ಸಮುದ್ರ ಮಥನ 19: ಧಾರ್ಮಿಕ ಪ್ರಭಾವ
ಸಾತ್ವಿಕ ಧರ್ಮವನ್ನು ಚಾಚೂ ತಪ್ಪದೆ ಆಂತರಿಕವಾಗಿ ಹಾಗೂ ಬಾಹ್ಯವಾಗಿ ಪರಿಪಾಲಿಸುತ್ತಿರುವ ವ್ಯಕ್ತಿಗಳಲ್ಲಿ ಪ್ರಭಾವ ಎಂಬುದು ಸಹಜ ಕ್ರಿಯೆ. ಅದು ದಾಖಲಿಸಲಾಗದ, ಬರೆಯಲಾರದ, ಮತ್ತೊಬ್ಬರಿಗೆ ತೋರಿಸಿಕೊಡಲಾಗದ, ಆದರೆ ವಾಸ್ತವವಾಗಿರುವ ಅನುಭೂತಿ.
ವಿಶೇಷ ವ್ಯಕ್ತಿತ್ವಗಳು ನಮ್ಮ ಆಸುಪಾಸಿನಲ್ಲಿ ಓಡಾಡಿದರೆ ಸಾಕು, ನಮ್ಮನ್ನು ನಾವು ಅವರ ಕಾರ್ಯಕ್ಕೆ ಅರ್ಪಿಸಿಕೊಂಡುಬಿಡೋಣ ಎಂದು ಎನಿಸುತ್ತದೆ. ಇದು ಉತ್ಪ್ರೇಕ್ಷೆ ಅಲ್ಲ. ಎಲ್ಲರ ಜೀವನದಲ್ಲಿಯೂ ಕೆಲವು ಸಂದರ್ಭಗಳಲ್ಲಿ ಇಂತಹ ಒಂದು ಅಪೂರ್ವ ಅನುಭವ ಆಗಿರುತ್ತದೆ. ಇದು ಬಾಲಿಷವಾದ ನಡೆ ಆಗಿರುವುದಿಲ್ಲ. ಸನಿಹದಲ್ಲಿ ಸುಳಿಯುತ್ತಿರುವ
ವ್ಯಕ್ತಿಯ ವ್ಯಕ್ತಿತ್ವದ ಪ್ರಬಲ ಪ್ರಭಾವ ಕೆಲಸ ಮಾಡುತ್ತಿರುತ್ತದೆ. ಆ ಪ್ರಭಾವ ಹೊರಹೊಮ್ಮುವ ವ್ಯಕ್ತಿಯ ನಡತೆ, ಚಿಂತನೆ, ಶಿಸ್ತು ಎಲ್ಲವೂ ಒಟ್ಟಾಗಿ ಪ್ರಭಾವಳಿಯ ರೂಪದಲ್ಲಿ ಪ್ರಸ್ತುತವಾಗುತ್ತಿರುತ್ತದೆ.
ಅಂತಹುದೇ ಒಂದು ಸನ್ನಿವೇಶ. ರಾಮಾಯಣದ ವನವಾಸ ಕಾಲ. ರಾಮ ಕಾಡಿನಲ್ಲಿ ವಿಹರಿಸುತ್ತಿದ್ದ ಸಮಯ. ಋಷಿಗಳು ಇವನನ್ನು ನೋಡುತ್ತಾರೆ. ಅವರಾದರೂ ಎಂತಹವರು ಅಂದರೆ ಬಹಳ ಪುರಾತನ ಋಷಿಗಳು. ಕೆಲವರು ಸೂರ್ಯನಿದ್ದ ದಿನದಿಂದ ಇದ್ದವರು, ಮತ್ತೆ ಕೆಲವರು ಅಗ್ನಿ ಈ ಭೂಮಿಯಲ್ಲಿ ಆವಿರ್ಭವಿಸಿದ ದಿನದಿಂದಲೂ ಇರುವವರು. ಅವರೆಲ್ಲ ರಾಮನ ರೂಪಲಾವಣ್ಯಗಳನ್ನು ನೋಡಿ ಮರುಳಾಗಿ, ಅವನ ಹಿಂದೆ-ಹಿಂದೆಯೇ ಹೋಗಿ 'ರಾಮ, ನಿನ್ನನ್ನು ಮುಟ್ಟಬಹುದೇ? ನಿನ್ನ ಬಳಿ ಕೆಲವು ಕ್ಷಣಗಳನ್ನು ಕಳೆಯಬಹುದೇ?' ಎಂದು ಬಗೆಬಗೆಯಾಗಿ ಬಿನ್ನವಿಸುತ್ತಾರೆ.
ನಾವು ಹೀಗೆಯೇ ಮಾತನಾಡುವಾಗ 'ರಾಮನ ರೂಪಲಾವಣ್ಯಗಳನ್ನು ನೋಡಿ ಮರುಳಾಗಿ' ಆ ಋಷಿಗಳು ರಾಮನ ಬಳಿಗೆ ಹೋದರು ಎಂದು ಸಲೀಸಾಗಿ ಹೇಳುತ್ತೇವೆ. ಅಲ್ಲಿ ರೂಪಲಾವಣ್ಯದ್ದಷ್ಟೇ ಮಾತಾಗಿರಲಿಲ್ಲ. ಅವನಲ್ಲಿ ಆ ಋಷಿಗಳು ಮಹಾತತ್ತ್ವದ ಧರ್ಮವಾಡುತ್ತಿದ್ದುದನ್ನು ಗಮನಿಸಿದ್ದರು. ಅಂತರಂಗದ ಸೌಂದರ್ಯಕ್ಕೆ ಅನುವರ್ತಿಯಾಗಿ ಅಂಗಾಂಗ ಸೌಂದರ್ಯವನ್ನು ಕಂಡ ಮಹರ್ಷಿಗಳು ಅವನ ಸಂಗ ಸುಖಕ್ಕಾಗಿ ಬಿನ್ನವಿಸಿದರು.
ಇದನ್ನು ಪುಷ್ಟೀಕರಿಸುವಂತೆ ನಮ್ಮ ವೇದ, ಪುರಾಣ, ಕಾವ್ಯಗಳಲ್ಲಿ ಸರ್ವೇಸಾಮಾನ್ಯವಾಗಿ ಬರುವ ಋಷ್ಯಾಶ್ರಮದ ಪರಿಸರ ವರ್ಣನೆಯನ್ನು ನೋಡಬೇಕು. ಸಸ್ಯಾಹಾರಿ, ಮಾಂಸಾಹಾರಿ ಪ್ರಾಣಿಗಳೆಲ್ಲ ಒಟ್ಟಾಗಿ ಜೀವಿಸುತ್ತಿರುತ್ತವೆ. ಅವುಗಳಿಗೆ ಯಾವುದೇ ದಂಡ ಭಯ ಇರುವುದಿಲ್ಲ. ಆದರೂ, ಸಮರಸದ ಧರ್ಮ ಅವುಗಳನ್ನೆಲ್ಲ ಆಳುತ್ತಿರುತ್ತದೆ. ಮುಂದುವರೆದು, ರಾಜ-ಮಹಾರಾಜರು ಋಷ್ಯಾಶ್ರಮವನ್ನು ಪ್ರವೇಶಿಸುವಾಗ ಸರಳ, ಸಹಜ ಅಲಂಕಾರಗಳಿಂದ ಶೋಭಿಸುತ್ತಾ ವಿನೀತರಾಗಿ ಆಶ್ರಮ ಪ್ರದೇಶವನ್ನು ಪ್ರವೇಶಿಸುತ್ತಾರೆ. ಏಕೆಂದರೆ, ಆಶ್ರಮ ಪ್ರದೇಶದಲ್ಲಿ ಮುನಿಜನರ ತಪಸ್ಸು ಸತ್ತ್ವಧರ್ಮವನ್ನು ಎಲ್ಲೆಲ್ಲಿಯೂ ವ್ಯಾಪಿಸುವಂತೆ, ಪಸರಿಸುವಂತೆ ಮಾಡಿರುತ್ತದೆ.
ಅಲ್ಲೆಲ್ಲ ನಮ್ಮ 'ವ್ಯಾವಹಾರಿಕ ದಂಡ' ಏನೇನೂ ಮಾಡಲಾಗುವುದಿಲ್ಲ. ಅಲ್ಲಿಗೇನಿದ್ದರೂ 'ಧರ್ಮದಂಡ'. ಇಲ್ಲಿ ಧರ್ಮ ಎಂದು ಪ್ರಸ್ತಾಪಿಸಿರುವುದು ಜಾತಿ, ಮತದ ವ್ಯಾಪ್ತಿಯಲ್ಲಲ್ಲ. ಆ ಅರ್ಥವ್ಯಾಪ್ತಿಯನ್ನು ಮೀರಿ 'ಸ್ಥಿತಿ ವಿಶೇಷ'ವನ್ನು ಅದಕ್ಕೆ ಅರ್ಥೈಸಲಾಗಿದೆ. ಸಾತ್ವಿಕ ಧರ್ಮವನ್ನು ಚಾಚೂ ತಪ್ಪದೆ ಆಂತರಿಕವಾಗಿ ಹಾಗೂ ಬಾಹ್ಯವಾಗಿ ಪರಿಪಾಲಿಸುತ್ತಿರುವ ವ್ಯಕ್ತಿಗಳಲ್ಲಿ ಪ್ರಭಾವ ಎಂಬುದು ಸಹಜ ಕ್ರಿಯೆ. ಅದು ದಾಖಲಿಸಲಾಗದ, ಬರೆಯಲಾರದ, ಮತ್ತೊಬ್ಬರಿಗೆ ತೋರಿಸಿಕೊಡಲಾಗದ, ಆದರೆ ವಾಸ್ತವವಾಗಿರುವ ಅನುಭೂತಿ. ಅದನ್ನು ಅನುಭವದಿಂದ ಮಾತ್ರ ಪಡೆದುಕೊಳ್ಳಬಹುದು. ಆ ಅನುಭವಕ್ಕೆ ಪಾಮರ ಪಂಡಿತ ಎಂಬ ಭೇದಭಾವವಿಲ್ಲ.
ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ
ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿ
ಶ್ರೀರಾಮಚಂದ್ರಾಪುರಮಠ
No comments:
Post a Comment