Monday, April 13, 2009

ಇಂದಿನ ಇತಿಹಾಸ History Today ಏಪ್ರಿಲ್ 11

ಇಂದಿನ ಇತಿಹಾಸ

ಏಪ್ರಿಲ್ 11

ನಷ್ಟಕ್ಕೆ ಒಳಗಾದ ಕಂಪೆನಿಗಳ ವಕ್ತಾರ ಎಂದೇ ಖ್ಯಾತಿ  ಪಡೆದಿರುವ  ಮೆಕ್ಸಿಕೊದ ಟೆಲಿಕಾಂ ದೊರೆ ಕಾರ್ಲೋಸ್  ಸ್ಲಿಮ್ ಜಗತ್ತಿನ  ಎರಡನೇ ಅತಿ ಶ್ರೀಮಂತ ವ್ಯಕ್ತಿಯ ಪಟ್ಟಕ್ಕೆ ಏರಿದರು.  ಮೈಕ್ರೋಸಾಫ್ಟ್ ನ ಮುಖ್ಯಸ್ಥ ಬಿಲ್ ಗೇಟ್ಸ್ ನಂತರದ ಸ್ಥಾನ ಕಾರ್ಲೋಸ್ ಸ್ಲಿಮ್ ಅವರಿಗೆ ಲಭಿಸಿತು. `ಫೋಬ್ಸ್' ನಿಯತಕಾಲಿಕ ಪ್ರಕಟಿಸಿರುವ ವಿಶ್ವದ ಅತಿ ಶ್ರೀಮಂತರ ಪಟ್ಟಿಯಲ್ಲಿ ಎರಡನೇ  ಸ್ಥಾನದಲ್ಲಿದ್ದ ವಾರೆನ್ ಬಫೆಟ್ ಅವರನ್ನು ಕೆಳಕ್ಕೆ ತಳ್ಳುವ ಮೂಲಕ ಕಾರ್ಲೋಸ್ ಸ್ಲಿಮ್ ಆ ಸ್ಥಾನಕ್ಕೆ ಬಂದರು.

2008: ಸರ್ಕಾರಿ ಅಧಿಕಾರಿಗಳ ಕಿರುಕುಳ ತಾಳಲಾರದೆ ಬಿಜನೋರ್ ಸಚಿವಾಲಯದ ಕಚೇರಿ ಹೊರಗೆ ರೈತ ಅಶೋಕ ಕುಮಾರ್ (42) ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ. ಅಶೋಕ ಕುಮಾರ್ ಮತ್ತು ನೆರೆಯವನೊಂದಿಗಿನ ಭೂ ವಿವಾದವನ್ನು ಅಧಿಕಾರಿಗಳು ದೀರ್ಘಕಾಲದಿಂದ ಇತ್ಯರ್ಥಗೊಳಿಸಿರಲಿಲ್ಲ. ವಿವಾದವನ್ನು ಶೀಘ್ರ ಇತ್ಯರ್ಥಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳ ಗಮನ ಸೆಳೆದರೂ ಯಾವುದೇ ಪ್ರಯೋಜನವಾಗಿರಲಿಲ್ಲ.  

2008: ಫ್ರಾನ್ಸ್ ಅಧ್ಯಕ್ಷ ನಿಕೋಲಸ್ ಸರ್ಕೋಜಿ ಅವರ ಪತ್ನಿ, ರೂಪದರ್ಶಿ ಕಾರ್ಲಾ ಬ್ರೂನಿ ಅವರ ನಗ್ನ ಛಾಯಾಚಿತ್ರ ನ್ಯೂಯಾರ್ಕಿನಲ್ಲಿ 45,000 ಪೌಂಡುಗಳಿಗೆ ಮಾರಾಟವಾಯಿತು. ಅಂದಾಜಿಗಿಂತಲೂ 20 ಪಟ್ಟು ಹೆಚ್ಚು ಹಣಕ್ಕೆ ಈ ಚಿತ್ರ ಮಾರಾಟವಾಯಿತು. 15 ವರ್ಷಗಳ ಹಿಂದೆ ಛಾಯಾಚಿತ್ರಗ್ರಾಹಕ ಮೈಕೆಲ್ ಕೋಮ್ಟೆ ಅವರು ಫ್ರೆಂಚ್ ಪ್ರಥಮ ಮಹಿಳೆಯ ಅಕರ್ಷಕ ಚಿತ್ರವನ್ನು ಸೆರೆಹಿಡಿದಿದ್ದರು. 

2008: 2007ರ ಜೂನ್ ತಿಂಗಳಲ್ಲಿ ಲಂಡನ್ನಿನ ಗ್ಲಾಸ್ಗೊ ವಿಮಾನನಿಲ್ದಾಣದಲ್ಲಿ ನಡೆದ ಭಯೋತ್ಪಾದಕ ದಾಳಿಯ ಪೂರ್ವಭಾವಿ ಮಾಹಿತಿ ತನಗಿದ್ದದ್ದು ನಿಜ ಎಂದು ಪ್ರಕರಣದ ಆರೋಪಿಗಳಲ್ಲಿ ಒಬ್ಬನಾದ ಬೆಂಗಳೂರಿನ ವೈದ್ಯ ಸಬೀಲ್ ಅಹ್ಮದ್ ತಪ್ಪೊಪ್ಪಿಕೊಂಡ ಹಿನ್ನೆಲೆಯಲ್ಲಿ ಲಂಡನ್ನಿನ  ಕೇಂದ್ರೀಯ ಕ್ರಿಮಿನಲ್ ಕೋರ್ಟ್ ಸಬೀಲ್ ಗೆ 18 ತಿಂಗಳ ಜೈಲು ಶಿಕ್ಷೆ ವಿಧಿಸಿತು.  ವಿಮಾನನಿಲ್ದಾಣಕ್ಕೆ ಹೊತ್ತಿ ಉರಿಯುತ್ತಿದ್ದ ಜೀಪನ್ನು ನುಗ್ಗಿಸಿ ಭಾರಿ ಹಾನಿ ಉಂಟುಮಾಡಲು ಬಯಸಿದ್ದ ಕಫೀಲ್ ಅಹ್ಮದನ ಸಹೋದರನಾದ ಸಬೀಲ್, ನ್ಯಾಯಾಲಯದಲ್ಲಿ ತನ್ನ ತಪ್ಪನ್ನು ಒಪ್ಪಿಕೊಂಡು ತಾನು ಮೊದಲಾಗಿ ಪೊಲೀಸರಿಗೆ ದಾಳಿಯ ಯೋಜನೆ ತಿಳಿಸಿದ್ದರೆ ಅಪಾಯ ತಪ್ಪಿಸಬಹುದಿತ್ತು ಎಂದು ಹೇಳಿದ. ಬೆಂಗಳೂರಿನ ಅಂಬೇಡ್ಕರ್ ವೈದ್ಯಕೀಯ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದ ಸಬೀಲ್ ಅಹ್ಮದನನ್ನು (26) ವಿಫಲ ಭಯೋತ್ಪಾದಕ ಕೃತ್ಯ ನಡೆದ ಕಳೆದ ಜೂನ್ 30ರಂದೇ ಲಿವರ್ ಪೂಲ್ನಲ್ಲಿ ಬಂಧಿಸಲಾಗಿತ್ತು. ದಾಳಿಯ ಬಗ್ಗೆ ಮೊದಲೇ ಮಾಹಿತಿ ಇತ್ತು ಎಂಬ ನೆಲೆಯಲ್ಲಿ ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.

2008: ನೇಪಾಳದ 'ಸಂವಿಧಾನ ಸಭೆ'ಗೆ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಮೊದಲ ಆಯ್ಕೆ ನಡೆದಿದ್ದು, ನೇಪಾಳ ಕಾಂಗ್ರೆಸ್ ಉಪಾಧ್ಯಕ್ಷ ಪ್ರಕಾಶ್ ಮಾನ್ ಸಿಂಗ್ ಗೆಲುವಿನ ನಗೆ ಚೆಲ್ಲಿದರು. ಸಂವಿಧಾನಾತ್ಮಕ ಜನಪ್ರತಿನಿಧಿಗಳ ಸಭೆಗೆ ಆಯ್ಕೆಯಾದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆ ಅವರದಾಯಿತು. 1990ರ ಪ್ರಜಾತಂತ್ರ ಚಳವಳಿ ಪೂರ್ವದ ನಾಯಕ ಗಣೇಶ ಮಾನ್ ಸಿಂಗ್ ಅವರ ಮಗನಾದ ಪ್ರಕಾಶ ಮಾನ್ ಸಿಂಗ್ ಅವರು ಪ್ರತಿಷ್ಠಿತ ಕಠ್ಮಂಡು 1 ಕ್ಷೇತ್ರದಲ್ಲಿ ನಡೆದ ನೇರ ಮತದಾನದಲ್ಲಿ 11,515 ಮತಗಳೊಂದಿಗೆ  ತಮ್ಮ ಸಮೀಪ ಸ್ಪರ್ಧಿ ನೇಪಾಳ ಕಮ್ಯೂನಿಸ್ಟ್ ಪಕ್ಷದ (ಯುಎಂಎಲ್) ಪ್ರದೀಪ ನೇಪಾಳ ಅವರನ್ನು ಪರಾಭವಗೊಳಿಸಿದರು. ಪ್ರದೀಪ ನೇಪಾಳ ಅವರಿಗೆ 6000 ಮತಗಳು ಮಾತ್ರ ಲಭಿಸಿದವು. ಸಂವಿಧಾನ  ಪುನರ್ರಚನೆಗಾಗಿ 'ಸಂವಿಧಾನ  ಸಭೆ'ಯ ರಚನೆ ಸಲುವಾಗಿ  ಈ ಚುನಾವಣೆ  ನಡೆಯಿತು. ಈ ಸಂವಿಧಾನ  ಸಭೆಯು 240 ವರ್ಷಗಳ  ಇತಿಹಾಸ  ಇರುವ ಹಿಂದೂ ದೊರೆಯ ಏಕಚಕ್ರಾಧಿಪತ್ಯಕ್ಕೆ ಮುಂದೆ ಕೊನೆ ಹಾಡಿತು.

 2008:  ಬೆಂಗಳೂರು ನಗರದ ಬೈಯಪ್ಪನಹಳ್ಳಿಯ ಬಳಿ ಇರುವ ಎನ್ ಜಿ ಇ ಎಫ್ ಜಮೀನನ್ನು ಮೆಟ್ರೋ ರೈಲು ಯೋಜನೆಗೆ ಸ್ವಾಧೀನಪಡಿಸಿಕೊಳ್ಳಲು ಹೈಕೋರ್ಟ್ ಅನುಮತಿ ನೀಡಿತು. ಇದರಿಂದಾಗಿ ಎನ್ ಜಿ ಇ ಎಫ್ ಗೆ ಸೇರಿರುವ 53.10 ಎಕರೆ ಜಮೀನನ್ನು ಸ್ವಾಧೀನ ಪಡಿಸಿಕೊಳ್ಳಲು ಮೆಟ್ರೊ ರೈಲು ನಿಗಮಕ್ಕೆ ಅನುಮತಿ ದೊರೆತಂತಾಯಿತು. ಈ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲು ಹೈಕೋರ್ಟಿನ ಅನುಮತಿ ಕೋರಿ ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಿ ಸರ್ಕಾರ ಅರ್ಜಿ ಸಲ್ಲಿಸಿತ್ತು. ಆದರೆ ಸಾರ್ವಜನಿಕ ಉದ್ದೇಶಕ್ಕಾಗಿ ಜಮೀನನ್ನು ಸ್ವಾಧೀನಪಡಿಸಿಕೊಳ್ಳುವಾಗ ಈ ರೀತಿ ಕೋರ್ಟಿನ ಅನುಮತಿ ಪಡೆಯುವ ಅಗತ್ಯವಿಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಅಡ್ವೊಕೇಟ್ ಜನರಲ್ ಬಿ.ವಿ.ಆಚಾರ್ಯ ಅವರು, ನ್ಯಾಯಮೂರ್ತಿ ರಾಮಮೋಹನ ರೆಡ್ಡಿ ಅವರ ಅನುಮತಿ ಪಡೆದು ಅರ್ಜಿಯನ್ನು ಹಿಂದಕ್ಕೆ ಪಡೆದರು. ಇದೇ ವೇಳೆಯಲ್ಲಿ ಫಲಾನುಭವಿಗಳಿಗೆ ಸೂಕ್ತ ಪರಿಹಾರ ನೀಡುವಂತೆ ಸರ್ಕಾರಕ್ಕೆ ನ್ಯಾಯಮೂರ್ತಿಗಳು ತಾಕೀತು ಮಾಡಿದರು.

2008: ಪ್ರೇಮದ ಸಂಕೇತ ಎನಿಸಿಕೊಂಡಿರುವ ತಾಜಮಹಲಿನ ರೂವಾರಿ ಶಹಜಹಾನ್ ಬಳಸುತ್ತಿದ್ದ ಚಿನ್ನದ ಲೇಪವಿರುವ ಕಠಾರಿಯನ್ನು ಲಂಡನ್ನಿನಲ್ಲಿ ಹರಾಜು ಹಾಕಿದಾಗ ನಿರೀಕ್ಷೆಗಿಂತಲೂ ಮೂರು ಪಟ್ಟು ಹೆಚ್ಚು ಬೆಲೆ ದೊರಕಿತು. 17 ನೇ ಶತಮಾನದ ಆದಿಯಲ್ಲಿ ತಯಾರಿಸಲಾಗಿದ್ದ ಈ ಕಠಾರಿಗೆ 5 ಲಕ್ಷ ಪೌಂಡ್ ದೊರೆಯಬಹುದೆಂದು ಅಂದಾಜು ಮಾಡಲಾಗಿತ್ತು. ಆದರೆ ಅದು 15ಲಕ್ಷ ಪೌಂಡುಗಳಿಗೆ ಹರಾಜಾಯಿತು.

2007: ಖ್ಯಾತ ಹೃದಯರೋಗ ತಜ್ಞ ಕನ್ನಡಿಗ, ಡಾ. ಅರಕಲಗೂಡು ಸಂಪತ್ ಕುಮಾರ್ ಅವರನ್ನು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್), ಹೃದಯ ಮತ್ತು ರಕ್ತನಾಳ ಶಸ್ತ್ರಚಿಕಿತ್ಸೆ ವಿಭಾಗ (ಸಿಟಿ ವಿ ಎಸ್) ಹಾಗೂ  ಹೃದಯ ಮತ್ತು ನರಶಾಸ್ತ್ರ ಕೇಂದ್ರದ ಮುಖ್ಯಸ್ಥರನ್ನಾಗಿ ನೇಮಿಸಲಾಯಿತು.

2007: `ರಾಷ್ಟ್ರಗೀತೆಗೆ ಅವಮಾನ ಮಾಡಿದ' ಇನ್ ಫೋಸಿಸ್ ಮುಖ್ಯಸ್ಥ ನಾರಾಯಣಮೂರ್ತಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಮೈಸೂರು ನಗರದ ವಕೀಲ ಅ.ಮ. ಭಾಸ್ಕರ್ ಅವರು ಮೈಸೂರಿನ ವಿಜಯನಗರದ ಪೊಲೀಸ್ ಠಾಣೆಗೆ ದೂರು ನೀಡಿದರು. ರಾಷ್ಟ್ರಗೀತೆ ಹಾಡುವುದರಿಂದ ಇನ್ ಫೋಸಿಸ್ ಕಂಪೆನಿಯಲ್ಲಿರುವ ವಿದೇಶಿ ನೌಕರರಿಗೆ ಮುಜುಗರವಾಗುತ್ತದೆ ಎಂದು ನಾರಾಯಣಮೂರ್ತಿ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದು ಸಂವಿಧಾನದ ಮೂಲಭೂತ ಕರ್ತವ್ಯಗಳ ಸ್ಪಷ್ಟ ಉಲ್ಲಂಘನೆ ಆಗುತ್ತದೆ ಎಂದು ಅರ್ಜಿದಾರರು ದೂರಿನಲ್ಲಿ ಪ್ರತಿಪಾದಿಸಿದರು.

2007:  ನಷ್ಟಕ್ಕೆ ಒಳಗಾದ ಕಂಪೆನಿಗಳ ವಕ್ತಾರ ಎಂದೇ ಖ್ಯಾತಿ  ಪಡೆದಿರುವ  ಮೆಕ್ಸಿಕೊದ ಟೆಲಿಕಾಂ ದೊರೆ ಕಾರ್ಲೋಸ್  ಸ್ಲಿಮ್ ಜಗತ್ತಿನ  ಎರಡನೇ ಅತಿ ಶ್ರೀಮಂತ ವ್ಯಕ್ತಿಯ ಪಟ್ಟಕ್ಕೆ ಏರಿದರು.  ಮೈಕ್ರೋಸಾಫ್ಟ್ ನ ಮುಖ್ಯಸ್ಥ ಬಿಲ್ ಗೇಟ್ಸ್ ನಂತರದ ಸ್ಥಾನ ಕಾರ್ಲೋಸ್ ಸ್ಲಿಮ್ ಅವರಿಗೆ ಲಭಿಸಿತು. `ಫೋಬ್ಸ್' ನಿಯತಕಾಲಿಕ ಪ್ರಕಟಿಸಿರುವ ವಿಶ್ವದ ಅತಿ ಶ್ರೀಮಂತರ ಪಟ್ಟಿಯಲ್ಲಿ ಎರಡನೇ  ಸ್ಥಾನದಲ್ಲಿದ್ದ ವಾರೆನ್ ಬಫೆಟ್ ಅವರನ್ನು ಕೆಳಕ್ಕೆ ತಳ್ಳುವ ಮೂಲಕ ಕಾರ್ಲೋಸ್ ಸ್ಲಿಮ್ ಆ ಸ್ಥಾನಕ್ಕೆ ಬಂದರು. ಕಾರ್ಲೋಸ್ ಅವರ ಈಗಿನ ಆಸ್ತಿ 5300 ಕೋಟಿ ಡಾಲರುಗಳು. ಸ್ಲಿಮ್ ಅವರ ಕಂಪೆನಿಗಳ ಅದರಲ್ಲೂ ಅಮೆರಿಕ ಮೋವಿಲ್ ಸೆಲ್ ಫೋನ್  ಸಂಸ್ಥೆಯ ಷೇರುಬೆಲೆ  ಇತ್ತೀಚಿನ ತಿಂಗಳಗಳಲ್ಲಿ ಏರಿದ ಹಿನ್ನೆಲೆಯಲ್ಲಿ ಸ್ಲಿಮ್  ಅವರಿಗೆ ಅದೃಷ್ಟ ಒಲಿಯಿತು.

2007: ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ವಶಪಡಿಸಿಕೊಂಡವರಿಗೆ ಹಾಗೂ ಈ ಕೃತ್ಯವನ್ನು ವರದಿ ಮಾಡದ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ ಹತ್ತು ಸಾವಿರ ರೂಪಾಯಿಗಳವರೆಗೆ ದಂಡ ವಿಧಿಸಲು ಅವಕಾಶ ಇರುವ ಕರ್ನಾಟಕ ಭೂ ಕಂದಾಯ (ತಿದ್ದುಪಡಿ) ಮಸೂದೆಗೆ ವಿಧಾನ ಸಭೆ ಒಪ್ಪಿಗೆ ನೀಡಿತು.

2007: ಚಿತ್ರದುರ್ಗದ ಅಗಸನಕಲ್ಲು ಪ್ರದೇಶದ ಸಾದಿಕ್ ಎಂಬವರ ಪತ್ನಿ ಆರೀಫಾಭಾನು ಎಂಬ ಮಹಿಳೆ ಕೃಷ್ಣ ನರ್ಸಿಂಗ್ ಹೋಮಿನಲ್ಲಿ ಐದು ಮಕ್ಕಳಿಗೆ ಜನ್ಮನೀಡಿದರು. ಐದು ಮಕ್ಕಳಲ್ಲಿ ಒಂದು ಗಂಡು, ಒಂದು ಹೆಣ್ಣು ಮೃತಪಟ್ಟವು.

2007: ಕ್ರಿಕೆಟ್ ಜಗತ್ತು ಕಂಡ ಶ್ರೇಷ್ಠ ಬ್ಯಾಟ್ಸ್ಮನ್ ವೆಸ್ಟ್ ಇಂಡೀಸ್ ನ ಬ್ರಯನ್ ಲಾರಾ ಅವರು. ವಿಶ್ವಕಪ್ ಚಾಂಪಿಯನ್ ಶಿಪ್ ಬಳಿಕ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ಟಿಗೆ ವಿದಾಯ ಹೇಳುವುದಾಗಿ ಪ್ರಕಟಿಸಿದರು.

2006: ಇಸ್ರೇಲಿನ ಸೇನೆ ಮತ್ತು ರಾಜಕೀಯ ಕ್ಷಿತಿಜದಲ್ಲಿ ದಶಕಗಳ ಕಾಲ ಮೆರೆದ ಪ್ರಧಾನಿ ಏರಿಯಲ್ ಶೆರಾನ್ ಯುಗ ಸಾಂಕೇತಿಕವಾಗಿ ಸಮಾಪನಗೊಂಡಿತು. ಮೂರು ತಿಂಗಳುಗಳಿಂದ ಪ್ರಜ್ಞಾಹೀನರಾದ ಶೆರಾನ್ ಸ್ಥಾನಕ್ಕೆ ಯಹೂದಿ ಒಲ್ಮೆರ್ಟ್ (60) ಅವರನ್ನು ನೇಮಕ ಮಾಡುವ ಅಧಿಕೃತ ನಿರ್ಧಾರವನ್ನು ಸಚಿವ ಸಂಪುಟ ಕೈಗೊಂಡಿತು.

2006: ಕೊಡಗಿನ ವಿರಾಜಪೇಟೆಯ ನಿವಾಸಿ ಅಹಮದಾಬಾದಿನ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ (ಐಐಎಂಎ) ವಿದ್ಯಾರ್ಥಿ ಶರತ್ ಕೊಡಗು ಕ್ಯಾಂಪಸ್ ಆಯ್ಕೆಯಲ್ಲಿ ತಮಗೆ ಬಂದ ವಾರ್ಷಿಕ 60 ಲಕ್ಷ ರೂಪಾಯಿಗಳ ನೌಕರಿ ಆಹ್ವಾನವನ್ನು ತಿರಸ್ಕರಿಸಿದರು. ಕ್ಯಾಂಪಸ್ ಸಂದರ್ಶನ ಕಾಲದಲ್ಲಿ ಲಂಡನ್ ಇನ್ವೆಸ್ಟ್ ಮೆಂಟ್ ಬ್ಯಾಂಕ್ ಮುಂದಿಟ್ಟ ವಾರ್ಷಿಕ 60 ಲಕ್ಷ ರೂಪಾಯಿಗಳ ವೇತನದ ಆಹ್ವಾನ ಸಹಿತ ಹಲವಾರು ಬಹುರಾಷ್ಟೀಯ ಕಂಪೆನಿಗಳು ಮುಂದಿಟ್ಟ ಆಕರ್ಷಕ ಸಂಬಳದ ನೌಕರಿಗಳನ್ನು ತಿರಸ್ಕರಿಸಿ, ಸ್ವಂತ ಸಂಸ್ಥೆ ಆರಂಭಿಸಲು ಅವರು ನಿರ್ಧರಿಸಿದರು.

 2006: ಪಟ್ನಾದಲ್ಲಿ ಕೊನೆಯ ಕ್ಷಣದಲ್ಲಿ ಚುನಾವಣಾ ಅಧಿಕಾರಿಯನ್ನು ಕಿತ್ತು ಹಾಕಿದ ಘಟನೆ ಹಾಗೂ ಹಾಲಿ ಅಧ್ಯಕ್ಷ ಹಾಗೂ ಅಧ್ಯಕ್ಷೀಯ ಆಭ್ಯರ್ಥಿ ಜಾರ್ಜ್ ಫರ್ನಾಂಡಿಸ್ ಮತ್ತು ಅವರಿಗೆ ನಿಷ್ಠವಾದ ರಾಜ್ಯ ಘಟಕಗಳ ಬಹಿಷ್ಕಾರದ ಮಧ್ಯೆ ನಡೆದ ವಿವಾದಾತ್ಮಕ ಚುನಾವಣೆಯಲ್ಲಿ ಶರದ್ ಯಾದವ್ ಅವರು ಜನತಾದಳ (ಯು) ಅಧ್ಯಕ್ಷರಾಗಿ ಆಯ್ಕೆಯಾದರು. ಪಕ್ಷದ ಕೇಂದ್ರೀಯ ಸಂಸದೀಯ ಮಂಡಳಿ ಅಧ್ಯಕ್ಷ ಶರದ್ ಯಾದವ್ ಅವರು 413 ಮತಗಳನ್ನು ಪಡೆದರೆ, ಫರ್ನಾಂಡಿಸ್ ಅವರಿಗೆ 25 ಮತಗಳು ಮಾತ್ರ ಬಂದವು. 10 ಮತಗಳನ್ನು ಅಸಿಂಧು ಎಂದು ಘೋಷಿಸಲಾಯಿತು.

1982: ಪಂಜಾಬಿನ ಖ್ಯಾತ ಕವಯಿತ್ರಿ ಅಮೃತಾ ಪ್ರೀತಂ ಅವರು 1981ರ ಸಾಲಿನ ಭಾರತೀಯ ಜ್ಞಾನಪೀಠ ಪ್ರಶಸ್ತಿಗೆ ಆಯ್ಕೆಯಾದರು. ಪ್ರೀತಂ ಅವರ `ಕಾಗಜ್ ತ ಕನ್ವಾಸ್' ಕವನ ಸಂಕಲನಕ್ಕೆ ಈ ಪ್ರಶಸ್ತಿ ಬಂತು.

1937: ಭಾರತದ ಖ್ಯಾತ ಟೆನಿಸ್ ಆಟಗಾರ ರಾಮನಾಥನ್ ಕೃಷ್ಣನ್ ಹುಟ್ಟಿದ ದಿನ. ವಿಂಬಲ್ಡನ್ನಿನಲ್ಲಿ ಸೆಮಿಫೈನಲ್ಸ್ ಪ್ರವೇಶಿಸಿದ ಮೊತ್ತ ಮೊದಲ ಭಾರತೀಯ ಇವರು. ಇವರು ಟೆನಿಸ್ ಆಟಗಾರ ರಮೇಶ ಕೃಷ್ಣನ್ ಅವರ ತಂದೆ. 

1908: ಜಪಾನಿನ ಎಲೆಕ್ಟ್ರಾನಿಕ್ ಉದ್ಯಮಿ ಮಸಾರು ಐಬುಕ (1908-1998) ಹುಟ್ಟಿದ ದಿನ. ಈತ ಸ್ಥಾಪಿಸಿದ `ಅಕಿಯೋ ಮೊರಿಟಾ' ಎಂಬ ಚಿಕ್ಕ ರೆಕಾರ್ಡಿಂಗ್ ಕಂಪೆನಿ ಮುಂದೆ `ಸೋನಿ ಕಾರ್ಪೊರೇಷನ್' ಆಗಿ ಬೆಳೆಯಿತು. ಜಪಾನಿಗೆ ಟ್ರಾನ್ಸಿಸ್ಟರ್ ತಂತ್ರಜ್ಞಾನವನ್ನು ತಂದವನು ಕೂಡಾ ಈತನೇ. 

1887: ಜೆಮಿನಿ ರಾಯ್ (1887-1972) ಹುಟ್ಟಿದ ದಿನ. ಇವರು ಭಾರತದ ಖ್ಯಾತ ಕಲಾವಿದರು.

1850: ಜೋಸೆಫ್ ಚಾರ್ಲ್ಸ್ ಆರ್ಥರ್ (1850-1942) ಜನ್ಮದಿನ. ಸಸ್ಯಗಳಿಗೆ ತಗಲುವ ಬೂಸ್ಟುರೋಗಕ್ಕೆ ಸೂಕ್ಷ್ಮ ಅಣಬೆಗಳೇ ಕಾರಣ ಎಂದು ಈತ ಕಂಡು ಹಿಡಿದ.

 1755: ಇಂಗ್ಲಿಷ್ ವೈದ್ಯ ಜೇಮ್ಸ್ ಪಾರ್ಕಿನ್ಸನ್ (1755-1824) ಜನ್ಮದಿನ. ಈತ ಕೈ ನಡುಕದ ರೋಗವನ್ನು ಮೊತ್ತ ಮೊದಲಿಗೆ ವಿವರಿಸಿದ. ಈತನ ಹೆಸರನ್ನೇ ಈ ರೋಗಕ್ಕೆ (ಪಾರ್ಕಿನ್ಸನ್ ಕಾಯಿಲೆ) ಇಡಲಾಯಿತು. 

1770: ಜಾರ್ಜ್ ಕ್ಯಾನಿಂಗ್ (1770-1827) ಹುಟ್ಟಿದ ದಿನ. ಈತ ರಾಜತಾಂತ್ರಿಕ ಹಾಗೂ ಬ್ರಿಟನ್ ಪ್ರಧಾನಿಯಾಗಿದ್ದ ವ್ಯಕ್ತಿ. ಮುಂದೆ ಭಾರತದ ಗವರ್ನರ್ ಜನರಲ್ ಆದ ಲಾರ್ಡ್ ಕ್ಯಾನಿಂಗ್ ಈತನ ಪುತ್ರ.

1689: ಮೂರನೆಯ ವಿಲಿಯಂ ಮತ್ತು ಎರಡನೆಯ ಮೇರಿ ಅವರಿಗೆ  ಜಂಟಿ ಸಾರ್ವಭೌಮರಾಗಿ ಕಿರೀಟಧಾರಣೆ ಮಾಡಲಾಯಿತು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement