Monday, September 29, 2008

ಇಂದಿನ ಇತಿಹಾಸ History Today ಸೆಪ್ಟೆಂಬರ್ 29

ಇಂದಿನ ಇತಿಹಾಸ

ಸೆಪ್ಟೆಂಬರ್ 29

 ಏಷ್ಯಾದ ಮೊತ್ತ ಮೊದಲ ತಾರಾಲಯ `ಬಿರ್ಲಾ ಪ್ಲಾನೆಟೇರಿಯಂ' ಕಲ್ಕತ್ತಾದಲ್ಲಿ (ಈಗಿನ ಕೋಲ್ಕತ್ತ) ಉದ್ಘಾಟನೆಗೊಂಡಿತು.

2007: ಮುಖ್ಯಮಂತ್ರಿ ವಿರುದ್ಧ ಕೊಲೆ ಆರೋಪ ಮಾಡುವುದರ ಮೂಲಕ ಮಿತ್ರಪಕ್ಷದೊಂದಿಗೆ ವೈಮನಸ್ಯಕ್ಕೆ ಕಾರಣವಾಗಿ, ಅಧಿಕಾರ ಹಸ್ತಾಂತರದ ವಿಚಾರದಲ್ಲಿ ಗೊಂದಲಕ್ಕೆ ಕಾರಣರಾದ ಪ್ರವಾಸೋದ್ಯಮ ಸಚಿವ ಬಿ. ಶ್ರೀರಾಮುಲು ಪಕ್ಷದ ರಾಜ್ಯ ಘಟಕ ಅಧ್ಯಕ್ಷ ಡಿ.ವಿ.ಸದಾನಂದಗೌಡರಿಗೆ ಸಚಿವ ಸ್ಥಾನದ ರಾಜೀನಾಮೆ ಪತ್ರ ಸಲ್ಲಿಸಿದರು. ಇದರೊಂದಿಗೆ ರಾಜ್ಯ ರಾಜಕೀಯ ಹಾಗೂ ಅಧಿಕಾರ ಹಸ್ತಾಂತರ ವಿಚಾರದಲ್ಲಿ ಎದ್ದಿದ್ದ ಬೆಂಕಿಯನ್ನು ಬಿಜೆಪಿ ವರಿಷ್ಠರು ಶ್ರೀರಾಮುಲು ರಾಜೀನಾಮೆ ಪಡೆಯುವ ಮೂಲಕ ಶಮನಗೊಳಿಸಿದಂತಾಯಿತು. ಬಳ್ಳಾರಿಯಿಂದ ಹೆಲಿಕಾಪ್ಟರಿನಲ್ಲಿ ಆಗಮಿಸಿದ ಶ್ರೀರಾಮುಲು ಅವರು ರಾಜ್ಯದಲ್ಲಿಪಕ್ಷದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಯಶವಂತ ಸಿನ್ಹಾ, ಉಪ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಇತರೆ ಹಿರಿಯ ಸಚಿವರನ್ನು ಭೇಟಿ ಮಾಡಿ ರಾಜೀನಾಮೆ ಪತ್ರವನ್ನು ಸಲ್ಲಿಸಿದರು. ಪತ್ರದಲ್ಲಿ `ಪಕ್ಷದ ಹಿತಕ್ಕಾಗಿ ಈ ನಿರ್ಧಾರ ತೆಗೆದುಕೊಳ್ಳುತ್ತಿದ್ದೇನೆ' ಎಂದು ಶ್ರೀರಾಮುಲು ವಿವರಿಸಿದರು. ಮುಖ್ಯಮಂತ್ರಿ ವಿರುದ್ಧವೇ ಮೊಕದ್ದಮೆ ಹೂಡಿದ ಹಿನ್ನೆಲೆಯಲ್ಲಿ ಹಸ್ತಾಂತರ ವಿಚಾರದಲ್ಲಿ ಬಿಜೆಪಿ ವರಿಷ್ಠರ ಜೊತೆ ಚರ್ಚೆನಡೆಸಲು ನವದೆಹಲಿಗೆ ತೆರಳಿದ್ದ ಜೆಡಿ (ಎಸ್) ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡರು ಮಾತುಕತೆ ನಡೆಸದೆ ವಾಪಸಾಗಿದ್ದರು. ಇದರ ಜೊತೆ ಬಳ್ಳಾರಿ ಘಟನೆಯಿಂದ ರಾಜಕೀಯವಾಗಿ ಹೆಚ್ಚೂ ಕಡಿಮೆಯಾದರೆ ತಾವು ಹೊಣೆಯಲ್ಲ ಎಂದು ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಎಚ್ಚರಿಸಿದ್ದರು.

2007: ಆಧುನಿಕ ಪ್ರಜ್ಞೆಯ ಕವಿ, ಕನ್ನಡ ಸಾರಸ್ವತ ಲೋಕದ ವಿಶಿಷ್ಟ ಧ್ವನಿ, ವೀ. ಚಿಕ್ಕವೀರಯ್ಯ (ವೀಚಿ) (77) ಅವರು ತುಮಕೂರಿನ ಸ್ವಗೃಹದಲ್ಲಿ ನಿಧನರಾದರು. ಸಾಹಿತಿ ವೀಚಿ ಅವರದ್ದು ಬಹುಮುಖ ವ್ಯಕ್ತಿತ್ವ. ಓದಿದ್ದು ಮೆಟ್ರಿಕ್ಯುಲೇಷನ್. ಆದರೆ ಜೀವನ ಅನುಭವ ಪದವಿಗಳ ಮಿತಿಯನ್ನು ಮೀರಿದ್ದು. ಅತ್ಯಂತ ಸರಳ, ಸಜ್ಜನಿಕೆಯ ವೀಚಿ ಕೃಷಿಕರಾಗಿ, ಸಮಾಜ ಸೇವಕರಾಗಿ, ಸಮಾಜಕ್ಕಾಗಿ ರಾಜಕೀಯ ಪ್ರವೇಶಿಸಿದ ವಿಶಿಷ್ಟ ವ್ಯಕ್ತಿಯಾಗಿ ತುಮಕೂರಿನ ಬದುಕನ್ನು ಶ್ರೀಮಂತಗೊಳಿಸಿದವರು. `ಪ್ರಣಯ ಚೈತ್ರ' ಇವರ ಮೊದಲ ಕವನ ಸಂಕಲನ. `ವಿಷಾದ ನಕ್ಷೆ', `ಸಂಕರತಳಿ', `ನವಿಲ ಮನೆ', `ಅಭಿನಯದ ಬಯಲು', `ನಿತ್ಯ ಮದುವಣಗಿತ್ತಿ', `ಮಹಾಯಾನ', `ಹಸಿವಿನ ಲೋಕ', `ಹಿಡಿ ಶಾಪ', `ಬಂತೆಂದರೂ ಇದ್ದುದಿದ್ದೆಯಿತ್ತು' ಇತರ ಕವನ ಸಂಕಲನಗಳು. `ಸಿದ್ದರಬೆಟ್ಟ', `ಇವರು ನನ್ನವರು', `ನೆಚ್ಚಿನವರು' ಮತ್ತು `ಇಷ್ಟಮಿತ್ರರು' ವೀಚಿಯವರ ಪ್ರಮುಖ ಗದ್ಯ ಕೃತಿಗಳು. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿ ಹಲವು ಪುರಸ್ಕಾರಗಳಿಗೆ ಅವರು ಪಾತ್ರರಾಗಿದ್ದರು. 1971ರಿಂದ 1973ರವರೆಗೆ ತುಮಕೂರು ನಗರಸಭೆಯ ಅಧ್ಯಕ್ಷರಾಗಿ ಕೆಲಸ ಮಾಡಿದ್ದ ವೀಚಿ ಬೈಸಿಕಲ್ಲಿನಲ್ಲಿ ಸುತ್ತಾಡುತ್ತಾ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದರು. ಕವಿ ವೀ.ಚಿಕ್ಕವೀರಯ್ಯ (ವೀಚಿ)  ತುಮಕೂರು ಸಮೀಪದ ಅಮೀನುದ್ದೀನ್ ಸಾಹೇಬರ ಪಾಳ್ಯದಲ್ಲಿ ನವೆಂಬರ್ 5, 1930ರಂದು ಜನಿಸಿದರು. 

2007: ಭಾರತದ ವಿಶ್ವನಾಥನ್ ಆನಂದ್ ಮೆಕ್ಸಿಕೊ ಸಿಟಿಯಲ್ಲಿ ಮುಕ್ತಾಯವಾದ ವಿಶ್ವ ಚೆಸ್ ಚಾಂಪಿಯನ್ ಶಿಪ್ ನಲ್ಲಿ ಪ್ರಶಸ್ತಿ ಗೆದ್ದುಕೊಂಡರು. ವಿಶ್ವದ ಎಂಟು ಶ್ರೇಷ್ಠ ಆಟಗಾರರು ಪೈಪೋಟಿ ನಡೆಸಿದ 14 ಸುತ್ತುಗಳ ಡಬಲ್ ರೌಂಡ್ ರಾಬಿನ್ ಲೀಗ್ ಮಾದರಿಯ ಈ ಟೂರ್ನಿಯಲ್ಲಿ ಆನಂದ್ ಉತ್ತಮ ಪ್ರದರ್ಶನದಿಂದ ಗಮನ ಸೆಳೆದು, ಅಗ್ರಸ್ಥಾನದ ಗೌರವ ಪಡೆದು ಕೊಂಡರು. 14ನೇ ಹಾಗೂ ಕೊನೆಯ ಸುತ್ತಿನ ಪಂದ್ಯದಲ್ಲಿ ಆನಂದ್ ಅವರು ಪೀಟರ್ ಲೆಕೊ ಜೊತೆಗೆ ಪಾಯಿಂಟು ಹಂಚಿಕೊಂಡರು. 

2007: ಪ್ರಾಥಮಿಕ, ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ತಮ್ಮ ಶಾಲಾ- ಕಾಲೇಜುಗಳಲ್ಲಿ ಮೊಬೈಲ್ ದೂರವಾಣಿ ಬಳಸುವುದನ್ನು ರಾಜ್ಯ ಸರ್ಕಾರ ನಿಷೇಧಿಸಿದ್ದು ಅದು ಅಕ್ಟೋಬರ್ 5ರಿಂದ ಜಾರಿಗೆ ಬರಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಸವರಾಜ ಹೊರಟ್ಟಿ ಬೆಂಗಳೂರಿನಲ್ಲಿ ಪ್ರಕಟಿಸಿದರು.

2007: ಅರವತ್ತರ ಹರೆಯದ ಮಹಿಳೆಯೊಬ್ಬಳು ಪ್ರಣಾಳ ಶಿಶು ವಿಧಾನದ ಮೂಲಕ ಪುಣೆಯ ಆಸ್ಪತ್ರೆಯೊಂದರಲ್ಲಿ ತನ್ನ ಪುತ್ರಿಯ ಅವಳಿ ಮಕ್ಕಳಿಗೆ ಜನ್ಮ ನೀಡುವ ಮೂಲಕ ಏಕಕಾಲದಲ್ಲಿ ಈ ಅವಳಿ ಮಕ್ಕಳಿಗೆ ಅಮ್ಮ ಹಾಗೂ ಅಜ್ಜಿಯಾದರು. ಈ ಅಜ್ಜಿಯ ಪುತ್ರಿ ಕ್ಯಾನ್ಸರಿನಿಂದ ಬಳಲುತ್ತಿದ್ದ ಕಾರಣ ಕೃತಕ ಗರ್ಭ ಧಾರಣೆಯ ಮೂಲಕ ಬಾಡಿಗೆ ತಾಯಿಯ ಗರ್ಭದಲ್ಲಿ ವಂಶದ ಕುಡಿ ಬೆಳೆಸಲು ಸಾಧ್ಯ ಎಂದು ವೈದ್ಯರು  ಹೇಳಿದ್ದರು. ಅಮೆರಿಕದಲ್ಲಿದ್ದ ಈ ಮಹಿಳೆ ತನ್ನ ಮಗುವಿಗೆ ಕುಟುಂಬದವರೇ ಬಾಡಿಗೆ ತಾಯಿ ಆಗಬೇಕೆಂದು ಬಯಸಿದಾಗ, ಮಗಳಿಗೆ ಮಕ್ಕಳನ್ನು ಹೆತ್ತು ಕೊಡಲು ಹೆತ್ತಮ್ಮನೇ ಮುಂದೆ ಬಂದರು. ಕೃತಕ ಗರ್ಭಧಾರಣೆ  ಮೂಲಕ ಇವರು ತಮ್ಮ ಪುತ್ರಿಯ ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದರು ಎಂದು ಪುಣೆಯ ರುಬಿ ಹಾಲ್ ಕ್ಲಿನಿಕ್ಕಿನ ಕೃತಕ ಗರ್ಭಧಾರಣೆ ವಿಭಾಗದ ಮುಖ್ಯಸ್ಥೆ ಡಾ. ಸುನೀತಾ ತೆಂಡೂಲ್ ವಾಡ್ಕರ್ ಸುದ್ದಿಗಾರರಿಗೆ ತಿಳಿಸಿದರು. ಅವಳಿ ಮಕ್ಕಳು ಕ್ರಮವಾಗಿ 1.7 ಕೆ.ಜಿ ಹಾಗೂ 1.4 ಕೆ.ಜಿ ತೂಕ ಹೊಂದಿದ್ದು ಆರೋಗ್ಯವಾಗಿದ್ದವು.

 2007: ರಿಲಯನ್ಸ್ ಸಮೂಹ ಉದ್ಯಮಿ ಮುಖೇಶ್ ಅಂಬಾನಿ ಅವರಿಗೆ ಬರೋಡಾದ ಮಹಾರಾಜಾ ಸಯಾಜಿರಾವ್ ವಿಶ್ವವಿದ್ಯಾಲಯವು ಡಾಕ್ಟ್ರೇಟ್ ಪದವಿ ನೀಡಿ ಗೌರವಿಸಿತು.  

2006: ಎರಡು ವಿಮಾನಗಳ ಪರಸ್ಪರ ಡಿಕ್ಕಿಯ ಬಳಿಕ ಬ್ರೆಜಿಲಿನ ಅಮೆಜಾನ್ ಅರಣ್ಯ ಪ್ರದೇಶದಲ್ಲಿ ಬ್ರೆಜಿಲ್ ಜೆಟ್ ವಿಮಾನ ನೆಲಕ್ಕೆ ಅಪ್ಪಳಿಸಿ ಅದರಲ್ಲಿದ್ದ 115 ಜನ ಮೃತರಾದರು. ಬ್ರೆಜಿಲಲಿನ ಇತಿಹಾಸದಲ್ಲೇ ಇದು ಅತಿ ಭೀಕರ ವಿಮಾನ ದುರಂತ ಎನಿಸಿತು. ಬೋಯಿಂಗ್ 737-800 (ಗೋಲ್ ಏರ್ ಲೈನ್ಸ್ ಫ್ಲೈಟ್ 1907) ವಿಮಾನ ಮತ್ತು ಸಣ್ಣ ಎಕ್ಸಿಕ್ಯೂಟಿವ್ ವಿಮಾನ ಗಗನದಲ್ಲಿ ಪರಸ್ಪರ ಡಿಕ್ಕಿ ಹೊಡೆದ ಪರಿಣಾಮವಾಗಿ ಗೋಲ್ ಏರ್ ಲೈನ್ಸ್ ವಿಮಾನ ಅಮೆಜಾನ್ ದಟ್ಟ ಅರಣ್ಯದಲ್ಲಿ ನೆಲಕ್ಕೆ ಅಪ್ಪಳಿಸಿತ್ತು. ಬ್ರೆಜಿಲಿನಲ್ಲಿ ಹಿಂದೆ 1982ರಲ್ಲಿ ಸಂಭವಿಸಿದ್ದ ಬೋಯಿಂಗ್ 727 ವಿಮಾನ ಅಪಘಾತದಲ್ಲಿ 137 ಜನ ಮೃತರಾಗಿದ್ದುದೇ ರಾಷ್ಟ್ರದ ಅತಿ ಭೀಕರ ಅಪಘಾತವಾಗಿತ್ತು. ವಾಸ್ಪ್ ಏರ್ ಲೈನ್ಸಿನ ಈ ವಿಮಾನ ಅಪಘಾತ ಫೋರ್ಟ್ ಲೇಜಾ ನಗರದ ಈಶಾನ್ಯ ಭಾಗದಲ್ಲಿ ಸಂಭವಿಸಿತ್ತು. 

2006: ಎರಡು ಕೋಟಿ ಡಾಲರ್ (ಸುಮಾರು 90 ಕೋಟಿ ರೂಪಾಯಿ) ಶುಲ್ಕ ತೆತ್ತು ಅಂತರಿಕ್ಷ ಯಾತ್ರೆ ಕೈಗೊಂಡಿದ್ದ ಇರಾನ್ ಮೂಲದ ಮಹಿಳೆ ಅನೌಷಿ ಅನ್ಸಾರಿ ಈದಿನ ಬೆಳಗ್ಗೆ ಸುರಕ್ಷಿತವಾಗಿ ಧರೆಗೆ ವಾಪಸಾದರು. ಈ ಮೂಲಕ ಕುತೂಹಲಕ್ಕೆ ಯಾತ್ರೆ ಕೈಗೊಂಡು ಯಶಸ್ವಿಯಾಗಿ ಮುಗಿಸಿದ ವಿಶ್ವದ ಪ್ರಥಮ ಮಹಿಳೆ ಎಂಬ ಹೆಗ್ಗಳಿಕೆಗೆ ಅನೌಷಿ ಪಾತ್ರರಾದರು. ಅವರು ಸೆಪ್ಟೆಂಬರ 18ರಂದು ಬೈಕನೂರ್ ಉಡಾವಣಾ ಕೇಂದ್ರದಿಂದ ಬಾಹ್ಯಾಕಾಶ ನೌಕೆಯಲ್ಲಿ ಪ್ರಯಾಣ ಹೊರಟಿದ್ದರು.

2006: ಮಾಜಿ ನಟಿ, ಭೂಗತ ಪಾತಕಿ ಅಬು ಸಲೇಂನ ಗೆಳತಿ ಮೋನಿಕಾ ಬೇಡಿ ಅವರಿಗೆ ಹೈದರಾಬಾದಿನ ನಾಂಪಲ್ಲಿ ಕ್ರಿಮಿನಲ್ ನ್ಯಾಯಾಲಯಗಳಲ್ಲಿನ ಸಿಬಿಐ ಪ್ರಕರಣಗಳ ವಿಶೇಷ ನ್ಯಾಯಾಧೀಶರು ಪಾಸ್ ಪೋರ್ಟ್ಟ್ ನಕಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಐದು ವರ್ಷಗಳ ಸಜೆ ಹಾಗೂ 5000 ರೂಪಾಯಿಗಳ ದಂಡ ವಿಧಿಸಿದರು. ಮೋನಿಕಾಳನ್ನು 2005ರ ನವೆಂಬರ್ 11ರಂದು ಪೋಚರ್ುಗಲ್ಲಿನಿಂದ ಗಡೀಪಾರು ಮಾಡಿ ವಶಕ್ಕೆ ಪಡೆದುಕೊಳ್ಳಲಾಗಿತ್ತು. ನಿವೃತ್ತ ಎಎಸ್ ಐ ಅಬ್ದುಲ್ ಸತ್ತಾರ್ ಮತ್ತು ಪೋಸ್ಟ್ ಮ್ಯಾನ್ ಗೋಕರಿ ಸಾಹೇಬ್ ಗೂ ನ್ಯಾಯಾಲಯ ತಲಾ ಐದು ವರ್ಷಗಳ ಸೆರೆವಾಸವನ್ನು ವಿಧಿಸಿತು.

2006: ಭಾರತ ಕ್ರಿಕೆಟ್ ತಂಡದ ಸ್ಪಿನ್ ಮಾಂತ್ರಿಕ ಎರಪಳ್ಳಿ ಪ್ರಸನ್ನ ಅವರನ್ನು ಮುಂಬೈಯಲ್ಲಿ ಕ್ಯಾಸ್ಟ್ರಾಲ್ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. 

2006: ರಾಯಚೂರಿನ ಹಿಂದೂಸ್ಥಾನಿ ಸಂಗೀತಗಾರ ಪಂಡಿತ್ ಮಾಣಿಕರಾವ್ ರಾಯಚೂರಕರ್ ಅವರು 2006ನೇ ಸಾಲಿನ `ರಾಜ್ಯ ಸಂಗೀತ ವಿದ್ವಾನ್' ಪ್ರಶಸ್ತಿಗೆ ಆಯ್ಕೆಯಾದರು.

2006: ಬೆಳಗಾವಿಯಲ್ಲಿ ನಡೆದ ವಿಧಾನ ಮಂಡಲದ ಐದು ದಿನಗಳ ಚಾರಿತ್ರಿಕ ಅಧಿವೇಶನ ಮುಕ್ತಾಯಗೊಂಡಿತು.

1991: ಆಗ್ರಾ ಘರಾಣಾದ ಖ್ಯಾತ ಗಾಯಕ ಉಸ್ತಾದ್ ಯೂನಸ್ ಹುಸೇನ್ ಖಾನ್ ನಿಧನರಾದರು.

1981: ನೂರ ಹದಿನೇಳು ಜನರಿದ್ದ ಇಂಡಿಯನ್ ಏರ್ ಲೈನಿನ ಬೋಯಿಂಗ್-737 ವಿಮಾನವನ್ನು ಪಾಕಿಸ್ಥಾನದ ಲಾಹೋರಿಗೆ ಅಪಹರಿಸಲಾಯಿತು. ದೆಹಲಿಯಿಂದ ಶ್ರೀನಗರಕ್ಕೆ ಅಮೃತಸರ ಮಾರ್ಗವಾಗಿ ಹೊರಟಿದ್ದಾಗ ಈ ಅಪಹರಣ ನಡೆಯಿತು.

1962: ಏಷ್ಯಾದ ಮೊತ್ತ ಮೊದಲ ತಾರಾಲಯ `ಬಿರ್ಲಾ ಪ್ಲಾನೆಟೇರಿಯಂ' ಕಲ್ಕತ್ತಾದಲ್ಲಿ (ಈಗಿನ ಕೋಲ್ಕತ್ತ) ಉದ್ಘಾಟನೆಗೊಂಡಿತು.

1936: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಮೊದಲ ಬಾರಿಗೆ ರೇಡಿಯೋ ಬಳಸಲಾಯಿತು.

1934: ಕೀಟ ಸಂಶೋಧನಾ ಅಧಿಕಾರಿ, ಛಾಯಾಗ್ರಾಹಕ, ಸಾಹಿತಿ ಕೃಷ್ಣಾನಂದ ಕಾಮತ್ (29-9-1934ರಿಂದ 20-2-2002) ಅವರು ಲಕ್ಷ್ಮಣ ವಾಸುದೇವ ಕಾಮತ್- ರಮಾಬಾಯಿ ದಂಪತಿಯ ಮಗನಾಗಿ ಹೊನ್ನಾವರದಲ್ಲಿ ಜನಿಸಿದರು.

1931: ಸಾಹಿತಿ ನೀಲತ್ತಳ್ಳಿ ಕಸ್ತೂರಿ ಜನನ.

1930: ಸಾಹಿತಿ ಕೃ. ನಾರಾಯಣರಾವ್ ಜನನ.

1919: ಸಾಹಿತಿ ಮಹಾಲಕ್ಷ್ಮೀ ಜನನ.

1914: ಎಸ್ ಎಸ್ ಕೊಮಾಗತಮಾರು ಹಡಗು ವ್ಯಾಂಕೋವರಿನಿಂದ ಕಲ್ಕತ್ತಾದ ಬಜ್ ಬಜ್ ಸಮೀಪ ಬಂದಿತು. ಬ್ರಿಟಿಷ್ ರಾಜ್ಯಕ್ಕೆ ಸವಾಲು ಹಾಕಿದ್ದಕ್ಕಾಗಿ 17 ಯುವಕರನ್ನು ಕೊಂದು 202 ಜನರನ್ನು ಸೆರೆಮನೆಗೆ ತಳ್ಳಲಾಯಿತು. ಮಾರ್ಚಿಯಲ್ಲಿ ಘದರ್ ಚಳವಳಿಯ ಅಂಗವಾಗಿ ಇದೇ ಹಡಗು ಹಾಂಕಾಂಗಿನಿಂದ ವ್ಯಾಂಕೋವರಿಗೆ ಪ್ರಯಾಣ ಬೆಳೆಸಿತು. ಆದರೆ ಜುಲೈ 28ರಂದು ಅದನ್ನು ಬಲಾತ್ಕಾರವಾಗಿ ವ್ಯಾಂಕೋವರಿನಿಂದ ಹೊರಕ್ಕೆ ಕಳುಹಿಸಲಾಯಿತು.

1829: ಲಂಡನ್ನಿನ ಮಾನ್ಯತೆ ಪಡೆದ ಪೊಲೀಸ್ ಪಡೆ ಲಂಡನ್ನಿನ ಬೀದಿಗಳಲ್ಲಿ ಕರ್ತವ್ಯ ನಿರ್ವಹಿಸಲು ಆರಂಭಿಸಿತು. ಮುಂದೆ ಇದೇ ಪೊಲೀಸ್ ಪಡೆ `ಸ್ಕಾಟ್ಲೆಂಡ್ ಯಾರ್ಡ್' ಎಂಬ ಹೆಸರು ಪಡೆಯಿತು.

1725: ರಾಬರ್ಟ್ ಕ್ಲೈವ್ (1725-1774) ಜನ್ಮದಿನ. ಪ್ಲಾಸಿ ಕದನದಲ್ಲಿ ಮುಖ್ಯಪಾತ್ರ ವಹಿಸಿದ್ದ ಈತ ಬಂಗಾಳದ ಮೊದಲ ಬ್ರಿಟಿಷ್ ಆಡಳಿತಗಾರನಾಗಿದ್ದು, ಭಾರತದಲ್ಲಿ ಬ್ರಿಟಿಷ್ ಅಧಿಕಾರ ಸ್ಥಾಪನೆ ಮಾಡಿದ ವ್ಯಕ್ತಿಗಳಲ್ಲಿ ಒಬ್ಬನಾಗಿದ್ದ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement