Thursday, January 3, 2008

Consumer Awareness : Farmers Won The Battle

Normally farmers won't go to Consumer Courts। But Farmers of Koppal District in Karnataka State went to Consumer Court when a Insurance Company denied to give them compensation for crop failure due to draught। Go through the success story of Farmers…

ಗ್ರಾಹಕ ನ್ಯಾಯಾಲಯದಲ್ಲಿ ರೈತರು ಗೆದ್ದರು॥!

ಗ್ರಾಹಕ ನ್ಯಾಯಾಲಯಗಳ ಮುಂದೆ ರೈತರ ದೂರುಗಳು ಬರುವುದೇ ಅಪರೂಪ। ಅಂತಹದ್ದರಲ್ಲೂ ಕೊಪ್ಪಳ ಜಿಲ್ಲೆಯ ವಿವಿಧ ಗ್ರಾಮಗಳ ರೈತರು ಬರಗಾಲದ ಬೇಗೆಗೆ ತುತ್ತಾಗಿ ಬೆಳೆನಷ್ಟವಾದಾಗ ಪರಿಹಾರ ನಿರಾಕರಿಸಿದ ವಿಮಾ ಸಂಸ್ಥೆಯ ವಿರುದ್ಧ ಗ್ರಾಹಕ ನ್ಯಾಯಾಲಯದ ಕದ ತಟ್ಟಿದರು. ತನ್ನ ಕ್ರಮ ಸಮರ್ಥಿಸಲು ವಿಮಾ ಸಂಸ್ಥೆ ಹಲವಾರು ಸಬೂಬು ಹೇಳಿತು. ಆದರೆ ಗ್ರಾಹಕ ನ್ಯಾಯಾಲಯ ಒಪ್ಪಲಿಲ್ಲ. ರೈತರಿಗೆ ಜಯ ಲಭಿಸಿತು. ರೈತರಲ್ಲಿ ಆತ್ಮಬಲ ತುಂಬುವಂತಹ ಪ್ರಕರಣ ಇದು.

ನೆತ್ರಕೆರೆ ಉದಯಶಂಕರ

ಪ್ರಕೃತಿ ವಿಕೋಪದಿಂದ ಆಗುವ ಬೆಳೆ ನಷ್ಟ ಪರಿಹಾರಕ್ಕಾಗಿ ರೈತರು ಬೆಳೆ ವಿಮೆ ಮಾಡಿಸುತ್ತಾರೆ। ಅಂತಹ ರೈತರು ವೈಯಕ್ತಿಕವಾಗಿ ಅನುಭವಿಸಿದ ಬೆಳೆನಷ್ಟಕ್ಕೆ ಅನುಗುಣವಾಗಿ ಬೆಳೆ ವಿಮೆ ನೀಡಬೇಕು. ಆದರೆ ವಿಮಾ ಸಂಸ್ಥೆಯವರು ಆರ್ಥಿಕತೆ ಮತ್ತು ಅಂಕಿಸಂಖ್ಯೆ ನಿರ್ದೇಶನಾಲಯದ ವರದಿಯನ್ನು ಆಧರಿಸಿ ವಿಮಾ ಪರಿಹಾರ ನೀಡಲು ನಿರಾಕರಿಸಿದರೆ? ಗ್ರಾಹಕ ಸಂರಕ್ಷಣಾ ಕಾಯ್ದೆ ರೈತರ ನೆರವಿಗೆ ಬರುತ್ತದೆಯೇ?

ಹೌದು। ತನ್ನ ಮುಂದೆ ಬಂದ ಸುಮಾರು 290 ರೈತರಿಗೆ ಸಂಬಂಧಿಸಿದ ಇಂತಹ ದೂರುಗಳ 20ಕ್ಕೂ ಹೆಚ್ಚು ಮೇಲ್ಮನವಿಗಳ ವಿಚಾರಣೆ ನಡೆಸಿದ ಕರ್ನಾಟಕ ರಾಜ್ಯ ಗ್ರಾಹಕ ನ್ಯಾಯಾಲಯವು ಈ ರೈತರಿಗೆ ನ್ಯಾಯ ದೊರಕಿಸಿಕೊಟ್ಟಿದೆ.

ಇದು ಕೊಪ್ಪಳ ಜಿಲ್ಲೆಯ ಕಥೆ। ರೈತರ ಪರವಾಗಿ ಹೋರಾಡಲು ಮುಂದೆ ಬಂದದ್ದು ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕು ಹನುಮನಾಳ, ಬೊಮ್ಮನಾಳ, ನೀಲೋಗಲ್ ಮತ್ತಿತರ ಗ್ರಾಮಗಳ ಕೃಷಿ ಸೇವಾ ಸಹಕಾರಿ ಬ್ಯಾಂಕ್ ಲಿಮಿಟೆಡ್. ಇಲ್ಲಿನ 290 ರೈತರು ತಮ್ಮ ಭೂಮಿಯಲ್ಲಿ ಬೆಳೆದ ಬೆಳೆಗೆ ವಿಮಾ ಪರಿಹಾರಕ್ಕಾಗಿ ಜನರಲ್ ಇನ್ ಶ್ಯೂರೆನ್ಸ್ ಕಾರ್ಪೋರೇಷನ್ ಆಫ್ ಇಂಡಿಯಾ (ಜಿಐಸಿ) ಸಂಸ್ಥೆಯಿಂದ ಬ್ಯಾಂಕಿನ ಮೂಲಕ ಬೆಳೆ ವಿಮೆ ಪಾಲಿಸಿ ಖರೀದಿಸಿದ್ದರು.

ಆ ವರ್ಷ ಮಳೆ ಬಾರದೆ ತೀವ್ರ ಬರಗಾಲದ ಪರಿಣಾಮವಾಗಿ ಈ ರೈತರ ಬೆಳೆನಷ್ಟವಾಯಿತು। ಮಳೆ ಬಾರದ ಕಾರಣ ಕರ್ನಾಟಕ ಸರ್ಕಾರ ಕೂಡಾ ಈ ಪ್ರದೇಶವನ್ನು ಬರಗಾಲ ಪೀಡಿತ ಪ್ರದೇಶ ಎಂದು ಘೋಷಿಸಿತು. ತಮ್ಮ ಭೂಮಿಯಲ್ಲಿ ರೈತರಿಗೆ ನಿರೀಕ್ಷಿತ ಬೆಳೆ ಬಾರದ ಕಾರಣ ಈ ನಷ್ಟವನ್ನು ಭರಿಸುವಂತೆ ರೈತರು ವಿಮಾ ಸಂಸ್ಥೆಗೆ ಅರ್ಜಿ ಸಲ್ಲಿಸಿದರು.

ಆದರೆ ಆರ್ಥಿಕತೆ ಮತ್ತು ಅಂಕಿಸಂಖ್ಯೆ ನಿರ್ದೇಶನಾಲಯವು ಈ ಪ್ರದೇಶದಲ್ಲಿ ಸಮರ್ಪಕ ಬೆಳೆ ಬಂದಿದೆ, ರೈತರಿಗೆ ಯಾವುದೇ ನಷ್ಟ ಸಂಭವಿಸಿಲ್ಲ ಎಂಬುದಾಗಿ ವರದಿ ನೀಡಿತ್ತು। ಈ ವರದಿಯನ್ನು ಆಧರಿಸಿ ವಿಮಾ ಸಂಸ್ಥೆ ರೈತರ ಅರ್ಜಿಗಳನ್ನು ತಳ್ಳಿ ಹಾಕಿತು.

ಕೃಷಿ ಸೇವಾ ಸಹಕಾರಿ ಬ್ಯಾಂಕ್ ಲಿಮಿಟೆಡ್ ರೈತರ ಪರವಾಗಿ ಹೋರಾಟಕ್ಕೆ ಮುಂದೆ ಬಂತು. ಜಿಲ್ಲಾ ಗ್ರಾಹಕ ನ್ಯಾಯಾಲಯದಲ್ಲಿ ರೈತರ ಪರವಾಗಿ 10ಕ್ಕೂ ಹೆಚ್ಚು ದೂರು ಸಲ್ಲಿಸಿ ಬೆಳೆ ವೈಫಲ್ಯದ ಪರಿಣಾಮವಾಗಿ ನಷ್ಟಕ್ಕೆ ಒಳಗಾದ ರೈತರಿಗೆ ಪರಿಹಾರ ಒದಗಿಸುವಂತೆ ಜಿಐಸಿಗೆ ನಿರ್ದೇಶನ ನೀಡಲು ಮನವಿ ಮಾಡಿತು.
ಜಿಲ್ಲಾ ನ್ಯಾಯಾಲಯವು ಎಲ್ಲ ಕಕ್ಷಿದಾರರು ಮಂಡಿಸಿದ ದಾಖಲೆಗಳನ್ನು ಪರಿಗಣಿಸಿ ದೂರುಗಳನ್ನು ಅಂಗೀಕರಿಸಿ ಪರಿಹಾರ ನೀಡುವಂತೆ ಆಜ್ಞಾಪಿಸಿತು।

ಆದರೆ ಜಿಲ್ಲಾ ಗ್ರಾಹಕ ನ್ಯಾಯಾಲಯದ ಈ ಆದೇಶವನ್ನು ಪ್ರಶ್ನಿಸಿ ಅಗ್ರಿಕಲ್ಚರ್ ಇನ್ ಶ್ಯೂರೆನ್ಸ್ ಕಂಪೆನಿ ಆಫ್ ಇಂಡಿಯಾ (ಹಿಂದಿನ ಜನರಲ್ ಇನ್ ಶ್ಯೂರೆನ್ಸ್ ಕಂಪೆನಿ ಆಫ್ ಇಂಡಿಯಾ -ಜಿಐಸಿ) ಮತ್ತು ಜಿಲ್ಲಾಧಿಕಾರಿಗಳು ರಾಜ್ಯ ಗ್ರಾಹಕ ನ್ಯಾಯಾಲಯಕ್ಕೆ ಒಟ್ಟು 20ಕ್ಕೂ ಹೆಚ್ಚು ಮೇಲ್ಮನವಿಗಳನ್ನು ಸಲ್ಲಿಸಿದರು।

ಅಧ್ಯಕ್ಷ ನ್ಯಾಯಮೂರ್ತಿ ಚಂದ್ರಶೇಖರಯ್ಯ, ಸದಸ್ಯರಾದ ರಮಾ ಅನಂತ್ ಅವರನ್ನು ಒಳಗೊಂಡ ಪೀಠವು ಎಲ್ಲ ಕಕ್ಷಿದಾರರು ಮಂಡಿಸಿದ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿ ಅವರ ಪರ ವಕೀಲರ ಅಹವಾಲುಗಳನ್ನು ಆಲಿಸಿತು।

ರೂಪಿತ ಯೋಜನೆಯಡಿ ಹಣಕಾಸು ಸಂಸ್ಥೆಗೆ ನೀಡಲಾದ ಮಾರ್ಗದರ್ಶಿ ಸೂತ್ರದ 19ನೇ ವಿಧಿಯ ಪ್ರಕಾರ ಜಿಐಸಿಯು ಹಕ್ಕು ಬಾಧ್ಯತೆಗಳನ್ನು ತೀರಿಸಲು ಬಾಧ್ಯವಲ್ಲ ಎಂದು ಜಿಐಸಿ ಪರ ವಕೀಲರು ವಾದಿಸಿದರು।

ನ್ಯಾಯಾಲಯವು ಮಾರ್ಗದರ್ಶಿ ಸೂತ್ರದ 19ನೇ ವಿಧಿ ಏನು ಹೇಳುತ್ತದೆ ಎಂದು ಪರಿಶೀಲಿಸಿತು। ಉತ್ಪಾದನೆಗೆ ಸಂಬಂಧಿಸಿದಂತೆ ಆರ್ಥಿಕತೆ ಮತ್ತು ಅಂಕಿ ಸಂಖ್ಯಾ ನಿರ್ದೇಶನಾಲಯವು ನಿಯಮಿತ ಸಮೀಕ್ಷೆಗಳನ್ನು ನಡೆಸಿ ಬೆಳೆ ಅಂದಾಜು ಬಗ್ಗೆ ನೀಡುವ ಫಸಲು ಮಾಹಿತಿಯನ್ನು ಆಧರಿಸಿ ಹಕ್ಕು ಬಾಧ್ಯತೆಗಳನ್ನು ಇತ್ಯರ್ಥ ಪಡಿಸಬೇಕು ಹೊರತು ಯಾವುದೇ ಇಲಾಖೆ ಅಥವಾ ಅಧಿಕಾರಿ ಹೊರಡಿಸುವ ಬರ ಘೋಷಣೆ, ಪ್ರವಾಹ ಘೋಷಣೆ, ಗಜೆಟ್ ಪ್ರಕಟಣೆ, ಆಣೆವಾರಿ ಇತ್ಯಾದಿಗಳ ಆಧಾರದಲ್ಲಿ ಅಲ್ಲ ಎಂದು ಈ ವಿಧಿ ಹೇಳುತ್ತದೆ.

ಬರ ಪರಿಣಾಮವಾಗಿ ಬೆಳೆ ನಷ್ಟವಾದರೆ ಆರ್ಥಿಕತೆ ಮತ್ತು ಅಂಕಿಸಂಖ್ಯೆ ನಿರ್ದೇಶನಾಲಯವು ನೀಡುವ ಫಸಲು ಮಾಹಿತಿ ಆಧರಿಸಿ ಹಕ್ಕು ಬಾಧ್ಯತೆಗಳನ್ನು ಇತ್ಯತ್ಥಪಡಿಸಬೇಕೇ ಹೊರತು ಬರ ಘೋಷಣೆಯನ್ನು ಲೆಕ್ಕಕ್ಕೆ ತೆಗೆದುಕೊಳ್ಳುವಂತಿಲ್ಲ ಎಂದೂ ಜಿಐಸಿ ಪರ ವಕೀಲರು ಪ್ರತಿಪಾದಿಸಿದರು। ಹಾಲಿ ಪ್ರಕರಣದಲ್ಲಿ ಸಂಬಂಧಪಟ್ಟ ಪ್ರದೇಶದಲ್ಲಿ ಫಸಲು ನಷ್ಟವಾಗಿರುವ ಬಗ್ಗೆ ನಿರ್ದೇಶನಾಲಯ ವರದಿ ನೀಡಿಲ್ಲ ಎಂಬುದು ಅವರ ವಾದ.

ಆದರೆ ಈ ಮಾರ್ಗದರ್ಶಿ ಸೂತ್ರಗಳು ಯೋಜನೆಯ ಅಂಗವಲ್ಲ। ಯೋಜನೆಯು ಬರದ ಪರಿಣಾಮವಾಗಿ ರೈತರು ಅನುಭವಿಸುವ ಬೆಳೆನಷ್ಟವನ್ನು ತನ್ನ ವ್ಯಾಪ್ತಿಯಿಂದ ಹೊರಗಿಟ್ಟಿಲ್ಲ ಎಂಬುದನ್ನು ನ್ಯಾಯಾಲಯ ಗಮನಿಸಿತು.

ಮನವಿಯಲ್ಲಿನ ಹಲವಾರು ಅಂಶಗಳನ್ನು ಇದಕ್ಕೆ ಮೊದಲೇ ಜನರಲ್ ಇನ್ ಶ್ಯೂರೆನ್ಸ್ ಕಂಪೆನಿ ಆಫ್ ಇಂಡಿಯಾ ಮತ್ತು ಇತರರು ಪ್ರಕರಣದಲ್ಲಿ ರಾಷ್ಟ್ರೀಯ ಗ್ರಾಹಕ ನ್ಯಾಯಾಲಯವು ಪರಿಗಣಿಸಿದ್ದನ್ನು ಕೂಡಾ ರಾಜ್ಯ ಗ್ರಾಹಕ ನ್ಯಾಯಾಲಯ ತನ್ನ ಗಮನಕ್ಕೆ ತೆಗೆದುಕೊಂಡಿತು।

ಮೇಲಿನ ಪ್ರಕರಣದಲ್ಲಿ ನೆಲಗಡಲೆ ಬೆಳೆಯಲು ಪ್ರಾಥಮಿಕ ಕೃಷಿ ಸಾಲ ಸಹಕಾರಿ ಸಂಘದಿಂದ ಪಡೆದ ಪ್ರತಿಯೊಬ್ಬ ರೈತನ ಸಾಲವನ್ನು ಆಧರಿಸಿ ಪ್ರತಿ ರೈತನಿಗೂ ಪ್ರತ್ಯೇಕ ವಿಮಾ ರಕ್ಷಣೆ ನೀಡಲಾಗಿತ್ತು। ಪ್ರತಿ ವರ್ಷವೂ ನೆಲಗಡಲೆ ಬಿತ್ತನೆ ನಡೆಯುವುದು ಆಗಸ್ಟಿನಲ್ಲೇ ಹೊರತು ಜೂನ್ ತಿಂಗಳಲ್ಲಿ ಅಲ್ಲ. ಮಳೆ ವಿಫಲವಾಗಿ ಬರ ಪರಿಸ್ಥಿತಿ ತಲೆದೋರುವ ಸುಳಿವು ಇದ್ದಿದ್ದರೆ ವಿಮಾ ಕಂಪೆನಿಯು ಸಹಸ್ರಾರು ರೈತರಿಂದ ವಿಮಾ ಪ್ರೀಮಿಯಂ ಪಡೆಯದೇ ಇರುವಂತಹ ಕನಿಷ್ಠ ಎಚ್ಚರಿಕೆಯನ್ನಾದರೂ ತೆಗೆದುಕೊಳ್ಳುತ್ತಿತ್ತು. ಹಾಗೇನಾದರೂ ಮಾಡಿದ್ದಿದ್ದರೆ ರೈತರಲ್ಲಿ ಕೆಲವರಾದರೂ ಬೇರೆ ಮೂಲಗಳಿಂದ ನೀರು ತಂದು ನೆಲಗಡಲೆ ಬೆಳೆಯುವ ಕೆಲಸಕ್ಕೆ ಕೈಹಾಕುತ್ತಿರಲಿಲ್ಲ. ನೆಲಗಡಲೆ ವ್ಯವಸಾಯ ನಡೆದದ್ದು ಹಾಜರು ಪಡಿಸಿದ ನಕ್ಷೆಗಳಿಂದ ಸ್ಪಷ್ಟವಾಗುತ್ತದೆ ಎಂಬುದನ್ನು ನ್ಯಾಯಾಲಯ ಗಮನಿಸಿತು.

ಯೋಜನೆಯ ಪ್ರಕಾರ ಸರಾಸರಿ ಫಸಲು ಆಧಾರವನ್ನು ಪರಿಹಾರ ನೀಡಲು ಅನ್ವಯಿಸಿದರೆ ರೈತನಿಗೆ ಒಟ್ಟು ನಷ್ಟದ ಶೇಕಡಾ 50ರಷ್ಟು ಮಾತ್ರ ಪರಿಹಾರ ದೊರೆಯುತ್ತದೆ. ಹೀಗಾಗಿ ಸಮಗ್ರ ಬೆಳೆ ವಿಮಾ ಯೋಜನೆಗೆ (ಸಿಸಿಐಎಸ್) ನಿರ್ದಿಷ್ಟ ಗ್ರಾಮ ಅಥವಾ ತಾಲೂಕನ್ನು ಆಧಾರವಾಗಿ ಮಾಡಲಾಗಿದೆ ಎಂದು ಈ ಪ್ರಕರಣ ವಿಚಾರಣೆ ಸಂದರ್ಭದಲ್ಲಿ ಜಿಐಸಿ ನ್ಯಾಯಾಲಯದಲ್ಲಿ ವಾದಿಸಿತ್ತು.

ಆದರೆ ಈ ವಾದ ಅರ್ಥ ಹೀನ, ಏಕೆಂದರೆ ನಷ್ಟ ನಿರ್ಧರಿಸಲು ಸರಾಸರಿ ಫಸಲನ್ನು ಪರಿಗಣಿಸಿ, ಬೆಳೆನಷ್ಟದ ಆಧಾರದಲ್ಲಿ ಪ್ರತಿಯೊಬ್ಬ ರೈತನಿಗೂ ವೈಯಕ್ತಿಕವಾಗಿಯೇ ಪರಿಹಾರ ನೀಡಬೇಕು ಎಂದು ರಾಷ್ಟ್ರೀಯ ಗ್ರಾಹಕ ನ್ಯಾಯಾಲಯ ತೀರ್ಪು ನೀಡಿತ್ತು.

ಈ ತೀರ್ಪಿನ ಹಿನ್ನೆಲೆಯಲ್ಲಿ, ನಷ್ಟದ ನೆಲೆಯಲ್ಲಿ ರೈತರು ಮುಂದಿಟ್ಟ ಪರಿಹಾರ ಕೋರಿಕೆಯನ್ನು ಜಿಐಸಿ ತಿರಸ್ಕರಿಸುವುದು ಸರಿಯಲ್ಲ. ಹಾಗೆ ತಿರಸ್ಕರಿಸಬೇಕಿದ್ದರೆ ಜಿಐಸಿಯು ರೈತರಿಗೆ ನಷ್ಟವಾಗಿಲ್ಲ ಎಂಬುದನ್ನು ಸಾಬೀತುಪಡಿಸುವ ಸಾಕ್ಷ್ಯಾಧಾರ ಮಂಡಿಸಬೇಕು. ಅಂತಹ ಸಾಕ್ಷ್ಯಾಧಾರ ಇಲ್ಲದ ಕಾರಣ ಅರ್ಜಿದಾರರ ದೂರು ಅಂಗೀಕರಿಸಿದ ಜಿಲ್ಲಾ ಗ್ರಾಹಕ ನ್ಯಾಯಾಲಯದ ಕ್ರಮ ಸಿಂಧು ಎಂದು ರಾಷ್ಟ್ರೀಯ ಗ್ರಾಹಕ ನ್ಯಾಯಾಲಯ ಹೇಳಿತು.

ಹಾಲಿ ಪ್ರಕರಣಗಳಿಗೆ ಸಂಬಂಧಿಸಿದಂತೆ ಆರ್ಥಿಕತೆ ಮತ್ತು ಅಂಕಿಸಂಖ್ಯೆ ನಿರ್ದೇಶನಾಲಯವು ಬೆಳೆ ಮತ್ತು ಫಸಲು ನಷ್ಟವಾಗಿಲ್ಲ ಎಂದು ವರದಿ ನೀಡಿದ್ದರೂ, ರಾಜ್ಯ ಸರ್ಕಾರವೇ ತನ್ನ ಪ್ರಕಟಣೆಯಲ್ಲಿ ಈ ಪ್ರದೇಶವನ್ನು ಬರಪ್ರದೇಶ ಎಂಬುದಾಗಿ ಪರಿಗಣಿಸಿರುವುದನ್ನು ರಾಜ್ಯ ಗ್ರಾಹಕ ನ್ಯಾಯಾಲಯ ಗಮನಕ್ಕೆ ತೆಗೆದುಕೊಂಡಿತು.
ಆರ್ಥಿಕತೆ ಮತ್ತು ಅಂಕಿಸಂಖ್ಯೆ ನಿರ್ದೇಶನಾಲಯದ ವರದಿ ರೈತರ ವೈಯಕ್ತಿಕ ಪ್ರಕರಣಗಳನ್ನು ಆಧರಿಸಿದ್ದಲ್ಲದ ಕಾರಣ ಅದನ್ನು ನಂಬಲಾಗುವುದಿಲ್ಲ. ಸರ್ಕಾರವು ಬರ ಘೋಷಣೆ ಮಾಡಿದ್ದರ ಜೊತೆಗೇ ಹಲವಾರು ರೈತರು ಆತ್ಮಹತ್ಯೆ ಮಾಡಿಕೊಂಡದ್ದನ್ನೂ ನಾವು ಗಮನಕ್ಕೆ ತೆಗೆದುಕೊಳ್ಳಬೇಕಾಗುತ್ತದೆ. ಆದ್ದರಿಂದ ರೈತರ ಪರ ದೂರುಗಳನ್ನು ಸ್ವೀಕರಿಸಿದ ಜಿಲ್ಲಾ ಗ್ರಾಹಕ ನ್ಯಾಯಾಲಯದ ಕ್ರಮ ಸರಿ ಎಂಬುದು ನಮ್ಮ ನಿಲುವು ಎಂದು ರಾಜ್ಯ ಗ್ರಾಹಕ ನ್ಯಾಯಾಲಯ ಹೇಳಿತು.

ಈ ಹಿನ್ನೆಲೆಯಲ್ಲಿ ಎಲ್ಲ ಮೇಲ್ಮನವಿಗಳನ್ನೂ ತಳ್ಳಿಹಾಕಿದ ನ್ಯಾಯಾಲಯ, ಕಕ್ಷಿದಾರರು ಸ್ವತಃ ವೆಚ್ಚ ಭರಿಸಬೇಕು ಎಂದು ಆದೇಶ ನೀಡಿತು.

1 comment:

Unknown said...

ಅವನತಿಯ ಅಂಚಿನಲ್ಲಿರುವ ನಮ್ಮ ರೈತರ ಪರವಾದ ಅವರನ್ನು ಉಳಿಸುವ ನ್ಯಾಯಾಂಗದ ಕಾರ್ಯವನ್ನು ಸವಿವರವಾಗಿ ನೀಡಿರುವ ತಮಗೆ ಧನ್ಯವಾದಗಳು

ಅದರಲ್ಲೂ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಇದಕ್ಕಾಗಿ ಅಗಾಧ ಶ್ರಮವನ್ನು ವ್ಯಯಿಸುತ್ತಿರುವ, ವೈವಿಧ್ಯಮಯ ಲೇಖನಗಳನ್ನು ಪ್ರಕಟಿಸುತ್ತಿರುವ ತಮ್ಮ ಕಾರ್ಯ ನಿಜಕ್ಕೂ ಅಭಿನಂದನೀಯ.

ಗಿರೀಶ.ಕೆ.ಎಸ್.

Advertisement