My Blog List

Thursday, March 5, 2009

ಸಮುದ್ರ ಮಥನ 23: ಹೊಸವರ್ಷದ ಆಶಯ, ಶುಭಾಶಯ

ಸಮುದ್ರ ಮಥನ 23:

 ಹೊಸವರ್ಷದ ಆಶಯ, ಶುಭಾಶಯ

ಹಬ್ಬ-ಹರಿದಿನಗಳಂದು ಆ ಭಾವ ಅತಿಶಯವಾಗಿ ತನ್ನನ್ನು ತಾನು ವ್ಯಕ್ತಪಡಿಸಿಕೊಳ್ಳುತ್ತದೆ. ಅದಕ್ಕಾಗಿ, ಆ ದಿನಗಳನ್ನು 'ಪರ್ವ'ಗಳೆಂದು (ಕಬ್ಬಿನ ಗಿಣ್ಣು) ಉಲ್ಲೇಖಿಸುತ್ತಾರೆ. ಹಾಗೆ, ನಮ್ಮದು ಸದಾಶಯಕ್ಕಾಗಿ ಸಮರ್ಪಿಸಿಕೊಳ್ಳುವ ಯಜ್ಞಮಯ ಬದುಕು.

ಹೊಸತೆಂದರೆ ಖುಷಿ. ಆ ಹೊಸತಿನಲ್ಲಿ ನಾವೂ ಬೆರೆತು, ಆ ಹೊಸತನವನ್ನು ನಮ್ಮ ಮೈಮನಗಳಲ್ಲಿ  ತುಂಬಿಕೊಳ್ಳುವ ಆ ಘಳಿಗೆ ರೋಮಾಂಚಕ. ಹೊಸವರ್ಷದ ಆಶಯವೂ ಅಂತೆಯೇ ಇದೆ.
ಹೊಸ ದಿನವೂ ಕಳೆದ ದಿನದಂತೆಯೇ ಇರುವಾಗ ಆಚರಣೆಗೇನು ಅರ್ಥ ? ಅದರದ್ದೇನು ಹೆಚ್ಚುಗಾರಿಕೆ ? ಎಂದೆಲ್ಲ ಎನಿಸುತ್ತದೆ. ಆ ಅನಿಸಿಕೆ ಹೊಸತನದ ಆಚರಣೆಗೇನೂ ಅಡ್ಡಬರುವುದಿಲ್ಲ.

ಅಲ್ಲಿ ಸಂಭ್ರಮದ ಆಚರಣೆ ಎನ್ನುವುದು ಪ್ರಕೃತಿಯ ಪ್ರಚೋದನೆಗೊಂದು ಪ್ರತಿಕ್ರಿಯೆ ಆಗಿರುತ್ತದೆ. ಆ ಕಾಲದಲ್ಲಿ ಪ್ರಕೃತಿ ಹಳೆ ಬೇರಿನ ಮೇಲೆ ಹೊಸ ಪಲ್ಲವಗಳಿಂದ ಶೋಭಿಸುತ್ತಾ, ಎಳೆ ಚಿಗುರಿನ ಹಸಿರಿನಿಂದ ನಳನಳಿಸುತ್ತಾ, ಬಿಸಿಲಿನ ಆಹ್ಲಾದಕರ ಬಿಸಿಯಲ್ಲಿ ತಂಗಾಳಿಗೆ ಮೈಯ್ಯೊಡಿಕೊಂಡು, ಅಲೆಅಲೆಯಾಗಿ ಬರುವ ನದಿಯ ನೀರಿನ ಪಕ್ಕದಲ್ಲಿ ಪ್ರೀತಿಪಾತ್ರಳಾಗಿ ನಿಂತಿರುತ್ತಾಳೆ. ಮಾತೆಯ ಮಮತೆಯನ್ನು ನೆನಪಿಸುತ್ತಾಳೆ. ತನ್ನ ಮಡಿಲಿನಲ್ಲಿ ಮಲಗಿಸಿಕೊಳ್ಳಲು 'ಕಂದಾ, ಬಾ' ಎಂದು ನಮ್ಮನ್ನು ಬರಸೆಳೆಯುತ್ತಾಳೆ. ಪರಮ ನಿದ್ರಾ ಸುಖವನ್ನು ಕೊಡುತ್ತಾಳೆ. ಪರಮ ತತ್ತ್ವದ ಅಮೃತವನ್ನೇ ಕುಡಿಸುತ್ತಾಳೆ. ಆಂತರ್ಯದ ಧ್ವನಿ ಆಳದಲ್ಲಿದೆ. 

ಹಾಗಾಗುವ ಪ್ರಕೃತಿಯ ಮಧ್ಯದಲ್ಲಿ ನಾವು ಸುಮ್ಮನೆ ತಟಸ್ಥರಾಗಿ ಕೂರಲು ಸಾಧ್ಯವಿಲ್ಲ. ಬೇಡ ಎಂದರೂ ಆ ಭಾವವನ್ನು ಅದು ನಮ್ಮಲ್ಲಿ ಆಡಿಸುತ್ತದೆ. ಆಗ ನಮ್ಮ ಪೂಜಾದಿಗಳು, ದಿನ ನಿತ್ಯದ ಕಾರ್ಯಕಲಾಪಗಳು, ಆಹಾರ ವಿಹಾರಗಳು ಆ ಭಾವ ಪೋಷಣೆಗೆ ಪೂರಕ ರೂಪವನ್ನು ತಳೆಯುತ್ತವೆ.  ಅಲ್ಲಿ ನಮ್ಮ ಪಾತ್ರವೇನಿದ್ದರೂ ನೆಪಮಾತ್ರಕ್ಕೆ ಎಂಬಷ್ಟೇ ಆಗಿರುತ್ತದೆ. ಪ್ರವಾಹದ ಮಧ್ಯದಲ್ಲಿ ಕಡ್ಡಿಯ ಪರಿಸ್ಥಿತಿಯಂತೆ ನಮ್ಮ ಅವಸ್ಥೆ ಆಗಿರುತ್ತದೆ. ಪ್ರವಾಹದ ದಿಕ್ಕಿನಲ್ಲಿಯೇ ನಮ್ಮ ಚಲನೆ ಸಾಗುತ್ತದೆ.

ಭಾವದ ಆಟದ ಈ ಬಿಂದು ಹೊಸವರ್ಷದ ಆಚರಣೆಗಷ್ಟೇ ಸೀಮಿತವಲ್ಲ. ಎಲ್ಲ ಹಬ್ಬ-ಹರಿದಿನಗಳಿಗೂ ಹಾಗೂ ಪ್ರತಿಕ್ಷಣದ ಬದುಕಿಗೂ ಸಂಬಂಧಪಟ್ಟಿದೆ. ಹಬ್ಬ-ಹರಿದಿನಗಳಂದು ಆ ಭಾವ ಅತಿಶಯವಾಗಿ ತನ್ನನ್ನು ತಾನು ವ್ಯಕ್ತಪಡಿಸಿಕೊಳ್ಳುತ್ತದೆ. ಅದಕ್ಕಾಗಿ, ಆ ದಿನಗಳನ್ನು 'ಪರ್ವ'ಗಳೆಂದು (ಕಬ್ಬಿನ ಗಿಣ್ಣು) ಉಲ್ಲೇಖಿಸುತ್ತಾರೆ. ಹಾಗೆ, ನಮ್ಮದು ಸದಾಶಯಕ್ಕಾಗಿ ಸಮರ್ಪಿಸಿಕೊಳ್ಳುವ ಯಜ್ಞಮಯ ಬದುಕು.

ಇದೇ ಆಶಯ ಪೋಷಣೆಗೆ ಪ್ರಕೃತಿ ಮಾತೆ ಎಲ್ಲರ ಬಾಳಿನಲ್ಲಿಯೂ ನವ ಚೇತನದೊಂದಿಗೆ ಚಿತ್ತೈಸಿ, ಹೊಸ ಹುರುಪಿನೊಂದಿಗೆ ತನ್ನ ಅನುಗ್ರಹವನ್ನಿರಿಸಲಿ. ಹಾಗೆ, ಬರಲಿರುವ ಹೊಸವರ್ಷ ಎಲ್ಲರ ಬಾಳಿನಲ್ಲಿ ಅರ್ಥಪೂರ್ಣ ಸುಖಸಮೃದ್ಧಿಗಳನ್ನು ತರಲಿ.

ಶುಭಾಶಯಗಳು.

ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ

ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿ

ಶ್ರೀರಾಮಚಂದ್ರಾಪುರಮಠ
 

No comments:

Advertisement