My Blog List

Friday, February 27, 2009

ಇಂದಿನ ಇತಿಹಾಸ History Today ಫೆಬ್ರುವರಿ 24

ಇಂದಿನ ಇತಿಹಾಸ  

ಫೆಬ್ರುವರಿ 24

ಆರು ತಿಂಗಳ ಅವಧಿಯಲ್ಲಿ ದೇಶದ 800 ರೈತರು ಆತ್ಮಹತ್ಯೆ ಮಾಡಿಕೊಂಡರು. ಇದರಲ್ಲಿ ಮಹಾರಾಷ್ಟ್ರ ಅತಿ ಹೆಚ್ಚು  ಅಂದರೆ 607 ರೈತರನ್ನು ಕಳೆದುಕೊಂಡಿತು. ಆಂಧ್ರದ 114 ಮತ್ತು ಕರ್ನಾಟಕದ 73 ರೈತರು ಆತ್ಮಹತ್ಯೆ ಮಾಡಿಕೊಂಡರು. ಕೇರಳದಲ್ಲಿ 13 ರೈತರು ನೇಣಿಗೆ ಶರಣಾದರು ಎಂದು ವರದಿಯೊಂದು ಬಹಿರಂಗಪಡಿಸಿತು.

2008: ಆರು ತಿಂಗಳ ಅವಧಿಯಲ್ಲಿ ದೇಶದ 800 ರೈತರು ಆತ್ಮಹತ್ಯೆ ಮಾಡಿಕೊಂಡರು. ಇದರಲ್ಲಿ ಮಹಾರಾಷ್ಟ್ರ ಅತಿ ಹೆಚ್ಚು  ಅಂದರೆ 607 ರೈತರನ್ನು ಕಳೆದುಕೊಂಡಿತು. ಆಂಧ್ರದ 114 ಮತ್ತು ಕರ್ನಾಟಕದ 73 ರೈತರು ಆತ್ಮಹತ್ಯೆ ಮಾಡಿಕೊಂಡರು. ಕೇರಳದಲ್ಲಿ 13 ರೈತರು ನೇಣಿಗೆ ಶರಣಾದರು ಎಂದು ವರದಿಯೊಂದು ಬಹಿರಂಗಪಡಿಸಿತು. ಪಂಜಾಬ್, ಹರಿಯಾಣ, ದೆಹಲಿ, ಗುಜರಾತ್, ರಾಜಸ್ಥಾನ, ಗೋವಾ ರಾಜ್ಯಗಳು ಈ ಸಂಬಂಧ ಸಮರ್ಪಕ ಮಾಹಿತಿ ನೀಡಿಲ್ಲ ಎಂದು ಕೇಂದ್ರ ಕೃಷಿ ಸಚಿವಾಲಯ ಹೇಳಿತು. ಪರಿಹಾರ ಕ್ರಮವಾಗಿ ಕೇಂದ್ರ ಸರ್ಕಾರ ಈತನಕ ಆಂಧ್ರದ 16 ಜಿಲ್ಲೆಗಳಿಗೆ 9650 ಕೋಟಿ ಬಿಡುಗಡೆ  ಮಾಡಿದೆ. ಕರ್ನಾಟಕದ 6 ಜಿಲ್ಲೆಗಳಲ್ಲಿ 2389.64 ಕೋಟಿ, ಕೇರಳದ 3 ಜಿಲ್ಲೆಗಳಲ್ಲಿ 765.24 ಕೋಟಿ ಮತ್ತು ಮಹಾರಾಷ್ಟ್ರದ 6 ಜಿಲ್ಲೆಗಳಲ್ಲಿ ರೂ 3879.26 ಕೋಟಿ ಹಣ ಕೇಂದ್ರದಿಂದ ಬಿಡುಗಡೆ ಆಗಿದೆ ಎಂದು ವರದಿ ಹೇಳಿತು.

2008: ಕರ್ನಾಟಕ ರಾಜ್ಯ ಲಾರಿ ಮಾಲೀಕರು ಹಾಗೂ ಏಜೆಂಟರ ಸಂಘಗಳ ಒಕ್ಕೂಟ ಹಾಗೂ ಇತರೆ ಸಂಘಟನೆಗಳ ಕರೆಯ ಮೇರೆಗೆ ಆರಂಭವಾದ ಅನಿರ್ದಿಷ್ಟಾವಧಿ ಮುಷ್ಕರ ಮೂರನೇ ದಿನಕ್ಕೆ ಕಾಲಿಟ್ಟಿತು.

 2008: ಕರ್ತವ್ಯ ನಿರ್ವಹಿಸುವ ವೈದ್ಯರಿಗೆ ಸೂಕ್ತ ಭದ್ರತೆ ನೀಡಲಾಗುತ್ತದೆ ಎಂದು ರಾಜ್ಯಪಾಲರ ಸಲಹೆಗಾರ ಪಿ.ಕೆ.ಎಚ್. ತರಕನ್ ಅವರು ಭರವಸೆ ನೀಡಿದ ಹಿನ್ನೆಲೆಯಲ್ಲಿ ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನಾ ಕೇಂದ್ರದ (ಬಿಎಂಸಿಆರ್ಐ) ವ್ಯಾಪ್ತಿಯ ಐದು ಆಸ್ಪತ್ರೆಗಳ ಕಿರಿಯ ವೈದ್ಯರು ತಮ್ಮ ಮುಷ್ಕರವನ್ನು ಹಿಂತೆಗೆದುಕೊಂಡರು.

2008: ಮರಾಠಿ ಮಾತನಾಡುವವರು ಹೆಚ್ಚಿನ ಸಂಖ್ಯೆಯಲ್ಲಿರುವ ಕರ್ನಾಟಕ-ಮಹಾರಾಷ್ಟ್ರ ಗಡಿಯ 814 ಗ್ರಾಮಗಳು ಕರ್ನಾಟಕಕ್ಕೇ ಸೇರುವುದು ಸೂಕ್ತ ಎಂಬುದನ್ನು ರಾಜ್ಯ ಪುನರ್ ವಿಂಗಡಣಾ ಆಯೋಗ (ಎಸ್ ಆರ್ ಸಿ) ಸಮರ್ಥಿಸಿತ್ತು ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟಿಗೆ ಸಲ್ಲಿಸಿದ ಪ್ರಮಾಣಪತ್ರದಲ್ಲಿ ತಿಳಿಸಿತು. ಈ ಹಳ್ಳಿಗಳಲ್ಲಿ ಇರುವ ಜನರ ಒಳಿತಿನ ದೃಷ್ಟಿಯಿಂದ ಇವು ಕರ್ನಾಟಕಕ್ಕೇ ಸೇರಬೇಕು ಎನ್ನುವುದು ಆಯೋಗದ ಸ್ಪಷ್ಟ ಅಭಿಪ್ರಾಯವಾಗಿತ್ತು ಎಂದೂ ಕೇಂದ್ರ ಹೇಳಿತು. 2006ರ ನವೆಂಬರ್ 16ರಂದು ಅಂದಿನ ಸಾಲಿಸಿಟರ್ ಜನರಲ್ ಜಿ.ಇ. ವಹನ್ವತಿ ಅವರು ಸಿದ್ಧಪಡಿಸಿದ ದಾಖಲೆಗಳ ಆಧಾರದಲ್ಲಿ ಕೇಂದ್ರ ಗೃಹ ಸಚಿವಾಲಯದ ನಿರ್ದೇಶಕರು ಸಲ್ಲಿಸಿದ ಪ್ರಮಾಣಪತ್ರದಲ್ಲಿ ಈ ಅಂಶಗಳನ್ನು ಸ್ಪಷ್ಟಪಡಿಸಲಾಯಿತು. ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದವು ನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್ ಅವರ ಪೀಠದ ಮುಂದೆ ಮಾರ್ಚ್ 25ರಂದು ವಿಚಾರಣೆಗೆ ಬರುವ ಹಿನ್ನೆಲೆಯಲ್ಲಿ ಈ ಪ್ರಮಾಣಪತ್ರಕ್ಕೆ ಹೆಚ್ಚಿನ ಮಹತ್ವ ಬಂದಿತು.

2008: ಜರ್ಮನಿಯ ನಿರಂಕುಶ ದೊರೆ ರಕ್ತಪಿಪಾಸು ಅಡಾಲ್ಫ್ ಹಿಟ್ಲರ್ ಒಬ್ಬ ಚಿತ್ರ ಕಲಾವಿದನಾಗಿಯೂ ತನ್ನ ರಸಿಕತೆ ಮೆರೆದಿದ್ದ ಎಂಬುದಾಗಿ ನಾರ್ವೆ ಹೇಳಿತು. ರಕ್ತಕಾರಂಜಿಯ ವರ್ಣಗಳುಳ್ಳ ವ್ಯಂಗ್ಯ ಚಿತ್ರಗಳು ಹಾಗೂ ಅಣಕು ಚಿತ್ರಗಳನ್ನು ಆತ ರಚಿಸಿದ್ದ. ಹಿಟ್ಲರ್ ರಚಿಸಿದ ಚಿತ್ರಗಳು ತನ್ನ ಬಳಿ ಇವೆ ಎಂದು ನಾರ್ವೆ ಯುದ್ಧ ವಸ್ತುಸಂಗ್ರಹಾಲಯದ ನಿರ್ದೇಶಕ ಹ್ಯಾಕ್ ವಾಗ್ ಬಹಿರಂಗಪಡಿಸಿದರು.

2008: ವಿಪ್ರೊ ಲಿಮಿಟೆಡ್, ತನ್ನ ಜಾಗತಿಕ ಸೇವಾ ಕೇಂದ್ರಗಳನ್ನು ಮಲೇಷ್ಯಾದ ಕ್ವಾಲಾಲಂಪುರದಲ್ಲಿ ಆರಂಭಿಸಿತು. ಏಷ್ಯಾ ಪೆಸಿಫಿಕ್ ವಿಪ್ರೊದ ಪ್ರಮುಖ ಮಾರುಕಟ್ಟೆಯಾಗಿರುವುದರಿಂದ ಈ ಕೇಂದ್ರ ವಿವಿಧ ಭಾಷೆಗಳಲ್ಲಿ ಗ್ರಾಹಕರಿಗೆ ಸೇವೆ ಒದಗಿಸುವುದು ಎಂದು ವಿಪ್ರೊ ಇನ್ಫೊಟೆಕ್ ನ ವೃತ್ತಿಸೇವಾ ವಿಭಾಗದ ಮುಖ್ಯಸ್ಥ ತಾಂಡವ ಮೂರ್ತಿ ತಿಳಿಸಿದರು.

2007: ಮಣಿಪುರದ ಬಿಷನ್ ಪುರ ಜಿಲ್ಲೆಯಲ್ಲಿ ಉಗ್ರಗಾಮಿಗಳು ಚುನಾವಣಾ ಕರ್ತವ್ಯದಲ್ಲಿದ್ದ ಬೆಂಗಾವಲು ಪಡೆಯ ಮೇಲೆ ದಾಳಿ ನಡೆಸಿ ಕನಿಷ್ಠ 16 ಯೋಧರನ್ನು ಹತ್ಯೆ ಮಾಡಿ, ಐವರನ್ನು ಗಾಯಗೊಳಿಸಿದರು.

2007: ಶಿರಸಿಯ ಯಕ್ಷ ಋಷಿ ಹೊಸ್ತೋಟ ಮಂಜುನಾಥ ಭಾಗವತರನ್ನು ಅಗ್ನಿ ಸೇವಾ ಟ್ರಸ್ಟ್ ನೀಡುವ ಪ್ರತಿಷ್ಠಿತ ಪರಮದೇವ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು. ಯಕ್ಷಗಾನಕ್ಕಾಗಿ ತಮ್ಮ ಜೀವಮಾನವನ್ನೇ ಮುಡಿಪಾಗಿಟ್ಟ ಹೊಸ್ತೋಟ ಅವರ ರಾಮಾಯಣ ಹಾಗೂ ಮಹಾಭಾರತ ಮಹಾಕಾವ್ಯಗಳನ್ನು ಆಧರಿಸಿ ಸುಮಾರು 95ಕ್ಕೂ ಹೆಚ್ಚು ಪ್ರಸಂಗ, ಪರಿಸರ ಹಾಗೂ ಸಾಮಾಜಿಕ ವಿಷಯಕ್ಕೆ ಸಂಬಂಧಿಸಿದ 150ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.

2007: ಕುಮಟಾದ ಗೌರೀಶ ಕಾಯ್ಕಿಣಿ ಪ್ರತಿಷ್ಠಾನದ 2006ನೇ ಸಾಲಿನ ಪ್ರಶಸ್ತಿಗೆ ಕಥೆಗಾರ ಕುಂ. ವೀರಭದ್ರಪ್ಪ ಅವರನ್ನು ಆಯ್ಕೆ ಮಾಡಲಾಯಿತು.

2007: ಬೆಂಗಳೂರಿನಲ್ಲಿ ನಡೆದ ಸರ್ವಪಕ್ಷಗಳ ಮುಖಂಡರ ಸಭೆಯು ಕಾವೇರಿ ನ್ಯಾಯಮಂಡಳಿಯ ಅಂತಿಮ ತೀರ್ಪನ್ನು ಸಂಪೂರ್ಣವಾಗಿ ತಿರಸ್ಕರಿಸಿತು. ತಜ್ಞರ ಜೊತೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲು ಸಭೆಯು ರಾಜ್ಯ ಸರ್ಕಾರಕ್ಕೆ ಸಲಹೆ ಮಾಡಿತು.

2007: ಫನಾ ಮತ್ತು ಧೂಮ್-2 ಬಾಲಿವುಡ್ ಚಿತ್ರಗಳಲ್ಲಿನ ಉತ್ತಮ ಅಭಿನಯಕ್ಕಾಗಿ ಕಾಜೋಲ್ ಮತ್ತು ಹೃತಿಕ್ ರೋಷನ್ ಅವರಿಗೆ ಮುಂಬೈಯಲ್ಲಿ ನಡೆದ ಸಮಾರಂಭದಲ್ಲಿ ಫಿಲಂಫೇರ್ ಶ್ರೇಷ್ಠ ನಟಿ ಮತ್ತು ನಟ ಪ್ರಶಸ್ತಿ ನೀಡಲಾಯಿತು.

2007: ಜಾರ್ಖಂಡ್ ರಾಜ್ಯವು ರಾಜಕೀಯ ಕ್ಷೇತ್ರದಲ್ಲಿ 2002ರಿಂದ 2007ರವರೆಗಿನ ಅವದಿಯಲ್ಲಿ ಸುಮಾರು 156ಕ್ಕೂ ಹೆಚ್ಚು ದಾಖಲೆಗಳನ್ನು ಮಾಡಿದ್ದಕ್ಕಾಗಿ ಲಿಮ್ಕಾ ದಾಖಲೆ ಪುಸ್ತಕಕ್ಕೆ ಸೇರ್ಪಡೆಯಾಯಿತು. ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ಸಂಪಾದಕ ವಿಜಯ ಘೋಷ್ ಅವರ ಸಹಿಯನ್ನು ಒಳಗೊಂಡ ದಾಖಲೆ ಸಂಬಂಧಿ ಪ್ರಮಾಣಪತ್ರವನ್ನು ಮುಖ್ಯಮಂತ್ರಿ ಮಧು ಕೋಡಾ ಅವರಿಗೆ ಲಿಮ್ಕಾ ಪ್ರತಿನಿಧಿಗಳು ನೀಡಿದರು. `ಜಾರ್ಖಂಡಿನ ಮಧು ಕೋಡಾ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಮೊತ್ತ ಮೊದಲ ಸ್ವತಂತ್ರ ಅಭ್ಯರ್ಥಿ. 2006ರ ಸೆಪ್ಟೆಂಬರ್ 18ರಂದು ಅವರು ಯುಪಿಎ ಮತ್ತು ನಾಲ್ವರು ಸ್ವತಂತ್ರ ಸದಸ್ಯರ ಬೆಂಬಲದೊಂದಿಗೆ ರಚನೆಯಾದ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು' ಎಂದು ಲಿಮ್ಕಾ ಪ್ರತಿನಿಧಿಗಳು ಕೋಡಾ ಅವರಿಗೆ ನೀಡಿದ ಪ್ರಮಾಣ ಪತ್ರ ಹೇಳಿದೆ.

2006: ಸಂಸ್ಕತ ಭಾರತಿ ಸಂಘಟನೆಯು ಸಂಸ್ಕತ ಸಂಭಾಷಣಾ ಶಿಬಿರ ವರ್ಷವನ್ನು ಆರಂಭಿಸಿತು. (24 ಫೆಬ್ರುವರಿ 2006ರಿಂದ 2007 ಮೇವರೆಗೆ)

2006: ಫಿಲಿಪ್ಪೀನ್ಸ್ ಅಧ್ಯಕ್ಷೆ ಗ್ಲೋರಿಯಾ ಅರೋಯೋ ಅವರು ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿ ತಮ್ಮ ಸರ್ಕಾರ ಉರುಳಿಸಲು ಸಂಚು ರೂಪಿಸಿದ ಆಪಾದನೆಯಲ್ಲಿ ಸೇನಾಪಡೆಯ ಪ್ರಮುಖ ಅಧಿಕಾರಿಗಳನ್ನು ಬಂಧಿಸಲು ಆಜ್ಞಾಪಿಸಿದರು.

2006: ಭಾರತದ ಖ್ಯಾತ ಪರಮಾಣು ವಿಜ್ಞಾನಿ ಗೋವರ್ಧನ್ ಮೆಹ್ತಾ ಅವರಿಗೆ ತಮ್ಮ ದೇಶದಲ್ಲಿ ಸಂಚರಿಸಲು ಅಮೆರಿಕ ವಿದೇಶಾಂಗ ಸಚಿವಾಲಯ ಅನುಮತಿ ನೀಡಿತು. ಗೋವರ್ಧನ್ ಅವರಿಗೆ ವೀಸಾ ನಿರಾಕರಿಸಲಾಗಿದೆ ಎಂಬ ವರದಿಗಳಿಂದ ಉಂಟಾಗಿದ್ದ ಬಿಕ್ಕಟ್ಟು ಇದರಿಂದಾಗಿ ಪರಿಹಾರಗೊಂಡಿತು.

2006: ಗೋಧ್ರಾ ರೈಲು ದುರಂತದ ನಂತರ ಸಂಭವಿಸಿದ ಹಿಂಸಾಚಾರದಲ್ಲಿ ಭಸ್ಮವಾದ ಬೆಸ್ಟ್ ಬೇಕರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈಯ ಸೆಷನ್ಸ್ ನ್ಯಾಯಾಲಯವು 9 ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿತು. ದುಷ್ಕರ್ಮಿಗಳು 2002ರ ಮಾರ್ಚ್ 1ರಂದು ವಡೋದರಾದಲ್ಲಿನ ಬೆಸ್ಟ್ ಬೇಕರಿಗೆ ಬೆಂಕಿ ಹಚ್ಚಿದಾಗ 14 ಜನ ಸಜೀವ ದಹನಗೊಂಡಿದ್ದರು.

2006: ಅನುವಾದ ಅಕಾಡೆಮಿಯು ತಮಗೆ ನೀಡಿದ ಪ್ರಶಸ್ತಿಯನ್ನು ವಾಪಸ್ ಮಾಡಿ ದೇ. ಜವರೇಗೌಡ ಅವರು ಅಕಾಡೆಮಿ ಅಧ್ಯಕ್ಷ ಡಾ. ಪ್ರಧಾನ ಗುರುದತ್ತ ಅವರಿಗೆ ಪತ್ರ ಬರೆದರು. ಅಕಾಡೆಮಿ ಸ್ಥಾಪನೆಗೆ 30 ವರ್ಷ ಏಕಾಂಗಿಯಾಗಿ ದುಡಿದಿದ್ದೇನೆ. ಈಗ ಪ್ರಶಸ್ತಿ ಒಪ್ಪಿಕೊಂಡರೆ ಟೀಕೆ, ವಿಮರ್ಶೆ ಶುರುವಾಗುತ್ತದೆ. ಆದ್ದರಿಂದ ಪ್ರಮಾಣಪತ್ರ ಸಾಕು, ಪ್ರಶಸ್ತಿ ಬೇಡ ಎಂದು ದೇಜಗೌ ತಿಳಿಸಿದರು. 

1948: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಜನ್ಮದಿನ.

1946: ಜುವಾನ್ ಪೆರೋನ್ ಅವರು ಅರ್ಜೆಂಟೀನಾದ ಅಧ್ಯಕ್ಷರಾಗಿ ಆಯ್ಕೆಯಾದರು.

1945: ಈಜಿಪ್ಟಿನ ಪ್ರಧಾನಿ ಮಹೆರ್ ಪಾಶಾ ಅವರನ್ನು ಸಂಸತ್ತಿನಲ್ಲಿ ಜರ್ಮನಿ, ಮತ್ತು ಜಪಾನ್ ವಿರುದ್ಧದ ಸಮರಘೋಷಣೆ ಓದುತ್ತಿದ್ದಾಗ ಗುಂಡು ಹೊಡೆದು ಕೊಲ್ಲಲಾಯಿತು.

1942: ಭಾರತೀಯ ಸಂಜಾತೆ ಗಾಯತ್ರಿ ಚಕ್ರವರ್ತಿ ಸ್ಪಿವಕ್ ಜನಿಸಿದರು. ಈಕೆ ಲೇಖಕಿ, ಸಾಹಿತ್ಯ ವಿಮರ್ಶಕಿ, ಹಾಗೂ ಭಾಷಾಂತರಕಾರ್ತಿಯಾಗಿ ಖ್ಯಾತಿ ಗಳಿಸಿದರು. ತತ್ವಜ್ಞಾನಿ ಜಾಕಿಸ್ ಡೆರ್ರಿಡಾ ಪುಸ್ತಕವನ್ನು ಇವರು ಇಂಗ್ಲಿಷಿಗೆ ಭಾಷಾಂತರಿಸಿದ್ದರು.

1938: ಟೂಥ್ ಬ್ರಶ್ ಗಳು ನ್ಯೂಜೆರ್ಸಿಯ ಅರ್ಲಿಂಗ್ಟನ್ನಿನಲ್ಲಿ  ಮೊತ್ತ ಮೊದಲ ಬಾರಿಗೆ ವಾಣಿಜ್ಯ ಮಟ್ಟದಲ್ಲಿ ಉತ್ಪಾದನೆಯಾದವು.

1936: ಖ್ಯಾತ ಮರಾಠಿ ಕವಿ ಲಕ್ಷ್ಮೀಬಾಯಿ ತಿಲಕ್ ನಿಧನರಾದರು.

1934: ಬೆಂಡೆಟ್ಟೋ `ಬೆಟ್ಟಿನೊ' ಕ್ರಾಕ್ಸಿ ಹುಟ್ಟಿದ ದಿನ. ಇಟಲಿಯ ರಾಜಕಾರಣಿಯಾದ ಇವರು 1983-87ರ ಅವಧಿಯಲ್ಲಿ ರಾಷ್ಟ್ರದ ಮೊತ್ತ ಮೊದಲ ಸಮಾಜವಾದಿ ಪ್ರಧಾನಿಯಾಗಿದ್ದರು.

1920: ನಾನ್ಸಿ ಆಸ್ಟೊರ್ ಜನಿಸಿದರು. ಈಕೆ ಬ್ರಿಟಿಷ್ ಸಂಸತ್ತನ್ನು  ಉದ್ದೇಶಿಸಿ ಮಾತನಾಡಿದ ಪ್ರಥಮ ಮಹಿಳೆ. 

1825: ಇಂಗ್ಲಿಷ್ ಸಂಪಾದಕ ಥಾಮಸ್ ಬೌಲ್ಡರ್ (1754-1825) ನಿಧನರಾದರು. ಷೇಕ್ಸ್ ಪಿಯರ್, ಓಲ್ಡ್ ಟೆಸ್ಟಾಮೆಂಟ್ ಸೇರಿದಂತೆ ಹಲವು ಕೃತಿಗಳನ್ನು ಇವರು ಸಂಪಾದಿಸಿದ್ದರು.

1582: ಪೋಪ್ ಗ್ರೆಗೊರಿ ಅವರು `ಗ್ರೆಗೋರಿಯನ್ ಕ್ಯಾಲೆಂಡರ್' ಗೆ ಸಮ್ಮತಿ ನೀಡಿ ಅಧಿಕೃತ ಪ್ರಕಟಣೆ ನೀಡಿದರು. ಈ ಕ್ಯಾಲೆಂಡರ್ ಇಟಲಿ ಮತ್ತು ಸ್ಪೇನಿನಲ್ಲಿ ಅಕ್ಟೋಬರ್ 15ರಂದು ಅನುಷ್ಠಾನಕ್ಕೆ ಬಂದಿತು. 

1304: ಇಬ್ನ್ ಬಟೂಟ ಹುಟ್ಟಿದ. (1304-1368/69) ಈತ  ಮಧ್ಯಯುಗದ ಖ್ಯಾತ ಅರಬ್ ಪ್ರವಾಸಿ ಎಂಬುದಾಗಿ ಹೆಸರು ಪಡೆದ. 

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement