ಏನಿದೆ ಈ ಪುಸ್ತಕಗಳಲ್ಲಿ?
ಬೆಂಗಳೂರು: ಸಂಪೂರ್ಣ ಸ್ವರಾಜ್ ಫೌಂಡೇಷನ್ನಿನ ಡಾ. ಶಂಕರ
ಕೆ. ಪ್ರಸಾದ್ ಅವರು ಬರೆದಿರುವ ʼ21ನೇ ಶತಮಾನದ
ಆತ್ಮನಿರ್ಭರ ಗ್ರಾಮ ಪಂಚಾಯಿತಿʼ ಮತ್ತು ಅದರ
ಆಂಗ್ಲ ಆವೃತ್ತಿ ʼರಿಬೂಟಿಂಗ್ ಡೆಮಾಕ್ರಸಿ ಇನ್ ಗ್ರಾಮ್
ಪಂಚಾಯತ್ಸ್ʼ ಪುಸ್ತಕಗಳು 2023 ಡಿಸೆಂಬರ್
9ರ ಶನಿವಾರ ಬೆಳಗ್ಗೆ ಬೆಂಗಳೂರಿನ ಗಾಂಧಿ ಭವನದಲ್ಲಿ ಬಿಡುಗಡೆಯಾಗಲಿವೆ.
ಈ ಪುಸ್ತಕಗಳಲ್ಲಿ ಏನಿದೆ? ವಿವರ ಇಲ್ಲಿದೆ:
ಭಾರತೀಯ ಸಂವಿಧಾನಕ್ಕೆ 1992ರಲ್ಲಿ ತರಲಾದ 73ನೇ ತಿದ್ದುಪಡಿಯು ʼಪಂಚಾಯತಿ ರಾಜ್ ಕಾಯಿದೆʼ ಎಂಬುದಾಗಿಯೇ
ಖ್ಯಾತಿ ಪಡೆದಿದೆ. ಗ್ರಾಮ ಪಂಚಾಯಿತಿಗಳನ್ನು ಸಂವಿಧಾನಬದ್ಧಗೊಳಿಸಿ ದೇಶದ ಗ್ರಾಮೀಣ ಪ್ರಜಾಪ್ರಭುತ್ವವನ್ನು
ಬಲಪಡಿಸುವುದು ಈ ತಿದ್ದುಪಡಿಯ ಉದ್ದೇಶವಾಗಿತ್ತು. ಅಧಿಕಾರ ಮತ್ತು ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯನ್ನು
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಗ್ರಾಮ ಪಂಚಾಯಿತಿಗಳಿಗೆ ವಿಕೇಂದ್ರೀಕರಣ ಮಾಡುವುದು ಇದರ ಮುಖ್ಯ
ಗುರಿಯಾಗಿತ್ತು. ಈ ತಿದ್ದುಪಡಿಯ ಪ್ರಕಾರ, ಗ್ರಾಮ ಪಂಚಾಯತಿಗಳಿಗೆ ಹಣಕಾಸು, ಕಾರ್ಯ ನಿರ್ವಹಣೆ
ಮತ್ತು ಪದಾಧಿಕಾರಿಗಳ ವಿಚಾರದಲ್ಲಿ ಅಧಿಕಾರಗಳನ್ನು ಸಂವಿಧಾನಬದ್ಧವಾಗಿಯೇ ಒದಗಿಸಲಾಗಿದೆ. ಆದರೆ ಇಂದಿಗೂ ಗ್ರಾಮ ಪಂಚಾಯಿತಿಗಳಲ್ಲಿ ಹೆಚ್ಚಿನ
ನಿರ್ಧಾರಗಳನ್ನು ಶಾಸಕರು, ಸಂಸದರು ಮತ್ತು ರಾಜ್ಯ ಹಾಗೂ ಕೇಂದ್ರ ಮಟ್ಟದ ಅಧಿಕಾರಿಗಳೇ ತೆಗೆದುಕೊಳ್ಳುತ್ತಾರೆ.
ಈ ಪುಸ್ತಕವು ಗ್ರಾಮ ಪಂಚಾಯಿತಿಗಳ ಚುನಾಯಿತ ಪ್ರತಿನಿಧಿಗಳಿಗೆ ಪಂಚಾಯಿತಿ ರಾಜ್ ಕಾಯಿದೆಯ ಕುರಿತು ಅರಿವು ಮೂಡಿಸುತ್ತದೆ. ಅದರ ಜೊತೆಗೆ,
ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿಗಳಿಗೆ ಹೊಂದಿಕೆಯಾಗುವಂತೆ ತಮ್ಮ ಸ್ಥಳೀಯ
ಸರ್ಕಾರವನ್ನು ಹೇಗೆ ನಡೆಸಬೇಕು ಮತ್ತು ತಮ್ಮ ಗ್ರಾಮದ
ಪರಿಸ್ಥಿತಿ, ಅಗತ್ಯಗಳು ಮತ್ತು ಜನರ ಆಶಯಗಳಿಗೆ ಅನುಗುಣವಾಗಿ ಗ್ರಾಮ ಪಂಚಾಯಿತಿಗಳು ಗ್ರಾಮದ ಅಭಿವೃದ್ಧಿಯನ್ನು
ಹೇಗೆ ಸಾಧಿಸಬಹುದು ಎಂಬುದನ್ನು ಹೇಳುತ್ತದೆ..
ದಿಕ್ಸೂಚಿ ಕಲಿಕಾ ತಂತ್ರಜ್ಞಾನ
(ನ್ಯಾವಿಗೇಟೆಡ್ ಲರ್ನಿಂಗ್ ಟೆಕ್ನಾಲಜಿ), ಸಹಜ ಭಾಷಾ ಸಂಸ್ಕರಣೆ (ನ್ಯಾಚುರಲ್
ಲ್ಯಾಂಗ್ವೇಜ್ ಪ್ರೊಸೆಸಿಂಗ್), ಸಾಧನಗಳ
ಅಂತರ್ಜಾಲ (ಐಒಟಿ), ಕೆಲಸದ ಹರಿವಿನ
ಸ್ವಯಂಚಲನ (ವರ್ಕ್‌ಫ್ಲೋ ಆಟೊಮೇಷನ್) ಮತ್ತು ಬ್ಲಾಕ್‌ಚೈನ್ ತಂತ್ರಜ್ಞಾನಗಳಂತಹ ಸೀಮಾತೀತ ತಂತ್ರಜ್ಞಾನಗಳನ್ನು ಗ್ರಾಮಗಳ ವಿಕಾಸಕ್ಕೆ ಗ್ರಾಮ ಪಂಚಾಯತ್ ಹೇಗೆ ಬಳಸಬಹುದು ಎಂಬ ಬಗ್ಗೆ ಪುಸ್ತಕವು ಚರ್ಚಿಸುತ್ತದೆ. ಜೊತೆಗೇ ಈ ಸೀಮಾತೀತ ತಂತ್ರಜ್ಞಾನಗಳ
ಬಳಕೆ ಮೂಲಕ ಮಹಾತ್ಮ ಗಾಂಧೀಜಿಯವರ ʼಗ್ರಾಮ ಸ್ವರಾಜ್ʼ ಪರಿಕಲ್ಪನೆಯನ್ನು ನನಸುಗೊಳಿಸುವುದು ಹೇಗೆ ಎಂಬ ಬಗ್ಗೆಯೂ ವಿವರಿಸುತ್ತದೆ.
21 ನೇ ಶತಮಾನದಲ್ಲಿ, ಇಡೀ ಜಗತ್ತು
"ಡಿಜಿಟಲ್" ಆಗುತ್ತಿದೆ. ಭಾರತವು ಕೂಡಾ "ಡಿಜಿಟಲ್ ಇಂಡಿಯಾ" ಎಂಬುದಾಗಿ ಘೋಷಿಸಿದೆ. ಈ ಹೊತ್ತಿನಲ್ಲಿ ಭಾರತದ ಪ್ರತಿಯೊಂದು
ಗ್ರಾಮ ಪಂಚಾಯಿತಿಯನ್ನೂ "ಡಿಜಿಟಲ್
ಗ್ರಾಮ ಪಂಚಾಯಿತಿʼ ಆಗಿ ಪರಿವರ್ತಿಸುವುದು ಅತ್ಯಂತ ಮುಖ್ಯವಾಗಿದೆ.
ಭಾರತದಲ್ಲಿ 2,40,000 ಗ್ರಾಮ ಪಂಚಾಯಿತಿಗಳಿದ್ದು, 6 ಲಕ್ಷ ಹಳ್ಳಿಗಳು
ಮತ್ತು 80 ಕೋಟಿ ಜನಸಂಖ್ಯೆ
ಇದೆ. ಭಾರತದ ನಗರಗಳ ಜನರು ಮತ್ತು ಗ್ರಾಮೀಣ ಜನರ ಮಧ್ಯೆ ಇಂದು ದೊಡ್ಡ ಪ್ರಮಾಣದ ʼಡಿಜಿಟಲ್ ಅಂತರʼ ಇದೆ. ಭಾರತವು ಅಭಿವೃದ್ಧಿ
ಹೊಂದಿದ ದೇಶವಾಗಲು, ಈ ಅಂತರವನ್ನು
ನಿವಾರಿಸಿಕೊಳ್ಳುವ ನಿಟ್ಟಿನಲ್ಲಿ ಡಿಜಿಟಲ್ ಪರಿವರ್ತನೆ ಆಗಬೇಕಾಗಿದ್ದು ದೇಶದ 80 ಕೋಟಿಯಷ್ಟು ಸಂಖ್ಯೆಯಲ್ಲಿ ಇರುವ ಗ್ರಾಮೀಣ ಜನರನ್ನು ಇದರಲ್ಲಿ ಸೇರಿಸುವುದು
ಅನಿವಾರ್ಯವಾಗಿದೆ. ತಂತ್ರಜ್ಞಾನದ ಕೊರತೆಯಿಂದ ಯಾರೇ
ಒಬ್ಬ ನಾಗರಿಕನೂ
ಹಿಂದೆ ಉಳಿಯದಂತೆ ನೋಡಿಕೊಳ್ಳಬೇಕಾಗಿದೆ.
ಸಂಪೂರ್ಣ ಸ್ವರಾಜ್ ಪ್ರತಿಷ್ಠಾನವು ಭಾರತದಾದ್ಯಂತ ಗ್ರಾಮ ಪಂಚಾಯಿತಿಗಳಲ್ಲಿನ ಜನರ ಪರಿಸ್ಥಿತಿಯ ಅಧ್ಯಯನ ಮಾಡಿದೆ ಮತ್ತು ಗ್ರಾಮ ಪಂಚಾಯಿತಿಗಳಿಗೆ
ಸೂಕ್ತವಾಧ ತಂತ್ರಜ್ಞಾನಗಳನ್ನು ಅಭಿವೃದ್ಧಿ ಪಡಿಸಿ ಅನುಷ್ಠಾನಗೊಳಿಸಿದೆ. ಹಲವಾರು ಗ್ರಾಮ ಪಂಚಾಯಿತಿಗಳಲ್ಲಿ
ಅದರ ಪ್ರಯೋಗವನ್ನೂ ಮಾಡಿದೆ.
ಉದಾಹರಣೆಗೆ: ಜಿಪಿಎಸ್
ಆಧಾರಿತವಾದ ದಿಕ್ಸೂಚಿ ಕಲಿಕಾ ತಂತ್ರಜ್ಞಾನ (ನ್ಯಾವಿಗೇಟೆಡ್ ಲರ್ನಿಂಗ್ ಟೆಕ್ನಾಲಜಿ). ಹಳ್ಳಿಗರು ಗ್ರಾಮ
ಪಂಚಾಯಿತಿ ಆಡಳಿತವನ್ನು ಹೇಗೆ ನಡೆಸಬೇಕೆಂದು
ಕಲಿಯಲು, ಪುಸ್ತಕಗಳನ್ನು
ಓದುವ ಅಗತ್ಯವಿಲ್ಲ. ಅವರು ತಮ್ಮ ಮೊಬೈಲ್ ಫೋನ್ ಬಳಸಿ ಈ ತಂತ್ರಜ್ಞಾನದ ಮೂಲಕ ಗ್ರಾಮ ಪಂಚಾಯಿತಿ ಆಡಳಿತ ನಡೆಸುವ ಬಗೆಯನ್ನು ಕಲಿಯಬಹುದು.
ಓದಲು ಮತ್ತು ಬರೆಯಲು ಬಾರದ ಹಳ್ಳಿಗರು ತಮ್ಮ ಮಾತೃಭಾಷೆಯಲ್ಲಿ ಮಾತನಾಡಿದಾಗ ಅವರ ಧ್ವನಿಯನ್ನು ಗುರುತಿಸುವ ವ್ಯವಸ್ಥೆಯನ್ನು (ಸಹಜ ಭಾಷಾ ಸಂಸ್ಕರಣೆ) ಅಭಿವೃದ್ಧಿ ಪಡಿಸಲಾಗಿದೆ. ಅವರು ತಮ್ಮ ಮೊಬೈಲ್‌ನಲ್ಲಿಯೇ ಆರೋಗ್ಯ, ಕೃಷಿ ಮತ್ತು
ಆಡಳಿತದ ಬಗ್ಗೆ ತಿಳಿದುಕೊಳ್ಳಬಹುದು.
ಗ್ರಾಮಸ್ಥರು ತಮ್ಮ ಮೊಬೈಲ್‌ನಲ್ಲಿರುವ ಕೆಲಸದ ಹರಿವು ಸ್ವಯಂಚಲನ ತಂತ್ರಜ್ಞಾನ (ವರ್ಕ್ ಫ್ಲೋ
ಆಟೊಮೇಷನ್) ಆ್ಯಪ್ ಬಳಸಿ
ಗ್ರಾಮ ಪಂಚಾಯಿತಿ ಜೊತೆಗಿನ ತಮ್ಮ ಎಲ್ಲ ವ್ಯವಹಾರಗಳನ್ನು ನಡೆಸಬಹುದು ಮತ್ತು ತಮ್ಮ ಕೆಲಸವನ್ನು ಮಾಡಬಹುದು.
ಗ್ರಾಮ ಪಂಚಾಯಿತಿ ಕಚೇರಿಗೆ ಹೋಗಿ ಸರತಿ ಸಾಲಿನಲ್ಲಿ ನಿಲ್ಲುವ ಅಗತ್ಯವಿಲ್ಲ. ಈ ತಂತ್ರಜ್ಞಾನ ದಕ್ಷತೆ ಮತ್ತು ಹೊಣೆಗಾರಿಕೆಯನ್ನು ತರುತ್ತದೆ ಮತ್ತು ದೋಷರಹಿತ ಗ್ರಾಮ ಪಂಚಾಯತಿಯನ್ನು ಒದಗಿಸುತ್ತದೆ.
ಬ್ಲಾಕ್ ಚೈನ್ ತಂತ್ರಜ್ಞಾನವನ್ನು ಅಳವಡಿಸುವ ಮೂಲಕ, ಗ್ರಾಮ ಪಂಚಾಯಿತಿಗಳು ಪ್ರತಿ ವಹಿವಾಟು, ಭೂ ದಾಖಲೆಗಳನ್ನು
ದೃಢೀಕರಿಸಬಹುದು ಮತ್ತು ಮಧ್ಯವರ್ತಿ ಇಲ್ಲದೆಯೇ
ಇ-ಕಾಮರ್ಸ್
ಹೆಚ್ಚಿಸಲು ಸಾಧ್ಯವಿದೆ. ಈ ವಿಶ್ವಾಸಾರ್ಹ ವಹಿವಾಟು ತಂತ್ರಜ್ಞಾನವು ನ್ಯಾಯಾಲಯಗಳಿಗೆ ಅಲೆದಾಟವನ್ನು ತಪ್ಪಿಸುತ್ತದೆ ಮತ್ತು
ನಾಗರಿಕರಿಗೆ ಸಮಯವನ್ನು ಉಳಿಸುತ್ತದೆ.
ಸಾಧನಗಳ ಅಂತರ್ಜಾಲ (ಇಂಟರ್ನೆಟ್ ಆಫ್ ಥಿಂಗ್ಸ್) ಅಥವಾ ಐಒಟಿಯನ್ನು
ಬಳಸಿಕೊಂಡು
ಹಳ್ಳಿಗರು ಶಾಲೆಗಳ ಕಾರ್ಯಕ್ಷಮತೆ, ಕೃಷಿ ಉತ್ಪಾದನೆ, ಪ್ರಾಣಿಗಳ ಆರೋಗ್ಯ
ಮತ್ತು ನಾಗರಿಕರ ಆರೋಗ್ಯದ ಮೇಲೆ ನಿಗಾ ಇಡಬಹುದು.
ಗ್ರಾಮದ ಆಸ್ತಿಗಳು ಮತ್ತು ಸಂಪನ್ಮೂಲಗಳ ಡೇಟಾವನ್ನು ಗ್ರಾಮ ಪಂಚಾಯಿತಿ ಚುನಾಯಿತ ಪ್ರತಿನಿಧಿಗಳು ಸಂಗ್ರಹಿಸಬಹುದು ಮತ್ತು ಕೃತಕ ಬುದ್ಧಿಮತ್ತೆಯನ್ನು (ಆರ್ಟಿಫೀಸಿಯಲ್ ಇಂಟಲಿಜೆನ್ಸ್) ಬಳಸಿ ಡೇಟಾ ಅನಾಲಿಟಿಕ್ಸ್
ಆಧಾರದ ಮೇಲೆ ಗ್ರಾಮ ಪಂಚಾಯಿತಿಯ ಭವಿಷ್ಯವನ್ನು ಯೋಜಿಸಬಹುದು. ಜೊತೆಗೆ ಮನುಷ್ಯರು, ಪ್ರಾಣಿಗಳು
ಮತ್ತು ಸಸ್ಯಗಳು ಸೇರಿದಂತೆ ಪರಿಸರ ವ್ಯವಸ್ಥೆಯಲ್ಲಿ ಕಂಡುಬರುವ ರೋಗಗಳ
ಪ್ರವೃತ್ತಿಯನ್ನು
ಊಹಿಸಬಹುದು ಹಾಗೂ ಅವುಗಳನ್ನು ನಿಯಂತ್ರಿಸಲು/ ತಡೆಯಲು ಅಗತ್ಯ ಕ್ರಮ ಕೈಗೊಳ್ಳಬಹುದು.
ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸಲು ಈ
ತಂತ್ರಜ್ಞಾನಗಳನ್ನು ಹೇಗೆ ಬಳಸಬಹುದು ಎಂಬ ಬಗೆಗೂ ಪುಸ್ತಕವು ಚರ್ಚಿಸುತ್ತದೆ.
ವಿಶ್ವಸಂಸ್ಥೆಯು 17 ಗುರಿಗಳನ್ನು ಅನುಷ್ಠಾನಗೊಳಿಸಲು ಕಾಲ ಮಿತಿ ನಿಗದಿ ಪಡಿಸಿದೆ. ಬಡತನ ನಿವಾರಣೆ, ಹಸಿವು ಮುಕ್ತ ಸಮಾಜ
ನಿರ್ಮಾಣ, ಸುಸ್ಥಿರ ಆರೋಗ್ಯ, ಉತ್ತಮ ಶಿಕ್ಷಣ, ಹವಾಮಾನ ರಕ್ಷಣಾ ಕ್ರಮ ಇತ್ಯಾದಿಗಳು ಇವುಗಳಲ್ಲಿ ಸೇರಿವೆ.
ಉದಾಹರಣೆಗೆ: ಆರೋಗ್ಯ
ಮೇಲ್ವಿಚಾರಣೆಗಾಗಿ ಐಒಟಿ ಸಾಧನಗಳನ್ನು ಹೇಗೆ
ಬಳಸಬಹುದು, ವಾಯುಮಾಲಿನ್ಯಕಾರಕ ಇಂಗಾಲವನ್ನು ಹಿಡಿದಿಡುವುದು (ಕಾರ್ಬನ್ ಸ್ವೀಕ್ವೆಸ್ಟರಿಂಗ್) ಹೇಗೆ? ಅದಕ್ಕಾಗಿ ಆರ್ಟಿಫೀಸಿಯಲ್
ಇಂಟಲಿಜೆನ್ಸ್ ಮತ್ತು ಯಂತ್ರಕಲಿಕೆಯನ್ನು (ಎಐಎಂಎಲ್) ಬಳಸುವುದು ಹೇಗೆ ಎಂಬುದನ್ನು
ಪುಸ್ತಕವು ಹೇಳುತ್ತದೆ.
ಆಪ್ಟಿಕಲ್ ಫೈಬರ್ ಅಳವಡಿಸದೆಯೇ ಸ್ಥಳೀಯವಾಗಿ ಹೇಗೆ ಇಂಟರ್ನೆಟ್ ಒದಗಿಸಬಹುದು? ಗ್ರಾಮದಲ್ಲಿ ಹಿರಿಯ ನಾಗರಿಕರಿಗೆ ಪಡಿತರ ವಿತರಿಸಲು ಮುಖ ಗುರುತಿಸುವ ತಂತ್ರಜ್ಞಾನವನ್ನು ಹೇಗೆ ಬಳಸಬಹುದು? ರೋಗದ ಮೇಲೆ ನಿಗಾ ಇಡುವಿಕೆ ಮತ್ತು ರೋಗ ನಿಯಂತ್ರಣ ಯೋಜನೆಗೆ ಹೇಗೆ ಜಿಐಎಸ್ ಮ್ಯಾಪಿಂಗ್
ಬಳಸಬಹುದು? ಎಂಬ ಬಗ್ಗೆಯೂ ಪುಸ್ತಕ ವಿವರಿಸುತ್ತದೆ.
ಎಲ್ಲಕ್ಕಿಂತ ಹೆಚ್ಚು ಮುಖ್ಯವಾಗಿ, ಪುಸ್ತಕದಲ್ಲಿ
ವಿವರಿಸಿದ ತಂತ್ರಜ್ಞಾನಗಳನ್ನು ಬಳಸಿಕೊಂಡು ಗ್ರಾಮಗಳ ಸ್ಥಳೀಯ ಆಡಳಿತದಲ್ಲಿ ದಕ್ಷತೆ ಮತ್ತು ಪಾರದರ್ಶಕತೆ ಹಾಗೂ ಹೊಣೆಗಾರಿಕೆಯನ್ನು ತರಲು ಗ್ರಾಮಸ್ಥರ, ಚುನಾಯಿತ ಪ್ರತಿನಿಧಿಗಳ ಮತ್ತು ಗ್ರಾಮ ಪಂಚಾಯಿತಿ ಸಂಸ್ಥೆಯ
ಸಾಮರ್ಥ್ಯವನ್ನು ಹೇಗೆ ಹೆಚ್ಚಿಸಬಹುದು? ಪ್ರತಿ ಗ್ರಾಮ ಪಂಚಾಯಿತಿಯ ಪ್ರಗತಿಯ ಮೇಲೆ ಕಣ್ಣಿಟ್ಟು
ಅದನ್ನು ಹೇಗೆ ಪತ್ತೆ ಹಚ್ಚಬಹುದು ಎಂಬುದನ್ನು ಪುಸ್ತಕ ಹೇಳುತ್ತದೆ.
ದೇಶದಾದ್ಯಂತ ಪ್ರತಿ ಚುನಾಯಿತ ಪ್ರತಿನಿಧಿಯು ತಾಂತ್ರಿಕ
ತಿಳುವಳಿಕೆಯನ್ನು ಹೊಂದುವಂತೆ ಮಾಡುವುದು ಮತ್ತು ತನ್ನ ಗ್ರಾಮ
ಪಂಚಾಯಿತಿಯನ್ನು ದೇಶದಲ್ಲೇ ಅತ್ಯುತ್ತಮ ಪಂಚಾಯಿತಿಯನ್ನಾಗಿ
ಮಾಡಲು ತಂತ್ರಜ್ಞಾನಗಳನ್ನು ಬಳಸುವಂತೆ ಸಕ್ರಿಯಗೊಳಿಸುವುದು
ಮತ್ತು ಪ್ರತಿಯೊಬ್ಬ ಗ್ರಾಮ ಪಂಚಾಯಿತಿ ಸದಸ್ಯನೂ ತನ್ನ ಗ್ರಾಮ ಪಂಚಾಯಿತಿಯ ಭವಿಷ್ಯಕ್ಕೆ ತಾನೇ ಶಿಲ್ಪಿಯಾಗಬೇಕು ಎಂದು ಪ್ರಚೋದಿಸುವುದು ಈ ಪುಸ್ತಕದ
ಮುಖ್ಯ ಉದ್ದೇಶ.
ಈ ಲೇಖನವನ್ನು ಆಲಿಸಲು ಕೆಳಗೆ ಕ್ಲಿಕ್ ಮಾಡಿರಿ. ಪುಸ್ತಕದ ಮುಖಪುಟಗಳ ಸಮೀಪ ನೋಟಕ್ಕೆ ಮೇಲಿನ ಚಿತ್ರ ಕ್ಲಿಕ್ ಮಾಡಿರಿ.
ಕೆಳಗಿನ ಸುದ್ದಿಗಳನ್ನೂ ಓದಿರಿ:
No comments:
Post a Comment