Saturday, October 17, 2020

ಚೀನಾ ಪಟ್ಟು: ಟ್ಯಾಂಕ್ ವಾಪಸ್ ಮೊದಲು, ಬಳಿಕ ಸೇನೆ ವಾಪಸಾತಿ

 ಚೀನಾ ಪಟ್ಟು: ಟ್ಯಾಂಕ್ ವಾಪಸ್ ಮೊದಲು, ಬಳಿಕ ಸೇನೆ ವಾಪಸಾತಿ

ನವದೆಹಲಿ: ಲಡಾಖ್ ಬಿಕ್ಕಟ್ಟನ್ನು ಬಗೆ ಹರಿಸುವ ನಿಟ್ಟಿನಲ್ಲಿ ನಡೆಯುತ್ತಿರುವ ಭಾರತ-ಚೀನಾ ನಡುವಣ ಸೇನೆ ಹಾಗೂ ರಾಜತಾಂತ್ರಿಕ ಮಾತುಕತೆಗಳು ಅತ್ಯಂತ ರಹಸ್ಯವಾಗಿದ್ದರೂ, ಪೀಪಲ್ಸ್ ಲಿಬರೇಶನ್ ಆರ್ಮಿಯು (ಪಿಎಲ್‌ಎ) ಸೇನಾ ವಾಪಸಾತಿಯ ಭಾರತದ ಪ್ರಸ್ತಾವಕ್ಕೆ ಪ್ರತಿಯಾಗಿ ಉದ್ವಿಗ್ನತೆ ಶಮನದ ಬಳಿಕ ಸೇನೆ ವಾಪಸಾತಿಯ ಪ್ರತಿಪಟ್ಟು ಹಾಕಿದೆ ಎಂದು ಸುದ್ದಿ ಮೂಲಗಳು 2020 ಅಕ್ಟೋಬರ್ 17ರ ಶನಿವಾರ  ತಿಳಿಸಿವೆ.

ಏನಾದರೂ ಅನಾಹುತ ಸಂಭವಿಸದಂತೆ ತಪ್ಪಿಸಲು ಟ್ಯಾಂಕ್ ಮತ್ತು ಫಿರಂಗಿಗಳನ್ನು ಪರಸ್ಪರರ ಸಮ್ಮತಿಯೊಂದಿಗೆ ಒಟ್ಟಿಗೆ ಹಿಂತೆಗೆದುಕೊಳ್ಳಬೇಕು ಎಂಬ ಪ್ರಸ್ತಾಪವನ್ನೂ ಚೀನಾ ಮುಂದಿಟ್ಟಿದೆ ಎನ್ನಲಾಗಿದೆ.

ಹಂತಹಂತವಾಗಿ ಸೇನಾ ವಾಪಸಾತಿ, ಪರಿಶೀಲನೆ ಪ್ರಕ್ರಿಯೆ ಮತ್ತು ಬಳಿಕ ಉದ್ವಿಗ್ನತೆ ಶಮನದ ಮಾರ್ಗದ ಮೂಲಕ ಪಡೆಗಳ ಸಮಗ್ರ ವಾಪಸಾತಿ ಕ್ರಮ ಅನುಸರಿಸಬೇಕು ಎಂದು ಭಾರತ ಹೇಳಿದೆ.

ವಾಪಸಾತಿಯು ಲಡಾಖ್‌ನ ೧೫೯೭ ಕಿಮೀ ಉದ್ದದ ವಾಸ್ತವಿಕ ನಿಯಂತ್ರಣ ರೇಖೆಯುದ್ಧಕ್ಕೂ ಸೇನೆಗಳು ೨೦೨೦ರ ಏಪ್ರಿಲ್ ಪೂರ್ವ ಸ್ಥಿತಿಗೆ ಹೋಗಬೇಕು ಎಂಬ ಸೂತ್ರವನ್ನು ಒಳಗೊಂಡಿರಬೇಕು ಎಂದು ಭಾರತ ಪ್ರತಿಪಾದಿಸಿದೆ. ಒಮ್ಮೆ ಇದು ಆಗುತ್ತಿದ್ದಂತೆಯೇ ಉದ್ವಿಗ್ನತೆ ಶಮನಗೊಳ್ಳುತ್ತದೆ ಎಂದು ಭಾರತ ಹೇಳಿದೆ.

ತಜ್ಞರ ಪ್ರಕಾರ, ಶುದ್ಧ ಸೇನಾ ಭಾಷೆಯಲ್ಲಿ ಘರ್ಷಣೆಯ ಸ್ಥಳಗಳಿಂದ ಫಿರಂಗಿ ಮತ್ತು ಟ್ಯಾಂಕ್ ಬೆಂಬಲವನ್ನು ಕಡಿಮೆ ಮಾಡುವುದು ಭಾರತೀಯ ಸೇನೆಗೆ ಪೂರಕವಾಗದು ಏಕೆಂದರೆ ಪೀಪಲ್ಸ್ ಲಿಬರೇಶನ್ ಆರ್ಮಿಯು ಬೀಜಿಂಗ್ ಯಾವುದನ್ನು ಎಲ್‌ಎಸಿ ಎಂಬುದಾಗಿ ಗ್ರಹಿಸಿಕೊಂಡಿದೆಯೋ ಅಲ್ಲಿಯವರೆಗೂ ರಸ್ತೆಗಳನ್ನು ನಿರ್ಮಿಸಿದೆ ಮತ್ತು ಭಾರತಕ್ಕಿಂತ ವೇಗವಾಗಿ ಶಸ್ತ್ರಾಸ್ತ್ರಗಳನ್ನು ತರುವ ಸಾಮರ್ಥ್ಯವನ್ನು ಹೊಂದಿದೆ.

ಪೀಪಲ್ಸ್ ಲಿಬರೇಶನ್ ಆರ್ಮಿಯು ಪೂರ್ವಸ್ಥಿತಿ ಪುನಃಸ್ಥಾಪನೆ ಮತ್ತು ಸೇನಾ ವಾಪಸಾತಿ ಪರವಾಗಿ ಒಲವು ವ್ಯಕ್ತ ಪಡಿಸುವವರೆಗೂ ಪೂರ್ವ ಲಡಾಖ್‌ನ ಎತ್ತರ ಪ್ರದೇಶಗಳಲ್ಲಿ  ಚಳಿಗಾಲದುದ್ದಕ್ಕೂ ಭಾರತೀಯ ಸೇನೆ ನಿಯೋಜನೆಗೊಂಡಿರಬೇಕಾಗುತ್ತದೆ ಎಂಬುದು ಹಿರಿಯ ಅಧಿಕಾರಿಗಳ ಅಭಿಪ್ರಾಯವಾಗಿದೆ.

ಭಾರತೀಯ ಸೇನೆಗೆ ಎತ್ತರದ ಪ್ರದೇಶಗಳಲ್ಲಿ ನಿಯೋಜನೆಗೊಳ್ಳಲು ತರಬೇತಿ ನೀಡಲಾಗಿದೆ. ಬಿಕ್ಕಟ್ಟು ಉಭಯರಿಗೂ ಹಿತವಾಗುವಂತೆ ಇತ್ಯರ್ಥಗೊಳ್ಳುವವರೆಗೂ ಎತ್ತರ ಪ್ರದೇಶಗಳ ಕಾವಲಿಗಾಗಿ ಪಡೆಗಳು ಇಲ್ಲಿ ನಿಯೋಜಿತವಾಗಿ ಇರಬೇಕಾಗುತ್ತದೆ. ಭಾರತದ ನಿಲುವು ಸಮರ್ಪಕವಾದುದಾಗಿದ್ದು ಸಮರ್ಥನೀಯವಾಗಿದೆ ಎಂದು ಹೆಸರು ಹೇಳಲು ಇಚ್ಛಿಸದ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

ಪ್ಯಾಂಗೊಂಗ್ ತ್ಸೊ ಸರೋವರದ ಉತ್ತರ ದಂಡೆ ಮತ್ತು ಗೋಗ್ರಾ -ಹಾಟ್ ಸ್ಪ್ರಿಂಗ್ಸ್ ಎಲ್‌ಎಸಿ ಆಗಿದೆ ಎಂಬುದು ಪೀಪಲ್ಸ್ ಲಿಬರೇಶನ್ ಆರ್ಮಿಯ ಕಲ್ಪನೆಯಾಗಿದ್ದರೆ, ಅತ್ಯುನ್ನತ ಎತ್ತರದಲ್ಲಿನ ಉಪ್ಪು ಸರೋವರದ ದಕ್ಷಿಣದಂಡೆಯು ವಾಸ್ತವ ನಿಯಂತ್ರಣ ರೇಖೆಯಾಗಿದೆ ಎಂಬುದು ಭಾರತೀಯ ಸೇನೆಯ ಕಲ್ಪನೆಯಾಗಿದೆ. ಸೇನೆಗಳು ರೆಝಾಂಗ್ ಲಾ ರೆದಿನ್ ಲಾ ರಿಜ್ ಲೈನಿನಲ್ಲಿ ಪ್ರಸ್ತತ ತಳವೂರಿವೆ.

ಭಾರತದ ರಾಷ್ಟ್ರೀಯ ಭದ್ರತಾ ಯೋಜಕರು ಭವಿಷ್ಯದಲ್ಲಿ ಉದ್ವಿಗ್ನ ಪರಿಸ್ಥಿತಿ ಎಲಿಯವರೆಗೆ ಮುಂದುವರೆಯುಬಹುದು ಎಂದು ಚರ್ಚಿಸುತ್ತಿದ್ದಾರೆ. ನವೆಂಬರ್ ಅಮೆರಿಕ ಅಧ್ಯಕ್ಷೀಯ ಚುನಾವಣೆಯವರೆಗೂ ಮಾತುಕತೆ ನಡೆಸುತ್ತಾ ಪಿಎಲ್‌ಎಯು ಭಾರತವನ್ನು ಸಂತೈಸುತ್ತ ಕಾಲತಳ್ಳಬಹುದು.  ಆದರೆ ಅಧ್ಯಕ್ಷ ಟ್ರಂಪ್ ಶ್ವೇತಭವನಕ್ಕೆ ಹಿಂತಿರುಗದಿದ್ದರೆ ಚೀನಾವು ೩೪೮೮ ಕಿ.ಮೀ ಎಲ್‌ಎಸಿ ಉದ್ದಕ್ಕೂ ಹಗೆತನವನ್ನು ಹೆಚ್ಚಿಸುತ್ತದೆ ಎಂಬುದು ಒಂದು ಚಿಂತನೆಯಾಗಿದೆ.

ಮೂಲಭೂತವಾಗಿ ಇದರ ಅರ್ಥವೇನೆಂದರೆ, ಇದೀಗ, ಚೀನಾ ತೈವಾನ್‌ಗೆ ಭೇಟಿ ನೀಡುವ ಅಮೆರಿಕದ ಕ್ರಮಗಳ ಮೇಲೆ ಗಮನ ಕೇಂದ್ರೀಕರಿಸಿದ್ದು, ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶದ ನಂತರ ಭಾರತದತ್ತ ಗಮನ ಹರಿಸಲಿದೆ.

ಏಪ್ರಿಲ್ ತಿಂಗಳಲ್ಲಿ ಗಾಲ್ವಾನ್-ಗೊಗ್ರಾ-ಹಾಟ್ ಸ್ಪ್ರಿಂಗ್ಸ್‌ನಲ್ಲಿ ಘರ್ಷಣೆ ಪ್ರಾರಂಭವಾದಾಗ, ಅಮೆರಿಕದ ಚುನಾವಣೆಗಳು ಸಹ ದಿಗಂತದಲ್ಲಿರಲಿಲ್ಲ. ಹೀಗಾಗಿ ಎಲ್‌ಎಸಿಯ ಮೇಲಿನ ಪಿಎಲ್‌ಎ ಆಕ್ರಮಣಕ್ಕೂ ಅಮೆರಿಕದ ಅಧ್ಯಕ್ಷೀಯ ಚುನಾವಣೆಗೂ ಯಾವುದೇ ಸಂಬಂಧವನ್ನು ಹೊಂದಿಲ್ಲ ಎಂಬುದು ಇತರ ಚಿಂತಕರ ಅಭಿಮತ. ೧೯೫೯ ನವೆಂಬರ್ ೭ರ ರೇಖೆಯ ಪುನಃಸ್ಥಾಪನೆ ಮತ್ತು ೨೦೧೯ ನವೆಂಬರ್ ೨ರಂದು ಲಡಾಖ್ ನಕ್ಷೆಯನ್ನು ಪ್ರಕಟಿಸಿದ್ದಕ್ಕಾಗಿ ಎಲ್‌ಎಸಿಯಲ್ಲಿ ಭಾರತಕ್ಕೆ ಶಿಕ್ಷೆ ವಿಧಿಸುವ ಗುರಿಯನ್ನು ಪಿಎಲ್‌ಎ ಹೊಂದಿದೆ ಎಂದು ಕೆಲವು ಮೂಲಗಳ ಅಭಿಪ್ರಾಯವಾಗಿದೆ.

ಆಕ್ರಮಣಶೀಲತೆಯು ಚೀನಾದಲ್ಲಿನ ಆಂತರಿಕ ಪರಿಸ್ಥಿತಿಗೆ, ಭಾಗಶಃ ವುಹಾನ್ ನಗರದಿಂದ ಕೊರೋನವೈರಸ್ ಹರಡುವಿಕೆಯೊಂದಿಗೆ ಸಂಬಂಧ ಹೊಂದಿದೆ. ಇದರಿಂದಾಗಿ ಆರ್ಥಿಕತೆಯ ಮೇಲೆ ಪರಿಣಾಮ ಮತ್ತು ಬಳಿಕ ನಂತರದ ರಾಜಕೀಯ ಕೂಡಾ ಲಡಾಖ್ ಬೆಳವಣಿಗೆಗಳಿಗೆ ಹಿನ್ನೆಲೆಯಾಗಿರಬಹುದು ಎಂದೂ ಹೇಳಲಾಗುತ್ತಿದೆ. ಚೀನಾದ ಆಂತರಿಕ ರಾಜಕೀಯ ಪರಿಸ್ಥಿತಿ ಉಲ್ಬಣಗೊಳ್ಳುವ ಬದಲು ಸರಾಗವಾಗಲಿದೆ ಎಂದು ನಿರೀಕ್ಷಿಸಲಾಗಿದ್ದರೂ, ಎಲ್‌ಎಸಿಯ ಮೇಲಿನ ಒತ್ತಡವು ಸಾಕಷ್ಟು ಕಾಲದವರೆಗೆ ಮುಂದುವರೆಯುತ್ತದೆ ಎಂದು ಮೂಲಗಳು ಹೇಳಿವೆ.

No comments:

Advertisement