ಗ್ರಾಹಕರ ಸುಖ-ದುಃಖ

My Blog List

Sunday, March 1, 2009

ಇಂದಿನ ಇತಿಹಾಸ History Today ಫೆಬ್ರುವರಿ 28

ಇಂದಿನ ಇತಿಹಾಸ 

ಫೆಬ್ರುವರಿ 28

ಈದಿನವನ್ನು ಭಾರತದಲ್ಲಿ `ರಾಷ್ಟ್ರೀಯ ವಿಜ್ಞಾನ ದಿನ'ವಾಗಿ ಆಚರಿಸಲಾಗುತ್ತಿದೆ. 1928ರಲ್ಲಿ ಈದಿನ  ಸರ್ ಚಂದ್ರಶೇಖರ ವೆಂಕಟರಾಮನ್ (ಸಿ.ವಿ.ರಾಮನ್) ಅವರು ಸಣ್ಣ ಕಣದ ಮೂಲಕ ಬೆಳಕನ್ನು ಹಾಯಿಸಿದಾಗ ಅದರಲ್ಲಿ ಉಂಟಾಗುವ ವ್ಯತ್ಯಾಸವನ್ನು (ಚದುರುವಿಕೆ) ಕಂಡು ಹಿಡಿದರು. ಅವರ ಈ ಸಂಶೋಧನೆ `ರಾಮನ್ ಎಫೆಕ್ಟ್' ಎಂದೇ ಖ್ಯಾತಿ ಪಡೆಯಿತು ಹಾಗೂ ಅವರಿಗೆ 1930ರಲ್ಲಿ ನೊಬೆಲ್ ಪ್ರಶಸ್ತಿಯನ್ನು ತಂದುಕೊಟ್ಟಿತು.

2008: ಲಾಹೋರಿನ ಕೇಂದ್ರ ಕಾರಾಗೃಹದಲ್ಲಿ 35 ವರ್ಷಗಳಿಂದ ಸೆರೆವಾಸದಲ್ಲಿರುವ ಭಾರತೀಯ ಕಾಶ್ಮೀರ ಸಿಂಗ್,   ಉಭಯ ದೇಶಗಳ ಜನಪ್ರತಿನಿಧಿಗಳ ಪ್ರಯತ್ನದಿಂದಾಗಿ ಶೀಘ್ರದಲ್ಲೇ ಬಿಡುಗಡೆಯಾಗಿ ಪಂಜಾಬಿನಲ್ಲಿರುವ ತನ್ನ ಕುಟುಂಬ ಸದಸ್ಯರ ಜೊತೆಗೂಡಲಿದ್ದಾನೆ ಎಂದು ಇಸ್ಲಾಮಾಬಾದಿನಲ್ಲಿ ಪ್ರಕಟಿಸಲಾಯಿತು. ಬೇಹುಗಾರಿಕೆ ಆರೋಪದ ಮೇಲೆ 1973ರಲ್ಲಿ ಬಂಧನಕ್ಕೊಳಗಾಗಿದ್ದ ಕಾಶ್ಮೀರ ಸಿಂಗ್ ಗೆ ಸೇನಾ ನ್ಯಾಯಾಲಯ ಮರಣದಂಡನೆ ವಿಧಿಸಿತ್ತು. ಆದರೆ, ಅದಾವುದೋ ಕಾರಣಕ್ಕೆ ಶಿಕ್ಷೆ ಜಾರಿಗೊಳಿಸದೇ 35 ವರ್ಷಗಳ ಕಾಲ ಸೆರೆಮನೆಯ ಕತ್ತಲ ಕೋಣೆಯಲ್ಲಿ ಆತನನ್ನು ಏಕಾಂಗಿಯಾಗಿ ಇರಿಸಲಾಗಿತ್ತು. ಜೈಲು ಸುಧಾರಣೆ ಕಾರ್ಯಕ್ರಮದ ಭಾಗವಾಗಿ ಪಾಕಿಸ್ಥಾನದ ಮಾನವ ಹಕ್ಕುಗಳ ಸಚಿವ ಅನ್ಸಾರ್ ಬರ್ನಿ ಲಾಹೋರ್ ಜೈಲಿಗೆ ಭೇಟಿ ನೀಡಿದ್ದಾಗ ಈತನ ಹೃದಯವಿದ್ರಾವಕ ಕಥೆ ಗೊತ್ತಾಯಿತು. ದೀರ್ಘಕಾಲದ ಸೆರೆವಾಸದಿಂದ ಮಾನಸಿಕವಾಗಿ ಅಸ್ವಸ್ಥಗೊಂಡಿದ್ದ ಕಾಶ್ಮೀರ್ ಸಿಂಗ್ ಗೆ ಚಿಕಿತ್ಸೆ ಕೊಡಿಸಲಾಯಿತು. ನಂತರ ಬರ್ನಿ  ಅವರು ಅಧ್ಯಕ್ಷ ಪರ್ವೇಜ್ ಮುಷರಫ್ ಬಳಿ ಸಿಂಗ್ ಬಿಡುಗಡೆಗೆ ಮನವಿ ಮಾಡಿದ್ದರು. ಬರ್ನಿ  ಮನವಿ ಮೇರೆಗೆ ಪಂಜಾಬಿನ ಹೋಶಿಯಾರ್ ಪುರ ಜಿಲ್ಲೆಯಲ್ಲಿ ಕಾಶ್ಮೀರ್ ಸಿಂಗ್ ಕುಟುಂಬದವರನ್ನು ಬಿಜೆಪಿ ಸಂಸದ ಅವಿನಾಶ್ ರಾಯ್ ಖನ್ನಾ ಪತ್ತೆ ಮಾಡಿದರು. ಗರ್ ಶಂಕರ್ ಉಪ ಜಿಲ್ಲೆಯ ನಂಗಲ್ ಚೌರನ್ ಗ್ರಾಮದಲ್ಲಿ ಇಬ್ಬರು ಮಕ್ಕಳೊಂದಿಗೆ ಸಿಂಗ್ ಪತ್ನಿ ವಾಸವಾಗಿದುದ್ದುದು ಗೊತ್ತಾಯಿತು. ಈ ವಿವರನ್ನು ಖನ್ನಾ ಅವರಿಂದ ಪಡೆದ ಬರ್ನಿ ಲಾಹೋರ್ ಕೇಂದ್ರ ಕಾರಾಗೃಹದಲ್ಲಿ ಕಾಶ್ಮೀರ ಸಿಂಗ್ಗೆ ವಿವರ ತಿಳಿಸಿ ಬಿಡುಗಡೆಯ ಬೆಳವಣಿಗೆ ವಿವರಿಸಿದರು.
 
2008: ವಿವಾದಿತ ಸೇತುಸಮುದ್ರಂ ಕಡಲ್ಗಾಲುವೆ ಯೋಜನೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟಿಗೆ ಸಲ್ಲಿಸಲಾಗುವ  ಪ್ರಮಾಣಪತ್ರಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿತು. ಪ್ರಧಾನಿ ಮನಮೋಹನ್ ಸಿಂಗ್ ಅಧ್ಯಕ್ಷತೆಯಲ್ಲಿ ರಾಜಕೀಯ ವಿದ್ಯಮಾನಗಳ ಕುರಿತ ಸಚಿವ ಸಂಪುಟ ಸಭೆಯಲ್ಲಿ ಈ ಪ್ರಮಾಣಪತ್ರಕ್ಕೆ ಅನುಮೋದನೆ ನೀಡಲಾಯಿತು. ಸೇತುಸಮುದ್ರಂ ಯೋಜನೆಗೆ ನೀಡಿರುವ ತಡೆಯಾಜ್ಞೆ ತೆರವು ಮಾಡಲು ಕೋರುವುದು ಈ ಪ್ರಮಾಣಪತ್ರದ ಉದ್ದೇಶ ಎಂದು ಯುಪಿಎ ಮೂಲಗಳು ತಿಳಿಸಿದವು. ಈ ವಿಷಯಕ್ಕೆ ಸಂಬಂಧಿಸಿದಂತೆ ಕೇಂದ್ರದ ಬಂದರು ಖಾತೆ ಮತ್ತು ಸಂಸ್ಕೃತಿ ಖಾತೆಗಳ ಮಧ್ಯೆ ಭಿನ್ನಾಭಿಪ್ರಾಯ ಇದ್ದು, ಈ ಎರಡೂ ಖಾತೆಗಳ ಸಚಿವರು ಸಂಪುಟ ಸಮಿತಿ ಸಭೆಗೆ ಹಾಜರಾಗಿದ್ದರು. ಬಂದರು ಖಾತೆ ಸಚಿವರಾದ ಡಿಎಂಕೆಯ ಟಿ.ಆರ್.ಬಾಲು ಯೋಜನೆ ಆಗಿಯೇ ತೀರಬೇಕೆಂದು ಪಟ್ಟು ಹಿಡಿದರೆ, ಸಂಸ್ಕೃತಿ ಸಚಿವೆ ಅಂಬಿಕಾ ಸೋನಿ, `ರಾಮಸೇತು' ಮನುಷ್ಯ ನಿರ್ಮಿತವೋ ಅಥವಾ ನೈಸರ್ಗಿಕವಾದದ್ದೋ ಎಂಬ ಬಗ್ಗೆ ಏಕಾಏಕಿ ತೀರ್ಮಾನಕ್ಕೆ ಬರುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.

2008:  `ಸರ್ಕಾರಿ ನೌಕರರೊಬ್ಬರು ಮೃತರಾದಾಗ ಅವರ ಹತ್ತಿರದ ಸಂಬಂಧಿಕರು ಮಾನವೀಯತೆಯ ಆಧಾರದಲ್ಲಿ ತಮ್ಮ ಹಕ್ಕೆಂದು ಪರಿಗಣಿಸಿ ಉದ್ಯೋಗ ಯಾಚಿಸುವಂತಿಲ್ಲ' ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿತು. ಆದರೆ ಈ ವಿಷಯದಲ್ಲಿ `ಮೃತ ನೌಕರನ ಕುಟುಂಬದ ಆರ್ಥಿಕ ಸ್ಥಿತಿಗತಿಗಳನ್ನು ಅವಲಂಬಿಸಿ ನಿರ್ಧಾರ ಕೈಗೊಳ್ಳಬೇಕಾಗುತ್ತದೆ' ಎಂದು ನ್ಯಾಯಮೂರ್ತಿಗಳಾದ ಪಿ.ಪಿ. ನಾವಲೇಕರ್ ಮತ್ತು ಎಲ್. ಎಸ್. ಪಂಟಾ ಅವರನ್ನೊಳಗೊಂಡ ಪೀಠ ತೀರ್ಪು ನೀಡಿತು. ಆಂಧ್ರಪ್ರದೇಶ ರಸ್ತೆ ಸಾರಿಗೆ ನಿಗಮದಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ತನ್ನ ಪತಿ ಮೃತರಾದ ಕಾರಣವೊಡ್ಡಿ ಸರ್ವರುನ್ನೀಸಾ ಬೇಗಂ ಎಂಬ ವಿಧವೆ ಮಾನವೀಯತೆಯ ಆಧಾರದಲ್ಲಿ ತನಗೆ ಉದ್ಯೋಗಕ್ಕೆ ಬದಲಾಗಿ ಒಂದು ಲಕ್ಷ ರೂಪಾಯಿಗಳ ಪರಿಹಾರ ನೀಡುವಂತೆ ಕೋರಿದ್ದಕ್ಕೆ ಸಂಬಂಧಿಸಿ ರಾಜ್ಯದ ಹೈಕೋರ್ಟ್ ನೀಡಿದ್ದ ತೀರ್ಪನ್ನು ವಜಾಗೊಳಿಸಿದ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿತು. ರಸ್ತೆ ಸಾರಿಗೆ ನಿಗಮವು ವಿಧವೆಗೆ ಉದ್ಯೋಗ ಅಥವಾ ಪರಿಹಾರ ನೀಡಲು ನಿರಾಕರಿಸಿದ್ದನ್ನು ಪ್ರಶ್ನಿಸಿ ಬೇಗಂ, ಹೈಕೋರ್ಟ್ ಮೊರೆ ಹೋದಾಗ, ಅದು ಉದ್ಯೋಗ ನೀಡಲು ಸೂಚಿಸಿತ್ತು. ಆದರೆ ಈ ಆದೇಶವನ್ನು ಸಾರಿಗೆ ನಿಗಮ ಸುಪ್ರೀಂಕೋರ್ಟಿನಲ್ಲಿ ಪ್ರಶ್ನಿಸಿತ್ತು.  

2008: ಸೂರತ್ ಸಮೀಪ ಉದಾನ ರೈಲ್ವೆ ನಿಲ್ದಾಣದ ಕಂಕ್ರಖಾಡಿ ಸೇತುವೆಯ ಮೇಲೆ ಫೆಬ್ರುವರಿ 27ರ ರಾತ್ರಿ `ಸೌರಾಷ್ಟ್ರ ಎಕ್ಸ್ ಪ್ರೆಸ್' ರೈಲು ಹರಿದು ಕನಿಷ್ಠ 16 ಪ್ರಯಾಣಿಕರು ಮೃತರಾದರು. ಮೃತರಲ್ಲಿ ಇಬ್ಬರು ಮಹಿಳೆಯರು ಮತ್ತು ಹೆಚ್ಚಿನವರು ಮಕ್ಕಳು. ಇವರೆಲ್ಲರೂ ಉತ್ತರಪ್ರದೇಶದ ಕಾರ್ಮಿಕರು. ಈ ಕುಟುಂಬವು ವಾರಣಾಸಿಯಿಂದ ಸೂರತ್ತಿಗೆ ಹೋಗುವ `ತಪತಿ ಗಂಗಾ ಎಕ್ಸ್ ಪ್ರೆಸ್' ರೈಲಿನ ಮೂಲಕ ಉದಾನಕ್ಕೆ ಬಂದಿತ್ತು. ನತದೃಷ್ಟರು ರಾತ್ರಿ 11 ಗಂಟೆಗೆ ಉದಾನ ನಿಲ್ದಾಣದಲ್ಲಿ ರೈಲಿನಿಂದ ಕೆಳಗಿಳಿದು ಹಳಿಯ ಮೇಲೆ ನಡೆದುಕೊಂಡು ಸೇತುವೆ ದಾಡುತ್ತಿದ್ದಾಗ ವೇಗವಾಗಿ ಬಂದ ಮುಂಬೈ-ದ್ವಾರಕಾ ರೈಲಿಗೆ ಸಿಕ್ಕಿ ಮೃತರಾದರು.

2008: ಆರ್ಕ್ಟಿಕ್ ನಲ್ಲಿ ಎರಡು ವರ್ಷಗಳ ಹಿಂದೆ ಪತ್ತೆಯಾದ ಸಮುದ್ರ ದೈತ್ಯನ ಪಳೆಯುಳಿಕೆ ಈವರೆಗೆ ವಿಜ್ಞಾನಿಗಳಿಗೆ ತಿಳಿದಿರುವ ಸಮುದ್ರ ಸರೀಸೃಪಗಳಲ್ಲೇ ಅತಿ ದೊಡ್ಡದು ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟರು. `ದಿ ಮಾನ್ಸ್ಟರ್' (ದೈತ್ಯ) ಎಂದು ಕರೆಯಲಾಗುವ ಈ ಸರೀಸೃಪದ   ಪಳೆಯುಳಿಕೆಯನ್ನು ನಾರ್ವೆಯ ವಿಜ್ಞಾನಿಗಳು ಎರಡು ವರ್ಷಗಳ ಹಿಂದೆ ಆರ್ಕ್ಟಿಕ್ ದ್ವೀಪದಲ್ಲಿ ಪತ್ತೆ ಹಚ್ಚಿದ್ದರು. ಬಲವಾಗಿ ಬೀಸುತ್ತಿದ್ದ ಗಾಳಿ, ಮಂಜು, ಮಳೆ, ಶೂನ್ಯಕ್ಕಿಂತ ಕೆಳಗಿನ ತಾಪಮಾನ, ಹಿಮ ಕರಡಿಗಳ ದಾಳಿಯ ಭೀತಿಯ ನಡುವೆಯೇ ವಿಜ್ಞಾನಿಗಳು ಟನ್ ಗಟ್ಟಲೆ ಕಲ್ಲನ್ನು ಕೈಯಿಂದಲೇ ಅಗೆದು 2007ರಲ್ಲಿ ಈ ದೈತ್ಯ ಪಳೆಯುಳಿಕೆ ಹೊರ ತೆಗೆದಿದ್ದರು. 15 ಕೋಟಿ ವರ್ಷಗಳ ಹಿಂದಿನ ಈ ಪಳೆಯುಳಿಕೆ ಜುರಾಸಿಕ್ ಯುಗಕ್ಕೆ ಸೇರಿದ್ದು ಎನ್ನಲಾಗಿದೆ. ದೈತ್ಯ ಡೈನೊಸಾರ್ ಗಳು ಭೂಮಿಯ ಮೇಲೆ ಓಡಾಡಿಕೊಂಡಿದ್ದ ಕಾಲದಲ್ಲಿ ಈ ಸರೀಸೃಪ ಸಮುದ್ರದಲ್ಲಿ ಜೀವಿಸಿತ್ತು. ಒಸ್ಲೊ ವಿಶ್ವವಿದ್ಯಾಲಯದ ಡಾ. ಜಾರ್ನ್ ಹುರುಮ್ ನೇತೃತ್ವದ ತಂಡ ಈ ಪಳೆಯುಳಿಕೆಯ ಸಂಪೂರ್ಣ ಅಧ್ಯಯನ ನಡೆಸಿತು. ಆಸ್ಟ್ರೇಲಿಯಾದಲ್ಲಿ ಈ ಹಿಂದೆ ಪತ್ತೆಯಾಗಿದ್ದ ಪ್ಲಿಯೊಸಾರ್ ಗಿಂತ ಇದು ಶೇ 20ರಷ್ಟು ದೊಡ್ಡದು ಎಂದು ತಂಡ ಹೇಳಿತು.

2008: ನವದೆಹಲಿಯಲ್ಲಿನ ಖಾಸಗಿ ಆಸ್ಪತ್ರೆ ವೈದ್ಯರು ಮಹಿಳೆಯೊಬ್ಬರ ತಲೆ ಬುರುಡೆಯಿಂದ ಭಾರಿ ಗಾತ್ರದ ಗಡ್ಡೆಯನ್ನು ಯಶಸ್ವಿಯಾಗಿ ತೆಗೆದು ಹಾಕಿದರು. ಸುಮಾರು 1280 ಘನ ಸೆಂಟಿಮೀಟರ್ ಗಾತ್ರದ ಈ ಗಡ್ಡೆ ವಿಶ್ವದಲ್ಲೇ ಅತಿ ದೊಡ್ಡ ಗಡ್ಡೆಯಾಗಿರುವ ಸಾಧ್ಯತೆ ಇದೆ ಎಂದು ಶಸ್ತ್ರಚಿಕಿತ್ಸಾ ತಂಡದಲ್ಲಿದ್ದ ಸರ್ ಗಂಗಾರಾಮ್ ಆಸ್ಪತ್ರೆಯ ಡಾ. ಮನೀಶ್ ವೈಶ್ ಹೇಳಿದರು. `ತಲೆಬರುಡೆಯಲ್ಲಿ ದೊಡ್ಡ ಗಾತ್ರದ ಗಡ್ಡೆ ಇರುವುದು ಸ್ಕ್ಯಾನಿಂಗಿನಿಂದ ಗೊತ್ತಾಯಿತು. ಈ ಗಡ್ಡೆ ಬೆಳೆದು ಮಿದುಳಿನ ಎರಡೂ ಭಾಗಗಳಿಗೆ ಹಬ್ಬಿತ್ತು. ಮಿದುಳಿನ ಈ ಭಾಗ ಕೈ ಕಾಲುಗಳ ಚಲನೆ ನಿಯಂತ್ರಿಸುವ ಜಾಗವಾದ್ದರಿಂದ ಶಸ್ತ್ರಚಿಕಿತ್ಸೆ ಮಾಡುವುದು ಸವಾಲಿನ ಕೆಲಸವಾಗಿತ್ತು. ಆದರೆ, ನಮ್ಮ ತಂಡ, 6 ಗಂಟೆ ಕಾಲ ಶಸ್ತ್ರಚಿಕಿತ್ಸೆ ಮಾಡಿ ಯಶಸ್ವಿಯಾಯಿತು' ಎಂದು ವೈದ್ಯ ಬಿ.ಕೆ.ರಾವ್ ಹೇಳಿದರು.
 
2008: ಬ್ರಿಟನ್ನಿನ ರಾಷ್ಟ್ರೀಯ ಆರೋಗ್ಯ ಸೇವಾ ಯೋಜನೆಯಡಿ ಐರೋಪ್ಯ ವೈದ್ಯರಿಗೆ ಅವಕಾಶ ಕಲ್ಪಿಸುವ ಸರ್ಕಾರದ ನಿರ್ಧಾರದಿಂದ ನಿರುದ್ಯೋಗಿಗಳಾಗಿದ್ದ ಭಾರತೀಯ ವೈದ್ಯರ ಅರ್ಜಿಯ ವಿಚಾರಣೆ ಬ್ರಿಟನ್ನಿನ ಅತ್ಯುನ್ನತ ನ್ಯಾಯಾಲಯದಲ್ಲಿ ಆರಂಭವಾಯಿತು. ಸರ್ಕಾರಿ ಸೇವೆಗೆ ಐರೋಪ್ಯ ವೈದ್ಯರನ್ನೇ ನೇಮಿಸಿಕೊಳ್ಳುವ ಬ್ರಿಟನ್ ಸರ್ಕಾರದ ನಿರ್ಧಾರದ ವಿರುದ್ಧ ಭಾರತೀಯ ವೈದ್ಯರು ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ಬ್ರಿಟನ್ ಹೈಕೋರ್ಟ್ 2007ರ ಅಕ್ಟೋಬರಿನಲ್ಲಿ ಭಾರತೀಯ ವೈದ್ಯರ ಪರವಾಗಿ ತೀರ್ಪು ನೀಡಿತ್ತು. ಈ ತೀರ್ಪನ್ನು ಪ್ರಶ್ನಿಸಿ ಬ್ರಿಟನ್ ಆರೋಗ್ಯ ಇಲಾಖೆ ಅತ್ಯುನ್ನತ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿತ್ತು.

2007: ಶಿರೋಮಣಿ ಅಕಾಲಿ ದಳ ಮತ್ತು ಬಿಜೆಪಿ ಶಾಸಕಾಂಗ ಸದಸ್ಯರು ತಮ್ಮ ನಾಯಕನನ್ನಾಗಿ ಪ್ರಕಾಶ್ ಸಿಂಗ್ ಬಾದಲ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಿದರು.

2007: `ಕಣ್ಣಾಮುಚ್ಚೇ ಕಾಡೇಗೂಡೇ..; ಆಡಲು ಹೋದ ನಾಲ್ಕು ವರ್ಷದ ಬಾಲಕ ಮಂಜುನಾಥನನ್ನು ಬೀದಿನಾಯಿಗಳ ಹಿಂಡು ಕಚ್ಚಿ ಎಳೆದಾಡಿ ಕೊಂದ ಘಟನೆ ಬೆಂಗಳೂರಿನ ತಿಪ್ಪಸಂದ್ರ ಸಮೀಪದ ಬಿಇಎಂಎಲ್ (ಬೆಮೆಲ್) ಬಡಾವಣೆಯಲ್ಲಿ ಸಂಭವಿಸಿತು. ಬೆಮೆಲ್ ಕಾರ್ಖಾನೆಯ ಸಿಬ್ಬಂದಿ ಮಹೇಶ್ವರ- ಅನ್ನಪೂರ್ಣ ದಂಪತಿಯ ಎರಡನೇ ಮಗನಾದ ಮಂಜುನಾಥನನ್ನು 15-20 ಬೀದಿನಾಯಿಗಳ ಗುಂಪು ದಾಳಿ ಮಾಡಿ ಕೊಂದು ಹಾಕಿತು. ಬೆಂಗಳೂರಿನಲ್ಲಿ ಮಕ್ಕಳ ಮೇಲೆ ಬೀದಿನಾಯಿಗಳು ದಾಳಿ ನಡೆಸಿದ ಮೂರನೇ ಪ್ರಕರಣ ಇದು. ಜನವರಿ 5ರಂದು ಚಂದ್ರಾ ಬಡಾವಣೆಯಲ್ಲಿ ಶ್ರೀದೇವಿ (9) ಎಂಬ ಬಾಲಕಿಯನ್ನು ನಾಯಿಗಳು ಕಚ್ಚಿ ಕೊಂದಿದ್ದವು. ಜನವರಿ 10ರಂದು ಚಂದ್ರಾ ಬಡಾವಣೆಯಲ್ಲೇ ಏಳು ವರ್ಷದ ಇನ್ನೊಬ್ಬ ಬಾಲಕಿ ಮೇಲೆ ನಾಯಿಗಳು ದಾಳಿ ಮಾಡಿದ್ದವು. ಅದೃಷ್ಟವಶಾತ್ ಆ ಮಗು ಸಾವಿನಿಂದ ಪಾರಾಗಿತ್ತು.

2007: ಹೃದಯಾಘಾತದ ಪರಿಣಾಮವಾಗಿ ವೈದ್ಯರು `ಸತ್ತಿದೆ' ಎಂಬುದಾಗಿ ವೈದ್ಯರಿಂದ ದೃಢಪಡಿಸಲ್ಪಿಟ್ಟ್ದಿದ ಮಗುವೊಂದು ಅರ್ಧ ಗಂಟೆಯ ಬಳಿಕ ಬದುಕಿದ ಘಟನೆ ಲಂಡನ್ನಿನಲ್ಲಿ ನಡೆಯಿತು. ವೂಡಿ ಲ್ಯಾಂಡರ್ ಎಂಬ ಈ ಬಾಲಕ 30 ನಿಮಿಷಗಳ ಕಾಲ `ಸತ್ತಿದ್ದ'. ಮಗುವನ್ನು ಆತನ ಪಾಲಕರಾದ ಲೀಡ್ಸ್ ನ ಲ್ಯಾಂಡರ್- ಕರೇನ್ ದಂಪತಿಗೆ ಒಪ್ಪಿಸಿಯೂ ಆಗಿತ್ತು. ಆ ಬಳಿಕ ತಂದೆಯ ಕೈಗಳಲ್ಲಿ ಇದ್ದ ಬಾಲಕನಲ್ಲಿ ಚಲನೆ ಕಾಣಿಸಿತು. ದಾದಿಯರು ಬಾಲಕನ ಬಾಯಿಯಲ್ಲಿದ್ದ ಟ್ಯೂಬ್ ತೆಗೆದಾಗ ಬಾಯಿಯಲ್ಲಿ ಒಂದಷ್ಟು ಕಫ ಕಂಡು ಬಂದಿತು. ಮಗು ಅಲುಗಾಡಲು ಆರಂಭಿಸುತ್ತಿದ್ದಂತೆಯೇ ದಾದಿಯೊಬ್ಬಳು ಅದನ್ನು ಸೆಳೆದುಕೊಂಡು ಪರೀಕ್ಷಿಸತೊಡಗಿದಳು. ಸುದ್ದಿ ತಿಳಿದು ಬಂದ ವೈದ್ಯರು  ಆತನಿಗೆ ಮತ್ತೆ ಚಿಕಿತ್ಸೆ ನೀಡಲಾರಂಭಿಸಿದರು. ಎಲ್ಲರ ಕಣ್ಣೆದುರಲ್ಲೇ ಆತ ಮತ್ತೆ ಬದುಕಿಬಂದ. ಇಂತಹ ಪುಟ್ಟ ಮಗು ಬಿಡಿ, ದೊಡ್ಡ ವ್ಯಕ್ತಿಗಳು ಕೂಡಾ 30 ನಿಮಿಷಗಳ ಬಳಿಕ ಮತ್ತೆ ಜೀವಂತಗೊಂಡ ಪ್ರಕರಣವನ್ನು ತಾವು ಕಂಡು ಕೇಳಿಲ್ಲ ಎಂದು ವೈದ್ಯರು ಅಚ್ಚರಿ ಪಟ್ಟರು.

1986: ಸ್ಟಾಕ್ ಹೋಮ್ನಲ್ಲಿ ಸ್ವೀಡಿಷ್ ಪ್ರಧಾನಿ ಒಲೋಫ್ ಪಾಮೆ ಅವರ ಹತ್ಯೆ ನಡೆಯಿತು. ಈ ಕೊಲೆ ಪ್ರಕರಣ ನಿಗೂಢವಾಗಿಯೇ ಉಳಿಯಿತು.

1968: ಶ್ರೀಅರಬಿಂದೋ ಆಶ್ರಮದ ಅಂತಾರಾಷ್ಟ್ರೀಯ ಟೌನ್ ಶಿಪ್ ಅರೋವಿಲ್ಲೆ ಉದ್ಘಾಟನೆಗೊಂಡಿತು.

1963: ಭಾರತದ ಮೊದಲ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ಅವರು ಪಟ್ನಾದಲ್ಲಿ ತಮ್ಮ 78ನೇ ವಯಸ್ಸಿನಲ್ಲಿ ನಿಧನರಾದರು. ಅವರು 1950-52ರ ಅವಧಿಯಲ್ಲಿ ಭಾರತದ ರಾಷ್ಟ್ರಪತಿಯಾಗಿದ್ದರು.

1936: ಪಂಡಿತ್ ಜವಾಹರಲಾಲ್ ನೆಹರೂ ಅವರ ಪತ್ನಿ ಕಮಲಾ ನೆಹರೂ ಸ್ವಿಜರ್ಲೆಂಡಿನ ಲೂಸೆನ್ ಸಮೀಪ ಮೃತರಾದರು.

1926: ಸ್ವೆತ್ಲಾನಾ ಅಲ್ಲಿಲುಯಯೇವಾ ಹುಟ್ಟಿದ ದಿನ. ಸೋವಿಯತ್ ಆಡಳಿತಗಾರ ಜೋಸೆಫ್ ಸ್ಟಾಲಿನ್ ಪುತ್ರಿಯಾದ ಈಕೆ 
1967ರಲ್ಲಿ ಅಮೆರಿಕಕ್ಕೆ `ಪಕ್ಷಾಂತರ' (ದೇಶಾಂತರ) ಮಾಡುವ ಮೂಲಕ ಜಾಗತಿಕ ಕುತೂಹಲ ಕೆರಳಿಸಿದರು.

1922: ಬ್ರಿಟನ್ ಔಪಚಾರಿಕವಾಗಿ ಈಜಿಪ್ಟಿಗೆ ಸ್ವಾತಂತ್ರ್ಯವನ್ನು ಘೋಷಿಸಿತು. ಆದರೆ ಸುಯೆಜ್ ಕಾಲುವೆ ಮತ್ತು ರಾಷ್ಟ್ರದ ರಕ್ಷಣೆ ಮೇಲಿನ ನಿಯಂತ್ರಣವನ್ನು ಉಳಿಸಿಕೊಂಡಿತು.

1913: ಶಿಲಾ ಕೆತ್ತನೆ, ಲೋಹ, ಜ್ಯೋತಿಷ್ಯ, ಸಂಗೀತ, ಸಂಸ್ಕೃತ ಪಾಂಡಿತ್ಯ ಇವೆಲ್ಲದರ ಸಂಗಮವಾಗಿದ್ದ ನಾಗೇಂದ್ರ ಸ್ಥಪತಿ (28-2-1913ರಿಂದ 4-7-1972) ಅವರು ಖ್ಯಾತ ಶಿಲ್ಪ ಸಿದ್ಧಾಂತಿ ಶ್ರೀ ಸಿದ್ದಲಿಂಗ ಸ್ವಾಮಿಗಳ ಮಗನಾಗಿ ಮೈಸೂರಿನಲ್ಲಿ ಜನಿಸಿದರು. ಅಸಂಖ್ಯಾತ ಕಲಾಕೃತಿಗಳನ್ನು ರಚಿಸಿದ ಅವರು ಮೈಸೂರು ಅರಮನೆಯಲ್ಲಿ ಗೌರವ, ಮಹಾರಾಜರ ಸಾನ್ನಿಧ್ಯ, ಮುಖ್ಯಮಂತ್ರಿಗಳ ಸ್ನೇಹ, ಜನರ ಗೌರವಾದರಗಳಿಗೆ ಪಾತ್ರರಾಗಿದ್ದರು. ಮೈಸೂರು ಲಲಿತಕಲಾ ಅಕಾಡೆಮಿಯು 1965-66ರ ಸಾಲಿನ ಪ್ರಶಸ್ತಿ ನೀಡಿ ಅವರನ್ನು ಗೌರವಿಸಿತ್ತು.

1824: ಜೀನ್ ಫ್ರಾಂಕೋಯಿಸ್ ಗ್ರಾವೆಲೆಟ್ (1824-1897) ಹುಟ್ಟಿದ ದಿನ. ಬ್ಲಂಡಿನ್ ಎಂದೇ ಖ್ಯಾತನಾದ ಈ ಹಗ್ಗದ ಮೇಲಿನ ನಡಿಗೆಯ ಸಾಹಸಿ, ನಯಾಗರಾ ಜಲಪಾತವನ್ನು ಹಗ್ಗದ ಮೇಲೆ ನಡೆಯುತ್ತಾ ದಾಟುವ ಸಾಹಸ ಮೂಲಕ ವಿಶ್ವಖ್ಯಾತಿ ಗಳಿಸಿದ. 

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement