Tuesday, March 10, 2009

ಗೋ ಸಂರಕ್ಷಣೆ ಇಲ್ಲಿನ ಮುಸ್ಲಿಮರಿಗೂ ಪಂಚ ಪ್ರಾಣ..! Muslims love to protect cows here

ಗೋ ಸಂರಕ್ಷಣೆ ಇಲ್ಲಿನ 

ಮುಸ್ಲಿಮರಿಗೂ ಪಂಚ ಪ್ರಾಣ..!


ಚಂಡೀಗಢದಿಂದ ರಾಜೇಶ್ ಡಿಯೋಲ್ ಅವರು ಕಳುಹಿಸಿರುವ ಈ ವರದಿಯನ್ನು 'ಡೆಕ್ಕನ್ ಹೆರಾಲ್ಡ್' ಪ್ರಕಟಿಸಿದೆ. ಇದು ನಿಜಕ್ಕೂ ಅಪೂರ್ವ ವಿಚಾರ. ಇಂತಹ ವಿಚಾರ ದೇಶವ್ಯಾಪಿ ಪ್ರಚಾರ ಪಡೆಯಬೇಕು. ಅದರಿಂದ ಗೋ ಸಂತತಿಯ ಸಂರಕ್ಷಣೆ, ಸಂವರ್ಧನೆಯ ಜೊತೆಗೆ ಹದಗೆಟ್ಟಿರುವ ನಮ್ಮ ರೈತರ ಆರ್ಥಿಕತೆ ಸುಧಾರಿಸಬಲ್ಲುದು, ಜೀವನವೂ ಹಸನಾಗಬಲ್ಲುದು. ರಾಸಾಯನಿಕ ಮುಕ್ತ ಪರಿಸರ ಸೃಷ್ಟಿಯಾಗಿ ಸಕಲರ ಆರೋಗ್ಯವೂ ಸುಧಾರಿಸಬಲ್ಲುದು. ಹೀಗಾಗಲಿ ಎಂಬ ಸದಾಶಯದೊಂದಿಗೆ 'ಪರ್ಯಾಯ' ಈ ವರದಿಯ ವಿವರಗಳನ್ನು ಇಲ್ಲಿ ಪ್ರಕಟಿಸಿದೆ. 

ನೆತ್ರಕೆರೆ ಉದಯಶಂಕರ

ಕರ್ನಾಟಕದಲ್ಲಿ ಹೊಸನಗರದ ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರು ಗೋ ಸಂರಕ್ಷಣೆಗಾಗಿ ಚಳವಳಿ ನಡೆಸುತ್ತಿದ್ದಾರೆ. ರಾಜ್ಯ ಮಾತ್ರವೇ ಅಲ್ಲ ಇತರ ರಾಜ್ಯಗಳಲ್ಲೂ ಗೋಶಾಲೆಗಳನ್ನು ಸ್ಥಾಪಿಸಿ ನಶಿಸುತ್ತಿರುವ ಭಾರತೀಯ ದೇಸೀ ಗೋ ತಳಿಗಳ ಸಂರಕ್ಷಣೆ, ಸಂವರ್ಧನೆಗೆ ಯತ್ನ ನಡೆಸುತ್ತಿದ್ದಾರೆ. ಗೋವಿನ ಹಾಲು ಮತ್ತು ಅವುಗಳ ಉತ್ಪನ್ನ ಮಾತ್ರವೇ ಅಲ್ಲ ಗೋಮೂತ್ರ ಮತ್ತು ಗೋಮಯದಿಂದಲೂ ಇರುವ ವೈದ್ಯಕೀಯ- ಆರ್ಥಿಕ ಲಾಭಗಳ ಅರಿವು ಮೂಡಿಸುವ ಯತ್ನ ಮಾಡುತ್ತಿದ್ದಾರೆ. ಗೋ ಸಂರಕ್ಷಣಾ ಜಾಗೃತಿಯ ಸಲುವಾಗಿ 2009ರ ವಿಜಯದಶಮಿಯಿಂದ 108 ದಿನಗಳ ರಾಷ್ಟ್ರವ್ಯಾಪಿ 'ವಿಶ್ವ ಮಂಗಲ ಗೋ ಯಾತ್ರೆ' ಸಂಘಟಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಗೋ ಸಂರಕ್ಷಣಾ ಚಳವಳಿಯೊಂದು ಮುಸ್ಲಿಮರ ಅಪಾರ ಬೆಂಬಲ, ಮುತುವರ್ಜಿಯಿಂದ ಪ್ರಚಂಡ ಯಶಸ್ಸು ಗಳಿಸಿರುವ ವರದಿಯೊಂದು ಹರ್ಯಾಣ ಮತ್ತು ರಾಜಸ್ಥಾನದಿಂದ ಬಂದಿದೆ.

ಚಂಡೀಗಢದಿಂದ ರಾಜೇಶ್ ಡಿಯೋಲ್ ಅವರು ಕಳುಹಿಸಿರುವ ಈ ವರದಿಯನ್ನು 'ಡೆಕ್ಕನ್ ಹೆರಾಲ್ಡ್' ಪ್ರಕಟಿಸಿದೆ. ಇದು ನಿಜಕ್ಕೂ ಅಪೂರ್ವ ವಿಚಾರ. ಇಂತಹ ವಿಚಾರ ದೇಶವ್ಯಾಪಿ ಪ್ರಚಾರ ಪಡೆಯಬೇಕು. ಅದರಿಂದ ಗೋ ಸಂತತಿಯ ಸಂರಕ್ಷಣೆ, ಸಂವರ್ಧನೆಯ ಜೊತೆಗೆ ಹದಗೆಟ್ಟಿರುವ ನಮ್ಮ ರೈತರ ಆರ್ಥಿಕತೆ ಸುಧಾರಿಸಬಲ್ಲುದು, ಜೀವನವೂ ಹಸನಾಗಬಲ್ಲುದು. ರಾಸಾಯನಿಕ ಮುಕ್ತ ಪರಿಸರ ಸೃಷ್ಟಿಯಾಗಿ ಸಕಲರ ಆರೋಗ್ಯವೂ ಸುಧಾರಿಸಬಲ್ಲುದು. 

ಹೀಗೆ ಆಗಲಿ ಎಂಬ ಸದಾಶಯದೊಂದಿಗೆ 'ಪರ್ಯಾಯ' ಈ ವರದಿಯ ವಿವರಗಳನ್ನು ಇಲ್ಲಿ ಕನ್ನಡದಲ್ಲಿ ಪ್ರಕಟಿಸಿದೆ. ಇಂಗ್ಲಿಷಿನಲ್ಲಿ ಇರುವ ಯಥಾವತ್ ವರದಿಯನ್ನು ಇಲ್ಲಿರುವ 'ಡೆಕ್ಕನ್ ಹೆರಾಲ್ಡ್' ಹೆಸರನ್ನು ಕ್ಲಿಕ್ಕಿಸುವ ಮೂಲಕ ಓದಿಕೊಳ್ಳಬಹುದು.

ನಂಬಿದರೆ ನಂಬಿ, ಬಿಟ್ಟರೆ ಬಿಡಿ. 

ಗೋವುಗಳಿಂದ ಲಾಭ ಇರುವುದು ಅವುಗಳ ಸಂರಕ್ಷಣೆಯಿಂದಲೇ ಹೊರತು ಅವುಗಳ ವಧೆಯಿಂದ ಅಲ್ಲ ಎಂಬ ಸತ್ಯ ಮುಸ್ಲಿಮರಿಗೆ ಅರ್ಥವಾಗಿದೆ. ಗೋ ಸಂರಕ್ಷಣೆಯ ಚಳವಳಿ ಹರ್ಯಾಣದ ಮೇವತ್ ಪ್ರದೇಶ ಮತ್ತು ಆಸುಪಾಸಿನ ರಾಜಸ್ಥಾನದ ಪ್ರದೇಶಗಳಲ್ಲಿ ಮುಸ್ಲಿಮರ ಮೇಲೆ ಅಪಾರ ಪ್ರಭಾವ ಬೀರಿದೆ. ಬಹುಶಃ ಹಿಂದೂಗಳನ್ನೂ ಮೀರಿಸುವಂತೆ ಇಲ್ಲಿನ ಮುಸ್ಲಿಮರು ಗೋ ಸಂರಕ್ಷಣೆಯ ಚಳವಳಿಯಲ್ಲಿ ಲಗುಬಗೆಯಿಂದ ಪಾಲ್ಗೊಳ್ಳುತ್ತಿದ್ದಾರೆ.

ಗೋ ಸಂರಕ್ಷಣೆ ಎಂಬುದು 37 ಲಕ್ಷದಷ್ಟು ಮೆಯೊ ಮುಸ್ಲಿಮರು ಇರುವ ಮೇವತ್ ಪ್ರದೇಶದಲ್ಲಿ ಈಗ ನಿತ್ಯ ಮಂತ್ರವಾಗಿದೆ. ಗೋವುಗಳು ಇಲ್ಲಿನ ಜನರಲ್ಲಿ ಕೋಮು ಮೇಲಾಟ, ವಿದ್ವೇಷಗಳನ್ನು ಒದ್ದೋಡಿಸಿ ಅವರ ಮನಸ್ಥಿತಿಯನ್ನೇ ಬದಲಾಯಿಸಿಬಿಟ್ಟಿವೆ.  

ಕೆಲವೇ ವರ್ಷಗಳ ಹಿಂದಿನವರೆಗೂ ಈ ಪ್ರದೇಶದಲ್ಲಿ ಗೋ ವಧೆ ಪ್ರತಿದಿನದ ದಿನಚರಿಯಾಗಿತ್ತು. ಏನಿಲ್ಲವೆಂದರೂ ಪ್ರತಿದಿನ ಇಲ್ಲಿ ಸುಮಾರು 3000 ಗೋವುಗಳ ಹತ್ಯೆ ನಡೆಯುತ್ತಿತ್ತು. ಗೋ ಸಂರಕ್ಷಣೆಯ ಚಳವಳಿ ಬೇರು ಬಿಡುತ್ತಿದ್ದಂತೆಯೇ ಇಲ್ಲಿನ ಚಿತ್ರವೇ ಸಂಪೂರ್ಣ ಬದಲಾಗಿ ಹೋಯಿತು.

'ಈಗ ಒಂದು ತಿಂಗಳಲ್ಲಿ ಕೇವಲ 100 ಗೋ ಹತ್ಯೆ ನಡೆದ ವರದಿಗಳು ಇಲ್ಲಿಂದ ಬರುತ್ತಿವೆ' ಎಂದು ಹೆಮ್ಮಯಿಂದ ಹೇಳುತ್ತಾರೆೆ ಗೋ ಸಂರಕ್ಷಣಾ ಚಳವಳಿಯ ಬೆನ್ನೆಲುಬಾಗಿರುವ ಎಂ.ಎಸ್. ಅಹ್ಲುವಾಲಿಯಾ. ತಮ್ಮನ್ನು ತಾವೇ ಚಳವಳಿಗೆ ಅರ್ಪಿಸಿಕೊಂಡಿರುವ ಅಹ್ಲುವಾಲಿಯಾ ಈ ಪ್ರದೇಶದಲ್ಲಿ ಈ ಚಳವಳಿಗೆ ವ್ಯಾಪಕ ಸ್ವರೂಪವನ್ನು ತಂದುಕೊಟ್ಟ ವ್ಯಕ್ತಿ.

'ಸಂಕಲ್ಪ ಭಾರತ ಪರಿವಾರ' (ಸಂಕಲ್ಪ ಇಂಡಿಯ ಪರಿವಾರ್) ಸಂಸ್ಥೆಯ ಆಶ್ರಯದಲ್ಲಿ ಗೋ ಸಂರಕ್ಷಣಾ ಸಮೂಹ ಚಳವಳಿಯನ್ನು ಅವರು ಈ ಪ್ರದೇಶದಲ್ಲಿ ಜನಪ್ರಿಯಗೊಳಿಸುತ್ತಿದ್ದಾರೆ. 

'2010ರ ವೇಳೆಗೆ ಇಡೀ ವಲಯವನ್ನು ಗೋ ಹತ್ಯಾ ಮುಕ್ತ ವಲಯವನ್ನಾಗಿ ಮಾರ್ಪಡಿಸುವ ಗುರಿಯನ್ನು ನಾವು ಇಟ್ಟುಕೊಂಡಿದ್ದೇವೆ' ಎನ್ನುತ್ತಾರೆ ಅಹ್ಲುವಾಲಿಯಾ.

ಅಸಾಧ್ಯ ಎಂದೇ ಭಾವಿಸಿದ್ದಂತಹ ಈ ಕಾರ್ಯವನ್ನು ಅವರು ಮಾಡಿದ್ದಾದರೂ ಹೇಗೆ? ಧಾರ್ಮಿಕ ವಿಚಾರಗಳ ಬದಲಿಗೆ ಜೀವಂತ ಗೋವಿನಿಂದ ಲಭಿಸುವ ಆರ್ಥಿಕ ಲಾಭದ ವಿಚಾರಗಳನ್ನು ಮನದಟ್ಟು ಮಾಡಿಸಿದ್ದೇ ಈ ಸಾಧನೆಗೆ ಕಾರಣವಾಯಿತು.

ವಾಸ್ತವವಾಗಿ ಅಹ್ಲುವಾಲಿಯಾ ಅವರ ತಂದೆ ವೈದ್ ನಾಥು ಸಿಂಗ್ ಅವರು 1987ರಲ್ಲಿ ಗೋ ಸಂರಕ್ಷಣಾ ಚಳವಳಿಯನ್ನು ಆರಂಭಿಸಿದಾಗ ಸಿಂಗ್ ಮತ್ತು ಅವರ ಸಂಸ್ಥೆಯ ಕಾರ್ಯಕರ್ತರು ಗೋ ಸಂರಕ್ಷಣೆ ಮತ್ತು ಅದರಿಂದ ಆಗುವ ಆರ್ಥಿಕ ಲಾಭಗಳ ಬಗ್ಗೆ ಇಲ್ಲಿನ ಬಹುಸಂಖ್ಯಾತ ಮುಸ್ಲಿಮರಿಗೆ ಮನದಟ್ಟು ಮಾಡಿಸಿಕೊಡಲು ಭಗೀರಥ ಯತ್ನವನ್ನೇ ಮಾಡಬೇಕಾಗಿತ್ತು.

ಆದರೆ ವೈದ್ ನಾಥು ಸಿಂಗ್ ಮತ್ತು ಅವರ ಮಗ ಎಂ.ಎಸ್. ಅಹ್ಲುವಾಲಿಯಾ ಅವರ ಸತತ 22 ವರ್ಷಗಳ ಶ್ರಮ ವಿಫಲವಾಗಲಿಲ್ಲ. 25,000ಕ್ಕೂ ಹೆಚ್ಚು ಸಂಖ್ಯೆಯ ಜನ, ಅವರಲ್ಲಿ ಬಹುತೇಕ ಮಂದಿ ಮುಸ್ಲಿಮರು ಕಳೆದ ಫೆಬ್ರುವರಿ 28ರಂದು ನಾಥು ಸಿಂಗ್ ಅವರ ಹುಟ್ಟೂರು ಪಿನಂಗ್ವಾ ಗ್ರಾಮದಲ್ಲಿ ನಾಥು ಸಿಂಗ್ ಅವರ ಮೊದಲ ತಿಥಿಗೆ ಸೇರಿದ್ದಾಗ 'ಗೋ ಮಾತಾ ಕೀ ಜಯ್' ಮಂತ್ರೋಚ್ಚಾರ ಇಡೀ ಪರಿಸರದಲ್ಲಿ ಮಾರ್ದನಿಸಿತು. ಇದರೊಂದಿಗೆ ಗೋ ಸಂರಕ್ಷಣೆಯ ಕನಸು ನನಸಾದದ್ದು ಲೋಕಕ್ಕೇ ಗೊತ್ತಾಯಿತು.

ಈ ಅಪ್ಪ- ಮಗನ ಜೋಡಿ ನೂರಾರು ಮುಸ್ಲಿಮರು 'ಗ್ವಾಲಾ'ಗಳಾಗಲು (ಗೋ ಪಾಲಕ) ಸ್ಫೂರ್ತಿ ನೀಡಿತು. ಇವರ ಪ್ರೇರಣೆಯ ಫಲವಾಗಿ ಪ್ರತಿಯೊಬ್ಬ 'ಗ್ವಾಲಾ' 100ರಿಂದ 400 ಗೋವುಗಳನ್ನು ಸಂರಕ್ಷಿಸಲು ಮುಂದೆ ಬಂದ. ಈ ಚಳವಳಿ ಎಷ್ಟು ವ್ಯಾಪಕವಾಯಿತು ಎಂದರೆ ಈ 'ಗ್ವಾಲಾ'ಗಳ ಗೋವು ಪಾಲನೆ ವ್ಯಾಪ್ತಿಗೆ 1.32 ಲಕ್ಷ ಗೋವುಗಳು ಸೇರ್ಪಡೆಯಾದವು!

'ಇದೇನೂ ಸಣ್ಣ ಕೆಲಸವಾಗಿರಲಿಲ್ಲ. ಮೇವತ್ ಜನರಲ್ಲಿ ಗೋ ಸಂರಕ್ಷಣೆಯ ಲಾಭದ ಅರಿವು ಮೂಡಿಸುವ ನಿಟ್ಟಿನಲ್ಲಿ ನಮ್ಮ ಕಾರ್ಯಕರ್ತರು ವರ್ಷಗಳ ಕಾಲ ನಿರಂತರವಾಗಿ ಶಿಕ್ಷಣ ನೀಡಬೇಕಾಯಿತು. ಹಿಂದು ಮತ್ತು ಮುಸ್ಲಿಮ್ ಮೂಲಭೂತವಾದಿ ಗುಂಪುಗಳು ತಂದೊಡ್ಡಿದ ಹಲವಾರು ಅಡ್ಡಿ ಆತಂಕಗಳನ್ನು ನಿವಾರಿಸಲು ಬಹಳಷ್ಟು ಶ್ರಮಿಸಬೇಕಾಯಿತು ಎನ್ನುತ್ತಾರೆ ಅಹ್ಲುವಾಲಿಯಾ.

ಗೋವುಗಳ ಹಾಲು ಮತ್ತು ಹಾಲಿನ ಉತ್ಪನ್ನಗಳು ಬಡ ಜನರಿಗೆ ಆರ್ಥಿಕ ಸಮೃದ್ಧಿಯನ್ನೇ ತಂದವು. ಗ್ವಾಲಾಗಳಿಂದ ಬರುತ್ತಿದ್ದ ಶುದ್ಧ ಹಾಲಿಗೆ, ಮಾರುಕಟ್ಟೆಯಲ್ಲಿ ಸಿಗುತ್ತಿದ್ದ ಕಲಬೆರಕೆ ಹಾಲಿಗಿಂತ ಉತ್ತಮ ಬೆಲೆ ಸಿಕ್ಕಿತು, ಉತ್ತಮ ಬೇಡಿಕೆಯೂ ಬಂದಿತು, ಹೀಗಾಗಿ ಗ್ವಾಲಾಗಳಿಗೆ ಉತ್ತಮ ಆದಾಯ ಲಭಿಸಿತು ಎಂದು ಸಂಭ್ರಮ ಪಡುತ್ತಾರೆ ಅಹ್ಲುವಾಲಿಯಾ.

ಇಲ್ಲಿ ಅತ್ಯಂತ ಕುತೂಹಲದ ಸಂಗತಿಯೂ ಒಂದುಂಟು. ಈ ಪ್ರದೇಶದಲ್ಲಿ ಒಂದೇ ಒಂದು ಗೋಶಾಲೆಯನ್ನೂ ತೆರೆಯಲಾಗಿಲ್ಲ. ಅಥವಾ ಗೋ ಸಂರಕ್ಷಣಾ ಚಳವಳಿಗಾಗಿ ಒಂದೇ ಒಂದು ರೂಪಾಯಿ ದೇಣಿಗೆಯನ್ನೂ ಕೂಡಾ ಯಾರಿಂದಲೂ ಪಡೆಯಲಾಗಿಲ್ಲ ಎನ್ನುತ್ತಾರೆ ಮಾಜಿ ಸರ್ಕಾರಿ ಅಧಿಕಾರಿ ಹಾಗೂ ಕೇಂದ್ರೀಯ ಜಾನುವಾರು ಕಲ್ಯಾಣ ಮಂಡಳಿಯ ಮಾಜಿ ಸದಸ್ಯ ಅಹ್ಲುವಾಲಿಯಾ. ಗೋ ಸಂರಕ್ಷಣಾ ಚಳವಳಿಯಲ್ಲಿ ಪೂರ್ಣಾವಧಿ ಧುಮುಕುವ ಸಲುವಾಗಿಯೇ ಅವರು ತಮ್ಮ ಹುದ್ದೆಗೆ ತಿಲಾಂಜಲಿ ನೀಡಿದ್ದಾರೆ.

ಇಷ್ಟೆಲ್ಲದರ ಮಧ್ಯೆಯೂ ಯಾರಾದರೂ ಗೋ ವಧೆಯ ಅಪರಾಧ ಎಸಗಿದರೆ? ಗೋ ವಧೆಯ ಅಪರಾಧಿಗೆ 51,000 ರೂಪಾಯಿಗಳ ದಂಡವನ್ನು ವಿಧಿಸಲಾಗುತ್ತದೆ. ಈ ದಂಡ ಸಂಗ್ರಹಿಸುವ ಕಾರ್ಯದ ಉಸ್ತುವಾರಿಯನ್ನು ಮೆಯೊ ಮುಸ್ಲಿಮ್ ಸಮುದಾಯವೇ ನೋಡಿಕೊಳ್ಳುತ್ತದೆ. ಹೀಗೆ ಗೋ ವಧೆ ಮಾಡಿದ ಅಪರಾಧಿಗಳಿಂದ 35 ಲಕ್ಷ ರೂಪಾಯಿ ದಂಡ ಸಂಗ್ರಹಿಸಲಾಗಿರುವುದು  ಚಳವಳಿಯ ಯಶಸ್ಸಿನ ದ್ಯೋತಕ. ಗೋ ಹತ್ಯೆಯ ಘಟನೆ ನಡೆದರೆ ಆ ಬಗ್ಗೆ ತತ್ ಕ್ಷಣ ವರದಿ ನೀಡುವ ಕೆಲಸವನ್ನು ಸ್ವತಃ ಮುಸ್ಲಿಮರೇ ನಿರ್ವಹಿಸುತ್ತಾರೆ ಎಂದು ಗಮನ ಸೆಳೆಯುತ್ತಾರೆ ಅಹ್ಲುವಾಲಿಯಾ.

ಮೆಯೊ ಮುಸ್ಲಿಮರ ಪ್ರದೇಶದಲ್ಲಿ ಆರಂಭವಾದ ಈ ಗೋ ಸಂರಕ್ಷಣಾ ಚಳವಳಿ ಈಗ ನೆರೆಯ ರಾಜಸ್ಥಾನದ ಭರತಪುರ ಮತ್ತು ಅಲ್ವಾರ್ ಪ್ರದೇಶಗಳಿಗೂ ಹಬ್ಬಿದೆ.

ಪತ್ರಿಕೆಯಲ್ಲಿ ಬಂದ ವರದಿ ಇಲ್ಲಿಗೆ ಮುಗಿಯಿತು. ಆದರೆ ಇಲ್ಲಿ ನಮ್ಮದೊಂದು ಪುಟ್ಟ ಅಡಿ ಟಿಪ್ಪಣಿ ಸೇರಿಸಬೇಕೆನಿಸುತ್ತದೆ. ಹರ್ಯಾಣ ಮತ್ತು ರಾಜಸ್ಥಾನದ ಈ ಮುಸ್ಲಿಮ್ ಬಾಂಧವರು ಗೋವುಗಳನ್ನು ಕೇವಲ ಹಾಲು, ಹಾಲಿನ ಉತ್ಪನ್ನಗಳ ಸಲುವಾಗಿ ಸಾಕಿ ಅದರ ಪ್ರಚಂಡ ಲಾಭ ಕಂಡು ಕೊಂಡಿದ್ದಾರೆ. ಆದರೆ ಗೋವು ಕಾಮಧೇನು. ಹಾಲು, ಬೆಣ್ಣೆ, ತುಪ್ಪ, ಮೊಸರು, ಮಜ್ಜಿಗೆ ಇತ್ಯಾದಿ ಮಾತ್ರವೇ ಅಲ್ಲ ಗೋಮೂತ್ರದದಿಂದ ತಯಾರಿಸುವ ಹಲವಾರು ಬಗೆಯ ಔಷಧಗಳು, ಗೋವಿನ ಸೆಗಣಿಯಿಂದ ಲಭಿಸುವ ಕೃಷಿಗೆ ಬೇಕಾದ ಫಲವತ್ತಾದ ಗೊಬ್ಬರ, ಜೈವಿನ ಅನಿಲ, ವಿದ್ಯುತ್ತು, ಎತ್ತಿನ ಗಾಡಿಗಳಿಂದಲೂ ಗಳಿಸಬಹುದಾದ ವಿದ್ಯುತ್ತು - ಇತ್ಯಾದಿಗಳನ್ನೆಲ್ಲ ಅವರು ಗಮನಿಸಿಲ್ಲ. ಇವುಗಳನ್ನೆಲ್ಲ ಒಟ್ಟುಗೂಡಿಸಿ ನೋಡಿದರೆ ಇಡೀ ಆರ್ಥಿಕತೆಯನ್ನೇ ಗೋವು ಎಷ್ಟೊಂದು ಅದ್ಭುತವಾಗಿ ಬದಲಿಸಬಲ್ಲುದು ಎಂಬುದು ವೇದ್ಯವಾಗುತ್ತದೆ. 

ಇದನ್ನೆಲ್ಲ ಅರ್ಥ ಮಾಡಿಕೊಂಡು ಇಂದಿನ ಜಾಗತಿಕ ಆರ್ಥಿಕ ಹಿಂಜರಿತ ಎದುರಿಸಲು ಅತಿ ಉತ್ತಮ ಮಾರ್ಗವಾದ ಗೋ ಸಂರಕ್ಷಣಾ ಚಳವಳಿಯನ್ನು ಜಾತಿ, ಮತ, ರಾಜಕೀಯ ಇತ್ಯಾದಿಗಳಾವುದನ್ನೂ ಬೆರೆಸದೇ ಎಲ್ಲರೂ ಬಲಗೊಳಿಸಬೇಕಾದ ಅಗತ್ಯ ಇಂದು ಎಂದಿಗಿಂತ ಹೆಚ್ಚಾಗಿದೆ. 'ವಂದೇ ಗೋ ಮಾತರಮ್' ಉದ್ಘೋಷ ಎಲ್ಲೆಡೆ ಮಾರ್ದನಿಸಬೇಕಾಗಿದೆ. ಅದಕ್ಕೆ ಹರ್ಯಾಣ, ರಾಜಸ್ಥಾನದ ಮುಸ್ಲಿಮ್ ಬಂಧುಗಳಿಗೆ ಆಗಿರುವ ಅರಿವು ಎಲ್ಲರಿಗೂ ಪ್ರೇರಣೆ ನೀಡಲಿ ಎಂದು ಹಾರೈಸೋಣವೇ? 

No comments:

Advertisement