Saturday, April 26, 2008

ಇಂದಿನ ಇತಿಹಾಸ History Today ಏಪ್ರಿಲ್ 26

ಇಂದಿನ ಇತಿಹಾಸ

ಏಪ್ರಿಲ್ 26

ಖ್ಯಾತ ಇತಿಹಾಸ ತಜ್ಞ, ಸಂಶೋಧಕ, ಸಾಹಿತಿ, ಪ್ರಾಧ್ಯಾಪಕ ಸೂರ್ಯನಾಥ ಕಾಮತ್ ಅವರು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಉಪೇಂದ್ರ ಕಾಮತ್- ಪದ್ಮಾವತಮ್ಮ ದಂಪತಿಯ ಪುತ್ರನಾಗಿ ಜನಿಸಿದರು. 70ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿರುವ ಕಾಮತ್ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಬೆಂಗಳೂರು ವಿವಿಯ ಸಂಶೋಧನಾ ಪ್ರಶಸ್ತಿ, ತುಳು ಅಕಾಡೆಮಿ ಪ್ರಶಸ್ತಿ, ಚುಂಚಶ್ರೀ ಪ್ರಶಸ್ತಿ, ಚಿದಾನಂದ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಇತ್ಯಾದಿ ಗೌರವಗಳಿಗೆ ಪಾತ್ರರಾಗಿದ್ದಾರೆ.

2007: ಸೇಂಟ್ ಲೂಸಿಯಾದ ಗ್ರಾಸ್ ಐಲೆಟ್ ನಲ್ಲಿ ನಡೆದ ವಿಶ್ವಕಪ್ ಕ್ರಿಕೆಟ್ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾದ ಅನುಭವಿ ವೇಗಿ ಗ್ಲೆನ್ ಮೆಕ್ ಗ್ರಾ ಅವರು ತನ್ನ ಕೊನೆಯ ಅಂತರರಾಷ್ಟ್ರೀಯ ಪಂದ್ಯದಲ್ಲಿ ನೂತನ ವಿಶ್ವಕಪ್ ದಾಖಲೆ ನಿರ್ಮಿಸಿದರು. ಒಂಬತ್ತನೇ ವಿಶ್ವಕಪ್ ಕ್ರಿಕೆಟ್ ನಲ್ಲಿ `ಶ್ರೇಷ್ಠ ಆಟಗಾರ' ಶ್ರೇಯ ಪಡೆದು ಮುಂಚೂಣಿಯಲ್ಲಿ ನಿಂತಿರುವ ಮೆಕ್ ಗ್ರಾ ಈ ಟೂರ್ನಿಯಲ್ಲಿ 25 ವಿಕೆಟ್ ಗಳನ್ನು ಕಬಳಿಸಿ ವಿಶ್ವದಾಖಲೆ ಸ್ಥಾಪಿಸಿದರು. ಶ್ರೀಲಂಕೆಯ ಮುತ್ತಯ್ಯ ಮುರಳೀಧರನ್ (23) ಮತ್ತು ಆಸ್ಟ್ರೇಲಿಯಾದ ಇನ್ನೊಬ್ಬ ಬೌಲರ್ ಶಾನ್ ಟೈಟ್ (23) ಅವರು ಮೆಕ್ ಗ್ರಾ ಜೊತೆಗೆ ಪೈಪೋಟಿಯಲ್ಲಿ ಇರುವ ಇತರ ಪಟುಗಳು.

2007: ಬಹುಸಂಖ್ಯಾತ ಜನರನ್ನು ಕಾಡುವ ಮಧುಮೇಹ ರೋಗಕ್ಕೆ ಕಾರಣವಾಗುವ ವಂಶವಾಹಿಯನ್ನು (ಜೀನ್) ಪತ್ತೆ ಹಚ್ಚಿರುವುದಾಗಿ ವಿಜ್ಞಾನಿಗಳ ತಂಡವೊಂದು `ಜನರಲ್ ಸೈನ್ಸ್ ಅಂಡ್ ನೇಚರ್ ಜೆನೆಟಿಕ್ಸ್' ನಿಯತಕಾಲಿಕದಲ್ಲಿ ಪ್ರಕಟಿಸಿತು. ವಿಶದಲ್ಲಿ ಮಧುಮೇಹದಿಂದ ಬಳಲುತ್ತಿರುವ 20 ಕೋಟಿಗೂ ಅಧಿಕ ಮಂದಿಗೆ ಇದು ವರದಾನ ಆಗಬಲ್ಲುದು.

2007: ರಾಯಚೂರಿನ ಮಾನ್ವಿ ತ್ಲಾಲೂಕಿನ ನೀರಮಾನ್ವಿ ಗ್ರಾಮದಲ್ಲಿ ಕೊಳವೆ ಬಾವಿಯೊಳಕ್ಕೆ ಬಿದ್ದ ಸಂದೀಪ ಕಡೆಗೂ ಜೀವಂತವಾಗಿ ಮೇಲೆ ಬರಲಾಗದೆ ಕೊಳವೆ ಬಾವಿಯಲ್ಲೇ ಅಸು ನೀಗಿದ. ಸತತ 57 ಗಂಟೆಗಳ ರಕ್ಷಣಾ ಕಾರ್ಯಾಚರಣೆ ಕೊನೆಗೂ ಫಲ ನೀಡಲಿಲ್ಲ.

2007: ಭಾರತದರ್ಶನ ಉಪನ್ಯಾಸ ಮಾಲಿಕೆಯಿಂದ ಖ್ಯಾತರಾಗಿದ್ದ ರಾಷ್ಟ್ರೋತ್ಥಾನ ಪರಿಷತ್ ಕಾರ್ಯಕರ್ತ, ಅವಿವಾಹಿತ ವಿದ್ಯಾನಂದ ಶೆಣೈ (56) ಅವರು ಬೆಂಗಳೂರಿನಲ್ಲಿ ನಿಧನರಾದರು. ಶೃಂಗೇರಿ ಪುರಸಭೆಯ ಸದಸ್ಯರೂ ಆಗಿದ್ದ ವಿದ್ಯಾನಂದ ಶೆಣೈ ರಾಜ್ಯದಲ್ಲಿ ಭಾರತ ದರ್ಶನ ಉಪನ್ಯಾಸ ಮಾಲಿಕೆಯ ಮೂಲಕ 1100ಕ್ಕೂ ಅಧಿಕ ಉಪನ್ಯಾಸ ನೀಡಿದ್ದರು. ಅವರು ಹೊರತಂದಿದ್ದ `ಭಾರತ ದರ್ಶನ' ಧ್ವನಿಸುರುಳಿಯ 50,000 ಸೆಟ್ಗಳು ಮಾರಾಟವಾಗಿ ದಾಖಲೆ ನಿರ್ಮಾಣವಾಗಿತ್ತು.

2007: ಮಲೇಶ್ಯಾವು ಈದಿನ ಕ್ವಾಲಾಲಂಪುರದಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ 45 ವರ್ಷದ ಥಂಕು ಮಿಜಾನ್ ಜೈನಲ್ ಅಬಿದಿನ್ ಅವರನ್ನು ತನ್ನ ನೂತನ ದೊರೆಯಾಗಿ ಘೋಷಿಸಿತು. ತೈಲ ಸಮೃದ್ಧ ತೆರೆಂಗ್ಗನು ರಾಜ್ಯದದವರಾದ ಥಂಕು ಮಿಜಾನ್ ಅವರು ಎರಡನೆಯ ಅತ್ಯಂತ ಕಿರಿಯ ದೊರೆಯಾಗಿದ್ದು ಹೊಸ ತಲೆಮಾರಿನ ಶ್ರದ್ಧಾವಂತ ಮುಸ್ಲಿಮ. ಮಲೇಶ್ಯಾದ ಸಂವಿಧಾನಬದ್ಧವಾದ ವಿಶಿಷ್ಠ ಸರದಿ ದೊರೆತನ ವ್ಯವಸ್ಥೆ ಪ್ರಕಾರ ಥಂಕು ಅವರು ಐದು ವರ್ಷ ಕಾಲ ರಾಜ್ಯಭಾರ ಮಾಡುವರು. ಮಲೇಶ್ಯಾವು ಒಂಬತ್ತು ಮಂದಿ ಸುಲ್ತಾನರನ್ನು ಹೊಂದಿದ್ದು ಪ್ರತಿಯೊಬ್ಬರೂ ಸರದಿಯಂತೆ ಐದು ವರ್ಷಗಳ ಕಾಲ ಆಳ್ವಿಕೆ ನಡೆಸುತ್ತಾರೆ. ಆದರೆ ಈ ಸಲದ ಸುಲ್ತಾನರು ಅತ್ಯಂತ ಯುವ ತಲೆಮಾರಿನವರೂ ಶ್ರದ್ಧಾವಂತ ಮುಸ್ಲಿಮರೂ ಆಗಿರುವುದು ವಿಶೇಷ. 2.60 ಕೋಟಿ ಜನಸಂಖ್ಯೆಯಲ್ಲಿ ಅರ್ಧದಷ್ಟು ಮುಸ್ಲಿಮರನ್ನು ಹೊಂದಿರುವ ಮಲೇಶ್ಯಾ, ಆಧುನಿಕ ರಾಷ್ಟ್ರವಾಗ್ದಿದರೂ, 1980ರಿಂದ ಇಸ್ಲಾಮಿಕ್ ಸಂಪ್ರದಾಯ ಹೆಚ್ಚು ಬಲವಾಗಿ ಬೇರೂರಿದೆ.

2007: ಖ್ಯಾತ ಕೃಷಿ ವಿಜ್ಞಾನಿ ಎಂ.ಎಸ್. ಸ್ವಾಮಿನಾಥನ್ ಅವರು ರಾಜ್ಯಸಭಾ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದರು. 81 ವರ್ಷದ ಸ್ವಾಮಿನಾಥನ್ ಅವರನ್ನು ಈ ತಿಂಗಳ ಆದಿಯಲ್ಲಿ ಮೇಲ್ಮನೆ ಸದಸ್ಯರಾಗಿ ನಾಮಕರಣ ಮಾಡಲಾಗಿತ್ತು. ಅವರು ಇಂಗ್ಲಿಷ್ ನಲ್ಲಿ ಪ್ರತಿಜ್ಞೆ ಸ್ವೀಕರಿಸಿದರು.

2007: ಛತ್ರಪತಿ ಶಿವಾಜಿ ಕುರಿತ ವಿವಾದಾತ್ಮಕ `ಎ ಹಿಂದು ಕಿಂಗ್ ಇನ್ ಇಸ್ಲಾಮಿಕ್ ಇಂಡಿಯಾ' ಪುಸ್ತಕದ ಮೇಲೆ ಮಹಾರಾಷ್ಟ್ರ ಸರ್ಕಾರವು ವಿಧಿಸಿದ್ದ ನಿಷೇಧವನ್ನು ಮುಂಬೈ ಹೈಕೋರ್ಟ್ ತಳ್ಳಿ ಹಾಕಿತು. ಅಮೆರಿಕನ್ ಲೇಖಕ ಜೇಮ್ಸ್ ಲೈನ್ ಈ ಪುಸ್ತಕವನ್ನು ಬರೆದಿದ್ದಾರೆ. ಪುಸ್ತಕದಲ್ಲಿ ಶಿವಾಜಿ ಬಗ್ಗೆ ಕೆಲವು ಟೀಕೆಗಳಿವೆ ಎಂಬ ಕಾರಣಕ್ಕಾಗಿ ಸರ್ಕಾರವು ಅದನ್ನು ನಿಷೇಧಿಸಿತ್ತು. ನ್ಯಾಯಮೂರ್ತಿ ಎಫ್.ಐ. ರೆಬೆಲ್ಲೋ, ನ್ಯಾಯಮೂರ್ತಿ ವಿ.ಕೆ. ತಾಹಿಲ್ ರಮಣಿ ಮತ್ತು ನ್ಯಾಯಮೂರ್ತಿ ಅಭಯ್ ಓಕ್ ಅವರನ್ನು ಒಳಗೊಂಡ ಪೂರ್ಣಪೀಠವು 2004ರಲ್ಲಿ ವಿಧಿಸಲಾದ ನಿಷೇಧವನ್ನು ತಳ್ಳಿಹಾಕಿ ತೀರ್ಪು ನೀಡಿತು.

2006: ಕೊಲಂಬೊ ಸೇನಾ ಮುಖ್ಯ ಕಚೇರಿ ಮೇಲೆ ಮಾನವಬಾಂಬ್ ದಾಳಿ ನಡೆದ ಹಿನ್ನೆಲೆಯಲ್ಲಿ ಶ್ರೀಲಂಕಾ ವಾಯುಪಡೆಯು ಈಶಾನ್ಯ ಪ್ರದೇಶದ ತಮಿಳು ಬಂಡುಕೋರರ ಆಯ್ದ ನೆಲೆಗಳ ಮೇಲೆ ವಾಯುದಾಳಿ ಆರಂಭಿಸಿತು.

2006: ಸ್ವಾತಂತ್ರ್ಯ ಹೋರಾಟಗಾರ, ಕರ್ನಾಟಕ ಖಾದಿ ಗ್ರಾಮೋದ್ಯೋಗ ಮಂಡಳಿ ಮಾಜಿ ಅಧ್ಯಕ್ಷ ಪಿ. ವೆಂಕೋಬರಾವ್ (84) ಬೆಂಗಳೂರಿನ ಶ್ರೀರಾಮಪುರದಲ್ಲಿನ ತಮ್ಮ ನಿವಾಸದಲ್ಲಿ ನಿಧನರಾದರು. ಮಹಾತ್ಮ ಗಾಂಧೀಜಿ ಮತ್ತು ವಿನೋಬಾ ಭಾವೆ ಅವರ ಶಿಷ್ಯರಾಗಿ ಅವರ ಆಶ್ರಮಗಳಲ್ಲಿ ನೆಲೆಸಿದ್ದ ವೆಂಕೋಬರಾವ್ ಕ್ವಿಟ್ ಇಂಡಿಯಾ ಚಳವಳಿ, ವಿನೋಬಾ ಭಾವೆ ಅವರ ಭೂದಾನ ಯಾತ್ರೆಗಳಲ್ಲಿ ಪಾಲ್ಗೊಂಡ್ದಿದರು. ಜೀವನ ಚರಿತ್ರೆ, ಅನುವಾದ, ಕವನ ಪ್ರಾಕಾರಗಳಲ್ಲಿ 25 ಪುಸ್ತಕಗಳನ್ನು ರಚಿಸಿದ್ದು, ಅವರ 1200 ಪುಟಗಳ ಗಾಂಧಿ ಚರಿತ ಮಾನಸ ಗ್ರಂಥಕ್ಕೆ ದೇಜಗೌ ಟ್ರಸ್ಟ್ ವಿಶ್ವ ಮಾನವ ಪ್ರಶಸ್ತಿ ನೀಡಿ ಗೌರವಿಸಿತ್ತು.

2006: ತಮ್ಮ 17ನೇ ವಯಸ್ಸಿನಲ್ಲಿ ಹೌ ಓಪಲ್ ಮೆಹ್ತಾ ಗಾಟ್ ಕಿಸ್ಸಡ್, ಗಾಟ್ ವೈಲ್ಡ್ ಅಂಡ್ ಗಾಟ್ ಎ ಲೈಫ್ ಕಾದಂಬರಿ ಬರೆದು ಅಪಾರ ಖ್ಯಾತಿಯ ಜೊತೆಗೇ ಕೃತಿ ಚೌರ್ಯದ ವಿವಾದದಲ್ಲಿಯೂ ಸಿಲುಕಿದ ಭಾರತೀಯ ಮೂಲದ ಹಾರ್ವರ್ಡ್ ಯುವತಿ ಹಾರ್ವರ್ಡ್ ವಿವಿ ವಿದ್ಯಾರ್ಥಿನಿ ಕಾವ್ಯ ವಿಶ್ವನಾಥನ್ ಅವರು ತಮ್ಮ ಕಾದಂಬರಿಯಲ್ಲಿ ಬೇರೆ ಕಾದಂಬರಿಯ ಕೆಲವೊಂದು ಬರಹಗಳನ್ನು ಬಳಸಿಕೊಂಡಿದ್ದಾಗಿ ಒಪ್ಪಿಕೊಂಡರು. ಓಪಲ್ ಮೆಹ್ತಾ ಪ್ರಕಟಿಸಿದ ಲಿಟಲ್ ಬ್ರೌನ್ ಕಂಪೆನಿಗೆ ಪತ್ರ ಬರೆದ ಇನ್ನೊಂದು ಪ್ರಕಾಶನ ಸಂಸ್ಥೆ ರ್ಯಾಂಡಮ್ ಹೌಸ್ ಓಪಲ್ ಮೆಹ್ತಾ ಹಾಗೂ ಅಮೆರಿಕದ ಬರಹಗಾರ ಮೆಗನ್ ಮ್ಯಾಕ್ ಕ್ಯಾಫರ್ಟಿ ಅವರ ಸ್ಲೊಪ್ಪಿ ಫರ್ಸ್ಟ್ ಮತ್ತು ಸೆಕೆಂಡ್ ಹೆಲ್ಪಿಂಗ್ ನಡುವೆ ಸಾಮ್ಯತೆ ಇದೆ ಎಂದು ಆಕ್ಷೇಪಿಸಿತ್ತು.

2006: ಗುಜರಾತ್ ಸಹಕಾರ ಹಾಲು ಮಾರಾಟ ಒಕ್ಕೂಟದ (ಜಿಸಿಎಂಎಂಎಫ್) ನೂತನ ಅಧ್ಯಕ್ಷರಾಗಿ ಪಾರ್ಥಿ ಭಟೋಲ್ ಆಯ್ಕೆಯಾದರು. 33 ವರ್ಷಗಳಿಂದ ಅಧ್ಯಕ್ಷರಾಗಿದ್ದ ಡಾ. ವರ್ಗೀಸ್ ಕುರಿಯನ್ ಅವರು ಹಿಂದಿನ ತಿಂಗಳು ಈ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

2006: ಭಾರತದ ಮಾಜಿ ಅಟಾರ್ನಿ ಜನರಲ್ ಸೋಲಿ ಜೆ. ಸೊರಾಬ್ಜಿ ಅವರು ನ್ಯಾಯಮೂರ್ತಿ ಕೆ.ಎಸ್. ಹೆಗ್ಡೆ ಚಾರಿಟಬಲ್ ಫೌಂಡೇಷನ್ ಪ್ರಶಸ್ತಿಗೆ ಆಯ್ಕೆಯಾದರು

1992: ಜ್ಞಾನಪೀಠ ಪ್ರಶಸ್ತಿ ವಿಜೇತ ವಿ.ಕೃ. ಗೋಕಾಕ್ ಅವರು ಈದಿನ ನಿಧನರಾದರು.

1986: ಸೋವಿಯತ್ ಒಕ್ಕೂಟದ ಚೆರ್ನೋಬಿಲ್ ಪರಮಾಣು ಸ್ಥಾವರದಲ್ಲಿ ಜಗತ್ತಿನ ಅತಿಭೀಕರ ವಿಕಿರಣ ಸೋರಿಕೆ ದುರಂತ ಘಟಿಸಿತು. ಸ್ಥಾವರದ ರಿಯಾಕ್ಟರಿನಲ್ಲಿ ಸ್ಫೋಟ ಹಾಗೂ ಬೆಂಕಿ ಸಂಭವಿಸಿ ಸೋರಿಕೆಯಾದ ವಿಕಿರಣ ಪರಿಸರವನ್ನು ಸೇರಿ ಕನಿಷ್ಠ 31 ಮಂದಿ ತತ್ ಕ್ಷಣವೇ ಅಸುನೀಗಿದರು.

1955: ಕಲಾವಿದೆ ಜಯಶ್ರೀ ಅರವಿಂದ್ ಜನನ.

1954: ಕಲಾವಿದ ರವೀಂದ್ರ ಕುಮಾರ ವಿ. ಜನನ.

1946: ಭಾರತೀಯ ಕ್ರಿಕೆಟ್ ಅಂಪೈರ್ ವಿ.ಕೆ. ರಾಮಸ್ವಾಮಿ ಜನ್ಮದಿನ.

1937: ಖ್ಯಾತ ಇತಿಹಾಸ ತಜ್ಞ, ಸಂಶೋಧಕ, ಸಾಹಿತಿ, ಪ್ರಾಧ್ಯಾಪಕ ಸೂರ್ಯನಾಥ ಕಾಮತ್ ಅವರು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಉಪೇಂದ್ರ ಕಾಮತ್- ಪದ್ಮಾವತಮ್ಮ ದಂಪತಿಯ ಪುತ್ರನಾಗಿ ಜನಿಸಿದರು. 70ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿರುವ ಕಾಮತ್ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಬೆಂಗಳೂರು ವಿವಿಯ ಸಂಶೋಧನಾ ಪ್ರಶಸ್ತಿ, ತುಳು ಅಕಾಡೆಮಿ ಪ್ರಶಸ್ತಿ, ಚುಂಚಶ್ರೀ ಪ್ರಶಸ್ತಿ, ಚಿದಾನಂದ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಇತ್ಯಾದಿ ಗೌರವಗಳಿಗೆ ಪಾತ್ರರಾಗಿದ್ದಾರೆ.

1937: ಸ್ಪಾನಿಷ್ ಅಂತರ್ ಯುದ್ಧದ ಸಂದರ್ಭದಲ್ಲಿ ಜರ್ಮನ್ ವಿಮಾನಗಳು ಗುಯೆರ್ನಿಕಾದ ಬಾಸ್ಕ್ ಟೌನ್ ಮೇಲೆ ದಾಳಿ ನಡೆಸಿದವು. ನಾಗರಿಕ ಪ್ರದೇಶದ ಮೇಲೆ ನಡೆದ ಮೊತ್ತ ಮೊದಲ ಬಾಂಬ್ ದಾಳಿ ಇದು. ಈ ದಾಳಿಯಿಂದ ಆದ ಜೀವಹಾನಿಯನ್ನು ಪಾಬ್ಲೊಪಿಕಾಸೋ ತನ್ನ `ಗುಯೆರ್ನಿಕಾ' ಗೋಡೆ ಚಿತ್ರಗಳಲ್ಲಿ ಚಿತ್ರಿಸಿದ್ದಾನೆ.

1931: ಕಲಾವಿದ ವಿ. ರಾಮಸ್ವಾಮಿ ಜನನ.

1927: ಕಲಾವಿದ ಶಿವಪ್ಪ ಎಚ್. ತರಲಘಟ್ಟಿ ಜನನ.

1920: ಭಾರತೀಯ ಗಣಿತ ತಜ್ಞ ಶ್ರೀನಿವಾಸ ರಾಮಾನುಜಂ ಅವರು ತಮ್ಮ 32ನೇ ವಯಸ್ಸಿನಲ್ಲಿ ಕ್ಷಯ ರೋಗಕ್ಕೆ ತುತ್ತಾಗಿ ನಿಧನರಾದರು.

1887: ಮೈಸೂರಿನ ವೀಣಾವಾದನ ಝೇಂಕಾರವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದ ವೀಣೆ ವೆಂಕಟಗಿರಿಯಪ್ಪ (26-4-1887ರಿಂದ 30-1-1952) ಅವರು ವೆಂಕಟರಾಮಯ್ಯ- ನರಸಮ್ಮ ದಂಪತಿಯ ಮಗನಾಗಿ ಹೆಗ್ಗಡದೇವನ ಕೋಟೆಯಲ್ಲಿ ಜನಿಸಿದರು. ತಾತ ದೊಡ್ಡ ಸುಬ್ಬರಾಯರಿಂದಲೇ ವೀಣೆ ಪಾಠ ಆರಂಭಿಸಿದ ವೆಂಕಟರಾಮಯ್ಯ ಮುಂದೆ ಮೈಸೂರು ಮಹಾರಾಜರ ಆಸ್ಥಾನ ವಿದ್ವಾಂಸರಾಗಿ ನೇಮಕಗೊಂಡು ಮಹಾರಾಜರ ಪ್ರೋತ್ಸಾಹದಿಂದ ಪಾಶ್ಚಾತ್ಯ ಸಂಗೀತ ಪಿಯಾನೋ, ಕೆರಮಿಮ್ ವಾದನ ಕಲೆಯನ್ನೂ ಕಲಿತು ವೀಣೆಯೊಂದಿಗೆ ಅವುಗಳಲ್ಲೂ ಪ್ರವೀಣರಾದರು.

1806: ಸ್ಕಾಟಿಷ್ ಮತಪ್ರಚಾರಕ ಅಲೆಗ್ಸಾಂಡರ್ ಡಫ್ (1806-78) ಹುಟ್ಟಿದ ದಿನ. ಈತ ಕಲಕತ್ತಾ ವಿಶ್ವವಿದ್ಯಾಲಯ ಸ್ಥಾಪನೆಗೆ ನೆರವಾದ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement