Saturday, April 11, 2009

ಇಂದಿನ ಇತಿಹಾಸ History Today ಏಪ್ರಿಲ್ 09

ಇಂದಿನ ಇತಿಹಾಸ

ಏಪ್ರಿಲ್ 9

ಬೆಂಗಳೂರಿನ ಅನಕೃ- ನಿರ್ಮಾಣ್ ಪ್ರತಿಷ್ಠಾನವು ನೀಡುವ ಪ್ರಸಕ್ತ ಸಾಲಿನ `ಅನಕೃ- ನಿರ್ಮಾಣ್' ಪ್ರಶಸ್ತಿಗೆ ಹಿರಿಯ ಸಾಹಿತಿ ಡಾ. ಚನ್ನವೀರ ಕಣವಿ ಆಯ್ಕೆಯಾದರು.

2008: ಧಾರವಾಡ ಜಿಲ್ಲೆಯನ್ನು ದೇಶದ ಪ್ರಥಮ `ಗೋ ಅಭಯ ಜಿಲ್ಲೆ'ಯಾಗಿ ಪರಿವರ್ತಿಸುವ, ಭಾರತೀಯ ಗೋ ತಳಿಯನ್ನು ಉಳಿಸಿ ಬೆಳೆಸುವ ವೀರ ಸಂಕಲ್ಪವನ್ನು ಸಾವಿರಾರು ಗೋ ಪ್ರೇಮಿಗಳು ಕೈಗೊಂಡರು. ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ, ತರಳಬಾಳು ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹಾಗೂ ಮೂರು ಸಾವಿರ ಮಠದ ಶ್ರೀ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ನಡೆದ `ದೀಪಗೋಪುರ' ಸಮಾರಂಭದಲ್ಲಿ `ಗೋಮಾತೆಯ ರಕ್ಷಣೆಗೆ ನಾವು ಬದ್ಧ'ಎಂಬ ಸಂಕಲ್ಪ ಪ್ರಕಟಿಸಿದರು. ``ಭಾರತಮಾತೆಯ ಪವಿತ್ರ ಮಣ್ಣಿಗೆ ಅಂಟಿರುವ ಗೋಮಾತೆಯ ರಕ್ತವನ್ನು ತೊಳೆಯುವ ಪ್ರಯತ್ನ ಮಾಡೋಣ. ಗೋಪ್ರೇಮ ಬಂದು ಹೋಗುವ ಮಳೆಯಾಗದೇ ನಿರಂತರ ಹೊಳೆಯಾಗಿ ಹರಿದು ಇಡೀ ದೇಶಕ್ಕೆ ಮಾದರಿಯಾಗಲಿ'' ಎಂದು ಶ್ರೀ ರಾಘವೇಶ್ವರ ಸ್ವಾಮೀಜಿ ಸಲಹೆ ಮಾಡಿದರು. ಸ್ವಾಮೀಜಿಯವರ ಸನ್ಯಾಸ ಸ್ವೀಕಾರ ದಿನವನ್ನು ಜೀವನದಾನ ದಿನವಾಗಿ ಇದೇ ಸಂದರ್ಭದಲ್ಲಿ ಆಚರಿಸಲಾಯಿತು. ಹೊನ್ನಾವರ ತಾಲ್ಲೂಕು ಕೆಕ್ಕಾರಿನ ಅನಿತಾ ಎಂಬ ವಿಧವೆಯ ಕುಟುಂಬವನ್ನು ಶ್ರೀಮಠ ದತ್ತು ತೆಗೆದುಕೊಂಡಿತು. ಇಡೀ ಕುಟುಂಬದ ನಿರ್ವಹಣೆಯ ಜವಾಬ್ದಾರಿಯನ್ನು ಶ್ರೀಮಠವೇ ವಹಿಸಿಕೊಳ್ಳಲಿದೆ ಎಂದು ಸ್ವಾಮೀಜಿ ನುಡಿದರು. ನಂತರ ಸಾವಿರಾರು ಮಹಿಳೆಯರು ಗೋಮಾತೆಗೆ ದೀಪದಾರತಿ ಬೆಳಗಿದರು.

2008: ಕನ್ನಡ ಚಲನಚಿತ್ರ ನಿರ್ದೇಶಕ ರಾಜ್ ಕಿಶೋರ್ (49) ಮಹಾರಾಷ್ಟ್ರದ ಶಿರಡಿಯಲ್ಲಿ ನಿಧನರಾದರು. ಪೂಜೆಗೆಂದು ಕುಟುಂಬ ಸಮೇತ ಶಿರಡಿಗೆ ತೆರಳಿದ್ದ ಅವರು ಬೆಳಿಗ್ಗೆ ಹೃದಯಾಘಾತಕ್ಕೆ ತುತ್ತಾದರು. ವಿಷ್ಣುವರ್ಧನ್ ಅಭಿನಯದ `ಆಸೆಯ ಬಲೆ', ಅಂಬರೀಷ್ ಅಭಿನಯದ `ಮಲ್ಲಿಗೆ ಹೂವೇ',  ಜಗ್ಗೇಶ್ ಅಭಿನಯದ 'ಭಂಡ ನನ್ನ ಗಂಡ', `ಬೇಡ ಕೃಷ್ಣ ರಂಗಿನಾಟ', ಯೋಗೇಶ್ವರ್ ಅಭಿನಯದ `ಉತ್ತರ ಧ್ರುವದಿಂ ದಕ್ಷಿಣ ಧ್ರುವಕು', ಪ್ರಭಾಕರ್ ಅಭಿನಯದ `ತ್ರಿನೇತ್ರ', ಸೃಜನ್ ಲೊಕೇಶ್, ರಾಧಿಕಾ ಅಭಿನಯದ 'ನೀಲ ಮೇಘಶ್ಯಾಮ ಸೇರಿದಂತೆ 24 ಕನ್ನಡ ಚಲನಚಿತ್ರಗಳನ್ನು ಅವರು ನಿರ್ದೇಶಿಸಿದ್ದರು. ಅವರು ನಿರ್ದೇಶಿಸಿದ ಕೊನೆಯ ಚಿತ್ರ `ಸಿರಿಚಂದನ'. ಇದು ಯಂಡಮೂರಿ ಅವರ ಕಾದಂಬರಿ ಆಧರಿಸಿದ ಚಿತ್ರವಾಗಿತ್ತು. ರಾಜೇಂದ್ರಸಿಂಗ್ ಬಾಬು ಅವರ ಸಹಾಯಕರಾಗಿ ಚಿತ್ರರಂಗ ಪ್ರವೇಶಿಸಿದ ರಾಜ್ಕಿಶೋರ್  ನಂತರದ ದಿನಗಳಲ್ಲಿ ಬಹುತೇಕ ದ್ವಾರಕೀಶ್ ಚಿತ್ರ ನಿರ್ಮಾಣದಲ್ಲಿ ಸಹಾಯಕ ನಿರ್ದೇಶಕರಾಗಿದ್ದರು. `ನೀ ಬರೆದ ಕಾದಂಬರಿ'ಯಿಂದ `ಆಪ್ತಮಿತ್ರ' ಚಿತ್ರದವರೆಗೂ ಅವರು ದ್ವಾರಕೀಶ್ ಅವರ ಸಹಾಯಕರಾಗಿಯೇ ಶ್ರಮಿಸಿದರು.

2008:  ಭಾರತೀಯ ನೌಕಾಪಡೆಯು ದಟ್ಟ ಹಿಮಹಾಸಿನ, ಮೈ ಕೊರೆಯುವ ಥಂಡಿಯ, ಮನುಷ್ಯನ ಸಾಹಸ ಪ್ರವೃತ್ತಿಗೆ ಸವಾಲೊಡ್ಡುವ ಭೂಗೋಳದ `ಉತ್ತರ ಧ್ರುವ'ವನ್ನು ಮೆಟ್ಟಿನಿಂತಿತು.!  ಈದಿನ ಭಾರತೀಯ ಕಾಲಮಾನ ರಾತ್ರಿ 8.16ಕ್ಕೆ ಈ ಸಾಧನೆ ಮಾಡಿ, ಅಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿತು. ಇದರೊಂದಿಗೆ ನೌಕಾಪಡೆಯು ಜಗತ್ತಿನ ಎಲ್ಲಾ ಮೂರು ಧ್ರುವಗಳನ್ನು (ಉತ್ತರ ಧ್ರುವ, ದಕ್ಷಿಣ ಧ್ರುವ ಮತ್ತು ಶಿಖರ ಧ್ರುವವೆಂದು ಹೆಸರಾದ ಮೌಂಟ್ ಎವರೆಸ್ಟ್) ಮುಟ್ಟಿದ ಭಾರತದ ಮೊದಲ ತಂಡ ಎನ್ನುವ ಹೆಗ್ಗಳಿಕೆಯನ್ನು ತನ್ನದಾಗಿಸಿಕೊಂಡಿತು.  ಕಮಾಂಡರ್ ಸತ್ಯವ್ರತ ದಾಮ್ ಈ ತಂಡದ ನೇತೃತ್ವ ವಹಿಸಿದ್ದರು. ದಾಮ್ ಮತ್ತು ಇತರ ಒಂಬತ್ತು ಜನರ ತಂಡವು ಮಾರ್ಚ್ 24ರಂದು ಓಸ್ಲೋವನ್ನು ತಲುಪಿತ್ತು. ಅಲ್ಲಿಂದ ಲಾಂಗ್ ಇಯರ್ ಬೈಯನ್ಗೆ ವಿಮಾನದಲ್ಲಿ ಹಾರಿ ಮುಂದಕ್ಕೆ ಆರ್ಕಟಿಕ್ ಧ್ರುವ ಪ್ರದೇಶಕ್ಕೆ ಸಾಹಸ ಯಾತ್ರೆ ಕೈಗೊಂಡಿತ್ತು.  `ಭೂಗೋಳದ ಉತ್ತರ ದಿಕ್ಕಿನ 90 ಡಿಗ್ರಿಗೆ ಇರುವ ಜಾಗದಲ್ಲಿ ಬಿಡಾರದೊಳಗೆ ಕೂತು ನಾನು ನಿಮ್ಮ ಜೊತೆ ಮಾತನಾಡುತ್ತಿದ್ದೇನೆ. ಸೂರ್ಯನು ಆಕಾಶದಲ್ಲಿ ಕೆಳಗೇ ಇದ್ದಾನೆ, ಇಲ್ಲಿ ಮಬ್ಬು ಕವಿದ ವಾತಾವರಣ ಇದ್ದರೂ, ಸೂರ್ಯನು ದಿಗಂತದ ಮೇಲೆ 20 ಡಿಗ್ರಿ ಕೋನದಿಂದ ಚೆಲ್ಲುತ್ತಿರುವ  ಕಿತ್ತಳೆ ಕಿರಣಗಳು ಮಂಜಿನಲ್ಲಿ ಪ್ರತಿಫಲಿಸುತ್ತಿವೆ. ಇದರ ಮಧ್ಯೆಯೇ ಭಾರತದ ಧ್ವಜ ಹಾರಾಡುತ್ತಿದೆ. ಬಿರುಗಾಳಿಯ ಹೊಡೆತ, ಮರಗಟ್ಟಿಸುವ ತಾಪಮಾನ, ಹಿಮಸಾಗರದ ಸೆಳೆತಗಳನ್ನೆಲ್ಲಾ ಯಶಸ್ವಿಯಾಗಿ ದಾಟಿ ಈ ಸಾಧನೆ ಮಾಡಿದ್ದೇವೆ. ಇಲ್ಲಿ ನಾವು ನೋಡಲು ಬಯಸಿದ್ದ ಹಿಮಕರಡಿ ಮಾತ್ರ ಎಲ್ಲೂ ಕಣ್ಣಿಗೆ ಬೀಳಲೇ ಇಲ್ಲ' ಎಂದು ಧಾಮ್ ಅವರು ದೂರವಾಣಿ ಮೂಲಕ ಮಾಧ್ಯಮಗಳ ಜೊತೆ ಮಾತನಾಡುತ್ತಾ ಉದ್ಘರಿಸಿದರು.

 2008: ಏಷ್ಯಾ ಖಂಡದಲ್ಲೇ ಪ್ರಥಮವಾದ ಅಪರೂಪದ ಶಸ್ತ್ರಚಿಕಿತ್ಸೆಯೊಂದನ್ನು ನಡೆಸಿ ರೋಗಿಯೊಬ್ಬರಿಗೆ ರಕ್ತ ಸರಬರಾಜು ಮಾಡುವ ಉಪಕರಣವನ್ನು ಅಳವಡಿಸಿದ ವಿಚಾರವನ್ನು ಬೆಂಗಳೂರಿನ ನಾರಾಯಣ ಹೃದಯಾಲಯದ ವೈದ್ಯರು ಪ್ರಕಟಿಸಿದರು. ಯಂತ್ರವನ್ನು ಅಳವಡಿಸಿರುವ ಐವತ್ತೈದು ವರ್ಷದ ವೆಂಕಟಕೃಷ್ಣಯ್ಯನವರ ಮುಖದಲ್ಲಿ ಹಲವು ವರ್ಷಗಳಿಂದ ಮರೆಯಾಗಿದ್ದ ನಗು ಮರುಕಳಿಸಿತು. ಕೆಪಿಟಿಸಿಎಲ್ನ ನಿವೃತ್ತ ಸಹಾಯಕ ಎಂಜಿನಿಯರ್ ವೆಂಕಟಕೃಷ್ಣಯ್ಯ ಅವರು ಸೇವೆಯಲ್ಲಿದ್ದಾಗ ಐದು ಬಾರಿ ಬೈಪಾಸ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ನಂತರ ಸ್ವಯಂ ನಿವೃತ್ತಿ ಪಡೆದರು. ಇತ್ತೀಚೆಗೆ ನಾರಾಯಣ ಹೃದಯಾಲಯಕ್ಕೆ ಚಿಕಿತ್ಸೆಗೆಂದು ದಾಖಲಾಗಿದ್ದರು. ವೈದ್ಯರ ಸಲಹೆಯಂತೆ `ವೆಂಟ್ರಿಕ್ಯುಲರ್ ಅಸಿಸ್ಟ್ ಡಿವೈಸ್' (ವಿಎಡಿ) ಉಪಕರಣ ಅಳವಡಿಸಿಕೊಳ್ಳಲು ಅವರು ಒಪ್ಪಿದರು. ಆಸ್ಟ್ರೇಲಿಯಾದ ವೆಂಟ್ರಾಕೋರ್ ಸಂಸ್ಥೆಯು ಈ ಉಪಕರಣವನ್ನು ಸಂಶೋಧಿಸಿದೆ. ಅಮೆರಿಕದ ಮಿನೆಸುಟ ವಿಶ್ವವಿದ್ಯಾಲಯವು ಈ ಶಸ್ತ್ರಚಿಕಿತ್ಸಾ ವಿಧಾನವನ್ನು ರೂಪಿಸಿದೆ. ಅದರಂತೆ ನಾರಾಯಣ ಹೃದಯಾಲಯದ ತಜ್ಞರ ತಂಡ ನಾಲ್ಕು ವರ್ಷಗಳಿಂದ ಅಲ್ಲಿ ತರಬೇತಿ ಪಡೆದು ಇದೇ ಮೊದಲ ಬಾರಿಗೆ ಅಳವಡಿಸುವಲ್ಲಿ ಯಶಸ್ವಿಯಾಯಿತು. ವೆಂಕಟಕೃಷ್ಣಯ್ಯ ಅವರಿಗೆ `ಲೆಫ್ಟ್ ವೆಂಟ್ರಿಕ್ಯುಲರ್ ಅಸಿಸ್ಟ್ ಡಿವೈಸ್' (ಎಲ್ ವಿ ಎ ಡಿ) ಉಪಕರಣ ಅಳವಡಿಸಲಾಯಿತು. ಹೃದಯವನ್ನು ಹೊರ ತೆಗೆಯದೇ ಅದರ ಕೆಳಭಾಗದಲ್ಲೇ ಉಪಕರಣವನ್ನು ಅಳವಡಿಸಲಾಯಿತು. ಲೋಹದಿಂದ ಸಿದ್ಧಪಡಿಸಲಾದ ಈ ಉಪಕರಣದ ತೂಕ 298 ಗ್ರಾಂ. ಈ ಉಪಕರಣ ಒಂದು ನಿಮಿಷಕ್ಕೆ 10 ಲೀಟರ್ ರಕ್ತವನ್ನು ಪಂಪ್ ಮಾಡುವ ಸಾಮರ್ಥ್ಯ ಹೊಂದಿದೆ. ಇದು ಬ್ಯಾಟರಿ ಚಾಲಿತ ಉಪಕರಣವಾಗಿದ್ದು, ಪ್ರತಿ ನಾಲ್ಕು ಗಂಟೆಗೊಮ್ಮೆ ಬ್ಯಾಟರಿ ಚಾರ್ಜ್ ಮಾಡಿಕೊಳ್ಳಬೇಕು.

2008: ಮಾರ್ಚ್ ತಿಂಗಳಲ್ಲಿ ಸುರಿದ ಅಕಾಲಿಕ ಮಳೆಯಿಂದ ಮೆಣಸಿನಕಾಯಿ ಬೆಳೆ ನಾಶವಾದ ಹಿನ್ನೆಲೆಯಲ್ಲಿ ಆಂಧ್ರ ಪ್ರದೇಶದ ಒಂಬತ್ತು ಮಂದಿ ರೈತರು ಒಂದೇ ದಿನ ಆತ್ಮಹತ್ಯೆ ಮಾಡಿಕೊಂಡರು

2008: ಬರಿ ಬೀದಿಗಳಲ್ಲಿ ಪಡ್ಡೆ ಹುಡುಗರ ನಡುವೆ ಇದ್ದ `ರಾಕ್ ಎನ್ ರೋಲ್' ಸಂಗೀತವನ್ನು ಸಭಾಂಗಣಗಳಲ್ಲೂ ರಿಂಗಣಿಸುವಂತೆ ಮಾಡುವಲ್ಲಿ ಮಹತ್ತರ ಪಾತ್ರ ವಹಿಸಿದ ಗೀತರಚನಾಕಾರ ಬಾಬ್ ದೈಲನ್ ನ್ಯೂಯಾರ್ಕಿನಲ್ಲಿ ಪ್ರತಿಷ್ಠಿತ `ಪುಲಿಟ್ಜರ್ ಪ್ರಶಸ್ತಿ'ಸ್ವೀಕರಿಸಿದರು. `ಜನಪ್ರಿಯ ಸಂಗೀತ ಮತ್ತು ಅಮೆರಿಕ ಸಂಸ್ಕೃತಿಯ ಮೇಲೆ ದೊಡ್ಡ ಪ್ರಭಾವವನ್ನೇ ಬೀರಿದ ಬಾಬ್, ತಮ್ಮ ಗೀತರಚನೆಗಳ ಮೂಲಕ ಅತ್ಯದ್ಭುತವಾದ ಕಾವ್ಯರಸಧಾರೆ ಹರಿಸಿದ್ದಾರೆ' ಎಂದು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರನ್ನು ಹಾಡಿಹೊಗಳಲಾಯಿತು.

2008: 240 ವರ್ಷಗಳಷ್ಟು ಹಳೆಯದಾದ ರಾಜಸತ್ತೆಗೆ ಇತಿಶ್ರೀ ಹಾಡಿ ಪ್ರಜಾಪ್ರಭುತ್ವ ಮಾದರಿ ಸರ್ಕಾರ ರಚಿಸಲು ನೇಪಾಳದಲ್ಲಿ ಇದೇ ಮೊದಲ ಬಾರಿ ಐತಿಹಾಸಿಕ ಚುನಾವಣೆ ನಡೆಯಿತು. ಈ ಸಂದರ್ಭದಲ್ಲಿ ಅಲ್ಲಲ್ಲಿ ನಡೆದ ಚುನಾವಣಾ ಪೂರ್ವ ಹಿಂಸೆಗೆ  ಕಮ್ಯುನಿಸ್ಟ್ ಪಕ್ಷದ ಅಭ್ಯರ್ಥಿ ರಿಷಿ ಪ್ರಸಾದ್ ಶರ್ಮಾ ಸೇರಿದಂತೆ ಒಟ್ಟು ಎಂಟು ಮಂದಿ ಮಾವೊ ಉಗ್ರರು ಬಲಿಯಾದರು.

2008: ಜಮೀನಿನ ಮರು ಖರೀದಿದಾರರಿಗೆ ಭೂಸ್ವಾಧೀನ ಪ್ರಕ್ರಿಯೆಯ ಸಿಂಧುತ್ವವನ್ನು ಪ್ರಶ್ನಿಸುವ ಹಕ್ಕು ಇಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿತು. ಬೆಂಗಳೂರು ನಗರದ ಹಳೆ ಮದ್ರಾಸ್ ರಸ್ತೆಯಲ್ಲಿನ ಕೆ.ಆರ್. ಪುರ ಹೋಬಳಿಯ ಮಾನವರ್ತೆಕಾವಲ್ ಗ್ರಾಮದ ಬಳಿ ಮೆಟ್ರೋ ರೈಲು ಯೋಜನೆಗೆ ನಡೆಸಲಾದ ಭೂಸ್ವಾಧೀನ ಪ್ರಕ್ರಿಯೆಯನ್ನು ಊರ್ಜಿತಗೊಳಿಸಿದ ನ್ಯಾಯಮೂರ್ತಿ ಅಶೋಕ ಬಿ. ಹಿಂಚಿಗೇರಿ ಈ ಆದೇಶ ಹೊರಡಿಸಿದರು. 2.35ಲಕ್ಷ ಚದರ ಅಡಿಯ ಈ ಪ್ರದೇಶವನ್ನು 2006ರ ಜನವರಿ 17ರಂದು ಕೈಗಾರಿಕಾ ಪ್ರದೇಶವೆಂದು ಘೋಷಿಸಿ ನಂತರ ಅದನ್ನು ಭೂಸ್ವಾಧೀನ ಮಾಡಿಕೊಳ್ಳಲು ಹೊರಡಿಸಲಾದ ಅಧಿಸೂಚನೆ ರದ್ದತಿ ಕೋರಿ ಪೂರ್ವಾಂಕರ ಪ್ರಾಜೆಕ್ಟ್ ಲಿಮಿಟೆಡ್ ನಿರ್ದೇಶಕ ನಾಣಿ ಚಾಕ್ಸೆ ಅವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳು ವಜಾ ಮಾಡಿದರು.

2008: ಕಾಂಗ್ರೆಸ್ ಸಂಸತ್  ಸದಸ್ಯ ಅಧೀರ್ ಚೌಧರಿ  ಮತ್ತು ಇತರ ಐವರನ್ನು  ಮುರ್ಷಿದಾಬಾದಿನ  ಕ್ಷಿಪ್ರ ವಿಚಾರಣಾ ನ್ಯಾಯಾಲಯವು ಕೊಲೆ ಆರೋಪದಿಂದ  ಮುಕ್ತಗೊಳಿಸಿತು. ಜಿಲ್ಲಾ ಸೆಷನ್ಸ್ ನ್ಯಾಯಾಧೀಶ ಸೋಮನಾಥ ಬ್ಯಾನರ್ಜಿ ಅವರು ಸಾಕ್ಷ್ಯಾಧಾರಗಳ ಅಭಾವದ  ಕಾರಣ ಆರೋಪಿಗಳನ್ನು   ಖುಲಾಸೆ ಮಾಡಿದರು. ಕಾಂಗ್ರೆಸ್ ಮತ್ತು  ಸಿಪಿಎಂ ಬೆಂಬಲಿಗರು 2005ರ ಜನವರಿ  6ರಂದು ಭಾಗೀರಥಿ  ಕೋ ಆಪರೇಟಿವ್ ಮಿಲ್ಕ್ ಯೂನಿಯನ್ ಚುನಾವಣೆ  ಸಂದರ್ಭದಲ್ಲಿ ಪರಸ್ಪರ ಘರ್ಷಿಸಿದ್ದರು.

2007: ಖ್ಯಾತ ಸಂಗೀತ ವಿದುಷಿ ಗಂಗೂಬಾಯಿ ಹಾನಗಲ್ ಅವರು 2006ರ ಸಾಲಿನ `ಸ್ವರ-ಲಯ ಪುರಸ್ಕಾರ'ಕ್ಕೆ ಪಾತ್ರರಾದರು. ಭಾರತೀಯ ಸಂಗೀತ ಕ್ಷೇತ್ರಕ್ಕೆ ಸಲ್ಲಿಸಿರುವ ಅನುಪಮ ಸಾಧನೆಯನ್ನು ಗೌರವಿಸಿ ಗಂಗೂಬಾಯಿ ಹಾನಗಲ್ ಅವರಿಗೆ ಈ ಪ್ರಶಸ್ತಿ ನೀಡಲು ನಿರ್ಧರಿಸಲಾಯಿತು ಎಂದು `ಸ್ವರ- ಲಯ' ಸಂಸ್ಥೆ ಅಧ್ಯಕ್ಷ ನ್ಯಾಯಮೂರ್ತಿ (ನಿವೃತ್ತ) ಬಾಲಕೃಷ್ಣ ಎರಾಡಿ ನವದೆಹಲಿಯಲ್ಲಿ ಪ್ರಕಟಿಸಿದರು..

2007: ಅರುಣಾಚಲ ಪ್ರದೇಶದ ನೂತನ ಮುಖ್ಯಮಂತ್ರಿಯಾಗಿ ದೋರ್ಜಿ ಖಂಡು ಅವರು ಪ್ರಮಾಣವಚನ ಸ್ವೀಕರಿಸಿದರು. ಈ ಹಿಂದಿನ ಮುಖ್ಯಮಂತ್ರಿ ಗೆಗಾಂಗ್ ಅಪಾಂಗ್ ಸಚಿವ ಸಂಪುಟದಲ್ಲಿ ಖಂಡು ವಿದ್ಯುತ್ ಸಚಿವರಾಗಿದ್ದರು. ಕಾಂಗ್ರೆಸ್ಸಿನ 33 ಶಾಸಕರಲ್ಲಿ 25 ಮಂದಿ ಗೆಗಾಂಗ್ ವಿರುದ್ಧ ಬಂಡೆದ್ದ ಎರಡು ವಾರಗಳ ಬಳಿಕ ಶಾಸಕರು ಖಂಡು ಅವರನ್ನು ನಾಯಕನನ್ನಾಗಿ ಆರಿಸಿದರು. ಗೆಗಾಂಗ್ ಅವರು ದೇಶದಲ್ಲಿಯೇ ದೀರ್ಘ ಅವಧಿಗೆ ಅಂದರೆ 1980ರಿಂದ ಈವರೆಗೆ ಆರು ಬಾರಿ ಒಟ್ಟು 23 ವರ್ಷ ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿದ್ದರು.. ಅತಿ ಹೆಚ್ಚು ವರ್ಷ ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿ ಇದ್ದವರ ಪೈಕಿ ಗೆಗಾಂಗ್ ಅವರದು ಎರಡನೆಯ ಸ್ಥಾನ.

2007: ಶ್ರೇಷ್ಠ ಗಾಯಕಿ ಆಶಾ ಬೋಂಸ್ಲೆ ಮತ್ತು ಸಂಗೀತ ನಿರ್ದೇಶಕ ಇಳಯರಾಜಾ ಸೇರಿದಂತೆ ಐವರು ಸಾಧಕರಿಗೆ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರು ಪ್ರತಿಷ್ಠಿತ ಸಂಗೀತ ಅಕಾಡೆಮಿ ಪ್ರಶಸ್ತಿ ಪ್ರದಾನ ಮಾಡಿದರು. ಗಾಯಕರಾದ ಬಾಲಮುರಳಿ ಕೃಷ್ಣ, ಗಿರಿಜಾದೇವಿ ಪ್ರಶಸ್ತಿ ಪಡೆದ ಇತರರು. ಸರೋದ್ ಮಾಂತ್ರಿಕ ಅಲಿ ಅಕ್ಬರ್ ಖಾನ್ (84) ಪ್ರಶಸ್ತಿಗೆ ಆಯ್ಕೆ ಆಗಿದ್ದರೂ ಅನಾರೋಗ್ಯ ಕಾರಣ ಸಮಾರಂಭಕ್ಕೆ ಆಗಮಿಸಿರಲಿಲ್ಲ.

2007: ಪ್ರಸ್ತುತ ಸಾಲಿನ ಪ್ರತಿಷ್ಠಿತ ಲತಾ ಮಂಗೇಶ್ಕರ್ ಪ್ರಶಸ್ತಿಯು ಖ್ಯಾತ ಸಂಗೀತ ನಿರ್ದೇಶಕ ಹಾಗೂ ಲತಾ ಅವರ ಸಹೋದರ ಹೃದಯನಾಥ ಮಂಗೇಶ್ಕರ್ ಅವರಿಗೆ ದೊರೆಯಿತು. ಮಧ್ಯ ಪ್ರದೇಶ ಸರ್ಕಾರವು 1984ರಲ್ಲಿ ರಾಜ್ಯದವರೇ ಆದ ಗಾಯಕ ಲತಾ ಮಂಗೇಶ್ಕರ್ ಗೌರವಾರ್ಥ ಸ್ಥಾಪಿಸಿದ ಈ ಪ್ರಶಸ್ತಿಯು ಕಳೆದ ಬಾರಿ ಗಾಯಕಿ ಕವಿತಾ ಕೃಷ್ಣಮೂರ್ತಿ ಅವರಿಗೆ ಲಭಿಸಿತ್ತು.

2007: ಬೆಂಗಳೂರಿನ ಅನಕೃ- ನಿರ್ಮಾಣ್ ಪ್ರತಿಷ್ಠಾನವು ನೀಡುವ ಪ್ರಸಕ್ತ ಸಾಲಿನ `ಅನಕೃ- ನಿರ್ಮಾಣ್' ಪ್ರಶಸ್ತಿಗೆ ಹಿರಿಯ ಸಾಹಿತಿ ಡಾ. ಚನ್ನವೀರ ಕಣವಿ ಆಯ್ಕೆಯಾದರು.

2007: ಖ್ಯಾತ ವ್ಯಂಗ್ಯಚಿತ್ರಕಾರ ಜಾಹ್ನಿ ಹರ್ಟ್ ಅವರು ನ್ಯೂಯಾರ್ಕಿನ ತಮ್ಮ ಸ್ವಗೃಹದಲ್ಲಿ ನಿಧನರಾದರು. ಅವರ ಪ್ರಶಸ್ತಿ ವಿಜೇತ ವ್ಯಂಗ್ಯಚಿತ್ರ ಸರಣಿ `ಬಿ.ಸಿ.' ವಿಶ್ವದಾದ್ಯಂತ 1300 ಸುದ್ದಿ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿತ್ತು. ಅವರು `ಬಿ.ಸಿ.' ಕಾರ್ಟೂನ್ ಸ್ಟ್ರಿಪ್ 1958ರಲ್ಲಿ ಆರಂಭಿಸಿದರು. ಅದು ಮುಂದೆ 1300 ಸುದ್ದಿ ಪತ್ರಿಕೆಗಳಲ್ಲಿ ಪ್ರಕಟಗೊಂಡು ಹರ್ಟ್ ಅವರನ್ನು ಜನಪ್ರಿಯತೆಯ ಉತ್ತುಂಗಕ್ಕೆ ಏರಿಸಿತು.

2006: ರೂ. 10,520ವರೆಗೆ ನಿವೃತ್ತಿ ವೇತನ (ಪಿಂಚಣಿ) ನೀಡಲು ಸರ್ಕಾರ ಒಪ್ಪಿಕೊಂಡ್ದದನ್ನು ಅನುಸರಿಸಿ  ಒಂದು ವಾರದಿಂದ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ಬಿಐ) ಅಧಿಕಾರಿಗಳು ಮತ್ತು ನೌಕರರು ನಡೆಸುತ್ತಿದ್ದ ಮುಷ್ಕರ ಕೊನೆಗೊಂಡಿತು.

2006: ಮೆಲ್ಬೋರ್ನ್ ಕಾಮನ್ ವೆಲ್ತ್ ಕೂಟದ ಅವಧಿಯಲ್ಲಿ ಉದ್ದೀಪನ ಮದ್ದು ಸೇವನೆ ವಿವಾದದಲ್ಲಿ ಸಿಲುಕಿದ ಭಾರತದ ವೇಯ್ಟ್ ಲಿಫ್ಟರುಗಳಾದ ತೇಜೀಂದರ್ ಸಿಂಗ್ ಮತ್ತು ಎಡ್ವಿನ್ ರಾಜು ಅವರಿಗೆ ಜೀವಮಾನದ ಅವಧಿಗೆ ನಿಷೇಧ ಹೇರಲಾಗಿದೆ ಎಂದು ಭಾರತೀಯ ವೇಯ್ಟ್ ಲಿಫ್ಟಿಂಗ್ ಒಕ್ಕೂಟ ಪ್ರಕಟಿಸಿತು.

1975: ಕಲಾವಿದೆ ಅನುರಾಧ ಪ್ರಕಾಶ್ ಜನನ.

1959: ಅಮೆರಿಕದ ಮೊದಲ 7 ಮಂದಿ ಗಗನಯಾನಿಗಳ ಹೆಸರನ್ನು ನಾಸಾ ಪ್ರಕಟಿಸಿತು. ಸ್ಕಾಟ್ ಕಾರ್ಪೆಂಟರ್, ಜೋರ್ಡನ್ ಕೂಪರ್, ಜಾನ್ ಗ್ಲೆನ್, ಗಸ್ ಗ್ರಿಸ್ಸೊಮ್, ವಾಲಿ ಸಚಿರ್ರಾ, ಆಲನ್ ಶೆಫರ್ಡ್ ಹಾಗೂ ಡೊನಾಲ್ಡ್ ಸ್ಲೇಟನ್ ಇವರೇ ಆ ಗಗನಯಾನಿಗಳು.

1959: ಭರತನಾಟ್ಯ, ಸಂಗೀತ, ಯೋಗ, ಕ್ರೀಡೆ, ಸಾಹಿತ್ಯ ಮತ್ತಿತರ ಸಾಂಸ್ಕೃತಿಕ ಕಲೆಗಳ ಜೊತೆಗೆ ಅಬಲೆಯರ ಸ್ವಾವಲಂಬನೆಗಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ದುಡಿಯುತ್ತಿರುವ ಲಕ್ಷ್ಮಿ ಎನ್. ಮೂರ್ತಿ ಅವರು ಶ್ರೀಕಂಠಯ್ಯ- ಗೌರಮ್ಮ ದಂಪತಿಯ ಮಗಳಾಗಿ ಬೆಂಗಳೂರಿನಲ್ಲಿ ಜನಿಸಿದರು. ಈಕೆ ಬಿಎಂಶ್ರೀ ಮೊಮ್ಮಗಳು.

1948: ಖ್ಯಾತ ಬಾಲಿವುಡ್ ತಾರೆ ಹಾಗೂ ನಟ ಅಮಿತಾಭ್ ಬಚ್ಚನ್ ಪತ್ನಿ ಜಯಾ ಬಚ್ಚನ್ ಹುಟ್ಟಿದ ದಿನ.

1939: ಕಲಾವಿದ ನಟರಾಜು ವಿ. ಜನನ.

1926: ಹಗ್ ಹೆಫ್ನರ್ ಹುಟ್ಟಿದ ದಿನ. ಈತ ಅಮೆರಿಕಾದ `ಪ್ಲೇಬಾಯ್' ಮ್ಯಾಗಜಿನ್ ನ  ಪ್ರಕಾಶಕ. ಮ್ಯಾಗಜಿನ್ ನ ಮೊದಲ ಸಂಚಿಕೆಯಲ್ಲಿ ಈತ ತನ್ನ ಹೆಸರು ಹಾಕಿರಲಿಲ್ಲ. ಇದಕ್ಕೆ ಕಾರಣ ಮ್ಯಾಗಜಿನ್ ವಿಫಲಗೊಳ್ಳಬಹುದೆಂಬ ಹೆದರಿಕೆ. ಹಣಕಾಸು ತೊಂದರೆ ಪರಿಣಾಮವಾಗಿಯೂ ಎರಡನೇ ಸಂಚಿಕೆ ಪ್ರಕಟಗೊಳ್ಳುವ ಬಗ್ಗೆ ಭೀತಿ ಆತನಿಗಿತ್ತು!

 1903: ಅಮೆರಿಕದ ವಿಜ್ಞಾನಿ ಗ್ರೆಗೊರಿ ಪಿನ್ ಕಸ್ (1903-67) ಜನ್ಮದಿನ. ಈತನ ಸಂಶೋಧನೆಗಳು ಜಗತ್ತಿನ ಮೊತ್ತ ಮೊದಲ ಜನನ ನಿಯಂತ್ರಣ ಗುಳಿಗೆಗಳ ಅಭಿವೃದ್ಧಿಗೆ ಮೂಲವಾದವು.

1899: ಜೇಮ್ಸ್ ಎಸ್. ಮೆಕ್ ಡೊನ್ನೆಲ್ (1899-1980) ಹುಟ್ಟಿದ ದಿನ. ಅಮೆರಿಕಾದ ವಿಮಾನ ನಿರ್ಮಾಣಗಾರನಾದ ಈತ 1938ರಲ್ಲಿ ಮೆಕ್ ಡೊನ್ನೆಲ್ ವಿಮಾನ ಕಂಪೆನಿ ಹುಟ್ಟು ಹಾಕಿದ ವ್ಯಕ್ತಿ.

1806: ಇಸಾಂಬರ್ಡ್ ಕಿಂಗ್ ಡಮ್ ಬ್ರೂನೆಲ್ (1806-1859) ಹುಟ್ಟಿದ ದಿನ. ಬ್ರಿಟಿಷ್ ಸಿವಿಲ್ ಹಾಗೂ ಮೆಕ್ಯಾನಿಕಲ್ ಎಂಜಿನಿಯರ್ ಆದ ಈತ ಮೊತ್ತ ಮೊದಲ ಟ್ರಾನ್ಸ್- ಅಟ್ಲಾಂಟಿಕ್ ಸ್ಟೀಮರಿನ ವಿನ್ಯಾಸಗಾರ. 

1756: ಬಂಗಾಳದ ನವಾಬ ಅಲಿವರ್ದಿ ಖಾನ್ ತನ್ನ 80ನೇ ವಯಸಿನಲ್ಲಿ ಮೃತನಾದ. ಆತನ ಕಿರಿಯ ಪುತ್ರಿಯ ಮಗ ಸಿರಾಜ್ - ಉದ್ - ದೌಲ್ ಆತನ ಉತ್ತರಾಧಿಕಾರಿಯಾದ. 

(ಸಂಗ್ರಹ: ನೆತ್ರಕೆರೆ ಉದಯಶಂಕರ)

2 comments:

Ravishankar said...

Today History Gives All Details In one Blog Thank You For Giving a Wonderful Blog

paryaya@gmail.com said...

Thanks Ravishankar. PARYAYA will try its level best to give some information useful to the society and those who wish to enhance their general knowledge.
Nethrakere Udaya Shankara

Advertisement