My Blog List

Wednesday, July 29, 2020

ಹರಿಯಾಣದ ಅಂಬಾಲ ವಾಯುನೆಲೆಗೆ ಬಂದಿಳಿದ ರಫೇಲ್

ಹರಿಯಾಣದ ಅಂಬಾಲ ವಾಯುನೆಲೆಗೆ ಬಂದಿಳಿದ ರಫೇಲ್

ಭಾರತೀಯ ವಾಯುಪಡೆಗೆ ಬಂತು ಆನೆ ಬಲ

ಹರಿಯಾಣ: ಫ್ರಾನ್ಸಿನಿಂದ 2020 ಜುಲೈ 27ರ ಸೋಮವಾರ ಹೊರಟಿದ್ದ ಮೊದಲ ಹಂತದ ಐದು ರಫೇಲ್ ಯುದ್ಧ ವಿಮಾನಗಳು 2020 ಜುಲೈ 7ರ ಬುಧವಾರ ಬುಧವಾರ ಮಧ್ಯಾಹ್ನ ಅಂಬಾಲ ವಾಯುನೆಲೆಗೆ ಬಂದಿಳಿದವು. ಭಾರತದ ನೆಲವನ್ನು ಚುಂಬಿಸಿದ ಸಮರವಿಮಾನಗಳು ಭಾರತೀಯ ವಾಯುಪಡೆಗೆ ಭೀಮಬಲವನ್ನು ತಂದುಕೊಟ್ಟಿದ್ದು ಸಮಸ್ತ ಭಾರತೀಯ ಹೆಮ್ಮೆ ನೂರ್ಮಡಿಗೊಂಡಿತು.

ಫ್ರಾನ್ಸಿನ ಮೆರಿಗ್ನಾಕ್ ವಾಯುಸೇನಾ ನೆಲೆಯಿಂದ ಹೊರಟಿದ್ದ ವಿಮಾನಗಳು ಅಂಬಾಲಾ ತಲುಪುತ್ತಿದ್ದಂತೆಯೇ ರಾಷ್ಟ್ರ ಸಂರಕ್ಷಣೆಗೆ ಸಂಬಂಧಿಸಿ ಸಂಸ್ಕೃತ ಶ್ಲೋಕವೊಂದನ್ನು ಟ್ವೀಟ್ ಮಾಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ವಿಮಾನಗಳಿಗೆ ಸ್ವಾಗತ ಕೋರಿದರು.

ರಫೇಲ್ ಯುದ್ಧ ವಿಮಾನಗಳು ರಾಷ್ಟ್ರ ರಕ್ಷಣೆಯಲ್ಲಿ ಸದ್ಗುಣ ಹಾಗೂ ತ್ಯಾಗ ಮನೋಭಾವದಿಂದ ಕರ್ತವ್ಯ ನಿರತವಾಗಲಿವೆ ಎಂದು ಪ್ರಧಾನಿ ಮೋದಿ ವೇಳೆ ಭರವಸೆ ವ್ಯಕ್ತಪಡಿಸಿದರು.

ರಫೇಲ್ ಯುದ್ಧ ವಿಮಾನಗಳು ಭಾರತೀಯ ವಾಯುಸೇನೆಯ ಸಾಮರ್ಥ್ಯವನ್ನು ಇಮ್ಮಡಿಗೊಳಿಸಿದ್ದು, ದೇಶದ ಗಡಿಗಳು ಮತ್ತಷ್ಟು ಸುರಕ್ಷಿತವಾಗಿವೆ ಎಂದು ಪ್ರಧಾನಿ ಮೋದಿ ಸಂತಸ ವ್ಯಕ್ತಪಡಿಸಿದರು.

ಐದೂ ರಫೇಲ್ ವಿಮಾನಗಳು ಒಂದಾದ ಬಳಿಕ ಒಂದರಂತೆ ಅಂಬಾಲಾ ವಾಯುನೆಲೆಗೆ ಯಶಸ್ವಿಯಾಗಿ ಬಂದಿಳಿಯುತ್ತಿದ್ದಂತೆಯೇ ವಾಯುಸೇನಾ ಸಿಬ್ಬಂದಿ ಹರ್ಷೊದ್ಘಾತರ ಮೊಳಗಿಸಿದರು.

ಭಾರತೀಯ ವಾಯುಸೇನೆಯ ಸ್ವರ್ಣ ಬಾಣಗಳು (ಗೋಲ್ಡನ್ ಆರೋಸ್) ತಂಡ ಸೇರಿದ ರಫೇಲ್ ಯುದ್ಧ ವಿಮಾನಗಳನ್ನು ಭಾರತೀಯ ವಾಯುಪಡೆಯ ಮುಖ್ಯಸ್ಥ ಏರ್ ಮಾರ್ಷಲ್ ರಾಕೇಶ್ ಕುಮಾರ್ ಸಿಂಗ್ ಬಧೌರಿಯಾ (ಆರ್ಕೆ ಎಸ್ ಭದೌರಿಯಾ) ಮತ್ತು ಇತರ ಅಧಿಕಾರಿಗಳು ವಿಮಾನಗಳನ್ನು ಸ್ವಾಗತಿಸಿದರು.

ರಫೇಲ್ ವಿಮಾನಗಳೂ ಆಗಮಿಸುತ್ತಿದ್ದಂತೆಯೇ ಯುದ್ಧ ವಿಮಾನಗಳಿಗೆ ವಾಟರ್ ಸೆಲ್ಯೂm (ಜಲ ಗೌರವ) ನೀಡಲಾಯಿತು.

ಭಾರತೀಯ ವಾಯುಸೇನೆಯ ಬಲ ವೃದ್ಧಿಗೊಂಡಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹರ್ಷ ವ್ಯಕ್ತಪಡಿಸಿದರು. ಬಾರತದ ಸೇನಾ ಇತಿಹಾಸದಲ್ಲಿ ಹೊಸ ಅಧ್ಯಾಯವೊಂದು ಆರಂಭವಾಗಿದೆ ಎಂದ ರಾಜನಾಥ್ ಸಿಂಗ್ ಹೇಳಿದರು.

ಇದಕ್ಕೂ ಮುನ್ನ ಟ್ವೀಟ್ ಮಾಡಿದ್ದ ರಾಜನಾಥ್ ಸಿಂಗ್, ರಾಷ್ಟ್ರ ರಕ್ಷಣೆಯಲ್ಲಿ ಕರ್ತವ್ಯ ನಿರತವಾಗಲಿರುವ ರಫೇಲ್ ಜೆಟ್ಗಳನ್ನು ಸ್ವಾಗತಿಸಲು ಅತೀವ ಸಂತೋಷವಾಗುತ್ತಿದೆ ಎಂದು ಹೇಳಿದ್ದರು.

ಮುಂದಿನ ಆಗಸ್ಟ್ ತಿಂಗಳಲ್ಲಿ ರಫೇಲ್ ಯುದ್ಧ ವಿಮಾನಗಳಿಗೆ ಅಧಿಕೃತವಾದ ಸ್ವಾಗತ ದೊರೆಯಲಿದ್ದು, ಅದ್ದೂರಿ ಸಮಾರಂಭದ ಮೂಲಕ ರಫೇಲ್ ಸಂಭ್ರಮಾಚರಣೆ ನಡೆಯಲಿದೆ ಎಂದು ಭಾರತೀಯ ವಾಯುಸೇನೆ ತಿಳಿಸಿದೆ.

ವಿಮಾನಗಳು ಬಂದಿಳಿಯುವ ಮುನ್ನ, ವಾಯುನೆಲೆಯ ಸುತಮುತ್ತ್ತ ಮುನ್ನೆಚ್ಚರಿಕೆಯಾಗಿ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿತ್ತು. ಸಮೀಪದ ನಾಲ್ಕು ಹಳ್ಳಿಗಳಲ್ಲಿ ಸೆಕ್ಷನ್ ೧೪೪ ಜಾರಿಗೊಳಿಸಿದ್ದಲ್ಲದೆ, ಯುದ್ಧ ವಿಮಾನಗಳು ಬಂದಿಳಿಯುವ ದೃಶ್ಯ ಸೆರೆ ಹಿಡಿಯುವುದನ್ನು ನಿಷೇಧಿಸಲಾಗಿತ್ತು.

ಒಟ್ಟು ೩೬ ಯುದ್ಧ ವಿಮಾನಗಳ ಖರೀದಿಗೆ ಭಾರತ ಮತ್ತು ಫ್ರಾನ್ಸ್ ಮಧ್ಯೆ ಒಪ್ಪಂದ ಏರ್ಪಟ್ಟ ನಾಲ್ಕು ವರ್ಷಗಳ ಬಳಿಕ ಮೊದಲ ಹಂತವಾಗಿ ಐದು ಯುದ್ಧ ವಿಮಾನಗಳು ಭಾರತಕ್ಕೆ ಬಂದವು. ಇನ್ನೂ ಐದು ವಿಮಾನಗಳನ್ನು ಫ್ರಾನ್ಸಿನಲ್ಲಿ  ತರಬೇತಿಗೆ ಬಳಸಿಕೊಳ್ಳಲಾಗುತ್ತಿದೆ.

ವಿಮಾನಗಳಿಗೆ ಶಸ್ತ್ರಾಸ್ತ್ರ ಅಳವಡಿಸುವ ಬಗ್ಗೆ ಈಗಾಗಲೇ ಸಿದ್ಧತೆ ನಡೆಸಲಾಗಿದೆ. ಮುಂದಿನ ಕೆಲವೇ ದಿನಗಳಲ್ಲಿ ರಫೇಲ್ ಯುದ್ಧವಿಮಾನಗಳನ್ನು ಭಾರತೀಯ ವಾಯುಪಡೆಯು ಸಮರಾಭ್ಯಾಸಗಳಿಗೆ ನಿಯೋಜನೆ ಮಾಡಲಿದೆ.

ಅಂಬಾಲ ವಾಯುನೆಲೆಯು ಮಿಲಿಟರಿ ಇತಿಹಾಸದ ದೃಷ್ಟಿಯಿಂದಲೂ ನಿರ್ಣಾಯಕವಾದುದು. ಸ್ವಾತಂತ್ರ್ಯಾ  ನಂತರ ಎರಡು ಬಾರಿ ವಾಯುನೆಲೆಯ ಮೇಲೆ ವಾಯುದಾಳಿ ನಡೆದಿತ್ತು. ವೈರಿ ದೇಶಗಳ ಗಡಿಯ ಸನಿಹದಲ್ಲಿರುವ ವಾಯುನೆಲೆಯ ವಾಯುರಕ್ಷಣಾ ವ್ಯವಸ್ಥೆಯನ್ನು ರಕ್ಷಣಾ ಇಲಾಖೆ ಸೂಕ್ಷ್ಮವಾಗಿ ಗಮನಿಸುತ್ತಿರುತ್ತದೆ ಮತ್ತು ಕಾಲಕ್ಕೆ ತಕ್ಕಂತೆ ಆದ್ಯತೆಯ ಮೇಲೆ ಸುಧಾರಿಸುತ್ತಿರುತ್ತದೆ.

ನಮ್ಮ ದೇಶದಲ್ಲಿ ಅತ್ಯಂತ ಸುಸಜ್ಜಿತ ವಾಯುರಕ್ಷಣಾ ವ್ಯವಸ್ಥೆ ಇರುವ ವಾಯುನೆಲೆ ಎಂಬ ಹೆಗ್ಗಳಿಕೆ ಅಂಬಾಲಕ್ಕೆ ಇದೆ. ಇದೇ ಕಾರಣಕ್ಕೆ ರಫೇಲ್ ಯುದ್ಧ ವಿಮಾನಗಳನ್ನು ಅಂಬಾಲದಲ್ಲಿಯೇ ಮೊದಲ ಬಾರಿಗೆ ಭಾರತದ ಭೂ ಸ್ಪರ್ಶ ಮಾಡಿಸಲು ನಿರ್ಧರಿಸಲಾಯಿತು ಎಂದು ಹೇಳಲಾಗಿದೆ.

ಚೀನಾ ಗಡಿಯ ಲಡಾಖ್ ವಲಯದ ವಾಸ್ತವ ಗಡಿ ನಿಯಂತ್ರಣ ರೇಖೆಯಲ್ಲಿ ರಫೇಲ್ ವಿಮಾನವನ್ನು ನಿಯೋಜಿಸಲಾಗುತ್ತದೆ ಎಂದು ಅಧಿಕೃತ ಮೂಲಗಳು ಹೇಳಿವೆ.

ಒಟ್ಟು ೩೬ ರಫೇಲ್ ಸಮರ ವಿಮಾನಗಳ ಪೈಕಿ ೩೦ ವಿಮಾನಗಳು ಯುದ್ಧ ಸನ್ನದ್ಧ ಸ್ಥಿತಿಯಲ್ಲಿರಲಿವೆ ಹಾಗೂ ಉಳಿದ ವಿಮಾನಗಳು ತರಬೇತಿ ನೀಡಲು ಬಳಕೆಯಾಗಲಿವೆ.

ಈಗಾಗಲೇ ವಾಯುಪಡೆ ಪೈಲಟ್ಗಳು ಹಾಗೂ ಸಹಾಯಕ ಸಿಬ್ಬಂದಿ ವಿಮಾನ ಹಾಗೂ ಅದು ಒಳಗೊಂಡಿರುವ ಶಸ್ತ್ರಾಸ್ತ್ರ ವ್ಯವಸ್ಥೆಯ ಬಗ್ಗೆ ಸಂಪೂರ್ಣ ತರಬೇತಿ ಪಡೆದಿದ್ದಾರೆ. ರಫೇಲ್ ವಿಮಾನಗಳ ಮತ್ತೊಂದು ಪಡೆಯು ಪಶ್ಚಿಮ ಬಂಗಾಳದ ಹಾಶಿಮಾರ ವಾಯುನೆಲೆಯಲ್ಲಿ ನೆಲೆಗೊಳ್ಳಲಿದ್ದು, ಒಂಬತ್ತು ತಿಂಗಳ ತರಬೇತಿ ಬಳಿಕ ಭಾರತಕ್ಕೆ ಬರಲಿದೆ. ಅಂಬಾಲ, ಹಾಶಿಮಾರದಲ್ಲಿ ೪೦೦ ಕೋಟಿ ರೂಪಾಯಿ ವೆಚ್ಚದಲ್ಲಿ ವಿಮಾನ ನಿರ್ವಹಣಾ ಸೌಲಭ್ಯ ಕಲ್ಪಿಸಲಾಗಿದೆ.

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಕಳೆದ ಡಿಸೆಂಬರಿನಲ್ಲಿ ಪ್ರಾನ್ಸಿಗೆ ಭೇಟಿ ನೀಡಿದ ಸಮಯದಲ್ಲಿ ಮೊದಲ ರಫೇಲ್ ಯುದ್ಧವಿಮಾನವನ್ನು ಹಸ್ತಾಂತರ ಮಾಡಲಾಗಿತ್ತು.

ಭಾರತ ಮತ್ತು  ಫ್ರಾನ್ಸ್ ಮಧ್ಯೆ ಯುದ್ಧವಿಮಾನ ಖರೀದಿ ಒಪ್ಪಂದಕ್ಕೆ ಸುದೀರ್ಘ ಇತಿಹಾಸವಿದೆ. ತೂಫಾನಿಸ್, ಮಿಸ್ಟರೆ, ಜಾಗ್ವಾರ್, ಮಿರಾಜ್ ಯುದ್ಧವಿಮಾನಗಳ ಬಳಿಕ ಇದೀಗ ರಫೇಲ್ ಸೇರ್ಪಡೆಯಾಗಿದೆ.

ಆಟ ಪರಿವರ್ತಕ ವಿಮಾನ

* ರಫೇಲ್ ಯುದ್ಧ ವಿಮಾನಕ್ಕೆ ವಿಶ್ವದ ಅತ್ಯಾಧುನಿಕ ಯುದ್ಧವಿಮಾನ ಎಂಬ ಖ್ಯಾತಿ ಇದೆ.

* ಇದು ಅತ್ಯಂತ ಶಕ್ತಿಶಾಲಿ ಶಸ್ತ್ರಾಸ್ತ್ರಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ.

* ಹಲವು ಗುರಿಗಳನ್ನು ಏಕಕಾಲದಲ್ಲಿ ನಾಶಪಡಿಸುವ ಶಕ್ತಿ ಇದಕ್ಕಿದೆ.

* ಅಣ್ವಸ್ತ್ರ ಸಿಡಿತಲೆಯ ಕ್ಷಿಪಣಿಗಳನ್ನು ಉಡ್ಡಯನ ಮಾಡುವ ಬಲ ಇದರ ವಿಶೇಷ ಸಾಮರ್ಥ್ಯವಾಗಿದೆ.

* ಒಂದು ರಫೇಲ್, ವೈರಿಪಡೆಯ ಹಲವು ಯುದ್ಧವಿಮಾನಗಳಿಗೆ ಸಮ ಎನ್ನಲಾಗುತ್ತಿದೆ.

ಏನೇನು ಉಪಕರಣಗಳಿವೆ?

* ಬಾನಿನಿಂದ ನೆಲಕ್ಕೆ ದಾಳಿ ಮಾಡುವ ಸಾಮರ್ಥ್ಯದ ಫ್ರೆಂಚ್ ಹ್ಯಾಮರ್

* ಆಗಸದಿಂದ ಆಗಸಕ್ಕೆ ಚಿಮ್ಮುವ ಕ್ಷಿಪಣಿ, ಕ್ರೂಸ್ ಕ್ಷಿಪಣಿ

*  ಇಸ್ರೇಲ್ ನಿರ್ಮಿತ ಹೆಲ್ಮೆಟ್

*  ರೇಡಾರ್ ಮುನ್ನೆಚ್ಚರಿಕೆ ರಿಸೀವರ್

*  ಜಾಮರ್

*  ೧೦-ಗಂಟೆಗಳ ಹಾರಾಟದ ದತ್ತಾಂಶ ರೆಕಾರ್ಡಿಂಗ್

*  ಇನ್ಫ್ರಾ-ರೆಡ್ ಸರ್ಚ್ ಮತ್ತು ಟ್ರ್ಯಾಕಿಂಗ್ ವ್ಯವಸ್ಥೆ

*  ಇಸ್ರೇಲ್ ಸ್ಪೈಸ್ ೨೦೦೦ ಬಾಂಬ್

ವಿಡಿಯೋ ನೋಡಲು ಕೆಳಗೆ  ಕ್ಲಿಕ್  ಮಾಡಿರಿ:



No comments:

Advertisement