Saturday, January 17, 2009

ಇಂದಿನ ಇತಿಹಾಸ History Today ಜನವರಿ 17

ಇಂದಿನ ಇತಿಹಾಸ

ಜನವರಿ 17

 ಭಾರತದಲ್ಲಿ ರಾಜಾಶ್ರಯ ಪಡೆದ ಸಂದರ್ಭದಲ್ಲಿ ತಾವು ರಾಜಾರೋಷವಾಗಿ ನಕಲಿ ನೋಟುಗಳ ಮುದ್ರಣ ಜಾಲ ಹರಡಿದ್ದನ್ನು ನೇಪಾಳದ ಪ್ರಧಾನಿ ಗಿರಿಜಾ ಪ್ರಸಾದ್ ಕೊಯಿರಾಲ ಅವರು ಕಂಟಿಪುರ ಟೆಲಿವಿಷನ್ನಿಗೆ ನೀಡಿದ ಸಂದರ್ಶನದಲ್ಲಿ ಸ್ವತಃ ಒಪ್ಪಿಕೊಂಡರು. ನೇಪಾಳ ವಿಮಾನಯಾನಕ್ಕೆ ಸೇರಿದ  ಪ್ರಯಾಣಿಕರ ವಿಮಾನ ಅಪಹರಣದ ರೂವಾರಿ ಕೂಡ ತಾನೇ ಎಂದು ಅವರು ಬಹಿರಂಗಪಡಿಸಿದರು.

2008: ಆಸ್ಟ್ರೇಲಿಯ ವಿರುದ್ಧ ಪರ್ತಿನಲ್ಲಿ ನಡೆದ ಮೂರನೇ  ಕ್ರಿಕೆಟ್ ಟೆಸ್ಟಿನಲ್ಲಿ 600 ವಿಕೆಟ್ ಪಡೆದ ವಿಶ್ವದ ಮೂರನೆಯ ಹಾಗೂ ಭಾರತದ ಪ್ರಪ್ರಥಮ  ಬೌಲರ್ ಎಂಬ ಹೆಗ್ಗಳಿಕೆಗೆ ಅನಿಲ್ ಕುಂಬ್ಳೆ  ಪಾತ್ರರಾದರು. ಆಂಡ್ರ್ಯೂ ಸೈಮಂಡ್ಸ್ ಅವರು ಹೊಡೆದ ಚೆಂಡನ್ನು  ರಾಹುಲ್ ದ್ರಾವಿಡ್ ಅವರು ಹಿಡಿದಾಗ ಕುಂಬ್ಳೆ ಅವರ ಈ ದಾಖಲೆ ಸ್ಥಾಪನೆಯಾಯಿತು. 124 ಪಂದ್ಯಗಳಲ್ಲಿ ಅನಿಲ್ ಕುಂಬ್ಳೆ ಅವರು 600 ವಿಕೆಟ್ ದಾಖಲೆ ಸ್ಥಾಪಿಸಿದರು. 600 ವಿಕೆಟುಗಳ ಗಡಿ  ದಾಟಿದ ಬೌಲರುಗಳ ಪೈಕಿ ಕುಂಬ್ಳೆ  ಮೂರನೆಯವರಾಗಿದ್ದು, ಶ್ರೀಲಂಕೆಯ ಮುತ್ತಯ್ಯ ಮುರಳೀಧರನ್ (723) ಅವರದ್ದು ಮೊದಲ ಸ್ಥಾನ, ಆಸ್ಟ್ರೇಲಿಯಾದ ಶೇನ್ ವಾರ್ನ್ (708) ಅವರದ್ದು ಎರಡನೇ  ಸ್ಥಾನ. ವಿಶೇಷವೆಂದರೆ ಕುಂಬ್ಳೆ ಬಹುತೇಕ ವಿಕೆಟ್ಟುಗಳನ್ನು ಆಸ್ಟ್ರೇಲಿಯಾದಿಂದ ಕಸಿದರು. ಅವರು 17 ಪಂದ್ಯಗಳಲ್ಲಿ 104 ವಿಕೆಟುಗಳನ್ನು ಆಸ್ಟ್ರೇಲಿಯಾದಿಂದಲೇ ಪಡೆದಿದ್ದರು.

2008: ಪ್ರತಿವರ್ಷ ಒಂದು ಲಕ್ಷ ಅಂಗವಿಕಲರಿಗೆ ಖಾಸಗಿ ರಂಗದಲ್ಲಿ ಉದ್ಯೋಗ ಒದಗಿಲು ಕೇಂದ್ರ ಸರ್ಕಾರವು 1800 ಕೋಟಿ ರೂಪಾಯಿಗಳ ಪ್ರೋತ್ಸಾಹಕರ ಯೋಜನೆಗೆ ಮಂಜೂರಾತಿ ನೀಡಿತು. ಸರ್ಕಾರಿ ರಂಗದಲ್ಲಿ ಉದ್ಯೋಗಾವಕಾಶಗಳು ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮ  ಕೈಗೊಂಡಿತು. ನೌಕರರ ಭವಿಷ್ಯ ನಿಧಿ ಮತ್ತು  ನೌಕರರ ರಾಜ್ಯ ವಿಮಾ ಯೋಜನೆಗಳಿಗೆ ಸರ್ಕಾರದಿಂದ ಹಣ ಪಾವತಿಗೆ ಅವಕಾಶ ಕಲ್ಪಿಸುವ ಈ ಯೋಜನೆಗೆ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ  ಒಪ್ಪಿಗೆ ನೀಡಿತು.

2008:  ಬಾಂಗ್ಲಾದೇಶದ ನೈಋತ್ಯ ಭಾಗದ ಕೋಳಿ ಫಾರಮ್ಮಿನಲ್ಲಿ ಕೋಳಿಗಳಿಗೆ ಜ್ವರ ತಗುಲಿದೆ ಎನ್ನುವುದು ದೃಢಪಟ್ಟ ನಂತರ ಪಶುವೈದ್ಯಕೀಯ ಇಲಾಖೆಯ ಹಾಗೂ ವೈದ್ಯಕೀಯ ಇಲಾಖೆಯ ಸಿಬ್ಬಂದಿ ಸುಮಾರು 1,700 ಕೋಳಿಗಳನ್ನು ನಾಶಪಡಿಸಿದರು. ಢಾಕಾದಿಂದ ಸುಮಾರು 275 ಕಿ. ಮೀ. ದೂರವಿರುವ ಜೆಸ್ಸೊರ್ ಕೋಳಿ ಫಾರಂನ ಕೋಳಿಗಳಿಗೆ ಜ್ವರ ತಗುಲಿರುವುದು ನಿಜ ಎಂದು ಪಶು ಸಂಗೋಪನೆ ಇಲಾಖೆಯ ವಕ್ತಾರರು ತಿಳಿಸಿದರು. ದೇಶದ ದಕ್ಷಿಣ ಭಾಗದ ಕಡಲ ತಡಿಯ ಜಿಲ್ಲೆ ಬರಿಶಾಯಿಯಲ್ಲೂ ಕೋಳಿಗಳನ್ನು ನಾಶ ಮಾಡಲಾಯಿತು. 2007 ರಲ್ಲಿ ಕೋಳಿಜ್ವರ ಹರಡಿದ್ದರಿಂದ ಬಾಂಗ್ಲಾದೇಶದಲ್ಲಿ ಸುಮಾರು ಮೂರು ಲಕ್ಷ ಕೋಳಿಗಳನ್ನು ನಾಶಪಡಿಸಲಾಗಿತ್ತು.

2008: ಭಾರತದಲ್ಲಿ ರಾಜಾಶ್ರಯ ಪಡೆದ ಸಂದರ್ಭದಲ್ಲಿ ತಾವು ರಾಜಾರೋಷವಾಗಿ ನಕಲಿ ನೋಟುಗಳ ಮುದ್ರಣ ಜಾಲ ಹರಡಿದ್ದನ್ನು ನೇಪಾಳದ ಪ್ರಧಾನಿ ಗಿರಿಜಾ ಪ್ರಸಾದ್ ಕೊಯಿರಾಲ ಅವರು ಕಂಟಿಪುರ ಟೆಲಿವಿಷನ್ನಿಗೆ ನೀಡಿದ ಸಂದರ್ಶನದಲ್ಲಿ ಸ್ವತಃ ಒಪ್ಪಿಕೊಂಡರು. ನೇಪಾಳ ವಿಮಾನಯಾನಕ್ಕೆ ಸೇರಿದ  ಪ್ರಯಾಣಿಕರ ವಿಮಾನ ಅಪಹರಣದ ರೂವಾರಿ ಕೂಡ ತಾನೇ ಎಂದು ಅವರು ಬಹಿರಂಗಪಡಿಸಿದರು. 1970ರ ಅವದಿಯಲ್ಲಿ ಕೊಯಿರಾಲ ಮತ್ತು ಅವರ ಪಕ್ಷದ ಹಲವರು ಭಾರತದಲ್ಲಿ ರಾಜಕೀಯ ಆಶ್ರಯ ಪಡೆದುಕೊಂಡಿದ್ದರು. ಆ ಸಂದರ್ಭದಲ್ಲೇ ತಮ್ಮ ಪಕ್ಷದ ಚಟುವಟಿಕೆಗಳಿಗೆ ಅಗತ್ಯ ಹಣವನ್ನು ತಾವು ಈ ಮೂಲಕ ವ್ಯವಸ್ಥೆ ಮಾಡಿಕೊಂಡಿದ್ದುದಾಗಿ ಕೊಯಿರಾಲ ಹೇಳಿದರು. 

2007: ಬೃಹತ್ ಬೆಂಗಳೂರು ಕೊನೆಗೂ ಅಸ್ತಿತ್ವಕ್ಕೆ ಬಂತು. ರಾಜ್ಯಪಾಲ ಟಿ.ಎನ್. ಚತುರ್ವೇದಿ ಅವರು ಜೆಡಿ (ಎಸ್) - ಬಿಜೆಪಿ ಸಮ್ಮಿಶ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಬೃಹತ್ ಬೆಂಗಳೂರು ಮಹಾನಗರ ಕುರಿತ ಅಧಿಸೂಚನೆಗೆ ಸಹಿ ಮಾಡಿದರು.

2007: ಖ್ಯಾತ ಅಂಕಣಕಾರ, ಪುಲಿಟ್ಜರ್ ಪ್ರಶಸ್ತಿ ವಿಜೇತ ವಿಡಂಬನಾತ್ಮಕ ಲೇಖನಗಳ ಕೃತಿಕಾರ ಆರ್ಟ್ ಬಕ್ ವಾಲ್ಡ್ (81) ವಾಷಿಂಗ್ಟನ್ನಿನಲ್ಲಿ ನಿಧನರಾಧರು. ಬಿಡಿ ಸುದ್ದಿ ಸಂಗ್ರಾಹಕರಾಗಿ ಸುದ್ದಿಮನೆಗೆ ಕಾಲಿಟ್ಟ ಬಕ್ ವಾಲ್ಡ್ 1982ರಲ್ಲಿ ಪುಲಿಟ್ಜರ್ ಪ್ರಶಸ್ತಿಗೆ ಪಾತ್ರರಾಗಿದ್ದರು. ತಮ್ಮ ಬರಹಗಳ ಮೂಲಕ ಐದು ದಶಕಗಳಿಗೂ ಹೆಚ್ಚು ಕಾಲ ಅಮೆರಿಕದ ಓದುಗರಿಗೆ ಆಪ್ತರಾಗಿದ್ದರು.

2007: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರನ್ನು ಬ್ರಿಟನ್ನಿನ ಚಾನೆಲ್ 4 ರಿಯಾಲಿಟಿ ಶೋ `ಸೆಲೆಬ್ರಿಟಿ ಬಿಗ್ ಬ್ರದರ್' ಕಾರ್ಯಕ್ರಮದಲ್ಲಿ ಸಹ ಸ್ಪರ್ಧಿಗಳು ಜನಾಂಗೀಯ ನಿಂದೆಗೆ ಗುರಿಪಡಿಸಿದ ಘಟನೆಗೆ ವಿಶ್ವವ್ಯಾಪಿ ಪ್ರತಿಭಟನೆ ವ್ಯಕ್ತವಾಯಿತು.

2007: ಎಂ. ವೀರಪ್ಪ ಮೊಯಿಲಿ ಅವರ `ತೆಂಬೆರೆ' ಕೃತಿಯ ಇಂಗ್ಲಿಷ್ ಅನುವಾದ `ದಿ ಎಡ್ಜ್ ಆಫ್ ಟೈಮ್' ಕೃತಿಯನ್ನು ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪ್ರೊ. ಗೋಪಿಚಂದ್ ನಾರಂಗ್ ನವದೆಹಲಿಯಲ್ಲಿ ಬಿಡುಗಡೆ ಮಾಡಿದರು. ವಿಮರ್ಶಕ ಸಿ.ಎನ್. ರಾಮಚಂದ್ರನ್ ಅವರು ಈ ಕೃತಿಯನ್ನು ಇಂಗ್ಲಿಷಿಗೆ ಅನುವಾದಿಸಿದ್ದಾರೆ.

2007: ಬಾಂಗ್ಲಾದೇಶದ ಉಸ್ತುವಾರಿ ಸರ್ಕಾರವು ಕಾರ್ಯಾಂಗದಿಂದ ನ್ಯಾಯಾಂಗವನ್ನು ಬೇರ್ಪಡಿಸಲು ಕ್ರಮ ಕೈಗೊಂಡಿದ್ದು, ಇದಕ್ಕೆ ಸಂಬಂಧಿಸಿದ ನಾಲ್ಕು ನಿಯಮಗಳನ್ನು ಪ್ರಕಟಿಸಿತು. 1971ರಲ್ಲಿ ಬಾಂಗ್ಲಾದೇಶ ಸ್ವತಂತ್ರಗೊಂಡ ಬಳಿಕ ಈವರೆಗೂ ಯಾವುದೇ ಸರ್ಕಾರ ಈ ಸಮಸ್ಯೆ ಬಗೆಹರಿಸಲು ಯತ್ನಿಸಿರಲಿಲ್ಲ.

2007: ಅಮೆರಿಕದಿಂದ ಖರೀದಿಸಿದ ಮೊತ್ತ ಮೊದಲ ಯುದ್ಧ ನೌಕೆ `ಯು ಎಸ್ ಎಸ್ ಟ್ರೆಂಟೋನ್'ನನ್ನು ಅಮೆರಿಕದ ವರ್ಜೀನಿಯಾದಲ್ಲಿನ ನೋರ್ ಫೆಕ್ ನೌಕಾನೆಲೆಯಲ್ಲಿ ಭಾರತದ ನೌಕಾಪಡೆಗೆ ಹಸ್ತಾಂತರಿಸಲಾಯಿತು. 17,000 ಟನ್ ತೂಕದ ಈ ಬೃಹತ್ ನೌಕೆಗೆ `ಐಎನ್ ಎಸ್ ಜಲಾಶ್ವ' ಎಂದು ನಾಮಕರಣ ಮಾಡಲಾಯಿತು.

2007: ಬಾಗ್ದಾದ್ ವಿಶ್ವವಿದ್ಯಾಲಯದ ಹೊರಭಾಗದಲ್ಲಿ ವಿದ್ಯಾರ್ಥಿಗಳು ಮನೆಗೆ ಮರಳುತ್ತಿದ್ದ ವೇಳೆಯಲ್ಲಿ ಎರಡು ಕಡೆ ಭಾರಿ ಬಾಂಬ್ ಸ್ಫೋಟಗೊಂಡ ಪರಿಣಾಮವಾಗಿ 70 ಜನ ಮೃತರಾಗಿ, ಹಲವರು ಗಾಯಗೊಂಡರು. ಶಿಯಾ ಸಮುದಾಯದ ಮೇಲೆ ನಡೆದ ಇತ್ತೀಚಿನ ದಾಳಿಗಳಲ್ಲಿ ಇದೇ ಅತ್ಯಂತ ಭೀಕರ ದಾಳಿ. 2006ರ ವರ್ಷದಲ್ಲಿ ಇರಾಕಿನಲ್ಲಿ ಹಿಂಸಾಚಾರಕ್ಕೆ ಒಟ್ಟು 34,000 ನಾಗರಿಕರು ಬಲಿಯಾದರು ಎಂದು ವಿಶ್ವಸಂಸ್ಥೆ ವರದಿಯೊಂದು ಪ್ರಕಟಿಸಿದ ಮರುದಿನವೇ ಈ ಭೀಕರ ಸ್ಫೋಟ ಸಂಭವಿಸಿತು. ಇರಾಕಿ ಸರ್ಕಾರ ಸದ್ದಾಂ ಹುಸೇನ್ ಅವರ ಸಹಚರರನ್ನು ಗಲ್ಲಿಗೇರಿಸಿದ ಒಂದು ದಿನದ ಬಳಿಕ ಈ ಹಿಂಸಾಚಾರ ಭುಗಿಲೆದ್ದಿತು.

2006: ಬಹುಕೋಟಿ ರೂಪಾಯಿ ನಕಲಿ ಛಾಪಾಕಾಗದ ಹಗರಣದ ಮುಖ್ಯ ರೂವಾರಿ ಅಬ್ದುಲ್ ಕರೀಂ ತೆಲಗಿ ಮತ್ತು ಆತನ ಇಬ್ಬರು ಸಹಚರರಿಗೆ ಮುಂಬೈಯ ವಿಶೇಷ ನ್ಯಾಯಾಲಯವು 10 ವರ್ಷಗಳ ಕಠಿಣ ಶಿಕ್ಷೆ ವಿಧಿಸಿತು. 1995ರಲ್ಲಿ 17 ಲಕ್ಷ ರೂಪಾಯಿ ಮೌಲ್ಯದ ನಕಲಿ ಛಾಪಾ ಕಾಗದ ಮಾರಾಟ ಮಾಡಿದ ಪ್ರಕರಣದಲ್ಲಿ ಆರೋಪಿಗಳಿಗೆ ತಲಾ 50,000 ರೂಪಾಯಿ ದಂಡವನ್ನೂ ವಿಧಿಸಲಾಯಿತು.

2006: ವೋಲ್ವೊ ಹೆಸರಿನ ಐಷಾರಾಮಿ ಬಸ್ಸುಗಳನ್ನು ಬೆಂಗಳೂರಿನ ರಸ್ತೆಗಳಿಗೆ ಇಳಿಸುವ ಮೂಲಕ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು (ಬಿಎಂಟಿಸಿ) ತನ್ನ ಇತಿಹಾಸದಲ್ಲಿ ಇನ್ನೊಂದು ಮಹತ್ವದ ಮೈಲಿಗಲ್ಲನ್ನು ಸೇರ್ಪಡೆ ಮಾಡಿಕೊಂಡಿತು.

1991: ಬ್ರಿಟಿಷ್, ಸೌದಿ ಮತ್ತು ಅಮೆರಿಕ ರಾಷ್ಟ್ರಗಳ ಮಿತ್ರ ಪಡೆಗಳ ದಾಳಿಯೊಂದಿಗೆ ಕೊಲ್ಲಿಯುದ್ಧ ಆರಂಭವಾಯಿತು.ಕುವೈತ್ ವಿಮೋಚನೆಗಾಗಿ ಈ ದಾಳಿ ನಡೆಯಿತು.

1954: ರಾಷ್ಟ್ರ ಮಟ್ಟದ ತಬಲಾ ವಾದಕ ಪಂಡಿತ ರಘುನಾಥ ನಾಕೋಡ್ ಅವರು ಸಂಗೀತಗಾರ ಅರ್ಜುನ್ ಸಾ ನಾಕೋಡ್- ಅನಸೂಯಾ ನಾಕೋಡ್ ದಂಪತಿಯ ಮಗನಾಗಿ ಹುಬ್ಬಳ್ಳಿಯ ಸಂಗೀತಗಾರರ ಮನೆಯಲ್ಲಿ ಜನಿಸಿದರು.

1941: ಸುಭಾಶ್ ಚಂದ್ರ ಬೋಸ್ ಅವರು ಕಲ್ಕತ್ತಾದಲ್ಲಿ (ಈಗಿನ ಕೋಲ್ಕತ್ತಾ) ತಲೆಮರೆಸಿಕೊಂಡರು. ನಂತರ ಅವರು ಪ್ರತ್ಯಕ್ಷರಾದದ್ದು ಮಾಸ್ಕೊದಲ್ಲಿ.

1920: ಭಾರತದ ಖ್ಯಾತ ವಕೀಲ ನಾನಿ ಪಾಲ್ಖಿವಾಲಾ ಹುಟ್ಟಿದ ದಿನ.

1917: `ಎಂಜಿಆರ್' ಎಂದೇ ಖ್ಯಾತರಾದ ತಮಿಳು ಚಿತ್ರನಟ, ತಮಿಳುನಾಡಿನ ಮುಖ್ಯಮಂತ್ರಿ ಮರುಡು ಗೋಪಾಲನ್ ರಾಮಚಂದ್ರನ್ (1917-1987) ಹುಟ್ಟಿದ ದಿನ. 1972ರಲ್ಲಿ ಇವರು ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ) ಪಕ್ಷವನ್ನು ಸ್ಥಾಪಿಸಿದರು.

1905: ಭಾರತದ ಖ್ಯಾತ ಗಣಿತ ತಜ್ಞ ದತ್ತಾತ್ರೇಯ ರಾಮಚಂದ್ರ ಕಾಪ್ರೇಕರ್ (1905-1988) ಹುಟ್ಟಿದ ದಿನ. `6174' ಸಂಖ್ಯೆಗಾಗಿ ವಿಶ್ವಖ್ಯಾತಿ ಪಡೆದಿರುವ ಇವರ ಗೌರವಾರ್ಥ ಈ ಸಂಖ್ಯೆಯನ್ನು `ಕಾಪ್ರೇಕರ್ ಕಾನ್ ಸ್ಟಾಂಟ್' ಎಂದೇ ಹೆಸರಿಸಲಾಗಿದೆ. 

1863: ರಷ್ಯಾದ ನಟ, ನಿರ್ದೇಶಕ, ನಿರ್ಮಾಪಕ ಕೊನ್ ಸ್ಟಾಂಟಿನ್ ಸೆರ್ಗಿಯೆವಿಚ್ ಸ್ಟಾನಿಸ್ಲಾವ್ ಸ್ಕಿ (1863-1938) ಹುಟ್ಟಿದ ದಿನ. ಈತ `ಸ್ಟಾನಿಸ್ಲಾವ್ ಸ್ಕಿ ಸಿಸ್ಟಮ್' ಎಂಬ ಹೆಸರಿನ ವಿಶಿಷ್ಟ ನಟನೆಗಾಗಿ ಖ್ಯಾತರಾಗಿದ್ದಾರೆ.

1863: ಬ್ರಿಟಿಷ್ ಪ್ರಧಾನಿಯಾಗಿದ್ದ ಡೇವಿಡ್ ಲಾಯ್ಡ್ ಜಾರ್ಜ್ (1863-1945) ಹುಟ್ಟಿದ ದಿನ. 1916-1922ರ ಅವದಿಯಲ್ಲಿ ಇವರು ಬ್ರಿಟನ್ನಿನ ಪ್ರಧಾನಿಯಾಗಿದ್ದರು.

1706: ಅಮೆರಿಕಾದ ಮುತ್ಸದ್ದಿ, ತತ್ವಜ್ಞಾನಿ, ವಿಜ್ಞಾನಿ ಬೆಂಜಮಿನ್ ಫ್ರಾಂಕ್ಲಿನ್ (1706-1790) ಹುಟ್ಟಿದ ದಿನ. ಈತ ಸ್ಟೌವ್, ಲೈಟ್ನಿಂಗ್ ಕಂಡಕ್ಟರ್, ಬೈಫೋಕಲ್ ಕನ್ನಡಕಗಳನ್ನು ಸಂಶೋಧಿಸಿದ ವ್ಯಕ್ತಿ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

1 comment:

Anonymous said...

ದಿನದಲ್ಲಿ ಸೂರ್ಯ ಉದಯಿಸುತ್ತಿದ್ದಷ್ಟೆ ನಿಖರವಾಗಿ update ಆಗುತ್ತಿದ್ದ ಈ ಬ್ಲಾಗು ಏಕೆ ಜನವರಿ 17ರಿಂದ ಸುಮ್ಮನಿದೆ?? ನಿಮ್ಮ ಬ್ಲಾಗಿನ ಸುದ್ದಿಗಳಿಗಾಗಿ ಹಲವು ಜನರು ಕಾಯುತ್ತಿದ್ದಾರೆ. ಎಲ್ಲಿರುವಿರಿ??? ಬೇಗನೆ ನಿಮ್ಮ ಬ್ಲಾಗನ್ನು update ಮಾಡಬೇಕಾಗಿ ಸವಿನಯ ಕೋರಿಕೆ
ಗಿರೀಶ ಕೆ.ಎಸ್.
girisha_giri123@yahoo.co.in

Advertisement