Friday, April 3, 2009

ಇಂದಿನ ಇತಿಹಾಸ History Today ಮಾರ್ಚ್ 30

ಇಂದಿನ ಇತಿಹಾಸ

ಮಾರ್ಚ್ 30

ಖ್ಯಾತ  ಮಲಯಾಳಿ ಕವಿ ಕದಮ್ಮನಿಟ್ಟ ರಾಮಕೃಷ್ಣನ್ (73) ಅವರು ತಿರುವನಂತಪುರದ ಪಟ್ಟಣಂತಿಟ್ಟದ ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನರಾದರು. ಕೇರಳದ ಮೂಲೆ ಮೂಲೆಗೆ ಸುತ್ತಾಡಿ ಜಾನಪದ ಸೊಗಡಿನೊಂದಿಗೆ ಕವನ  ರಚಿಸಿ ಖ್ಯಾತರಾದ ಅವರ ಹಲವು ಕವನ ಜನಸಾಮಾನ್ಯರ ಬಾಯಲ್ಲೂ ಸದಾ  ನಲಿದಾಡುತ್ತಿವೆ.

2008: ಅನಾರೋಗ್ಯದಿಂದ ಢಾಕಾದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಬಾಂಗ್ಲಾ ದೇಶದ ಬಂಧಿತ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರನ್ನು ಬಿಗಿ ಭದ್ರತೆ ನಡುವೆ ಪಾರ್ಲಿಮೆಂಟ್ ಭವನದ ತಾತ್ಕಾಲಿಕ ಕಾರಾಗೃಹಕ್ಕೆ ವಾಪಸ್ ಕಳುಹಿಸಲಾಯಿತು. ಇದಕ್ಕೂ ಮುನ್ನ ಅವರನ್ನು ಸುಲಿಗೆ ಪ್ರಕರಣದ ವಿಚಾರಣೆಗೆ ಸಂಬಂಧಿಸಿದಂತೆ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು.
2008: ಚೀನಾದ ಹುನಾನ್ ಪ್ರಾಂತ್ಯದಲ್ಲಿ ವ್ಯಾನೊಂದಕ್ಕೆ ಡಿಕ್ಕಿ ಹೊಡೆದ ಬಸ್ಸು ಬಳಿಕ 15 ಮೀಟರ್ ಆಳದ ನದಿಗೆ ಉರುಳಿ ಬಿದ್ದ ಪರಿಣಾಮವಾಗಿ 13 ಮಂದಿ ಪ್ರಯಾಣಿಕರು ಸಾವನ್ನಪ್ಪಿ, ಇತರ 10 ಮಂದಿ ಗಾಯಗೊಂಡರು.

2008: ಹಾವು ಕಚ್ಚಿ ಮನುಷ್ಯ ಸಾಯುವುದು ಸಹಜ. ಆದರೆ ಪಶ್ಚಿಮ ಬಂಗಾಳದ ಬರ್ದ್ವಾನಿನಲ್ಲಿ ವಿಷಪೂರಿತ ನಾಗರ ಹಾವನ್ನು ವ್ಯಕ್ತಿಯೊಬ್ಬ ಕಚ್ಚಿ ಎರಡು ಭಾಗ ಮಾಡಿ ಸಾಯಿಸಿದ ಘಟನೆ ನಡೆಯಿತು. ಕ್ಯಾಂಟೀನಿನಲ್ಲಿ ಕೆಲಸ ಮಾಡುತ್ತಿದ್ದ ಸುಭಾಶ್ ಬ್ಯಾನರ್ಜಿ ಎಕ್ರಾ ಗ್ರಾಮದ ತಮ್ಮ ಮನೆಗೆ ಕುಡಿದು ಹೋಗುತ್ತಿದ್ದಾಗ ಹಾವೊಂದರ ಬಗ್ಗೆ ಗ್ರಾಮಸ್ಥರು ಮಾಹಿತಿ ನೀಡಿದರು. ಬ್ಯಾನರ್ಜಿ ಹಾವನ್ನು ಕಂಡು ಅದನ್ನು ಕೋಲಿನಿಂದ ಹೊಡೆದ. ಅದು ಇನ್ನೂ ಬದುಕಿರುವುದನ್ನು ನೋಡಿ ಬಾಯಿಯಿಂದ ಕಚ್ಚಿ ಎರಡು ತುಂಡು ಮಾಡಿದ್ದರಿಂದ ಹಾವು ಸತ್ತು ಹೋಯಿತು. ಘಟನೆಯ ನಂತರ ಜ್ಞಾನ ತಪ್ಪಿ ಬಿದ್ದ ಬ್ಯಾನರ್ಜಿಯನ್ನು ಗ್ರಾಮಸ್ಥರು ಆಸ್ಪತ್ರೆಗೆ ದಾಖಲಿಸಿದರು. ಆತನು ನಂತರ ಚೇತರಿಸಿಕೊಂಡ.

2008: ಲೋಕಸಭೆಯ ವಿರೋಧ ಪಕ್ಷದ ನಾಯಕ ಎಲ್. ಕೆ. ಆಡ್ವಾಣಿ `ಆತ್ಮಚರಿತ್ರೆ' ಬಿಡುಗಡೆಯಾಗಿ ಸುದ್ದಿಯಾದ ಬೆನ್ನಲ್ಲೇ ಎನ್ ಡಿ ಎ ಸಂಚಾಲಕ, ಜಾರ್ಜ್ ಫರ್ನಾಂಡಿಸ್ ಆತ್ಮಚರಿತ್ರೆ ಬರೆಯಲು ನಿರ್ಧರಿಸಿರುವುದನ್ನು ಬಹಿರಂಗ ಪಡಿಸಿದರು. `ಈ ಆತ್ಮಚರಿತ್ರೆ ಆರು ವರ್ಷಗಳ ವಾಜಪೇಯಿ ನಾಯಕತ್ವದ ಎನ್ ಡಿ ಎ ಸರ್ಕಾರದಲ್ಲಿ ತಾವು ಸಲ್ಲಿಸಿದ ಸೇವೆಯನ್ನು ಪ್ರಾಮಾಣಿಕವಾಗಿ ತೆರೆದಿಡುತ್ತದೆ' ಎಂದು ಜಾರ್ಜ್ ಹೇಳಿದರು. `ಈ ಪುಸ್ತಕದಲ್ಲಿ ಹಲವು ವ್ಯಕ್ತಿಗಳ ಬಣ್ಣ ಬಯಲಿಗೆಳೆಯುವೆ' ಎಂದು ಅವರು ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದರು.

2008: ಬೆಂಗಳೂರಿನ ಕನ್ನಡ ಭವನದ ನಯನ ಸಭಾಂಗಣದಲ್ಲಿ ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿ ಏರ್ಪಡಿಸಿದ್ದ ಸಮಾರಂಭದಲ್ಲಿ ಸಾಹಿತಿಗಳಾದ ಪಂಡಿತ್ ಸುಧಾಕರ ಚತುರ್ವೇದಿ, ಡಾ. ಬಸವರಾಜ ಪುರಾಣಿಕ, ಗುರುಮೂರ್ತಿ ಪೆಂಡಕೂರು, ಡಾ. ಬಿ.ನಂ.ಚಂದ್ರಯ್ಯ ಮತ್ತು ಡಾ. ಸರಜೂ ಕಾಟ್ಕರ್ ಅವರಿಗೆ 2007ನೇ ಸಾಲಿನ ಗೌರವ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕೆ.ಎಂ.ಸೀತಾರಾಮಯ್ಯ, ಈಶ್ವರಂದ್ರ, ಸ್ನೇಹಲತಾ ರೋಹಿಡೇಕರ್, ಹಸನ್ ನಯೀಂ ಸುರಕೋಡ ಮತ್ತು ಕೆ.ವೆಂಕಟರಾಜು ಅವರಿಗೆ 2006ನೇ ಸಾಲಿನ ಪುಸ್ತಕ ಬಹುಮಾನ ನೀಡಲಾಯಿತು.

2008: ಬೆಂಗಳೂರು ನಗರದ ಪ್ರಮುಖ ಬಡಾವಣೆಗಳಿಂದ ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಸಂಪರ್ಕ ಕಲ್ಪಿಸಲು ಬಿಎಂಟಿಸಿ ಆರಂಭಿಸಿದ `ವಾಯು ವಜ್ರ' ಬಸ್ ಸೇವೆಗೆ ಚಾಲನೆ ದೊರೆಯಿತು. ನಗರದ ಒಳಭಾಗದಲ್ಲಿ ದಟ್ಟಣೆ ಅವಧಿಯಲ್ಲಿ ಸಂಚರಿಸಲಿರುವ ವಿಶೇಷ `ಸುವರ್ಣ ಪೀಕ್ ಅವರ್' ಬಸ್ ಸೇವೆಯೂ ಆರಂಭವಾಯಿತು.
ವಿಧಾನಸೌಧದ ಮುಂಭಾಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲರ ಸಲಹೆಗಾರ ಪಿ.ಕೆ.ಎಚ್. ತರಕನ್ ಹಸಿರು ನಿಶಾನೆ ತೋರುವ ಮೂಲಕ `ವಾಯು ವಜ್ರ' ಸೇವೆಯನ್ನು ಉದ್ಘಾಟಿಸಿದರು. ನಗರ ಪೊಲೀಸ್ ಕಮಿಷನರ್ ಎನ್. ಅಚ್ಯುತರಾವ್ `ಪೀಕ್ ಅವರ್ ಸೇವೆ'ಗೆ ಚಾಲನೆ ನೀಡಿದರು.

2008: ಖ್ಯಾತ  ಮಲಯಾಳಿ ಕವಿ ಕದಮ್ಮನಿಟ್ಟ ರಾಮಕೃಷ್ಣನ್ (73) ಅವರು ತಿರುವನಂತಪುರದ ಪಟ್ಟಣಂತಿಟ್ಟದ ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನರಾದರು. ಕೇರಳದ ಮೂಲೆ ಮೂಲೆಗೆ ಸುತ್ತಾಡಿ ಜಾನಪದ ಸೊಗಡಿನೊಂದಿಗೆ ಕವನ  ರಚಿಸಿ ಖ್ಯಾತರಾದ ಅವರ ಹಲವು ಕವನ ಜನಸಾಮಾನ್ಯರ ಬಾಯಲ್ಲೂ ಸದಾ  ನಲಿದಾಡುತ್ತಿವೆ. ಸಿಪಿಎಂ ಪಕ್ಷದ ವತಿಯಿಂದ ಅವರು 1996ರಲ್ಲಿ ಅರನ್ ಮುಲ ವಿಧಾನಸಭಾ ಕ್ಷೇತ್ರದಿಂದ ಆರಿಸಿ ಬಂದಿದ್ದರು.

2008: 2007ರ ಸಾಲಿನ ಯಶಸ್ವಿ ಬಾಲಿವುಡ್ ಚಿತ್ರ `ಚಕ್ ದೇ ಇಂಡಿಯಾ', ಮುಂಬೈಯಲ್ಲಿ ನಡೆದ ವರ್ಣರಂಜಿತ ಕಾರ್ಯಕ್ರಮದಲ್ಲಿ ಪ್ರೊಡ್ಯೂಸರ್ಸ್ ಗಿಲ್ಡಿನ ಸಿಂಹಪಾಲು ಪ್ರಶಸ್ತಿಗಳನ್ನು ಬಾಚಿಕೊಂಡಿತು. `ಚಕ್ ದೇ ಇಂಡಿಯಾ...' ಉತ್ತಮ ಚಿತ್ರ ಪ್ರಶಸ್ತಿ ಜೊತೆಗೆ ಉತ್ತಮ ನಾಯಕ ನಟ ಪ್ರಶಸ್ತಿ (ಶಾರುಖ್ ಖಾನ್), ಉತ್ತಮ ನಿರ್ದೇಶಕ  ಪ್ರಶಸ್ತಿ (ಶಮಿತ್ ಅಮಿನ್) ಮತ್ತು ಉತ್ತಮ ಕಥೆ ಮತ್ತು ಚಿತ್ರಕಥೆಗಾಗಿ ಜೈದೀಪ್ ಸಾಹ್ನಿ ಪ್ರಶಸ್ತಿ ಪಡೆದುಕೊಂಡಿತು. ಉತ್ತಮ ನಾಯಕಿ ನಟಿ ಪ್ರಶಸ್ತಿಯನ್ನು `ಜಬ್ ವಿ ಮೆಟ್' ಚಿತ್ರಕ್ಕಾಗಿ ಕರೀನಾ ಕಪೂರ್ ಪಡೆದರು. ಇದೇ ಚಿತ್ರದ ಉತ್ತಮ ಸಂಗೀತಕ್ಕಾಗಿ ಪ್ರೀತಮ್ ಮತ್ತು ಉತ್ತಮ ಸಂಭಾಷಣೆಗಾಗಿ ಅಲಿ ಪ್ರಶಸ್ತಿ ಸ್ವೀಕರಿಸಿದರು. `ಲೈಫ್ ಇನ್ ಮೆಟ್ರೋ' ಚಿತ್ರದಲ್ಲಿನ ಅಭಿನಯಕ್ಕಾಗಿ ಕೊಂಕಣ ಸೇನ್ ಮತ್ತು ಇರ್ಫಾನ್ ಖಾನ್ ಕ್ರಮವಾಗಿ ಉತ್ತಮ ಪೋಷಕ ನಟಿ ಮತ್ತು ನಟ ಪ್ರಶಸ್ತಿ ಪಡೆದರು.

2007: ಲೆಗ್ ಸ್ಪಿನ್ ಬ್ರಹ್ಮಾಸ್ತ್ರದಿಂದ ದಿಗ್ಗಜರನ್ನೇ ಗಿರಕಿ ಹೊಡೆಸಿದ ಮೋಡಿಗಾರ ಕ್ರಿಕೆಟಿಗ ಅನಿಲ್ ಕುಂಬ್ಳೆ (ಜನನ: 17 ಅಕ್ಟೋಬರ್ 1970, ಬೆಂಗಳೂರು) ಅವರು ಏಕದಿನ ಪಂದ್ಯಗಳಿಂದ ನಿವೃತ್ತಿ ಘೋಷಿಸಿದರು. 271 ಪಂದ್ಯಗಳಲ್ಲಿ 337 ವಿಕೆಟ್ ಉರುಳಿಸಿದ ಕುಂಬ್ಳೆ ಕೋಲ್ಕತ್ತಾದಲ್ಲಿ ವಿಂಡೀಸ್ ವಿರುದ್ಧದ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ (6/12) ನೀಡಿದ್ದರು. 1990ರಲ್ಲಿ ಶಾರ್ಜಾದಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಏಕದಿನ ಪಂದ್ಯಗಳಿಗೆ ಪದಾರ್ಪಣೆೆ ಮಾಡಿದ್ದರು. 2007ರಲ್ಲಿ ಬರ್ಮುಡಾದ ಟ್ರೆನಿಡಾಡಿನಲ್ಲಿ ನಡೆದ ವಿಶ್ವಕಪ್ ಪಂದ್ಯ ಅವರ ಕೊನೆಯ ಪಂದ್ಯವಾಯಿತು.

2007: ಭಾರತೀಯ ಮೂಲದ ಅಮೆರಿಕನ್ ಗಗನಯಾನಿ ಸುನೀತಾ ವಿಲಿಯಮ್ಸ್ ಅವರು ಖ್ಯಾತ ಬೋಸ್ಟನ್ ಮ್ಯಾರಾಥಾನ್ ಸ್ಪರ್ಧೆಯಲ್ಲಿ ಬಾಹ್ಯಾಕಾಶದಿಂದಲೇ ಪಾಲ್ಗೊಳ್ಳಲು ಪ್ರವೇಶ ಪಡೆದರು. 338 ಕಿ.ಮೀ. ಎತ್ತರದಲ್ಲಿ ಇರುವ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲೇ ಮ್ಯಾರಥಾನ್ ಓಟದುದ್ದಕ್ಕೂ ಪಾಲ್ಗೊಳ್ಳಲು ನಿರ್ಧರಿಸಿದ ಅವರು ಈ ರೀತಿ ಬಾನಿನಿಂದ ಸ್ಪರ್ಧಿಸಿದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಭಾಜನರಾಗುವರು.

2007: ಹಿರಿಯ ನಾಟ್ಯ ಕಲಾವಿದೆ ನರ್ಮದಾ (65) ಅವರು ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನರಾದರು. ಖ್ಯಾತ ನೃತ್ಯ ಪಟುಗಳಾದ ನಿರುಪಮಾ ರಾಜೇಂದ್ರ, ಮಂಜು ಭಾರ್ಗವಿ, ಲಕ್ಷ್ಮೀ ಗೋಪಾಲ ಸ್ವಾಮಿ, ಅನುರಾಧಾ ವಿಕ್ರಾಂತ್ ಮತ್ತಿತರ ಕಲಾವಿದರಿಗೆ ನರ್ಮದಾ ಗುರುವಾಗಿದ್ದರು. 25 ವರ್ಷಗಳ ಕಾಲ ನಾಟ್ಯಕ್ಷೇತ್ರಕ್ಕೆ ಸೇವೆ ಸಲ್ಲಿಸಿದ್ದ ಅವರಿಗೆ ಸಂಗೀತ ನಾಟಕ ಅಕಾಡೆಮಿ, ಕರ್ನಾಟಕ ಸರ್ಕಾರದ ಶಾಂತಲಾ, ರಾಜ್ಯೋತ್ಸವ ಸೇರಿದಂತೆ ಹಲವಾರು ಪ್ರಶಸ್ತಿಗಳು ಬಂದಿದ್ದವು. 1978ರಲ್ಲಿ ಅವರು ಶಕುಂತಲಾ ನೃತ್ಯಾಲಯ ಕಲಾಶಾಲೆ ಆರಂಭಿಸಿದ್ದರು.

2007: ಹೆಸರಾಂತ ಬಂಗಾಳಿ ಲೇಖಕಿ ಖ್ಯಾತ ಕಾದಂಬರಿಗಾರ್ತಿ ಮಹಾಶ್ವೇತಾದೇವಿ ಅವರು ಸಾರ್ಕ್ ಸಾಹಿತ್ಯ ಪ್ರಶಸ್ತಿಗೆ ಆಯ್ಕೆಯಾದರು.

2007: ಬಂಗಾಳಕೊಲ್ಲಿಯ ಪಾರಾದೀಪ್ ಬಂದರಿನ ಸಮೀಪ ಲಂಗರು ಹಾಕಿದ್ದ ನೌಕಾದಳದ ಹಡಗಿನಿಂದ 150 ಕಿ.ಮೀ. ದೂರಕ್ಕೆ ಸಾಗುವ ಸಾಮರ್ಥ್ಯವುಳ್ಳ, ಹಡಗಿನಿಂದ ಹಡಗಿಗೆ ಗುರಿ ಇಡಬಹುದಾದ ದೇಶೀ ತಂತ್ರಜ್ಞಾನ ಬಳಸಿ ನಿರ್ಮಿಸಲಾದ `ಧನುಷ್' ಕ್ಷಿಪಣಿಯ ಪರೀಕ್ಷಾ ಪ್ರಯೋಗವನ್ನು ಭಾರತ ನಡೆಸಿತು. ವಿಮಾನದಿಂದ ವಿಮಾನಕ್ಕೆ ಗುರಿ ಇಡಬಹುದಾದ ಅಲ್ಪ ದೂರ ಹಾರಬಲ್ಲ `ಅಸ್ತ್ರ' ಕ್ಷಿಪಣಿಯ ಪರೀಕ್ಷಾ ಪ್ರಯೋಗವನ್ನು ಭಾರತ ಮಾರ್ಚ್ 29ರಂದು ಯಶಸ್ವಿಯಾಗಿ  ನಡೆಸಿತ್ತು. ಭೂ ಮೇಲ್ಮೈಯಿಂದ ಮೇಲ್ಮೈಗೆ ಗುರಿ ಇಡಲು ಸಾಧ್ಯವಿರುವ `ಪೃಥ್ವಿ' ಕ್ಷಿಪಣಿಯ ನೌಕಾದಳ ಆವೃತ್ತಿಯಾದ 8.56 ಮೀಟರ್  ಉದ್ದದ `ಧನುಷ್' ಕ್ಷಿಪಣಿಯನ್ನು  ನೌಕಾದಳದ ಹಡಗಿನಿಂದ ಮಧ್ಯಾಹ್ನ 2.30 ಗಂಟೆಗೆ ಹಾರಿಸಲಾಯಿತು.  ಈಗಾಗಲೇ ರಕ್ಷಣಾ ಪಡೆಗೆ ಸೇರ್ಪಡೆ ಮಾಡಲಾಗಿರುವ ಈ ಕ್ಷಿಪಣಿಯು, ಹಡಗಿನಿಂದ ಕ್ಷಿಪಣಿ ಉಡಾಯಿಸುವ ಸಾಮರ್ಥ್ಯ ಉಳ್ಳ ರಾಷ್ಟ್ರಗಳ ಸಾಲಿಗೆ ಭಾರತ ಸೇರುವಂತೆ ಮಾಡಿತು. ಧನುಷ್ ಕ್ಷಿಪಣಿಯು 750 ಕಿಲೋಗ್ರಾಂವರೆಗಿನ ತೂಕದ ಸಿಡಿತಲೆಯನ್ನು 150 ಕಿಮೀ. ದೂರ ಒಯ್ಯುವ ಸಾಮರ್ಥ್ಯ ಹೊಂದಿದೆ. ಆದರೆ ಸಿಡಿತಲೆ ಇನ್ನಷ್ಟು  ಹಗುರವಾಗಿದ್ದರೆ ಅದು 500 ಕಿ.ಮೀ. ದೂರ ಕೂಡಾ ಕ್ರಮಿಸಬಲ್ಲುದು. 

2007: ಸರಣಿ ಬಾಂಬ್ ಸ್ಫೋಟಿಸಿ ಇಬ್ಬರು ನ್ಯಾಯಾಧೀಶರ ಸಾವಿಗೆ ಕಾರಣವಾಗಿದ್ದ ಆರು ಮಂದಿ ಜಮಾತ್- ಉಲ್ ಮುಜಾಹಿದ್ದೀನ್ ಬಾಂಗ್ಲಾದೇಶ್ (ಜೆಬಿಎಂ) ಉಗ್ರರನ್ನು ಗಲ್ಲಿಗೆ ಏರಿಸಲಾಯಿತು.

2006: ಖ್ಯಾತ ಹಿಂದಿ ಸಾಹಿತಿ, ಹಿರಿಯ ಪತ್ರಕರ್ತ ಮನೋಹರ್ ಶ್ಯಾಮ್ ಜೋ (73) ಈದಿನ ನಿಧನರಾದರು. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕತರಾದ ಜೋ `ಹಿಂದೂಸ್ಥಾನ್' ಹಿಂದಿ ವಾರಪತ್ರಿಕೆಯ ಸಂಪಾದಕರಾಗಿದ್ದರು. 'ಹಮ್ ಲೋಗ್' ಸೇರಿದಂತೆ ಅನೇಕ ಪ್ರಸಿದ್ಧ ಧಾರಾವಾಹಿಗಳನ್ನು ಅವರು ಬರೆದಿದ್ದರು.

2006: ಪ್ರವಾಸಿ ಐಷಾರಾಮಿ ದೋಣಿ ಮಗುಚಿದ ಪರಿಣಾಮವಾಗಿ ಅದರಲ್ಲಿದ್ದ 137 ಜನರ ಪೈಕಿ 57 ಜನ ನೀರಿನಲ್ಲಿ ಮುಳುಗಿ ಮೃತರಾದ ಘಟನೆ ಬಹ್ರೇನಿನಲ್ಲಿ ಘಟಿಸಿತು. ಮೃತರಲ್ಲಿ ಬಹುತೇಕ ಮಂದಿ ಔತಣಕೂಟದಲ್ಲಿಪಾಲ್ಗೊಂಡವರಾಗಿದ್ದು, ಅವರಲ್ಲಿ ಭಾರತೀಯರ ಸಂಖ್ಯೆ 18.

2006: ಹೈಕೋರ್ಟ್ ಪೀಠ ಕಾಮಗಾರಿಗೆ ಏಪ್ರಿಲ್ 11ರಂದು ಭೂಮಿಪೂಜೆ ನೆರವೇರಿಸುವುದಾಗಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಧಾರವಾಡ ವಕೀಲರ ಸಂಘದ ಅಧ್ಯಕ್ಷ ಬಿ.ಡಿ. ಹಿರೇಮಠ ತಮ್ಮ ಅನಿರ್ದಿಷ್ಟ ಅವಧಿಯ ನಿರಶನ ಕೊನೆಗೊಳಿಸಿದರು.

2006: ಲಷ್ಕರ್ ಎ ತೊಯಿಬಾ ಉಗ್ರಗಾಮಿ ಸಂಘಟನೆಗೆ ಸೇರಿದ ಅಬ್ದುಲ್ ರಹಮಾನ್ ಎಂಬ ಉಗ್ರಗಾಮಿಯನ್ನು ಗುಲ್ಬರ್ಗ ಪೊಲೀಸರು ಬಂಧಿಸಿದರು.

1979: ಜೆ. ಆರ್. ಡಿ. ಟಾಟಾ ಅವರಿಗೆ ಅಮೆರಿಕದ ಫ್ಲಾರಿಡಾದಲ್ಲಿ ವಾಣಿಜ್ಯೋದ್ಯಮ ಸಂಸ್ಥೆಯು `ಟೋನಿ ಜಾನುಸ್' ಪ್ರಶಸ್ತಿಯನ್ನು ಪ್ರದಾನ ಮಾಡಿತು. ಟಾಟಾ ಅವರು ಈ ಪ್ರತಿಷ್ಠಿತ ಪ್ರಶಸ್ತಿ ಪಡೆದ 17ನೇ ವ್ಯಕ್ತಿಯಾಗಿದ್ದು, ಇದು ಅವರನ್ನು ಜಗತ್ತಿನ ಪ್ರಮುಖ ವಿಮಾನ ಹಾರಾಟಗಾರರ ಗುಂಪಿಗೆ ಸೇರಿಸಿತು. 

1966: ಕಲಾವಿದ ರಘು ಎನ್ ಜನನ.

1954: ಕಲಾವಿದ ರೇಖಾ ಸುರೇಶ್ ಜನನ.

1949: ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಜೈಪುರದಲ್ಲಿ `ಯೂನಿಯನ್ ಆಫ್ ಗ್ರೇಟರ್ ರಾಜಸ್ಥಾನ'ವನ್ನು ಉದ್ಘಾಟಿಸಿದರು.

1908: ಭಾರತೀಯ ಚಿತ್ರರಂಗದ ಮೊದಲ ಚಿತ್ರನಟಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತರಾದ ದೇವಿಕಾ ರಾಣಿ ರೋರಿಕ್ (1908-1994) ಜನನ. 1920ರಲ್ಲಿ ಲಂಡನ್ನಿಗೆ ತೆರಳಿದ ಇವರು ಅಲ್ಲಿವಾಸ್ತುಶಾಸ್ತ್ರ ಅಧ್ಯಯನ ಮಾಡಿದರು. ಅಲ್ಲಿದ್ದಾಗ ಹಿಮಾಂಶುರಾಯ್ ಅವರ ಮೊದಲ ಚಿತ್ರ (1925) ಲೈಟ್ ಆಫ್ ಏಷ್ಯಾ ಚಿತ್ರದ ಸೆಟ್ ತಯಾರಿಗೆ ನೆರವಾಗಲು ಒಪ್ಪಿದರು. ಅನಂತರ ರಾಯ್ ಅವರು ದ್ವಿಭಾಷಾ ಚಿತ್ರ ಕರ್ಮ (1933) ಚಿತ್ರ ನಿರ್ಮಿಸಿದರು. ಆಗ ಇವರಿಬ್ಬರೂ ಈ ಚಿತ್ರ ನಿರ್ಮಾಣಕ್ಕಾಗಿ ಭಾರತಕ್ಕೆ ಬಂದರು. ಇಬ್ಬರೂ ಸೇರಿ ಬಾಂಬೆ ಟಾಕೀಸ್ ಸ್ಟುಡಿಯೋ ಆರಂಭಿಸಿದರು. 1935ರಲ್ಲಿ ಹಿಂದಿ ಚಲನಚಿತ್ರ ಬಾಂಬೆ ಟಾಕೀಸ್ ಲಿಮಿಟೆಡ್ ಅಡಿಯಲ್ಲಿ ಚಿತ್ರೀಕರಣ ಆರಂಭವಾಯಿತು. ಮುಂದೆ ದೇವಿಕಾರಾಣಿ ಅವರು ಅಶೋಕಕುಮಾರ್ ಜೊತೆಗೆ ಯಶಸ್ವಿ ತಂಡ ಕಟ್ಟಿದರು. `ಅಚುತ್ ಕನ್ಯಾ' ಚಿತ್ರ ಅವರಿಗೆ ಅಪಾರ ಖ್ಯಾತಿ ತಂದುಕೊಟ್ಟಿತು. 1943ರವರೆಗೆ ನಟನೆ ಮುಂದುವರೆಸಿದರು. 1940ರಲ್ಲಿ ರಾಯ್ ನಿಧನರಾದರು. ದೇವಿಕಾ ರಾಣಿ ರಷ್ಯನ್ ಕಲಾವಿದ ರೋರಿಕ್ ಅವರನ್ನು ಮದುವೆಯಾಗಿ ಬೆಂಗಳೂರಿನಲ್ಲಿ ಇರುವ ತಾತಗುಣಿ ಎಸ್ಟೇಟಿನಲ್ಲಿ ವಾಸಿಸಿದರು 1970ರಲ್ಲಿ ಅವರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಲಭಿಸಿತು.

1892: ಖ್ಯಾತ ಪಿಟೀಲು ವಾದಕ ಎ.ಎಸ್. ಶಿವರುದ್ರಪ್ಪ ಅವರು ಆನೇಕಲ್ಲಿನಲ್ಲಿ ಈದಿನ ಜನಿಸಿದರು. ಹುಟ್ಟು ಕುರುಡರಾಗಿದ್ದ ಇವರು ವಿದ್ವಾನ್ ಮುನಿಶಂಕರಪ್ಪ ಅವರಲ್ಲಿ ಸಂಗೀತ ಅಭ್ಯಾಸ ಮಾಡಿ ನಂತರ ಮೈಸೂರಿನ ಕುರುಡ- ಮೂಗರ ಶಾಲೆ ಸೇರಿದರು. ನಾಲ್ಮಡಿ ಕೃಷ್ಣರಾಜ ಒಡೆಯರ್ ಅವರ ಗಮನಕ್ಕೆ ಬಂದ ಬಳಿಕ ವಿದ್ವಾಂಸ ಬಿಡಾರಂ ಕೃಷ್ಣಪ್ಪ ಅವರಿಂದ ಸಂಸ್ಕೃತ ಕಲಿಕೆಗೆ ಏರ್ಪಾಟು. ಒಡೆಯರ್ ಆಸ್ಥಾನದಲ್ಲಿ ಫಿಡ್ಲ್ ಬಾಯ್ ಎಂಬುದಾಗಿ ನೇಮಕ. ಮುಂದೆ ಹಾರ್ನ್ ವಯೋಲಿನ್ನಿನಲ್ಲೂ ಅಭ್ಯಾಸ.

1891: ಆರ್ಥರ್ ವಿಲಿಯಂ ಸಿಡ್ನಿ ಹ್ಯಾರಿಂಗ್ಟನ್ (1891-1970) ಹುಟ್ಟಿದ ದಿನ. ಅಮೆರಿಕನ್ ಎಂಜಿನಿಯರ್ ಹಾಗೂ ಉತ್ಪಾದಕನಾದ ಈತ ಹಲವಾರು ಸೇನಾ ವಾಹನಗಳನ್ನು ನಿರ್ಮಿಸಿದ. ಇವುಗಳಲ್ಲಿ ಒಂದು ವಾಹನ ದ್ವಿತೀಯ ಜಾಗತಿಕ ಸಮರ ಜೀಪ್ ಎಂದೇ ಖ್ಯಾತಿ ಪಡೆದಿದೆ.

1856: ಪ್ಯಾರಿಸ್ ಒಪ್ಪಂದಕ್ಕೆ ಸಹಿ ಹಾಕುವುದರೊಂದಿಗೆ ಕ್ರೀಮಿಯನ್ ಯುದ್ಧ ಕೊನೆಗೊಂಡಿತು.

1785: ಹೆನ್ರಿ ಹಾರ್ಡಿಂಗ್ (1785-1856) ಹುಟ್ಟಿದ ದಿನ. ಬ್ರಿಟಿಷ್ ಯೋಧ ಹಾಗೂ ಮುತ್ಸದ್ಧಿಯಾಗಿದ್ದ ಈತ 1844-48ರ ಅವಧಿಯಲ್ಲಿ ಭಾರತದ ಗವರ್ನರ್ ಜನರಲ್ ಹಾಗೂ ಕ್ರೀಮಿಯನ್ ಯುದ್ಧ ಕಾಲದಲ್ಲಿ ಬ್ರಿಟಿಷ್ ಸೇನೆಯ ಕಮಾಂಡರ್ ಇನ್ ಚೀಫ್ ಆಗಿದ್ದ.

1699: ಗುರುಗೋಬಿಂದ್ ಸಿಂಗ್ ಪಂಜಾಬಿನ ಆನಂದಪುರ ಸಮೀಪದ ಕೇಶ್ ಗಢ ಸಾಹಿಬ್ ನಲ್ಲಿ `ಖಾಲ್ಸಾ ಪಂಥ' ಹುಟ್ಟು ಹಾಕಿದರು. ತನ್ನ ಆಯ್ದ ಅನುಯಾಯಿಗಳು ಕೇಶ, ಕಚ್ಛ, ಕರ್ರ, ಕಂಘ ಮತ್ತು ಕೃಪಾಣಗಳನ್ನು ಧರಿಸಬೇಕು ಹಾಗೂ ಹೆಸರಿನ ಜೊತೆಗೆ `ಸಿಂಗ್' (ಸಿಂಹ) ವಿಶೇಷಣವನ್ನು ಸೇರಿಸಬೇಕು ಎಂದು ಅವರು ಸೂಚಿಸಿದರು. `ಗುರುಗ್ರಂಥ ಸಾಹಿಬ್'ನ್ನು ಸಿಖ್ ಪಂಥದ ಪವಿತ್ರ ಗ್ರಂಥ ಎಂದು ಘೋಷಿಸಲಾಯಿತು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement