Thursday, December 24, 2009

ಇಂದಿನ ಇತಿಹಾಸ History Today ನವೆಂಬರ್ 27

ಇಂದಿನ ಇತಿಹಾಸ

ನವೆಂಬರ್ 27

2014: ಸಿಡ್ನಿ: ಬೌನ್ಸರ್ನಿಂದ ತಲೆಗೆ ಚೆಂಡಿನ ಪೆಟ್ಟು ಬಿದ್ದು ಅಸ್ವಸ್ಥರಾಗಿದ್ದ ಆಸ್ಟ್ರೇಲಿಯಾದ ಯುವ ಟೆಸ್ಟ್ ಬ್ಯಾಟ್ಸ್ಮನ್ ಫಿಲ್ ಹ್ಯೂಸ್ ಅವರು ಗಾಯಗೊಂಡ ಎರಡು ದಿನಗಳ ಬಳಿಕ ಈದಿನ ನಿಧನರಾದರು. ಅವರಿಗೆ 25 ವರ್ಷ ವಯಸ್ಸಾಗಿತ್ತು. 'ಫಿಲ್ ಹ್ಯೂಸ್ ಅವರಿಗೆ ಪ್ರಜ್ಞೆ ಮರಳಿ ಮರಲೇ ಇಲ್ಲ . ಅವರು ಸಿಡ್ನಿ ಆಸ್ಪತ್ರೆಯಲ್ಲಿಯೇ ಅಸು ನೀಗಿದ್ದಾರೆ' ಎಂದು ಆಸ್ಟ್ರೇಲಿಯಾ ತಂಡದ ವೈದ್ಯ ಪೀಟರ್ ಬ್ರೂಕ್ನರ್ ಹೇಳಿದರು. ನವೆಂಬರ್ 25)ರಂದು ಹೆಲ್ಮೆಟ್ ಬದಲಿಗೆ ತಲೆಗೆ ಚೆಂಡು ಬಡಿದ ಬಳಿಕ ಫಿಲ್ ಹ್ಯೂಸ್ ಅವರನ್ನು ಸಿಡ್ನಿ ಕ್ರಿಕೆಟ್ ಮೈದಾನದಿಂದ ಆಸ್ಪತ್ರೆಗೆ ಸ್ಟ್ರೆಚರ್ನಲ್ಲಿಯೇ ಒಯ್ಯಲಾಗಿತ್ತು. ಆಸ್ಪತ್ರೆಗೆ ಒಯ್ಯುವ ಮೊದಲು ಅವರಿಗೆ ಬಾಯಿಯ ಮೂಲಕ ಉಸಿರಾಟದ ಯತ್ನ ನಡೆಸಲಾಗಿತ್ತು. ಆದರೆ ಅವರಾಗಲೇ ಪ್ರಜ್ಞೆ ಕಳೆದುಕೊಂಡಿದ್ದರು. 'ಸ್ವಲ್ಪ ಹೊತ್ತಿಗೆ ಮುಂಚೆ ಈದಿನ ಫಿಲ್ ಹ್ಯೂಸ್ ಅವರು ನಿಧನರಾದರು ಎಂಬುದಾಗಿ ತಿಳಿಸುವ ಬೇಸರದ ಕರ್ತವ್ಯ ನನ್ನದಾಗಿದೆ.  ಗಾಯಗೊಂಡ ಬಳಿಕ ಅವರಿಗೆ ಮತ್ತೆ ಪ್ರಜ್ಞೆ ಮರಳಿ ಬರಲೇ ಇಲ್ಲ' ಎಂದು ಪೀಟರ್ ಬ್ರೂಕ್ನರ್ ಹೇಳಿಕೆಯಲ್ಲಿ ತಿಳಿಸಿದರು. ನಿಧನರಾದಾಗ ಅವರು ನೋವಿನಲ್ಲಿ ಇರಲಲ್ಲ. ಕುಟುಂಬ ಸದಸ್ಯರು ಮತ್ತು ನಿಕಟ ಗೆಳೆಯರು ಅವರ ಜೊತೆಗಿದ್ದರು. ಕ್ರಿಕೆಟ್ ಸಮುದಾಯದ ಸದಸ್ಯರಾಗಿ ನಾವು ಅವರ ನಿಧನಕ್ಕಾಗಿ ಶೋಕ ವ್ಯಕ್ತ ಪಡಿಸುತ್ತಿದ್ದೇವೆ. ಅವರ ಕುಟುಂಬ ಸದಸ್ಯರು, ಗೆಳೆಯರಿಗೆ ನಮ್ಮ ತೀವ್ರವಾದ ಅನುಕಂಪ ವ್ಯಕ್ತಪಡಿಸುತ್ತಿದ್ದೇವೆ; ಎಂದು ಅವರು ನುಡಿದರು. ನ್ಯೂ ಸೌತ್ ವೇಲ್ಸ್ ವಿರುದ್ಧ ಶೆಫೀಲ್ಡ್ ಷೀಲ್ಡ್ನಲ್ಲಿ ದಕ್ಷಿಣ ಆಸ್ಟ್ರೇಲಿಯಾ ಪರ ಬ್ಯಾಟಿಂಗ್ ಮಾಡುತ್ತಿದ್ದ ಹ್ಯೂಸ್ ಅವರು ಬೌನ್ಸರ್ ಸಿಯಾನ್ ಅಬ್ಬೋಟ್ ಅವರ ಚೆಂಡು ಹೆಲ್ಮೆಟ್ ಬದಲು ತಲೆಗೆ ಬಡಿದ ಪರಿಣಾಮವಾಗಿ ಕ್ರಿಕೆಟ್ ಮೈದಾನದಲ್ಲಿ ಮುಂಭಾಗಕ್ಕೆ ಕುಸಿದು ಬಿದ್ದಿದ್ದರು. ಸೈಂಟ್ ವಿನ್ಸೆಂಟ್ ಆಸ್ಪತ್ರೆಗೆ ಒಯ್ಯುವ ಮೊದಲು ಮೈದಾನದಲ್ಲೇ ಅವರಿಗೆ ಚಿಕಿತ್ಸೆ ನೀಡಲಾಗಿತ್ತು. ಆಸ್ಪತ್ರೆಯಲ್ಲಿ ಅವರಿಗೆ 90 ನಿಮಿಷ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಹ್ಯೂಸ್ ಅವರ ಗಾಯದ ವಿವರಗಳನ್ನು ವೈದ್ಯರು ನೀಡಲಿಲ್ಲ. ಆದರೆ ಆಸ್ಟ್ರೇಲಿಯನ್ಬ್ರಾಡ್ಕಾಸ್ಟಿಂಗ್ ಕಾಪೋರೇಷನ್ ಅವರ ತಲೆಬುರಡೆ ಶಿಥಿಲಗೊಂಡಿದೆ ಎಂದು ವರದಿ ಮಾಡಿತ್ತು. ಅವರಿಗೆ ಮೆದುಳಿನಲ್ಲಿ ವಿಪರೀತ ರಕ್ತಸ್ರಾವವಾಗಿತ್ತು ಎಂದು ಸಿಡ್ನಿ ಮಾರ್ನಿಂಗ್ ಹೆರಾಲ್ಡ್ ವರದಿ ಮಾಡಿತ್ತು. ಕ್ಯಾಪ್ಟನ್ ಮೈಕೆಲ್ ಕ್ಲಾರ್ಕ್ ಸೇರಿದಂತೆ ಆಸ್ಟ್ರೇಲಿಯಾದ ರಾಷ್ಟ್ರೀಯ ಕ್ರಿಕೆಟ್ ತಂಡದ ಸದಸ್ಯರು ಆಸ್ಪತ್ರೆಗೆ ಭೇಟಿ ನೀಡಿ, ದುಃಖಿತ ತಾಯಿ, ಸಹೋದರಿಗೆ ಸಾಂತ್ವನ ಹೇಳಿದ್ದರು. 2009ರಲ್ಲಿ 20ನೇ ವಯಸ್ಸಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಆಡುವ ಮೂಲಕ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣ ಮಾಡಿದ್ದ ಹ್ಯೂಸ್ ಈವರೆಗೆ 26 ಟೆಸ್ಟ್ಗಳಲ್ಲಿ ಆಡಿದ್ದರು. ತನ್ನ ಎರಡನೇ ಪಂದ್ಯದಲ್ಲಿಯೇ ಒಂದೇ ಟೆಸ್ಟ್ನಲ್ಲಿ ದ್ವಿಶತಕ ಭಾರಿಸಿದ ಅತ್ಯಂತ ಕಿರಿಯ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಹ್ಯಾಂಪ್ಶೈರ್, ಮಿಡ್ಲ್ಸೆಕ್ಸ್ ಮತ್ತು ವೋರಸೆಸ್ಟರ್ಶೈರ್ ಗಾಗಿ ಆಡಿದ್ದ ಅವರು 2013ರಲ್ಲಿ ಇಂಗ್ಲೆಂಡ್ ವಿರುದ್ಧ ಆಷಸ್ ಸರಣಿಯಲ್ಲಿ ಆಸ್ತೋನ್ ಅಗರ್ ಜೊತೆಗೆ 163ರನ್ ಗಳಿಸಿದ್ದರು.

2014: ಸಿಡ್ನಿ: ಫಿಲ್ ಹ್ಯೂಸ್ ಗಾಯ-ಸಾವಿನ ಪ್ರಕರಣದಿಂದಾಗಿ ನ್ಯೂ ಸೌತ್ ವೇಲ್ಸ್ ಹಾಗೂ ದಕ್ಷಿಣ ಆಸ್ಟ್ರೇಲಿಯಾ ನಡುವಿನ ಶೆಫೀಲ್ಡ್ ಶೀಲ್ಡ್ ಪಂದ್ಯ ಹಾಗೂ ಇತರ ದೇಶಿ ಪಂದ್ಯಗಳನ್ನು ಕ್ರಿಕೆಟ್ ಆಸ್ಟ್ರೇಲಿಯಾ ರದ್ದುಗೊಳಿಸಿತು.  'ನಾವು ದೇಶಿ ಆಟಗಾರರೊಂದಿಗೆ ಹಾಗೂ ಸ್ಥಳೀಯ ಕ್ರಿಕೆಟ್ ಮಂಡಳಿಯೊಂದಿಗೆ ಮಾತುಕತೆ ನಡೆಸಿದ್ದೇವೆ. ಹಾಗಾಗಿ ಸದ್ಯ ನಮ್ಮ ಆಟಗಾರರು ಕ್ರಿಕೆಟ್ ಆಡುವ ಸ್ಥಿತಿಯಲ್ಲಿಲ್ಲ.' ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಟೀಮ್ಫರ್ಫಾಮೆರ್ನ್ಸ್ ಮುಖ್ಯ ವ್ಯವಸ್ಥಾಪಕ ಪ್ಯಾಟ್ ಹೊವಾರ್ಡ್ ಅವರು ಫಿಲ್ ಹ್ಯೂಸ್ ಸಾವಿನ ಸುದ್ದಿ ಬರುವುದಕ್ಕೂ ಮುಂಚೆಯೇ ತಿಳಿಸಿದ್ದರು.

2014: ಸಿಡ್ನಿ: ಆಸ್ಟ್ರೇಲಿಯಾದ ಟೆಸ್ಟ್ ಬ್ಯಾಟ್ಸ್ಮನ್ ಫಿಲ್ ಹ್ಯೂಸ್ ಅವರು ಹೆಲ್ಮೆಟ್ ಧರಿಸಿದ್ದರೂ ಬೌನ್ಸರ್ನಿಂದ ಗಂಭೀರ ಏಟು ತಿಂದು ಸಾವನ್ನಪ್ಪಿದ ಪ್ರಕರಣ ಎಲ್ಲರ ಹುಬ್ಬೇರಿಸಿತು. ಆದರೆ, ಹ್ಯೂಸ್ ಹಳೆಯ ಮತ್ತು ಹಗುರವಾದ ಹೆಲ್ಮೆಟ್ ಧರಿಸಿದ್ದೇ ಆಪತ್ತಿಗೆ ಸಿಲುಕಿಕೊಳ್ಳಲು ಕಾರಣ ಎಂದು ಆ ಹೆಲ್ಮೆಟ್ನ ತಯಾರಕ ಕಂಪನಿ 'ಮಸುರಿ' ಸ್ಪಷ್ಟನೆ ನೀಡಿತು. ಹ್ಯೂಸ್ ಇತ್ತೀಚೆಗಿನ ತನ್ನ ಹೊಸ ಮಾಡೆಲ್ ಹೆಲ್ಮೆಟ್ ಬಳಸುತ್ತಿರಲಿಲ್ಲ. ಹಿಂದಿನ ಹೆಲ್ಮೆಟ್ನಲ್ಲಿ ತಲೆ ಮತ್ತು ಕುತ್ತಿಗೆಗೆ ಪೂರ್ಣ ರಕ್ಷಕವಚ ಇರಲಲ್ಲ ಎಂದು ಯುಕೆ ಮೂಲದ ಕಂಪನಿ ಹೇಳಿತು.. ಅದರ ಹೊಸ ಮಾಡೆಲ್ ಹೆಲ್ಮೆಟ್ ಕಳೆದ ವರ್ಷ ಆಗಸ್ಟ್ನಲ್ಲಿ ಬಿಡುಗಡೆಗೊಂಡಿತ್ತು. ಆದರೆ ಹೊಸ ಮಾಡೆಲ್ನಲ್ಲಿ ಹ್ಯೂಸ್ಗೆ ರಕ್ಷಣೆ ಸಿಗುತ್ತಿತ್ತೇ ಎಂಬ ಪ್ರಶ್ನೆಗೆ ಉತ್ತರಿಸಲು ಕಂಪನಿಯ ವಕ್ತಾರರು ನಿರಾಕರಿಸಿ, ಘಟನೆ ಸಂದರ್ಭ ಚೆಂಡು ಬಡಿದ ಕ್ಷಣದ ವೀಡಿಯೋ ಚಿತ್ರಣವನ್ನು ಅಧ್ಯಾಯನಕ್ಕೊಳಪಡಿಸುವುದಾಗಿ ತಿಳಿಸಿತು.. ಬೌನ್ಸರ್ ಎಸೆದ ವೇಗಿಗೆ ಕೌನ್ಸೆಲಿಂಗ್! ಹ್ಯೂಸ್ ಚೆಂಡು ಬಡಿದ ಬೆನ್ನಲ್ಲೇ ನೆಲಕ್ಕುಳಿದಾಗ ಮೊದಲು ಅವರ ಸಹಾಯಕ್ಕೆ ಆಗಮಿಸಿದವರೇ, ಬೌನ್ಸರ್ ಎಸೆದ ಯುವ ವೇಗಿ ಸೀನ್ ಅಬೋಟ್. ಆದರೆ, ಹ್ಯೂಸ್ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾಗ 22 ವರ್ಷದ ಅಬೋಟ್ ಆಘಾತದಿಂದ ಪರಿತಪಿಸಿದರು. ಇದಕ್ಕಾಗಿ ಅವರಿಗೆ ಕೌನ್ಸೆಲಿಂಗ್ ಮಾಡಲಾಯಿತು. ಈ ನಡುವೆ ಕ್ರಿಕೆಟ್ ಆಸ್ಟ್ರೇಲಿಯಾ, ಘಟನೆಗೆ ಅಬೋಟ್​ರನ್ನು ದೂರುವುದಿಲ್ಲ ಎಂದು ಹೇಳಿದೆ. ಜತೆಗೆ ಮಾಜಿ ವೇಗಿಗಳಾದ ಗ್ಲೆನ್ ಮೆಕ್​ಗ್ರಾಥ್, ಬ್ರೆಟ್ ಲೀ, ಇಂಗ್ಲೆಂಡ್​ನ ಸ್ಟುವರ್ಟ್ ಬ್ರಾಡ್ ಕೂಡ 'ಅಬೋಟ್​ರದ್ದು ಯಾವುದೇ ತಪ್ಪಿಲ್ಲ' ಎಂದು ಹೇಳಿದರು.. *ಕ್ರಿಕೆಟ್​ನಲ್ಲಿ ಗಾಯ, ಅಪಾಯ ಕ್ರಿಕೆಟ್ ಎಂದ ಮೇಲೆ ಗಾಯಗಳು ಸಾಮಾನ್ಯ. ಆದರೆ ಕೆಲವೊಮ್ಮೆ ಕ್ರಿಕೆಟಿಗರ ದುರದೃಷ್ಟ ಹೆಚ್ಚಿದಾಗ ಗಂಭೀರ ಗಾಯಗಳಾಗುತ್ತವೆ. ಕಳೆದ ಮಂಗಳವಾರ ಫಿಲಿಪ್ ಹ್ಯೂಸ್​ಗೆ ಅಂಥದ್ದೇ ದಿನವಾಗಿತ್ತು. ಬೌನ್ಸರ್ ಆಗಿ ಬಂದ ಚೆಂಡನ್ನು ಸರಿಯಾಗಿ ಅಂದಾಜಿಸದ ಅವರು ತಲೆಗೆ ಪೆಟ್ಟು ತಿಂದು ಪ್ರಜ್ಞೆ ಮರಳಿ ಬಾರದೆ  ನಿಧನರಾದರು.
 ಈ ಹಿಂದೆ ಇಂಥದ್ದೇ ಅಪಾಯಕ್ಕೆ ಸಿಲುಕಿದ ಕೆಲ ಕ್ರಿಕೆಟಿಗರ ವಿವರ ಇಲ್ಲಿದೆ... *ರಮಣ್ ಲಾಂಬಾ: ಭಾರತದ ಈ ಮಾಜಿ ಆಟಗಾರ 1998ರಲ್ಲಿ ಬಾಂಗ್ಲಾದೇಶದಲ್ಲಿ ಕ್ಲಬ್ ಪಂದ್ಯವೊಂದರಲ್ಲಿ ಫಾರ್ವರ್ಡ್ ಶಾರ್ಟ್ ಲೆಗ್​ನಲ್ಲಿ ಹೆಲ್ಮೆಟ್ ಧರಿಸದೆ ಫೀಲ್ಡಿಂಗ್ ನಡೆಸುತ್ತಿದ್ದಾಗ ಬ್ಯಾಟ್ಸ್​ಮನ್ ಹೊಡೆದ ಚೆಂಡಿನಲ್ಲಿ ತಲೆಗೆ ಗಂಭೀರ ಗಾಯಗೊಂಡಿದ್ದರು. ಇದು ಕ್ರಿಕೆಟ್ ಮೈದಾನದಲ್ಲಿನ ಅತ್ಯಂತ ಗಂಭೀರ ಸ್ವರೂಪದ ಗಾಯವಾಗಿತ್ತಲ್ಲದೆ 38ನೇ ವಯಸ್ಸಿನಲ್ಲೇ ಅವರ ಪ್ರಾಣ ತೆಗೆದಿತ್ತು. ದೆಹಲಿ ಆಟಗಾರ ರಮಣ್ ಭಾರತ ಪರ 4 ಟೆಸ್ಟ್, 32 ಏಕದಿನ ಪಂದ್ಯ ಆಡಿದ್ದರು. *ನಾರಿ ಕಂಟ್ರಾಕ್ಟರ್: 1961-62ರಲ್ಲಿ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಬಾರ್ಬಡೋಸ್ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಭಾರತ ತಂಡದ ಬ್ಯಾಟ್ಸ್​ಮನ್ ನಾರಿ ಕಂಟ್ರಾಕ್ಟರ್, ಆತಿಥೇಯ ತಂಡದ ವೇಗಿ ಚಾರ್ಲಿ ಗ್ರೀಫಿತ್ ಎಸೆತದಲ್ಲಿ ತಲೆಗೆ ಗಂಭೀರ ಪೆಟ್ಟು ತಿಂದಿದ್ದರು. ಚೆಂಡು ಬಡಿದ ವೇಗಕ್ಕೆ ಅವರ ಮೂಗು, ಕಿವಿಯಿಂದಲೂ ರಕ್ತ ಬಂದಿತ್ತು. ನಂತರ 2 ತುರ್ತ ಶಸ್ತ್ರಚಿಕಿತ್ಸೆ ನಡೆಸಿ ಮೆದುಳಿನಲ್ಲಿ ಹೆಪ್ಪುಗಟ್ಟಿದ್ದ ರಕ್ತ ತೆಗೆಯಲಾಗಿತ್ತು. 6 ದಿನಗಳ ಕಾಲ ಪ್ರಜ್ಞೆ ಕಳೆದುಕೊಂಡಿದ್ದ ಅವರ ನೆರವಿಗಾಗಿ ಹಲವು ಆಟಗಾರರು ರಕ್ತ ನೀಡಿದ್ದರು. ಬಳಿಕ ಕಂಟ್ರಾಕ್ಟರ್ ಚೇತರಿಸಿಕೊಂಡರೂ ಮತ್ತೆಂದು ಟೆಸ್ಟ್ ಕ್ರಿಕೆಟ್ ಆಡಲಿಲ್ಲ. *ಅಬ್ದುಲ್ ಅಜೀಜ್: ಪಾಕಿಸ್ತಾನದ ಕರಾಚಿ ತಂಡದ ಈ ವಿಕೆಟ್ ಕೀಪರ್ 1958-59ರಲ್ಲಿ ಖೈದ್ ಇ ಅಜಮ್​ಟೂರ್ನಿಯ ಫೈನಲ್​ನಲ್ಲಿ ವೇಗಿ ದಿಲ್ದಾವರ್ ಎಸೆತದಲ್ಲಿ ಎದೆಗೆ ಪೆಟ್ಟುತಿಂದು ನೆಲಕ್ಕುರುಳಿದರು. ಮೊದಲೇ ಎದೆ ನೋವು ಹೊಂದಿದ್ದ ಅವರು ಆಸ್ಪತ್ರೆಯ ಹಾದಿಯಲ್ಲಿ ಕೊನೆಯುಸಿರೆಳೆದರು. 2ನೇ ಇನಿಂಗ್ಸ್​ನ ಸ್ಕೋರ್ ಬೋರ್ಡ್​ನಲ್ಲಿ ಅವರ ಹೆಸರಿನ ಮುಂದೆ 'ಆಬ್ಸೆಂಟ್ ಡೆಡ್' ಎಂದು ನಮೂದಿಸಲಾಗಿತ್ತು. *ಜಸ್ಟಿನ್ ಲ್ಯಾಂಗರ್: 2005-06ರ ಸೆಂಚೂರಿಯನ್ ಟೆಸ್ಟ್ ಆಸೀಸ್ ಆರಂಭಿಕ ಜಸ್ಟಿನ್ ಲ್ಯಾಂಗರ್​ಗೆ 100ನೇ ಟೆಸ್ಟ್ ಆಗಿತ್ತು. ಆದರೆ ಪಂದ್ಯದ 2ನೇ ದಿನ ಆಸೀಸ್ ಇನಿಂಗ್ಸ್​ನ ಮೊದಲ ಎಸೆತದಲ್ಲೇ ದಕ್ಷಿಣ ಆಫ್ರಿಕಾ ವೇಗಿ ಮಖಾಯ ಎನ್​ಟಿನಿ ಎಸೆತದಲ್ಲಿ ತಲೆಗೆ ಗಂಭೀರ ಪೆಟ್ಟುತಿಂದರು. ಕೂಡಲೆ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಲ್ಲದೆ, 2 ಹೊಲಿಗೆ ಹಾಕಲಾಯಿತು. ಪಂದ್ಯದ ಉಳಿದ ಭಾಗದಲ್ಲಿ ಅವರು ಆಡಲಿಲ್ಲ. *ಮಾರ್ಕ್ ಬೌಷರ್: ದಕ್ಷಿಣ ಆಫ್ರಿಕಾದ ವಿಕೆಟ್ ಕೀಪರ್ ಮಾರ್ಕ್ ಬೌಷರ್ 2012ರಲ್ಲಿ ಸಾಮರ್​ಸೆಟ್ ವಿರುದ್ಧದ ಪಂದ್ಯದಲ್ಲಿ ಸ್ಪಿನ್ನರ್ ಇಮ್ರಾನ್ ತಾಹಿರ್​ರ ಗೂಗ್ಲಿ ಎಸೆತದಲ್ಲಿ ವಿಕೆಟ್ ಉರುಳಿದಾಗ ಬೇಲ್ಸ್ ಅವರ ಎಡಗಣ್ಣಿಗೆ ಬಡಿದಿತ್ತು. ನಂತರ ಕಣ್ಣಿನ ಶಸ್ತ್ರಚಿಕಿತ್ಸೆಗೆ ಒಳಗಾದರು. ಬೆನ್ನಲ್ಲೇ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ವಿದಾಯ ಘೊಷಿಸಿ ತೆರೆಮರೆಗೆ ಸರಿಯಬೇಕಾಯಿತು. 150 ಟೆಸ್ಟ್ ಆಡುವ ಹಂಬಲದಲ್ಲಿದ್ದ ಅವರು 147ನೇ ಟೆಸ್ಟ್​ಗೆ ನಿವೃತ್ತರಾದರು. *ಸಾಬಾ ಕರೀಂ: 2000ದಲ್ಲಿ ಢಾಕಾದಲ್ಲಿ ಏಷ್ಯಾಕಪ್​ನಲ್ಲಿ ಬಾಂಗ್ಲಾದೇಶ ವಿರುದ್ಧ ಪಂದ್ಯದಲ್ಲಿ ಭಾರತದ ವಿಕೆಟ್ ಕೀಪರ್ ಸಾಬಾ ಕರೀಂ ಸ್ಪಿನ್ನರ್ ಅನಿಲ್ ಕುಂಬ್ಳೆ ಎಸೆತದಲ್ಲಿ ಬಲಗಣ್ಣಿಗೆ ಏಟು ತಿಂದರು. 
ಇದರ ಬೆನ್ನಲ್ಲೇ ಅವರ ವೃತ್ತಿಜೀವನ ಕೊನೆಗೊಂಡಿತ್ತು. ಭಾರತಕ್ಕೆ ಮರಳಿ ಕಣ್ಣಿನ ಶಸ್ತ್ರಚಿಕಿತ್ಸೆಗೆ ಒಳಗಾದರೂ ಅವರಿಗೆ ಪೂರ್ಣ ದೃಷ್ಟಿ ಮರಳಲಿಲ್ಲ.


2014: ನವದೆಹಲಿ: ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಹಗರಣಕ್ಕೆ ಸಂಬಂಧಿಸಿದಂತೆ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಅನರ್ಹಗೊಳಿಸುವಂತೆ ಸುಪ್ರೀಂ ಕೋರ್ಟ್ ಸೂಚನೆ ನೀಡಿತು.. ಕೋರ್ಟ್ ಶ್ರೀನಿವಾಸನ್ಗೆ ಚೆನ್ನೈ ಸೂಪರ್ ಕಿಂಗ್ಸ್ ಮಾಲೀಕರ ಮತ್ತು ಇಂಡಿಯಾ ಸಿಮೆಂಟ್ಸ್ನ ಶೇರುದಾರರು ಮತ್ತು ಆಡಳಿತ ಮಂಡಳಿ ಸದಸ್ಯರ ಮಾಹಿತಿ ಒದಗಿಸಲು ಸೂಚಿಸಿತು. ಬಿಸಿಸಿಐ ಚುನಾವಣಾ ಪ್ರಕ್ರಿಯೆಯನ್ನು ಮುಂದುವರೆಸಬಹುದು ಆದರೆ ಮುದ್ಗಲ್ ಸಮಿತಿ ಸಲ್ಲಿಸಿರುವ ವರದಿಯಲ್ಲಿ ಹೆಸರಿರುವವರು ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ ಮತ್ತು ಬಿಸಿಸಿಎಂ ಎಂದು ಕೋರ್ಟ್ ತಿಳಿಸಿತು.. ಡಿ.17ರಂದು ಬಿಸಿಸಿಐ ಅಧ್ಯಕ್ಷ ಗಾದಿಗೆ ನಡೆಯಲಿರುವ ಚುನಾವಣೆಗೆ ಬೆಂಗಾಲ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಜಗಮೋಹನ್ ದಾಲ್ಮಿಯ ನಾಮಪತ್ರ ಸಲ್ಲಿಸಲಿದ್ದಾರೆ. 3ನೇ ಬಾರಿಗೆ ಅಧ್ಯಕ್ಷ ಗಾದಿಯ ಮೇಲೆ ಕಣ್ಣಿಟ್ಟಿರುವ ದಾಲ್ಮಿಯ ಪೂರ್ವ ವಲಯದ ಕ್ರಿಕೆಟ್ ಅಕಾಡೆಮಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದಾರೆ ಎಂದು ವರದಿಗಳು ತಿಳಿಸಿದವು.

2014:  ಕ್ವಾಲಾಲಂಪುರ: ಭಾರತದ ಖ್ಯಾತ ಬ್ಯಾಡ್ಮಿಂಟನ್ ಆಟಗಾರ ಕಿಡಂಬಿ ಶ್ರೀಕಾಂತ್ ವಿಶ್ವ ಬ್ಯಾಡ್ಮಿಂಟನ್ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ 2 ಸ್ಥಾನ ಮೇಲೆರಿ 8 ಸ್ಥಾನ ಪಡೆದುಕೊಂಡರು. 21 ವರ್ಷದ ಶ್ರೀಕಾಂತ್ ಇತ್ತೀಚೆಗೆ ಹಾಂಗ್ಕಾಂಗ್ ಒಪನ್ ಚಾಂಪಿಯನ್ಷಿಪ್ನಲ್ಲಿ ಸಮೀಫೈನಲ್ ತಲುಪಿದ್ದರು. ಭಾರತದ ಮತ್ತೊಬ್ಬರ ಬ್ಯಾಡ್ಮಿಂಟನ್ ಆಟಗಾರ ಪರುಪಲ್ಲಿ ಕಶ್ಯಪ್ 16 ನೇ ಸ್ಥಾನ ಪಡೆದರು. ಮಹಿಳೆಯರ ವಿಭಾಗದಲ್ಲಿ ಒಲಂಪಿಕ್ ಕಂಚಿನ ಪದಕ ವಿಜೇತೆ ಸೈನಾ ನೆಹ್ವಾಲ್ 4ನೇ ಸ್ಥಾನದಲ್ಲಿ ಮುಂದುವರೆದರು. 2 ಸಲ ವಿಶ್ವಚಾಂಪಿಯನ್ಷಿಪ್ ಕಂಚಿನ ಪದಕ ವಿಜೇತೆ ಪಿ.ವಿ.ಸಿಂಧು 11ನೇ ಸ್ಥಾನಕ್ಕೆ ಕುಸಿದರು. ಮಹಿಳೆಯ ಡಬಲ್ಸ್ ವಿಭಾಗದಲ್ಲಿ 2011ರ ವಿಶ್ವ ಚಾಂಪಿಯನ್ಷಿಪ್ ಕಂಚು ಪದಕ ವಿಜೇತ ಜೋಡಿ ಜ್ವಾಲಾ ಗುಟ್ಟಾ ಮತ್ತು ಅಶ್ವಿನಿ ಪೊನ್ನಪ್ಪ ಜೋಡಿ 20ನೇ ಸ್ಥಾನಕ್ಕೆ ಕುಸಿದರು.

2014:  ಜಮ್ಮು: ಜಮ್ಮು ಮತ್ತು ಕಾಶ್ಮೀರದ ಅಂತಾರಾಷ್ಟ್ರೀಯ ಗಡಿಯ ಬಳಿ ಭದ್ರತಾ ಪಡೆಗಳು ಮತ್ತು ಉಗ್ರಗಾಮಿಗಳ ಮಧ್ಯೆ ಸಂಭವಿಸಿದ ಭೀಕರ ಗುಂಡಿನ ಕಾಳಗದಲ್ಲಿ ಒಬ್ಬ ಸೈನಿಕ ಸೇರಿ ಒಟ್ಟು 8 ಜನ ಮೃತರಾದರು. ಗುಂಡಿನ ಕಾಳಗ ಈದಿನ ಮಧ್ಯಾಹ್ನ 3 ಗಂಟೆ ಸುಮಾರಿಗೆ ಸ್ಥಗಿತಗೊಂಡಿತು.. ಮೃತರಲ್ಲಿ ಒಬ್ಬ ಸೈನಿಕ, 3 ಜನ ನಾಗರಿಕರು ಮತ್ತು ನಾಲ್ವರು ಉಗ್ರಗಾಮಿಗಳು ಸೇರಿದ್ದಾರೆ  ನಾಲ್ವರು ಸೈನಿಕರು ಗಾಯಗೊಂಡರು.  ರಾಜೌರಿ ಜಿಲ್ಲೆಯ ಅರ್ನಿಯಾ ಗಡಿ ವಿಭಾಗದಲ್ಲಿ ಗಡಿ ನಿಯಂತ್ರಣ ರೇಖೆ ಬಳಿ ಉಗ್ರಗಾಮಿಗಳು ಗಡಿ ನಿಯಂತ್ರಣ ರೇಖೆಯಿಂದ ಒಳ ನುಸುಳಿದಾಗ ಈ ಘಟನೆ ಘಟಿಸಿತು. 7-8 ಜನರಿದ್ದ ಉಗ್ರಗಾಮಿಗಳ ಗುಂಪು ನಾಗರಿಕ ವಾಹನಗಳ ಮೇಲೆ ದಾಳಿ ನಡೆಸಿದರು. ನಂತರ ಪಿಂಡ್ ಕೋಟೆ ಹಳ್ಳಿಯಲ್ಲಿ ಸೇನೆ ನಿರ್ವಿುಸಿದ್ದ ಹಳೆಯ ಬಂಕರ್ನಲ್ಲಿ ಅವಿತಿದ್ದರು. ಸೇನೆ ಮತ್ತು ಬಿಎಸ್ಎಫ್ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ 4 ಉಗ್ರಗಾಮಿಗಳು ಹತರಾದರು. ಪ್ರಧಾನಿ ನರೇಂದ್ರ ಮೋದಿ ಅವರು ನವೆಂಬರ್ 28ರಂದು ಜಮ್ಮು ಪ್ರದೇಶಕ್ಕೆ ವಿಧಾನಸಭಾ ಚುನಾವಣಾ ಪ್ರಚಾರಕ್ಕಾಗಿ ಬರಲಿದ್ದು, ಅದಕ್ಕೆ ಮುನ್ನ ಉಗ್ರಗಾಮಿಗಳಿಂದ ಈ ರಕ್ತಪಾತ ನಡೆದಿದೆ ಎಂದು ವರದಿ ತಿಳಿಸಿತು. ಮೂರರಿಂದ ನಾಲ್ಕು ಮಂದಿ ಉಗ್ರಗಾಮಿಗಳು ಇಲ್ಲಿ ಭಾರತದೊಳಕ್ಕೆ ನುಸುಳುವ ಯತ್ನ ಮಾಡಿದ್ದರು ಎಂದು ಸೇನಾ ಮೂಲಗಳು ಹೇಳಿದವು. ಪಾಕಿಸ್ತಾನ್ ರೇಂಜರ್ಗಳು ಉಗ್ರಗಾಮಿಗಳ ನುಸುಳಿವಿಕೆ ಯತ್ನಕ್ಕೆ ಬೆಂಬಲ ನೀಡಿದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

2008: ಭಯೋತ್ಪಾದಕರ ದಾಳಿಯಿಂದ ತತ್ತರಿಸಿದ ಮುಂಬೈಯಲ್ಲಿ ಈದಿನ ಇಡೀ ಭದ್ರತಾ ಪಡೆಗಳಿಂದ ಕಾರ್ಯಾಚರಣೆ ನಡೆಯಿತು. ಆದರೆ ಎರಡು ಪಂಚತಾರಾ ಹೊಟೇಲುಗಳಾದ ತಾಜ್ ಮತ್ತು ಒಬೆರಾಯ್ ಟ್ರೈಡಂಟ್‌ಗಳನ್ನು ಉಗ್ರರಿಂದ ಮುಕ್ತಗೊಳಿಸುವುದು ಅಸಾಧ್ಯವಾಯಿತು. ಉಗ್ರರ ಅಟ್ಟಹಾಸಕ್ಕೆ 14 ಮಂದಿ ಪೊಲೀಸರ ಸಹಿತ 127 ಮಂದಿ ಮೃತರಾಗಿ 327ಕ್ಕೂ ಅಧಿಕ ಮಂದಿ ಗಾಯಗೊಂಡರು. 13 ಮಂದಿ ಉಗ್ರರನ್ನೂ ಕೊಲ್ಲಲಾಯಿತು. ಆದರೆ, 22 ಗಂಟೆಗಳ ಕಾರ್ಯಾಚರಣೆ ಬಳಿಕವೂ 15ರಿಂದ 20ರಷ್ಟು ಸಂಖ್ಯೆಯಲ್ಲಿದ್ದ ಭಯೋತ್ಪಾದಕರು ಟ್ರೈಡೆಂಟ್ ಹೊಟೇಲ್‌ನಲ್ಲಿ  ಸುಮಾರು 200 ಜನರನ್ನು ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡರು. ಅವರನ್ನು ಸುರಕ್ಷಿತವಾಗಿ ಹೊರಗೆ ತರುವ ಕಾರ್ಯದಲ್ಲಿ ಸೇನೆ, ಎನ್‌ಎಸ್‌ಜಿ ಕಮಾಂಡೊಗಳ ಸಹಿತ ಭದ್ರತಾ ಪಡೆಗಳು ಸಂಘಟಿತ ಯತ್ನ ನಡೆಸಿದವು. ಈದಿನ ರಾತ್ರಿ 9ರ ಹೊತ್ತಿಗೆ ಗುಜರಾತಿನ ಒಖಾ ಬಳಿ ಉಗ್ರರು ಬಳಸಿದ ಎರಡೂ ಹಡಗುಗಳು (ಅಲ್ಫಾ- ಕಬೀರ್) ಪತ್ತೆಯಾದವು. ರಾತ್ರಿ 10.30 ರ ಹೊತ್ತಿಗೆ ನಾರಿಮನ್ ಹೌಸಿನಿಂದ ಕೆಲವರು ಒತ್ತೆಯಾಳುಗಳನ್ನು ಬಿಡಿಸಿಕೊಂಡು ಬರಲಾಯಿತು.

2008: ಮಂಡಲ್ 'ರಾಜ' ಎಂದೇ ಖ್ಯಾತಿ ಪಡೆದಿದ್ದ ಮಾಜಿ ಪ್ರಧಾನಿ ವಿಶ್ವನಾಥ ಪ್ರತಾಪ್ ಸಿಂಗ್ (77) ಈದಿನ ಮಧ್ಯಾಹ್ನ 2.45ಕ್ಕೆ ನವದೆಹಲಿಯ ಅಪೋಲೋ ಆಸ್ಪತ್ರೆಯಲ್ಲಿ ನಿಧನರಾದರು.  ಅನೇಕ ಏಳು ಬೀಳುಗಳ ನಡುವೆ ಅಲಹಾಬಾದಿನ ಸ್ಥಳೀಯ ರಾಜಕಾರಣದಿಂದ ಪ್ರಧಾನಿ ಪಟ್ಟಕ್ಕೆ ನಿಷ್ಠುರ  ವರ್ಚಸ್ವಿ ನಾಯಕರೆನಿಸಿದ್ದ ವಿ. ಪಿ. ಸಿಂಗ್ 17 ವರ್ಷಗಳಿಂದ ರಕ್ತ ಕ್ಯಾನ್ಸರಿನಿಂದ ಬಳಲಿದ್ದರು. ಕಳೆದ ಆರು ತಿಂಗಳಿಂದ ತೀವ್ರ ಅಸ್ವಸ್ಥರಾಗಿದ್ದ ಸಿಂಗ್ ಅಪೊಲೊ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಬಲಪಂಥೀಯ ಸಿದ್ಧಾಂತದ ವಿರೋಧಿಯಾಗಿದ್ದರೂ ಬಿಜೆಪಿ ಬೆಂಬಲ ಪಡೆದು ಕಾಂಗ್ರೆಸ್ಸೇತರ ಮೊದಲ ಮೈತ್ರಿ ಸರ್ಕಾರ ರಚಿಸಿದ  ಪ್ರಧಾನಿ ಎಂಬ ಹೆಗ್ಗಳಿಕೆ ಅವರದಾಗಿತ್ತು. ದೇಶದ ರಾಜಕೀಯ ಇತಿಹಾಸದಲ್ಲಿ ಕಾಂಗ್ರೆಸ್ ವಿರೋಧಿ ಹೋರಾಟದ ಹೊಸ ಅಧ್ಯಾಯ ಆರಂಭಿಸಿದ ಕೀರ್ತಿಯೂ ಅವರದೇ. ರಾಷ್ಟ್ರದ ರಾಜಕಾರಣವನ್ನು ನೆಹರು ಅವರು ಆವರಿಸಿದ್ದಾಗಲೇ, ಕಾಂಗ್ರೆಸ್ಸಿನ ಸಾಮಾನ್ಯ ಕಾರ್ಯಕರ್ತರಾಗಿ ಸಕ್ರಿಯ ರಾಜಕಾರಣಕ್ಕೆ ಸಿಂಗ್ ಕಾಲಿಟ್ಟಿದ್ದರು. ಆರಂಭದಲ್ಲಿ ಅಲಹಾಬಾದ್ ಸ್ಥಳೀಯ ಸಂಸ್ಥೆಯಿಂದ ಚುನಾವಣೆ ಎದುರಿಸಿದ ಅವರು ಬಹುಬೇಗನೇ ಕಾಂಗ್ರೆಸ್ಸಿನ ನಾಯಕರಾಗಿ ಹೊರಹೊಮ್ಮಿದರು. ಉತ್ತರ ಪ್ರದೇಶದಲ್ಲಿ 1980ರ ವಿಧಾನ ಸಭಾ ಚುನಾವಣೆಯಲ್ಲಿ ಜನತಾ ಪಕ್ಷ ಸೋಲುಂಡು, ಕಾಂಗ್ರೆಸ್ ಬಹುಮತಕ್ಕೆ ಬಂದಾಗ ಅಂದಿನ ಕಾಂಗ್ರೆಸ್ಸಿನ ಅಧಿ ನಾಯಕಿ ಇಂದಿರಾಗಾಂಧಿ, ಸಿಂಗ್ ಅವರನ್ನು ಮುಖ್ಯಮಂತ್ರಿಯಾಗಿ ನೇಮಕ ಮಾಡಿದರು. 1984ರ ಮಹಾ ಚುನಾವಣೆಯಲ್ಲಿ ಜಯಭೇರಿ ಬಾರಿಸಿದ ಕಾಂಗ್ರೆಸ್ ನೇತೃತ್ವವನ್ನು ರಾಜೀವ್ ಗಾಂಧಿ ವಹಿಸಿದ ಮೇಲೆ ಅವರ ಸರ್ಕಾರದಲ್ಲಿ ಹಣಕಾಸು ಸಚಿವರಾಗಿ ಕೇಂದ್ರ ಸಂಪುಟ ಸೇರಿದರು.  ಚಿನ್ನದ ಮೇಲಿನ ತೆರಿಗೆ ಕಡಿಮೆ ಮಾಡಿ ಕಳ್ಳಸಾಗಣೆಗೆ ಕಡಿವಾಣ ಹಾಕಿದರು. ನಂತರ ಅವರಿಗೆ ರಕ್ಷಣಾ ಖಾತೆ ವಹಿಸಲಾಯಿತು. ಇದೇ ಸಂದರ್ಭದಲ್ಲಿ ರಕ್ಷಣಾ ಸಲಕರಣೆ ಖರೀದಿ ವೇಳೆ ನಡೆದ ಬೊಫೋರ್ಸ್ ಫಿರಂಗಿ ಹಗರಣದ ತನಿಖೆಗೆ ಮುಂದಾದ ಹಿನ್ನೆಲೆಯಲ್ಲಿ ರಾಜೀವ್ ಕೆಂಗಣ್ಣಿಗೆ ಗುರಿಯಾಗಿ ಸಚಿವ ಸಂಪುಟದಿಂದ ಹೊರಬರಬೇಕಾಯಿತು. ಇದರಿಂದ ಅಸಮಾಧಾನಗೊಂಡ ಸಿಂಗ್ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಅಲಹಾಬಾದ್ ಕ್ಷೇತ್ರದ ಉಪ ಚುನಾವಣೆಯಲ್ಲಿ ಮರು ಆಯ್ಕೆಯಾದರು. ಲೋಕನಾಯಕ ಜಯಪ್ರಕಾಶ್ ನಾರಾಯಣ್ ಜನ್ಮ ದಿನಾಚರಣೆ ಅಂಗವಾಗಿ 1988ರಲ್ಲಿ ಜನಮೋರ್ಚಾ, ಜನತಾ ಪಕ್ಷ, ಲೋಕದಳ, ಕಾಂಗ್ರೆಸ್ (ಎಸ್) ಮೊದಲಾದ ಪಕ್ಷಗಳನ್ನು ಒಂದಾಗಿಸಿ ಜನತಾದಳವನ್ನು ವಿ.ಪಿ. ಹುಟ್ಟುಹಾಕಿದರು. ಜನತಾದಳದ ರಾಷ್ಟ್ರೀಯ ಅಧ್ಯಕ್ಷರಾದ ಸಿಂಗ್ 1989ರ ಚುನಾವಣೆಯಲ್ಲಿ ಬಿಜೆಪಿಯ ಬಾಹ್ಯ ಬೆಂಬಲ ಪಡೆದು ಪ್ರಧಾನಿ ಸ್ಥಾನಕ್ಕೆ ಏರಿದರು. ಆದರೆ, ಬಲಪಂಥೀಯ ಚಿಂತನೆಯ ಮೂಲಭೂತವಾದಿ ಹಿಂದೂ ಸಂಘಟನೆಗಳ ಅಯೋಧ್ಯೆ ರಾಮಜನ್ಮ ಭೂಮಿ ವಿವಾದದಲ್ಲಿ ರಾಜಿಯಿಲ್ಲದ ಹೋರಾಟ ನಡೆಸಿದರು. ರಾಮಜನ್ಮ ಭೂಮಿ ರಥಯಾತ್ರೆ ನಡೆಸಿದ್ದ ಎಲ್.ಕೆ. ಅಡ್ವಾಣಿ ಸೇರಿದಂತೆ ಪ್ರಮುಖರ ಬಂಧನಕ್ಕೆ ಮುಂದಾದ ಹಿನ್ನೆಲೆಯಲ್ಲಿ ಬಿಜೆಪಿ ತನ್ನ ಬೆಂಬಲ ಹಿಂದಕ್ಕೆ ಪಡೆದದ್ದರಿಂದ ವರ್ಷದೊಳಗೆ ಸಿಂಗ್ ನೇತೃತ್ವದ ಸರ್ಕಾರ ಕೆಳಗಿಳಿಯಿತು. ಇತರ ಹಿಂದುಳಿದ ವರ್ಗಗಳಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡಬೇಕು ಎಂದು ಶಿಫಾರಸ್ಸು ಮಾಡಿದ ಮಂಡಲ್ ವರದಿಯನ್ನು ಮೊತ್ತ ಮೊದಲ ಬಾರಿಗೆ ಅಂಗೀಕರಿಸಿದ ಸಿಂಗ್ ಹಿಂದುಳಿದವರ ಕಲ್ಯಾಣಕ್ಕೆ ಮೀಸಲು ಅನಿವಾರ್ಯ ಎಂಬುದನ್ನು ಪ್ರತಿಪಾದಿಸಿದರು. ಆದರೆ, ಮಂಡಲ್ ವರದಿಯನ್ನು ಅನುಷ್ಠಾನಗೊಳಿಸಲು ಅವರಿಂದ ಸಾಧ್ಯವಾಗಲಿಲ್ಲ. 2-12-1989 ರಿಂದ  10-11-1990 ರವರೆಗೆ ಪ್ರಧಾನಿಯಾಗಿದ್ದ ವಿ.ಪಿ. ಸಿಂಗ್ ಹಲವಾರು ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಿದರು. ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ಅವರ ಸಂಪುಟದ ರಕ್ಷಣಾ ಸಚಿವ ಮುಫ್ತಿ ಮೊಹಮ್ಮದ್ ಸಹೀದ್ ಅವರ ಮಗಳನ್ನು ಉಗ್ರರು ಅಪಹರಿಸಿದ್ದ ಪ್ರಕರಣದಲ್ಲಿ, ಬಂಧಿತ ಉಗ್ರರನ್ನು ಬಿಡುಗಡೆಗೊಳಿಸಿ ಆಕೆಯನ್ನು ಸುರಕ್ಷಿತವಾಗಿ ಬಿಡುಗಡೆಗೊಳಿಸುವಲ್ಲಿ ಮಹತ್ವದ ಪಾತ್ರವಹಿಸಿದ್ದರು. ವಿವಾದಿತ ನಿವೃತ್ತ ಅಧಿಕಾರಿ ಜಗ್‌ಮೋಹನ್ ಅವರನ್ನು ಜಮ್ಮು ಕಾಶ್ಮೀರದ ರಾಜ್ಯಪಾಲರನ್ನಾಗಿ ನೇಮಿಸಿದ ಸಂದರ್ಭದಲ್ಲಿಯೂ ವಿ.ಪಿ. ಸಿಂಗ್ ಸಾಕಷ್ಟು ವಿರೋಧ ಎದುರಿಸಿದ್ದರು.

2008: ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ವಿರಾಜಪೇಟೆಯಿಂದ ಬೆಂಗಳೂರಿಗೆ ಬರುತ್ತಿದ್ದ ಬಸ್ಸು ನಸುಕಿನ 3.30ರ ಸುಮಾರಿಗೆ ದೊಡ್ಡಮಳೂರಿನ ಬಳಿ ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಪರಿಣಾಮವಾಗಿ 9 ಜನ ಮೃತರಾದರು.

2008: ಬಂಗಾಳ ಕೊಲ್ಲಿಯ ನೈಋತ್ಯ ಭಾಗದಲ್ಲಿ ಒಂದು ವಾರದಿಂದ ಬಲಗೊಂಡ 'ನಿಶಾ' ಚಂಡಮಾರುತಕ್ಕೆ ತಮಿಳುನಾಡಿನಲ್ಲಿ ಬಲಿಯಾದವರ ಸಂಖ್ಯೆ 51ಕ್ಕೆ ಏರಿತು.

2007: ಸಂಸತ್ತಿನಲ್ಲಿ ಪ್ರಶ್ನೆ ಕೇಳಲು ಲಂಚ ಸ್ವೀಕರಿಸುವುದು ಗಂಭೀರ ಅಪರಾಧ ಎಂದು ಅಭಿಪ್ರಾಯಪಟ್ಟ ದೆಹಲಿ ಹೈಕೋರ್ಟ್, ಈ ಹಗರಣದಲ್ಲಿ ಆರೋಪ ಎದುರಿಸುತ್ತಿರುವ 11 ಸಂಸದರ ಪಾತ್ರ ಅರಿಯಲು ತನಿಖೆ ಆರಂಭಿಸುವಂತೆ ದೆಹಲಿ ಪೊಲೀಸರಿಗೆ ಸೂಚನೆ ನೀಡಿತು. ಪ್ರಶ್ನೆ ಕೇಳಲು ಲಂಚ ಪಡೆಯುವ ಮೂಲಕ ಈ ಹಗರಣದಲ್ಲಿ ನೇರವಾಗಿ ಭಾಗಿಯಾಗಿರುವವರು ಮತ್ತು ದಲ್ಲಾಳಿಗಳ  ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಬೇಕು ಮತ್ತು ತಪ್ಪಿತಸ್ಥರಿಗೆ ಕಾನೂನಿನ ಪ್ರಕಾರ ಶಿಕ್ಷೆ ವಿಧಿಸಬೇಕು ಎಂದು ನ್ಯಾಯಮೂರ್ತಿ ಎಸ್.ಎನ್.ಧಿಂಗ್ರಾ ಆದೇಶಿಸಿದರು. ಮಧ್ಯವರ್ತಿಗಳ ಮೂಲಕ ಮೂಲಕ ಹಣ ಪಡೆದು ಸಂಸತ್ತಿನಲ್ಲಿ ಪ್ರಶ್ನೆ ಕೇಳಿದ ವಿಚಾರ ಭ್ರಷ್ಟಾಚಾರ ನಿಗ್ರಹ ಕಾಯ್ದೆ ವ್ಯಾಪ್ತಿಗೆ ಬರುತ್ತದೆ ಎಂದು ನ್ಯಾಯಾಲಯ ಹೇಳಿತು.

2007: 1993ರ ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿಯಾಗಿ ಯೆರವಾಡ  ಜೈಲಿನಲ್ಲಿದ್ದ ಬಾಲಿವುಡ್ ನಟ ಸಂಜಯ ದತ್ ಅವರಿಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿತು. ವಿಶೇಷ ಟಾಡಾ ನ್ಯಾಯಾಲಯವು ಶಸ್ತ್ರಾಸ್ತ್ರ ನಿಷೇಧ ಕಾಯ್ದೆಯಡಿ ದತ್ ಅವರಿಗೆ 6 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ದತ್ ಅವರಲ್ಲದೆ ಇತರ 17 ಮಂದಿಗೂ ಸುಪ್ರೀಂ ಕೋರ್ಟ್ ಜಾಮೀನು ನೀಡಿತು.

2007: ಉಗ್ರವಾದಿಗಳ ವಶದಲ್ಲಿದ್ದ ಪಾಕಿಸ್ಥಾನದ ವಾಯವ್ಯ ಭಾಗದ ಸ್ವಾತ್ ಕಣಿವೆ ಪ್ರದೇಶದಲ್ಲಿ ಅಕ್ರಮವಾಗಿ ಪ್ರಸರಣ ಮಾಡುತ್ತಿದ್ದ ಎಫ್ ಎಂ ವಾಹಿನಿ ಮುಲ್ಲಾ ರೇಡಿಯೋ ಕೇಂದ್ರವನ್ನು ಪಾಕಿಸ್ಥಾನಿ ಸೇನಾಪಡೆ ವಶಪಡಿಸಿಕೊಂಡಿತು. ತಾಲಿಬಾನ್ ಪರವಾದ ಸಾಹಿತ್ಯವನ್ನು ಪ್ರಸಾರ ಮಾಡುತ್ತಿದ್ದ ಈ ವಾಹಿನಿಯನ್ನು ಮೌಲಾನ ಫಾಜ್ಲುಲ್ಲ ನಡೆಸುತ್ತಿದ್ದ. ಈತ ಈ ವಾಹಿನಿಯಲ್ಲಿ ಜೆಹಾದ್ ಪರವಾದ ನಿಲುವನ್ನು ಪ್ರಸಾರ ಮಾಡುತ್ತಿದ್ದ. ಈದಿನ ಕೂಡಾ ಅದರಲ್ಲಿ ಇಸ್ಲಾಮಿಕ್ ಕಾನೂನು ಜಾರಿಗೊಳಿಸುವ ಬಗ್ಗೆ  ರೇಡಿಯೋ ಪ್ರಸಾರ ಮಾಡಿತ್ತು.

2007: 1992ರಲ್ಲಿ ಅಧಿಕಾರ ಪಡೆಯಲು ಸಂವಿಧಾನವನ್ನು ಮೂಲೆ ಗುಂಪು ಮಾಡಿ ಫ್ಯೂಜಿಮೊ ಅವರಿಗೆ ನೆರವಾದ ಹತ್ತು ಮಂದಿ ಸಚಿವರಿಗೆ ಪೆರುವಿನ ಉಚ್ಚನ್ಯಾಯಾಲಯ ಶಿಕ್ಷೆ ವಿಧಿಸಿತು. ಆಂತರಿಕ ವ್ಯವಹಾರಗಳ ಮಾಜಿ ಸಚಿವ ಜಾನ್ ಬ್ರಿಯೊನ್ಸ್ ಡಾವಿಲ್ಲಾ ಅವರಿಗೆ 10 ವರ್ಷಗಳ ಸೆರೆವಾಸ, ಉಳಿದ ಒಂಬತ್ತು ಮಂದಿ ಸಚಿವರಿಗೆ ತಲಾ 4 ವರ್ಷಗಳ ಸೆರೆವಾಸದ ವಾಸದ ಶಿಕ್ಷೆಯನ್ನು ಉಚ್ಚ ನ್ಯಾಯಾಲಯ ವಿಧಿಸಿತು.

2007: ಬಾಂಗ್ಲಾದೇಶದ ವಿವಾದಾತ್ಮಕ ಲೇಖಕಿ ತಸ್ಲಿಮಾ ನಸ್ರೀನ್ ಈದಿನ ರಾತ್ರಿ ದೆಹಲಿಯಿಂದ  ಬಿಗಿ ಭದ್ರತೆಯ ನಡುವೆ ಅಜ್ಞಾತ ಸ್ಥಳಕ್ಕೆ ತೆರಳಿದರು. ಕೇಂದ್ರ ಸಚಿವ ಸಂಪುಟ ಸಭೆಯ ತರುವಾಯ ಕೆಲವೇ ಕ್ಷಣಗಳಲ್ಲಿ ನಸ್ರೀನ್ ಅವರಿಗೆ ಬಿಗಿ ಭದ್ರತೆ ಒದಗಿಸುವ ತೀರ್ಮಾನ ಸರ್ಕಾರದಿಂದ ಹೊರಬಿತ್ತು. ನಸ್ರೀನ್ ಮೂರು ವರ್ಷಗಳಿಂದ ಕೋಲ್ಕತ್ತದಲ್ಲಿ ನೆಲೆಸಿದ್ದರು. ಆದರೆ ಮುಸ್ಲಿಂ ಸಮುದಾಯದ ವಿರೋಧದ ಕಾರಣ ಅಲ್ಲಿನ ಸರ್ಕಾರ ನಸ್ರೀನ್ ಅವರನ್ನು ಜೈಪುರಕ್ಕೆ ಕಳುಹಿಸಿತ್ತು. ಅಲ್ಲಿಯೂ ಅವರ ವಿರುದ್ಧ ಪ್ರತಿಭಟನೆಗಳು ಪ್ರಾರಂಭವಾದಾಗ ಅವರ ವಾಸ್ತವ್ಯ ಅಲ್ಲಿಂದ ದೆಹಲಿಗೆ ವರ್ಗಾವಣೆಗೊಂಡಿತ್ತು.

2007: ಗೃಹೋಪಯೋಗಿ ಉಪಕರಣಗಳ ತಯಾರಿಕೆಯಲ್ಲಿ ಮುಂಚೂಣಯಲ್ಲಿ ಇರುವ ವಿಡಿಯೊಕಾನ್,  `ಜಾಗತಿಕ ಸ್ಯಾಪ್ ಏಸ್-2007' ಪ್ರಶಸ್ತಿಗೆ ಭಾಜನವಾಯಿತು. ವಿಡಿಯೊಕಾನ್ ಅನೇಕ ಗ್ರಾಹಕ ಸ್ನೇಹಿ ತಂತ್ರಜ್ಞಾನ ಅಳವಡಿಸಿಕೊಂಡಿರುವ ದೇಶದ ಪ್ರಥಮ ಕಂಪನಿ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಪ್ರಶಸ್ತಿ ಆಯ್ಕೆ ಪಟ್ಟಿಯಲ್ಲಿದ್ದ ಒಟ್ಟು 120 ದೇಶಗಳ 34,600 ಸಂಸ್ಥೆಗಳ ತೀವ್ರ ಸ್ಪರ್ಧೆಯಲ್ಲಿ ಈ  ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.

2007: ಜಾಗತಿಕ ವಾಣಿಜ್ಯ ಪತ್ರಿಕೆ  `ಫಾರ್ಚೂನ್' ಪಟ್ಟಿ ಮಾಡಿದ ವಿಶ್ವದ ಅತಿ ಪ್ರಭಾವಿ ಉದ್ಯಮಿಗಳ ಪಟ್ಟಿಯಲ್ಲಿ ಟಾಟಾ ಸಮೂಹದ ಉದ್ದಿಮೆಗಳ ಮುಖ್ಯಸ್ಥರಾದ ರತನ್ ಟಾಟಾ, ಭಾರತೀಯ ಮೂಲದ ಉಕ್ಕು ಉದ್ಯಮಿ ಲಕ್ಷ್ಮೀ ಮಿತ್ತಲ್, ಪೆಪ್ಸಿ ಕಂಪೆನಿ ಸಿಇಒ ಇಂದ್ರಾ ನೂಯಿ ಸಹ ಜಾಗ ಗಿಟ್ಟಿಸಿದರು. ಮತ್ತೊಂದು ಜಾಗತಿಕ ವಾಣಿಜ್ಯ ಪತ್ರಿಕೆ `ಫೋರ್ಬ್ಸ್' ಈ ತಿಂಗಳ ಆರಂಭದಲ್ಲಿ ಭಾರತೀಯ ಶತಕೋಟ್ಯಧಿಪತಿಗಳ ಪಟ್ಟಿ ಬಿಡುಗಡೆ ಮಾಡಿದ ಬೆನ್ನಲ್ಲೇ `ಫಾರ್ಚೂನ್' ಹೊಸ ಪಟ್ಟಿ ಬಿಡುಗಡೆ ಮಾಡಿತು.

2006: ನೆಲದಿಂದ ನೆಲಕ್ಕೆ ಚಿಮ್ಮುವ `ಪೃಥ್ವಿ-2' ಕ್ಷಿಪಣಿಯನ್ನು ಒರಿಸ್ಸಾ ಕಡಲ ತೀರದ ಎರಡು ಪ್ರತ್ಯೇಕ ಉಡಾವಣಾ ವಲಯದಿಂದ ಯಶಸ್ವಿಯಾಗಿ ಪ್ರಯೋಗಿಸುವಲ್ಲಿ ವಿಜ್ಞಾನಿಗಳು ಸಫಲರಾದರು. ಪ್ರಥಮ ಗುರಿ ನಿರ್ದೇಶಿತ ಚಂಡಿಪುರದ ಉಡಾವಣಾ ಪ್ರದೇಶದಿಂದ ಬೆಳಗ್ಗೆ 10.15ಕ್ಕೆ ಪ್ರಯೋಗಿಸಿದರೆ, ಈ ಕ್ಷಿಪಣಿಯನ್ನು ಆಕಾಶಮಾರ್ಗದಲ್ಲಿಯೇ ತಡೆದು ನಾಶಗೊಳಿಸುವ ಉದ್ಧೇಶದ ಇನ್ನೊಂದು ಕ್ಷಿಪಣಿಯನ್ನು 60 ಕ್ಷಣಗಳ ಬಳಿಕ ಬಂಗಾಳಕೊಲ್ಲಿ ಸಮುದ್ರದಲ್ಲಿನ ಉಡಾವಣಾ ಕೇಂದ್ರದಿಂದ ಹಾರಿಸಲಾಯಿತು. ಆಕಾಶ ಮಾರ್ಗದಲ್ಲಿಯೇ ದಾಳಿ ಉದ್ದೇಶದ ಕ್ಷಿಪಣಿಯನ್ನು ಈ ಕ್ಷಿಪಣಿಯು ನಿಖರವಾಗಿ ಗುರುತಿಸಿ ನಾಶಪಡಿಸಿತು. ಇದರೊಂದಿಗೆ ಮಾರ್ಗ ಮಧ್ಯದಲ್ಲಿಯೇ ಕ್ಷಿಪಣಿ ನಡೆಯ ಪ್ರಯೋಗದಲ್ಲಿ ಭಾರತ ಯಶಸ್ಸು ಸಾಧಿಸಿತು.

 2006: ಬಾಲಿವುಡ್ಡಿನ  ಜನಪ್ರಿಯ ನಟ ಅಭಿಷೇಕ್ ಬಚ್ಚನ್ ಮತ್ತು ನಟಿ ಐಶ್ವರ್ಯ ರೈ ಮದುವೆ ಆಗಿದ್ದಾರೆಂಬ ಗಾಳಿ ಸುದ್ದಿಗಳ ಮಧ್ಯೆ ಇವರಿಬ್ಬರೂ ಈದಿನ `ಬ್ರಾಹ್ಮೀ ಮುಹೂರ್ತ'ದಲ್ಲಿ ವಾರಣಾಸಿಯಲ್ಲಿ ಕಾಶಿ ವಿಶ್ವನಾಥನಿಗೆ ಜೊತೆಯಾಗಿ ಪೂಜೆ ಸಲ್ಲಿಸಿದರು. ಕುಟುಂಬ ಸದಸ್ಯರ ಜೊತೆಗೆ ಸಂಕಟಮೋಚನ ದೇವಾಲಯ ಹಾಗೂ ಹನುಮಾನ್ ದೇವಾಲಯದಲ್ಲೂ ಅವರು ಪೂಜೆ ಸಲ್ಲಿಸಿದರು. ಈ ಜೋಡಿಯ ವಿವಾಹ ಬಂಧನಕ್ಕೆ ಐಶ್ವರ್ಯ ರೈ ಜಾತಕದ `ಕುಜ ದೋಷ'ದಿಂದ ಇದೆಯೆನ್ನಲಾದ ವಿಘ್ನ ನಿವಾರಣೆಗೆ ಈ ಪೂಜೆ ಸಲ್ಲಿಸಲಾಗಿದೆ ಎಂದು ಹೇಳಲಾಯಿತು.

2006: ಬೆಂಗಳೂರು ರೈಲು ನಿಲ್ದಾಣದಲ್ಲಿ 50 ಪೈಸೆ, ಒಂದು ಹಾಗೂ ಎರಡು ರೂಪಾಯಿ ಮತ್ತು 5 ರೂಪಾಯಿ ನಾಣ್ಯಗಳನ್ನು ಹಾಕಿ ಪ್ಲಾಟ್ ಫಾರಂ ಟಿಕೆಟ್ ಪಡೆಯುವ ವಿಶೇಷ ಯಂತ್ರಗಳನ್ನು ಅಳವಡಿಸಲಾಯಿತು. ವಿಭಾಗೀಯ ಪ್ರಧಾನ ವ್ಯವಸ್ಥಾಪಕ ಮಹೇಶ ಮಂಗಲ್ ಈ ಯಂತ್ರಗಳನ್ನು ಉದ್ಘಾಟಿಸಿದರು.

2006: ಮಹದಾಯಿ ಜಲವಿವಾದ ಇತ್ಯರ್ಥಕ್ಕೆ ನ್ಯಾಯ ಮಂಡಳಿ ರಚಿಸಲು ಕೇಂದ್ರ ಜಲ ಸಂಪನ್ಮೂಲಕ ಇಲಾಖೆ ನಿರ್ಧರಿಸಿದೆ ಎಂದು  ಜಲ ಸಂಪನ್ಮೂಲ ಇಲಾಖೆಯ ಜಂಟಿ ಕಾರ್ಯದರ್ಶಿ ಕೆ. ವೋಹ್ರಾ ಸುಪ್ರೀಂಕೋರ್ಟಿಗೆ ಪ್ರಮಾಣಪತ್ರ ಸಲ್ಲಿಸಿದರು. ಇದರಿಂದ ಬಂಡೂರಿ ನಾಲಾ ಯೋಜನೆ ಅನುಷ್ಠಾನಕ್ಕೆ ಹೊರಟ ಕರ್ನಾಟಕದ ಪ್ರಯತ್ನಕ್ಕೆ ಹಿನ್ನಡೆಯಾಯಿತು.

2006: ಟೆಹರಾನಿನ ಮೆಹರಾಬಾದ್ ವಿಮಾನ ನಿಲ್ದಾಣದಲ್ಲಿ ಗಗನಕ್ಕೆ ಏರಿದ ಇರಾನ್ ಸೇನಾ ವಿಮಾನವೊಂದು ಕೆಲವೇ ಕ್ಷಣಗಳಲ್ಲಿ ನೆಲಕ್ಕೆ ಅಪ್ಪಳಿಸಿ ಅದರಲ್ಲಿದ್ದ 38 ಮಂದಿ ಮೃತರಾದರು.

2005: ಫ್ರಾನ್ಸ್ ದೇಶದ ಪ್ಯಾರಿಸ್ಸಿನ ಎಮೈನ್ಸ್ ವಿಶ್ವವಿದ್ಯಾಲಯದಲ್ಲಿ ವಿಶ್ವದ ಮೊತ್ತ ಮೊದಲ ಮುಖಕಸಿ ನಡೆಯಿತು. 1998ರಲ್ಲಿ ವಿಶ್ವದ ಮೊತ್ತ ಮೊದಲ ಕೈ ಕಸಿ ಮಾಡಿದ್ದ ಜೀನ್ ಮೈಕಲ್ ಡುಬರ್ನಾರ್ಡ್ ಹಾಗೂ ಮುಖ ಶಸ್ತ್ರಚಿಕಿತ್ಸಕ ಬರ್ನಾರ್ಡ್ ದೆವಾವುಚೆಲ್ಲೆ ಮಹಿಳೆಯೊಬ್ಬಳಿಗೆ ಮುಖಕಸಿ ಶಸ್ತ್ರಚಿಕಿತ್ಸೆ ನಡೆಸಿದರು. ನಾಯಿ ಕಚ್ಚಿದ್ದರಿಂದ ಮೂಗು, ತುಟಿ ಹರಿದು ಹೋಗಿದ್ದ ಮಹಿಳೆಗೆ ವೈದ್ಯರ ತಂಡ ಆಗಷ್ಟೇ ಮೃತನಾಗಿದ್ದ ವ್ಯಕ್ತಿಯೊಬ್ಬನ ಮುಖದ ಭಾಗವನ್ನು ತೆಗೆದು ಕಸಿ ಮಾಡಿತು.

2005: ಎರಡನೇ ಜಾಗತಿಕ ಯುದ್ಧದ ಕಾಲದಲ್ಲಿ ಸ್ಫೋಟಗೊಳ್ಳದೇ ಉಳಿದಿದ್ದ ಭಾರಿ ಬಾಂಬ್ ಜಪಾನಿನ ಟೋಕಿಯೋದ ಜನವಸತಿ ಪ್ರದೇಶ ಕಾತ್ಸುಶಿಕಾದಲ್ಲಿ ಪತ್ತೆಯಾಯಿತು. ಯುದ್ಧಕಾಲದಲ್ಲಿ ಅಮೆರಿಕ ಎಸೆದಿತ್ತು ಎನ್ನಲಾಗಿರುವ ಈ ಬಾಂಬ್ 250 ಕಿಲೋ ಗ್ರಾಂ ಭಾರ, 36 ಸೆಂ.ಮೀ ವ್ಯಾಸ ಹಾಗೂ 120 ಸೆಂ.ಮೀ ಉದ್ದವಿತ್ತು. ಈ ಬಾಂಬ್ ತೆರವುಗೊಳಿಸುವ ಸಲುವಾಗಿ 4000 ಜನರನ್ನು ಸ್ಥಳಾಂತರಿಸಲಾಯಿತು.

2005: ಚೀನಾದ ಹರ್ಬಿನ್ ಕಲ್ಲಿದ್ದಲು ಗಣಿಯಲ್ಲಿ ಸ್ಫೋಟದಲ್ಲಿ 88 ಜನ ಮೃತರಾಗಿ 36ಕ್ಕೂ ಹೆಚ್ಚು ಜನ ಗಾಯಗೊಂಡರು.

2000: ಜಗತ್ತಿನ ಅತೀ ಉದ್ದದ ಹೆದ್ದಾರಿ ಸುರಂಗ ಮಾರ್ಗವು ನಾರ್ವೆಯ ರಾಜಧಾನಿ ಓಸ್ಲೋದಿಂದ ವಾಯವ್ಯಕ್ಕೆ 300 ಕಿಮೀ ದೂರದ ಲಾಯೆರ್ಡಾಲಿನಲ್ಲಿ ಸಂಚಾರಕ್ಕೆ ಮುಕ್ತವಾಯಿತು. ಇದರ ಉದ್ದ 24.5 ಕಿ.ಮೀ.ಗಳು. 16.9 ಕಿ.ಮೀ. ಉದ್ದದ ಸ್ವಿಸ್ ಆಲ್ಪ್ಸ್ ನ ಸೇಂಟ್ ಗೊಥಾರ್ಡ್ ಸುರಂಗವನ್ನು ಇದು ಮೀರಿಸಿತು.

1981: ಆಡಳಿತ ಭಾಷೆಯಾಗಿ ಕನ್ನಡ ಕಡ್ಡಾಯಕ್ಕೆ ಸಂಬಂಧಿಸಿದಂತೆ ರಚಿಸಲಾಗಿದ್ದ ಗೋಕಾಕ್ ನೇತೃತ್ವದ ಸಮಿತಿಯ ವರದಿಯನ್ನು ಯಥಾವತ್ತಾಗಿ ರಾಜ್ಯ ಸರ್ಕಾರವು ಅಂಗೀಕರಿಸಿತು. ವರದಿಯ ಶಿಫಾರಸು ಪ್ರಕಾರ ರಾಜ್ಯದಲ್ಲಿ ಪ್ರೌಢಶಾಲೆಗಳಲ್ಲಿ ಕನ್ನಡವು ಪ್ರಥಮ ಕಡ್ಡಾಯ ಕಲಿಕೆ ಭಾಷೆ ಆಗಲಿದೆ.

1979: ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್ ನಡುವಣ ಮೊತ್ತ ಮೊದಲ ಅಧಿಕೃತ ಏಕದಿನ ಅಂತಾರಾಷ್ಟ್ರೀಯ ಪಂದ್ಯವು ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆಯಿತು. ವಿಶ್ವ ಕ್ರಿಕೆಟ್ ಸರಣಿ ವಿಭಜನೆಗೊಂಡ ಬಳಿಕ ಮತ್ತೆ ಒಗ್ಗೂಡಿದ ಆಸ್ಟ್ರೇಲಿಯಾ ಪಾಲಿನ ಮೊತ್ತ ಮೊದಲಿನ ಪಂದ್ಯ ಇದು.

1958: ಸಾಹಿತಿ ಪ್ರೇಮಮಯಿ ಜನನ.

1954: ಸಾಹಿತಿ ಕೊಂಡಜ್ಜಿ ವೆಂಕಟೇಶ ಜನನ.

1953: ಅಮೆರಿಕನ್ ನಾಟಕಕಾರ ಯುಗೇನ್ ಒ'ನೀಲ್ ಅವರು ಬೋಸ್ಟನ್ನಿನಲ್ಲಿ ತಮ್ಮ 65ನೇ ವಯಸ್ಸಿನಲ್ಲಿ ಮೃತರಾದರು. ನ್ಯೂಯಾರ್ಕ್ ನಗರದ ಬ್ರಾಡ್ವೇಯ ಹೊಟೇಲ್ ಒಂದರ ಕೊಠಡಿಯಲ್ಲಿ ಹುಟ್ಟಿದ ನೀಲ್ ಸತ್ತದ್ದು ಕೂಡಾ ಬೋಸ್ಟನ್ನಿನ ಹೊಟೇಲಿನಲ್ಲಿಯೇ!

1940: ಮಾರ್ಷಲ್ ಆರ್ಟ್ಸ್ ನಿಪುಣ ಹಾಗೂ ನಟ ಬ್ರೂಸ್ ಲೀ (1940-1973) ಹುಟ್ಟಿದ ದಿನ. `ಎಂಟರ್ ದಿ ಡ್ರ್ಯಾಗನ್' ಚಿತ್ರ ಇವರಿಗೆ ಅಪಾರ ಖ್ಯಾತಿ ತಂದು ಕೊಟ್ಟಿತು.

1932: ಫಿಲಿಪ್ಪೈನ್ಸಿನ ಬಿ.ಎಸ್. ಅಕ್ವಿನೊ ಜ್ಯೂನಿಯರ್ (1932-1983) ಹುಟ್ಟಿದ ದಿನ. ಅಧ್ಯಕ್ಷ ಫರ್ಡಿನಾಂಡ್ ಇ. ಮಾರ್ಕೋಸ್ ನೇತೃತ್ವದಲ್ಲಿ ಫಿಲಿಪ್ಪೈನ್ಸಿನಲ್ಲಿ ಮಾರ್ಷಲ್ ಲಾ ಆಡಳಿತ ಇದ್ದಾಗ ಇವರು ಮುಖ್ಯ ವಿರೋಧಿ ನಾಯಕರಾಗಿದ್ದರು. 1983ರಲ್ಲಿ ಇವರ ಹತ್ಯೆ ನಡೆಯಿತು.

1915: ಜೈನ ಸಾಹಿತ್ಯ ಭೂಷಣ, ಸಿದ್ಧಾಂತ ಶಿರೋಮಣಿ ಪದ್ಮನಾಭ ಶರ್ಮ ಅವರು ದೇವಚಂದ್ರ ಜೋಯಿಸರು- ಚಂದ್ರಮತಮ್ಮ ದಂಪತಿಯ ಮಗನಾಗಿ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಭುವನಹಳ್ಳಿಯಲ್ಲಿ ಜನಿಸಿದರು.

1871: ಇಟಲಿಯ ಭೌತತಜ್ಞ ಗಿಯೋವನ್ನಿ ಗಿಯೋರ್ಗಿ (1871-1950) ಹುಟ್ಟಿದ ದಿನ. ಇವರು `ಗಿಯೋರ್ಗಿ ಇಂಟರ್ ನ್ಯಾಷನಲ್ ಸಿಸ್ಟಮ್ ಆಫ್ ಮೆಷರ್ ಮೆಂಟ್ (ಇದಕ್ಕೆ ಮೆಕ್ಸ ಸಿಸ್ಟಮ್ ಎಂಬ ಹೆಸರೂ ಇದೆ) ಮೂಲಕ ಖ್ಯಾತರಾಗಿದ್ದಾರೆ. ಮೀಟರ್, ಕಿಲೋಗ್ರಾಂ, ಸೆಕಂಡ್ ಮತ್ತು ಜೂಲ್ಸ್ ಇವುಗಳನ್ನು ಒಳಗೊಂಡ ವೈಜ್ಞಾನಿಕ ಮಾಪಕ ಯುನಿಟ್ಟುಗಳೆಂದು ಪರಿಗಣಿಸಲಾದ ಈ ಸಿಸ್ಟಮನ್ನು 1960ರಲ್ಲಿ ತೂಕ ಮತ್ತು ಅಳತೆಯ ಸಾಮಾನ್ಯ ಸಮ್ಮೇಳನ ಅನುಮೋದಿಸಿತು.

1701: ಖಗೋಳ ತಜ್ಞ ಆಂಡರ್ಸ್ ಸೆಲ್ಸಿಯಸ್ (1701-1744) ಹುಟ್ಟಿದ ದಿನ. ಈತ ಸೆಲ್ಸಿಯಸ್ ಥರ್ಮಾಮೀಟರ್ ಸ್ಕೇಲ್ ಸಂಶೋಧಿಸಿದ ವ್ಯಕ್ತಿ. ಈ ಮಾಪಕವನ್ನು `ಸೆಂಟಿಗ್ರೇಡ್ ಸ್ಕೇಲ್' ಎಂಬುದಾಗಿಯೂ ಕರೆಯಲಾಗುತ್ತದೆ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement