Saturday, April 4, 2009

ಇಂದಿನ ಇತಿಹಾಸ History Today ಮಾರ್ಚ್ 31

ಇಂದಿನ ಇತಿಹಾಸ

ಮಾರ್ಚ್ 31

ರಾಷ್ಟ್ರಪತಿ ಆಡಳಿತದಲ್ಲಿ ಅಧ್ಯಕ್ಷ ಮುಷರಫ್ ಅವರ ಕೆಂಗಣ್ಣಿಗೆ ಗುರಿಯಾಗಿ ಗೃಹಬಂಧನಕ್ಕೆ ಒಳಗಾಗಿ ಬಿಡುಗಡೆಗೊಂಡ ಸುಪ್ರಿಂಕೋರ್ಟಿನ ಮಾಜಿ ಮುಖ್ಯ ನ್ಯಾಯಮೂರ್ತಿ ಇಫ್ತಿಕರ್ ಚೌಧರಿ ಅವರಿಗೆ ಅವರ ಸ್ವಗ್ರಾಮ ಕ್ವೆಟ್ಟಾದಲ್ಲಿ ಅಭೂತಪೂರ್ವ ಸ್ವಾಗತ ನೀಡಲಾಯಿತು. ಐದು ತಿಂಗಳಿನಿಂದ ಗೃಹ ಬಂಧನದಲ್ಲಿದ್ದ ಇಫ್ತಿಕರ್ ಹಾಗೂ ಅವರ ಒಂಬತ್ತು ಜನ ಸಹೋದ್ಯೋಗಿಗಳನ್ನು ಹೊಸ ಪ್ರಧಾನಿ ಜಿಲಾನಿ ಅವರ ಆದೇಶದ ಮೇರೆಗೆ ಹಿಂದಿನ ವಾರ ಬಿಡುಗಡೆಗೊಳಿಸಲಾಗಿತ್ತು.

2008: ಜಾಗತಿಕ ಕ್ರೀಡಾ ಉತ್ಸವ ಒಲಿಂಪಿಕ್ ಕೂಟದ ಜ್ಯೋತಿಯ ಪಯಣಕ್ಕೆ ಅಧಿಕೃತ ಚಾಲನೆ ಲಭಿಸಿತು. ಚೀನಾದ ಅಧ್ಯಕ್ಷ ಹು ಜಿಂಟಾವೊ ಅವರು ಬೀಜಿಂಗಿನ ತಿಯಾನನ್ಮೆನ್ ಚೌಕದಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ಜ್ಯೋತಿಯ ಜಾಗತಿಕ ರಿಲೇಗೆ ಚಾಲನೆ ನೀಡಿದರು. ಜಿಂಟಾವೊ ಅವರು ಅಡೆತಡೆ ಓಟದಲ್ಲಿ (ಹರ್ಡಲ್ಸ್) ಒಲಿಂಪಿಕ್ ಚಾಂಪಿಯನ್ ಎನಿಸಿರುವ ಚೀನಾದ ಅಥ್ಲೀಟ್ ಲಿಯು ಕ್ಸಿಯಾಂಗ್ ಅವರಿಗೆ ಜ್ಯೋತಿಯನ್ನು ಹಸ್ತಾಂತರಿಸಿದರು. ಇದರೊಂದಿಗೆ ಒಲಿಂಪಿಕ್ ಜ್ಯೋತಿಯ ವಿಶ್ವ ಪಯಣ ಆರಂಭವಾಯಿತು. ಒಲಿಂಪಿಕ್ನ ಸಂಪ್ರದಾಯದಂತೆ ಗ್ರೀಕಿನಲ್ಲಿ ಹಿಂದಿನ ವಾರ ಜ್ಯೋತಿಯನ್ನು ಬೆಳಗಿಸಲಾಗಿತ್ತು. ಅದನ್ನು ವಿಶೇಷ ವಿಮಾನದಲ್ಲಿ ಈದಿನ ಬೆಳಗ್ಗೆ ಚೀನಾಕ್ಕೆ ತರಲಾಯಿತು. ಸ್ಥಳೀಯ ಕಾಲಮಾನ ಬೆಳಗ್ಗೆ 9 ಕ್ಕೆ ಚೀನಾ ತಲುಪಿದ ಜ್ಯೋತಿಯನ್ನು ಬಳಿಕ ನಡೆದ ಸಮಾರಂಭದಲ್ಲಿ ಜಿಂಟಾವೊ ಮತ್ತೆ ಬೆಳಗಿಸಿದರು. 

2008: ಏಪ್ರಿಲ್ ಒಂದರಿಂದ ಜಾರಿಗೆಯಾಗಬೇಕಿದ್ದ `ಮೌಲ್ಯಾಧಾರಿತ ತೆರಿಗೆ ಪದ್ಧತಿ'ಯನ್ನು ರಾಜ್ಯ ಸರ್ಕಾರ ಅನಿರ್ದಿಷ್ಟಾವಧಿಗೆ ಮುಂದೂಡಿತು. `ಸ್ವಯಂ ಘೋಷಿತ ತೆರಿಗೆ' ಪದ್ಧತಿಯ ಅನ್ವಯ ತೆರಿಗೆ ಪಾವತಿಸಲು ನಾಗರಿಕರಿಗೆ ಅವಕಾಶ ಕಲ್ಪಿಸಿತು. ಇದರಿಂದ ನಗರದ ಲಕ್ಷಾಂತರ ಮಂದಿ ನಿವಾಸಿಗಳು ನೆಮ್ಮದಿಯ ನಿಟ್ಟುಸಿರು ಬಿಡುವಂತಾಯಿತು. ರಾತ್ರಿ ಮಹತ್ವದ ಸಭೆ ನಡೆಸಿದ ರಾಜ್ಯಪಾಲರು, ಚುನಾಯಿತ ಸರ್ಕಾರ ಅಧಿಕಾರಕ್ಕೆ ಬರುವವರೆಗೆ ಸಿವಿಎಸ್ ಪದ್ಧತಿ ಜಾರಿಯನ್ನು ಮುಂದೂಡಲು ನಿರ್ಧರಿಸಿದರು.

2008: `ಮಹದಾಯಿ ಯೋಜನೆಯ ವಿವಾದವನ್ನು ನೀವೇ ಬಗೆಹರಿಸಿ, ನ್ಯಾಯಮಂಡಳಿ ಬೇಡವೇ ಬೇಡ' ಎಂದು ಕರ್ನಾಟಕ ಸುಪ್ರೀಂಕೋರ್ಟಿಗೆ ಮನವಿ ಮಾಡಿತು. `ಕುಡಿಯುವ ನೀರಿಗಾಗಿ ಕೇವಲ ಏಳು ಟಿಎಂಸಿ ನೀರು ಬಳಸಿಕೊಳ್ಳುವ ಯೋಜನೆಯ ವಿವಾದದ ಇತ್ಯರ್ಥಕ್ಕಾಗಿ ನ್ಯಾಯಮಂಡಳಿ ಯಾಕೆ ಬೇಕು?  ಇದರಿಂದ ಇನ್ನಷ್ಟು ಕಾಲಹರಣವೇ ಹೊರತು ಸಮಸ್ಯೆಗೆ ಪರಿಹಾರ ಸಿಗಲಾರದು' ಎಂದು ಹಿರಿಯ ವಕೀಲ ಫಾಲಿ ಎಸ್.ನಾರಿಮನ್ ವಾದಿಸಿದರು.  ಮಹದಾಯಿ ಖಟ್ಲೆಯಲ್ಲಿ ನಾರಿಮನ್ ಇದೇ ಮೊದಲ ಬಾರಿ ಕರ್ನಾಟಕವನ್ನು ಪ್ರತಿನಿಧಿಸಿದರು.

2008: ಹೊಗೇನಕಲ್ ವಿಚಾರದಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಂ.ಕರುಣಾನಿಧಿ ಆಡಿದ ಪ್ರಚೋದನಾಕಾರಿ ಮಾತುಗಳಿಂದ ಕರ್ನಾಟಕ ಕೆರಳಿತು. ಕನ್ನಡ ಪರ ಸಂಘಟನೆಗಳ ಆಕ್ರೋಶ ಉಗ್ರ ಸ್ವರೂಪದ ಪ್ರತಿಭಟನೆಗಳ ಮೂಲಕ ಸಿಡಿಯಿತು. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮೊದಲಾದ ಪಕ್ಷಗಳು ಕರುಣಾನಿಧಿ ಅವರ ಹೇಳಿಕೆಯನ್ನು ಒಕ್ಕೊರಲಿನಿಂದ ಖಂಡಿಸಿದವು. ತಮಿಳು ಚಲನಚಿತ್ರ ಪ್ರದರ್ಶನ ನಡೆಯುತ್ತಿದ್ದ ಬೆಂಗಳೂರಿನ ಚಿತ್ರಮಂದಿರಗಳ ಮೇಲೆ ದಾಳಿ ಮಾಡಿದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಹೋರಾಟದ ಬಿಸಿಯನ್ನು ಏರಿಸಿದರು. 

2008: ಸೈಕಲ್ ಕಳ್ಳತನ ಮಾಡುತ್ತಿದ್ದಾಗ ಸಿಕ್ಕಿ ಬಿದ್ದ ಕಳ್ಳನೊಬ್ಬನನ್ನು ಊರವರೇ ಸೇರಿ ಕಲ್ಲು ಹೊಡೆದು ಕೊಂದ ಘಟನೆ ಗುಜರಾತಿನ ನರ್ಮದಾ ಜಿಲ್ಲೆಯ ಓಪ್ರಾ ಗ್ರಾಮದಲ್ಲಿ ನಡೆಯಿತು. ಸುಮಾರು 15ರಿಂದ 20 ಮಂದಿ ಗ್ರಾಮಸ್ಥರು ಆರೋಪಿ ಭಾರತ್ ತದ್ವಿ ಎಂಬಾತನನ್ನು ಹಿಡಿದು ಥಳಿಸುತ್ತಿದ್ದ ವಿಷಯ ತಿಳಿದು ಪೊಲೀಸರು ಸ್ಥಳಕ್ಕೆ ಧಾವಿಸಿದರು ಹಾಗೂ ಆತನನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಿದರು. ಚಿಕಿತ್ಸೆ ಫಲಕಾರಿಯಾಗದೆ ಆತ ಮೃತನಾದ.

2008: ಪ್ರಪಂಚದಲ್ಲಿ ಕ್ಯಾಥೋಲಿಕ್ ಕ್ರೈಸ್ತರಿಗಿಂತಲೂ ಮುಸ್ಲಿಮರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ ಎಂದು ಅಂಕಿಅಂಶಗಳು ಬಹಿರಂಗಪಡಿಸಿದವು. ವಿಶ್ವದ ಅತಿಹೆಚ್ಚು ಜನಸಂಖ್ಯೆ ಹೊಂದಿದ್ದ ಜನಾಂಗ ಎಂಬ ಖ್ಯಾತಿಯಿಂದ ಕ್ಯಾಥೋಲಿಕ್ ಕ್ರೈಸ್ತರು ಮೊದಲ ಬಾರಿಗೆ ಹಿಂದೆ ಸರಿದರು ಎಂದು ವ್ಯಾಟಿಕನ್ನಿನ ವರದಿಗಳು ತಿಳಿಸಿದವು. ಪ್ರಪಂಚದ ಒಟ್ಟು ಜನಸಂಖ್ಯೆಯಲ್ಲಿ ಮುಸ್ಲಿಮರು ಶೇಕಡಾ 19.2ರಷ್ಟು ಪಾಲು ಹೊಂದಿದ್ದರೆ ಕ್ಯಾಥೋಲಿಕ್ ಕ್ರೈಸ್ತರು ಶೇ.17.4ರಷ್ಟು ಪ್ರಮಾಣದಲ್ಲಿ ಇದ್ದಾರೆ ಎಂದು ವರದಿ ಹೇಳಿತು. ಆದರೆ 2006ರ ಅಂಕಿ ಅಂಶಗಳ ಅನುಸಾರ ಕ್ರೈಸ್ತರ ಎಲ್ಲ ಪಂಗಡಗಳು ಅಂದರೆ, ಆರ್ಥೋಡಕ್ಸ್ ಚರ್ಚುಗಳು, ಆಂಗ್ಲಿಕನ್ನರು ಮತ್ತು ಪ್ರೊಟೆಸ್ಟಂಟ್ಸ್ ಪಂಗಡದವರು ಒಟ್ಟುಗೂಡಿದರೆ ಅವರ ಸಂಖ್ಯೆ ಶೇಕಡಾ 33ರಷ್ಟಾಗುತ್ತದೆ. ಮುಸ್ಲಿಂ ಪಂಗಡದಲ್ಲಿ ಜನನ ಪ್ರಮಾಣ ಏರುತ್ತಿರುವುದೇ ಇದಕ್ಕೆ ಕಾರಣ. ಇದು ಅಧಿಕೃತವಾದ ಸುದ್ದಿ ಎಂದು ವ್ಯಾಟಿಕನ್ನಿನ 2008ನೇ ವಾರ್ಷಿಕ ಪುಸ್ತಕದ ಅಂಕಿಅಂಶಗಳ ಸಂಗ್ರಹಕಾರ ಮಾನ್ ಸಿಗ್ನೋರ್ ವಿಟ್ಟೋರಿಯಾ ಫೋರ್ಮೆಂಟಿ ಹೇಳಿದರು.

2008: ರಾಷ್ಟ್ರಪತಿ ಆಡಳಿತದಲ್ಲಿ ಅಧ್ಯಕ್ಷ ಮುಷರಫ್ ಅವರ ಕೆಂಗಣ್ಣಿಗೆ ಗುರಿಯಾಗಿ ಗೃಹಬಂಧನಕ್ಕೆ ಒಳಗಾಗಿ ಬಿಡುಗಡೆಗೊಂಡ ಸುಪ್ರಿಂಕೋರ್ಟಿನ ಮಾಜಿ ಮುಖ್ಯ ನ್ಯಾಯಮೂರ್ತಿ ಇಫ್ತಿಕರ್ ಚೌಧರಿ ಅವರಿಗೆ ಅವರ ಸ್ವಗ್ರಾಮ ಕ್ವೆಟ್ಟಾದಲ್ಲಿ ಅಭೂತಪೂರ್ವ ಸ್ವಾಗತ ನೀಡಲಾಯಿತು. ಐದು ತಿಂಗಳಿನಿಂದ ಗೃಹ ಬಂಧನದಲ್ಲಿದ್ದ ಇಫ್ತಿಕರ್ ಹಾಗೂ ಅವರ ಒಂಬತ್ತು ಜನ ಸಹೋದ್ಯೋಗಿಗಳನ್ನು ಹೊಸ ಪ್ರಧಾನಿ ಜಿಲಾನಿ ಅವರ ಆದೇಶದ ಮೇರೆಗೆ ಹಿಂದಿನ ವಾರ ಬಿಡುಗಡೆಗೊಳಿಸಲಾಗಿತ್ತು.

2008: ಪಾಕಿಸ್ಥಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ತಮ್ಮ ಸಹೋದರ ಶಹಬಾಜ್ ಷರೀಫ್ ಅವರನ್ನು ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿಯನ್ನಾಗಿ ನೇಮಕ ಮಾಡಿದರು. 

2008: ಪಾಕಿಸ್ಥಾನ ಸಚಿವ ಸಂಪುಟಕ್ಕೆ ಸೇರ್ಪಡೆಯಾದ 24 ಜನ ಸದಸ್ಯರಿಗೆ ಅಧ್ಯಕ್ಷ ಪರ್ವೇಜ್ ಮುಷರಫ್ ಅವರು ಪ್ರಮಾಣ ವಚನ ಬೋಧಿಸಿದರು. ಪ್ರಧಾನಿ ಯುಸೂಫ್ ರಝಾ ಜಿಲಾನಿ ಸಮಾರಂಭದಲ್ಲಿ ಪಾಲ್ಗೊಂಡ್ದಿದರು. ಪ್ರಮುಖ ಖಾತೆಗಳು ಪಾಕಿಸ್ಥಾನ ಪೀಪಲ್ಸ್ ಪಕ್ಷದ ಪಾಲಾದವು. ಅಧ್ಯಕ್ಷ ಮುಷರಫ್ ಅವರ ಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಪಿಪಿಪಿಯ 11 ಸದಸ್ಯರು ಹಾಗೂ ಪಿಎಂಎಲ್-ಎನ್ ಪಕ್ಷದ 9 ಸದಸ್ಯರು, ಅವಾಮಿ ನ್ಯಾಷನಲ್ ಪಕ್ಷದ ಇಬ್ಬರು ಹಾಗೂ ಜಮಾಯಿತ್ ಉಲೆಮಾ-ಎ-ಇಸ್ಲಾಂ ಮತ್ತು ಬುಡಕಟ್ಟು ಪ್ರದೇಶದ ತಲಾ ಒಬ್ಬೊಬ್ಬರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. 

2008: ಉತ್ತರ ಅಮೆರಿಕದಲ್ಲಿರುವ ಭಾರತೀಯ ಮತ್ತು ಇತರ ಏಷ್ಯಾ ಮೂಲದವರ ವಾರಪತ್ರಿಕೆ ವತಿಯಿಂದ ಪ್ರಸಿದ್ಧ ಚಲನಚಿತ್ರ ನಿರ್ಮಾಪಕಿ ಮೀರಾ ನಾಯರ್ ಅವರಿಗೆ `2007ರ ವರ್ಷದ ವ್ಯಕ್ತಿ' ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸಲಾಂ ಬಾಂಬೆ, ಮಿಸ್ಸಿಸಿಪ್ಪಿ ಮಸಾಲ ಹಾಗೂ ಮಾನ್ಸೂನ್ ವೆಡ್ಡಿಂಗ್ ಮುಂತಾದ ಜನಪ್ರಿಯ ಚಿತ್ರಗಳನ್ನು ನಿರ್ಮಿಸಿದ ಮೀರಾ ಅವರು ಕಳೆದ ಹಲವು ವರ್ಷಗಳಿಂದ ಚಲನಚಿತ್ರ ಕ್ಷೇತ್ರಕ್ಕೆ (ಬಾಲಿವುಡ್ನಿಂದ ಹಾಲಿವುಡ್ ತನಕ) ಸಲ್ಲಿಸಿದ ಸೇವೆ ಗುರುತಿಸಿ ಅನಿವಾಸಿ ಏಷ್ಯನ್ನರಿಗೆ ನೀಡಲಾಗುವ ಈ ಪ್ರಶಸ್ತಿಯನ್ನು ನೀಡಲಾಯಿತು. ಹಿಂದಿನ ವರ್ಷದ ಪ್ರಶಸ್ತಿ ವಿಜೇತೆ ಪೆಪ್ಸಿಕೋ ಕಂಪೆನಿ ಅಧ್ಯಕ್ಷೆ ಮತ್ತು ಸಿಇಓ ಇಂದ್ರಾ ನೂಯಿ ಅವರು ಮೀರಾ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. 

2008: ಬಾಗ್ದಾದ್ ನಗರದ ಮೇಲೆ ಅಮೆರಿಕ ವಾಯು ಸೇನೆ ನಡೆಸಿದ ದಾಳಿಯಲ್ಲಿ 41 ಮಂದಿ ಹತರಾದರು.

2008: ಉತ್ತರ ಪ್ರದೇಶದ ಬಾರಾಬಂಕಿಯಲ್ಲಿನ ಭೂ ಖರೀದಿ ವಿವಾದಕ್ಕೆ ಸಂಬಂಧಿಸಿದಂತೆ ನಟ ಅಮಿತಾಬ್ ಬಚ್ಚನ್ ವಿರುದ್ಧ ತನಿಖೆಗೆ ಆದೇಶಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿತು. ಭೂಮಿ ಖರೀದಿಗೆ ಸಂಬಂಧಿಸಿದಂತೆ ಬಚ್ಚನ್ ವಿರುದ್ಧ ಯಾವುದೇ ರೀತಿಯ ಕ್ರಿಮಿನಲ್, ಸಿವಿಲ್ ಅಥವಾ ಕಂದಾಯ ಪ್ರಕರಣಗಳನ್ನು ಜರುಗಿಸಲಾಗದು ಎಂದು ಹೇಳಿದ ಅಲಹಾಬಾದ್ ಹೈಕೋರ್ಟಿನ ತೀರ್ಪು ಪ್ರಶ್ನಿಸಿ ಉತ್ತರ ಪ್ರದೇಶ ಸರ್ಕಾರ ಈ ಅರ್ಜಿ ಸಲ್ಲಿಸಿತ್ತು. 2007ರ ಡಿಸೆಂಬರ್ 11ರಂದು ಈ ತೀರ್ಪು ನೀಡಿದ್ದ ಹೈಕೋರ್ಟ್, ಬಚ್ಚನ್ ಅವರು ತಾವಾಗಿ ಯಾವುದೇ ವಂಚನೆ ಮಾಡಿಲ್ಲ ಅಥವಾ ಕಂದಾಯ ದಾಖಲೆಗಳನ್ನು ತಿದ್ದಿಲ್ಲ ಎಂದು ಹೇಳಿತ್ತು. ಬಾರಾಬಂಕಿ ಜಿಲ್ಲೆಯ ದೌಲತ್ ಪುರದಲ್ಲಿ ತಮ್ಮ ಹೆಸರಿಗೆ ನಿಗದಿಯಾದ ಭೂಮಿಯ ಹಂಚಿಕೆಯನ್ನು ರದ್ದುಪಡಿಸಿ ಫೈಜಾಬಾದಿನ ಹೆಚ್ಚುವರಿ ಆಯುಕ್ತರು ಆದೇಶ ಹೊರಡಿಸಿದ್ದನ್ನು ಪ್ರಶ್ನಿಸಿ ಬಚ್ಚನ್ ಅವರು ಹೈಕೋರ್ಟಿನ ಮೊರೆ ಹೋಗಿದ್ದರು.

2008: ಬೆಂಗಳೂರು ನಗರದ ಆರ್. ವಿ. ಎಂಜಿನಿಯರಿಂಗ್ ಕಾಲೇಜಿನ `ಪ್ರಾಜೆಕ್ಟ್ ವ್ಯೋಮಾ' ತಂಡ ನಿರ್ಮಿಸಿದ ಮಾನವ ರಹಿತ ರಿಮೋಟ್ ಕಂಟ್ರೋಲ್ ಸರಕು ಸಾಗಣೆ ವಿಮಾನವನ್ನು ನಗರದಲ್ಲಿ ನಡೆದ ಸಮಾರಂಭದಲ್ಲಿ ಅನಾವರಣ ಗೊಳಿಸಲಾಯಿತು. ಕಾಲೇಜಿನ ಎಲೆಕ್ಟ್ರಿಕಲ್ ಮತ್ತು ಮೆಕ್ಯಾನಿಕಲ್ ವಿಭಾಗದ ಆರು ಮಂದಿ ವಿದ್ಯಾರ್ಥಿಗಳಾದ ಹರ್ಷವರ್ಧನ, ಧೀರಜ್ ವಿಶ್ವನಾಥ್, ಬಿ.ಎಲ್. ನವೀನ್, ಬೃಂದಾ ಮೆಹ್ತಾ, ಡೆಬೊಲಿನಾ ಸೇನ್, ಆನಂದ ಹೊಳಲಿ ಅವರು ತಾವು ಅವಿಷ್ಕರಿಸಿದ ವಿಮಾನವನ್ನು ಪ್ರದರ್ಶಿಸಿದರು.

2008: ಬೆಂಗಳೂರಿನ `ಪರಿಷ್ಕೃತ ಸಮಗ್ರ ಅಭಿವೃದ್ಧಿ ಯೋಜನೆ (ಸಿಡಿಪಿ)- 2015'ರ ರದ್ದತಿ ಕೋರಿ ಸಲ್ಲಿಸಲಾದ ಅರ್ಜಿಯನ್ನು ಹೈಕೋರ್ಟ್ ವಿಚಾರಣೆಗೆ ಅಂಗೀಕರಿಸಿತು. ಈ ಸಂಬಂಧ, ಸರ್ಕಾರ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ), ಪಾಲಿಕೆ, ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರ (ಬಿ ಎಂ ಆರ್ ಡಿ ಎ) ಸೇರಿದಂತೆ ಇತರ ಪ್ರತಿವಾದಿಗಳಿಗೆ ಮುಖ್ಯ ನ್ಯಾಯಮೂರ್ತಿ ಸಿರಿಯಾಕ್ ಜೋಸೆಫ್ ಹಾಗೂ ನ್ಯಾಯಮೂರ್ತಿ ರವಿ ಮಳೀಮಠ ಅವರನ್ನು ಒಳಗೊಂಡ ವಿಭಾಗೀಯ ಪೀಠವು ನೋಟಿಸ್ ಜಾರಿಗೆ ಆದೇಶಿಸಿತು. ಈ ಯೋಜನೆಯ ರದ್ದತಿ ಕೋರಿ ಬೆಂಗಳೂರುನಗರದ ಸಿಟಿಜನ್ಸ್ ಏ(ಆ)ಕ್ಷನ್ ಫೋರಂ, ಸದಾಶಿವನಗರ ನಾಗರಿಕರ ಕ್ಷೇಮಾಭಿವೃದ್ಧಿ ಸಂಘ ಸೇರಿದಂತೆ ಅನೇಕ ಮಂದಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಬಿ ಎಂ ಆರ್ ಡಿ ಎ ರೂಪಿಸಿದ್ದ ನಿಯಮಕ್ಕೆ ವ್ಯತಿರಿಕ್ತವಾಗಿ ಬಿಡಿಎ ಮನಸೋಇಚ್ಛೆ 2007ರ ಜೂನ್ 25ರಂದು ಈ ಯೋಜನೆಯನ್ನು ಜಾರಿಗೆ ತಂದಿದೆ ಎಂದು ಅರ್ಜಿದಾರರು ದೂರಿದ್ದರು. 1995ರಲ್ಲಿ ಬೆಂಗಳೂರು ನಗರದಲ್ಲಿ ಹಸಿರು ವಲಯವು ಶೇ 56ರಷ್ಟಿತ್ತು. ಆದರೆ ಈ ಯೋಜನೆಯಿಂದಾಗಿ ಹಸಿರು ವಲಯ ಶೇ 35ಕ್ಕೆ ಇಳಿದಿದೆ. ಅಷ್ಟೇ ಅಲ್ಲದೆ ಗಗನಚುಂಬಿ ಕಟ್ಟಡಗಳಿಗೆ ಅನುಮತಿ ನೀಡಲಾಗಿದೆ. ಇದರಿಂದಾಗಿ ನಗರದಲ್ಲಿ ಜನಸಾಂದ್ರತೆ ಹೆಚ್ಚಾಗುವ ಸಂಭವವಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿತ್ತು. ಈ ಮೊದಲು ವಾಣಿಜ್ಯ ಹಾಗೂ ವಸತಿ ಸಂಕೀರ್ಣಕ್ಕೆ ಭಿನ್ನವಾದ ಸ್ಥಳವನ್ನು ಗುರುತು ಮಾಡಲಾಗಿತ್ತು. ಆದರೆ ಈಗ ಎಲ್ಲವನ್ನೂ ಮಿಶ್ರ ಮಾಡಲಾಗಿದೆ. ಈ ರೀತಿ ಒಟ್ಟಿಗೆ ಎಲ್ಲ ಸಂಕೀರ್ಣಗಳಿಗೆ ಅನುಮತಿ ನೀಡಿದರೆ ಪರಿಸರದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂಬ ಬಗ್ಗೆ ಜಲಮಂಡಳಿಯ ತಜ್ಞರು ವರದಿ ನೀಡಿದ್ದಾರೆ. ಆದರೆ ಇದನ್ನು ಕೂಡ ಬಿಡಿಎ ಕಡೆಗಣಿಸಿದೆ ಎಂಬುದು ಅರ್ಜಿದಾರರ ದೂರು. ಹೀಗೆ ತನ್ನ ಕಾರ್ಯವ್ಯಾಪ್ತಿ ಮೀರಿ ಬಿಡಿಎ ಜಾರಿ ಮಾಡಿದ ಯೋಜನೆಯನ್ನು ರದ್ದುಪಡಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿತ್ತು.

2008: ಪ್ರಿಯಂವದಾ ಅವರ ಇಂಗಿತದಂತೆ 1999ರಲ್ಲಿ ಬರೆದಿದ್ದ ಉಯಿಲು ಆಕ್ಷೇಪಿಸುವ ಬಿರ್ಲಾ ಕುಟುಂಬದ ಹಕ್ಕು ನಿರಾಕರಿಸಿ, ಕೋಲ್ಕತ್ತಾ ಹೈಕೋರ್ಟ್ ನೀಡಿದ್ದ ಆದೇಶವನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿಯಿತು. ದಿವಂಗತ ಪ್ರಿಯಂವದಾ ಬಿರ್ಲಾ ಅವರು ಬಿಟ್ಟು ಹೋದ ರೂ 5000 ಕೋಟಿ ಸ್ಥಿರಾಸ್ತಿ ಮೇಲೆ ಒಡೆತನ ಸಾಧಿಸುವ ಬಿರ್ಲಾ ಕುಟುಂಬದ ಯತ್ನಕ್ಕೆ  ಇದರಿಂದ ಇನ್ನೊಂದು ಹಿನ್ನಡೆ ಉಂಟಾಯಿತು. ಪ್ರಿಯಂವದಾ ಅವರ ಇಂಗಿತದಂತೆ 1999ರಲ್ಲಿ ಬರೆದಿದ್ದ ಉಯಿಲು ಆಕ್ಷೇಪಿಸಿದ ಬಿರ್ಲಾ ಕುಟುಂಬದ ಹಕ್ಕು ನಿರಾಕರಿಸಿ, ಕೋಲ್ಕತ್ತಾ ಹೈಕೋರ್ಟ್ ನೀಡಿದ್ದ ಆದೇಶವನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿಯಿತು. ಈ ಮೂಲಕ ಬಿರ್ಲಾ ಕುಟುಂಬದ ಮೂರು ಅಹವಾಲು ತಳ್ಳಿ ಹಾಕಿತು. ಎಂ. ಪಿ. ಬಿರ್ಲಾ ಮತ್ತು ಅವರ ಪತ್ನಿ ಪ್ರಿಯಂವದಾ ಬಿರ್ಲಾ ತಮ್ಮ ಸಂಪತ್ತನ್ನು ಧರ್ಮಾರ್ಥ ಉದ್ದೇಶಕ್ಕೆ ಬಿಟ್ಟುಕೊಟ್ಟಿದ್ದರು. ಪತಿಯ ಮರಣಾನಂತರ,  ಪ್ರಿಯಂವದಾ ಅವರು 1999ರಲ್ಲಿ ತಮ್ಮ ರೂ 5000 ಕೋಟಿಗಳ ಸ್ಥಿರಾಸ್ತಿಯನ್ನು ತಮ್ಮ ಚಾರ್ಟರ್ಡ್ ಅಕೌಂಟಂಟ್ ಆರ್. ಎಸ್. ಲೋಧಾ ಅವರಿಗೆ ವರ್ಗಾಯಿಸಿದ್ದರು. ಹೈಕೋರ್ಟ್ ತೀರ್ಪು ಪ್ರಶ್ನಿಸಿದ್ದ ಮೇಲ್ಮನವಿಗಳನ್ನು ತಿರಸ್ಕರಿಸಿದ ನ್ಯಾಯಮೂರ್ತಿ ಎಸ್. ಬಿ. ಸಿನ್ಹಾ ನೇತೃತ್ವದ ಪೀಠವು ಈ ತೀರ್ಪು ನೀಡಿತು. ಕೆ. ಕೆ. ಬಿರ್ಲಾ, ಬಿ.ಕೆ. ಬಿರ್ಲಾ ಮತ್ತು  ಯಶೋವರ್ಧನ್ ಬಿರ್ಲಾ ಕುಟುಂಬದ ಸದಸ್ಯರಿಗೆ ತಲಾ ರೂ 2.5 ಲಕ್ಷದಂತೆ ರೂ 10 ಲಕ್ಷ ದಂಡ ವಿಧಿಸಲಾಯಿತು.

2008: ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಚೆನ್ನೈಯಲ್ಲಿ ನಡೆದ ಮೊದಲ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ ವೀರೇಂದ್ರ ಸೆಹ್ವಾಗ್ ಅವರು ಭಾರತದ ನಂಬರ್ ಒನ್ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈದಿನ ಬಿಡುಗಡೆಗೊಂಡ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ರಾಂಕಿಂಗ್ ಪಟ್ಟಿಯಲ್ಲಿ ದೆಹಲಿಯ `ಡ್ಯಾಶಿಂಗ್' ಬ್ಯಾಟ್ಸ್ಮನ್ 12ನೇ ಸ್ಥಾನ ಪಡೆದರು. ಚೆನ್ನೈ ಪಂದ್ಯದಲ್ಲಿ 278 ಎಸೆತಗಳಲ್ಲಿ ತ್ರಿಶತಕ ಗಳಿಸಿ ವಿಶ್ವದಾಖಲೆ ನಿರ್ಮಿಸಿದ `ವೀರೂ' ಅವರ ರೇಟಿಂಗ್ ಪಾಯಿಂಟ್ ಶೇ 17 ರಷ್ಟು ಏರಿಕೆ ಕಂಡಿತು. ಅವರು ಈ ಹಿಂದೆ 25ನೇ ಸ್ಥಾನದಲ್ಲಿದ್ದರು.

2007: ಕರ್ನಾಟಕ ಸರ್ಕಾರದ ಕಾರ್ಯದರ್ಶಿ ಹಿರಿಯ ಐಎಎಸ್ ಅಧಿಕಾರಿ ರಾಜೀವ್ ಚಾವ್ಲಾ ಮತ್ತು ಕೇಂದ್ರ ಸಚಿವಾಲಯದ ಕಾರ್ಯದರ್ಶಿ ಪಿ.ಎಸ್. ಪಾಂಡೆ ಅವರನ್ನು ಸಾರ್ವಜನಿಕ ಆಡಳಿತ ಸೇವೆಗೆ ನೀಡಲಾಗುವ 2005-06 ಸಾಲಿನ ಪ್ರಧಾನ ಮಂತ್ರಿ ಅವರ  ಶ್ರೇಷ್ಠತೆಯ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು.

2007: ಸುಗಮ ಸಂಗೀತ ಮತ್ತು ನೃತ್ಯ ಅಕಾಡೆಮಿ ಮಾಜಿ ಅಧ್ಯಕ್ಷೆ ಎಚ್. ಆರ್. ಲೀಲಾವತಿ ಅವರ ಪತಿ, ಸಂಗೀತ ಕಲಾವಿದ ಎಸ್. ಜಿ. ರಘುರಾಂ (76) ಮೈಸೂರಿನಲ್ಲಿ ನಿಧನರಾದರು. 1983ರಲ್ಲಿ ಅಮೆರಿಕದಲ್ಲಿ ನಡೆದ ಪ್ರಥಮ ವಿಶ್ವಕನ್ನಡ ಸಮ್ಮೇಳನದಲ್ಲಿ ಭಾವಗೀತೆ ಹಾಡಿದ ಮೊದಲ ಕನ್ನಡಿಗರು ಎಂಬ ಕೀರ್ತಿಗೆ ರಘುರಾಂ ಭಾಜನರಾಗಿದ್ದರು. 1007ರಲ್ಲಿಸಂಗೀತ ಅಕಾಡೆಮಿಯಿಂದ ಕರ್ನಾಟಕ ಕಲಾಶ್ರೀ ಪ್ರಶಸ್ತಿ ಲಭಿಸಿತ್ತು.

2006: ಬೆಂಗಳೂರು ಗಾಂಧಿ ನಗರದ ಲಕ್ಷ್ಮೀಪುರದ ಕೊಳೆಗೇರಿಯಲ್ಲಿ 80 ವರ್ಷದ ವೃದ್ಧೆ, 6 ವರ್ಷದ ಬಾಲಕಿ ಮತ್ತು 10 ವರ್ಷದ ಬಾಲಕ ಸೇರಿದಂತೆ 16 ಮಂದಿಗೆ ಹುಚ್ಚುನಾಯಿಯೊಂದು ಕಚ್ಚಿತು.

2006: ವೈಯಕ್ತಿಕ ವೈಷಮ್ಯದಿಂದ ಒಂದೇ ಕುಟುಂಬದ 10 ಮಂದಿಯನ್ನು ಸಜೀವ ದಹಿಸಿದ ಪ್ರಕರಣದಲ್ಲಿ ಖುಲಾಸೆಗೊಂಡಿದ್ದ ವಿಜಾಪುರ ಜಿಲ್ಲೆ ಇಂಡಿ ತಾಲ್ಲೂಕಿನ ಬಾರದೋಳ ಗ್ರಾಮದ 10 ಮಹಿಳೆಯರು ಸೇರಿ 25 ಮಂದಿಗೆ ಕರ್ನಾಟಕ ಹೈಕೋರ್ಟ್ ಜೀವಾವಧಿ ಶಿಕ್ಷೆ ಮತ್ತು ತಲಾ 10 ಸಾವಿರ ರೂಪಾಯಿಗಳ ದಂಡ ವಿಧಿಸಿತು. ವಿಜಾಪುರ ಸೆಷನ್ಸ್ ನ್ಯಾಯಾಲಯದ ಆದೇಶ ವಿರುದ್ಧ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿಗಳಾದ ಚಿದಾನಂದ ಉಲ್ಲಾಳ ಮತ್ತು, ಜಗನ್ನಾಥ ಅವರ ವಿಭಾಗೀಯ ಪೀಠ ಪುರಸ್ಕರಿಸಿತು.

2006: ಮೆಟ್ರೊ ರೈಲು ಮತ್ತು ನೀರು ಪೂರೈಕೆ  ಹಾಗೂ ಒಳಚರಂಡಿ ನಿರ್ಮಾಣದ ಬೆಂಗಳೂರಿನ ಎರಡು ಯೋಜನೆಗಳಿಗೆ ಒಟ್ಟು 2777 ಕೋಟಿ ರೂಪಾಯಿ ಸಾಲ ನೀಡಲು ಜಪಾನ್ ಸರ್ಕಾರ ಒಪ್ಪಿಗೆ ನೀಡಿತು. ಯೋಜನೆ ಅನುಷ್ಠಾನಕ್ಕೆ ಇನ್ನೊಂದು ಅಡ್ಡಿ ನಿವಾರಣೆ ಆಯಿತು.

2001: ಇಂದೋರಿನಲ್ಲಿ ಆಸ್ಟ್ರೇಲಿಯ ವಿರುದ್ಧ ನಡೆದ ಮೂರನೆಯ ಏಕದಿನ ಕ್ರಿಕೆಟ್ ಪಂದ್ಯದಲ್ಲಿ 34ನೇ ರನ್ ಗಳಿಕೆಯೊಂದಿಗೆ ಸಚಿನ್ ತೆಂಡೂಲ್ಕರ್ ಅವರು ಒಂದು ದಿನದ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯದಲ್ಲಿ 10,000 ರನ್ನುಗಳ ಸಾಧನೆ ಮಾಡಿದ ಪ್ರಥಮ ಕ್ರಿಕೆಟ್ ಆಟಗಾರ ಎನಿಸಿದರು. ಇದು ಅವರ 266ನೇ ಪಂದ್ಯ.

2001: ನಾಲ್ಕು ಸಲಿಂಗ ಜೋಡಿಗಳು (ಮೂರು ಪುರುಷ ಹಾಗೂ ಒಂದು ಮಹಿಳಾ) ಆಮ್ಸ್ಟರ್ಡ್ಯಾಮ್ನ ಸಿಟಿ ಹಾಲ್ನಲ್ಲಿ ಮದುವೆ ಉಂಗುರ ವಿನಿಮಯ ಮಾಡಿಕೊಂಡವು.  ರಾಷ್ಟವೊಂದರಿಂದ ಮಾನ್ಯತೆ ಪಡೆದ ಮೊತ್ತ ಮೊದಲನೆಯ ಸಲಿಂಗ ವಿವಾಹ ಸಮಾರಂಭ ಇದಾಯಿತು.

1981: ಭಾರತೀಯ ಸಂಜಾತ ಅಮೆರಿಕನ್ ವಿಜ್ಞಾನಿ ಆನಂದ ಚಕ್ರವರ್ತಿ ಅವರು ನೂತನ ಏಕಕೋಶ ಜೀವಿ ಸೃಷ್ಟಿಗಾಗಿ ಪೇಟೆಂಟ್ ಪಡೆದರು. ಒಂದು ಜೀವಂತ ಕಣಕ್ಕೆ ಸಿಕ್ಕಿದ ಮೊದಲ ಪೇಟೆಂಟ್ ಇದು. ಈ ಬ್ಯಾಕ್ಟೀರಿಯಾವು ಕಚ್ಚಾ ತೈಲವನ್ನು ವಿಭಜಿಸುವ ಸಾಮರ್ಥ್ಯ ಹೊಂದಿದೆ.

1955: ಕಲಾವಿದ ರಂಗರಾಜು ಸೆ.ನಾ. ಜನನ.

1954: ಕರ್ನಾಟಕ ಸಂಗೀತ ಕಲಾವಿದೆ ಕದಳಿ ಶ್ರೀ ಪ್ರಶಸ್ತಿ ಪುರಸ್ಕೃತೆ ಡಾ. ಸರ್ವ ಮಂಗಳಾ ಶಂಕರ್ ಅವರು ಎಸ್. ಸಿ. ರಾಜಶೇಖರ್- ಪಾರ್ವತಮ್ಮ ದಂಪತಿಯ ಮಗಳಾಗಿ ಶ್ರೀರಂಗಪಟ್ಟಣದಲ್ಲಿ ಜನಿಸಿದರು.

1942: ಕಲಾವಿದ ಅನಂತ ತೇರದಾಳ ಜನನ.

1901: ಆಸ್ಟ್ರೊ-ಹಂಗೆರಿ ಸಾಮ್ರಾಜ್ಯದ ಕಾನ್ಸುಲ್ ಜನರಲ್ ಎಮಿಲ್ ಜೆಲಿನಿಕ್ಗಾಗಿ ಗೋಟ್ಲೀಬ್ ಡೈಮ್ಲರ್ ಹೊಚ್ಚ ಹೊಸ ಮಾದರಿಯ ಕಾರನ್ನು ನಿರ್ಮಿಸಿದ. ಜೆಲಿನಿಕ್ ಅದಕ್ಕೆ ತನ್ನ ಪುತ್ರಿ `ಮರ್ಸಿಡಿಸ್' ಹೆಸರನ್ನೇ ಇರಿಸಿದ. ಮರ್ಸಿಡಿಸ್ ಕಾರುಗಳ ಆರಂಭ ಆದದ್ದು ಹೀಗೆ.

1889: ಪ್ಯಾರಿಸ್ಸಿನಲ್ಲಿ ಐಫೆಲ್ ಗೋಪುರವನ್ನು ಉದ್ಘಾಟಿಸಲಾಯಿತು. ಗೋಪುರದ ವಿನ್ಯಾಸಕಾರ ಗಸ್ಟಾವ್ ಐಫೆಲ್ ಗೋಪುರದ ಶಿಖರದಲ್ಲಿ ಫ್ರೆಂಚ್ ಧ್ವಜವನ್ನು ಅರಳಿಸಿದ. ಈ ಗೋಪುರ ನಿರ್ಮಾಣಕ್ಕೆ 2 ವರ್ಷ, 2 ತಿಂಗಳು, 2 ದಿನಗಳು ಬೇಕಾದವು.      

1878: ಜಾನ್ ಆರ್ಥರ್ `ಜಾಕ್' ಜಾನ್ಸನ್ ಜನ್ಮದಿನ. ಜಾಗತಿಕ ಹೆವಿ ವೈಟ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ನ್ನು ಪಡೆದುಕೊಂಡ ಪ್ರಪ್ರಥಮ ಕರಿಯ ವ್ಯಕ್ತಿ ಈತ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement