Thursday, October 9, 2008

ಆಹಾರ ಸೇವನೆಯೆಂಬುದು ತಂಪಿಗಾಗಿನ ತಪಸ್ಸು

ಸಮುದ್ರ ಮಥನ 5: 

ಆಹಾರ ಸೇವನೆ ತಂಪಿಗಾಗಿನ ತಪಸ್ಸು

ಆಹಾರ ಸೇವನೆ ಯೆಂಬ ತಪಸ್ಸು ಸರಿಯಿದ್ದರೆ ಕುಂಡಲಿನಿಯೂ ಜಾಗೃತ ಆಗುತ್ತದೆ. ಅದು ಮೇಲ್ಮುಖವಾಗಿ ಚಲಿಸುತ್ತದೆ. ಏರುತ್ತೇರುತ್ತ ಒಳಗೇ ಇರುವ ಚಂದ್ರಮಂಡಲವನ್ನು ಕರಗುವ ಹಾಗೆ ಮಾಡುತ್ತದೆ. ಯೋಗಿಯಾದವನು ಅದನ್ನು ಪಾನಮಾಡಿ ತಂಪಾಗಿರುತ್ತಾನೆ. ತನ್ನ ನೆರೆಹೊರೆಯನ್ನೂ ತಂಪಾಗಿರಿಸುತ್ತಾನೆ.

ಹೀಗೇ ಒಂದು ಸನ್ನಿವೇಶ. ಆಯುರ್ವೇದದ ಮಹಾದಾರ್ಶನಿಕ ಚರಕ ಒಂದು ಮರದ ಕೆಳಗೆ 
ಮಲಗಿಕೊಂಡಿದ್ದ. ಮೇಲಿಂದ ಒಂದು ಪಕ್ಷಿ ಹಾರಿ ಹೋಯ್ತು. ಕಾಗೆಯ ಕಾ-ಕಾ, ಕೋಗಿಲೆಯ ಕುಹೂ-ಕುಹೂದಷ್ಟೇ ಸಹಜವಾಗಿ ಆ ಪಕ್ಷಿ ಕೋರುಕ್-ಕೋರುಕ್ ಅಂತ ಉಲಿಯುತ್ತಾ ಹೋಯಿತು. ಚರಕ ದಿಗ್ಗನೆ ಎದ್ದು, ಆ 'ಕೋರುಕ್' ಶಬ್ದದ ಅಂತರ್ ಧ್ವನಿಯ ಬಗ್ಗೆ ಚಕಿತನಾಗುತ್ತಾನೆ.

ಆ ಶಬ್ದದ ರಚನೆಯನ್ನು ತಿಳಿದ ಯಾರೂ ಚಿಂತನೆಗೆ ತೊಡಗುತ್ತಾರೆ. ಸಂಸ್ಕೃತದಲ್ಲಿ 'ಕೋರುಕ್' ಶಬ್ದ ಎರಡು ಪದಗಳಿಂದ ರೂಪಿತವಾಗಿದೆ. ಕಃ ಒಂದು. ಅರುಕ್ ಇನ್ನೊಂದು. ಕಃ ಅಂದರೆ ಯಾರು, ಅರುಕ್ ಅಂದರೆ ಅರೋಗಿ, ನಿರೋಗಿ.
 
ಕೋರುಕ್ (ಯಾರು ಅರೋಗಿ?) ಶಬ್ದವನ್ನು ಕೇಳಿ ಚರಕ ಚಕಿತನಾಗಿದ್ದಷ್ಟೇ ಅಲ್ಲ, ಕೂಡಲೇ ಉತ್ತರವೊಂದನ್ನು ಕೊಟ್ಟೇ ಬಿಡುತ್ತಾನೆ. 'ಹಿತಭುಕ್ ಮಿತಭುಕ್ ಕ್ಷುತಭುಕ್' - ಹಿತ ಉಣ್ಣುವವನು, ಮಿತ ಉಣ್ಣುವವನು, ಹಸಿವಾದಾಗ ಉಣ್ಣುವವನು ಅಂತ. 

ಹಿತ, ಮಿತ ಆಹಾರ ಸೇವನೆ ವಿಷಯವನ್ನು ತಿಳಿದಾಗಿದೆ. ಉಳಿದದ್ದು 'ಕ್ಷುತಭುಕ್' ಅಂದ್ರೆ ಏನು ಎಂಬ ಸಂಶಯ. ಆಹಾರ ಸೇವನೆ ತಪಸ್ಸಿನಂತಿರಬೇಕು ಎಂಬುದನ್ನು ಕ್ಷುತಭುಕ್ ಧ್ವನಿಸುತ್ತದೆ. ಊಟ ಬಲ್ಲವನಿಗೆ ರೋಗವಿಲ್ಲ ಇದು ಎಲ್ಲರಿಗೂ ಗೊತ್ತು. ತಮಾಷೆಗೆ ಅಂತ ಹೇಳುವುದುಂಟು. ಒಂದು ಹೊತ್ತು ಉಂಡವನು ಯೋಗಿ, ಎರಡು ಹೊತ್ತು ಉಂಡವನು ಭೋಗಿ, ಮೂರು ಹೊತ್ತು ಉಂಡವನು ರೋಗಿ, ನಾಲ್ಕು ಹೊತ್ತು ಉಂಡವನನ್ನು ಹೊತ್ಕೊಂಡು ಹೋಗಿ ಎಂದು. ಇಲ್ಲಿ  ತಮಾಷೆ ಎನಿಸಿದರೂ ಗಮನಹರಿಸಲೇಬೇಕಾದ ಗಂಭೀರ ವಿಷಯವಿದೆ. ಅಂದರೆ ಆಹಾರಕ್ಕೆ, ಅದರ ಸೇವನೆಗೆ ಅಷ್ಟೊಂದು ಮಹತ್ತ್ವವಿದೆ.

ಪ್ರಶ್ನೆ ಏಳಬಹುದು. ಆಹಾರ ಸೇವನೆ ಎಂಬುದು ಹೇಗೆತಾನೆ ತಪಸ್ಸಾಗಲು ಸಾಧ್ಯ? ಸ್ವಲ್ಪ ಗಮನಿಸಬೇಕು. ತಪಸ್ಸು ಅನ್ನೋ ಶಬ್ದಕ್ಕೆ ಸುಡುವಿಕೆ, ದಹಿಸುವಿಕೆ ಅನ್ನೋ ಅರ್ಥವಿದೆ. ಏನನ್ನು ಸುಡೋದು, ಯಾರು ಸುಡೋದು? ಎಂಬ ಪ್ರಶ್ನೆಗಳು ಮತ್ತೆ ಏಳಬಹುದು. ಅದು ಸಹಜ.

ವೇದಮಂತ್ರ ಹೇಳುತ್ತದೆ. 'ಅಹಂ ವೈಶ್ವಾನರೋಭೂತ್ವಾ ಪ್ರಾಣಿನಾಂ ದೇಹಮಾಶ್ರಿತಃ | ಪ್ರಾಣಾಪಾನ ಸಮಾಯುಕ್ತಃ ಪಚಾಮಿ ಅನ್ನಂ ಚತುರ್ವಿಧಮ್'. ಅವನೇ, ಆ ಭಗವಂತನೇ ಅಗ್ನಿಯಾಗಿ ನಮ್ಮೊಳಗೆ ನೆಲೆಸಿದ್ದಾನೆ. ಅದನ್ನ ಜಠರಾಗ್ನಿ ಎನ್ನುತ್ತೇವೆ. ಪ್ರಾಣಾಪಾನಗಳ ಜತೆ ಸೇರಿಕೊಂಡು ನಾವು ಸೇವಿಸುವ ಆಹಾರವನ್ನು ಪಚನ ಮಾಡ್ತಾನೆ. 

ಈ ಜಠರಾಗ್ನಿಗೆ ಅಷ್ಟೇ ಕೆಲಸವಲ್ಲ. ಇನ್ನೂ ಸಾಕಷ್ಟು ಕೆಲಸ ಇದೆ. ಆ ಅಗ್ನಿ ವ್ಯವಸ್ಥಿತವಾಗಿದ್ದರೆ ಪಚಿಸಿದ ಆಹಾರದ ಸತ್ತ್ವವನ್ನು ವಿಭಜಿಸಿ ರಕ್ತ, ಮಾಂಸ, ಮಜ್ಜೆ ಹೀಗೆ ಶರೀರದ ನಾನಾ ಅವಯವಗಳಿಗೆ ಚಾಚೂ ತಪ್ಪದೇ ತಲುಪಿಸುವ ಕೆಲಸ ಮಾಡುತ್ತದೆ. ಅಷ್ಟೇ ಅಲ್ಲದೇ ಶರೀರದ ದೋಷಗಳನ್ನೂ ಸುಡುತ್ತದೆ. ಆಗ ನಮ್ಮ ಶರೀರ, ಮನಸ್ಸು, ಪ್ರಕೃತಿ ಪುಟಕ್ಕಿಟ್ಟ ಚಿನ್ನದ ಹಾಗಿರುತ್ತದೆ. ವೈದ್ಯಕೀಯ ಭಾಷೆಯಲ್ಲಿ ಇದನ್ನೇ ಇನ್ನೊಂದು ಬಗೆಯಲ್ಲಿ ಹೇಳುತ್ತಾರೆ.

ದರ್ಶನಕಾರರ ನೋಟ ಅಷ್ಟಕ್ಕೇ ಸೀಮಿತಗೊಳ್ಳುವುದಿಲ್ಲ. ಆಹಾರ ಸೇವನೆಯೆಂಬ ತಪಸ್ಸು ಸರಿಯಿದ್ದರೆ ಕುಂಡಲಿನಿಯೂ ಜಾಗೃತ ಆಗುತ್ತದೆ. ಅದು ಮೇಲ್ಮುಖವಾಗಿ ಚಲಿಸುತ್ತದೆ. ಏರುತ್ತೇರುತ್ತ ಒಳಗೇ ಇರುವ ಚಂದ್ರಮಂಡಲವನ್ನು ಕರಗುವ ಹಾಗೆ ಮಾಡುತ್ತದೆ. ಯೋಗಿಯಾದವನು ಅದನ್ನು ಪಾನಮಾಡಿ ತಂಪಾಗಿರುತ್ತಾನೆ. ತನ್ನ ನೆರೆಹೊರೆಯನ್ನೂ ತಂಪಾಗಿರಿಸುತ್ತಾನೆ.

ಹೀಗೆ ಆಹಾರ ಸೇವನೆ ಅಂತ ಅಲ್ಲ, ಎಲ್ಲ ತಪಸ್ಸೂ ತಂಪಿಗಾಗಿ ಹಂಬಲಿಸುತ್ತಿರುತ್ತದೆ.  
 

No comments:

Advertisement