My Blog List

Friday, October 10, 2008

ಇಂದಿನ ಇತಿಹಾಸ History Today ಅಕ್ಟೋಬರ್ 10

ಇಂದಿನ ಇತಿಹಾಸ 

ಅಕ್ಟೋಬರ್ 10
ಭಾರತದ ನಾಲ್ವರು ಗಣ್ಯ ವ್ಯಕ್ತಿಗಳು ಈ ದಿನ ಜನಿಸಿದರು. ಕನ್ನಡದ ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ, ಕಡಲ ಕರೆಯ ಭಾರ್ಗವ, ನಡೆದಾಡುವ ವಿಶ್ವಕೋಶ, ಒಂದು ವಿಶ್ವವಿದ್ಯಾಲಯ ಎಂದೇ ಖ್ಯಾತರಾದ ಶಿವರಾಮ ಕಾರಂತ (10-10-1902ರಿಂದ-9-12-1997) ಅವರು 1902 ರಲ್ಲಿ ಈದಿನ ಜನಿಸಿದರು. ಭಾರತೀಯ ವಕೀಲ ಹಾಗೂ ರಾಷ್ಟ್ರೀಯವಾದಿ ಬದ್ರುದ್ದೀನ್ ತ್ಯಾಬ್ಜಿ (1844-1906) ಅವರು 1844ರಲ್ಲಿ ಈದಿನ ಹುಟ್ಟಿದರು. ಖ್ಯಾತ ಕಾದಂಬರಿಕಾರ ಆರ್.ಕೆ. ನಾರಾಯಣ್ ಎಂದೇ ಪ್ರಸಿದ್ಧರಾದ ರಾಸಿಪುರಂ ಕೃಷ್ಣಸ್ವಾಮಿ ನಾರಾಯಣ್ (1906-2001) ಅವರು  1906ರಲ್ಲಿ ಈದಿನ ಜನಿಸಿದರು. ಭಾರತದ ಖ್ಯಾತ ಚಿತ್ರನಟಿ ರೇಖಾ ಅವರು 1954ರಲ್ಲಿ ಇದೇ ದಿನ ಹುಟ್ಟಿದರು.

2012: ಭೂಮಿಯ ಸಾಗರಗಳನ್ನು 2000ಕ್ಕೂ ಹೆಚ್ಚು ಬಾರಿ ತುಂಬಬಹುದಾದಷ್ಟು ದೊಡ್ಡದಾದ ಬೃಹತ್ ಗಾತ್ರದ ನೀರಿನ ಆವಿ ಇಲ್ಲವೇ ಹಬೆ ರೂಪದ ಸರೋವರಗಳನ್ನು ಹೊಸದಾಗಿ ಸೃಷ್ಟಿಯಾಗುತ್ತಿರುವ ಸೂರ್ಯನಂತಹ ನಕ್ಷತ್ರವೊಂದರ ಸನಿಹದಲ್ಲಿ ಪತ್ತೆ ಹಚ್ಚಿರುವುದಾಗಿ ವಿಜ್ಞಾನಿಗಳು ಲಂಡನ್ನಿನಲ್ಲಿ ಪ್ರಕಟಿಸಿದರು. ಐರೋಪ್ಯ ಬಾಹ್ಯಾಕಾಶ ಸಂಸ್ಥೆಯ ನೂತನ ಹರ್ಷೆಲ್ ಬಾಹ್ಯಾಕಾಶ ವೀಕ್ಷಣಾಲಯವು ಲಿಂಡ್ಸ್ 1544 ಎಂಬುದಾಗಿ ಗುರುತಿಸಲಾಗಿರುವ ತಾರಸ್ ನಕ್ಷತ್ರಪುಂಜದಲ್ಲಿ ಅನಿಲ ಹಾಗೂ ದೂಳಿನ ರೂಪದಲ್ಲಿರುವ ಈ ಬೃಹತ್ ಸರೋವರಗಳನ್ನು ಪತ್ತೆ ಹಚ್ಚಿದೆ.. ನಕ್ಷತ್ರ ರಚನೆಯ ಅಂಚಿನಲ್ಲಿ ಇಂತಹ ಹಬೆ ರೂಪದ ನೀರಿನ ಸರೋವರಗಳ ಪತ್ತೆಯಾಗಿರುವುದು ಇದೇ ಮೊದಲು.  ಮೋಡದ ಮೂಲಕ ಪ್ರಬಲವಾದ ಕಾಸ್ಮಿಕ್ ಕಿರಣಗಳು ಹಾದು ಹೋದಾಗ ಮಂಜಿನಂತಹ ದೂಳಿನ ಕಣಗಳಿಂದ ಬೇರ್ಪಟ್ಟ ಭೂಮಿಯ ಸಾಗರಗಳ 2000 ಪಟ್ಟಿಗಿಂತಲೂ ಮಿಗಿಲಾದ ಈ  ನೀರಿನ ಹಬೆಯ ಸಾಗರಗಳು ಪತ್ತೆಯಾಗಿವೆ. ಇಷ್ಟೊಂದು ಬೃಹತ್ ಗಾತ್ರದ ಹಬೆ ಸೃಷ್ಟಿಗೆ ಅಲ್ಲಿ  ಭೂಮಿಯ ಸಾಗರಗಳ 30 ಲಕ್ಷ ಕ್ಕೂ ಹೆಚ್ಚು ಪಟ್ಟಿನ ಘನೀಕೃತ ಮಂಜುಗಡ್ಡೆ ಮೋಡದಲ್ಲಿ ಇರಲೇಬೇಕು ಎಂದು ಲೀಡ್ಸ್ ವಿಶ್ವವಿದ್ಯಾಲಯದ ಪಾವೊಲಾ ಕ್ಯಾಸೆಲ್ಲಿ ಹೇಳಿದರು.ತಂಪಾದ ಅನಿಲ ಮತ್ತು ದೂಳಿನ ದಟ್ಟ ಮೋಡಗಳಿಂದ ನಕ್ಷತ್ರಗಳು ಸೃಷ್ಟಿಯಾಗುತ್ತವೆ. ಈ ನಕ್ಷತ್ರ ಸೃಷ್ಟಿಯ ಪೂರ್ವದಲ್ಲಿನ ಸ್ಥಿತಿಯಲ್ಲಿ ನಮ್ಮ ಸೌರವ್ಯೂಹದಂತಹ ರಚನೆಗಳಿಗೆ ಬೇಕಾದ ಎಲ್ಲ ಅಗತ್ಯ ವಸ್ತುಗಳು ಇರುತ್ತವೆ. ಈ ಮೊದಲೂ ಸೌರವ್ಯೂಹದ ಹೊರಗೆ ನೀರು ಪುಟ್ಟ ದೂಳಿನ ಕಣಗಳಿಗೆ ಲೇಪಿತವಾದ ಅನಿಲ ಮತ್ತು ಮಂಜುಗಡ್ಡೆಗಳ ರೂಪದಲ್ಲಿ ರಚನಾ ಹಂತದದಲ್ಲಿನ ನಕ್ಷತ್ರಗಳ ತಾಣಗಳಲ್ಲಿ ಪತ್ತೆಯಾಗಿದ್ದುಂಟು. ಆದರೆ ಅನಿಲ ರೂಪದಲ್ಲಿ ಇರಲಾರದಷ್ಟು ತಂಪಾದ್ದರಿಂದ ನೀರು ಹರಳುಗಟ್ಟಿದ ಮಂಜುಗಡ್ಡೆಯ ರೂಪದಲ್ಲಿದೆ ಎಂಬುದು ಈಗಿನ ಹಬೆರೂಪದ ನೀರಿನ ಸರೋವರಗಳ ಪತ್ತೆಗೆ ಮೊದಲಿನ ನಮ್ಮ ತಿಳುವಳಿಕೆಯಾಗಿತ್ತು. ಈಗ ನಾವು ನಮ್ಮ ನಂಬಿಕೆಯನ್ನು ಪುನರ್ ಪರಿಶೀಲಿಸಬೇಕಾಗಿ ಬಂದಿದೆ. ಇಂತಹ ದಟ್ಟ ನೀರಿನ ಹಬೆ ಇರುವ ಪ್ರದೇಶಗಳಲ್ಲಿನ ರಾಸಾಯನಿಕ ಪ್ರಕ್ರಿಯೆಯ ಅಧ್ಯಯನ ಮಾಡಬೇಕಾಗಿದೆ. ಅದರಲ್ಲೂ ವಿಶೇಷವಾಗಿ ನೀರಿನ ಹಬೆಯ ಸ್ವಲ್ಪಾಂಶವನ್ನಾದರೂ ಉಳಿಸುವಲ್ಲಿನ  ಕಾಸ್ಮಿಕ್ ಕಿರಣಗಳ ಮಹತ್ವದ ಅಧ್ಯಯನ ಮಾಡಬೇಕಾಗಿದೆ' ಎಂದು ಕ್ಯಾಸೆಲ್ಲಿ ನುಡಿದರು. (ಚಿತ್ರ: ತಾರಸ್ ಬಳಿಯ ಹರಳುರೂಪಿ ಮೋಡಗಳ ದೃಶ್ಯ. ಅದರೊಳಗಿನ ಪ್ರಖರ ಬೆಳಕಿನ ಪ್ರದೇಶವೇ ನಕ್ಷತ್ರ ರಚನಾ ಪೂರ್ವದ ಮೋಡದ ತಾಣ. ಚಿತ್ರದಲ್ಲಿ ಎಡಬದಿಯಲ್ಲಿ ಕೆಳಕ್ಕೆ ಇದನ್ನು ಕಾಣಬಹುದು. ಇತರ ಮೋಡಗಳು ಸುತ್ತುವರೆದಿರುವುದನ್ನೂ ಚಿತ್ರದಲ್ಲಿ ಕಾಣಬಹುದು. ಚಿತ್ರ ಕೃಪೆ: ಯುರೋಪಿಯನ್ ಸ್ಪೇಸ್ ಏಜೆನ್ಸಿ (ಇಎಸ್ಎ/ ಹರ್ಷೆಲ್)

2007: ಅವಿಭಜಿತ ಜನತಾ ಪರಿವಾರದ ಹಿರಿಯ ಮುಖಂಡ ಹಾಗೂ ಮಾಜಿ ಮುಖ್ಯಮಂತ್ರಿ ಸೋಮಪ್ಪ ರಾಯಪ್ಪ ಬೊಮ್ಮಾಯಿ (84) ಅವರು ಈದಿನ ಬೆಂಗಳೂರಿನಲ್ಲಿ ನಿಧನರಾದರು. ಕೆಲ ಕಾಲದಿಂದ ಅಸ್ವಸ್ಥರಾಗಿ ವೊಕ್ಹಾರ್ಡ್ ಆಸ್ಪತ್ರೆಗೆ ದಾಖಲಾಗಿದ್ದ ಇವರು ರಾತ್ರಿ 8.45ರ ವೇಳೆಗೆ ಕೊನೆಯುಸಿರೆಳೆದರು. ಸವಣೂರು ತಾಲೂಕಿನ ಕಾರಡಗಿ ಗ್ರಾಮದಲ್ಲಿ 1924ರ ಜೂನ್ ಆರರಂದು ರಾಯಪ್ಪ ಹಾಗೂ ಶಿವಮ್ಮ ದಂಪತಿಗಳ ಪುತ್ರನಾಗಿ ಜನಿಸಿದ ಬೊಮ್ಮಾಯಿ, 1988ರಲ್ಲಿ 10 ತಿಂಗಳ ಕಾಲ ರಾಜ್ಯದ ಮುಖ್ಯಮಂತ್ರಿಯಾಗಿ, 1996ರಲ್ಲಿ ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಸ್ವಂತ ಊರಾದ ಕುಂದಗೋಳ ತಾಲೂಕಿನ ಕಮಡೊಳ್ಳಿ ಗ್ರಾಮದಲ್ಲಿ ಏಳನೇ ತರಗತಿವರೆಗೆ ವಿದ್ಯಾಭ್ಯಾಸ ಪಡೆದ ಬೊಮ್ಮಾಯಿ ಅವರಿಗೆ ಅವರ ತಾಯಿ ಪರ ಊರಿನಿಂದ ಬರುತ್ತಿದ್ದ ಬಡ ಮಕ್ಕಳಿಗೆ ನೀಡುತ್ತಿದ್ದ ಮಧ್ಯಾಹ್ನದ ಊಟವೇ ಸಮಾಜವಾದದ ಮೊದಲ ಪಾಠವಾಗಿ ಪರಿಣಮಿಸಿತು. ಕಾನೂನು ವ್ಯಾಸಂಗ ಮಾಡುವಾಗ ಎಡಪಂಥೀಯ ವಿಚಾರಗಳಿಗೆ ಮನಸೋತು ಪಶ್ಚಿಮ ಬಂಗಾಳದ ಎಂ.ಎನ್. ರಾಯ್ ಅವರ ರ್ಯಾಡಿಕಲ್ ಹ್ಯೂಮನಿಸ್ಟ್ ಪಕ್ಷಕ್ಕೆ ಸೇರಿದ್ದ ಬೊಮ್ಮಾಯಿ, ಹುಬ್ಬಳ್ಳಿಯಲ್ಲಿ ಕ್ರಾಂತಿಕಾರಿ ಮುರುಗೋಡು ಮಹದೇವಪ್ಪ ನೇತೃತ್ವದಲ್ಲಿ ಸ್ವಾತಂತ್ರ್ಯ ಚಳವಳಿಯಲ್ಲಿ ಪಾಲ್ಗೊಂಡರು. ಇದೇ  ಕಾರಣದಿಂದ ಬ್ರಿಟಿಷರು ಬಂಧನ ವಾರೆಂಟ್ ಹೊರಡಿಸಿದಾಗ, ಕಣ್ಣು ತಪ್ಪಿಸಿ ಕೆಲ ಕಾಲ ದೇಶ ಪರ್ಯಟನೆ  ಮಾಡಿದರು. ಈ ಸಂದರ್ಭದಲ್ಲೇ ಸುಭಾಶ್ ಚಂದ್ರ ಬೋಸರನ್ನು ಹುಬ್ಬಳ್ಳಿಗೆ ಆಹ್ವಾನಿಸಿ ಬಹಿರಂಗ ಸಭೆ ಏರ್ಪಡಿಸಿದ್ದರು. ಕಾನೂನು ವ್ಯಾಸಂಗ ಮುಗಿಸಿದ ನಂತರ ಗೋವಾ ವಿಮೋಚನ ಚಳವಳಿ, ಕರ್ನಾಟಕ ಏಕೀಕರಣ ಹೋರಾಟದಲ್ಲಿ ಮುಂಚೂಣಿ ಪಾತ್ರ ವಹಿಸಿ, ಬಂಧಿತರ ಪರ ವಕಾಲತ್ತು ಸಹ ಮಾಡಿದ್ದರು. 1967ರಲ್ಲಿ ಕುಂದಗೋಳ ಕ್ಷೇತ್ರದಿಂದ ಲೋಕಸೇವಕ ಸಂಘದಿಂದ ಸ್ಪರ್ಧಿಸಿ ವಿಧಾನಸಭೆ ಪ್ರವೇಶಿಸಿದರು. 69ರಲ್ಲಿ ಅಂದಿನ ಮುಖ್ಯಮಂತ್ರಿ ವೀರೇಂದ್ರ ಪಾಟೀಲರ ಒತ್ತಡದಿಂದ ಕಾಂಗ್ರೆಸ್ ಸೇರಿದರು. ಕಾಂಗ್ರೆಸ್ ವಿಭಜನೆಯಾದಾಗ ವೀರೇಂದ್ರ ಪಾಟೀಲರ ಸಂಸ್ಥಾ ಕಾಂಗ್ರೆಸ್ ಜೊತೆ ಸೇರಿದರು. 1971ರಲ್ಲಿ ಕುಂದಗೋಳದಿಂದ ಸ್ಪರ್ಧಿಸಿ ಸೋತು, 1972ರಲ್ಲಿ ಸ್ಥಳೀಯ ಸಂಸ್ಥೆಗಳ ಮೂಲಕ ವಿಧಾನಪರಿಷತ್ತಿಗೆ ಆಯ್ಕೆಯಾದರು. 75ರಿಂದ ಪರಿಷತ್ತಿನ ವಿರೋಧ ಪಕ್ಷದ ನಾಯಕರಾಗಿ ಕೆಲಸ ಮಾಡಿದರು. ತುರ್ತುಪರಿಸ್ಥಿತಿಯ ವಿರುದ್ಧ ಹೋರಾಟ ಮಾಡಿ ಕೆಲ ಕಾಲ ಭೂಗತರಾಗಿದ್ದರು. 1977ರಲ್ಲಿ ರಾಜ್ಯ ಜನತಾಪಕ್ಷದ ಉಪಾಧ್ಯಕ್ಷರಾದರು. 1978ರಲ್ಲಿ ಹೃದಯಾಘಾತದಿಂದ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾದರೂ ಅಲ್ಲಿಂದಲೇ ಹುಬ್ಬಳ್ಳಿ ಗ್ರಾಮೀಣ ಕ್ಷೇತ್ರದ ಅಭ್ಯರ್ಥಿಯಾಗಿ ವಿಧಾನಸಭೆಗೆ ಸ್ಪರ್ಧಿಸಿ ಜಯಗಳಿಸಿ, ವಿರೋಧ ಪಕ್ಷದ ನಾಯಕರಾಗಿ ಕಾರ್ಯ ನಿರ್ವಹಿಸಿದರು. 1980ರಲ್ಲಿ ನವಲಗುಂದ, ನರಗುಂದ ರೈತರ ಹೋರಾಟದ ಮುಂಚೂಣಿಯಲ್ಲಿದ್ದ ಬೊಮ್ಮಾಯಿ, ಮಲಪ್ರಭಾ ವ್ಯಾಪ್ತಿಯ ರೈತರಿಗೆ ನೀರಾವರಿ ಕರ, ಭೂಕಂದಾಯ ಮತ್ತಿತರ ತೆರಿಗೆ ಮನ್ನಾ ಮಾಡಿಸುವಲ್ಲಿ ಯಶಸ್ವಿಯಾದರು. 1980ರಲ್ಲಿ ಜನತಾಪಕ್ಷದ ರಾಜ್ಯ ಘಟಕದ ಅಧ್ಯಕ್ಷರಾಗಿ ನೇಮಕ, ಕಾಂಗ್ರೆಸ್ಸೇತರ ಸರ್ಕಾರ ರಚಿಸಲು ಕ್ರಾಂತಿರಂಗದ ಜೊತೆ ಸೇರಿ ಜನತಾರಂಗ ರಚನೆ ಮಾಡಲು ಯತ್ನ. ಫಲವಾಗಿ 1983ರಲ್ಲಿ ನಡೆದ ಚುನಾವಣೆಯಲ್ಲಿ ಜನತಾರಂಗಕ್ಕೆ ಗೆಲುವು ದೊರೆತು ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾದರು. ಹೆಗಡೆ ಸಂಪುಟದಲ್ಲಿ ಕೈಗಾರಿಕೆ ಸಚಿವ. ಇವರ ಚಿಂತನೆಯ ಫಲವಾಗಿ ಎಲೆಕ್ಟ್ರಾನಿಕ್ ಸಿಟಿ ಆರಂಭ. ರಾಜ್ಯದಪ್ರಥಮ ಐಟಿ ಕಂಪನಿ ಟೆಕ್ಸಾಸ್ ಇನ್ ಸ್ಟ್ರೂಮೆಂಟ್ ಸ್ಥಾಪನೆಗೆ ಸಾಕಷ್ಟು ಪ್ರೋತ್ಸಾಹ. 1984ರಲ್ಲಿ ಹಣಕಾಸು ಸಚಿವ. 1985ರಲ್ಲಿ ವಿಧಾನಸಭೆಗೆ ಪುನರಾಯ್ಕೆಯಾಗಿ ಕಂದಾಯ ಸಚಿವರಾಗಿ ಅಧಿಕಾರ ಸ್ವೀಕಾರ. ಇದೇ ಅವಧಿಯಲ್ಲಿ ನಾಡಕಚೇರಿ ಸ್ಥಾಪನೆ ಮತ್ತು ಬೆಂಗಳೂರು ನಗರ ಜಿಲ್ಲೆ ಸ್ಥಾಪಿಸುವ ಜೊತೆಗೆ ಜಿಲ್ಲಾ ಪುನರ್ ವಿಂಗಡಣೆಗೆ ಚಾಲನೆ ನೀಡಿದರು. 1988ರಲ್ಲಿ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿ ಆಯ್ಕೆ. ಜನತಾದಳ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದರು. ಆದರೆ ಮುಖ್ಯಮಂತ್ರಿ ಪದವಿ ಬಹುಕಾಲ ಉಳಿಯಲಿಲ್ಲ. ಆಗಿನ ರಾಜ್ಯಪಾಲ ವೆಂಕಟಸುಬ್ಬಯ್ಯ ಬೊಮ್ಮಾಯಿ ನೇತೃತ್ವದ ಸರ್ಕಾರವನ್ನು ಕಿತ್ತುಹಾಕಿದರು. ಸಂವಿಧಾನ ವಿರೋಧಿ ಕ್ರಮವನ್ನು ಪ್ರಶ್ನಿಸಿ ನ್ಯಾಯಕ್ಕಾಗಿ ಸುಪ್ರೀಂಕೋರ್ಟಿನವರೆಗೂ ಹೋರಾಟ. ಫಲವಾಗಿ ಬೊಮ್ಮಾಯಿ ಪರವಾಗಿ ಸುಪ್ರೀಂಕೋರ್ಟ್ ತೀರ್ಪು ನೀಡಿತು. ಸರ್ಕಾರದ ಬಹುಮತ ಪರೀಕ್ಷೆಗೆ ವಿಧಾನಸಭೆಯೇ ವೇದಿಕೆಯಾಗಬೇಕು ಎನ್ನುವ ಈ ಐತಿಹಾಸಿಕ ತೀರ್ಪು 'ಬೊಮ್ಮಾಯಿ ಪ್ರಕರಣ' ಎಂದೇ ಖ್ಯಾತಿ ಪಡೆದು, ಮಹತ್ವದ ತೀರ್ಪಾಗಿ ಉಳಿಯಿತು. 1990ರಲ್ಲಿ ಜನತಾದಳದ ರಾಷ್ಟ್ರೀಯ ಅಧ್ಯಕ್ಷತೆ. ಇವರು ಅಧ್ಯಕ್ಷರಾಗಿದ್ದಾಗಲೇ ಜನತಾದಳ ಉತ್ತರ ಪ್ರದೇಶ, ಗುಜರಾತ್, ಒರಿಸ್ಸಾ, ಬಿಹಾರ ಹಾಗೂ ಹರಿಯಾಣಗಳಲ್ಲಿ ಅಧಿಕಾರ ಹಿಡಿಯಿತು. 1992ರಲ್ಲಿ ಒರಿಸ್ಸಾದಿಂದ ರಾಜ್ಯಸಭೆಗೆ ಆಯ್ಕೆ. 1996ರಲ್ಲಿ ಜನತಾದಳ ಕೇಂದ್ರದಲ್ಲಿ ಅಧಿಕಾರ ಹಿಡಿದಾಗ ಮಾನವ ಸಂಪನ್ಮೂಲ ಖಾತೆ ಸಚಿವರಾಗಿ ಅಧಿಕಾರ ದೊರಕಿತು. ಈ ಅವದಿಯಲ್ಲಿ ರಾಜ್ಯದ ವಿಶ್ವವಿದ್ಯಾಲಯಗಳು ಸಾಕಷ್ಟು ಅನುದಾನ ಪಡೆದರೆ, ಹೈದರಾಬಾದಿನಲ್ಲಿ ಮೌಲಾನ ಅಬ್ದುಲ್ ಕಲಾಂ ವಿಶ್ವವಿದ್ಯಾಲಯ ಹಾಗೂ ಇಂದೋರಿನಲ್ಲಿ ಐಐಎಂ ಸ್ಥಾಪನೆಯಾಯಿತು. 1998ರಲ್ಲಿ ಕರ್ನಾಟಕದಿಂದ ರಾಜ್ಯಸಭೆಗೆ ಪುನರಾಯ್ಕೆ. ಜನತಾದಳ ವಿಭಜನೆ ಬಳಿಕ 2002ರಲ್ಲಿ ಎರಡನೇ ಸಾಲಿನ ಮುಖಂಡರು ರಚಿಸಿದ ಅಖಿಲ ಭಾರತ ಪ್ರಗತಿಪರ ಜನತಾದಳದ ಅಧ್ಯಕ್ಷ. 2004ರಲ್ಲಿ ರಾಜ್ಯಸಭೆ ಸದಸ್ಯತ್ವದಿಂದ ನಿವೃತ್ತಿ. ಸಕ್ರಿಯ ರಾಜಕಾರಣದಿಂದ ದೂರ.

2007: ಭಾರತ ಹಾಗೂ ವಿಯೆಟ್ನಾಂ ದೇಶಗಳ ನಡುವಿನ ಮೈತ್ರಿಯನ್ನು ಮತ್ತಷ್ಟು ಗಟ್ಟಿಗೊಳಿಸುವ ಸಂಕೇತವಾಗಿ ಭಾರತದ ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿಯವರ ಪ್ರತಿಮೆಯನ್ನು ವಿಯೆಟ್ನಾಮಿನ ಹನೋಯಿಯಲ್ಲಿ ಇಂದಿರಾಗಾಂಧಿ ಅವರದೇ ಹೆಸರಿನ ಉದ್ಯಾನದಲ್ಲಿ ಸ್ಥಾಪಿಸಲಾಯಿತು. ಹನೋಯ್ ಪೀಪಲ್ಸ್ ಕಮಿಟಿ ಉಪಾಧ್ಯಕ್ಷ ಥಾಯ್ ಥನ್ಹಾ ಹಂಗ್ ಪ್ರತಿಮೆ ಅನಾವರಣಗೊಳಿಸಿದರು.

2007:  ಜರ್ಮನಿಯ ಗೇರ್ ಹಾರ್ಡ್ ಎರ್ತಾಲ್ ಅವರು ರಸಾಯನ ಶಾಸ್ತ್ರ ವಿಭಾಗದಲ್ಲಿ 2007ರ ಪ್ರತಿಷ್ಠಿತ ನೊಬೆಲ್ ಪ್ರಶಸ್ತಿಗೆ ಆಯ್ಕೆಯಾದರು. `ಓಜೋನ್ ಪದರ ತೆಳುವಾಗುತ್ತಿರುವ' ಕುರಿತು ಮಾಡಿದ ಸಂಶೋಧನೆಗೆ ಈ ಪ್ರಶಸ್ತಿ ಲಭ್ಯವಾಯಿತು.

2007: ಗುಜರಾತ್ ಮತ್ತು ಹಿಮಾಚಲ ಪ್ರದೇಶ ರಾಜ್ಯಗಳ ವಿಧಾನಸಭೆಗಳಿಗೆ ಎರಡು ಹಂತದ ಚುನಾವಣೆಯನ್ನು ಚುನಾವಣಾ ಆಯೋಗ ಪ್ರಕಟಿಸಿತು. ಗುಜರಾತಿನಲ್ಲಿ ಡಿಸೆಂಬರ್ 11 ಮತ್ತು 16ರಂದು ಹಾಗೂ ಹಿಮಾಚಲ ಪ್ರದೇಶದಲ್ಲಿ ನವೆಂಬರ್ 11 ಮತ್ತು ಡಿಸೆಂಬರ್ 19ರಂದು ಚುನಾವಣೆ ನಡೆಯುವುದು ಎಂದು ಮುಖ್ಯ ಚುನಾವಣಾ ಆಯುಕ್ತರು ಪ್ರಕಟಿಸಿದರು.

2007: ಸ್ತನ ಕ್ಯಾನ್ಸರಿಗೂ, ತಾಯಿಯ ನಿತಂಬಕ್ಕೂ (ಪೃಷ್ಠ) ಸಂಬಂಧ ಇದೆ ಎಂದು ಬ್ರಿಟನ್ನಿನ ವಿಜ್ಞಾನಿಗಳು ಇಂಗ್ಲೆಂಡಿನಲ್ಲಿ ಪ್ರಕಟಿಸಿದರು. ತಾಯಿಯ ಪೃಷ್ಠ ದೊಡ್ಡದಾಗಿ, ಹೆಚ್ಚು ವೃತ್ತಾಕಾರವಾಗಿದ್ದರೆ ಸ್ತನ ಕ್ಯಾನ್ಸರ್ ಬರುವ ಸಾಧ್ಯತೆ ಏಳು ಪಟ್ಟು ಹೆಚ್ಚು ಎಂದು `ಡೈಲಿ ಮೇಲ್' ಪತ್ರಿಕೆ ಈ ವಿಜ್ಞಾನಿಗಳ ಸಂಶೋಧನೆಯನ್ನು ಉದ್ಧರಿಸಿ ವರದಿ ಮಾಡಿತು. ತಾಯಿಯ ನಿತಂಬ ಆಕೆಯಲ್ಲಿರುವ ಓಸ್ಟ್ರೋಜನ್ ಹಾರ್ಮೋನಿನ ಉತ್ಪತ್ತಿಯ ಗುರುತು. ದೊಡ್ಡ ಪೃಷ್ಠವೆಂದರೆ ಕಾಮೋತ್ತೇಜಕ ಹಾರ್ಮೋನುಗಳ ಸಂಗ್ರಹ ಹೆಚ್ಚಿದೆ ಎಂದರ್ಥ. ಇದರಿಂದ ಆಕೆಯ ಮಗಳಲ್ಲಿ ಸ್ತನ ಕ್ಯಾನ್ಸರ್ ಕಂಡುಬರುವ ಸಾಧ್ಯತೆ ಅಧಿಕ ಎಂದು ವಿಜ್ಞಾನಿ ಪ್ರೊ. ಡೇವಿಡ್ ಬಾರ್ಕರ್ ಹೇಳಿದರು. 1934ರಿಂದ 1944ರ ನಡುವೆ ಜನಿಸಿದ ಫಿನ್ಲೆಂಡಿನ ಆರು ಸಾವಿರಕ್ಕೂ ಹೆಚ್ಚು ಮಹಿಳೆಯರ ಅಧ್ಯಯನ ನಡೆಸಿ ವಿಜ್ಞಾನಿಗಳು ಈ ತೀರ್ಮಾನಕ್ಕೆ ಬಂದರು. ತಾಯಿಯ ಪೃಷ್ಠದ ಗಾತ್ರ 30 ಸೆ.ಮೀ.ಗೂ ಹೆಚ್ಚಿದ್ದರೆ ಮಗಳಲ್ಲಿ ಬರುವ ಸ್ತನ ಕ್ಯಾನ್ಸರಿನ ಪ್ರಮಾಣ ಶೇಕಡ 60ಕ್ಕೂ ಹೆಚ್ಚಿತ್ತು ಎಂಬುದು ಅವರ ಸಂಶೋಧನೆಯ ವಿವರಣೆ.

2007: ದಿನಕ್ಕೊಂದು ಕಿತ್ತಳೆ ಹಣ್ಣು ತಿನ್ನುವುದರಿಂದ ಮುಖ ಸುಕ್ಕುಗಟ್ಟುವುದನ್ನು ನಿಯಂತ್ರಿಸಬಹುದು ಎಂದು ಅಮೆರಿಕದ ವಿಜ್ಞಾನಿಗಳು ಪ್ರಕಟಿಸಿದರು. ಕಿತ್ತಳೆಯಲ್ಲಿ ಇರುವ ವಿಟಮಿನ್ ಸಿ ಚರ್ಮ ನೆರಿಗೆಗಟ್ಟುವುದನ್ನು ತಡೆಯುತ್ತದೆ ಎಂದು ಅವರು ತಿಳಿಸಿದರು.

2006: ಭಾರತವೂ ಸೇರಿದಂತೆ ಸುಮಾರು 150 ರಾಷ್ಟ್ರಗಳ 24,000 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ ಲಂಡನ್ನಿನ ಪ್ರತಿಷ್ಠಿತ ವೆಸ್ಟ್ ಮಿನ್ ಸ್ಟರ್ ವಿಶ್ವವಿದ್ಯಾಲಯದ ಕುಲಪತಿಯಾಗಿ ಅನಿವಾಸಿ ಭಾರತೀಯ ಲಾರ್ಡ್ ಸ್ವರಾಜ್ ಪಾಲ್ ಅಧಿಕಾರ ವಹಿಸಿಕೊಂಡರು. ಈ ವಿಶ್ವವಿದ್ಯಾಲಯ 1838ರಲ್ಲಿ ಸ್ಥಾಪನೆಗೊಂಡಿದೆ. ವೋಲ್ವರ್ಹಾಂಪ್ಟನ್ ವಿಶ್ವವಿದ್ಯಾಲಯದ ಕುಲಪತಿಯೂ ಆಗಿರುವ ಸ್ವರಾಜ್ ಪಾಲ್ ಏಕಕಾಲದಲ್ಲಿ ಎರಡು ವಿಶ್ವವಿದ್ಯಾಲಯಗಳ ಕುಲಪತಿಯಾದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

2006: ರಕ್ಷಣಾ ಹಗರಣವನ್ನು ತೆಹೆಲ್ಕಾ ಬಹಿರಂಗಪಡಿಸಿದ ಐದು ವರ್ಷಗಳ ಬಳಿಕ ಮಾಜಿ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್, ಸಮತಾ ಪಕ್ಷದ ಮಾಜಿ ಅಧ್ಯಕ್ಷೆ ಜಯಾ ಜೇಟ್ಲಿ, ಪಕ್ಷದ ಮಾಜಿ ಖಜಾಂಚಿ ಆರ್.ಕೆ. ಜೈನ್ ಹಾಗೂ ನೌಕಾದಳದ ಮಾಜಿ ಮುಖ್ಯಸ್ಥ ಅಡ್ಮಿರಲ್ ಸುಶೀಲ್ ಕುಮಾರ್ ಅವರ ವಿರುದ್ಧ ನಿಯೋಜಿತ ನ್ಯಾಯಾಲಯದಲ್ಲಿ ಸಿಬಿಐ ಪ್ರಥಮ ಮಾಹಿತಿ ವರದಿ (ಎಫ್ ಐಆರ್) ದಾಖಲಿಸಿತು. ಜಾರ್ಜ್, ಜಯಾ ಹಾಗೂ ಜೈನ್ ವಿರುದ್ಧ 2 ಕೋಟಿ ರೂಪಾಯಿಗೂ ಅಧಿಕ ಲಂಚ ಸ್ವೀಕರಿಸಿದ ಆರೋಪ ಮತ್ತು ಸುಶೀಲ್ ಕುಮಾರ್ ವಿರುದ್ಧ 2000 ದಲ್ಲಿ ಇಸ್ರೇಲಿನಿಂದ ಬರಾಕ್ ಕ್ಷಿಪಣಿ ಖರೀದಿಸುವಾಗ ಅವ್ಯವಹಾರ ನಡೆಸಿದ ಆರೋಪಕ್ಕಾಗಿ ಎಫ್ ಐ ಆರ್ ದಾಖಲಿಸಲಾಯಿತು. ಬರಾಕ್ ಕ್ಷಿಪಣಿ ವ್ಯವಸ್ಥೆಯ ಖರೀದಿ ಸೇರಿದಂತೆ ಹಲವಾರು ಶಸ್ತ್ರಾಸ್ತ್ರ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬುದು 2001ರಲ್ಲಿ ತೆಹೆಲ್ಕಾ ಡಾಟ್ ಕಾಮ್ ವೆಬ್ಸೈಟ್ ನಡೆಸಿದ ಕುಟುಕು ಕಾರ್ಯಾಚರಣೆಯಲ್ಲಿ  `ಬಹಿರಂಗ'ಗೊಂಡಿತ್ತು.

 2006: ಭಾರತೀಯ ಸಂಜಾತೆ ಯುವ ಲೇಖಕಿ, ಅಮೆರಿಕದ ಕೊಲಂಬಿಯ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ 35 ವರ್ಷ ವಯಸ್ಸಿನ ಕಿರಣ ದೇಸಾಯಿ ಅವರ `ದಿ ಇನ್ ಹೆರಿಟೆನ್ಸ್ ಆಫ್ ಲಾಸ್' ಕಾದಂಬರಿಗೆ ಪ್ರಸಕ್ತ ಸಾಲಿನ ಪ್ರತಿಷ್ಠಿತ ಬೂಕರ್ ಪ್ರಶಸ್ತಿ ಲಭಿಸಿತು. ಕಿರಣ ದೇಸಾಯಿ ಈ ಪ್ರಶಸ್ತಿ ಪಡೆದ ಎರಡನೇ ಅತ್ಯಂತ ಕಿರಿಯ ಲೇಖಕಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ತಮ್ಮ ಎರಡನೇ ಕಾದಂಬರಿಗೆ ಪ್ರಶಸ್ತಿ ಪಡೆದಿರುವ ಕಿರಣ  50 ಸಾವಿರ ಪೌಂಡುಗಳ ಬಹುಮಾನ ಪಡೆದರು. ಕಿರಣ ದೇಸಾಯಿ ಖ್ಯಾತ ಕಾದಂಬರಿಗಾರ್ತಿ ಅನಿತಾ ದೇಸಾಯಿ ಅವರ ಮಗಳು. ಅನಿತಾ ದೇಸಾಯಿ ಅವರ ಕಾದಂಬರಿಗಳು ಮೂರು ಬಾರಿ ಬೂಕರ್ ಪ್ರಶಸ್ತಿಗೆ ನಾಮಕರಣಗೊಂಡಿದ್ದರೂ ಅವರಿಗೆ ಪ್ರಶಸ್ತಿ ಒಲಿದಿರಲಿಲ್ಲ. 1997ರಲ್ಲಿ ಆರುಂಧತಿ ರಾಯ್ ಈ ಪ್ರಶಸ್ತಿ ಪಡೆದ ಮೊದಲ ಭಾರತೀಯ ಲೇಖಕಿ ಎನಿಸಿಕೊಂಡಿದ್ದರು. 1991ರಲ್ಲಿ ಬೆನ್ ಒಕ್ರಿ ತಮ್ಮ 32ನೇ ವಯಸ್ಸಿನ್ಲಲಿ ಬೂಕರ್ ಪ್ರಶಸ್ತಿ ಪಡೆದಿದ್ದರು. ಅವರನ್ನು ಬಿಟ್ಟರೆ ಬೂಕರ್ ಮಡಿಲಿಗೆ ಹಾಕಿಕೊಂಡ ಅತ್ಯಂತ ಕಿರಿಯ ಲೇಖಕಿ ಕಿರಣ ದೇಸಾಯಿ. ಅಮ್ಮನಿಗೆ ಸಮರ್ಪಿಸಿದ್ದ ಈ ಕಾದಂಬರಿಯನ್ನು ಬರೆಯಲು ಕಿರಣ ಎಂಟು ವರ್ಷ ತೆಗೆದುಕೊಂಡಿದ್ದರು.

2006: ಮುಂಚೂಣಿಯ ಹೋಟೆಲ್ ಉದ್ಯಮಿ, ರಾಜ್ಯಸಭಾ ಸದಸ್ಯ ಲಲಿತ್ ಸೂರಿ(60) ಅವರು ಹೃದಯಾಘಾತದಿಂದ ಲಂಡನ್ನಿನಲ್ಲಿ ನಿಧನರಾದರು. ಆಟೋಮೊಬೈಲ್ ಎಂಜಿನಿಯರ್ ಆಗಿದ್ದ ಸೂರಿ 1947ರಲ್ಲಿ ಈಗಿನ ಪಾಕಿಸ್ಥಾನದ ರಾವಲ್ಪಿಂಡಿಯಲ್ಲಿ ಜನಿಸಿದ್ದರು.

2006: ಮನೆಗೆಲಸ, ಹೋಟೆಲ್, ಚಹಾದಂಗಡಿ, ಡಾಬಾ, ರೆಸಾರ್ಟ್ ಮತ್ತು ಮನರಂಜನಾ ತಾಣಗಳಲ್ಲಿ 14 ವರ್ಷಕ್ಕಿಂತ ಕಿರಿಯ ಮಕ್ಕಳನ್ನು ಕೆಲಸಕ್ಕೆ ನೇಮಕಗೊಳಿಸುವುದನ್ನು ನಿಷೇಧಿಸುವ ಬಾಲ ಕಾರ್ಮಿಕ ಕಾನೂನು ಜಾರಿಗೊಂಡಿತು. ಕಾಯ್ದೆ ಉಲ್ಲಂಘಿಸಿದವರಿಗೆ ಒಂದು ವರ್ಷದ ಜೈಲು ಶಿಕ್ಷೆ ಸೇರಿದಂತೆ ವಿವಿಧ ದಂಡನೆ ವಿಧಿಸುವ ಪ್ರಸ್ತಾವನೆಯುಳ್ಳ ಅಧಿಸೂಚನೆಂಯನ್ನು ಕಾರ್ಮಿಕ ಸಚಿವಾಲಯ ಹೊರಡಿಸಿತು. 

2000: ಜಗತ್ತಿನ ಮೊತ್ತ ಮೊದಲ `ಮಹಿಳಾ ಪ್ರಧಾನಿ' ಸಿಲೋನಿನ (ಈಗಿನ ಶ್ರೀಲಂಕಾ) ಸಿರಿಮಾವೋ ಬಂಡಾರನಾಯಿಕೆ  ತಮ್ಮ 84ನೇ ವಯಸಿನಲ್ಲಿ ಮೃತರಾದರು. ಸಿರಿಮಾವೋ ಅವರು ಶ್ರೀಲಂಕಾ ಅಧ್ಯಕ್ಷೆ ಚಂದ್ರಿಕಾ ಬಂಡಾರನಾಯಿಕೆ ಕುಮಾರತುಂಗ ಅವರ ತಾಯಿ. 1994ರ ನವೆಂಬರಿನಲ್ಲಿ ಸಿರಿಮಾವೋ ಅವರು ಪುನಃ ಪ್ರಧಾನಿಯಾದಾಗ ತಾಯಿ ಮತ್ತು ಮಗಳು ರಾಷ್ಟ್ರದ ಎರಡೂ ಉನ್ನತ ಹುದ್ದೆಗಳನ್ನು (ಪ್ರಧಾನಿ ಹಾಗೂ ಆಧ್ಯಕ್ಷಸ್ಥಾನ) ಹೊಂದಿದ ವಿಶೇಷ ದಾಖಲೆ ನಿರ್ಮಾಣವಾಯಿತು.

1986: ಇಸ್ರೇಲ್ ಪ್ರಧಾನಿ ಶಿಮೋನ್ ಪೆರೆಸ್ ರಾಜೀನಾಮೆ.

1947: ಸಾಹಿತಿ ಶೇಷಾದ್ರಿ ಕಿನಾರೆ ಜನನ.

1937: ಸಾಹಿತಿ ಕುಸುಮ ಸೊರಬ ಜನನ.

1936: ಸಾಹಿತಿ ವಸಂತ ಕುಷ್ಟಗಿ ಜನನ.

1933: ಪ್ರಾಕ್ಟರ್ ಅಂಡ್ ಗ್ಯಾಂಬ್ಲ್ ಸಂಸ್ಥೆಯು ಮನೆ ಬಳಕೆಗಾಗಿ `ಡ್ರೆಫ್ಟ್' ಹೆಸರಿನ ಮೊತ್ತ ಮೊದಲ ಡಿಟರ್ಜೆಂಟನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿತು. 1920ರಲ್ಲಿಪ್ರಾಕ್ಟರ್ ಅಂಡ್ ಗ್ಯಾಂಬ್ಲ್ ಸಂಸ್ಥೆಯ ಸಂಶೋಧಕರು ಗ್ರೀಸ್ ಮತ್ತಿತರ ಕೊಳೆಗಳನ್ನು ಬಟ್ಟೆಯಿಂದ ತೆಗೆಯಲು ಸಾಧ್ಯವಿರುವಂತಹ ವಿಶೇಷವಾದ `ಪವಾಡದ ಕಣ'ಗಳನ್ನು ಸೃಷ್ಟಿಸಿದ್ದರು, ಡಿಟರ್ಜೆಂಟ್ ತಂತ್ರಜ್ಞಾನದ ಸಂಶೋಧನೆ ಶುಚೀಕರಣ ತಂತ್ರಜ್ಞಾನದಲ್ಲಿಕ್ರಾಂತಿಗೆ ನಾಂದಿ ಹಾಡಿತು.

1888: ಸಾಹಿತಿ ಸಾಲಿ ರಾಮಚಂದ್ರರಾಯ ಜನನ.

1886: `ಟುಕ್ಸೆಡೊ' ಡಿನ್ನರ್ ಜಾಕೆಟ್ ಮೊತ್ತ ಮೊದಲ ಬಾರಿಗೆ ಸಾರ್ವಜನಿಕರ ಮುಂದೆ ಪ್ರದರ್ಶನಗೊಂಡಿತು. ನ್ಯೂಯಾರ್ಕಿನ ಟುಕ್ಸೆಡೊ ಪಾರ್ಕ್ ಸೆಂಚುರಿ ಕ್ಲಬ್ಬಿನಲ್ಲಿ ಮೊತ್ತ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡದ್ದರಿಂದ ಅದಕ್ಕೆ ಕ್ಲಬ್ಬಿನ ಹೆಸರು ಅಂಟಿಕೊಂಡಿತು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement