Thursday, July 30, 2020

ರಾಮಮಂದಿರ ಭೂಮಿ ಪೂಜೆಗೆ ಕೋವಿಡ್ ಕಾಟ

ರಾಮಮಂದಿರ

ಅರ್ಚಕ, ೧೬ ಭದ್ರತಾ ಸಿಬ್ಬಂದಿಗೆ ಸೋಂಕು

ಲಕ್ನೋ: ಅಯೋಧ್ಯೆಯಲ್ಲಿನ ರಾಮಮಂದಿರಕ್ಕಾಗಿ 2020 ಆಗಸ್ಟ್ ೫ರಂದು ಪ್ರಧಾನಿ ನರೇಂದ್ರ ಮೋದಿ ಸಮ್ಮುಖದಲ್ಲಿ ನಡೆಸಲು ನಿಗದಿಯಾಗಿರುವ ಭವ್ಯ ಭೂಮಿ ಪೂಜೆ ಸಮಾರಂಭದ ಮೇಲೆ ಕೊರೋನಾವೈರಸ್ ತನ್ನ ಕರಿನೆರಳನ್ನು ಚಾಚಿದ್ದು, ಅರ್ಚಕ ಮತ್ತು ೧೬ ಮಂದಿ ಭದ್ರತಾ ಸಿಬ್ಬಂದಿಗೆ ಕೋವಿಡ್-೧೯ ಸೋಂಕು ತಗುಲಿದೆ.

ಅರ್ಚಕ ಪ್ರದೀಪ ದಾಸ್ ಅವರಿಗೆ ಕೊರೋನಾವೈರಸ್ ಸಾಂಕ್ರಾಮಿಕ ತಗುಲಿದೆ. ದಾಸ್ ಅವರು ನಿವೇಶನದಲ್ಲಿ ನಿಯಮಿತವಾಗಿ ಪೂಜೆ ನಡೆಸುತ್ತಿರುವ ನಾಲ್ವರು ಅರ್ಚಕರ ಪೈಕಿ ಒಬ್ಬರಾದ ಆಚಾರ್ ಸತೇಂದ್ರ ದಾಸ್ ಅವರ ಶಿಷ್ಯನಾಗಿದ್ದಾರೆ.

ಪ್ರದೀಪ ದಾಸ್ ಅವರು ಪ್ರಸ್ತುತ ಹೋಮ್ ಕ್ಯಾರಂಟೈನಿನಲ್ಲಿ ಇದ್ದು, ಅವರ ಜೊತೆಗೆ ಸಂಪರ್ಕ ಹೊಂದಿದ್ದವರ ಪತ್ತೆ ಯತ್ನವನ್ನು ತೀವ್ರಗೊಳಿಸಲಾಗಿದೆ. ಇದಕ್ಕೆ ಮುನ್ನ ಬುಧವಾರ ಸತೇಂದ್ರ ದಾಸ್ ಅವರ ಸಂದರ್ಶನ ನಡೆಸಿದ್ದ ಕೆಲವು ಮಾಧ್ಯಮ ಮಂದಿ ಕೂಡಾ ಇದೀಗ ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.

ಉತ್ತರ ಪ್ರದೇಶ ಆರೋಗ್ಯ ಇಲಾಖೆಯ ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಅಯೋಧ್ಯೆಯಲ್ಲಿ 2020 ಜುಲೈ 29ರ ಬುಧವಾರ ೬೬ ಮಂದಿಗೆ ಕೊರೋನಾ ಸೋಂಕು ತಗುಲಿದೆ. ಈವರೆಗೆ ಕೊರೋನಾ ಸೋಂಕಿನಿಂದ ಗುಣಮುಖರಾಗಿ ಚೇತರಿಸಿದ ೬೦೫ ಮಂದಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಪ್ರಸ್ತುತ ೩೭೫ ಸಕ್ರಿಯ ಪ್ರಕರಣಗಳು ಇವೆ. ಜಿಲ್ಲೆಯಲ್ಲಿ ಈವರೆಗೆ ೧೩ ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಭೇಟಿಯ ಹಿನ್ನೆಲೆಯಲ್ಲಿ ಅಯೋಧ್ಯೆಯಲ್ಲಿ ಭದ್ರತಾ ವ್ಯವಸ್ಥೆಯನ್ನು ಬಿಗಿಗೊಳಿಸಲಾಗಿದೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ದೇಶದ ವಿವಿಧ ಕಡೆಗಳಿಂದ ಆಗಮಿಸಲಿರುವ ಗಣ್ಯರು ಭೂಮಿ ಪೂಜಾ ಸಮಾರಂಭಕ್ಕೆ ಸಾಕ್ಷಿಯಾಗಲಿದ್ದಾರೆ. ಭೂಮಿ ಪೂಜೆಯ ಭವ್ಯ ಸಮಾರಂಭದ ಯಸ್ಸಿಗಾಗಿ ರಾಮಮಂದಿರ ತೀರ್ಥ ಕ್ಷೇತ್ರ ಟ್ರಸ್ಟ್ ಸರ್ವ ಯತ್ನಗಳನ್ನು ನಡೆಸುತ್ತಿದೆ. ಎರಡು ವಾಟರ್ ಪ್ರೂಫ್ ಪೆಂಡಾಲ್ಗಳು ಮತ್ತು ಸಣ್ಣ ವೇದಿಕೆಯನ್ನು ನಿರ್ಮಿಸಲಾಗಿದೆ.

ಅಯೋಧ್ಯಾ ರಾಮಮಂದಿರದ ಭೂಮಿ ಪೂಜೆಯನ್ನು ದೀಪಾವಳಿ ಹಬ್ಬದೋಪಾದಿಯಲ್ಲಿ ನಡೆಸಲು ಭರದ ಸಿದ್ಧತೆಗಳು ನಡೆಯುತ್ತಿವೆ.

ಆಗಸ್ಟ್ ೫ರಂದು ಬೆಳಗ್ಗೆ ೧೧.೩೦ರಿಂದ ೧೨.೩೦ರ ನಡುವಣ ಅವಧಿಯಲ್ಲಿ ದೇಶಾದ್ಯಂತ ತಮ್ಮ ತಮ್ಮ ದೇವಾಲಯಗಳಲ್ಲಿ ಪೂಜೆ ನೆರವೇರಿಸುವಂತೆ ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಎಲ್ಲ ಸಂತರಿಗೆ ಮನವಿ ಮಾಡಿದೆ ಮತ್ತು ಭೂಮಿ ಪೂಜಾ ಸಮಾರಂಭದ ನೇರಪ್ರಸಾರವನ್ನು ವೀಕ್ಷಿಸುವಂತೆ ಜನತೆಯನ್ನು ಕೋರಿದೆ. ಅಲ್ಲದೆ ಅದೇ ದಿನ ಸಂಜೆ ಮನೆ ಮನೆಗಳಲ್ಲಿ ಮಣ್ಣಿನ ಹಣತೆಗಳಲ್ಲಿ ಜ್ಯೋತಿ ಬೆಳಗುವಂತೆ ಮನವಿ ಮಾಡಿದೆ.

ಕಳೆದವಾರ  ಯೋಗಿ ಆದಿತ್ಯನಾಥ್ ಅವರು ರಾಮಜನ್ಮಭೂಮಿ ಸಮುಚ್ಚಯಕ್ಕೆ ಭೇಟಿ ನೀಡಿ ಮಹಾನ್ ಕಾರ್ಯಕ್ರಮದ ಸಿದ್ಧತೆಗಳ ಪರಿಶೀಲನೆ ನಡೆಸಿದ್ದರು.

ಆಗಸ್ಟ್ ೫ರ ಸಮಾರಂಭದಲ್ಲಿ ವಾರಾಣಸಿ ಮತ್ತು ಅಯೋಧ್ಯೆಯ ೧೧ ಮಂದಿ ಅರ್ಚಕರು ಪೂಜಾ ಕೈಂಕರ್ಯ ನೆರವೇರಿಸಲಿದ್ದಾರೆ. ಕೊರೋನಾ ಸೋಂಕು ತಗುಲಿರುವ ಅರ್ಚಕ ಪ್ರದೀಪದಾಸ್ ಅವರು ೧೧ ಮಂದಿ ಅರ್ಚಕರ ಗುಂಪಿನಲ್ಲಿ ಇಲ್ಲ.

ಸಂಪೂರ್ಣ ರಾಮಜನ್ಮಭೂಮಿ ಆವರಣವನ್ನು ಪ್ರತಿದಿನವೂ ಶುಚಿಗೊಳಿಸಲು ಟ್ರಸ್ಟ್ ನಿರ್ಧರಿಸಿದೆ.

ಚಿಂತೆಗೆ ಕಾರಣವಿಲ್ಲ. ದೇವಾಲಯದ ನಿವೇಶನದಲ್ಲಿ ಪ್ರತಿದಿನದ ವಿಧಿಗಳನ್ನು ನಡೆಸುವ ಅರ್ಚಕರೊಬ್ಬರಿಗೆ ಸೋಂಕು ತಗುಲಿದೆ. ಇಡೀ ಆವರಣವನ್ನು ನಿಯಮಿತವಾಗಿ ಶುಚಿಗೊಳಿಸಲಾಗುತ್ತಿದೆಎಂದು ಟ್ರಸ್ಟ್ ಅಧ್ಯಕ್ಷ ಮಹಂತ ನೃತ್ಯ ಗೋಪಾಲ ದಾಸ್ ಅವರ ಉತ್ತರಾಧಿಕಾರಿಯಾಗಿ ನಿಯೋಜಿತರಾಗಿರುವ ಮಹಂತ ಕಮಲ ನಯನ ದಾಸ್ ಹೇಳಿದರು.

ಭೂಮಿ ಪೂಜೆ ಸಮಾರಂಭಕ್ಕೆ ಸುಮಾರು ೨೦೦ ಮಂದಿಗೆ ಆಮಂತ್ರಣ ನೀಡಲಾಗಿದೆ. ವಿವಿಧ ರಾಜ್ಯಗಳ ಎಲ್ಲ ಮುಖ್ಯಮಂತ್ರಿಗಳನ್ನು ಕೂಡಾ ಆಹ್ವಾನಿಸಲಾಗುವುದು ಎಂದು ಟ್ರಸ್ಟ್ ಖಚಾಂಚಿ ಸ್ವಾಮಿ ಗೋವಿಂದ ದೇವ ಗಿರಿ ನುಡಿದರು.

ಹಿರಿಯ ಬಿಜೆಪಿ ನಾಯಕ ಮತ್ತು ಮಾಜಿ ಉಪ ಪ್ರಧಾನಿ ಲಾಲ್ ಕೃಷ್ಣ ಅಡ್ವಾಣಿ ಮತ್ತು ರಾಮ ಜನ್ಮಭೂಮಿ ಆಂದೋಳನದ ಇತರ ನಾಯಕರನ್ನು ಕೂಡಾ ಆಹ್ವಾನಿಸಲಾಗುವುದು ಎಂದು ಟ್ರಸ್ಟ್ ಸದಸ್ಯರೊಬ್ಬರು ತಿಳಿಸಿದರು.

ಅಯೋಧ್ಯೆಯಲ್ಲಿನ ರಾಮಜನ್ಮಭೂಮಿ ನಿವೇಶನದಲ್ಲಿ ಮೂರು ದಿನಗಳ ವೈದಿಕ ವಿಧಿವಿಧಾನಗಳಿಗೆ ವಿಸ್ತೃತ ಸಿದ್ಧತೆಗಳನ್ನು ಮಾಡಲಾಗುತ್ತಿದೆ. ವೈದಿಕ ವಿಧಿ ವಿಧಾನಗಳು ಆಗಸ್ಟ್ ೩ರಂದು ಆರಂಭಗೊಂಡು ಆಗಸ್ಟ್ ೫ರಂದು ಭೂಮಿ ಪೂಜೆಯೊಂದಿಗೆ ಮುಕ್ತಾಯಗೊಳ್ಳಲಿವೆ. ಬಳಿಕ ಬಹುನಿರೀಕ್ಷಿತ ದೇವಾಲಯದ ನಿರ್ಮಾಣ ಕಾರ್ ಆರಂಭವಾಗಲಿದೆ.

No comments:

Advertisement