ಇಂದಿನ ಇತಿಹಾಸ
ಮಾರ್ಚ್ 01
ಕೇಂದ್ರದ ಮಾಜಿ ಸಚಿವ ಭುವನ್ಸ್ ಚಂದ್ರ ಖಂಡೂರಿ ಅವರು ಉತ್ತರಖಂಡ ಬಿಜೆಪಿ ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆಯಾದರು. ಸರ್ಕಾರ ರಚಿಸಲು ತಮ್ಮನ್ನು ಆಹ್ವಾನಿಸಬೇಕು ಎಂದು ಅವರು ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
2008: ಪೊಲೀಸ್ ಸಿಬ್ಬಂದಿಯ ಅಂತ್ಯಸಂಸ್ಕಾರ ನಡೆಯುತ್ತಿದ್ದ ವೇಳೆಯಲ್ಲಿ ಸಂಭವಿಸಿದ ಆತ್ಮಹತ್ಯಾ ದಳ ಸ್ಫೋಟದಲ್ಲಿ 40 ಜನರು ಮೃತರಾಗಿ ಸ್ವಾತ್ ಜಿಲ್ಲೆಯಲ್ಲಿ ನಡೆಯಿತು. ಪಾಕಿಸ್ಥಾನದ ಸೇನೆ ತಾನು ಈ ಪ್ರದೇಶದಲ್ಲಿ ನಿಯಂತ್ರಣ ಸಾಧಿಸಿರುವುದಾಗಿ ಹೇಳಿದ ಕೆಲವೇ ದಿನಗಳಲ್ಲಿ ಈ ಕೃತ್ಯ ನಡೆಯಿತು.
2008: ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿಗೆ ಕವಯತ್ರಿ- ಲೇಖಕಿ ಶಶಿಕಲಾ ವೀರಯ್ಯಸ್ವಾಮಿ ಅವರ ಹೆಸರನ್ನು ಶಿಫಾರಸು ಮಾಡಲಾಯಿತು. ಪ್ರತಿವರ್ಷ ಒಬ್ಬರು ಲೇಖಕಿಯರಿಗೆ ರಾಜ್ಯ ಸರ್ಕಾರ ಕೊಡುವ ಈ ಪ್ರತಿಷ್ಠಿತ ಪ್ರಶಸ್ತಿ ಒಂದು ಲಕ್ಷ ರೂಪಾಯಿ ನಗದು ಹಾಗೂ ಪ್ರಶಸ್ತಿ ಫಲಕ ಒಳಗೊಂಡಿದೆ. ಬಿ.ಟಿ.ಲಲಿತಾ ನಾಯ್ಕ್ ಅವರ ಅಧ್ಯಕ್ಷತೆಯ ಆಯ್ಕೆ ಸಮಿತಿಯು ಈ ಹೆಸರನ್ನು ಶಿಫಾರಸು ಮಾಡಿತು.
2008: ಕಂದುಬಣ್ಣದ ಸ್ಯಾಂಟ್ರೊ ಕಾರಿನಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಖ್ಯಾತ ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಅವರ ಅಂಧೇರಿಯಲ್ಲಿರುವ ಕಚೇರಿ ಮೇಲೆ ಬಿಯರ್ ಬಾಟಲಿ ಎಸೆದು ಪರಾರಿಯಾದರು. ಈ ಸಮಯದಲ್ಲಿ ಬಚ್ಚನ್ ಕುಟುಂಬದವರಾರೂ ಕಚೇರಿಯಲ್ಲಿ ಇರಲಿಲ್ಲ. ಇಂತಹುದೇ ಘಟನೆ ಕೆಲದಿನಗಳ ಹಿಂದೆಯೂ ನಡೆದಿತ್ತು. ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಮುಖ್ಯಸ್ಥ ರಾಜ್ ಠಾಕ್ರೆ ಪ್ರಚೋದನಕಾರಿ ಭಾಷಣದ ಬೆನ್ನಲ್ಲೇ ಅಮಿತಾಭ್ ಅವರ ಕಚೇರಿ ಮೇಲೆ ಬಾಟಲಿ ಎಸೆಯಲಾಗಿತ್ತು.
2008: 2008: ಮುಂಬೈ ಚಿನಿವಾರ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಇನ್ನಷ್ಟು ಏರಿ 10 ಗ್ರಾಮುಗಳಿಗೆ 12,565 ರೂಪಾಯಿಗಳಿಗೆ ತಲುಪಿತು. ಆದರೆ ಬೆಳ್ಳಿಯ ಬೆಲೆ ಖರೀದಿದಾರರು ಆಸಕ್ತಿ ತೋರದ ಕಾರಣ ಕೆಳಕ್ಕೆ ಇಳಿಯಿತು.
2008: ಕನಿಷ್ಠ ಬೆಂಬಲ ಬೆಲೆಯ ಜತೆಗೆ ಕಬ್ಬಿನ ಇಳುವರಿ ಆಧರಿಸಿ ಟನ್ನಿಗೆ 160 ರೂಪಾಯಿ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿರುವ ಹಿನ್ನೆಲೆಯಲ್ಲಿ ಕಬ್ಬು ಬೆಳೆಗಾರರು ತಮ್ಮ ಧರಣಿಯನ್ನು ಕೈಬಿಟ್ಟರು.
2008: ನೆದರ್ ಲ್ಯಾಂಡ್ ದಂಪತಿ ದತ್ತು ಪುತ್ರಿಯಾಗಿ ಬೆಳೆದ ಭಾರತೀಯ ಮೂಲದ ಹುಡುಗಿಯೊಬ್ಬಳು ನಾಗಪುರದಲ್ಲಿ ಡಚ್ ಹುಡುಗನನ್ನು ಹಿಂದೂ ಸಂಪ್ರದಾಯದಂತೆ ವರಿಸಿದಳು. ಶಶಿಕಲಾ ಕೀರ್ಸ್ (34) ಎಂಬ ಈ ಹುಡುಗಿ ಕಳೆದ 3 ದಶಕಗಳ ಕಾಲ ನೆದರ್ ಲ್ಯಾಂಡ್ ದಂಪತಿಗಳ ಆಶ್ರಯದಲ್ಲೇ ಬೆಳೆದವಳು. ಜೊಸೆಫ್ ವೊಸ್(32) ಎನ್ನುವ ಡಚ್ ಹುಡುಗನನ್ನು ಈಗಾಗಲೇ ಕ್ರೈಸ್ತ ಸಂಪ್ರದಾಯದಂತೆ 2007ರಲ್ಲಿ ಮದುವೆಯಾಗಿದ್ದಳು. ತಾಯ್ನಾಡಿನ ಪ್ರೇಮ ಮತ್ತು ಮೂಲ ಬೇರುಗಳ ಸೆಳೆತ ಈ ಹುಡುಗಿಯನ್ನು ಮತ್ತೆ ಇಲ್ಲಿಗೆ ಎಳೆದು ತಂದಿತು. ಇಲ್ಲಿನ ಸಂಪ್ರದಾಯದಂತೆ ವಿವಾಹ ವಿಧಿ ವಿಧಾನಗಳನ್ನು ಪೂರೈಸಬೇಕು ಎನ್ನುವುದು ಶಶಿಕಲಾ ಅವರ ತುಡಿತ. ಅದಕ್ಕಾಗಿಯೇ ಈ ವಿವಾಹ ಸಮಾರಂಭ ನಡೆಯಿತು.
2008: ಐದು ವರ್ಷದ ಬಾಲಿಕೆಯ ಮೇಲೆ ಅತ್ಯಾಚಾರ ನಡೆಸಿದ ಎನ್ನಲಾದ ವ್ಯಕ್ತಿಯೊಬ್ಬನನ್ನು ಜಹಾಂಗಿರಾಬಾದ್ ಪ್ರದೇಶದ ಗ್ರಾಮಸ್ಥರು ಇಂದು ಥಳಿಸಿ ಸಾಯಿಸಿದರು. ಸಗೀರ್ ಎಂಬ ಈ ವ್ಯಕ್ತಿ ಸಗೀರ್ ಭಾಯರಾ ಗ್ರಾಮದ ರಾಮನರೇಶ್ ಎಂಬವರ ಮಗಳ ಮೇಲೆ ಅತ್ಯಾಚಾರ ಎಸಗಿದ್ದ. ಗ್ರಾಮಸ್ಥರೆಲ್ಲ ಸ್ಥಳಕ್ಕೆ ಧಾವಿಸಿ ಅತ್ಯಾಚಾರಿಯನ್ನು ಕಬ್ಬಿಣದ ಸಲಾಕೆಯಿಂದ ಹಿಗ್ಗಾಮುಗ್ಗಾ ಥಳಿಸಿದರು. ಆತ ಸ್ಥಳದಲ್ಲೇ ಮೃತನಾದ ಎಂದು ಪೊಲೀಸರು ತಿಳಿಸಿದರು.
2007: ವಿಶ್ವದಲ್ಲೇ ಮೊದಲ ಬಾರಿಗೆ ಏಕೈಕ ಚಿಪ್ ಅಳವಡಿಸಿದ ಮೊಬೈಲ್ ಹ್ಯಾಂಡ್ ಸೆಟ್ ಮೋಟೋಫೋನ್ ಎಫ್3ಸಿಯನ್ನು ಬೆಂಗಳೂರಿನಲ್ಲಿ ಬಿಡುಗಡೆ ಮಾಡಲಾಯಿತು. ಕ್ಯಾಲಿಫೋರ್ನಿಯಾದಲ್ಲಿ ಪ್ರಧಾನ ಕಚೇರಿ ಹೊಂದಿರುವ ಕ್ವಾಲ್ ಕಾಮ್ ಇಂಡಿಯಾ, ಟಾಟಾ ಟೆಲಿ ಸರ್ವೀಸಸ್ಸಿಗಾಗಿ ವಿನ್ಯಾಸಗೊಳಿಸಿದ ಈ ಸಿಂಗಲ್ ಚಿಪ್ ಹ್ಯಾಂಡ್ ಸೆಟ್ಟನ್ನು ಬಾಲಿವುಡ್ ನಟಿ ನೇಹಾ ದೂಷಿಯಾ ಬಿಡುಗಡೆ ಮಾಡಿದರು.
2007: ಖ್ಯಾತ ರಂಗನಿರ್ದೇಶಕ ಆರ್. ನಾಗೇಶ್, ಭರತನಾಟ್ಯ ಕಲಾವಿದೆ ಎಸ್. ನರ್ಮದಾ ಸೇರಿದಂತೆ ವಿವಿಧ ಕ್ಷೇತ್ರಗಳ 33 ಗಣ್ಯರಿಗೆ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರು, ನವದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಕೇಂದ್ರ ನೃತ್ಯ ನಾಟಕ ಅಕಾಡೆಮಿ ಪ್ರಶಸ್ತಿ ಪ್ರದಾನ ಮಾಡಿದರು.
2007: ಇಂಡಿಯನ್ ಏರ್ ಲೈನ್ಸ್ ಮತ್ತು ಏರ್ ಇಂಡಿಯಾ ಕಂಪೆನಿಗಳ ವಿಲೀನಕ್ಕೆ ಕೇಂದ್ರ ಸಚಿವ ಸಂಪುಟ ಸಮ್ಮತಿ ನೀಡಿತು. ವಾರದ ಹಿಂದೆ ಸಚಿವರ ತಂಡವು ಇವುಗಳ ವಿಲೀನಕ್ಕೆ ಶಿಫಾರಸು ಮಾಡಿತ್ತು. ಈ ಎರಡೂ ಕಂಪೆನಿಗಳು 15 ಸಾವಿರ ಕೋಟಿ ರೂಪಾಯಿಗಳ ವ್ಯವಹಾರ ನಡೆಸುತ್ತಿದ್ದು, ದೇಶದಲ್ಲಿ ಕಾರ್ಯ ನಿರ್ವಹಿಸುತ್ತಿರವ ಇತರ ಯಾವುದೇ ಕಂಪೆನಿಗಿಂತ ಹೆಚ್ಚು ಮಾರ್ಗಗಳಲ್ಲಿ ವಿಮಾನ ಸಂಚಾರ ಕಲ್ಪಿಸಿವೆ. ಇನ್ನು ಮುಂದೆ ಈ ಎರಡೂ ದೈತ್ಯ ಕಂಪೆನಿಗಳು ಒಂದಾಗಿ ಕಾರ್ಯ ನಿರ್ವಹಿಸಲಿವೆ.
2007: ಕೇಂದ್ರದ ಮಾಜಿ ಸಚಿವ ಭುವನ್ಸ್ ಚಂದ್ರ ಖಂಡೂರಿ ಅವರು ಉತ್ತರಖಂಡ ಬಿಜೆಪಿ ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆಯಾದರು. ಸರ್ಕಾರ ರಚಿಸಲು ತಮ್ಮನ್ನು ಆಹ್ವಾನಿಸಬೇಕು ಎಂದು ಅವರು ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
2007: ಉತ್ತರ ಪ್ರದೇಶದ ಮುಖ್ಯಮಂತ್ರಿ ಮುಲಯಂ ಸಿಂಗ್ ಯಾದವ್ ಮತ್ತು ಅವರ ಕುಟುಂಬ ಸದಸ್ಯರು ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಪ್ರಾಥಮಿಕ ತನಿಖೆ ನಡೆಸುವಂತೆ ಸುಪ್ರೀಂಕೋರ್ಟ್ ಸಿಬಿಐಗೆ ಆದೇಶ ನೀಡಿತು.
2006: ಮುಂಬೈಯಲ್ಲಿ 1993ರಲ್ಲಿ ಸರಣಿ ಬಾಂಬ್ ಸ್ಫೋಟಿಸಿದ ಕೆಲ ದಿನಗಳ ಮೊದಲು ನಟ ಸಂಜಯ್ ದತ್ ಗೆ ಅವರ ನಿವಾಸದಲ್ಲಿಯೇ ಮೂರು ಎಕೆ-56 ಬಂದೂಕು, ಕೆಲ ಕೈ ಬಾಂಬ್ ಹಾಗೂ ಮದ್ದು ಗುಂಡುಗಳನ್ನು ಹಸ್ತಾಂತರಿಸಿರುವುದಾಗಿ ಭೂಗತ ದೊರೆ ಅಬು ಸಲೇಂ, ಸಿಬಿಐ ಡಿಜಿಪಿ ಒ.ಪಿ. ಚತ್ವಾಲ್ ಅವರ ಎದುರು ಕಳೆದ ನವೆಂಬರ್ 20ರಂದು ನೀಡಿದ್ದ ತಪ್ಪೊಪ್ಪಿಗೆ ವಿವರವನ್ನು ಈ ದಿನ ವಿಶೇಷ ಟಾಡಾ ನ್ಯಾಯಾಧೀಶ ಪಿ.ಡಿ. ಕೊಡೆ ಬಹಿರಂಗಪಡಿಸಿದರು. 16 ಪುಟಗಳ ಈ ತಪ್ಪೊಪ್ಪಿಗೆ ಹೇಳಿಕೆಯನ್ನು ಮುಚ್ಚಿದ ಲಕೋಟೆಯಲ್ಲಿ ಇರಿಸಲಾಗಿತ್ತು..
2006: ಮೂರು ದಿನಗಳ ಭೇಟಿಗಾಗಿ ಜಾರ್ಜ್ ಡಬ್ಲ್ಯು ಬುಷ್ ಹಾಗೂ ಅವರ ಪತ್ನಿ ಲಾರಾ ಮತ್ತು ಇತರ ಅಧಿಕಾರಿಗಳೊಂದಿಗೆ ನವದೆಹಲಿಗೆ ಆಗಮಿಸಿದರು. ಶಿಷ್ಟಾಚಾರವನ್ನು ಬದಿಗೊತ್ತಿ ಸ್ವತಃ ಪ್ರಧಾನಿ ಮನಮೋಹನ ಸಿಂಗ್ ಅವರೇ ಬುಷ್ ಪರಿವಾರವನ್ನು ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡರು.
2006: ಮರಾಠಿ ಭಾಷಿಕ ಪ್ರದೇಶಗಳು ಮಹಾರಾಷ್ಟ್ರಕ್ಕೆ ಸೇರಬೇಕು ಎಂದು ನಿರ್ಣಯ ಕೈಗೊಂಡಿರುವ ಬೆಳಗಾವಿ ತಾಲ್ಲೂಕು ಪಂಚಾಯಿತಿಗೆ ಪಂಚಾಯ್ತಿ ರಾಜ್ ಕಾಯ್ದೆಯ ನಿಯಮ 136ರ ಅನ್ವಯ ನೋಟಿಸ್ ಜಾರಿ ಮಾಡಿ ವಿವರಣೆ ಕೇಳಲು ಸರ್ಕಾರ ನಿರ್ಧರಿಸಿತು.
2006: ಉದ್ದೀಪನ ಮದ್ದು ಪರೀಕ್ಷೆಯಲ್ಲಿ ಸಿಕ್ಕಿಬಿದ್ದ ಮಹಿಳಾ ವೇಟ್ ಲಿಫ್ಟರ್ ಶೈಲಜಾ ಪೂಜಾರಿ ಅವರನ್ನು ಅಂತರಾಷ್ಟ್ರೀಯ ವೇಟ್ ಲಿಫ್ಟಿಂಗ್ ಫೆಡರೇಷನ್ (ಐ.ಡಬ್ಲ್ಯು.ಎಫ್) ತಾತ್ಕಾಲಿಕವಾಗಿ ಅಮಾನತುಗೊಳಿಸಿತು.
2001: ಆಫ್ಘಾನಿಸ್ಥಾನದ ತಾಲಿಬಾನ್ 2000 ವರ್ಷಗಳಷ್ಟು ಪುರಾತನವಾದ ಬಾಮಿಯಾನಿನ ಬೌದ್ಧ ವಿಗ್ರಹಗಳ ನಾಶವನ್ನು ಆರಂಭಿಸಿತು. ಇದರಿಂದ ಅಂತಾರಾಷ್ಟ್ರೀಯ ಸಮುದಾಯ ರೊಚ್ಚಿಗೆದ್ದಿತು.
1998: ರಕ್ಷಣಾ ಸಚಿವರ ವೈಜ್ಞಾನಿಕ ಸಲಹೆಗಾರ ಎ.ಪಿ.ಜೆ. ಅಬ್ದುಲ್ ಕಲಾಂ ಮತ್ತು ಕರ್ನಾಟಕ ಸಂಗೀತ ವಿದುಷಿ ಎಂ.ಎಸ್. ಸುಬ್ಬುಲಕ್ಷ್ಮಿ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ `ಭಾರತ ರತ್ನ' ನೀಡಿ ಗೌರವಿಸಲಾಯಿತು. ಎ.ಪಿ.ಜೆ. ಅಬ್ದುಲ್ ಕಲಾಂ ಮುಂದೆ ಭಾರತದ ರಾಷ್ಟ್ರಪತಿಯಾದರು. `ಭಾರತ ರತ್ನ' ಪಡೆದ ಮೊದಲ ಗಾಯಕಿ ಸುಬ್ಬುಲಕ್ಷ್ಮಿ 2004ರ ಡಿಸೆಂಬರ್ 11ರಂದು ನಿಧನರಾದರು.
1994: ಭಾರತದ ಖ್ಯಾತ ಚಿತ್ರ ನಿರ್ದೇಶಕ ಮನಮೋಹನ್ ದೇಸಾಯಿ (1936-1994) ಮುಂಬೈಯಲ್ಲಿ ಆತ್ಮಹತ್ಯೆ ಮಾಡಿಕೊಂಡರು.
1980: ಶಾಹಿದ್ ಆಫ್ರಿದಿ ಜನಿಸಿದರು. ಪಾಕಿಸ್ಥಾನಿ ಕ್ರಿಕೆಟ್ ಆಟಗಾರರಾದ ಇವರು ಏಕದಿನದ ಅಂತಾರಾಷ್ಟ್ರೀಯ ಕ್ರಿಕೆಟಿನಲ್ಲಿ ಶತಮಾನದ ವೇಗದ ಸೆಂಚುರಿ ಸಿಡಿಸಿ ಖ್ಯಾತಿ ಪಡೆದರು.
1970: ಕಲಾವಿದ ನಿರುಪಮಾ ರಾಜೇಂದ್ರ ಜನನ.
1968 ಸಲೀಲ್ ಅಂಕೋಲಾ ಹುಟ್ಟಿದ ದಿನ. ಭಾರತದ ಮಾಜಿ ಕ್ರಿಕೆಟಿಗರಾದ ಇವರು ಚಿತ್ರ ನಟರಾಗಿ ಬದಲಾದರು.
1954: ಅಮೆರಿಕಾವು ಮೊತ್ತ ಮೊದಲ ಹೈಡ್ರೋಜನ್ ಬಾಂಬ್ ಪರೀಕ್ಷೆಯನ್ನು ಮಾರ್ಷಲ್ ಐಲ್ಯಾಂಡಿನ ಬಿಕಿನಿ ಅಟೊಲಿನಲ್ಲಿನಡೆಸಿತು. ಈ ಬಾಂಬ್ 1945ರಲ್ಲಿ ಹಿರೋಷಿಮಾವನ್ನು ಧ್ವಂಸಗೊಳಿಸಿದ ಬಾಂಬಿಗಿಂತ 500 ಪಟ್ಟು ಹೆಚ್ಚು ಶಕ್ತಿಶಾಲಿಯಾದುದಾಗಿತ್ತು.
1947: ಕಲಾವಿದ ಟಿ.ವಿ. ಕಬಾಡಿ ಜನನ.
1936: ತಮ್ಮ ನಿರಂತರ ಪ್ರಯೋಗಶೀಲತೆಯಿಂದ ಹಲವಾರು ಮಾಧ್ಯಮಗಳ ಮೂಲಕ ಚಿತ್ರಕಲೆಯನ್ನು ಅಭಿವ್ಯಕ್ತಿಸಿದ ಆರ್. ಎಂ. ಹಡಪದ್ ಅವರು ಮಲ್ಲಪ್ಪ- ಬಸಮ್ಮ ದಂಪತಿಯ ಮಗನಾಗಿ ವಿಜಾಪುರ ಜಿಲ್ಲೆಯ ಬದಾಮಿಯಲ್ಲಿ ಜನಿಸಿದರು. ಹಡಪದ್ ಚಿತ್ರಕಲೆಗೆ ಬದಾಮಿಯೇ ಸ್ಫೂರ್ತಿ. 1961ರಲ್ಲಿ ಮಿಣಜಿಗಿ ಅವರು ಡ್ರಾಯಿಂಗ್ ಟೀಚರ್ಸ್ ಇನ್ ಸ್ಟಿಟ್ಯೂಟ್ ಆರಂಭಿಸಿದಾಗ ಬೆಂಗಳೂರಿಗೆ ಬಂದ ಹಡಪದ್, ಕಲಿಯುತ್ತಲೇ ಏಕವ್ಯಕ್ತಿ ಪ್ರದರ್ಶನಗಳನ್ನು ಮಾಡುತ್ತಾ ಬೆಳೆದವರು. 1966ರಲ್ಲಿ ವಿ.ಫೋರ್ ಸಂಸ್ಥೆ ಕಟ್ಟಿ ಬೆಂಗಳೂರಿನಲ್ಲಿ ಕಲಾ ಪ್ರದರ್ಶನ ಏರ್ಪಡಿಸಿದ್ದರು. ಮಿಣಜಿಗಿ ಅವರಿಗೆ ಶಾಲೆ ಮುಚ್ಚಬೇಕಾದ ಪರಿಸ್ಥಿತಿ ಬಂದಾಗ ಅದನ್ನು ವಹಿಸಿಕೊಂಡ ಹಡಪದ್ ಕೆನ್ ಕಲಾ ಶಾಲೆಯಾಗಿ ಪರಿವರ್ತಿಸಿ ನೂರಾರು ವಿದ್ಯಾರ್ಥಿಗಳಿಗೆ ಕಲಾ ಅಭ್ಯಾಸಕ್ಕೆ ಸ್ಥಳ ಒದಗಿಸಿದರು. (ಈ ಕೆನ್ ಕಲಾಶಾಲೆ ಈಗ ಹಂಪಿ ಕನ್ನಡ ವಿಶ್ವ ವಿದ್ಯಾಲಯದ ಜೊತೆಗೆ ಸಂಯೋಜನೆ ಹೊಂದಿದೆ) ಕೆಲ ಕಾಲ ಲಲಿತಕಲಾ ಅಕಾಡೆಮಿ ಅಧ್ಯಕ್ಷರಾಗಿ ಸೇವೆ, ಕಲಾ ಸಂಗ್ರಹಣ ಶಿಬಿರ, ಕಲಾ ಪುಸ್ತಕಗಳ ಪ್ರಕಟಣೆ, ಗ್ರಾಫಿಕ್ ಸ್ಟುಡಿಯೋ ಸ್ಥಾಪನೆ, ಅಂತರರಾಜ್ಯ ವಿನಿಮಯ ಕಲಾಕೇಂದ್ರ ಪ್ರದರ್ಶನ ಇತ್ಯಾದಿ ಅವರ ಸಾಧನೆಗಳ ಮೈಲಿಗಲ್ಲುಗಳು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕೇಂದ್ರ ಲಲಿತಕಲಾ ಅಕಾಡೆಮಿ ಪ್ರಶಸ್ತಿ, ಉತ್ತಮ ಕಲಾವಿದ ಮತ್ತು ಅಧ್ಯಾಪಕ ಪುರಸ್ಕಾರ, ಕರ್ನಾಟಕ ಲಲಿತಕಲಾ ಅಕಾಡೆಮಿ ಸೀನಿಯರ್ ಫೆಲೋಷಿಪ್ ಇತ್ಯಾದಿ ಅವರಿಗೆ ಲಭಿಸಿದ ಗೌರವಗಳು.
1933: ಕಲಾವಿದ ಭರಮಪ್ಪ ನಿಂಗಪ್ಪ ಬಾಳೂರು ಜನನ.
1922: ವಿಲಿಯಂ ಮ್ಯಾಕ್ಸ್ ವೆಲ್ ಗೇನ್ಸ್ (1922-92) ಹುಟ್ಟಿದರು. ಅಮೆರಿಕದ ಖ್ಯಾತ ಪ್ರಕಾಶಕರಾದ ಇವರು `ಮ್ಯಾಡ್' ಮ್ಯಾಗಜಿನ್ ನ ಪ್ರಕಾಶಕರು.
1922: ಯಿತ್ ಝಾಕ್ ರಾಬಿನ್ (1922-1995) ಹುಟ್ಟಿದ ದಿನ.
1882: ಅಮೆರಿಕನ್ ಕಾಂಗ್ರೆಸ್ ಯೆಲ್ಲೋಸ್ಟೋನ್ ಪಾರ್ಕನ್ನು ಸ್ಥಾಪಿಸಿತು. ಅತ್ಯಂತ ಹಳೆಯದಾದ ಈ ಪಾರ್ಕ್ ಅತ್ಯಂತ ವಿಶಾಲವೂ, ಅತ್ಯಂತ ಹೆಚ್ಚು ಜನಪ್ರಿಯವಾದ ಪಾರ್ಕ್ ಎಂದು ಹೆಸರು ಪಡೆದಿದೆ.
1858: ಜಾರ್ಜ್ ಸಿಮ್ಮೆಲ್ (1858-1918) ಹುಟ್ಟಿದ ದಿನ. ಜರ್ಮನ್ ಸಮಾಜ ವಿಜ್ಞಾನಿಯಾದ ಈತ ಜರ್ಮನಿಯಲ್ಲಿ ಸಮಾಜ ವಿಜ್ಞಾನವನ್ನು ಮೂಲ ಸಮಾಜ ವಿಜ್ಞಾನವಾಗಿ ರೂಪಿಸಲು ಶ್ರಮಿಸಿದ.
1845: ಟೆಕ್ಸಾಸ್ ಅಮೆರಿಕಾಕ್ಕೆ ಸೇರ್ಪಡೆಗೊಂಡಿತು.
1780: ಪೆನ್ಸಿಲ್ವೇನಿಯಾವು ಗುಲಾಮೀ ಪದ್ಧತಿಯನ್ನು ರದ್ದು ಪಡಿಸಿದ ಮೊತ್ತ ಮೊದಲ ಅಮೆರಿಕನ್ ರಾಜ್ಯವಾಯಿತು.
1776: ಮರಾಠರು ಮತ್ತು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿ ಪುರಂದರ ಒಪ್ಪಂದಕ್ಕೆ ಸಹಿ ಹಾಕಿದರು. ಈ ಒಪ್ಪಂದವು 1775ರ ಸೂರತ್ ಒಪ್ಪಂದವನ್ನು ಅನೂರ್ಜಿತಗೊಳಿಸಿತು.
(ಸಂಗ್ರಹ: ನೆತ್ರಕೆರೆ ಉದಯಶಂಕರ)
No comments:
Post a Comment