ಗ್ರಾಹಕರ ಸುಖ-ದುಃಖ

My Blog List

Thursday, May 14, 2009

ಇಂದಿನ ಇತಿಹಾಸ History Today ಮೇ 14

ಇಂದಿನ ಇತಿಹಾಸ

ಮೇ 14

ಭ್ರಷ್ಟಾಚಾರ ಆರೋಪ ಎದುರಿಸುತ್ತಿದ್ದ ವಿಚಕ್ಷಣಾ ಅಧಿಕಾರಿಯೊಬ್ಬರ ಸಂಬಂಧಿಗೆ  `ಸಹಾಯ' ಮಾಡಿದ್ದಾರೆಂಬ ಆರೋಪಕ್ಕೆ ಗುರಿಯಾದ ತಮಿಳುನಾಡಿನ ಸಮಾಜ ಕಲ್ಯಾಣ ಇಲಾಖೆ ಸಚಿವೆ ಪೂಂಗೊಥಾಯ್ ಅಲಾಡಿ ಅರುಣಾ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು.

2008: ಕನ್ನಡದಲ್ಲೇ ಅನಿಸಿಕೆ, ಭಾವನೆಗಳನ್ನು ಹಂಚಿಕೊಳ್ಳಲು ಬಯಸುವ ಮತ್ತು ಇಂಗ್ಲಿಷಿನಲ್ಲಿ ಬರೆಯಲು ಹಿಂಜರಿಯುವ ಕನ್ನಡಿಗರಿಗೆ ಸಂತಸಪಡಿಸಲೆಂದೇ ಟಕಾಯನ್ ಟೆಕ್ನಲಾಜಿಸ್ ಸಂಸ್ಥೆಯು `ಕ್ವಿಲ್ಪ್ಯಾಡ್' ಎಂಬ ನೂತನ ಸಾಫ್ಟ್ ವೇರ್ ಮತ್ತು ವೆಬ್ಸೈಟ್ ರೂಪಿಸಿದ್ದನ್ನು ಬಹಿರಂಗಪಡಿಸಿತು. `ಕ್ವಿಲ್ ಪ್ಯಾಡ್'ನಿಂದ ಕನ್ನಡದಲ್ಲಿ ಟೈಪ್ ಮಾಡಬಹುದು, ಬರಹವನ್ನು ಇ-ಮೇಲ್ ಮೂಲಕ ಕಳುಹಿಸಬಹುದು. ಕಂಪ್ಯೂಟರ್ ಕೀಬೋರ್ಡಿನ `ಕಂಟ್ರೋಲ್-ಶಿಫ್ಟ್'  ಕೀಗಳನ್ನು ಬಳಸಿ ಕನ್ನಡದಲ್ಲಿ ಟೈಪ್ ಮಾಡುವ ಹರಸಾಹಸ ಸಹ ಪಡಬೇಕಿಲ್ಲ. ಬರೆಯಬೇಕಾದದ್ದನ್ನು ಕೀಬೋರ್ಡಿನಲ್ಲಿ ಇಂಗ್ಲಿಷ್ ಮಾದರಿಯಲ್ಲಿ ಟೈಪ್ ಮಾಡುತ್ತ ಮುಂದುವರೆದರೆ ಸಾಕು, ಕಂಪ್ಯೂಟರ್ ಸ್ಕ್ರೀನ್ ಮೇಲೆ ಕನ್ನಡ ಪದಗಳು ಮೂಡುತ್ತವೆ. ಸಣ್ಣಪುಟ್ಟ ತಪ್ಪು ಮೂಡಿದರೂ ಕಂಪ್ಯೂಟರ್ ತನ್ನಿಂದ ತಾನೇ ಸರಿಪಡಿಸಿಕೊಳ್ಳುತ್ತದೆ ಅಥವಾ ಬರಹಗಾರರೇ ತಪ್ಪುಗಳನ್ನು ಸರಿಪಡಿಸಬಹುದು. ಕನ್ನಡದಲ್ಲಿ ಇ-ಮೇಲ್ ಮಾಡಲು ಬಯಸುವವರು www.quillpad.com ವೆಬ್ಸೈಟಿಗೆ ಭೇಟಿ ನೀಡಿದರೆ ಸಾಕು, ಅಲ್ಲಿ ಕನ್ನಡದಲ್ಲಿ ಟೈಪ್ ಮಾಡಬಹುದು. ಸರಳವಾದ ರೀತಿಯಲ್ಲಿ ಕನ್ನಡ ಪದಗಳು ಕಂಪ್ಯೂಟರ್ ಸ್ಕ್ರೀನ್ ಮೇಲೆ ಮೂಡತೊಡಗುತ್ತದೆ.

2008: ಭ್ರಷ್ಟಾಚಾರ ಆರೋಪ ಎದುರಿಸುತ್ತಿದ್ದ ವಿಚಕ್ಷಣಾ ಅಧಿಕಾರಿಯೊಬ್ಬರ ಸಂಬಂಧಿಗೆ  `ಸಹಾಯ' ಮಾಡಿದ್ದಾರೆಂಬ ಆರೋಪಕ್ಕೆ ಗುರಿಯಾದ ತಮಿಳುನಾಡಿನ ಸಮಾಜ ಕಲ್ಯಾಣ ಇಲಾಖೆ ಸಚಿವೆ ಪೂಂಗೊಥಾಯ್ ಅಲಾಡಿ ಅರುಣಾ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ಭ್ರಷ್ಟಾಚಾರ ಆರೋಪ ಎದುರಿಸುತ್ತಿದ್ದ ವಿಚಕ್ಷಣಾ ದಳ ಮತ್ತು ಭ್ರಷ್ಟಾಚಾರ ನಿಗ್ರಹದ ದಳ ನಿರ್ದೇಶಕ  ಎಸ್. ಕೆ. ಉಪಾಧ್ಯಾಯ ಅವರ ಸಂಬಂಧಿಯೊಬ್ಬರಿಗೆ ಸಚಿವೆ ಪೂಂಗೊಥಾಯ್ `ಸಹಾಯ' ಮಾಡುವ ಸಂಬಂಧ ನಡೆಸಿದ ದೂರವಾಣಿ ಸಂಭಾಷಣೆಯನ್ನು ಕದ್ದಾಲಿಸಿ ಧ್ವನಿಮುದ್ರಿಸಲಾಗಿದ್ದ `ಸಿಡಿ'ಯನ್ನು ಜನತಾಪಕ್ಷದ ಸುಬ್ರಮಣಿಯನ್ ಸ್ವಾಮಿ ಬಿಡುಗಡೆ ಮಾಡಿದ್ದರು. `ದೂರವಾಣಿಯಲ್ಲಿ ಮಾತನಾಡಿರುವ ಧ್ವನಿ ನನ್ನದೇ. ಆದರೆ ನಾನು ಈ ಪ್ರಕರಣ ಯಾವ ಹಂತದವರೆಗೆ ಮುಂದುವರಿದಿದೆ ಎಂದು ವಿಚಾರಿಸಲು ಕರೆ ಮಾಡಿದ್ದಾಗಿ' ಪೂಂಗೋಥಾಯ್ ಮಾಧ್ಯಮದವರ ಮುಂದೆ ಹೇಳಿದ್ದರು. ಪೂಂಗೋಥಾಯ್  ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಬೇಕೆಂದು ಸ್ವಾಮಿ ಆಗ್ರಹಿಸಿದ್ದರು.

2008: ವಿಶ್ವದ ಅಗ್ರ ರ್ಯಾಂಕಿಂಗಿನ ಟೆನಿಸ್ ಆಟಗಾರ್ತಿ ಜಸ್ಟಿನ್ ಹೆನಿನ್ ಅವರು ವೃತ್ತಿಪರ ಟೆನಿಸ್ಸಿಗೆ ವಿದಾಯ ಹೇಳಿದರು. ಈದಿನ ಬ್ರಸ್ಸೆಲ್ಸಿನಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ತಮ್ಮ ನಿರ್ಧಾರ ಪ್ರಕಟಿಸಿದರು. 

2008: ಹರಭಜನ್ ಸಿಂಗ್ ಮೇಲೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕೊನೆಗೂ `ದಂಡಾಸ್ತ್ರ'ವನ್ನು ಪ್ರಯೋಗಿಸಿತು. ಐದು ಏಕದಿನ ಪಂದ್ಯಗಳ ನಿಷೇಧ ಹೇರಿದ್ದಲ್ಲದೆ ತಪ್ಪು ಮರುಕಳಿಸಿದರೆ ಆಜೀವ ನಿಷೇಧ ಶಿಕ್ಷೆ ವಿಧಿಸುವ ಬೆದರಿಕೆಯನ್ನೂ ಹಾಕಿತು.

2008: ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ಕೆನಡಾದ ಒಂಟಾರಿಯೊದಲ್ಲಿರುವ  ವಿಂಡ್ಸರ್ ವಿಶ್ವ  ವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ ಪಡೆದರು. ಚಿತ್ರರಂಗಕ್ಕೆ ಅಕ್ಷಯ್ ನೀಡಿದ ಕೊಡುಗೆಯನ್ನು ಪರಿಗಣಿಸಿ ಈ ಗೌರವ ನೀಡಲಾಗಿದೆ ಎಂದು ವಿವಿ ಹೇಳಿತು.

2008: ವಿಶ್ವದ ನಂ.1 ಉಕ್ಕು ಉತ್ಪಾದನಾ ಕಂಪೆನಿ ಆರ್ಸೆಲರ್ ಮಿತ್ತಲ್ ಭಾರತದಲ್ಲಿನ ತನ್ನ ಕಾರ್ಯ ನಿರ್ವಹಣೆಗಾಗಿ ವಿಜಯ್ ಭಟ್ನಾಗರ್ ಅವರನ್ನು ನೂತನ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಯಾಗಿ ನೇಮಕ ಮಾಡಿತು. 

2008: ರಾಜಧಾನಿ ದೆಹಲಿ ಸಹಿತ ಉತ್ತರ ಭಾರತದ ಹಲವು ಕಡೆಗಳಲ್ಲಿ ಗಾಳಿಯಿಂದ ಕೂಡಿದ ಮಳೆ ಸುರಿಯಿತು. ಉತ್ತರ ಪ್ರದೇಶದಲ್ಲಿ ಮಳೆ ಸಂಬಂಧಿತ ಅನಾಹುತಗಳಿಗೆ ಸಿಕ್ಕಿ 40 ಮಂದಿ ಮೃತರಾದರು.

2007: ಸುಮಾರು 45 ವರ್ಷಗಳಿಂದ ಜಾರಿಯಲ್ಲಿರುವ ಮಹಿಳಾ ನೌಕರರ ರಾತ್ರಿ ಪಾಳಿ ನಿಷೇಧ ಕಾನೂನನ್ನು ರದ್ದು ಪಡಿಸಲು ರಾಜ್ಯ ಸರ್ಕಾರ ನಿರ್ಧರಿಸಿತು. ಮಹಿಳಾ ನೌಕರರಿಗೆ ರಾತ್ರಿ ಪಾಳಿ ನಿಷೇಧಿಸುವ ಕರ್ನಾಟಕ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆ ಕಾಯ್ದೆಯನ್ನು (1961) ರದ್ದು ಪಡಿಸುವ ಸಲುವಾಗಿ ಶೀಘ್ರ ಸುಗ್ರೀವಾಜ್ಞೆ ಹೊರಡಿಸಲು ಸಚಿವ ಸಂಪುಟ ತೀರ್ಮಾನಿಸಿತು.

2007: ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ವ್ಯಾಸಂಗ ಮಾಡಿದ ಆಂಧ್ರಪ್ರದೇಶ ಮೂಲದ ಮುತ್ಯಾಲರಾಜ ರೇವು ಅವರು ಕೇಂದ್ರ ಲೋಕಸೇವಾ ಆಯೋಗವು (ಯುಪಿಎಸ್ ಸಿ) ನಡೆಸಿದ 2006ರ ನಾಗರಿಕ ಸೇವಾ (ಮುಖ್ಯ) ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಗಳಿಸಿದರು.

2007: ಪ್ರಧಾನಿ ಮನಮೋಹನ್ ಸಿಂಗ್ ಅವರು ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ದಯಾನಿಧಿ ಮಾರನ್ ಅವರು ಕೇಂದ್ರ ಸಚಿವ ಸಂಪುಟಕ್ಕೆ ಸಲ್ಲಿಸಿದ ರಾಜೀನಾಮೆಯನ್ನು ಅಂಗೀಕರಿಸುವಂತೆ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರಿಗೆ ಶಿಫಾರಸು ಮಾಡಿದರು.

2007: ರಸ್ತೆ ಅಪಘಾತದಲ್ಲಿ ಬೆಂಕಿ ಹೊತ್ತಿಕೊಂಡ ಪರಿಣಾಮವಾಗಿ 27 ಮಂದಿ ಸಜೀವವಾಗಿ ದಹನಗೊಂಡ ಘಟನೆ ಆನಂದ್ ಬಳಿ ಘಟಿಸಿತು. ವಡೋದರ ಜಿಲ್ಲೆಯ ಮೆಹಸಾನದಿಂದ  ರಮೇಶರಕ್ಕೆ ಹೊರಟಿದ್ದ ಸಿಎನ್ಜಿ ಬಸ್ ಎಲ್ಪಿಜಿ ಟ್ಯಾಂಕರಿಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಈ ದುರಂತ ಸಂಭವಿಸಿತು.

2007: ಆಂಧ್ರ ಪ್ರದೇಶದ ಅದಿಲಾಬಾದ್ ಜಿಲ್ಲೆಯ ನೆರೆದುಗುಂಡ ಬಳಿ ವ್ಯಾನ್ ಮತ್ತು ಟ್ರಕ್ ಪರಸ್ಪರ ಡಿಕ್ಕಿಯಾಗಿ ಕನಿಷ್ಠ 18 ಜನ ಮೃತರಾದರು.

2007: ಪಾಕಿಸ್ಥಾನದ ಮುಖ್ಯ ನ್ಯಾಯಮೂರ್ತಿ ಇಫ್ತಿಕಾರ್ ಎಂ. ಚೌಧರಿ ಅಮಾನತು ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಸುಪ್ರೀಂಕೋರ್ಟ್ ಹಿರಿಯ ನ್ಯಾಯಮೂರ್ತಿ ಫಲೆಕ್ ಶೇರ್ ಪೀಠಕ್ಕೆ ರಾಜೀನಾಮೆ ಸಲ್ಲಿಸಿದರು. ಆ ಬಳಿಕ ಮುಖ್ಯನ್ಯಾಯಮೂರ್ತಿ ರಾಣಾ ಭಗವಾನ್ ದಾಸ್ ಅವರು 14 ಸದಸ್ಯರ ಪೂರ್ಣಪೀಠವನ್ನು ಮರುಸ್ಥಾಪಿಸಿದರು. 

2006: ಖ್ಯಾತ ಪಿಟೀಲುವಾದಕ ಲಾಲ್ಗುಡಿ ಜಯರಾಮನ್ ಅವರಿಗೆ ಬೆಂಗಳೂರಿನ ಶ್ರೀರಾಮ ಸೇವಾ ಮಂಡಳಿಯು 2006ನೇ ಸಾಲಿನ `ಎಸ್.ವಿ. ನಾರಾಯಣಸ್ವಾಮಿ ರಾವ್ ರಾಷ್ಟ್ರೀಯ ಪ್ರಶಸ್ತಿ' ನೀಡಿ ಗೌರವಿಸಿತು. 68ನೇ ರಾಮನವಮಿ ಸಂಗೀತೋತ್ಸವದಲ್ಲಿ ಮಹಾರಾಷ್ಟ್ರ ರಾಜ್ಯಪಾಲ ಎಸ್.ಎಂ. ಕೃಷ್ಣ ಪ್ರಶಸ್ತಿ ಪ್ರದಾನ ಮಾಡಿದರು.

2006: ಅಸ್ಸಾಂ ಮುಖ್ಯಮಂತ್ರಿಯಾಗಿ ಸತತ ಎರಡನೇ ಅವಧಿಗೆ ತರುಣ್ ಗೊಗೋಯ್ ಅವರು ಪ್ರಮಾಣವಚನ ಸ್ವೀಕರಿಸಿದರು. ಅಸ್ಸಾಂ ರಾಜ್ಯ ರಚನೆಯಾದ ಬಳಿಕ ಗೊಗೋಯ್ ಈಗ 16ನೇ ಅವಧಿಯ  ಮುಖ್ಯಮಂತ್ರಿ.

2006: ಅಮೆರಿಕದ ಮಾಂಟ್ ಗೊಮೆರಿ ಕೌಂಟಿಯ ಮುಂಚೂಣಿಯ ಹೈಸ್ಕೂಲುಗಳಲ್ಲಿ ಒಂದಾದ ಮೇರಿಲ್ಯಾಂಡಿನ ಬೆಥೆಸ್ಡಾ ಚೆವಿ ಚೇಸ್ ಹೈಸ್ಕೂಲಿನ (ಬಿಸಿಸಿ) ವಿದ್ಯಾರ್ಥಿನಿ ಭಾರತೀಯ ಮೂಲದ ಶ್ರೀಮತಿ ಶ್ರೀಧರ್ ಅವರನ್ನು ಹೈಸ್ಕೂಲ್ ತಾನು ಪ್ರಕಟಿಸುತ್ತಿರುವ `ಟಟ್ಲೇರ್' ಪತ್ರಿಕೆಯ ಆನ್ ಲೈನ್ ಆವೃತ್ತಿಯ ಮುಖ್ಯ ಸಂಪಾದಕಿಯನ್ನಾಗಿ ನೇಮಕ ಮಾಡಿತು. ಈ ವಿದ್ಯಾರ್ಥಿನಿ ಈ ವೃತ್ತ ಪತ್ರಿಕೆಯ ಸಿಬ್ಬಂದಿ ಬರಹಗಾರ್ತಿ.

2006: ಕೇಂದ್ರ ದೆಹಲಿಯ ರಾಜಾಜಿ ಮಾರ್ಗದಲ್ಲಿ ನಿವೇಶನ ಮಂಜೂರಾದ ಎಂಟು ವರ್ಷಗಳ ಒಳಗಾಗಿ ನಿರ್ಮಾಣಗೊಂಡ ಡಿ ಆರ್ ಡಿ ಓ ಕೇಂದ್ರ ಕಚೇರಿಯನ್ನು ಪ್ರಧಾನಿ ಡಾ. ಮನಮೋಹನ್ ಸಿಂಗ್ ಉದ್ಘಾಟಿಸಿದರು. ಇದು ಕೆಂಪು ಮರಳುಕಲ್ಲಿನ ಸುಂದರ ಕಟ್ಟಡ. ರಾಷ್ಟ್ರಪತಿ ಭವನ, ನಾರ್ಥ್ ಬ್ಲಾಕ್, ಸೌತ್ ಬ್ಲಾಕ್ ಮತ್ತು ಸಂಸತ್ ಕಟ್ಟಡಗಳು ಇರುವ ಸುಂದರ ಪ್ರದೇಶಕ್ಕೆ ಈ ಡಿ ಆರ್ ಡಿ ಓ ಕೇಂದ್ರ ಕಚೇರಿ  ಇನ್ನಷ್ಟು ಶೋಭೆ ನೀಡಿತು. ಎ.ಪಿ.ಜೆ. ಅಬ್ದುಲ್ ಕಲಾಂ, ವಿ.ಕೆ. ಅತ್ರೆ ಮತ್ತು ಎಂ. ನಟರಾಜನ್ ಈ ಮೂವರು ಕಳೆದ 8 ವರ್ಷಗಳಲ್ಲಿ ಈ ಯೋಜನೆಯ ಜಾರಿಗೆ ಶ್ರಮವಹಿಸಿದ ಪ್ರಮುಖರು.

1973: ಸಿ. ಹೊನ್ನಪ್ಪ ಹುಟ್ಟಿದ ದಿನ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ ಕರ್ನಾಟಕದ ಅತ್ಯುತ್ತಮ ಕಬಡ್ಡಿ ಆಟಗಾರರಲ್ಲಿ ಇವರು ಒಬ್ಬರು. ಏಕಲವ್ಯ ಪ್ರಶಸ್ತಿ, ಅರ್ಜುನ  ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಸಹಿತ ಹಲವಾರು ಪ್ರಶಸ್ತಿಗಳನ್ನು ಇವರು ಪಡೆದಿದ್ದಾರೆ.

1973: ತನ್ನ ಪ್ರಪ್ರಥಮ `ಸ್ಕೈಲ್ಯಾಬ್-1' ಮಾನವ ಸಹಿತ ಅಂತರಿಕ್ಷ ನಿಲ್ದಾಣವನ್ನು ಅಮೆರಿಕ ಅಂತರಿಕ್ಷಕ್ಕೆ ಉಡಾವಣೆ ಮಾಡಿತು. 34,981 ಪ್ರದಕ್ಷಿಣೆಗಳ ಬಳಿಕ 1979ರ ಜುಲೈ 11ರಂದು ಅದು ಉರಿದು ಸಮುದ್ರಕ್ಕೆ ಬಿತ್ತು.

1963: ಕಲಾವಿದೆ ರತ್ನ ಸುಪ್ರಿಯ ರಾಮಮೋಹನ್ ಜನನ.

1956: ಕಲಾವಿದ ಎಂ.ಜಿ. ವೆಂಕಟರಾಘವನ್ ಜನನ.

1955: ಕಲಾವಿದೆ ಎಂ.ಕೆ. ಜಯಶ್ರೀ ಜನನ.

1948: ಇಸ್ರೇಲಿನ ಪ್ರಥಮ ಪ್ರಧಾನಿ ಹಾಗೂ ರಾಷ್ಟ್ರೀಯ ಮಂಡಳಿಯ ಅಧ್ಯಕ್ಷ ಡೇವಿಡ್ ಬೆನ್-ಗ್ಯುರಿಯನ್ ಹೊಸ ಇಸ್ರೇಲ್ ರಾಷ್ಟ್ರ ಸ್ಥಾಪನೆಯ ಘೋಷಣೆಯನ್ನು ಸಂಜೆ 4 ಗಂಟೆಗೆ ಮಾಡಿದರು. 

1934: ಖ್ಯಾತ ಸಂಗೀತಗಾರ ಎಚ್. ಕೆ. ನಾರಾಯಣ ಅವರು ಸಂಗೀತಗಾರ ಕೇಶವಯ್ಯ- ಸಣ್ಣಮ್ಮ ದಂಪತಿಯ ಮಗನಾಗಿ ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ ಜನಿಸಿದರು.

1924: ಕಲಾವಿದ ಮಾಧವರಾವ್ ಕೆ.ಬಿ. ಜನನ.

1923: ಭಾರತದ ಚಲನಚಿತ್ರ ನಿರ್ದೇಶಕ ಮೃಣಾಲ್ ಸೇನ್ ಜನ್ಮ ದಿನ.

1796: ಎಡ್ವರ್ಡ್ ಜೆನ್ನರ್ ಹಾಲು ಮಾರಾಟಗಾರ್ತಿಯೊಬ್ಬಳ ಕೈಗೆ ತಗುಲಿದ್ದ ದನದ ಸಿಡುಬಿನ ಕೀವನ್ನು ತೆಗೆದು 8 ವರ್ಷದ ಆರೋಗ್ಯಶಾಲಿ ಬಾಲಕ ಜೇಮ್ಸ್ ಫಿಪ್ಸ್ ನ ಕೈಗೆ ಸೇರಿಸಿದ. ಫಿಪ್ಸ್ ನಲ್ಲಿ ಸಿಡುಬಿನ ದುಷ್ಪರಿಣಾಮ ಕಾಣಲಿಲ್ಲ. ಆರು ವಾರಗಳ ನಂತರ ಸಿಡುಬು ಪೀಡಿತ ವ್ಯಕ್ತಿಯೊಬ್ಬನ ಕೀವನ್ನು ಜೆನ್ನರ್ ಅದೇ ಬಾಲಕನಿಗೆ ಸೇರಿಸಿದ. ಬಾಲಕನಿಗೆ ಸಿಡುಬು ತಟ್ಟಲಿಲ್ಲ.. ಜೆನ್ನರನ ಈ ಪ್ರಯೋಗ `ಲಸಿಕೆಯ' (ವ್ಯಾಕ್ಸಿನೇಷನ್) ಹುಟ್ಟಿಗೆ ನಾಂದಿಯಾಯಿತು.

1643: ಫ್ರಾನ್ಸಿನ ದೊರೆ 8ನೇ ಲೂಯಿ ಮೃತನಾದ್ದದರಿಂದ ಆತನ 4 ವರ್ಷ ವಯಸ್ಸಿನ ಮಗ 9ನೇ ಲೂಯಿ ಫ್ರಾನ್ಸಿನ ರಾಜನಾದ. 9ನೇ ಲೂಯಿ 72 ವರ್ಷಗಳ ಕಾಲ ರಾಜ್ಯಭಾರ ನಡೆಸಿದ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement