Wednesday, October 15, 2008

ಇಂದಿನ ಇತಿಹಾಸ History Today ಅಕ್ಟೋಬರ್ 15

ಇಂದಿನ ಇತಿಹಾಸ

ಅಕ್ಟೋಬರ್ 15

ಜಹಾಂಗೀರ್ ರತನ್ ಜಿ ದಾದಾಭಾಯ್ `ಜೆ ಆರ್ ಡಿ' ಟಾಟಾ ಅವರು  ಏಕ ಆಸನದ `ಪುಸ್ ಮೋತ್' ವಾಣಿಜ್ಯ ವಿಮಾನವನ್ನು ಕರಾಚಿಯಿಂದ ಬಾಂಬೆಗೆ (ಈಗಿನ ಮುಂಬೈ) ಹಾರಿಸುವ ಮೂಲಕ ಭಾರತದ ಮೊತ್ತ ಮೊದಲ ವಾಣಿಜ್ಯ ವಿಮಾನ ಹಾರಾಟಕ್ಕೆ ಚಾಲನೆ ನೀಡಿದರು. ತಮ್ಮ ಪ್ರಥಮ ವಿಮಾನ ಹಾರಾಟದ 30ನೇ ವಾರ್ಷಿಕೋತ್ಸವದ ನೆನಪಿಗಾಗಿ 1962ರಲ್ಲಿ ಅವರು ಇದೇ ಹಾರಾಟವನ್ನು ಪುನರಾವರ್ತಿಸಿದರು.

2007: ಅಮೆರಿಕದ ಅರ್ಥಶಾಸ್ತ್ರಜ್ಞರಾದ ಲಿಯೋನಿದ್ ಹರ್ವಿಜ್, ಎರಿಕ್ ಮಸ್ಕಿನ್ ಮತ್ತು ರೋಜರ್ ಮೈರ್ಸನ್ ಅವರು ಅರ್ಥಶಾಸ್ತ್ರಕ್ಕೆ ನೀಡಲಾಗುವ 2007ರ ಸಾಲಿನ ನೊಬೆಲ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಲಿಯೋನಿದ್ ಅವರು ರಷ್ಯಾದಲ್ಲಿ ಜನಿಸಿದವರಾಗಿದ್ದು ಅಮೆರಿಕದ ಪೌರತ್ವ ಪಡೆದಿದ್ದಾರೆ. ಇವರಿಗೆ 90 ವರ್ಷ ವಯಸ್ಸಾಗಿದ್ದು ನೊಬೆಲ್ ಪ್ರಶಸ್ತಿ ಪುರಸ್ಕೃತರಲ್ಲಿಯೇ ಅತ್ಯಂತ ಹಿರಿಯ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಸಂಪನ್ಮೂಲಗಳ ಹಂಚಿಕೆಗೆ ಸಂಬಂಧಿಸಿದಂತೆ ಸರ್ಕಾರದ ಪಾತ್ರ ಇತ್ಯಾದಿ ಅರ್ಥ ವಿಷಯಗಳಿಗೆ ಸಂಬಂಧಿಸಿದಂತೆ ಈ ಮೂವರು ರೂಪಿಸಿರುವ ಸಿದ್ಧಾಂತಕ್ಕೆ ಈ ಪ್ರಶಸ್ತಿ ನೀಡಲಾಯಿತು. ಲಿಯೊನಿದ್ ಈ ಸಿದ್ಧಾಂತವನ್ನು ಮೊದಲಿಗೆ ರೂಪಿಸಿದರಾದರೂ ನಂತರ ಪ್ರಿನ್ಸ್ ಟನ್ ವಿವಿಯ ಮಸ್ಕಿನ್ ಮತ್ತು ಚಿಕಾಗೊ ವಿವಿಯ ಮೈರ್ಸನ್ ಈ ಸಿದ್ಧಾಂತ ಅಭಿವೃದ್ಧಿ ಪಡಿಸಿದರು.

2007: ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್ಇ) ಅಕ್ಟೋಬರ್ 9ರಂದು ಮಾಡಿದ್ದ 18000ದ ದಾಖಲೆಯನ್ನು ಒಂದೇ ವಾರದಲ್ಲಿ ಮುರಿದು ಈದಿನ ಮತ್ತೆ ಸಾವಿರ ಅಂಶಗಳ ಏರಿಕೆ ಕಂಡಿತು. ಈದಿನ ಅದು 19000 ಗಡಿಯನ್ನು ಸ್ಪರ್ಶಿಸಿ ಇತಿಹಾಸ ನಿರ್ಮಿಸಿತು. ಸಂವೇದಿ ಸೂಚ್ಯಂಕ 19,000 ಗಡಿ ತಲುಪಿದ್ದರಿಂದ ಒಟ್ಟು ಹೂಡಿಕೆದಾರರ ಬಂಡವಾಳ ಮೊತ್ತ ರೂ 58.30 ಲಕ್ಷ ಕೋಟಿ ರೂಪಾಯಿ ಹೆಚ್ಚಾಯಿತು.

2007: ಸುನಾಮಿಯ ಕುರಿತು ಮುನ್ನೆಚ್ಚರಿಕೆ ನೀಡುವ ಭಾರತದ ಮೊದಲ ತಂತ್ರಜ್ಞಾನ ವ್ಯವಸ್ಥೆಯನ್ನು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಕಪಿಲ್ ಸಿಬಲ್ ಈದಿನ ಹೈದರಾಬಾದಿನಲ್ಲಿ ದೇಶಕ್ಕೆ ಸಮರ್ಪಿಸಿದರು. ಮೂರು ವರ್ಷಗಳ ಹಿಂದೆ ದಿಢೀರನೆ ದೇಶದ ದಕ್ಷಿಣ ಕರಾವಳಿಗೆ ಅಪ್ಪಳಿಸಿದ ಸುನಾಮಿ ಸಾವಿರಾರು ಜನರನ್ನು ಆಹುತಿ ತೆಗೆದುಕೊಂಡಿತ್ತು. ರಾಷ್ಟ್ರೀಯ ಸುನಾಮಿ ಮತ್ತು ಬಿರುಗಾಳಿ ಮುನ್ನೆಚ್ಚರಿಕೆ ವ್ಯವಸ್ಥೆ (ಎನ್ ಇಡಬ್ಲ್ಯುಎಸ್ ಟಿ ಎಸ್ ಎಸ್) ಎಂದು ಕರೆಯಲಾಗುವ ಈ ಸಾಧನ, ಭೂಕಂಪ ಸಂಭವಿಸಿದ 30 ನಿಮಿಷಗಳೊಳಗೆ ಸುನಾಮಿ ರಾಕ್ಷಸ ಅಲೆಗಳ ಕುರಿತು ಮಾಹಿತಿ ನೀಡುವುದು. 125 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಕೇಂದ್ರವನ್ನು ಭೂವಿಜ್ಞಾನ ಸಚಿವಾಲಯ ನಿರ್ಮಿಸಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಬಾಹ್ಯಾಕಾಶ ಇಲಾಖೆ ಮತ್ತು ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ ಇದರ ಸಹಭಾಗಿತ್ವ ವಹಿಸಿವೆ.

2007: ಕೊಯಮತ್ತೂರು ಬಾಂಬ್ ಸ್ಫೋಟ ಪ್ರಕರಣದಲ್ಲಿ ವಿಶೇಷ ನ್ಯಾಯಾಲಯವು ಒಂಬತ್ತು ಮಂದಿಯನ್ನು ತಪ್ಪಿತಸ್ಥರೆಂದು ಘೋಷಿಸಿತು. ಕೊಲೆ ಯತ್ನ, ಸ್ಫೋಟಕಗಳನ್ನು ಹೊಂದಿದ್ದ ಆರೋಪಕ್ಕಾಗಿ ಈ ಒಂಬತ್ತು ಆರೋಪಿಗಳಿಗೆ ವಿಶೇಷ ನ್ಯಾಯಾಧೀಶ ಕೆ. ಉತ್ತಿರಪ್ತಿ ಅವರು ಮೂರರಿಂದ ಒಂಬತ್ತು ವರ್ಷ ಸೆರೆಮನೆವಾಸದ ಶಿಕ್ಷೆ ವಿಧಿಸಿದರು. 

2007: ಅತ್ಯುತ್ತಮ ನಿರ್ವಹಣೆಗೆ `ವಿಶ್ವ ಪರ್ಯಾವರಣ ಪ್ರತಿಷ್ಠಾನ'ದಿಂದ `ಸ್ವರ್ಣಮಯೂರ' ಪ್ರಶಸ್ತಿ ಮುಡಿಗೇರಿಸಿಕೊಂಡಿರುವ ದೇಶದ ಪ್ರತಿಷ್ಠಿತ ಕೈಗಾ ಅಣುವಿದ್ಯುತ್ ಯೋಜನೆ ಮತ್ತೊಂದು ಸಾಧನೆಯತ್ತ ದಾಪುಗಾಲಿಟ್ಟಿದೆ ಎಂದು ಈದಿನ ಪ್ರಕಟಿಸಲಾಯಿತು. 440 ಮೆ. ವ್ಯಾಟ್ ಸಾಮರ್ಥ್ಯದ ಮೊದಲ ಮತ್ತು ಎರಡನೇ ಘಟಕಗಳಲ್ಲಿ ಎರಡನೇ ಘಟಕ ಮೂರೇ ದಿನ ಸತತವಾಗಿ ವಿದ್ಯುತ್ ಉತ್ಪಾದಿಸಿದರೆ ಜಾಗತಿಕ ದಾಖಲೆಗೆ ಕಾರಣವಾಗಲಿದೆ. ಅಮೆರಿಕದ ಅಣು ವಿದ್ಯುತ್ ಘಟಕವೊಂದು ಸತತ 406 ದಿನಗಳ ಕಾಲ ವಿದ್ಯುತ್ ಉತ್ಪಾದಿಸಿ ದಾಖಲೆ ನಿರ್ಮಿಸಿತ್ತು. ಈ ದಾಖಲೆಯನ್ನು ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಕೈಗಾ ಸ್ಥಾವರದ ಎರಡನೇ ಘಟಕ ಮುರಿಯಲಿದ್ದು 408 ದಿನಗಳ ಕಾಲ ವಿದ್ಯುತ್ ಉತ್ಪಾದಿಸಲು ಸಜ್ಜುಗೊಂಡಿದೆ. ಕೈಗಾದಲ್ಲಿ ಇದೇ ಸಾಮರ್ಥ್ಯದ 3ನೇ ಮತ್ತು 4ನೇ ಘಟಕಗಳು ವಿದ್ಯುತ್ ಉತ್ಪಾದನೆಗೂ ಸಜ್ಜಾಗಿದೆ. ಅತ್ಯುತ್ತಮ ನಿರ್ವಹಣೆಗೆ ಹಲವು ಪ್ರಶಸ್ತಿ ಗಳಿಸಿರುವ ಕೈಗಾ ಘಟಕ ಉತ್ಕೃಷ್ಟ ಸಾಧನೆಗಾಗಿ ಕೇಂದ್ರ ವಿದ್ಯುತ್ ಪ್ರಾಧಿಕಾರ ನೀಡುವ ಸ್ವರ್ಣ ಪದಕ, ಸ್ವರ್ಣ ಮಯೂರ ಸೇರಿದಂತೆ ರಾಷ್ಟ್ರೀಯ ಸುರಕ್ಷಾ ಸಂಸ್ಥೆಯಿಂದ `ಅತ್ಯುತ್ತಮ ಸುರಕ್ಷಾ ಘಟಕ' ಎಂಬ ಪ್ರಶಸ್ತಿಯನ್ನೂ ಗಳಿಸಿದೆ.

2007: ಪರಮಾಣು ನಿರ್ವಾಹಕರ ಜಾಗೃತಿ ಸಂಘಟನೆಯಾದ `ವಾನೋ' ಅಧ್ಯಕ್ಷರಾಗಿ ಭಾರತೀಯ ಅಣುವಿದ್ಯುತ್ ನಿಗಮದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಾ. ಶ್ರೇಯನ್ ಕುಮಾರ್ ಜೈನ್ ಅವರು ಚಿಕಾಗೊದಲ್ಲಿ ನಡೆದ ಸಂಸ್ಥೆಯ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಆಯ್ಕೆಯಾದರು. ಇದೇ ವೇಳೆಯಲ್ಲಿ ಎನ್ ಪಿ ಸಿ ಎಲ್ ನ ಆಪರೇಟರ್ ವಿಭಾಗದ ನಿರ್ದೇಶಕ ಸಿ. ನಾಗೇಶ್ವರ ರಾವ್ ಅವರನ್ನು `ನ್ಯೂಕ್ಲಿಯರ್ ಎಕ್ಸಲೆನ್ಸಿ ಪ್ರಶಸ್ತಿ' ನೀಡಿ ಗೌರವಿಸಲಾಯಿತು.

2007: ಕಾರವಾರ ಸಮೀಪದ ದೇವಗಡ ಕಡಲತೀರದಲ್ಲಿ ದುರಂತಕ್ಕೆ ಈಡಾಗಿದ್ದ ಓಸಿಯನ್ ಸೆರಾಯ್ ಹಡಗನ್ನು ಗುಜರಾತಿನ ಅಲಂಗ್ ಕಡಲ ತೀರಕ್ಕೆ ಒಯ್ದು ತುಂಡರಿಸಲು ಜಿಲ್ಲಾಡಳಿತ ಅನುಮತಿ ನೀಡಿತು. ಇದರಿಂದ ಎರಡು ವರ್ಷಗಳಿಂದ ವಾದ ವಿವಾದಕ್ಕೆ ಕಾರಣವಾಗಿದ್ದ ಹಡಗಿನ ಅನಿಶ್ಚಿತ ಬದುಕಿಗೆ ಕೊನೆ ಬೀಳುವುದು. ಹಡಗನ್ನು ದೇವಗಡ ದ್ವೀಪದಲ್ಲಿ ಒಡೆಯುವ ಜಿಲ್ಲಾಡಳಿತದ ನಿರ್ಧಾರಕ್ಕೆ ಮೀನುಗಾರರು, ಪರಿಸರವಾದಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಹಡಗು ಕಟ್ಟಲು ಬಳಸುವ ಅಪಾಯಕಾರಿ ಕಲ್ನಾರು ಸಮುದ್ರಕ್ಕೆ ಬಿದ್ದು ಮೀನು ಸಂತತಿಗೆ ಅಪಾಯ ಆಗಬಹುದು ಎಂಬ ಭೀತಿ ಭುಗಿಲೆದ್ದಿತ್ತು. 2006ರ ಜೂನ್ 11ರ ರಾತ್ರಿ ಬೀಸಿದ ಬಿರುಗಾಳಿಯಿಂದ ತತ್ತರಿಸಿದ್ದ ಓಸಿಯಾನ ಸೆರಾಯಿ ಹಡಗು ಬೃಹತ್ ಬಂಡೆಗೆ ಡಿಕ್ಕಿಹೊಡೆದು ಎರಡು ತುಂಡಾಗಿತ್ತು. ಈ ದುರಂತದಲ್ಲಿ ಹಡಗಿನ ಚಾಲಕರೊಬ್ಬರು ಮೃತರಾಗಿ, ಹಡಗಿನಲ್ಲಿದ್ದ ಅಪಾರ ಪ್ರಮಾಣದ ತೈಲ ಸೋರಿಕೆಯಾಗಿ ಸಮುದ್ರ ಸೇರಿತ್ತು.

2007: ಕೊಲಂಬಿಯಾದ ಬೊಗೊಟಾದಲ್ಲಿ ಚಿನ್ನದ ಗಣಿಯೊಂದು ಕುಸಿದು 22 ಜನ ಮೃತರಾದರು. ಖಾಸಗಿ ಕಂಪೆನಿಗೆ ಸೇರಿದ ಈ ಸುರೆಜ್ ಗೋಲ್ಡ್ ಗಣಿ ಕುಸಿತದಲ್ಲಿ ಇತರ ಇನ್ನೂ 15 ಮಂದಿ ಕಣ್ಮರೆಯಾದರು.

2007: ಉತ್ತರಪ್ರದೇಶ ಮುಖ್ಯಮಂತ್ರಿ ಮಾಯಾವತಿ ಅವರು ಅಮೆರಿಕದ ಪ್ರತಿಷ್ಠಿತ ನಿಯತಕಾಲಿಕ `ನ್ಯೂಸ್ ವೀಕ್' ನಲ್ಲಿ ಈದಿನ ವಿಜೃಂಭಿಸಿದರು. ಎಲ್ಲ ಅಡೆತಡೆಗಳನ್ನೂ ಮೀರಿ ವಿಶ್ವಮಟ್ಟದಲ್ಲಿ ಖ್ಯಾತಿ ಗಳಿಸಿದ ಎಂಟು ಮಂದಿಯ ಜೀವನ ಚಿತ್ರಣವನ್ನು ಈ ಪತ್ರಿಕೆ ಪ್ರಕಟಿಸಿದ್ದು ಅದರಲ್ಲಿ ಮಾಯಾವತಿ ಹೆಸರೂ ಸೇರ್ಪಡೆಯಾಯಿತು. ಬಹುಜನ ಸಮಾಜ ಪಕ್ಷದ ನಾಯಕಿ ಮಾಯಾವತಿಗೆ ಈಗ 51 ವಯಸ್ಸು. ಜಾತಿ ಲೆಕ್ಕಾಚಾರಗಳ ತಲೆಬುಡ ಅಲುಗಿಸಿದ ಇವರ ಮುಸ್ಲಿಂ-ದಲಿತ-ಬ್ರಾಹ್ಮಣ ಮೈತ್ರಿಕೂಟ ರಾಷ್ಟ್ರ ರಾಜಕೀಯದಲ್ಲಿ ಹೊಸ ಸಮೀಕರಣಗಳಿಗೆ ನಾಂದಿ ಹಾಡಿದೆ. ಇತರೆ ರಾಜ್ಯಗಳಲ್ಲೂ ಇದೇ ಮೋಡಿ  ಪ್ರದರ್ಶಿಸುವ ಅವರ ಇರಾದೆ ಯಶಸ್ವಿಯಾದರೆ, ಹೊಸ ಸಮೀಕರಣ ಫಲಿಸಬಹುದೆಂದು ಪತ್ರಿಕೆ ಹೇಳಿತು. ಮಾಯಾವತಿ ಜೊತೆಗೆ ಫ್ರಾನ್ಸ್ ಇಂಧನ ಸಂಸ್ಥೆ ಮುಖ್ಯಾಧಿಕಾರಿ ಅನ್ನೆ ಲಾವರ್ ಜಿಯಾನ್ ಮತ್ತು ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಾಧಿಕಾರಿ ಮಾರ್ಗರೆಟ್ ಚಾನ್ ವ್ಯಕ್ತಿ ಚಿತ್ರಣಗಳು ಈ ನಿಯತಕಾಲಿಕೆಯಲ್ಲಿ ಪ್ರಕಟವಾದವು.

2006: ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ ಅವರು ಮೊದಲನೇ ಸ್ಥಾನದಲ್ಲಿದ್ದ ವಿಪ್ರೊ ಸಂಸ್ಥೆಯ ಅಧ್ಯಕ್ಷ ಅಜೀಂ ಪ್ರೇಮ್ ಜಿ ಅವರನ್ನು ಹಿಂದಕ್ಕೆ ತಳ್ಳಿ ಭಾರತದ ಅತಿ ಶ್ರೀಮಂತ ಖ್ಯಾತಿಗೆ ಪಾತ್ರರಾದರು. ಮುಖೇಶ್ ಗಳಿಕೆ 70,000 ಕೋಟಿ ರೂಪಾಯಿಗಳಿಗೆ ಏರಿದ್ದು, ಪ್ರೇಮ್ ಜಿ ಗಳಿಕೆ 66,700 ಕೋಟಿ ರೂಪಾಯಿಗಳು ಎಂದು ರಿಚ್ಚಿ ರಿಚ್ ಕ್ಲಬ್ ಪ್ರಕಟಿಸಿತು.

2006: ಅತೀ ಹೆಚ್ಚು ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳನ್ನು ಆಡಿದ ಸಾಧನೆ ಮಾಡುವ ಮೂಲಕ ಸಚಿನ್ ತೆಂಡೂಲ್ಕರ್ ಅವರು ವಿಶ್ವದಾಖಲೆ ನಿರ್ಮಿಸಿದರು. 368 ಪಂದ್ಯಗಳನ್ನು ಆಡುವ ಮೂಲಕ ಅವರು ಪಾಕಿಸ್ತಾನದ ಇಂಜಮಾಮ್ ಉಲ್ ಹಕ್ ಅವರನ್ನು ಹಿಂದೆ ತಳ್ಳಿದರು. ಇಂಜಮಾಮ್ ಮತ್ತು ಶ್ರೀಲಂಕಾದ ಸನತ್ ಜಯಸೂರ್ಯ ಅವರು 367 ಏಕದಿನ ಪಂದ್ಯಗಳನ್ನು ಆಡಿದ್ದಾರೆ.

2000: ಒಂದು ದಿನದ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಅತ್ಯಂತ ಹೆಚ್ಚು ರನ್ (9379) ಗಳಿಸಿದ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಸಚಿನ್ ತೆಂಡೂಲ್ಕರ್ ಪಾತ್ರರಾದರು. ನೈರೋಬಿಯಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ನಡೆದ ಐಸಿಸಿ ಕ್ರಿಕೆಟ್ ಟೂರ್ನಮೆಂಟಿನ ಅಂತಿಮ ಪಂದ್ಯದಲ್ಲಿ ಅವರು ಈ ಸಾಧನೆ ಮಾಡಿದರು. ಅವರ ರನ್ ಗಳಿಕೆಯ ಮೊತ್ತ 2002ರಲ್ಲಿ 11,000 ರ ಗಡಿ ದಾಟಿತು. 

1997: ಬ್ರಿಟಿಷ್ ರಾಯಲ್ ಏರ್ ಫೋರ್ಸ್ ಪೈಲಟ್ ಆಂಡಿ ಗ್ರೀನ್ ಅವರು ನೆವಾಡಾ ಮರುಭೂಮಿಯಲ್ಲಿ ಜೆಟ್ ಚಾಲಿತ ಕಾರನ್ನು ಧ್ವನಿತರಂಗದ ವೇಗಕ್ಕಿಂತಲೂ (ಸೂಪರ್ಸಾನಿಕ್) ವೇಗವಾಗಿ ಎರಡು ಬಾರಿ ಓಡಿಸಿ, ಭೂಮಿ ಮೇಲಣ ಚಾಲನಾ ವೇಗದ ವಿಶ್ವ ದಾಖಲೆಯನ್ನು ಅಧಿಕೃತವಾಗಿ ಮುರಿದರು.

1953: ಸಾಹಿತಿ ಸಿ. ನಾಗಣ್ಣ ಜನನ.

1950: ಸಾಹಿತಿ ಬಿ.ಎನ್. ಸುಮಿತ್ರಾಬಾಯಿ ಜನನ.

1934: ಸಾಹಿತಿ ಇಂದಿರಾ ಹಾಲಂಬಿ ಜನನ.

1932: ಸಾಹಿತಿ ಲಲಿತಮ್ಮ ಚಂದ್ರಶೇಖರ್ ಜನನ.

1932: ಜಹಾಂಗೀರ್ ರತನ್ ಜಿ ದಾದಾಭಾಯ್ `ಜೆ ಆರ್ ಡಿ' ಟಾಟಾ ಅವರು  ಏಕ ಆಸನದ `ಪುಸ್ ಮೋತ್' ವಾಣಿಜ್ಯ ವಿಮಾನವನ್ನು ಕರಾಚಿಯಿಂದ ಬಾಂಬೆಗೆ (ಈಗಿನ ಮುಂಬೈ) ಹಾರಿಸುವ ಮೂಲಕ ಭಾರತದ ಮೊತ್ತ ಮೊದಲ ವಾಣಿಜ್ಯ ವಿಮಾನ ಹಾರಾಟಕ್ಕೆ ಚಾಲನೆ ನೀಡಿದರು. ತಮ್ಮ ಪ್ರಥಮ ವಿಮಾನ ಹಾರಾಟದ 30ನೇ ವಾರ್ಷಿಕೋತ್ಸವದ ನೆನಪಿಗಾಗಿ 1962ರಲ್ಲಿ ಅವರು ಇದೇ ಹಾರಾಟವನ್ನು ಪುನರಾವರ್ತಿಸಿದರು. 1982ರಲ್ಲಿ ತಮ್ಮ ಚಾರಿತ್ರಿಕ ಹಾರಾಟದ 50ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಮತ್ತೊಮ್ಮೆ ಅವರು ಇದೇ ಹಾರಾಟವನ್ನು ಎರಡನೇ ಬಾರಿಗೆ ಪುನರಾವರ್ತನೆ ಮಾಡಿದರು.

1931: ಭಾರತದ 11ನೇ ರಾಷ್ಟ್ರಪತಿಯಾಗಿದ್ದ ವಿಜ್ಞಾನಿ ಅವುಲ್ ಫಕೀರ್ ಜಲಾಲುದ್ದೀನ್ (ಎಪಿಜೆ) ಅಬ್ದುಲ್ ಕಲಾಂ ಅವರು ತಮಿಳುನಾಡಿನ ರಾಮೇಶ್ವರಂನಲ್ಲಿ ಈದಿನ ಜನಿಸಿದರು.

1926: ಸಾಹಿತಿ ರಾಜಗೋಪಾಲಾಚಾರ್ಯ ಎಂ. ಜನನ.

1920: ಅಮೆರಿಕದ ಖ್ಯಾತ ಕಾದಂಬರಿಕಾರ ಮಾರಿಯೋ ಪುಝೋ (1920-1999) ಜನ್ಮದಿನ. `ದಿ ಗಾಡ್ಫಾದರ್' ಇವರ ಕೃತಿಗಳಲ್ಲಿ ಅತ್ಯಂತ ಪ್ರಸಿದ್ಧಿ ಪಡೆದಿದೆ. 

1918: ಜಗತ್ತಿನಾದ್ಯಂತ ಲಕ್ಷಾಂತರ ಮಂದಿಯ ಭಕ್ತಿ, ಗೌರವಕ್ಕೆ ಪಾತ್ರರಾಗಿದ್ದ ಶಿರಡಿಯ ಸಾಯಿಬಾಬಾ ಅವರು ಶಿರಡಿಯಲ್ಲಿ ಈ ದಿನ (ವಿಜಯದಶಮಿ) `ಮಹಾಸಮಾಧಿ' ಹೊಂದಿದರು.

1915: ಸಾಹಿತಿ ಆರ್.ಎಸ್. ರಾಮರಾವ್ ಜನನ.

1866: ಹೊಸಗನ್ನಡದ ಆರಂಭದ ದಿನಗಳ ಗಮನಾರ್ಹ ಕಾದಂಬರಿಗಳಲ್ಲಿ ಒಂದಾಗಿದ್ದ `ಇಂದಿರೆ'ಯ (1908) ಕತೃ ಕೆರೂರು ವಾಸುದೇವಾಚಾರ್ಯ ಅವರು ಶ್ರೀನಿವಾಸಾಚಾರ್ಯ- ಪದ್ಮಾವತಿ ದಂಪತಿಯ ಮಗನಾಗಿ ವಿಜಾಪುರ ಜಿಲ್ಲೆಯ ಬಾಗಲಕೋಟೆಯಲ್ಲಿ ಜನಿಸಿದರು.

1542: ಭಾರತದ ಖ್ಯಾತ ಮೊಘಲ್ ದೊರೆ ಅಕ್ಬರ್ (1542-1605) ಜನ್ಮದಿನ. 

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement