Thursday, May 14, 2009

ಇಂದಿನ ಇತಿಹಾಸ History Today ಮೇ 13

ಇಂದಿನ ಇತಿಹಾಸ

ಮೇ 13
ಕೇಂದ್ರ ಮಾಹಿತಿ ಮತ್ತು ಸಂಪರ್ಕ ಖಾತೆ ಸಚಿವ ದಯಾನಿಧಿ ಮಾರನ್ ಪ್ರಧಾನಿಗೆ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದರು. ಅದಕ್ಕೂ ಮುನ್ನ ಈದಿನ ಚೆನ್ನೈಯಲ್ಲಿ ಸಭೆ ಸೇರಿದ್ದ ಡಿಎಂಕೆ ಆಡಳಿತ ಸಮಿತಿಯು ಮುಖ್ಯಮಂತ್ರಿ ಕರುಣಾನಿಧಿ ಕುಟುಂಬದ ಆಂತರಿಕ ಕಲಹವನ್ನು ಬೀದಿಗೆಳೆದು ತೀವ್ರ ಇರುಸು ಮುರುಸು ಉಂಟುಮಾಡಿದ್ದಕ್ಕಾಗಿ ಮಾರನ್ ಅವರನ್ನು ಕೇಂದ್ರ ಸಂಪುಟದಿಂದ ಹಿಂದಕ್ಕೆ ಕರೆಸಿಕೊಳ್ಳಲು ನಿರ್ಧರಿಸಿತ್ತು.

2008: ಜೈಪುರದ ಜನನಿಬಿಡ ಮಾರುಕಟ್ಟೆ ಪ್ರದೇಶದ ಎಂಟು  ಕಡೆಗಳಲ್ಲಿ ಸರಣಿ ಬಾಂಬ್ ಸ್ಫೋಟಗೊಂಡ ಪರಿಣಾಮವಾಗಿ ಸುಮಾರು 80 ಮಂದಿ ಸತ್ತು ಇನ್ನೂರಕ್ಕೂ ಹೆಚ್ಚು ಮಂದಿ ಗಾಯಗೊಂಡರು. ಉಗ್ರಗಾಮಿಗಳ ಕೃತ್ಯ ಇದು ಎಂದು ಶಂಕಿಸಲಾಗಿದ್ದು, ಮಾರುಕಟ್ಟೆಯ ಎಂಟು ಸ್ಥಳಗಳಲ್ಲಿ ಒಂದರ ನಂತರ ಒಂದು ಬಾಂಬುಗಳು ಸ್ಫೋಟಗೊಂಡವು. ತ್ರಿಪೋಲಿಯ ಬಜಾರ್ ಬಳಿ ಇರುವ ಹನುಮಾನ್ ಗುಡಿಯ ಎದುರು ರಾತ್ರಿ 7.45ರ ಸುಮಾರಿಗೆ ಜನ ಕಿಕ್ಕಿರಿದಿದ್ದರು. ಆಗ ಅಲ್ಲಿ ಮೊದಲ ಸ್ಫೋಟ ಸಂಭವಿಸಿತು. ನಂತರ 12 ನಿಮಿಷದೊಳಗೆ ಅಲ್ಲಿಗೆ ಸಮೀಪದ ಮಾನಸ ಚೌಕ, ಬಡಿ ಚೌಪಾಲ್, ಚೋಟಿ ಚೌಪಾಲ್ ಮತ್ತು ಜೋಹರಿ ಬಜಾರ್ ಗಳಲ್ಲಿ ಸ್ಫೋಟದ ಭೀಕರ ಶಬ್ದ ಕೇಳಿಬಂದಿತು. 

2008: ಚೀನಾದಲ್ಲಿ ಸಂಭವಿಸಿದ ಭೀಕರ ಭೂಕಂಪದಲ್ಲಿ ಮೃತರಾದವರ ಸಂಖ್ಯೆ 12 ಸಾವಿರಕ್ಕೆ ಏರಿತು. 32 ವರ್ಷಗಳ ಇತಿಹಾಸದಲ್ಲಿ ಚೀನಾ ಕಂಡರಿಯದ ಭೀಕರ ಭೂಕಂಪ ಇದು.

2008: ಪಾಕಿಸ್ಥಾನ ಮುಸ್ಲಿಂ ಲೀಗ್-ನವಾಜ್ ಷರೀಫ್ ಬಣದ (ಪಿಎಂಎಲ್-ಎನ್) 9 ಸಚಿವರು ಈದಿನ ತಮ್ಮ ಸ್ಥಾನಗಳಿಗೆ ರಾಜೀನಾಮೆ ಸಲ್ಲಿಸಿದರು. ಅವರು ಪ್ರಧಾನಿ ಯೂಸುಫ್ ರಾಜಾ ಜಿಲಾನಿ ಅವರಿಗೆ ಈ ರಾಜೀನಾಮೆ ಪತ್ರಗಳನ್ನು ನೀಡಿದರು. ಆದರೆ ತಮ್ಮ ಸಂಪುಟಕ್ಕೆ ಪಿಎಂಎಲ್-ಎನ್ ಸಚಿವರು ನೀಡಿರುವ ರಾಜೀನಾಮೆ ಅಂಗೀಕರಿಸಲು ಪ್ರಧಾನಿ ಜಿಲಾನಿ ನಿರಾಕರಿಸಿದರು. ಪಾಕಿಸ್ಥಾನ ಪೀಪಲ್ಸ್ ಪಾರ್ಟಿ (ಪಿಪಿಪಿ) ನಾಯಕ ಆಸಿಫ್ ಆಲಿ ಜರ್ದಾರಿ ಅವರು ವಿದೇಶ ಪ್ರವಾಸ ಮುಗಿಸಿ ಸ್ವದೇಶಕ್ಕೆ ಮರಳುವ ತನಕ ಈ ರಾಜೀನಾಮೆ ಪತ್ರಗಳನ್ನು ಅಂಗೀಕರಿಸದೆ ಹಾಗೆಯೇ ಉಳಿಸಿಕೊಳ್ಳುವುದಾಗಿ ಪಿಎಂಎಲ್-ಎನ್ ಸಚಿವರಿಗೆ ಅವರು ತಿಳಿಸಿದರು.

2008: ಪ್ರಾಚೀನ ಕಲಾಕೃತಿ ಹಾಗೂ ಇತರ ಅಪರೂಪದ ವಸ್ತುಗಳನ್ನು ಬ್ರಿಟನ್ನಿಗೆ ಕಳ್ಳ ಸಾಗಾಣಿಕೆ ಮಾಡಿದ ಆರೋಪದಿಂದ ಪಾಕಿಸ್ಥಾನ ಪೀಪಲ್ಸ್ ಪಾರ್ಟಿ (ಪಿಪಿಪಿ) ಸಹ-ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಅವರನ್ನು ಕರಾಚಿಯ ಸ್ಥಳೀಯ ನ್ಯಾಯಾಲಯ ಖುಲಾಸೆಗೊಳಿಸಿತು. ಇದೇ ಪ್ರಕರಣದ ಮತ್ತೊಬ್ಬ ಆರೋಪಿ ಬ್ರಿಟನ್ನಿನ ಮಾಜಿ ರಾಯಭಾರಿ ವಾಜಿದ್ ಹಸನ್ ಅವರನ್ನೂ ಸಿಂಧ್ ಹೈಕೋರ್ಟ್ ಆರೋಪ ಮುಕ್ತಗೊಳಿಸಿತು. 1997ರಲ್ಲಿ ಲಂಡನ್ ವಿಮಾನ ನಿಲ್ದಾಣದಲ್ಲಿ ಪ್ರಾಚೀನ ಕಲಾಕೃತಿಗಳು ಹಾಗೂ ಅಪರೂಪದ ವಸ್ತುಗಳನ್ನು ಹೊಂದಿದ್ದ ಎಂಟು ಡಬ್ಬಿಗಳು ದೊರೆತಾಗ ಪ್ರಕರಣ ಬಯಲಿಗೆ ಬಂದಿತ್ತು. ಜರ್ದಾರಿ ಹಾಗೂ ಹಸನ್ ಸೇರಿ ಒಟ್ಟು ನಾಲ್ವರ ವಿರುದ್ಧ ಪ್ರಕರಣ ದಾಖಲು ಮಾಡಿಕೊಳ್ಳಲಾಗಿತ್ತು. ಹತ್ಯೆಗೀಡಾದ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೊ ಅವರ ಪತಿಯಾದ ಜರ್ದಾರಿ ವಿರುದ್ಧ ದಾಖಲಾಗಿದ್ದ ಇತರ ಹಲವು ಭ್ರಷ್ಟಾಚಾರ ಪ್ರಕರಣಗಳನ್ನು ಪಾಕ್ ಅಧ್ಯಕ್ಷ ಪರ್ವೇಜ್ ಮುಷರಫ್ ಕಳೆದ ವರ್ಷ ವಜಾಗೊಳಿಸಿದ್ದರು.

2008: ಈಶಾನ್ಯ ಬಾಂಗ್ಲಾದ ಕಿಶೋರಗಂಜ್ ಜಿಲ್ಲೆಯ ನಿಕ್ಲಿಯುಪ ಸಮೀಪದ ಘೋರೌತ್ರ ನದಿಯಲ್ಲಿ ಮೋಟಾರು ದೋಣಿ (ಲಾಂಚ್) ಬಿರುಗಾಳಿಗೆ ಸಿಲುಕಿ ಮುಳುಗಿದ ಪರಿಣಾಮವಾಗಿ ಅದರಲ್ಲಿದ್ದ 40 ಜನರು ಮೃತರಾದರು.

2008: ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ಆಫ್ ಸ್ಪಿನ್ನರ್ ಹರಭಜನ್ ಸಿಂಗ್ ಅವರು ವೇಗಿ ಎಸ್. ಶ್ರೀಶಾಂತ್ ಕೆನ್ನೆಗೆ ಬಾರಿಸಿದ ಪ್ರಕರಣದ 14 ಪುಟಗಳ ವರದಿಯನ್ನು ವಿಚಾರಣಾ ಆಯುಕ್ತ ಸುಧೀರ್ ನಾನಾವತಿ ಅವರು ಮುಂಬೈಯಲ್ಲಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (ಬಿಸಿಸಿಐ) ನೀಡಿದರು. 

2007: ತಾಲಿಬಾನಿನ ಪ್ರಮುಖ ಸೇನಾ ಕಮಾಂಡರ್ ಮುಲ್ಲಾ ದಾದುಲ್ಲಾನನ್ನು ಹತ್ಯೆ ಮಾಡಲಾಗಿದೆ ಎಂದು ಆಫ್ಘಾನಿಸ್ಥಾನ
ಸರ್ಕಾರ ಪ್ರಕಟಿಸಿತು. ಸಹಸ್ರಾರು ಉಗ್ರರ ನೇತೃತ್ವ ವಹಿಸಿಕೊಂಡು ದಾಳಿ ಇಡುತ್ತಿದ್ದ ದಾದುಲ್ಲಾನಿಗಾಗಿ 2001ರಲ್ಲಿ ಅಮೆರಿಕ ಮತ್ತು ಆಫ್ಘಾನಿಸ್ಥಾನ ಸರ್ಕಾರ ತಾಲಿಬಾನ್ ವಿರುದ್ಧ ಜಂಟಿ ದಾಳಿ ಆರಂಭಿಸಿದಂದಿನಿಂದ ಹುಡುಕಾಟ ನಡೆಸಲಾಗುತ್ತಿತ್ತು.

2007: ಕೇಂದ್ರ ಸರ್ಕಾರವು ಜಾಹೀರಾತು ಸಲುವಾಗಿ ಕೋಟ್ಯಂತರ ರೂಪಾಯಿಗಳನ್ನು ವೆಚ್ಚ ಮಾಡುತ್ತದೆ. ಆದರೆ ನೇತಾಜಿ ಸುಭಾಶ್ ಚಂದ್ರ ಬೋಸ್ ಜನ್ಮದಿನ ಹಿನ್ನೆಲೆಯಲ್ಲಿ ಅವರ ಸಂದೇಶವನ್ನು ಜನರಿಗೆ ತಲುಪಿಸುವಂತಹ ಯಾವುದೇ ಜಾಹೀರಾತನ್ನು ಅದು ಪ್ರಕಟಿಸಿಲ್ಲ ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವಾಲಯ ಬಹಿರಂಗಪಡಿಸಿತು. ದಿಲ್ಲಿಯ ನಿವಾಸಿ ದೇವ್ ಆಶೀಷ್ ಭಟ್ಟಾಚಾರ್ಯ ಅವರು ಮಾಹಿತಿ ಹಕ್ಕು ಕಾಯ್ದೆಯ ಅಡಿಯಲ್ಲಿ ಸಲ್ಲಿಸಿದ ಅರ್ಜಿಗೆ ಉತ್ತರವಾಗಿ ಸರ್ಕಾರ ಈ ಮಾಹಿತಿ ನೀಡಿತು.

2007: ಕೇಂದ್ರ ಮಾಹಿತಿ ಮತ್ತು ಸಂಪರ್ಕ ಖಾತೆ ಸಚಿವ ದಯಾನಿಧಿ ಮಾರನ್ ಪ್ರಧಾನಿಗೆ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದರು. ಅದಕ್ಕೂ ಮುನ್ನ ಈದಿನ ಚೆನ್ನೈಯಲ್ಲಿ ಸಭೆ ಸೇರಿದ್ದ ಡಿಎಂಕೆ ಆಡಳಿತ ಸಮಿತಿಯು ಮುಖ್ಯಮಂತ್ರಿ ಕರುಣಾನಿಧಿ ಕುಟುಂಬದ ಆಂತರಿಕ ಕಲಹವನ್ನು ಬೀದಿಗೆಳೆದು ತೀವ್ರ ಇರುಸು ಮುರುಸು ಉಂಟುಮಾಡಿದ್ದಕ್ಕಾಗಿ ಮಾರನ್ ಅವರನ್ನು ಕೇಂದ್ರ ಸಂಪುಟದಿಂದ ಹಿಂದಕ್ಕೆ ಕರೆಸಿಕೊಳ್ಳಲು ನಿರ್ಧರಿಸಿತ್ತು.

2007: ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ಅವರು ಲಖನೌದಲ್ಲಿ ಉತ್ತರ ಪ್ರದೇಶದ 33ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲ ಟಿ.ವಿ. ರಾಜೇಶ್ವರ್ ಅವರು ಪ್ರಮಾಣವಚನ ಬೋಧಿಸಿದರು. 49 ಮಂದಿ ಸದಸ್ಯರ ಸಚಿವ ಸಂಪುಟವೂ ಮಾಯಾವತಿ ಜೊತೆಗೆ ಇದೇ ದಿನ ಪ್ರಮಾಣ ವಚನ ಸ್ವೀಕರಿಸಿತು. ಇದರೊಂದಿಗೆ ಉತ್ತರಪ್ರದೇಶದಲ್ಲಿ 14 ವರ್ಷಗಳ ಬಳಿಕ ಸಮ್ಮಿಶ್ರ ಸರ್ಕಾರಗಳ ಯುಗ ಅಂತ್ಯಗೊಂಡಿತು. 1993ರಲ್ಲಿ ರಾಷ್ಟ್ರದಲ್ಲೇ ಮೊತ್ತ ಮೊದಲ ದಲಿತ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದ ಮಾಯಾವತಿ ಈ ಸಲ 4ನೇ ಬಾರಿಗೆ ಉತ್ತರಪ್ರದೇಶದ ಮುಖ್ಯಮಂತ್ರಿಯಾದರು.

2007: ಜ್ಞಾನಪೀಠ ಮಾದರಿಯ ಪ್ರಶಸ್ತಿಯೊಂದನ್ನು ಕನ್ನಡದಲ್ಲಿ ಮುಂದಿನ ವರ್ಷದಿಂದ ಅಸ್ತಿತ್ವಕ್ಕೆ ತರಲಾಗುವುದು. ಈ ಪ್ರಶಸ್ತಿಯ ಮೊತ್ತ ಒಂದು ಲಕ್ಷ ರೂಪಾಯಿ ಇರುತ್ತದೆ ಎಂದು ನಿರ್ಮಾಣ್ ಶೆಲ್ಟರ್ಸ್ ಸಂಸ್ಥೆಯ ಆಡಳಿತ ನಿರ್ದೇಶಕ ವಿ. ಲಕ್ಷ್ಮೀನಾರಾಯಣ್ ಬೆಂಗಳೂರಿನಲ್ಲಿ ಪ್ರಕಟಿಸಿದರು. ಹಿರಿಯ ಸಾಹಿತಿ ಡಾ. ಚನ್ನವೀರ ಕಣವಿ ಅವರಿಗೆ `ಅನಕೃ - ನಿರ್ಮಾಣ್' ಪ್ರಶಸ್ತಿ ಪ್ರದಾನ ಮಾಡಿದ ಸಮಾರಂಭದಲ್ಲಿ ಈ ವಿಚಾರನ್ನು ಲಕ್ಷ್ಮೀನಾರಾಯಣ್ ಬಹಿರಂಗಪಡಿಸಿದರು.

2007: ಚೆನ್ನೈಯ ಪ್ರಸಿದ್ಧ ಜವಳಿ ಸಂಸ್ಥೆ ಕುಮಾರನ್ ಸಿಲ್ಕ್ಸ್ ಸಂಸ್ಥೆಯು ತಮಿಳುನಾಡಿನ ಕೃಷ್ಣಗಿರಿಯ ಪಾರ್ವತಿ ಪದ್ಮಾವತಿ ಜೈನ ದೇವಾಲಯದ ಪದ್ಮಾವತಿ ದೇವಿಗಾಗಿ ವಿಶ್ವದಲ್ಲೇ ಅತ್ಯಂತ ದೊಡ್ಡದಾದ ಸೀರೆ ತಯಾರಿಸಿರುವುದನ್ನು ಬಹಿರಂಗ ಪಡಿಸಿತು. ಸತತ 18 ದಿನಗಳ ಶ್ರಮದ ಫಲವಾಗಿ ರೂಪುಗೊಂಡಿರುವ ಈ ಸೀರೆಯ ಉದ್ದ 2007 ಅಡಿಗಳು. ಅಂದರೆ 685 ಮೀಟರ್. (ಸಾಮಾನ್ಯ ಸೀರೆಯ ಉದ್ದ 5-6 ಮೀಟರ್ ಮಾತ್ರ). ಕುಂಕುಮ ಬಣ್ಣದ ಈ ಸೀರೆಯನ್ನು ಗಿನ್ನೆಸ್ ದಾಖಲೆ ಪುಸ್ತಕ ಸಂಸ್ಥೆಯು `ವಿಶ್ವದ ಅತಿ ದೊಡ್ಡ ಸೀರೆ' ಎಂದು ತನ್ನ ದಾಖಲೆಗಳ ಪುಸ್ತಕದಲ್ಲಿ ದಾಖಲು ಮಾಡಿದೆ. 

2007: ಮೂವತ್ತು ವರ್ಷಗಳ ಹಿಂದೆ ತನ್ನ ಅಪ್ಪ ಮಾಡಿದ್ದ ಜಾದೂ ದಾಖಲೆಯನ್ನು ಮಗ ಆಕಾಶ್ ಈದಿನ ಹೈದರಾಬಾದಿನಲ್ಲಿ ಮುರಿದ. ಈತನ ಅಪ್ಪ ವಿಶ್ವವಿಖ್ಯಾತ ಜಾದೂಗಾರ ಆನಂದ್ 1970ರಲ್ಲಿ ಮರದ ಪೆಟ್ಟಿಗೆಯೊಂದರಲ್ಲಿ ಬಂಧಿತರಾಗಿ ಜಬಲ್ ಪುರದ ನರ್ಮದಾ ನದಿಯಲ್ಲಿ ಮುಳುಗಿ ಕೇವಲ 40 ಸೆಕೆಂಡುಗಳಲ್ಲಿ ಬಂಧ ಮುಕ್ತರಾಗಿ ನೀರಿನಿಂದ ಮೇಲೆ ಬಂದಿದ್ದರು. ಆ ಮೂಲಕ ಅವರು ವಿಶ್ವ ವಿಖ್ಯಾತ ಹ್ಯಾರಿ ಹೌಡಿನಿ 1912ರಲ್ಲಿ ಸೃಷ್ಟಿಸಿದ್ದ ನೀರಿನಿಂದ ಪಾರಾಗುವ ಜಾದೂ ವಿದ್ಯೆ ಪ್ರದರ್ಶನ ದಾಖಲೆಯನ್ನು ಮುರಿದಿದ್ದರು. ಈದಿನ ಆನಂದ್ ಪುತ್ರ ಆಕಾಶ್ ಕೇವಲ 15 ಸೆಕೆಂಡುಗಳಲ್ಲಿ ಈ ಜಾದೂ ಸಾಹಸ ಮೆರೆದು ಅಪ್ಪನ ದಾಖಲೆ ಮುರಿದ. ಕೈಕಾಲನ್ನು ಸರಪಳಿಯಿಂದ ಬಿಗಿದು ಮರದ ಪೆಟ್ಟಿಗೆಯಲ್ಲಿ ಬಂಧಿಸಿ ಆಕಾಶನನ್ನು ಹೈದರಾಬಾದಿನ ಕೇಂದ್ರ ಭಾಗದ ಹುಸೇನ್ ಸಾಗರ ಸರೋವರದ ನೀರಿನ ಆಳಕ್ಕೆ ಎಸೆಯಲಾಗಿತ್ತು. ಆತ ಈ ಬಂಧನದಿಂದ ಮುಕ್ತನಾಗಿ ಕೇವಲ 15 ಸೆಕೆಂಡುಗಳಲ್ಲೇ ನೀರಿನ ಮೇಲೆ ಗೋಚರಿಸಿ ಹೊಸ ವಿಶ್ವದಾಖಲೆ ನಿರ್ಮಿಸಿದ.

2006: ನ್ಯಾಯಾಲಯ ನಿಂದನೆ ಪ್ರಕರಣದಲ್ಲಿ ಸುಪ್ರೀಂಕೋರ್ಟಿನಿಂದ ಒಂದು ತಿಂಗಳ ಸಾದಾ ಶಿಕ್ಷೆಗೆ ಗುರಿಯಾದ ಮಹಾರಾಷ್ಟ್ರದ ಸಾರಿಗೆ ಸಚಿವ ಸ್ವರೂಪಸಿಂಗ್ ನಾಯಕ್ ಈ ದಿನ ನಸುಕಿನ 4.30ರ ವೇಳೆಗೆ ಮುಂಬೈಯ ಮಲಬಾರ್ ಹಿಲ್ ಠಾಣೆಯಲ್ಲಿ ಪೊಲೀಸರಿಗೆ ಶರಣಾದರು. ನಂತರ ಅವರನ್ನು ಠಾಣೆ ಸೆರೆಮನೆಗೆ ಕಳುಹಿಸಲಾಯಿತು. 2002ರಲ್ಲಿ ಪರಿಸರ ಮತ್ತು ಅರಣ್ಯ ಖಾತೆ ಸಚಿವರಾಗಿದ್ದ ನಾಯಕ್ ಹಾಗೂ ಇಲಾಖೆಯ ಆಗಿನ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಖೋತ್ ಅವರು ಸುಪ್ರೀಂಕೋರ್ಟ್ ನಿಷೇಧ ಉಲ್ಲಂಘಿಸಿ ಮಹಾರಾಷ್ಟ್ರ ರಾಜ್ಯದಲ್ಲಿ ಆರು ಕಟ್ಟಿಗೆ ಕೊರೆಯುವ ಮಿಲ್ಲುಗಳಿಗೆ ಪರವಾನಗಿ ನೀಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಕೋರ್ಟ್ ಇಬ್ಬರಿಗೂ ಒಂದು ತಿಂಗಳ ಸಾದಾ ಸಜೆ ವಿಧಿಸಿತ್ತು.

1981: ಪೋಪ್ ಜಾನ್ ಪಾಲ್ (ದ್ವಿತೀಯ) ಅವರನ್ನು ಸೇಂಟ್ ಪೀಟರ್ಸ್ ಚೌಕದಲ್ಲಿ ಟರ್ಕಿಯ ಮೆಹ್ಮೆಟ್ ಅಲಿ ಆಗ್ಕಾ ಎಂಬ ವ್ಯಕ್ತಿ ಗುಂಡು ಹೊಡೆದು ತೀವ್ರವಾಗಿ ಗಾಯಗೊಳಿಸಿದ.

1967: ಝಕೀರ್ ಹುಸೇನ್ ಅವರು ಭಾರತದ ಮೂರನೇ ರಾಷ್ಟ್ರಪತಿಯಾಗಿ ಪ್ರಮಾಣವಚನ ಸ್ವೀಕರಿಸಿದರು.

1962: ಸರ್ವಪಲ್ಲಿ ರಾಧಾಕೃಷ್ಣನ್ ಭಾರತದ ಎರಡನೇ ರಾಷ್ಟ್ರಪತಿಯಾದರು.

1960: ಹಾಸ್ಯ ಲೇಖಕಿ, ಕವಯಿತ್ರಿ ಸುಕನ್ಯಾ ಕಳಸ ಅವರು ಎಚ್. ಪುಟ್ಟದೇವರಯ್ಯ - ನಾಗಮ್ಮ ದಂಪತಿಯ ಮಗಳಾಗಿ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕಿನ ಕಳಸದಲ್ಲಿ ಹುಟ್ಟಿದರು. ಕಡೆಂಗೋಡ್ಲು ಕಾವ್ಯ ಪ್ರಶಸ್ತಿ, ಪೆರ್ಲ ಕೃಷ್ಣಭಟ್ಟ ಪ್ರಶಸ್ತಿಗಳನ್ನು ಪಡೆದಿರುವ ಸುಕನ್ಯಾ ಅವರ ಅವರ ಕಥೆ, ಕವನ, ಲೇಖನ, ಹಾಸ್ಯ ಬರಹಗಳು ಪ್ರಜಾವಾಣಿ, ಸುಧಾ, ತುಷಾರ, ತರಂಗ, ವನಿತ, ಕರ್ಮವೀರ, ಉದಯವಾಣಿ ಇತ್ಯಾದಿ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

1940: ಬ್ರಿಟನ್ನಿನ ಪ್ರಧಾನಿ ವಿನ್ ಸ್ಟನ್ ಚರ್ಚಿಲ್ ಹೌಸ್ ಆಫ್ ಕಾಮನ್ಸನ್ನು ಉದ್ದೇಶಿಸಿ ಪ್ರಥಮ ಭಾಷಣ ಮಾಡಿದರು. `ನೆತ್ತರು, ಕಣ್ಣೀರು, ಬೆವರಿನ ಹೊರತಾಗಿ ನಿಮಗೆ ನೀಡಲು ನನ್ನ ಬಳಿ ಬೇರೇನೂ ಇಲ್ಲ' ಎಂದು ಅವರು ಹೇಳಿದರು.

1905: ಫಕ್ರುದ್ದೀನ್ ಅಲಿ ಅಹ್ಮದ್ (1905-77) ಜನ್ಮದಿನ. ಇವರು 1974ರಿಂದ 1977ರವರೆಗೆ ಭಾರತದ ರಾಷ್ಟ್ರಪತಿಯಾಗಿದ್ದರು.

1857: ಬ್ರಿಟಿಷ್ ಬ್ಯಾಕ್ಟೀರಿಯಾ ತಜ್ಞ ಸರ್ ರೊನಾಲ್ಡ್ ರಾಸ್ (1857-1932) ಜನ್ಮದಿನ. ಮಲೇರಿಯಾ ರೋಗ ನಿಯಂತ್ರಣಕ್ಕೆ ಔಷಧಿ ಕಂಡು ಹಿಡಿಯುವಲ್ಲಿ ಮಾಡಿದ ಸಾಧನೆಗಾಗಿ ಇವರಿಗೆ 1902ರಲ್ಲಿ ವೈದ್ಯಕೀಯ ಕ್ಷೇತ್ರಕ್ಕೆ ನೀಡಲಾಗುವ ನೊಬೆಲ್ ಪ್ರಶಸ್ತಿ ಲಭಿಸಿತು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement