ಇಂದಿನ ಇತಿಹಾಸ
ಆಗಸ್ಟ್ 8
ಭಾರತೀಯ ಚಿತ್ರರಂಗಕ್ಕೆ ಸಲ್ಲಿಸಿದ ಅನುಪಮ ಸೇವೆಗಾಗಿ ಖ್ಯಾತ ಚಿತ್ರ ನಿರ್ದೇಶಕ, ನಿರ್ಮಾಪಕ ಶ್ಯಾಮ್ ಬೆನಗಲ್ ಅವರಿಗೆ ಕೇಂದ್ರ ಸರ್ಕಾರ 2005ನೇ ಸಾಲಿನ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಿ ಗೌರವಿಸಿತು.
2007: ಭಾರತೀಯ ಚಿತ್ರರಂಗಕ್ಕೆ ಸಲ್ಲಿಸಿದ ಅನುಪಮ ಸೇವೆಗಾಗಿ ಖ್ಯಾತ ಚಿತ್ರ ನಿರ್ದೇಶಕ, ನಿರ್ಮಾಪಕ ಶ್ಯಾಮ್ ಬೆನಗಲ್ ಅವರಿಗೆ ಕೇಂದ್ರ ಸರ್ಕಾರ 2005ನೇ ಸಾಲಿನ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಿ ಗೌರವಿಸಿತು. ಈ ಪ್ರಶಸ್ತಿ ಎರಡು ಲಕ್ಷ ರೂಪಾಯಿ ನಗದು ಹಾಗೂ ಸ್ವರ್ಣ ಕಮಲ ಒಳಗೊಂಡಿದೆ. 72 ವರ್ಷದ ಬೆನಗಲ್ ಪ್ರಸ್ತುತ ರಾಜ್ಯಸಭೆಯ ಸದಸ್ಯರು. 1976ರಲ್ಲಿಪದ್ಮಶ್ರೀ ಪ್ರಶಸ್ತಿಗೆ ಪಾತ್ರರಾಗಿದ್ದ ಅವರು 1991ರಲ್ಲಿ ಪದ್ಮಭೂಷಣ ಪ್ರಶಸ್ತಿಗೆ ಭಾಜನರಾಗಿದ್ದರು. 70ರ ದಶಕದಲ್ಲಿ ಹಿಂದಿ ಚಿತ್ರ `ಅಂಕುರ್' ನಿರ್ದೇಶನದೊಂದಿಗೆ ಅವರು ಚಿತ್ರರಂಗ ಪ್ರವೇಶಿಸಿದರು. `ಅಂಕುರ್' ಚಿತ್ರರಂಗದಲ್ಲಿ ಹೊಸ ಅಲೆಗೆ ಕಾರಣವಾಯಿತು. ಅವರ ಚಿತ್ರಗಳ ಕಥಾವಸ್ತು ವೈವಿಧ್ಯಮಯವಾಗಿದ್ದು ಸಮಕಾಲೀನ ಭಾರತೀಯ ಸಮಾಜವನ್ನು ಪ್ರತಿಬಿಂಬಿಸಿದವು. ನಿಶಾಂತ್, ಮಂಥನ್, ಭೂಮಿಕಾ, ಜುನೂನ್, ಕಲಿಯುಗ್, ಮಂಡಿ, ತ್ರಿಕಾಲ್, ಸೂರಜ್ ಕಾ ಸಾತ್ವಾ ಘೋಡಾ, ಮಾಮೂ, ಸರ್ದಾರಿ ಬೇಗಂ, ಸಮರ್, ದಿ ಮೇಕಿಂಗ್ ಆಫ್ ಮಹಾತ್ಮ, ಜುಬೇದಾ ಹಾಗೂ ಸುಭಾಶ್ ಚಂದ್ರ ಬೋಸ್ - ಶ್ಯಾಮ್ ಅವರ ಕೆಲವು ಪ್ರಮುಖ ಚಿತ್ರಗಳು. ಸದಭಿರುಚಿಯ, ಚಿಂತನೆಗೆ ಹಚ್ಚುವಂತಹ 24 ಚಿತ್ರಗಳನ್ನು ನಿರ್ದೇಶಿಸಿರುವ ಬೆನಗಲ್, ಸಿನಿಮಾಗಳ ಹೊರತಾಗಿ ಹಲವು ಸಾಕ್ಷ್ಯಚಿತ್ರಗಳನ್ನು ನಿರ್ಮಿಸಿದವರು. ಕೈಗಾರೀಕರಣದ ಸಮಸ್ಯೆಗಳು, ಸಂಸ್ಕೃತಿ, ಸಂಗೀತ ಅವರ ಸಾಕ್ಷ್ಯಚಿತ್ರಗಳಿಗೆ ವಸ್ತು. ಬೆನಗಲ್ ಕಿರುತೆರೆಯಲ್ಲೂ ತಮ್ಮ ಛಾಪು ಒತ್ತಿದವರು. ಭಾರತೀಯ ಹಾಗೂ ಅಂತಾರಾಷ್ಟ್ರೀಯ ಕಥೆಗಾರರ ಸಣ್ಣಕಥೆಗಳನ್ನು ಆಧರಿಸಿದ ಹಲವು ಧಾರಾವಾಹಿಗಳು ದೂರದರ್ಶನದಲ್ಲಿ ಪ್ರಸಾರವಾಗಿ ಜನಪ್ರಿಯತೆ ಗಳಿಸಿವೆ. ಗ್ರಾಮೀಣ ಮಕ್ಕಳಿಗಾಗಿ `ಯುನಿಸೆಫ್' ಪ್ರಾಯೋಜಿತ ಶೈಕ್ಷಣಿಕ ಸರಣಿಯನ್ನೂ ಶ್ಯಾಮ್ ನಿರ್ದೇಶಿಸಿದ್ದಾರೆ. 1966ರಿಂದ 1973ರ ಅವಧಿಯಲ್ಲಿ ಸಮೂಹ ಸಂವಹನ ತಂತ್ರಜ್ಞಾನವನ್ನು ಬೋಧಿಸಿದ ಬೆನಗಲ್, 1980-83 ಹಾಗೂ 1989-92ರ ಅವಧಿಯಲ್ಲಿ `ಫಿಲ್ಮ್ ಅಂಡ್ ಟೆಲಿವಿಜನ್ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾ'ದ ಅಧ್ಯಕ್ಷರಾಗಿದ್ದರು. ತಮ್ಮ ಅಧಿಕಾರಾವಧಿಯಲ್ಲಿ ಚಲನಚಿತ್ರ ಶಿಕ್ಷಣಕ್ಕೆ ಹೊಸ ಸ್ವರೂಪ ನೀಡಿದರು. ಬೆನಗಲ್ ಮೂಲತಃ ಉಡುಪಿ ಜಿಲ್ಲೆಯ ಬೆನಗಲ್ ಗ್ರಾಮದವರು. ತಂದೆ ಉದ್ಯೋಗದ ನಿಮಿತ್ತ ವಲಸೆ ಹೋಗಿದ್ದರಿಂದ 1934ರ ಡಿಸೆಂಬರ್ 14ರಂದು ಹೈದರಾಬಾದ್ ಸಮೀಪದ ಅಲಿವಾಲ್ ನಲ್ಲಿ ಹುಟ್ಟಿ ಬೆಳೆದರು.
2007: ಕರ್ನಾಟಕ ರಾಜ್ಯದಲ್ಲಿ ಮಳೆ ತನ್ನ ಆರ್ಭಟವನ್ನು ಮುಂದುವರೆಸಿತು. ಕೊಡಗಿನಲ್ಲಿ ಮಳೆ ಸ್ವಲ್ಪ ಇಳಿಮುಖವಾದರೂ ಉತ್ತರ ಕನ್ನಡ ಮತ್ತು ಬಳ್ಳಾರಿಗಳಲ್ಲಿ ಅಪಾಯದ ಅಂಚು ತಲುಪಿತು. ತುಂಗಭದ್ರಾ ಜಲಾಶಯದಿಂದ ನದಿಗೆ ಅಧಿಕ ನೀರು ಬಿಟ್ಟ ಹಿನ್ನೆಲೆಯಲ್ಲಿ ತಾಲ್ಲೂಕಿನ 16 ಗ್ರಾಮಗಳು ನಡುಗಡ್ಡೆಯಾದವು. ಇಲ್ಲಿ ಸಿಕ್ಕಿಹಾಕಿಕೊಂಡಿದ್ದ 76 ಜನರ ಪೈಕಿ 50 ಜನರನ್ನು ಹರಿಗೋಲಿನ ಮೂಲಕ ರಕ್ಷಿಸಲಾಯಿತು.
2007: ಲಾಸ್ ಏಂಜೆಲಿಸ್ ನ ಕಾರ್ಸೋನಿನಲ್ಲಿ ಆರು ಲಕ್ಷ ಡಾಲರ್ ಬಹುಮಾನ ಮೊತ್ತದ ವೆಸ್ಟ್ ಬ್ಯಾಂಕ್ ಕ್ಲಾಸಿಕ್ ಡಬ್ಲ್ಯುಟಿಎ ಟೆನಿಸ್ ಟೂರ್ನಿಯ ಸಿಂಗಲ್ಸಿನಲ್ಲಿ ಕ್ವಾರ್ಟರ್ ಫೈನಲಿನಲ್ಲಿ 30ನೇ ರ್ಯಾಂಕಿಂಗಿನಲ್ಲಿದ್ದ ಸಾನಿಯಾ ಮಿರ್ಜಾ ಮಾಜಿ ಅಗ್ರ ಶ್ರೇಯಾಂಕಿತ ಆಟಗಾರ್ತಿ ಮಾರ್ಟಿನಾ ಹಿಂಗಿಸ್ ಅವರನ್ನು ಸೋಲಿಸಿ ಟೆನಿಸ್ ಜಗತ್ತನ್ನು ಅಚ್ಚರಿಯಲ್ಲಿ ಮುಳುಗಿಸಿದರು.
2007: ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಇತರೆ ಹಿಂದುಳಿದ ವರ್ಗಗಳವರಿಗೆ (ಒಬಿಸಿ) ಶೇ 27ರಷ್ಟು ಮೀಸಲಾತಿ ಕಲ್ಪಿಸುವ ನೀತಿಯಿಂದ `ಕೆನೆಪದರ' (ಆರ್ಥಿಕವಾಗಿ ಸಬಲರು) ಹೊರಗಿಡುವುದಾಗಿ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ ಮುಂದೆ ಮಹತ್ವದ ಹೇಳಿಕೆ ನೀಡಿತು. ಈ ಮೀಸಲಾತಿಯಿಂದ `ಕೆನೆಪದರ'ವನ್ನು ಹೊರಗಿಡಬೇಕು ಎಂದು ನ್ಯಾಯಾಲಯ ಬಯಸಿದಲ್ಲಿ ಕೇಂದ್ರ ಸರ್ಕಾರ ಅದನ್ನು ಪಾಲಿಸಲಿದೆ ಎಂದು ಸಾಲಿಸಿಟರ್ ಜನರಲ್ ಜಿ.ಇ. ವಹನಾವತಿ, ಮುಖ್ಯ ನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್ ನೇತೃತ್ವದ ಐವರು ನ್ಯಾಯಾಧೀಶರ ಸಂವಿಧಾನ ಪೀಠಕ್ಕೆ ತಿಳಿಸಿದರು. ಸರ್ಕಾರ ಜಾರಿಗೊಳಿಸಲು ಹೊರಟಿದ್ದ `ಒಬಿಸಿ' ಮೀಸಲಾತಿಗೆ ಸುಪ್ರೀಂಕೋರ್ಟ್ ಮಾರ್ಚ್ 29ರಂದು ನೀಡಿರುವ ತಡೆಯಾಜ್ಞೆಯನ್ನು ತೆರವುಗೊಳಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಅವರು ಕೇಂದ್ರದ ಪರವಾಗಿ ಈ ಹೇಳಿಕೆ ನೀಡಿದರು.
2007: ವಿಶ್ವದಲ್ಲೇ ಪ್ರಥಮ ಎನ್ನಬಹುದಾದ 4ನೇ ಪೀಳಿಗೆಯ ತದ್ರೂಪಿ ಹಂದಿಮರಿಯನ್ನು ಜಪಾನ್ ವಿಜ್ಞಾನಿಗಳು ಸೃಷ್ಟಿಸಿದ್ದು, ಈ ಸಂಶೋಧನೆ ಮಾನವ ಅಂಗಾಂಶ ಕಸಿಗೆ ಸಹಕಾರಿಯಾಗಲಿದೆ ಎಂಬ ನಿರೀಕ್ಷೆ ವ್ಯಕ್ತಪಡಿಸಿದರು. ಅಮೆರಿಕದ ವಿಜ್ಞಾನಿಗಳು ಇಲಿಯ 6ನೇ ತದ್ರೂಪಿ ಸೃಷ್ಟಿಸಿದ್ದೇ ಈವರೆಗಿನ ಸಾಧನೆಯಾಗಿತ್ತು. ಆದರೆ ಜಪಾನ್ ವಿಜ್ಞಾನಿಗಳು ಇಷ್ಟು ದೊಡ್ಡ ಗಾತ್ರದ ಪ್ರಾಣಿಯೊಂದರ 4ನೇ ತಲೆಮಾರಿನ ಪ್ರತಿರೂಪಿ ಸೃಷ್ಟಿಸುವ ಮೂಲಕ ಸಂಶೋಧನೆಯನ್ನು ಉತ್ತಮಪಡಿಸಿದರು. 4ನೇ ಪೀಳಿಗೆ ಹೇಗೆ ಎಂದರೆ ಎಂದರೆ ಈ ಹಂದಿಯ ಮೊದಲಿನ ಮೂರು ತಲೆಮಾರು ಕೂಡಾ ತದ್ರೂಪಿ ವಿಧಾನದಲ್ಲಿ ಜನಿಸಿದ್ದವು.
2007: ಅಮೇರಿಕದಲ್ಲಿರುವ ಭಾರತೀಯ ಮೂಲದ ನರಶಸ್ತ್ರ ಚಿಕಿತ್ಸಾ ತಜ್ಞ ಡಾ. ಕುಮಾರ ಬಾಹುಳ್ಯನ್ ತಾವು ಹುಟ್ಟಿ ಬೆಳೆದ ಕೇರಳದ ಚೆಮ್ಮನಾಕರಿ ಹಳ್ಳಿಯಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಿಸಲು 2 ಕೋಟಿ ಅಮೆರಿಕನ್ ಡಾಲರ್ (ಸುಮಾರು 80 ಕೋಟಿ ರೂಪಾಯಿ) ದಾನ ಮಾಡಿದರು. ಈಗ ಅಮೆರಿಕದಲ್ಲಿ ವೈದ್ಯರಾಗಿರುವ ಬಾಹುಳ್ಯನ್, ಕೋಟಿಗಟ್ಟಲೆ ಹಣ ಸಂಪಾದಿಸಿದ್ದು, ಐದು ಬೆಂಜ್ ಕಾರು, ಒಂದು ವಿಮಾನ ಇಟ್ಟುಕೊಂಡಿದ್ದಾರೆ. ಆದರೆ ಅವರು ಹುಟ್ಟಿದ್ದು ದಲಿತ ಕುಟುಂಬದಲ್ಲಿ. ಬೆಳೆದದ್ದು ಕಡು ಬಡತನದಲ್ಲಿ. ಈಗಿನ ಮಟ್ಟಕ್ಕೆ ಮರಲು ತನ್ನ ಹಳ್ಳಿಯವರ ಪ್ರೋತ್ಸಾಹವೇ ಕಾರಣ. ಆ ಋಣ ತೀರಿಸಲು ಇದೊಂದು ಪುಟ್ಟ ಯತ್ನ ಎನ್ನುತ್ತಾರೆ ಬಾಹುಳ್ಯನ್.
2006: ವಿದೇಶಾಂಗ ಖಾತೆ ಮಾಜಿ ಸಚಿವ ನಟವರ್ ಸಿಂಗ್ ಅವರನ್ನು ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತು ಮಾಡಲಾಯಿತು. ಪಕ್ಷದ ವಿರುದ್ಧ ಅಪಪ್ರಚಾರದಲ್ಲಿ ತೊಡಗಿ ಅಗೌರವ ಉಂಟು ಮಾಡ್ದಿದಕ್ಕಾಗಿ ಅವರನ್ನು ಪಕ್ಷದಿಂದ ಉಚ್ಚಾಟಿಸಬೇಕು ಎಂಬ ನಿರ್ಣಯವನ್ನೂ ಪಕ್ಷದ ಶಿಸ್ತು ಸಮಿತಿ ಕೈಗೊಂಡಿತು.
2006: ವಿಶ್ವ ಜೂನಿಯರ್ ಮಾಜಿ ಚಾಂಪಿಯನ್ ಭಾರತದ ಪೆಂಟ್ಯಾಲ ಹರಿಕೃಷ್ಣ ಅವರು ಹಂಗೇರಿಯ ಪಾಕ್ಸ್ ನಲ್ಲಿ ನಡೆದ ಮೂರನೇ ಮಾರ್ಕ್ಸ್ ಗಾರ್ಗಿ ಅಂತಾರಾಷ್ಟ್ರೀಯ ಚೆಸ್ ಟೂರ್ನಿಯ ಪ್ರಶಸ್ತಿಯನ್ನು ಗೆದ್ದು ಚಾಂಪಿಯನ್ ಶಿಪ್ ಪಟ್ಟವನ್ನು ತಮ್ಮದಾಗಿಸಿಕೊಂಡರು. ಹಂಗೇರಿಯ ಫರೆನ್ಸ್ ಬರ್ಕ್ ವಿರುದ್ಧ ಅವರು ಡ್ರಾ ಸಾಧಿಸಿ ಚಾಂಪಿಯನ್ ಶಿಪ್ ಗೆದ್ದುಕೊಂಡರು.
2005: ಖ್ಯಾತ ಸಾಹಿತಿ ಶಾಂತಾದೇವಿ ಮಾಳವಾಡ ನಿಧನರಾದರು.
2000: ಮಾಜಿ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ (97) ನಿಧನರಾದರು.
1990: ಖ್ಯಾತ ಕೈಗಾರಿಕೋದ್ಯಮಿ ನವಲ್ ಗೋದ್ರೆಜ್ ನಿಧನ.
1974: ವಾಟರ್ ಗೇಟ್ ಹಗರಣದ ಹಿನ್ನೆಲೆಯಲ್ಲಿ ಅಮೆರಿಕದ ಅಧ್ಯಕ್ಷ ರಿಚರ್ಡ್ ನಿಕ್ಸನ್ ಅವರು ತಮ್ಮ ರಾಜೀನಾಮೆಯನ್ನು ಪ್ರಕಟಿಸಿದರು. ಹಗರಣದಿಂದಾಗಿ ರಾಜೀನಾಮೆ ನೀಡಿದ ಅಮೆರಿಕದ ಮೊತ್ತ ಮೊದಲ ಅಧ್ಯಕ್ಷರು ಇವರು.
1968: ರಿಚರ್ಡ್ ನಿಕ್ಸನ್ ಅವರು ಮಿಯಾಮಿ ತೀರದಲ್ಲಿ ನಡೆದ ರಿಪಬ್ಲಿಕನ್ ಪಕ್ಷದ ರಾಷ್ಟ್ರೀಯ ಸಮಾವೇಶದಲ್ಲಿ ಅಮೆರಿಕದ ಅಧ್ಯಕ್ಷ ಸ್ಥಾನಕ್ಕೆ ನಾಮಕರಣಗೊಂಡರು.
1968: ಭಾರತೀಯ ಕ್ರಿಕೆಟ್ ಆಟಗಾರ ಅಬೇ ಕುರುವಿಲ್ಲ ಜನ್ಮದಿನ.
1956: ದ್ವಿಭಾಷಾ ಮುಂಬೈ ರಾಜ್ಯ ರಚನೆಯನ್ನು ವಿರೋಧಿಸಿ ಅಹಮದಾಬಾದಿನಲ್ಲಿ ಜನ ಉಗ್ರ ಪ್ರದರ್ಶನ ನಡೆಸಿದಾಗ ಪೊಲೀಸರ ಗೋಲಿಬಾರ್, ಆಶ್ರುವಾಯು, ಲಾಠಿ ಪ್ರಹಾರಕ್ಕೆ ಬಲಿಯಾಗಿ ಐವರು ಮೃತರಾಗಿ 100ಕ್ಕೂ ಹೆಚ್ಚು ಮಂದಿ ಗಾಯಗೊಂಡರು.
1956: ಭಾರತ ಸರ್ಕಾರವು ನೇಮಿಸಿದ್ದ ನೇತಾಜಿ ಸುಭಾಶ್ ಚಂದ್ರ ಬೋಸ್ ತನಿಖಾ ಸಮಿತಿಯು `ನೇತಾಜಿ ಬೋಸರ ಮರಣವು ಸ್ಥಿರಪಟ್ಟಿದೆಯೆಂದೂ, ದ್ವಿತೀಯ ಯುದ್ಧದ ಕಾಲದಲ್ಲಿ ಫಾರೋಸಾದಲ್ಲಿ ಇದು ಸಂಭವಿಸಿದೆ' ಎಂಬ ತೀರ್ಮಾನಕ್ಕೆ ಬಂದಿತು.
1942: ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು ಮುಂಬೈಯ ಗೊವಾಲಿಯಾ ಟ್ಯಾಂಕಿನಲ್ಲಿ (ಈಗಿನ ಆಗಸ್ಟ್ ಕ್ರಾಂತಿ ಮೈದಾನ) ನಿರ್ಣಯ ಒಂದನ್ನು ಅಂಗೀಕರಿಸುವ ಮೂಲಕ `ಭಾರತ ಬಿಟ್ಟು ತೊಲಗಿ' (ಕ್ವಿಟ್ ಇಂಡಿಯಾ) ಚಳವಳಿಗೆ ಚಾಲನೆ ನೀಡಿತು. ಮರುದಿನ ಸರ್ದಾರ್ ವಲ್ಲಭಭಾಯಿ ಪಟೇಲ್, ಜವಾಹರಲಾಲ್ ನೆಹರೂ ಮತ್ತಿತರ ನಾಯಕರ ಜೊತೆಗೆ ಬಂಧನಕ್ಕೆ ಒಳಗಾಗುವ ಮುನ್ನ ಮಹಾತ್ಮಾ ಗಾಂಧೀಜಿ ಅವರು `ಮಾಡು ಇಲ್ಲವೇ ಮಡಿ' ಸಂದೇಶವನ್ನು ರಾಷ್ಟ್ರಕ್ಕೆ ನೀಡಿದರು. ಇದು ಬ್ರಿಟಿಷ್ ಆಡಳಿತದ ವಿರುದ್ಧ ಭಾರತದಲ್ಲಿ ನಡೆದ ವ್ಯಾಪಕ ಮತ್ತು ತೀವ್ರ ಸ್ವರೂಪದ ಜನಾಂದೋಳನವಾಯಿತು.
1940: ಭಾರತೀಯ ಕ್ರಿಕೆಟ್ ಆಟಗಾರ ದಿಲಿಪ್ ಸರ್ ದೇಸಾಯಿ ಜನ್ಮದಿನ. ಬಲಗೈ ಬ್ಯಾಟ್ಸ್ ಮನ್ ಎಂದೇ ಇವರು ಖ್ಯಾತರಾಗಿದ್ದರು.
1934: ಸಾಹಿತಿ ಕಮಲ ಸಂಪಳ್ಳಿ ಜನನ.
1929: ಸಾಹಿತಿ ಮತ್ತೂರು ಕೃಷ್ಣಮೂರ್ತಿ ಜನನ.
1924: ಎಚ್. ಕೆ. ರಂಗನಾಥ್ ಜನನ.
1921: ಕೆ.ವಿ. ರತ್ನಮ್ಮ ಜನನ.
1917: ಹಾಸ್ಯ ಸಾಹಿತ್ಯದ ಹಿರಿಯಜ್ಜಿ ಎಂದೇ ಖ್ಯಾತರಾದ ಸುನಂದಮ್ಮ (8-8-1917ರಿಂದ 27-1-2006) ಅವರು ರಾಮಯ್ಯ- ನಾಗಮ್ಮ ದಂಪತಿಯ ಮಗಳಾಗಿ ಮೈಸೂರಿನಲ್ಲಿ ಜನಿಸಿದರು.
1900: ಅಮೆರಿಕ ಮತ್ತು ಗ್ರೇಟ್ ಬ್ರಿಟನ್ ನಡುವೆ ಮೊತ್ತ ಮೊದಲ ಡೇವಿಸ್ ಕಪ್ ಟೆನಿಸ್ ಪಂದ್ಯ ಮೆಸಾಚ್ಯುಸೆಟ್ಸಿನ ಬ್ರೂಕ್ಲಿನ್ನಿನಲ್ಲಿ ಆರಂಭವಾಯಿತು. ಡೇವಿಸ್ ಕಪ್ ಟ್ರೋಫಿಯನ್ನು ನೀಡಿದ ಅಮೆರಿಕದ ಟೆನಿಸ್ ಆಟಗಾರ ಡ್ವೈಟ್ ಎಫ್. ಡೇವಿಸ್ ಅವರು ಅಮೆರಿಕ ತಂಡದ ಪರವಾಗಿ ಆಟವಾಡಿ ಮೊದಲ ಎರಡು ಸ್ಪರ್ಧೆಗಳಲ್ಲಿ ಟ್ರೋಫಿಯನ್ನು ಗೆದ್ದುಕೊಂಡರು.
1890: ಸಾಹಿತಿ ಶೀನಪ್ಪ ಹೆಗಡೆ ಜನನ.
1815: ದೇಶಭ್ರಷ್ಟನಾದ ಬಳಿಕ ನೆಪೋಲಿಯನ್ ಬೋನಪಾರ್ಟೆ ದಕ್ಷಿಣ ಅಟ್ಲಾಂಟಿಕ್ ನ ಸೇಂಟ್ ಹೆಲೆನಾ ದ್ವೀಪಕ್ಕೆ ಪ್ರಯಾಣ ಬೆಳೆಸಿದ.
(ಸಂಗ್ರಹ: ನೆತ್ರಕೆರೆ ಉದಯಶಂಕರ)
No comments:
Post a Comment