಜುಗಳು/ ಶಿಕ್ಷಣ ಸಂಸ್ಥೆಗಳಿಗೆ ಶೈಕ್ಷಣಿಕ, ಆಡಳಿತ ಹಾಗೂ ಹಣಕಾಸು ಸ್ವಾಯತ್ತತೆಯನ್ನು ನೀಡಲಾಗುತ್ತದೆ.

* ಪ್ರಸ್ತುತ ಡೀಮ್ಡ್ ಯೂನಿವರ್ಸಿಟಿಗಳು, ಸೆಂಟ್ರಲ್ ಯೂನಿವರ್ಸಿಟಿಗಳು, ಪ್ರತ್ಯೇಕ ಸಂಸ್ಥೆಗಳಿಗೆ ಪ್ರತ್ಯೇಕ ನಿಯಮಾವಳಿಗಳಿವೆ. ಹೊಸ ಶಿಕ್ಷಣ ನೀತಿಯ ಪ್ರಕಾರ, ಗುಣಮಟ್ಟದ ಕಾರಣಗಳಿಂದ ಎಲ್ಲ ಸಂಸ್ಥೆಗಳಿಗೂ ಒಂದೇ ರೀತಿಯ ನಿಯಮಗಳು ಅನ್ವಯವಾಗಲಿದೆ.

* ವಿದ್ಯಾರ್ಥಿಗಳ ಪ್ರಗತಿ ಪತ್ರಗಳಲ್ಲಿ ಕೇವಲ ಅಂಕಗಳು ಹಾಗೂ ಟಿಪ್ಪಣಿಗಳ ಬದಲು ಕೌಶಲ ಹಾಗೂ ಅರ್ಹತೆಗಳ ಸಮಗ್ರ ವರದಿ ನೀಡಲಾಗುತ್ತದೆ.

* ವೃತ್ತಿ ಆಧಾರಿತ ವಿಷಯಗಳನ್ನು ೬ನೇ ತರಗತಿಗಳ ಪಠ್ಯದೊಂದಿಗೆ ಸಂಯೋಜಿಸಲಾಗುತ್ತದೆ. ಕಲೆ ಮತ್ತು ವಿಜ್ಞಾನದ ರೀತಿ ಪ್ರತ್ಯೇಕಗೊಳಿಸಿದ ಶಿಕ್ಷಣ ವ್ಯವಸ್ಥೆ ಇರುವುದಿಲ್ಲ.

No comments:

Advertisement