ಇಂದಿನ ಇತಿಹಾಸ
ಸೆಪ್ಟೆಂಬರ್ 4
ಅತ್ಯದ್ಭುತ ಸಾಹಸಗಳಿಂದ ವನ್ಯಜೀವಿಗಳ ನಿಗೂಢ ಲೋಕವನ್ನು ಜಗತ್ತಿಗೆ ತೆರೆದಿಟ್ಟಿದ್ದ ಆಸ್ಟ್ರೇಲಿಯಾದ ಸಾಹಸಿಗ `ಕ್ರೊಕೊಡೈಲ್ ಹಂಟರ್' (ಮೊಸಳೆ (ಚಿತ್ರ) ಹಿಡಿಯುವವ) ಸ್ಟೀವ್ ಇರ್ವಿನ್ (44) ಅವರು ಆಸ್ಟ್ರೇಲಿಯಾದ ಕ್ವೀನ್ಸ್ ಲ್ಯಾಂಡ್ ಸಮೀಪದ ಸಾಗರದಲ್ಲಿ ಜಲಚರಗಳ ಚಿತ್ರೀಕರಣದಲ್ಲಿ ತೊಡಗಿದ್ದಾಗ ವಿಷಪೂರಿತ `ಸ್ಟಿಂಗ್ ರೆ' ಮೀನಿನ ದಾಳಿಗೆ ಗುರಿಯಾಗಿ ದುರ್ಮರಣವನ್ನಪ್ಪಿದರು. ಮೀನಿನ ವಿಷಪೂರಿತ ಬಾಣ ಅವರ ಎದೆಗೆ ನಾಟಿ ಸಾಗರಗರ್ಭದಲ್ಲೇ ಅವರು ಅಸು ನೀಗಿದರು.
2007: ಕಳೆದ ತಿಂಗಳು ಹೈದರಾಬಾದಿನ ಲುಂಬಿನಿ ಪಾರ್ಕ್ ಹಾಗೂ ಗೋಪಾಲ್ ಚಾಟ್ ಭಂಡಾರದಲ್ಲಿ ಸಂಭವಿಸಿದ ಅವಳಿ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ಆಂಧ್ರದ ವಿಶೇಷ ತನಿಖಾ ತಂಡವು ಬಾಂಗ್ಲಾದೇಶದ ವಿದ್ಯಾರ್ಥಿನಿ ಶಾಹಿ ಲಜ್ಜಾಜಿನಿ ಎಂಬಾಕೆಯನ್ನು ತಮಿಳುನಾಡಿನ ವೆಲ್ಲೂರಿನಲ್ಲಿ ಬಂಧಿಸಿತು. ಲಜ್ಜಾಜಿನಿ ವೆಲ್ಲೂರಿನ ಕ್ರಿಶ್ಚಿಯನ್ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿನಿ ಎಂದು ಹೇಳಲಾಗಿತ್ತು. ಆದರೆ ತನಿಖೆಯ ವೇಳೆ ಈಕೆ ವೆಲ್ಲೂರಿನ 2008ರ ಆಕ್ಸಿಲಿಯಮ್ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಎ (ಇಂಗ್ಲಿಷ್ ಸಾಹಿತ್ಯ) ವ್ಯಾಸಂಗ ಮಾಡುತ್ತಿರುವ ವಿಷಯ ಬಹಿರಂಗೊಂಡಿತು.
2007: ಕೊಳೆರೋಗದಿಂದ ತೀವ್ರ ನಷ್ಟಕ್ಕೆ ಒಳಗಾಗಿರುವ ಅಡಿಕೆ ಬೆಳೆಗಾರರ ನೆರವಿಗೆ ಬಂದ ರಾಜ್ಯ ಸರ್ಕಾರ, ತತ್ ಕ್ಷಣದ ಕ್ರಮವಾಗಿ 10 ಕೋಟಿ ರೂಪಾಯಿಗಳ ಸಬ್ಸಿಡಿ ಪ್ರಕಟಿಸಿತು. ಬೆಂಗಳೂರಿನ ವಿಧಾನಸೌಧದಲ್ಲಿ ಕರ್ನಾಟಕದ 7 ಜಿಲ್ಲೆಗಳಿಂದ ಆಗಮಿಸಿದ ಅಡಿಕೆ ಬೆಳೆಗಾರರು ಮತ್ತು ಅಡಿಕೆ ಮಾರಾಟ ಸಹಕಾರ ಸಂಘಗಳ ಮುಖಂಡರೊಂದಿಗೆ ಸಭೆ ನಡೆಸಿದ ಬಳಿಕ ಉಪಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ಪತ್ರಕರ್ತರಿಗೆ ಈ ವಿಷಯ ತಿಳಿಸಿದರು.
2007: ರಾಜ್ಯದ ಒಟ್ಟು 208 ನಗರ ಪ್ರದೇಶಗಳ ಸ್ಥಳೀಯ ಸಂಸ್ಥೆಗಳಿಗೆ ಸೆಪ್ಟೆಂಬರ್ 28ರಂದು ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗ ನಿರ್ಧರಿಸಿತು.
2007: ವಿಶಾಖ ಪಟ್ಟಣದಿಂದ 130 ನಾಟಿಕಲ್ ಮೈಲು ದೂರ ಕಡಲಿನಲ್ಲಿ ಈದಿನ ಪ್ರಾರಂಭವಾದ ಜಂಟಿ ಸಮರಾಭ್ಯಾಸದಲ್ಲಿ ಅಮೆರಿಕ, ಭಾರತ, ಜಪಾನ್, ಆಸ್ಟ್ರೇಲಿಯ ಹಾಗೂ ಸಿಂಗಪುರದ 26 ಯುದ್ಧ ನೌಕೆ ಪಾಲ್ಗೊಂಡವು.
2007: ರಾವಲ್ಪಿಂಡಿಯ ಜನನಿಬಿಡ ಮಾರುಕಟ್ಟೆ ಪ್ರದೇಶಗಳಲ್ಲಿ ಈದಿನ ಸಂಭವಿಸಿದ ಎರಡು ಬಾಂಬ್ ಸ್ಫೋಟಗಳಲ್ಲಿ ಕನಿಷ್ಠ 29 ಜನರು ಮೃತರಾದರು. ಪಾಕಿಸ್ಥಾನದ ಅಣುಶಕ್ತಿ ಆಯೋಗದ ನೌಕರರನ್ನು ಖಾಸೀಂ ಬಜಾರ್ ಪ್ರದೇಶದಲ್ಲಿನ ಕಚೇರಿಗೆ ಕರೆದೊಯ್ಯುತ್ತಿದ್ದ ಸೇನಾ ಪಡೆಯ ಬಸ್ಸಿನಲ್ಲಿ ಮೊದಲ ಸ್ಫೋಟ ಬೆಳಿಗ್ಗೆ 7.30ರ ಸಮಯದಲ್ಲಿ ಸಂಭವಿಸಿ, ಕನಿಷ್ಠ 17 ಮಂದಿ ಮೃತರಾದರು. ನಂತರ ಆರ್. ಎ. ಬಜಾರಿನಲ್ಲಿ ಮೋಟಾರ್ ಬೈಕಿನಲ್ಲಿಟ್ಟ ಬಾಂಬ್ ಸ್ಫೋಟಗೊಂಡು ಕನಿಷ್ಠ 12 ಜನರು ಅಸುನೀಗಿದರು.
2007: ಖಾಸಗಿ ವಿಮಾನಯಾನ ಕಂಪೆನಿ ಜೆಟ್ ಏರ್ ವೇಸ್, ನವದೆಹಲಿಯಿಂದ ಟೊರಾಂಟೊಗೆ ನೇರ ವಿಮಾನ ಸೇವೆ ಆರಂಭಿಸಿತು.
2006: ಅತ್ಯದ್ಭುತ ಸಾಹಸಗಳಿಂದ ವನ್ಯಜೀವಿಗಳ ನಿಗೂಢ ಲೋಕವನ್ನು ಜಗತ್ತಿಗೆ ತೆರೆದಿಟ್ಟಿದ್ದ ಆಸ್ಟ್ರೇಲಿಯಾದ ಸಾಹಸಿಗ `ಕ್ರೊಕೊಡೈಲ್ ಹಂಟರ್' (ಮೊಸಳೆ (ಚಿತ್ರ) ಹಿಡಿಯುವವ) ಸ್ಟೀವ್ ಇರ್ವಿನ್ (44) ಅವರು ಆಸ್ಟ್ರೇಲಿಯಾದ ಕ್ವೀನ್ಸ್ ಲ್ಯಾಂಡ್ ಸಮೀಪದ ಸಾಗರದಲ್ಲಿ ಜಲಚರಗಳ ಚಿತ್ರೀಕರಣದಲ್ಲಿ ತೊಡಗಿದ್ದಾಗ ವಿಷಪೂರಿತ `ಸ್ಟಿಂಗ್ ರೆ' ಮೀನಿನ ದಾಳಿಗೆ ಗುರಿಯಾಗಿ ದುರ್ಮರಣವನ್ನಪ್ಪಿದರು. ಮೀನಿನ ವಿಷಪೂರಿತ ಬಾಣ ಅವರ ಎದೆಗೆ ನಾಟಿ ಸಾಗರಗರ್ಭದಲ್ಲೇ ಅವರು ಅಸು ನೀಗಿದರು. ಮೊಸಳೆಗಳ ಜೀವನ, ಆಹಾರ ಅಭ್ಯಾಸಗಳ ಬಗ್ಗೆ ಇರ್ವಿನ್ ನಿರ್ಮಿಸಿದ ಚಿತ್ರವನ್ನು 1992 ರಲ್ಲಿ ಪ್ರಸಾರ ಮಾಡಲಾಗಿತ್ತು. ಆ ಬಳಿಕ ಅವರು ಅತ್ಯಂತ ಜನಪ್ರಿಯರಾಗಿ ಮನೆ ಮಾತಾಗಿದ್ದರು. ವನ್ಯ ಜೀವಿಗಳ ಸಂರಕ್ಷಣೆಗೆ ತಮ್ಮ ಜೀವನವನ್ನೇ ಮುಡುಪಾಗಿದ್ದ ಇರ್ವಿನ್ ಅಪರೂಪದ ವನ್ಯಜೀವಿಗಳ ಸಾಕ್ಷ್ಯಚಿತ್ರ ನಿರ್ಮಿಸಿ ಅವುಗಳ ನಿಗೂಢ ಲೋಕವನ್ನು ವೀಕ್ಷಕರ ಎದುರು ಅನಾವರಣ ಗೊಳಿಸಿದ್ದರು. ದೈತ್ಯಾಕಾರದ ಮೊಸಳೆ, ವಿಷಪೂರಿತ ಹಾವುಗಳು, ಹುಲಿ, ಸಿಂಹಗಳ ಜೊತೆಗಿನ ಅವರ ಒಡನಾಟದ ದೃಶ್ಯಗಳು ವೀಕ್ಷಕರಲ್ಲಿ ನಡುಕ ಉಂಟು ಮಾಡುತ್ತಿದ್ದವು. ವನ್ಯ ಜೀವಿಗಳ ಬಗ್ಗೆ ಜಾಗೃತಿ ಮೂಡಿಸುವುದರ ಜೊತೆಗೆ ಅವುಗಳನ್ನು ಪ್ರೀತಿಸುವ ಹೊಸ ಪೀಳಿಗೆಯನ್ನೇ ಇರ್ವಿನ್ ಸೃಷ್ಟಿಸಿದ್ದರು. ಆಸ್ಟ್ರೇಲಿಯಾದಲ್ಲಿ ಸರೀಸೃಪಗಳ ಉದ್ಯಾನವನ್ನೂ ನಿರ್ವಹಿಸುತ್ತಿದ್ದರು.
2006: ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ತನ್ನ ಸಾಹಸ, ಚಾಣಾಕ್ಷತೆಯಿಂದ ಇಂಗ್ಲೆಂಡ್ ಮತ್ತು ಫ್ರಾನ್ಸಿನ ಪ್ರಶಂಸೆಗೆ ಪಾತ್ರರಾಗಿದ್ದ ಭಾರತೀಯ ಮೂಲದ ಗೂಢಚಾರಿಣಿ ನೂರುನ್ನೀಸಾ ಇನಾಯತ್ ಖಾನ್ ಅವರನ್ನು ಭಾರತ ಸರ್ಕಾರವು ಆರು ದಶಕಗಳ ಬಳಿಕ ಸ್ಮರಿಸಿಕೊಂಡು ಗೌರವ ಸಲ್ಲಿಸಿತು. ಅಧಿಕೃತ ಪ್ರವಾಸದ ಮೇಲೆ ಫ್ರಾನ್ಸಿಗೆ ಆಗಮಿಸಿದ ರಕ್ಷಣಾ ಸಚಿವ ಪ್ರಣವ್ ಮುಖರ್ಜಿ ಪ್ಯಾರಿಸ್ಸಿನಲ್ಲಿ ನೂರುನ್ನೀಸಾ ವಾಸಿಸುತ್ತಿದ್ದ ನಿವಾಸಕ್ಕೆ ಭೇಟಿ ನೀಡಿ ಶ್ರದ್ಧಾಂಜಲಿ ಸಲ್ಲಿಸಿದರು. ಎರಡನೇ ಮಹಾಯುದ್ಧ ಕಾಲದಲ್ಲಿ ನೂರುನ್ನೀಸಾ ಇಂಗ್ಲಿಷ್ ಸೇನೆ ಪರ ಗೂಢಚಾರಿಣಿಯಾಗಿ ಸೇವೆ ಸಲ್ಲಿಸಿದ್ದರು. ನಂತರ ಅವರನ್ನು ಜರ್ಮನ್ ಸೈನಿಕರು ಹತ್ಯೆ ಮಾಡಿದ್ದರು. ಈ ಭಾರತೀಯ ಸಂಜಾತೆಗೆ ಬ್ರಿಟನ್ ಸರ್ಕಾರ ಜಾರ್ಜ್ ಕ್ರಾಸ್ ಹಾಗೂ ಫ್ರಾನ್ಸ್ ಸರ್ಕಾರ ಕ್ರೋಯಿಕ್ಸ್ ಡಿ ಗ್ಯುರ್ರೆ ಪ್ರಶಸ್ತಿಗಳನ್ನು ಮರಣೋತ್ತರವಾಗಿ ನೀಡಿ ಗೌರವಿಸಿವೆ.
2006: ಕ್ರಿಮಿನಾಶಕ ಅಂಶಗಳಿರುವ ತಂಪು ಪಾನೀಯಗಳನ್ನು ನಿಷೇಧಿಸಿ ಕರ್ನಾಟಕ ಸರ್ಕಾರ ಹೊರಡಿಸಿರುವ ಸುತ್ತೊಲೆ ಬಗ್ಗೆ ಅನುಮಾನ ವ್ಯಕ್ತ ಪಡಿಸಿದ ಹೈಕೋರ್ಟ್ ಶಾಲಾ ಕಾಲೇಜುಗಳನ್ನು ಹೊರತು ಪಡಿಸಿ ಉಳಿದೆಡೆಗಳಲ್ಲಿ ಮಾರಾಟ ಮಾಡಲು ಅನುಮತಿ ನೀಡಿತು.
2006: ವಿಶ್ವ ಚಾಂಪಿಯನ್ ಮಾನವ ಜಿತ್ ಸಿಂಗ್ ಸಂಧು ಅವರು ಸಿಂಗಪುರದಲ್ಲಿ ನಡೆದ ಏಷ್ಯನ್ ಕ್ಲೇ ಶೂಟಿಂಗ್ ಚಾಂಪಿಯನ್ ಶಿಪ್ ನ ಪುರುಷರ ಟ್ರ್ಯಾಪ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದುಕೊಂಡರು.
2006: ಬಿಹಾರದ ಮಾಜಿ ಮುಖ್ಯಮಂತ್ರಿ ಸತ್ಯೇಂದ್ರ ನಾರಾಯಣ ಸಿನ್ಹ (89) ಪಟ್ನಾದಲ್ಲಿ ಈದಿನ ನಿಧನರಾದರು. `ಛೋಟೆ ಸಾಹೇಬ್' ಎಂದೇ ಹೆಸರಾಗಿದ್ದ ಸಿನ್ಹ 1952ರಲ್ಲಿ ಅಸ್ತಿತ್ವಕ್ಕೆ ಬಂದ ಪ್ರಥಮ ಲೋಕಸಭೆಗೆ ಔರಂಗಾಬಾದಿನಿಂದ ಆಯ್ಕೆಯಾಗಿದ್ದರು. ನಂತರ ಇದೇ ಕ್ಷೇತ್ರದಿಂದ ಅವರು 7 ಬಾರಿ ಲೋಕಸಭೆಗೆ ಆಯ್ಕೆಯಾದರು. ಬಿಹಾರ ರಾಜಕೀಯದಲ್ಲೂ ಮಿಂಚಿದ ಅವರು 1961ರಲ್ಲಿ ವಿವೇಕಾನಂದ ಝಾ ಸಂಪುಟದಲ್ಲಿ, 1963ರಲ್ಲಿ ಕೆ.ಬಿ. ಸಹಾಯ್ ಸಂಪುಟದಲ್ಲಿ ಸಚಿವರಾಗಿದ್ದರು. 1989ರಲ್ಲಿ ಆಗಿನ ಮುಖ್ಯಮಂತ್ರಿ ಭಗವತ್ ಝಾ ಆಜಾದ್ ವಿರುದ್ಧ ಬಂಡೆದ್ದು ತಾವೇ ಮುಖ್ಯಮಂತ್ರಿಯಾದರು.
2006: ರಾಜಸ್ಥಾನದ ರಾಜಧಾನಿ ಜೈಪುರದಿಂದ 30 ಕಿ.ಮೀ. ದೂರದ ಬೆನಾಡ್ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಕ್ ಒಂದರ ಅಡಿಗೆ ಸಿಲುಕಿ ಕರಿಯ ನಾಗರ ಒಂದು ಈದಿನ ಮೃತಪಟ್ಟಿತು. ಗ್ರಾಮಸ್ಥರು ಚಿತೆ ನಿರ್ಮಿಸಿ ಅದರ ಅಂತ್ಯ ಸಂಸ್ಕಾರದ ವ್ಯವಸ್ಥೆ ಮಾಡಿದರು. ಚಿತೆಗೆ ಅಗ್ನಿಸ್ಪರ್ಶ ಮಾಡುತ್ತಿದ್ದಂತೆಯೇ ಎಲ್ಲಿಂದಲೋ ಬಂದ ಹೆಣ್ಣು ಹಾವೊಂದು ಛಂಗನೆ ಚಿತೆಗೆ ಜಿಗಿದು `ಸತಿ ಸಹಗಮನ' ಮಾಡಿತು. ಸಂಗಾತಿಯ ಅಗಲಿಕೆಯ ನೋವು ತಾಳಲಾಗದೆ ನಾಗಿಣಿ ಸಹಗಮನ ಮಾಡಿಕೊಂಡ ಈ ಗ್ರಾಮ ಭಕ್ತಾದಿಗಳಿಗೆ ಪವಿತ್ರ ಕ್ಷೇತ್ರವಾಗಿ ಮಾರ್ಪಟ್ಟಿತು.
2001: ಮಾನವ ಎಂಬ್ರಿಯೋನಿಕ್ ಸ್ಟೆಮ್ ಸೆಲ್ ಗಳನ್ನು ರಕ್ತ ಕಣಗಳಾಗಿ (ರಕ್ತಕೋಶ) ಪರಿವರ್ತಿಸಬಹುದು ಎಂದು ಅಮೆರಿಕನ್ ವಿಜ್ಞಾನಿಗಳು ಮೊತ್ತ ಮೊದಲ ಬಾರಿಗೆ ಪ್ರಕಟಿಸಿದರು. ವೈದ್ಯಕೀಯ ಚಿಕಿತ್ಸೆಗಳಿಗೆ ರಕ್ತ ಸರಬರಾಜು ಮಾಡುವ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆಯಾಯಿತು. ಚಿಕಿತ್ಸೆ ಅಥವಾ ಟ್ರಾನ್ಸ್ ಫ್ಯೂಷನ್ ಗಳಿಗೆ ಲ್ಯಾಬೋರೋಟರಿಯಲ್ಲಿ ಅಭಿವೃದ್ಧಿ ಪಡಿಸಲಾದ ರಕ್ತವನ್ನು ರಕ್ತಕೋಶಗಳ ಬದಲಿಗೆ ಬಳಸಬಹುದಾದ ವಿಧಾನದ ಬಗ್ಗೆ ಉತ್ತಮ ತಿಳುವಳಿಕೆ ಹೊಂದಲು ಈ ಸಾಧನೆ ನೆರವಾಗಲಿದೆ ಎಂದು ಯುನಿವರ್ಸಿಟಿಆಫ್ ವಿಸ್ ಕೊನ್ ಸಿನ್ ನ ಸಂಶೋಧಕರು ಹೇಳಿದರು.
2001: `ಕಂಪ್ಯೂಟರ್ ದೈತ್ಯ' ಹ್ಯೂಲೆಟ್- ಪ್ಯಾಕಾರ್ಡ್ ಸಂಸ್ಥೆಯು ಕಾಂಪಾಕ್ ಕಂಪ್ಯೂಟರ್ಸ್ ಸಂಸ್ಥೆಯನ್ನು 250ಕೋಟಿ ಡಾಲರುಗಳಿಗೆ ಖರೀದಿಸಲು ಒಪ್ಪಿತು. `ನ್ಯೂ ಎಚ್-ಪಿ'ಯ ಒಟ್ಟು ಆದಾಯ 870 ಕೋಟಿ ಡಾಲರುಗಳು ಆಗಬಹುದು ಎಂದು ನಿರೀಕ್ಷಿಸಲಾಯಿತು. ಇದರಿಂದಾಗಿ ಕಂಪ್ಯೂಟರ್ ಉದ್ಯಮದ ನಾಯಕನೆಂಬ ಹೆಸರಿದ್ದ ಐಬಿಎಮ್ ಗೆ ತೀವ್ರ ಸ್ಪರ್ಧೆ ಎದುರಾಯಿತು.
1997: ಖ್ಯಾತ ಪತ್ರಕರ್ತ ಧರ್ಮವೀರ್ ಭಾರತಿ ನಿಧನ.
1981: ಬಾಂಬೆಹೈ ಸಮೀಪ ಹೊಸ ತೈಲ ನಿಕ್ಷೇಪ ಒಂದನ್ನು ಪತ್ತೆ ಹಚ್ಚಲಾಗಿದೆ ಎಂದು ಪೆಟ್ರೋಲಿಯಂ ಮತ್ತು ರಾಸಾಯನಿಕ ಸಚಿವ ಪಿ.ಸಿ. ಸೇಠಿ ಪ್ರಕಟಿಸಿದರು. ಬಾಂಬೆ ಹೈನ ಪೂರ್ವಕ್ಕೆ 35 ಕಿ.ಮೀ. ದೂರದಲ್ಲಿ ಈ ಹೊಸ ನಿಕ್ಷೇಪ ಪತ್ತೆಯಾಗಿದೆ.
1972: ಅಮೆರಿಕದ ಈಜುಗಾರ ಮಾರ್ಕ್ ಸ್ಪಿಟ್ಜ್ ಅವರು ಮ್ಯೂನಿಕ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ 400 ಮೀಟರುಗಳ ಮೆಡ್ಲೆ ರಿಲೇಯಲ್ಲಿ ಏಳನೇ ಚಿನ್ನದ ಪದಕ ಗೆದ್ದುಕೊಂಡರು. ಇದರೊಂದಿಗೆ ಒಂದೇ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಏಳು ಚಿನ್ನದ ಪದಕಗಳನ್ನು ಹೆಗಲಿಗೆ ಏರಿಸಿಕೊಂಡ ಪ್ರಪ್ರಥಮ ಈಜುಗಾರ ಎಂಬ ಖ್ಯಾತಿ ಇವರದಾಯಿತು.
1967: ಮಹಾರಾಷ್ಟ್ರದ ಕೊಯ್ನಾ ಅಣೆಕಟ್ಟು ಕೇಂದ್ರಿತ ಭೂಕಂಪದಲ್ಲಿ 200 ಜನರ ಸಾವು. ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 6.5ರಷ್ಟಿತ್ತು.
1962: ಭಾರತ ಕ್ರಿಕೆಟ್ ತಂಡದ ಮಾಜಿ ವಿಕೆಟ್ ಕೀಪರ್ ಹಾಗೂ ಭಾರತ ಕ್ರಿಕೆಟ್ ತಂಡದ ಆಯ್ಕೆ ಸಮಿತಿ ಅಧ್ಯಕ್ಷ ಕಿರಣ್ ಮೋರೆ ಗುಜರಾತಿನ ಬರೋಡದ್ಲಲಿ ಈದಿನ ಜನಿಸಿದರು.
1933: ಕವಿ, ನಾಟಕಕಾರ, ವಿಮರ್ಶ, ಅನುವಾದಕ ಬುದ್ದಣ್ಣ ಹಿಂಗಮಿರೆ ಅವರು ಬಾಬು-ದುಂಡವ್ವ ದಂಪತಿಯ ಮಗನಾಗಿ ಬೆಳಗಾವಿ ಜಿಲ್ಲೆಯ ರಾಜಾಪುರದಲ್ಲಿ ಜನಿಸಿದರು.
1888: ಜಾರ್ಜ್ ಈಸ್ಟ್ ಮನ್ ಅವರಿಗೆ ಅವರ `ರೋಲ್ ಫಿಲ್ಮ್ ಕ್ಯಾಮರಾ'ಕ್ಕೆ ಪೇಟೆಂಟ್ ಸಿಕ್ಕಿತು. ಅವರು ಅದನ್ನು `ಕೊಡಕ್' ಟ್ರೇಡ್ ಮಾರ್ಕಿನಲ್ಲಿ ನೋಂದಣಿ ಮಾಡಿಸಿದರು.
1880: ಬಂಗಾಳಿ ಸಾಹಿತಿ ಭೂಪೇಂದ್ರನಾಥ ದತ್ತ ಜನನ.
1825: ದಾದಾಭಾಯಿ ನವರೋಜಿ ಜನ್ಮದಿನ. ಭಾರತದ ರಾಷ್ಟ್ರೀಯವಾದಿಯೂ, ಬ್ರಿಟಿಷರು ಭಾರತದಲ್ಲಿ ಅನುಸರಿಸುತ್ತಿದ್ದ ಆರ್ಥಿಕ ನೀತಿಯ ಉಗ್ರ ಟೀಕಾಕಾರರೂ ಆಗಿದ್ದ ನವರೋಜಿ ಭಾರತೀಯ ರಾಷ್ಟ್ರೀಯ ಚಳವಳಿಯ `ಪಿತಾಮಹ' ಎಂದೇ ಖ್ಯಾತರಾಗಿದ್ದಾರೆ. `ಸ್ವರಾಜ್' ಪದವನ್ನು ಜನಪ್ರಿಯಗೊಳಿಸಿದವರು ನವರೋಜಿ ಅವರೇ.
(ಸಂಗ್ರಹ: ನೆತ್ರಕೆರೆ ಉದಯಶಂಕರ)
No comments:
Post a Comment