My Blog List

Tuesday, March 3, 2009

ಇಂದಿನ ಇತಿಹಾಸ History Today ಫೆಬ್ರುವರಿ 29

ಇಂದಿನ ಇತಿಹಾಸ

ಫೆಬ್ರುವರಿ 29

ಲಾಹೋರಿನ ಸೆರೆಮನೆಯಲ್ಲಿ 35 ವರ್ಷಗಳನ್ನು ಕಳೆದಿರುವ ಕಳೆದಿರುವ ಭಾರತೀಯ ಕಾಶ್ಮೀರ್ ಸಿಂಗ್ ಅವರನ್ನು ಮಾರ್ಚ್ 3ರಂದು ಬಿಡುಗಡೆ ಮಾಡಲಾಗುವುದೆಂದು ಪಾಕಿಸ್ಥಾನ ಅಧಿಕೃತವಾಗಿ ಪ್ರಕಟಿಸಿತು. ಬೇಹುಗಾರಿಕೆ ಆರೋಪದ ಮೇಲೆ 1973ರಲ್ಲಿ ಬಂಧಿತರಾದ ಸಿಂಗ್ ಗೆ ಪಾಕಿಸ್ಥಾನದ ಅಧ್ಯಕ್ಷ ಪರ್ವೇಜ್ ಮುಷರಫ್ ಕ್ಷಮಾದಾನ ನೀಡಿದರು.

2008: ವೇತನ ವರ್ಗಕ್ಕೆ ಆದಾಯ ತೆರಿಗೆ ವಿನಾಯ್ತಿ ಮಿತಿ 1.10 ಲಕ್ಷ ರೂಗಳಿಂದ 1.50 ಲಕ್ಷ ರೂಪಾಯಿಗಳಿಗೆ ಹೆಚ್ಚಳ, ರೈತರಿಗೆ 60,000 ಕೋಟಿ ರೂಪಾಯಿಗಳ ಪರಿಹಾರ ಕೊಡುಗೆ, ಸಣ್ಣ ಮತ್ತು ಮಧ್ಯಮ ವರ್ಗದ ರೈತರ ಎಲ್ಲ ಸಾಲ ಮನ್ನಾ ಹಾಗೂ ಇನ್ನೂ ನಾಲ್ಕು ಹೊಸ ಸೇವೆಗಳು ತೆರಿಗೆ ಜಾಲದ ವ್ಯಾಪ್ತಿಗೆ ಸೇರ್ಪಡೆ- ಈ ಅಂಶಗಳನ್ನು ಒಳಗೊಂಡ 2008-09ರ ಸಾಲಿನ ತಮ್ಮ ಐದನೆಯ ಹಾಗೂ ಕೊನೆಯದಾದ ಮುಂಗಡಪತ್ರವನ್ನು ಕೇಂದ್ರ ಹಣಕಾಸು ಸಚಿವ ಪಿ. ಚಿದಂಬರಮ್ ಲೋಕಸಭೆಯಲ್ಲಿ ಮಂಡಿಸಿದರು.  

2008: ರಾಮಸೇತು ಮಾನವ ನಿರ್ಮಿತವೇ ಅಥವಾ ನೈಸರ್ಗಿಕ ರಚನೆಯೇ ಎಂಬುದನ್ನು ಅಳೆಯಲು ಯಾವುದೇ ವೈಜ್ಞಾನಿಕ ವಿಧಾನ ಲಭ್ಯವಿಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟಿನಲ್ಲಿ ಹೊಸ ಪ್ರಮಾಣಪತ್ರ ಸಲ್ಲಿಸಿತು. ಈ ಹಿಂದಿನ ಪ್ರಮಾಣಪತ್ರದಲ್ಲಿ ರಾಮಾಯಣದಲ್ಲಿ ಹೇಳಲಾದ ಪಾತ್ರಗಳು ಹಾಗೂ ಘಟನೆಗಳನ್ನು ಪ್ರಶ್ನಿಸಿದ್ದರಿಂದ ಭಾರಿ ವಿವಾದ ಎದ್ದಿತ್ತು. ಕೇಂದ್ರ ಸರ್ಕಾರ ಸಮಾಜದ ಹಲವು ವರ್ಗಗಳಿಂದ ತೀವ್ರ ಟೀಕೆಗೆ ಒಳಗಾಗಿತ್ತು. ರಾಮಸೇತು ಅಥವಾ ಆಡಮ್ಸ್ ಸೇತುವೆ ಮಾನವ ನಿರ್ಮಿತ ಎಂದು ಹೇಳಲು ಯಾವುದೇ ಆಧಾರಗಳಿಲ್ಲ ಎಂದು ಆ ಪ್ರಮಾಣಪತ್ರದಲ್ಲಿ ಕೇಂದ್ರ ಸರ್ಕಾರ ಹೇಳಿತ್ತು. ವಿವಾದದ ಕಾರಣ ಕೇಂದ್ರ ತಾನು ಸಲ್ಲಿಸಿದ್ದ ಪ್ರಮಾಣಪತ್ರವನ್ನು ಹಿಂದಕ್ಕೆ ಪಡೆದಿತ್ತು. ಮುಂದಿನ ಸಾರ್ವತ್ರಿಕ ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡ ಕೇಂದ್ರ ಸರ್ಕಾರ ಹೊಸ ಪ್ರಮಾಣಪತ್ರದಲ್ಲಿ ತಟಸ್ಥ ನಿಲುವು ತಳೆಯಿತು. ದೇಶದ ಬಹಸಂಖ್ಯಾತರ ಭಾವನೆಗೆ ಘಾಸಿ ಮಾಡುವ ಗೋಜಿಗೆ ಹೋಗದ ಸರ್ಕಾರ, ಯುಪಿಎ ಅಂಗಪಕ್ಷ ಡಿಎಂಕೆ ನಿಲುವನ್ನು ಸಹ ಬಹಿರಂಗವಾಗಿ ವಿರೋಧಿಸಲಿಲ್ಲ. ರಾಮಸೇತು ಮಾನವ ನಿರ್ಮಿತವೇ ಇಲ್ಲವೇ ಎಂಬುದನ್ನು ಪ್ರಕಟಿಸುವಂತೆ ಸರ್ಕಾರ ಸುಪ್ರೀಂಕೋರ್ಟಿಗೆ ಮನವಿ ಮಾಡಿತು.  ಈ ಮಧ್ಯೆ, ರಾಮಸೇತು ರಾಷ್ಟ್ರೀಯ ಸ್ಮಾರಕವಾಗಿದ್ದು, ಅದಕ್ಕೆ ಧಕ್ಕೆ ತರಬಾರದು ಎಂದು ಹಲವಾರು ಅರ್ಜಿಗಳನ್ನು ಸಲ್ಲಿಸಲಾಗಿತ್ತು.

2008: ಗೌತಮ ಬುದ್ಧ ಜಿಲ್ಲೆಯ ಕಾಸ್ನಾದ ಮೂರು ಮಂದಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಗೃಹ ಮಂತ್ರಿ ವೇದ್ ರಾಮ್ ಭಾತಿ ಅವರ ಪುತ್ರ ರವೀಂದ್ರ ಭಾತಿ ಅವರನ್ನು ಪೊಲೀಸರು ಬಂಧಿಸಿದರು. ವೇದ್ ರಾಮ್ ಭಾತಿ ಸಹ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಯಿತು. ಫೆಬ್ರುವರಿ. 6 ರಂದು ನಡೆದ ಘಟನೆಯಲ್ಲಿ ಟ್ರಾನ್ಸ್ ಪೋರ್ಟ್ ಕಂಪೆನಿಯೊಂದರ ಮಾಲೀಕರಾದ ಶಹಾಬುದ್ದಿನ್, ಯುಸುಫ್ ಮತ್ತು ಸುರೇಶ್ ಅವರನ್ನು ಗುಂಡಿಟ್ಟು ಕೊಲ್ಲಲಾಗಿತ್ತು.

2008: ಸರ್ಕಾರಿ ಅಧಿಕಾರಿಗೆ ಜೀವ ಬೆದರಿಕೆಯೊಡ್ಡಿದ ಆರೋಪ ಹೊತ್ತ ಸಂಸದ ಮೊಹಮ್ಮದ್ ಶಹಾಬ್ದುದೀನ್ ಗೆ ವಿಶೇಷ ನ್ಯಾಯಾಲಯವು ಒಂದು  ವರ್ಷದ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿತು. 2005ರಲ್ಲಿ ಬೇವೂರ್ ಜೈಲಿನಲ್ಲಿದ್ದ ಶಹಾಬುದ್ದೀನ್ ಮೊಬೈಲ್ ದೂರವಾಣಿ ಮೂಲಕ ಹರೇಂದ್ರ ರೈ  ಎನ್ನುವ ಜಿರಾದೆ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಅವರಿಗೆ ಕೊಲೆ ಬೆದರಿಕೆ ಹಾಕಿದ್ದರೆಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಈ ತೀರ್ಪು ನೀಡಿತು. ಶಹಾಬುದ್ದೀನ್ ವಿರುದ್ಧದ ಹಲವಾರು ಕ್ರಿಮಿನಲ್ ಪ್ರಕರಣಗಳ ತನಿಖೆಯನ್ನು ಇದೇ ಇನ್ಸ್ ಪೆಕ್ಟರ್ ನಿರ್ವಹಿಸಿದ್ದರು. ಸಿಪಿಐ (ಎಂಎಲ್) ಕಾರ್ಯಕರ್ತ ಛೋಟೆಲಾಲ್ ಗುಪ್ತಾ ಎಂಬವರನ್ನು ಅಪಹರಿಸಿ ಹತ್ಯೆ ಮಾಡಿದ ಪ್ರಕರಣದಲ್ಲಿ ಶಹಾಬ್ದುದೀನ್ ಗೆ 2007ರ ಮೇ 8ರಂದುವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿತ್ತು. ಬಿಹಾರ ರಾಜ್ಯದ ಸಿವಾ ಜಿಲ್ಲಾ ಪೊಲೀಸ್ ವರಿಷ್ಠ ಎಸ್.ಕೆ. ಸಿಂಘಾಲ್ ಮೇಲೆ ಹಲ್ಲೆ ನಡೆಸಿದ  ಪ್ರಕರಣಕ್ಕೆ ಸಂಬಂಧಿಸಿದಂತೆ 2007, ಸೆಪ್ಟೆಂಬರಿನಲ್ಲಿ ವಿಶೇಷ ನ್ಯಾಯಾಲಯ ಶಹಾಬುದ್ದೀನ್ ಗೆ ಹತ್ತು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ನೀಡಿತ್ತು. ಈ ವೇಳೆಗೆ ವಿವಿಧ ನ್ಯಾಯಾಲಯಗಳಲ್ಲಿ ಶಹಾಬುದ್ದೀನ್ ವಿರುದ್ಧ ಸುಮಾರು 27 ಕ್ರಿಮಿನಲ್ ಪ್ರಕರಣಗಳಿದ್ದವು.

 2008: ಪೋಸ್ಟೊಗೋಲಾ ಬುರಿಗಂಗಾ ಸೇತುವೆ ಬಳಿ ಫೆಬ್ರುವರಿ 28ರಂದು ಎರಡು ಹಡಗುಗಳು ಪರಸ್ಪರ ಡಿಕ್ಕಿ ಹೊಡೆದು ಸಂಭವಿಸಿದ ಭಾರಿ ದುರಂತದಲ್ಲಿ ಮೃತರಾದವರ ಸಂಖ್ಯೆ 39ಕ್ಕೆ ಏರಿತು. 150 ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಹಡಗಿಗೆ ಮರಳು ಸಾಗಿಸುತ್ತಿದ್ದ ಹಡಗೊಂದು ಡಿಕ್ಕಿ ಹೊಡೆದ ಪರಿಣಾಮ ಈ ಅನಾಹುತ ಸಂಭವಿಸಿತ್ತು. ದುರಂತದಲ್ಲಿ 18 ಮಹಿಳೆಯರು, 12 ಪುರುಷರು ಮತ್ತು 9 ಮಕ್ಕಳು ಸೇರಿದಂತೆ ಒಟ್ಟು 39 ಪ್ರಯಾಣಿಕರು ಸಾವನ್ನಪ್ಪಿದರು.

2008: ಸದ್ದಾಮ್ ಹುಸೇನ್ ಸಹೋದರ ಸಂಬಂಧಿ `ಕೆಮಿಕಲ್ ಅಲಿ' ಹೆಸರಿನಿಂದ ಕುಖ್ಯಾತನಾಗಿದ್ದ ಅಲಿ ಹಸನ್ ಅಲ್- ಮಜೀದ್ ಗೆ ನೀಡಲಾದ ಗಲ್ಲು ಶಿಕ್ಷೆಯನ್ನು ಶೀಘ್ರದಲ್ಲಿಯೇ ಜಾರಿಗೊಳಿಸಲು ಇರಾಕ್ ಅಧ್ಯಕ್ಷ ಜಲಾಲ್ ತಲಬಾನಿ ಹಾಗೂ  ಇಬ್ಬರು ಉಪಾಧ್ಯಕ್ಷರನ್ನೊಳಗೊಂಡ ಅಧ್ಯಕ್ಷೀಯ ಮಂಡಳಿ ಎರಡು ದಿನಗಳ ಹಿಂದಷ್ಟೇ ಅನುಮತಿ ನೀಡಿದ್ದನ್ನು ಈದಿನ ಬಹಿರಂಗಪಡಿಸಲಾಯಿತು. 

2008: ಭಾರತದ ಉಕ್ಕು ಉದ್ಯಮದ ಸಾಮ್ರಾಟ ಲಕ್ಷ್ಮಿ ಮಿತ್ತಲ್ ಅವರು ತಮಗೆ ಸೇರಿದ ಲಂಡನ್ನಿನ ಬಿಷಪ್ಸ್ ಮಾರ್ಗದಲ್ಲಿನ 40 ದಶಲಕ್ಷ ಪೌಂಡ್ ಬೆಲೆ ಬಾಳುವ ಮನೆಯನ್ನು ಮಾರಲು ನಿರ್ಧರಿಸಿದರು. ತಮ್ಮ ಮನೆ ಪಕ್ಕದಲ್ಲಿ ಇರುವವರಿಗೆ ವಸತಿ ಸಂಕೀರ್ಣ ಕಟ್ಟಲು ಅನುಮತಿ ದೊರೆತದ್ದು ಈ ನಿರ್ಧಾರಕ್ಕೆ ಕಾರಣ.  ಅತ್ಯಂತ ಶ್ರೀಮಂತರ ಐಷಾರಾಮಿ ಬಂಗಲೆಗಳ ಸಾಲಿನಲ್ಲಿರುವ  ಮಿತ್ತಲ್ ಅವರ  ಬೇಸಿಗೆ ಅರಮನೆ ಬ್ರಿಟನ್ನಿನಲ್ಲಿ  ಅತ್ಯಂತ  ದುಬಾರಿ ಮನೆ. ಬ್ರೂನಿಯ ಸುಲ್ತಾನ್ ಮತ್ತು ಸೌದಿ ರಾಜ ವಂಶಸ್ತರ ಕುಟುಂಬದ ಸದಸ್ಯರು ಈ ಮನೆಯ ಅಕ್ಕಪಕ್ಕದಲ್ಲಿ ಇದ್ದಾರೆ. ವಿಶ್ವದಲ್ಲಿ ಅತ್ಯಂತ ಹೆಚ್ಚಿನ ಉಕ್ಕು ಉತ್ಪಾದನೆ  ಮಾಡುತ್ತಿರುವ ಮಿತ್ತಲ್  ಅವರು ತಮ್ಮ ಮನೆಗೆ 40  ದಶಲಕ್ಷ  ಪೌಂಡ್ ಬೆಲೆ ಕೇಳಿದ್ದು, ಅವರ  ಪಕ್ಕದಲ್ಲಿರುವ ಬಾರೆಟ್ಟಿ ಕುಟುಂಬಕ್ಕೆ  ಐಷಾರಾಮಿ ಅಪಾರ್ಟ್ ಮೆಂಟ್ ಕಟ್ಟಲು  ಅನುಮತಿ ದೊರೆತ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಂಡರು ಎಂದು ಬ್ರಿಟಿಷ್  ಮಾಧ್ಯಮಗಳು ವರದಿ ಮಾಡಿದವು.

2008: ಜಗತ್ತಿನ ಅತ್ಯಂತ ಸುಸಜ್ಜಿತ ಮತ್ತು ಬೃಹತ್ ಎನಿಸಿದ ವಿಮಾನ ನಿಲ್ದಾಣ `ಬೀಜಿಂಗ್ ಕ್ಯಾಪಿಟಲ್ ಇಂಟರ್ ನ್ಯಾಷನಲ್ ಏರ್ ಪೋರ್ಟ್' ಈದಿನ ಆರಂಭಗೊಂಡಿತು. ಸ್ಥಳೀಯ ಹಾಗೂ ಒಲಿಂಪಿಕ್ಸ್ ಕ್ರೀಡೆ ವೀಕ್ಷಿಸಲು ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸುವ ವಿಮಾನಯಾನಿಗಳಿಗೆ ಈ ನಿಲ್ದಾಣ ಹೆಚ್ಚು ಸಹಕಾರಿ. ನಿಲ್ದಾಣದ ಮೇಲ್ಬಾಗ ಡ್ರಾಗನ್ ಮಾದರಿಯಲ್ಲಿದ್ದು, ಅದರ ರೆಕ್ಕೆಗಳು 3.25 ಕಿ.ಮೀ. ದೂರಕ್ಕೆ ವ್ಯಾಪಿಸಿ ನೋಡಲು ಅತ್ಯಂತ ಆಕರ್ಷಕವಾಗಿದೆ. ನಿಲ್ದಾಣದಲ್ಲಿ 175 ಎಸ್ಕಲೇಟರು, 173 ಲಿಫ್ಟುಗಳು, 437 ಟ್ರಾವೊಲೇಟರ್ಸ್, 64 ಹೊಟೇಲುಗಳು, 300 ಚೆಕ್ ಇನ್ ಕೌಂಟರುಗಳು ಮತ್ತು ಅತ್ಯಾಧುನಿಕ ಬ್ಯಾಗೇಜ್ ಹ್ಯಾಂಡ್ಲಿಂಗ್ ವ್ಯವಸ್ಥೆಯ 50 ಕಿ.ಮೀ. ದೂರದ ಕನ್ವೆಯರ್ ಬೆಲ್ಟ್ಗಳಿವೆ. ವರ್ಷಕ್ಕೆ 76 ಮಿಲಿಯನ್ ಅಥವಾ ದಿನ ನಿತ್ಯ 2,08,000 ಪ್ರಯಾಣಿಕರಿಗೆ ಇಲ್ಲಿ ಅವಕಾಶ ಕಲ್ಪಿಸಲಾಗಿದೆ. 

2008: ಲಾಹೋರಿನ ಸೆರೆಮನೆಯಲ್ಲಿ 35 ವರ್ಷಗಳನ್ನು ಕಳೆದಿರುವ ಕಳೆದಿರುವ ಭಾರತೀಯ ಕಾಶ್ಮೀರ್ ಸಿಂಗ್ ಅವರನ್ನು ಮಾರ್ಚ್ 3ರಂದು ಬಿಡುಗಡೆ ಮಾಡಲಾಗುವುದೆಂದು ಪಾಕಿಸ್ಥಾನ ಅಧಿಕೃತವಾಗಿ ಪ್ರಕಟಿಸಿತು. ಬೇಹುಗಾರಿಕೆ ಆರೋಪದ ಮೇಲೆ 1973ರಲ್ಲಿ ಬಂಧಿತರಾದ ಸಿಂಗ್ ಗೆ ಪಾಕಿಸ್ಥಾನದ ಅಧ್ಯಕ್ಷ ಪರ್ವೇಜ್ ಮುಷರಫ್ ಕ್ಷಮಾದಾನ ನೀಡಿದರು.

2008: ಬೆಂಗಳೂರು ಮಹಾನಗರದ ಬಳ್ಳಾರಿ ರಸ್ತೆಯ ಬಿಡಿಎ ಜಂಕ್ಷನ್ನಿನಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕೈಗೊಂಡ ಸರ್ಫೇಸ್ ಪಾಸ್ ಕಾಮಗಾರಿಗೆ ಈದಿನ ರಾತ್ರಿ ಚಾಲನೆ ದೊರೆಯಿತು. ಈ ಹಿನ್ನೆಲೆಯಲ್ಲಿ ಇಲ್ಲಿನ ಸಂಚಾರ ಮಾರ್ಗದಲ್ಲೂ ಬದಲಾವಣೆ ಜಾರಿಯಾಯಿತು. 

1960: ಪ್ಲೇಬಾಯ್ ಮ್ಯಾಗಜಿನ್ ಸ್ಥಾಪಕ ಹಗ್ ಹೆಫ್ನರ್ ಅವರಿಂದ ಚಿಕಾಗೋದಲ್ಲಿ (ಶಿಕಾಗೋ) ನೂತನ `ಪ್ಲೇಬಾಯ್'  ಕ್ಲಬ್ ಆರಂಭ.

1908: `ಬಿಲ್ಲಿ ಮಗುವನ್ನು' ಕೊಂದವ ಎಂದೇ ಖ್ಯಾತರಾಗಿದ್ದ ಪಾಶ್ಚಾತ್ಯ, ಅಮೆರಿಕನ್ ಕಾನೂನು ತಜ್ಞ ಪ್ಯಾಟ್ರಿಕ್ ಫ್ಲಾಯ್ಡ್ ಗ್ಯಾರೆಟ್ (1850-1908) 57ನೇ ವಯಸ್ಸಿನಲ್ಲಿ ನಿಧನರಾದರು. 

1904: ಭಾರತದ ಖ್ಯಾತ ನೃತ್ಯಕಲಾವಿದೆ ರುಕ್ಮಿಣಿ ದೇವಿ ಅರುಂಡೇಲ್ (1904-1986) ಜನನ. ಭರತನಾಟ್ಯವನ್ನು ಜನಪ್ರಿಯಗೊಳಿಸಿದ ಇವರು ಇಂದು ನಾವು ನೋಡುತ್ತಿರುವ ನೃತ್ಯ-ನಾಟಕ ಪ್ರಕಾರದ ಆದಿ ಪರಿಶೋಧಕಿ. ಭರತನಾಟ್ಯದ ತರಬೇತಿ ನೀಡಲು ರುಕ್ಮಿಣಿದೇವಿ ಅವರು ಮದ್ರಾಸಿನಲ್ಲಿ (ಇಂದಿನ ಚೆನ್ನೈ)  ಖ್ಯಾತ ಕಲಾಕ್ಷೇತ್ರವನ್ನು ಸ್ಥಾಪಿಸಿದರು.

1904: ಅಮೆರಿಕದ ಜಾಜ್ ಬ್ಯಾಂಡ್ ಧುರೀಣ ಜಿಮ್ಮಿ ಡೋರ್ಸೆ (1904-1957) ಜನನ. ಇವರು ಮತ್ತು ಇವರ ತಮ್ಮ ಸಹೋದರ ಟಾಮ್ಮಿ ಡೋರ್ಸೆ ಅಮೆರಿಕದ ಜನಪ್ರಿಯ ಡ್ಯಾನ್ಸ್ ಆರ್ಕೆಸ್ಟ್ರಾ ಪ್ರಕಾರವಾದ ಜಾಜ್ನಲ್ಲಿ ಖ್ಯಾತಿ ಪಡೆದವರು.

1896: ಭಾರತೀಯ ಸ್ವಾತಂತ್ರ್ಯ ಹೋರಾಟಗಾರ ಮೊರಾರ್ಜಿ ದೇಸಾಯಿ (1896-1995) ಜನಿಸಿದರು. 1977-79ರ ಅವಧಿಯ್ಲಲಿ ಪ್ರಧಾನಿಯಾಗಿದ್ದ ಇವರು ಸಾರ್ವಭೌಮ ಭಾರತದ ನಾಯಕಸ್ಥಾನಕ್ಕೆ (ಪ್ರಧಾನಿ ಪದ) ಏರಿದ ಪ್ರಪ್ರಥಮ ಕಾಂಗ್ರೆಸ್ಸೇತರ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

1880: ಸ್ವಿಟ್ಜರ್ ಲ್ಯಾಂಡಿನಲ್ಲಿ ಸೈಂಟ್ ಗೊಟ್ಹಾರ್ಡ್ ಸುರಂಗಕ್ಕಾಗಿ ಒಂಬತ್ತೂಕಾಲು ಮೈಲು ಕೊರೆಯುವ ಕಾರ್ಯ ಪೂರ್ಣಗೊಂಡಿತು. ಈ ಸುರಂಗವು ಸ್ವಿಸ್ ಮತ್ತು ಇಟಾಲಿಯನ್ ರೈಲ್ವೇಯನ್ನು ಸಂಪರ್ಕಿಸುತ್ತದೆ.

1860: ಹರ್ಮನ್ ಹಾಲ್ ರಿತ್ (1840-1914) ಜನನ. ಅಮೆರಿಕದ ಸಂಶೋಧಕ ಹಾಗೂ ಉದ್ಯಮಿಯಾದ ಇವರು ಪಂಚ್ ಮಾಡಿದ ಕಾರ್ಡುಗಳ ತೂತುಗಳಲ್ಲಿ ಮಾಹಿತಿ ದಾಖಲಿಸುವ ವಿಧಾನವನ್ನು ವಿನ್ಯಾಸಗೊಳಿಸಿದರು. ಇದೇ ಮುಂದೆ ಡಿಜಿಟಲ್ ಕಂಪ್ಯೂಟರ್ ವ್ಯವಸ್ಥೆಗೆ ಮೂಲವಾಯಿತು. 1896ರಲ್ಲಿ ಹರ್ಮನ್ ಅವರು ನ್ಯೂಯಾರ್ಕ್ ನಗರದಲ್ಲಿ ಗಣಕ ಯಂತ್ರ Tabulating Machine)  ಸ್ಥಾಪಿಸಿದರು. ಇದು ಐಬಿಎಂ ಕಾರ್ಪೋರೇಷನ್ನಿನಲ್ಲಿ ವಿಕಸಿತಗೊಂಡಿತು.

1840: `ಆಧುನಿಕ ಜಲಾಂತರ್ಗಾಮಿ ಜನಕ' ಎಂದೇ ಖ್ಯಾತರಾಗಿರುವ ಐರಿಷ್ ಸಂಶೋದಕ ಜಾನ್ ಫಿಲಿಪ್ ಹೊಲ್ಲಾರ್ಡ್(1840-1914) ಜನನ. ಇವರು 1900ರಲ್ಲಿ ಅಮೆರಿಕದ ನೌಕಾಪಡೆಗಾಗಿ ಮೊತ್ತ ಮೊದಲ ಆಧುನಿಕ ಜಲಾಂತರ್ಗಾಮಿಗಳನ್ನುನಿರ್ಮಿಸಿದರು.

1468: ಪುನರುತ್ಥಾನ ಪೋಪ್ ಅವಧಿಯ ಕೊನೆಯ ಪೋಪ್ ಹಾಗೂ ಪ್ರತಿ ಸುಧಾರಣೆಯ ಮೊದಲ ಪೋಪ್ ಎಂದು ಖ್ಯಾತಿ ಪಡೆದ ಮೂರನೇ ಪಾಲ್ (1468-1549) ಜನನ. 1534-1534ರ ಅವಧಿಯಲ್ಲಿ ಪೋಪ್ ಆಗಿದ್ದ ಇವರು 1545ರಲ್ಲಿ `ಕೌನ್ಸಿಲ್ ಆಫ್ ಟ್ರೆಂಟ್' ಸ್ಥಾಪಿಸಿ ಅದನ್ನೇ ಪ್ರತಿ ಸುಧಾರಣೆ ಎಂದು ಕರೆದರು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement