Saturday, January 2, 2010

ಇಂದಿನ ಇತಿಹಾಸ History Today ಡಿಸೆಂಬರ್ 06

ಇಂದಿನ ಇತಿಹಾಸ

ಡಿಸೆಂಬರ್ 06


ಮುಂಬೈ ಮೇಲೆ ಭಯೋತ್ಪಾದಕರು ನಡೆಸಿದ ಭಾರಿ ವಿಧ್ವಂಸಕ ದಾಳಿಯಲ್ಲಿ ಪಾಕಿಸ್ಥಾನದಲ್ಲಿನ ಉಗ್ರಗಾಮಿ ಸಂಘಟನೆಗಳ ಕೈವಾಡದ ಬಗ್ಗೆ ತಳ್ಳಿಹಾಕಲಾಗದಂತಹ ಸಾಕ್ಷ್ಯಾಧಾರಗಳು ಇರುವುದರಿಂದ ಅಲ್ಲಿನ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲು ವಿಫಲವಾದರೆ, ಸ್ವತಃ ಕಾರ್ಯಾಚರಣೆಗೆ ಇಳಿಯಬೇಕಾದೀತು ಎಂದು ಅಮೆರಿಕವು ಪಾಕಿಸ್ಥಾನಕ್ಕೆ ತಾಕೀತು ಮಾಡಿತು. ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಕಾಂಡೋಲಿಸಾ ರೈಸ್ ಅವರು ಇಸ್ಲಾಮಾಬಾದಿಗೆ ನೀಡಿದ್ದ ಭೇಟಿ ಸಂದರ್ಭದಲ್ಲಿ ಈ ಎಚ್ಚರಿಕೆ ನೀಡಿದರು ಎಂದು ಪಾಕಿಸ್ಥಾನದ ಪ್ರಭಾವಿ ದಿನಪತ್ರಿಕೆ 'ಡಾನ್' ವರದಿ ಮಾಡಿತು.

2014: ನವದೆಹಲಿ: ಜಮ್ಮು ಕಾಶ್ಮೀರ ಚುನಾವಣೆ ವಿಫಲಗೊಳಿಸುವ ಉದ್ದೇಶದಿಂದ 2014ರ ಡಿಸೆಂಬರ್ 5ರಂದು  ಒಂದೇ ದಿನ ನಾಲ್ಕು ಕಡೆ ದಾಳಿ ನಡೆಸಿ 11 ಜನರನ್ನು ಬಲಿ ಪಡೆದ ಪಾಕ್ ಪ್ರೇರಿತ ಉಗ್ರರ ಮತ್ತೊಂದು ಸಂಚು ಬಯಲಾಯಿತು. ಜ. 26ರಂದು ನಡೆಯುವ ಗಣರಾಜ್ಯೊತ್ಸವ ಕಾರ್ಯಕ್ರಮದಲ್ಲಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಭಾಗವಹಿಸದಂತೆ ತಡೆಯಲು ಉಗ್ರ ಸಂಘಟನೆಗಳು ಶತಾಯಗತಾಯ ಯತ್ನಿಸುತ್ತಿವೆ ಎಂಬ ಅಂಶವನ್ನು ಕೇಂದ್ರ ಗುಪ್ತಚರ ದಳ ಹೊರಹಾಕಿತು. ಮುಂದಿನ ಕೆಲ ದಿನಗಳಲ್ಲಿ ದೆಹಲಿ, ಬೆಂಗಳೂರು ಸೇರಿದಂತೆ ದೇಶದ ಮಹಾನಗರಗಳಲ್ಲಿ ಭಾರಿ ಹಿಂಸಾಚಾರ ಸೃಷ್ಟಿಸಿ, ಭದ್ರತಾ ಆತಂಕ
ಉಂಟು ಮಾಡಿದರೆ ಒಬಾಮ ಭೇಟಿ ರದ್ದಾಗುತ್ತದೆ ಎಂಬುದು ಲಷ್ಕರ್ ಉಗ್ರರ ಯೋಜನೆ. ಹಲವು ಉಗ್ರ ಸಂಘಟನೆಗಳೂ ಈ ಯೋಜನೆಗೆ ಕೈ ಜೋಡಿಸಿವೆ. ಇದಕ್ಕಾಗಿ 26/11ರ ಮುಂಬೈ ಮಾದರಿಯ ದಾಳಿ ನಡೆಸಲು ಉಗ್ರರು ಸಿದ್ಧತೆ ನಡೆಸಿದ್ದಾರೆ ಎಂಬ ಮಾಹಿತಿಯೂ ಲಭ್ಯವಾಯಿತು. ಈ ವಿಷಯ ಬೆಳಕಿಗೆ ಬರುತ್ತಲೇ ದೆಹಲಿಯಲ್ಲಿ ಕಟ್ಟೆಚ್ಚರ ಘೋಷಿಸಲಾಯಿತು. ಬೆಂಗಳೂರು, ಮುಂಬೈ, ಚೆನ್ನೈ ಸೇರಿದಂತೆ ಹಲವು ಮಹಾನಗರಗಳಲ್ಲಿ ತೀವ್ರ ನಿಗಾ ವಹಿಸಲಾಯಿತು. ಭದ್ರತೆ ಕುರಿತು ದೆಹಲಿ ಪೊಲೀಸ್ ಮಹಾನಿರ್ದೇಶಕರ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆಯಿತು. ತನಿಖಾ ಸಂಸ್ಥೆಗಳು, ಗುಪ್ತಚರ ಇಲಾಖೆ ಹಿರಿಯ ಅಧಿಕಾರಿಗಳು ಇದರಲ್ಲಿ ಭಾಗವಹಿಸಿದವು. ಮುನ್ನೆಚ್ಚರಿಕೆ ಕ್ರಮಗಳ ಕುರಿತು ವಿಸõತವಾಗಿ ರ್ಚಚಿಸಲಾಯಿತು. ದೆಹಲಿಯ ರೈಲ್ವೆ ಹಾಗೂ ವಿಮಾನ ನಿಲ್ದಾಣ, ರಾಷ್ಟ್ರಪತಿ ಭವನ, ಸಂಸತ್, ಮೆಟ್ರೋ ನಿಲ್ದಾಣ, ಇಂಡಿಯಾ ಗೇಟ್ ಮತ್ತಿತರ ಕಡೆ ಬಿಗಿ ಬಂದೋಬಸ್ತ್ ಕೈಗೊಳ್ಳಲು ನಿರ್ಧರಿಸಲಾಯಿತು. ಸೂಕ್ಷ್ಮ ಪ್ರದೇಶಗಳಲ್ಲಿ ಅಣಕು ಕಾರ್ಯಾಚರಣೆ ನಡೆಸುವ ಮೂಲಕ ಭದ್ರತಾ ವ್ಯವಸ್ಥೆ ಬಲ ಪಡಿಸಲು ನಿರ್ಣಯ ಕೈಗೊಳ್ಳಲಾಯಿತು.. ಒಬಾಮ ಭೇಟಿ ಸಂದರ್ಭದಲ್ಲಿ ಕೈಗೊಳ್ಳಬೇಕಾದ ರಕ್ಷಣಾ ವ್ಯವಸ್ಥೆ ಕುರಿತು ಇದೇ ವೇಳೆ ರ್ಚಚಿಸಲಾಯಿತು. ದೆಹಲಿಯ 5 ಪ್ರಮುಖ ಪ್ರದೇಶದಲ್ಲಿ 289 ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲು ಕೇಂದ್ರ ಗೃಹ ಸಚಿವಾಲಯ ನಿರ್ಧರಿಸಿತು. ಕ್ಯಾಮರಾದಲ್ಲಿ ಎರಡು ಹೈಡೆಫಿನಿಷನ್ ಲೆನ್ಸ್ ಇರಲಿದ್ದು, ಇದು ನಾಲ್ಕೂ ದಿಕ್ಕುಗಳ ದೃಶ್ಯಗಳನ್ನು ಸೆರೆ ಹಿಡಿಯುವುವು.

2014: ಭದ್ರಾವತಿ: ಉಕ್ಕಿನ ನಗರಿಯ ಬೆಡಗಿಗೆ ಅಂತಾರಾಷ್ಟ್ರೀಯ ಸೌಂದರ್ಯ ಸ್ಪರ್ಧೆಯ ಕಿರೀಟ ಮುಡಿಗೇರಿತು. ಪೋಲೆಂಡ್ನಲ್ಲಿ ನಡೆದ ಸ್ಪರ್ಧೆಯಲ್ಲಿ ಆಶಾ ಭಟ್ 'ಮಿಸ್ ಸುಪ್ರಾ ಇಂಟರ್ನ್ಯಾಷನಲ್' ಆಗಿ ಹೊರಹೊಮ್ಮಿದರು. ಈ ಮೂಲಕ ಭಾರತಕ್ಕೆ ಮೊದಲ ಬಾರಿಗೆ ಈ ಪ್ರಶಸ್ತಿ ತಂದುಕೊಟ್ಟ ಕೀರ್ತಿಗೆ ಭಾಜನರಾದರು.  'ಮಗಳು ಮೊದಲಿನಿಂದಲೂ ಪ್ರತಿಭಾವಂತೆ. ಜೀವನದಲ್ಲಿ ಏನಾದರೂ ಸಾಧಿಸಬೇಕೆಂಬ ಛಲವಿತ್ತು. ಅದು ಅವಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಮಾಡಿದೆ' ಎಂದು ತಾಯಿ ಶ್ಯಾಮಲಾ ಭಟ್ 'ವಿಜಯವಾಣಿ'ಯೊಂದಿಗೆ ಸಂಭ್ರಮ ಹಂಚಿಕೊಂಡರು. ಸದ್ಯ ಆಶಾ ಅವರು ಬೆಂಗಳೂರಿನ ಕಾಲೇಜೊಂದರಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿನಿ. ಆಶಾ ಅವರು ಕಳೆದ ತಿಂಗಳು ಮುಂಬೈಯಲ್ಲಿ ನಡೆದ 'ಮಿಸ್ ಡೀವಾ ಯೂನಿವರ್ಸ್'ನಲ್ಲಿ ದ್ವಿತೀಯ ರನ್ನರ್ಅಪ್ ಪ್ರಶಸ್ತಿ ಪಡೆದಿದ್ದರು.

2014: ಲಂಡನ್: ದಿ ಟೈಮ್ಸ್ ನ ಹೈಯರ್ ಎಜುಕೇಷನ್ (ಟಿಎಚ್ಇ) ಬಿಡುಗಡೆ ಮಾಡಿದ ಬ್ರಿಕ್ಸ್ ದೇಶಗಳ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳ ಪಟ್ಟಿಯಲ್ಲಿ ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ 25ನೇ ಸ್ಥಾನ ಪಡೆದುಕೊಂಡಿತು. ಬ್ರಿಕ್ಸ್ ದೇಶಗಳ ಒಟ್ಟು 100 ವಿವಿಗಳ ಪಟ್ಟಿ ಮಾಡಲಾಗಿದ್ದು, ಇದರಲ್ಲಿ 40ರೊಳಗಿನ ಶ್ರೇಣಿಯಲ್ಲಿ ಭಾರತದ ನಾಲ್ಕು ವಿವಿಗಳು ಸೇರಿದವು. ಐಐಟಿ ಬಾಂಬೆ (37), ಐಐಟಿ ರೂರ್ಕಿ(38), ಚಂಡೀಗಢದ ಪಂಜಾಬ್ ವಿವಿ (39) ಪಟ್ಟಿಯಲ್ಲಿರುವ ಇತರ ವಿವಿಗಳು. ಪಟ್ಟಿಯಲ್ಲಿ ಚೀನಾದ ಪೆಕಿಂಗ್ ವಿಶ್ವವಿದ್ಯಾಲಯ ಮೊದಲ ಸ್ಥಾನದಲ್ಲಿದೆ. ಭಾರತೀಯ ಶಿಕ್ಷಣ ಸಂಸ್ಥೆಗಳ ಪೈಕಿ ಬೆಂಗಳೂರಿನ ಐಐಎಸ್ಸಿ ಮೊದಲ ಸ್ಥಾನದಲ್ಲಿದೆ. ನ್ಯೂಯಾರ್ಕ್ನ ರಾಕ್ಫೆಲ್ಲರ್ ಫೌಂಡೇಶನ್ ಈ ವರದಿ ತಯಾರಿಸಿದ್ದು, ಜಗತ್ತಿನ 100 ನಗರಗಳನ್ನು ಪಟ್ಟಿ ಮಾಡಲಾಯಿತು.

2014: ಶ್ರೀನಗರ: ಕಾಶ್ಮೀರದಲ್ಲಿ 2014ರ ಡಿಸೆಂಬರ್ 5ರಂದು ಅಟ್ಟಹಾಸ ಮೆರೆದ ಉಗ್ರಗಾಮಿಗಳಿಗೆ ಪಾಕಿಸ್ತಾನ ಕುಮ್ಮಕ್ಕು ನೀಡಿದ್ದನ್ನು ಸಾಬೀತು ಪಡಿಸುವ ದಾಖಲೆಗಳು ಲಭ್ಯವಾದವು.. ಉರಿ ಸೇನಾ ಶಿಬಿರದ ಮೇಲೆ ನಡೆದ ದಾಳಿಯಲ್ಲಿ ಷಾಮೀಲಾಗಿದ್ದ 6 ಹತ ಉಗ್ರಗಾಮಿಗಳ ಬಳಿ ಇದ್ದ ಆಹಾರದ ಪೊಟ್ಟಣಗಳಲ್ಲಿ ಪಾಕಿಸ್ತಾನಿ ಸರ್ಕಾರದ 'ಗುರುತು'ಗಳು ಪತ್ತೆಯಾದವು. ಘರ್ಷಣೆ ಸಂಭವಿಸಿದ ಸ್ಥಳದಲ್ಲಿ ಪತ್ತೆಯಾದ ಆಹಾರದ ಪೊಟ್ಟಣಗಳು ಸಾಮಾನ್ಯವಾಗಿ ಪಾಕಿಸ್ತಾನಿ ಸೇನೆ ಬಳಸುವ ಆಹಾರದ ಪೊಟ್ಟಣಗಳಾಗಿವೆ ಎಂದು ಹಿರಿಯ ಸೇನಾ ಅಧಿಕಾರಿ ಹೇಳಿದರು. ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡಿನ ಜೊತೆಗೆ ಲಭಿಸಿದ ಈ ಆಹಾರದ ಪೊಟ್ಟಣಗಳು ಉಗ್ರಗಾಮಿಗಳು ಭದ್ರತಾ ಪಡೆಗಳನ್ನು ದೀರ್ಘಕಾಲ ಪೀಡಿಸಲು ಹೊಂಚು ಹಾಕಿದ್ದರು ಎಂಬುದನ್ನು ತೋರಿಸಿವೆ ಎಂದು ಅವರು ನುಡಿದರು. ಸೇನೆ ಮತ್ತು ಉಗ್ರಗಾಮಿಗಳ ಗುಂಪಿನ ನಡುವೆ ಡಿ.5ರಂದು ಸುಮಾರು 6 ಗಂಟೆಗಳ ಕಾಲ ನಡೆದ ಗುಂಡಿನ ಕಾಳಗದಲ್ಲಿ ಎಂಟು ಸೈನಿಕರು ಸೇರಿದಂತೆ 11 ಮಂದಿ ಭದ್ರತಾ ಸಿಬ್ಬಂದಿ ಮೃತರಾಗಿದ್ದರು. ಕದನದಲ್ಲಿ 6 ಮಂದಿ ಉಗ್ರಗಾಮಿಗಳೂ ಹತರಾಗಿದ್ದರು. ಭೀಕರ ಕದನ ನಡೆದ ಸ್ಥಳದಲ್ಲಿ ಲಭಿಸಿದ ಇತರ ವಸ್ತುಗಳಲ್ಲಿ 6 ಎಕೆ ರೈಫಲ್ಗಳು, 55 ಮ್ಯಾಗಝೀನ್ಗಳು, ಎರಡು ಶಾಟ್ ಗನ್ಗಳು, ಎರಡು ರಾತ್ರಿ ಕಾಲದ ವೀಕ್ಷಣೆಗೆ ಬಳಸುವ ಬೈನಾಕ್ಯುಲರ್ಗಳು, ನಾಲ್ಕು ರೇಡಿಯೋ ಸೆಟ್ಗಳು, 32 ಬಳಸದ ಗ್ರೆನೇಡ್ಗಳು ಮತ್ತು ಒಂದು ವೈದ್ಯಕೀಯ ಕಿಟ್ ಕೂಡಾ ಸೇರಿದ್ದವು.

2014: ಮುಂಬೈ: ಪುಣೆ - ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕರಾಡ್ ಸಮೀಪ ಟ್ಯಾಂಕರ್ ಮತ್ತು ಬಸ್ಸು ಮುಖಾಮುಖಿ ಢಿಕ್ಕಿಯಲ್ಲಿ ಐವರು ಮೃತರಾಗಿ ಇತರ ಎಂಟು ಮಂದಿ ಗಾಯಗೊಂಡಿಡ ಘಟನೆ ಘಟಿಸಿತು. ಪಶ್ಚಿಮ ಮಹಾರಾಷ್ಟ್ರದ ಬೆಳವಡೆ ಗ್ರಾಮದ ಬಳಿ ಈ ದುರ್ಘಟನೆ ಸಂಭವಿಸಿತು. ಗಾಯಾಳುಗಳಲ್ಲಿ ಕೆಲವರನ್ನು ಕರಾಡ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು.. ಇತರ ಕೆಲವರನ್ನು ಅಲ್ಲಿನ ಖಾಸಗಿ ಆಸ್ಪತ್ರೆಗೂ ದಾಖಲು ಮಾಡಲಾಯಿತು.

2014: ನವದೆಹಲಿ: ಹಿರಿಯ ಐಎಎಸ್ ಅಧಿಕಾರಿ ದಿನೇಶ ಕುಮಾರ್ ಅವರನ್ನು ಪೋಲಾವರಂ ಯೋಜನಾ ಪ್ರಾಧಿಕಾರದ ಮುಖ್ಯ ಕಾರ್ಯಕಾರಿ ಅಧಿಕಾರಿಯಾಗಿ (ಸಿಇಒ) ನೇಮಕ ಮಾಡಲಾಯಿತು. ಆಂಧ್ರ ಪ್ರದೇಶ ಕೇಡರ್ನ 1963ರ ತಂಡದ ಐಎಎಸ್ ಅಧಿಕಾರಿಯಾದ ಕುಮಾರ್ ಪ್ರಸ್ತುತ ಜವುಳಿ ಸಚಿವಾಲಯದಲ್ಲಿ ಅಭಿವೃದ್ಧಿ ಆಯುಕ್ತ. ಪೋಲಾವರಂ ಯೋಜನೆಯು ಕೇಂದ್ರ ಸರ್ಕಾರದಿಂದ ರಾಷ್ಟ್ರೀಯ ಯೋಜನಾ ಸ್ಥಾನಮಾನ ಪಡೆದಿರುವ ವಿವಿಧೋದ್ದೇಶೀ ನೀರಾವರಿ ಯೋಜನೆ. ಗೋದಾವರಿ ನದಿಗೆ ಅಡ್ಡವಾಗಿ ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆ ಮತ್ತು ಪೂರ್ವ ಗೋದಾವರಿ ಜಿಲ್ಲೆಯಲ್ಲಿ ಪೋಲಾವರಂ ಅಣೆಕಟ್ಟು ನಿರ್ವಿುಸಲಾಗಿದೆ. ಈ ಜಲಾಶಯ ಛತ್ತೀಸ್ಗಢದ ಕೆಲವು ಭಾಗಗಳು ಮಾತ್ರವೇ ಅಲ್ಲ ಒಡಿಶಾ ರಾಜ್ಯದ ಹಲವು ಭಾಗಗಳಿಗೂ ವ್ಯಾಪಿಸಿದೆ.

2014: ಗುವಾಹಟಿ: ಪಶ್ಚಿಮ ಬಂಗಾಳದ ಬುರ್ದ್ವಾನ್ ಜಿಲ್ಲೆಯ ಅಕ್ಟೋಬರ್ 2ರ ಸ್ಪೋಟದ ಮುಖ್ಯ ಆರೋಪಿ ಶಹನೂರ್ ಅಲೋಮ್ಸನನ್ನು ಅಸ್ಸಾಮಿನಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು. ನಲ್ಬಾರಿ ಜಿಲ್ಲೆಯಲ್ಲಿ ಹಿಂದಿನ ದಿನ ತಡರಾತ್ರಿಯಲ್ಲಿ ಆತನನ್ನು ಬಂಧಿಸಲಾಗಿದೆ. ಅಸ್ಸಾಮಿನಲ್ಲಿ ಜಮಾತ್-ಉಲ್-ಮುಜಾಹಿದೀನ್ ಬಾಂಗ್ಲಾದೇಶ ಸಂಘಟನೆಯ ಮುಖ್ಯ ಸಂಚಾಲಕರಲ್ಲಿ ಒಬ್ಬನಾದ ಅಲೋಮ್ ಬರಪೇಟಾ ಜಿಲ್ಲೆಯ ಛಟ್ಲಾ ಗ್ರಾಮದ ತನ್ನ ಮನೆಯಿಂದ ಈ ವರ್ಷದ ಅಕ್ಟೋಬರ್ ತಿಂಗಳಿನಿಂದ ತಲೆತಪ್ಪಿಸಿಕೊಂಡಿದ್ದ. ಅಸ್ಸಾಂ ಪೊಲೀಸ್ ಘಟಕವು ನಲ್ಬಾರಿ ಜಿಲ್ಲೆಯ ಲಾರ್ಕೂಚಿ ಗ್ರಾಮದಲ್ಲಿ ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಅಲೋಮ್ನ್ನು ಬಂಧಿಸಲಾಯಿತು ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದರು. 'ಇದೊಂದು ಮಹತ್ವದ ಬಂಧನ. ರಾಜ್ಯದಲ್ಲಿ ಜಿಹಾದಿ ಸಂಘಟನೆ ಬಗ್ಗೆ ವ್ಯಾಪಕ ವಿವರಗಳನ್ನು ಆತನಿಂದ ನಾವು ಪಡೆಯುವ ಸಾಧ್ಯತೆಗಳಿವೆ. ಸಂಘಟನೆಯ ಸದಸ್ಯ ಬಲ, ಹಣಕಾಸು ವರ್ಗಾವಣೆ ಮತ್ತಿತರ ವಿವರಗಳು ಆತನಿಂದ ಲಭಿಸುವ ನಿರೀಕ್ಷೆಯಿದೆ' ಎಂದು ಅಧಿಕಾರಿ ನುಡಿದರು. ಬುರ್ದ್ವಾನಿನ ಖಾಗ್ರಾಗಡ ಪ್ರದೇಶದಲ್ಲಿ ಸಂಭವಿಸಿದ್ದ ಆಕಸ್ಮಿಕ ಸ್ಪೋಟದಲ್ಲಿ ಜಮಾತ್-ಉಲ್-ಮುಜಾಹಿದೀನ್ ಬಾಂಗ್ಲಾದೇಶ್ ಸಂಘಟನೆಯ ಉಗ್ರಗಾಮಿಗಳಿಬ್ಬರು ಹತರಾಗಿ ಇನ್ನೊಬ್ಬ ಗಾಯಗೊಂಡಿದ್ದ. ಅಲೋಮ್ ಪತ್ನಿ ಸುಜೀನಾ ಬೇಗಂಳನ್ನು ಮತ್ತು ಆಕೆಯ ಅಪ್ರಾಪ್ತ ವಯಸ್ಸಿನ ಪುತ್ರನನ್ನು ಗುವಾಹಟಿಯಲ್ಲಿ ಪೊಲೀಸರು ಕಳೆದ ತಿಂಗಳು ಬಂಧಿಸಿದ್ದರು.

2014: ಹಾಸನ: ಅರಸೀಕೆರೆ ತಾಲೂಕು ಬೊಮ್ಮೇನಹಳ್ಳಿ ರಸ್ತೆಯಲ್ಲಿ ಆಟೋ ಮತ್ತು ಮ್ಯಾಕ್ಸಿಕ್ಯಾಬ್ ಢಿಕ್ಕಿಯಲ್ಲಿ ಒಬ್ಬ ಮಹಿಳೆ ಸೇರಿದಂತೆ ಮೂವರು ಮೃತರಾಗಿ ಇತರ 15 ಮಂದಿ ಗಾಯಗೊಂಡರು. ಮೃತರನ್ನು ಮಾಡಾಳುವಿನ ಮಂಜಾಚಾರ್ (46), ಅರಳಿಕಟ್ಟದ ರಾಜಪ್ಪ (40) ಮತ್ತು ಅರಸೀಕೆರೆಯ ದ್ರಾಕ್ಷಾಯಣಮ್ಮ (40) ಎಂದು ಗುರುತಿಸಲಾಯಿತು.

2014: ಹಜಾರಿಬಾಗ್ (ಜಾರ್ಖಂಡ್): ಕಾಶ್ಮೀರ ಕಣಿವೆಯಲ್ಲಿ ಉಗ್ರಗಾಮಿಗಳು ಅಟ್ಟಹಾಸ ಮೆರೆದ ಒಂದು ದಿನದ ಬಳಿಕ ಈದಿನ ಇಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು 'ಉಗ್ರಗಾಮಿಗಳು ಭಾರತೀಯ ಪ್ರಜಾಪ್ರಭುತ್ವದ ಮೇಲೆ ದಾಳಿ ನಡೆಸಲು ಯತ್ನಿಸಿದ್ದಾರೆ. ಆದರೆ ದಿಟ್ಟ ಯೋಧರು ರಾಷ್ಟ್ರದ ಭದ್ರತೆ ಕಾಪಾಡುತ್ತಾ ತಮ್ಮ ಪ್ರಾಣಗಳನ್ನೇ ಬಲಿದಾನ ಮಾಡಿದ್ದಾರೆ' ಎಂದು ಹೇಳಿದರು. ಉಗ್ರಗಾಮಿಗಳೊಂದಿಗೆ ಹೋರಾಡುತ್ತಾ ಹುತಾತ್ಮರಾದ ಯೋಧರಿಗೆ ಪ್ರಧಾನಿ ತಮ್ಮ ಶ್ರದ್ಧಾಂಜಲಿಯನ್ನೂ ಸಲ್ಲಿಸಿದರು. ಹಜಾರಿಬಾಗ್ನಲ್ಲಿ ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ 'ಭಯೋತ್ಪಾದಕರು ಭಾರತದ ಪ್ರಜಾಪ್ರಭುತ್ವದ ಮೇಲೆ ದಾಳಿ ನಡೆಸಲು ಯತ್ನಿಸಿದ್ದಾರೆ. ಆದರೆ ನಮ್ಮ ದಿಟ್ಟ ಯೋಧರು ರಾಷ್ಟ್ರದ ಭದ್ರತೆ ಕಾಪಾಡಲು ತಮ್ಮ ಪ್ರಾಣಗಳನ್ನೇ ಬಲಿದಾನ ಮಾಡಿದ್ದಾರೆ ಎಂದು ನುಡಿದರು. 'ತಮ್ಮ ಜೀವಗಳನ್ನೇ ಬಲಿದಾನ ಮಾಡಿದ ಜಾರ್ಖಂಡ್ನ ಧೀರ ಪುತ್ರ ಸಂಕಲ್ಪ ಕುಮಾರ ಶುಕ್ಲ ಮತ್ತು ಇತರ ಧೀರ ಯೋಧರಿಗೆ ನಾನು ಶ್ರದ್ಧಾಂಜಲಿ ಸಲ್ಲಿಸುತ್ತೇನೆ. ಸಂಕಲ್ಪ ಕುಮಾರ ಶುಕ್ಲಾ ಅವರ ಬಲಿದಾನವು ರಾಜ್ಯದಲ್ಲಿ ಮುಂದಿನ ತಲೆಮಾರುಗಳವರೆಗೂ ನೆನಪಿನಲ್ಲಿ ಉಳಿಯುತ್ತದೆ' ಎಂದು ಅವರು ಹೇಳಿದರು. ಕಾಶ್ಮೀರ ಕಣಿವೆಯಲ್ಲಿ ಶನಿವಾರ ಗಡಿ ದಾಟಿ ಬಂದ ಉಗ್ರಗಾಮಿಗಳು ಉರಿ ಸೇನಾ ಶಿಬಿರದ ಮೇಲೆ ದಾಳಿ ನಡೆಸಿ ಲೆಫ್ಟಿನೆಂಟ್ ಕರ್ನಲ್ ಸಂಕಲ್ಪ ಕುಮಾರ ಸೇರಿದಂತೆ 11 ಮಂದಿ ಭದ್ರತಾ ಸಿಬ್ಬಂದಿ ಮತ್ತು ಟ್ರಾಲ್ನಲ್ಲಿ ಇಬ್ಬರು ನಾಗರಿಕರನ್ನು ಕೊಂದಿದ್ದರು. ಭಯೋತ್ಪಾದಕರ ದಾಳಿಗಳು ಹಾಗೂ ಗುಂಡಿನ ಕಾಳಗಗಳಲ್ಲಿ ಒಟ್ಟು 21 ಜನ ಮೃತರಾಗಿದ್ದರು. ಅವರಲ್ಲಿ ಪಾಕಿಸ್ತಾನಿ ಮೂಲದ ಎಲ್ಇಟಿ ಭಯೋತ್ಪಾದಕ ಸಂಘಟನೆಯ ಒಬ್ಬ ಉನ್ನತ ಕಮಾಂಡರ್ ಸೇರಿದಂತೆ 7 ಜನ ಉಗ್ರಗಾಮಿಗಳು ಸೇರಿದ್ದರು.

2008: ಮುಂಬೈ ಮೇಲೆ ಭಯೋತ್ಪಾದಕರು ನಡೆಸಿದ ಭಾರಿ ವಿಧ್ವಂಸಕ ದಾಳಿಯಲ್ಲಿ ಪಾಕಿಸ್ಥಾನದಲ್ಲಿನ ಉಗ್ರಗಾಮಿ ಸಂಘಟನೆಗಳ ಕೈವಾಡದ ಬಗ್ಗೆ ತಳ್ಳಿಹಾಕಲಾಗದಂತಹ ಸಾಕ್ಷ್ಯಾಧಾರಗಳು ಇರುವುದರಿಂದ ಅಲ್ಲಿನ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲು ವಿಫಲವಾದರೆ, ಸ್ವತಃ ಕಾರ್ಯಾಚರಣೆಗೆ ಇಳಿಯಬೇಕಾದೀತು ಎಂದು ಅಮೆರಿಕವು ಪಾಕಿಸ್ಥಾನಕ್ಕೆ ತಾಕೀತು ಮಾಡಿತು. ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಕಾಂಡೋಲಿಸಾ ರೈಸ್ ಅವರು ಇಸ್ಲಾಮಾಬಾದಿಗೆ ನೀಡಿದ್ದ ಭೇಟಿ ಸಂದರ್ಭದಲ್ಲಿ ಈ ಎಚ್ಚರಿಕೆ ನೀಡಿದರು ಎಂದು ಪಾಕಿಸ್ಥಾನದ ಪ್ರಭಾವಿ ದಿನಪತ್ರಿಕೆ 'ಡಾನ್' ವರದಿ ಮಾಡಿತು.

2008: ಮಹಾರಾಷ್ಟ್ರದ ಪಕ್ಷ ನಾಯಕ ನಾರಾಯಣ ರಾಣೆ ಅವರನ್ನು ಕಾಂಗ್ರೆಸ್ ಪಕ್ಷವು ಅಮಾನತುಗೊಳಿಸಿತು. ಮುಖ್ಯಮಂತ್ರಿ ಸ್ಥಾನಕ್ಕೆ ಸ್ಪರ್ಧೆಯಲ್ಲಿದ್ದ ರಾಣೆ ತಾವು ಸ್ಪರ್ಧೆಯಲ್ಲಿ ಹಿಂದೆ ಬಿದ್ದಿರುವುದು ಗೊತ್ತಾದಾಗ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಇತರ ಹಲವರ ವಿರುದ್ಧ ಹರಿಹಾಯ್ದಿದ್ಧರು. ಈ ಟೀಕೆಗಳು ಬಂದ ಒಂದು ದಿನದ ಬಳಿಕ ಕಾಂಗ್ರೆಸ್ ಪಕ್ಷವು ಅವರನ್ನು ಅಮಾನತುಗೊಳಿಸವ ಕ್ರಮ ಕೈಗೊಂಡಿತು.

2008: ಅಪಹರಣ ಮತ್ತು ದರೋಡೆ ಪ್ರಕರಣದಲ್ಲಿ ತಪ್ಪಿತಸ್ಥ ಎನಿಸಿದ ಅಮೆರಿಕನ್ ಫುಟ್‌ಬಾಲ್ (ರಗ್ಬಿ) ದಂತಕತೆ ಒ.ಜೆ. ಸಿಂಪ್ಸನ್ ಅವರಿಗೆ ನ್ಯೂಯಾರ್ಕ್ ಜಿಲ್ಲಾ ನ್ಯಾಯಾಲಯ 33 ವರ್ಷಗಳ ಜೈಲು ಶಿಕ್ಷೆ ವಿಧಿಸಿತು. ತೀರ್ಪು ಪ್ರಕಟಿಸಿದ ಜಿಲ್ಲಾ ನ್ಯಾಯಾಧೀಶರಾದ ಜಾಕೀ ಗ್ಲಾಸ್ ಅವರು ಸಿಂಪ್ಸನ್‌ಗೆ ಕಠಿಣ ಶಿಕ್ಷೆಯನ್ನೇ ವಿಧಿಸಿದರು. ಸಿಂಪನ್ಸ್ 2007ರಲ್ಲಿ ಲಾಸ್ ವೆಗಾಸ್‌ನಲ್ಲಿ ಕ್ರೀಡಾ ಸ್ಮರಣಿಕೆಗಳ ವಿತರಕರಿಬ್ಬರನ್ನು ಅಪಹರಿಸಿ ಬೆಲೆಬಾಳುವ ವಸ್ತುಗಳನ್ನು ದರೋಡೆ ಮಾಡಿದ್ದರು. ಇತರ ಬಂದೂಕುಧಾರಿಗಳು ಕೂಡಾ ಈ ವೇಳೆ ಅವರ ಜೊತೆಗಿದ್ದರು. ಈ ಪ್ರಕರಣದ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಲಯ ಎರಡು ತಿಂಗಳ ಹಿಂದೆ ತೀರ್ಪು ಪ್ರಕಟಿಸಿ ಸಿಂಪ್ಸನ್ ತಪ್ಪಿತಸ್ಥ ಎಂದು ಘೋಷಿಸಿತ್ತು. ಇದೀಗ 61 ರ ಹರೆಯದ ಅವರಿಗೆ ಜೈಲು ಶಿಕ್ಷೆ ವಿಧಿಸಿತು.

2008: ವಿಮಾನಯಾನ ಟರ್ಬೈನ್ ಇಂಧನದ ಬೆಲೆಯನ್ನು ತೈಲ ಮಾರುಕಟ್ಟೆ ಕಂಪೆನಿಗಳು ಕಡಿತಗೊಳಿಸಿರುವುದನ್ನು ಅನುಸರಿಸಿ ಕಿಂಗ್‌ಫಿಶರ್, ಜೆಟ್ ಏರ್‌ವೇಸ್, ಏರ್ ಇಂಡಿಯಾ ಮತ್ತು ಇಂಡಿಗೋ ಸೇರಿದಂತೆ ಎಲ್ಲ ಪ್ರಮುಖ ದೇಶೀಯ ವಿಮಾನಯಾನ ಸಂಸ್ಥೆಗಳು ವಿಮಾನ ಹಾರಾಟಗಳ ಸರ್‌ಚಾರ್ಜ ಕಡಿತಗೊಳಿಸಿದವು. ಇದರಿಂದಾಗಿ ವಿಮಾನಯಾನ ದರ ಅಂದಾಜು 400 ರೂಪಾಯಿಗಳಷ್ಟು ಅಗ್ಗವಾಯಿತು.

2007: ಮತದಾರರ ಪಟ್ಟಿ ಪರಿಷ್ಕರಣೆ ಅಥವಾ ಮತಗಟ್ಟೆಯ ಚುನಾವಣಾ ಕರ್ತವ್ಯಗಳಿಗೆ ಶಾಲಾ ಶಿಕ್ಷಕರನ್ನು ನಿಯೋಜನೆ ಮಾಡಬಾರದು ಎಂದು ಸುಪ್ರೀಂಕೋರ್ಟ್ ಆದೇಶಿಸಿತು. ಈ ಸಂಬಂಧ ದೆಹಲಿ ಹೈಕೋರ್ಟ್ ನೀಡಿದ ತೀರ್ಪನ್ನು ಎತ್ತಿಹಿಡಿದ ನ್ಯಾಯಮೂರ್ತಿಗಳಾದ ಎಸ್.ಬಿ. ಸಿನ್ಹಾ ಮತ್ತು ಎಚ್. ಎಸ್. ಬೇಡಿ ಅವರನ್ನು ಒಳಗೊಂಡ ಸುಪ್ರೀಂಕೋರ್ಟ್ ನ್ಯಾಯಪೀಠವು, `ಆದರೆ ರಜೆಯ ಅವಧಿ ಮತ್ತು ಬೋಧನೇತರ ದಿನಗಳಲ್ಲಿ ಮಾತ್ರ ಮತದಾರರ ಪಟ್ಟಿ ಪರಿಷ್ಕರಣೆ ಮತ್ತು ಚುನಾವಣಾ ಕೆಲಸಗಳಿಗೆ ನಿಯೋಜಿಸಬಹುದು' ಎಂದು ಅಭಿಪ್ರಾಯಪಟ್ಟಿತು. ಬೋಧನಾ ಅವಧಿಗಳಲ್ಲಿ ಶಿಕ್ಷಕರನ್ನು ಚುನಾವಣೆ ಕೆಲಸಗಳಿಗೆ ಬಳಸಿಕೊಳ್ಳಬಾರದು. ಆದರೆ ಕಾನೂನಿನಲ್ಲಿ ಅವಕಾಶವಿರುವಂತೆ ಶಿಕ್ಷಕೇತರ ವರ್ಗವನ್ನು ಶಾಲಾ ಕೆಲಸದ ಅವಧಿ ಅಥವಾ ಯಾವುದೇ ಸಮಯದಲ್ಲಾದರೂ ಚುನಾವಣಾ ಕಾರ್ಯಗಳಿಗೆ ಬಳಸಿಕೊಳ್ಳಬಹುದು ಎಂದೂ ಪೀಠ ಸ್ಪಷ್ಟಪಡಿಸಿತು. ಲೋಕಸಭೆ, ವಿಧಾನಸಭೆ, ನಗರಾಡಳಿತ, ಗುರುದ್ವಾರ ಮಂಡಳಿ ಮುಂತಾದ ಆಡಳಿತ ಸಂಸ್ಥೆಗಳ ಚುನಾವಣಾ ಕೆಲಸ, ಮತದಾರರ ಪಟ್ಟಿ ಪರಿಷ್ಕರಣೆ, ಪಲ್ಸ್ ಪೋಲಿಯೊ ಕಾರ್ಯಕ್ರಮ, ಜನಸಂಖ್ಯಾ ಗಣತಿ, ಮಲೇರಿಯಾ, ಪರಿಸರ ಮಾಲಿನ್ಯ ಮತ್ತಿತರ ಕ್ಷೇತ್ರಗಳ ಸಮೀಕ್ಷೆ ಇತ್ಯಾದಿ ಕಾರ್ಯಗಳಿಗೆ ಶಿಕ್ಷಕರನ್ನು ಬಳಸಿಕೊಳ್ಳಲು ಸರ್ಕಾರವು ಸುತ್ತೋಲೆ ಹೊರಡಿಸುತ್ತಿರುವುದನ್ನು ಪ್ರಶ್ನಿಸಿ ಸೇಂಟ್ ಮೇರೀಸ್ ಶಾಲೆಯು ದೆಹಲಿ ಹೈಕೋರ್ಟಿಗೆ ಅರ್ಜಿ ಸಲ್ಲಿಸಿತ್ತು. ಇಂತಹ ಕೆಲಸಗಳಿಂದ ಅಪೂರ್ಣ ಬೋಧನೆ, ತರಗತಿಗೆ ವಿದ್ಯಾರ್ಥಿಗಳ ಗೈರು, ಕೆಟ್ಟಫಲಿತಾಂಶ, ಗುಣಮಟ್ಟವಿಲ್ಲದ ಶಿಕ್ಷಣ ಮುಂತಾದ ದುಷ್ಪರಿಣಾಮಗಳನ್ನು ತಡೆಯಲು ಮಧ್ಯಪ್ರವೇಶ ಮಾಡಬೇಕೆಂದು ಅರ್ಜಿದಾರರು ಕೋರಿದ್ದರು.

2007: ವೈರಿ ಕ್ಷಿಪಣಿಗಳನ್ನು ಆಗಸದಲ್ಲೇ ನಾಶ ಪಡಿಸುವ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿ ಆರ್ ಡಿ ಒ) ಬಂಗಾಳ ಕೊಲ್ಲಿಯಲ್ಲಿ ದೇಶೀಯವಾಗಿ ನಿರ್ಮಿಸಿದ ಕ್ಷಿಪಣಿ ನಿರೋಧಕ ವ್ಯವಸ್ಥೆಯನ್ನು 2ನೇ ಬಾರಿ ಪರೀಕ್ಷೆಗೆ ಒಡ್ಡಿತು. ಈ ಪ್ರಾಯೋಗಿಕ ಪರೀಕ್ಷೆ ಕರಾರುವಾಕ್ಕಾಗಿ ನಡೆದು `ಡಿ ಆರ್ ಡಿ ಒ' ವಿಜ್ಞಾನಿಗಳ ಮುಖದಲ್ಲಿ ಸಂತಸ ಮೂಡಿತು. ಪರೀಕ್ಷೆಯ ಅಂಗವಾಗಿ ಮೊದಲು ಮಾರ್ಪಡಿಸಿದ ಪೃಥ್ವಿ ಕ್ಷಿಪಣಿಯನ್ನು ಬಾಲಸೋರಿನ ಚಂಡಿಪುರದಿಂದ ಹಾರಿಸಲಾಯಿತು. ಅದನ್ನು ಆಗಸದಲ್ಲೇ ನಾಶಪಡಿಸಲು 2 ನಿಮಿಷ 40 ಸೆಕೆಂಡ್ ನಂತರ ಪಕ್ಕದ ಭದ್ರಕ್ ಜಿಲ್ಲೆಯ ವೀಲ್ಹರ್ ದ್ವೀಪದಿಂದ ಮತ್ತೊಂದು ಕ್ಷಿಪಣಿಯನ್ನು (ಅತ್ಯಾಧುನಿಕ ವಾಯು ರಕ್ಷಣಾ ವ್ಯವಸ್ಥೆ) ಹಾರಿಬಿಡಲಾಯಿತು.

2007: `ಅಕ್ರಮ- ಸಕ್ರಮ ಯೋಜನೆ ಬಗ್ಗೆ ರಾಜ್ಯ ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ, ಬದಲಿಗೆ ಡಿಸೆಂಬರ್ 10ರಂದು ಹೈಕೋರ್ಟ್ ನೀಡುವ ನಿರ್ದೇಶನವನ್ನು ಪಾಲಿಸುವುದು' ಎಂದು ಎಂದು ರಾಜ್ಯಪಾಲ ರಾಮೇಶ್ವರ ಠಾಕೂರ್ ಸರ್ಕಾರದ ಕಾರ್ಯಕಾರಿ ಸಮಿತಿ ಸಭೆಯ ಬಳಿಕ ಹೇಳಿದರು. ಇದರಿಂದಾಗಿ ಸಕ್ರಮ ಚೆಂಡು ಮತ್ತೆ ನ್ಯಾಯಾಲಯಕ್ಕೆ ಹೊರಳಿದಂತಾಯಿತು.

2007: ರಕ್ತ ಕ್ಯಾನ್ಸರ್ ರೋಗಿಗಳಿಗೆ ಅತ್ಯಂತ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ನೀಡುವ ನೂತನ ಯೋಜನೆಯನ್ನು `ಡಾಬರ್ ಆಂಕ್ವೆಸ್ಟ್' ದೇಶದಲ್ಲಿಯೇ ಪ್ರಥಮ ಬಾರಿಗೆ ಬೆಂಗಳೂರಿನಲ್ಲಿ ಪರಿಚಯಿಸಿತು. ಸಂಸ್ಥೆಯು ಆಯ್ದ ರೋಗಿಗಳಿಗೆ ನೀಡಲಾಗುವ ಚಿಕಿತ್ಸೆಯ ಉಸ್ತುವಾರಿ ವಹಿಸಿಕೊಳ್ಳುವುದು. ಆದರೆ ಯೋಜನೆಯನ್ನು ಮೂರನೇ ಸಂಸ್ಥೆ ಜಾರಿ ತರಲಿದ್ದು ಆ ಸಂಸ್ಥೆಯೇ ರೋಗಿಗಳನ್ನು ಗುರುತಿಸುವುದು. ಪ್ರಸ್ತುತ ರೋಗ ಪತ್ತೆಗೆ ಸಂಬಂಧಿಸಿದ ಎಲ್ಲ ನಾಲ್ಕು ಪರೀಕ್ಷೆಗಳಿಗೆ ಸುಮಾರು 24 ಸಾವಿರ ರೂಪಾಯಿ ವೆಚ್ಚವಾಗುತ್ತಿದ್ದು, ಈ ಯೋಜನೆಯಡಿ 10,200 ರೂಪಾಯಿಗಳಿಗೆ ಎಲ್ಲ ನಾಲ್ಕೂ ಪರೀಕ್ಷೆಗಳನ್ನು ಮಾಡಿಸಿಕೊಳ್ಳಬಹುದು.

2007: ಧರ್ಮಪುರಿಯಲ್ಲಿ 2000ರ ಫೆಬ್ರುವರಿಯಲ್ಲಿ ಬಸ್ಸಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಣ್ಣಾಡಿಎಂಕೆ ಪಕ್ಷದ ಮೂವರು ಕಾರ್ಯಕರ್ತರಿಗೆ ವಿಚಾರಣಾ ನ್ಯಾಯಾಲಯ ನೀಡಿದ್ದ ಮರಣ ದಂಡನೆಯನ್ನು ಮದ್ರಾಸ್ ಹೈಕೋರ್ಟ್ ಕಾಯಂಗೊಳಿಸಿತು. ತಮಿಳುನಾಡು ಕೃಷಿ ವಿಶ್ವವಿದ್ಯಾಲಯದ ಬಸ್ಸಿಗೆ 2000ದ ಫೆಬ್ರುವರಿಯಲ್ಲಿ ಅಣ್ಣಾಡಿಎಂಕೆ ಕಾರ್ಯಕರ್ತರು ಧರ್ಮಪುರಿಯಲ್ಲಿ ಬೆಂಕಿ ಹಚ್ಚಿದ್ದರು. ಪ್ಲೆಸೆಂಟ್ ಸ್ಟೇ ಹೋಟೆಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪಕ್ಷದ ನಾಯಕಿ, ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರಿಗೆ ವಿಶೇಷ ನ್ಯಾಯಾಲಯ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದ್ದನ್ನು ವಿರೋಧಿಸಿ ಕಾರ್ಯಕರ್ತರು ಬಸ್ಸಿಗೆ ಬೆಂಕಿ ಹಚ್ಚಿದ್ದರು. ಆಗ ವಿಶ್ವ ವಿದ್ಯಾಲಯದ ಮೂವರು ವಿದ್ಯಾರ್ಥಿನಿಯರು ಸಜೀವ ದಹನ ಗೊಂಡಿದ್ದರು.

2007: ಜರ್ಮನಿ ಮೂಲದ ವಿಶ್ವದ ಅತಿ ದೊಡ್ಡ ಖಾಸಗಿ ಕೈಗಾರಿಕಾ ಸಂಸ್ಥೆ ಬಾಷ್, ಭಾರತದಲ್ಲಿನ ತನ್ನ ವಿವಿಧ ಕಾರ್ಯಾಚರಣೆಗಳಲ್ಲಿ ರೂ 850 ಕೋಟಿಗಳಷ್ಟು ಹೆಚ್ಚುವರಿ ಬಂಡವಾಳ ಹೂಡಲು ನಿರ್ಧರಿಸಿತು. ಇದರಿಂದ ಭಾರತದಲ್ಲಿನ ಬಾಷ್ ನ ಒಟ್ಟು ಹೂಡಿಕೆಯು 2010ನೇ ಇಸ್ವಿ ಹೊತ್ತಿಗೆ ರೂ 2,650 ಕೋಟಿಗಳಷ್ಟಾಗಲಿದೆ. ಮೋಟಾರ್ ಇಂಡಸ್ಟ್ರೀಸ್ ಕಂಪೆನಿಯು ಲಿಮಿಟೆಡ್ (ಮೈಕೊ) ಹೆಸರನ್ನು ಬಾಷ್ ಲಿಮಿಟೆಡ್ ಎಂದು ಬದಲಾಯಿಸಲು ಮೈಕೊದ ನಿರ್ದೇಶಕ ಮಂಡಳಿಯು ನಿರ್ಧರಿಸಿತು.

2007: ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನದ ಬಳಿಕ ತಾಂತ್ರಿಕ ಕ್ಷೇತ್ರದಲ್ಲಿ ಮುಂದಿನ ದಿನಗಳು ನ್ಯಾನೊ ತಂತ್ರಜ್ಞಾನದ್ದಾಗಿದ್ದು, ಇದಕ್ಕೆ ಸರ್ಕಾರ, ಸಮಾಜ ಸಜ್ಜಾಗಬೇಕು ಎಂಬ ಸ್ಪಷ್ಟ ಸಂದೇಶದೊಂದಿಗೆ ದೇಶದ ಪ್ರಥಮ ನ್ಯಾನೊ ಸಮ್ಮೇಳನ ಬೆಂಗಳೂರಿನಲ್ಲಿ ಆರಂಭವಾಯಿತು. ರಾಜ್ಯಪಾಲ ರಾಮೇಶ್ವರ ಠಾಕೂರ್ ಸಮ್ಮೇಳನವನ್ನು ಉದ್ಘಾಟಿಸಿದರು.

2006: ರಸ್ತೆಬದಿ ಜಗಳ ಸಾವಿನಲ್ಲಿ ಅಂತ್ಯಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಖ್ಯಾತ ಕ್ರಿಕೆಟಿಗ, ಬಿಜೆಪಿ ಮುಖಂಡ ನವಜೋತ್ಸಿಂಗ್ ಸಿಧು ಅವರಿಗೆ ಪಂಜಾಬ್- ಹರಿಯಾಣ ಹೈಕೋರ್ಟ್ ಮೂರು ವರ್ಷಗಳ ಕಠಿಣ ಸಜೆ ಮತ್ತು ಒಂದು ಲಕ್ಷ ರೂಪಾಯಿ ದಂಡ ವಿಧಿಸಿತು. ಮತ್ತೊಬ್ಬ ಆರೋಪಿ ರೂಪಿಂದರ್ ಸಿಂಗ್ ಸಂಧು ಅವರಿಗೂ ಇದೇ ಶಿಕ್ಷೆ ವಿಧಿಸಲಾಯಿತು.

2006: ಭ್ರಷ್ಟಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಮತ್ತು ಸಚಿವರು ಸೇರಿದಂತೆ ಜನ ಪ್ರತಿನಿಧಿಗಳನ್ನು ಕಾನೂನು ವಿಚಾರಣೆಗೆ ಗುರಿಪಡಿಸಲು ಪೂರ್ವಾನುಮತಿಯ ಅಗತ್ಯ ಇಲ್ಲ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿತು.

2006: ಜೈನ ಸಾಹಿತ್ಯಕ್ಕೆ ಮೌಲಿಕ ಕೊಡುಗೆ ನೀಡಿದ ಹಿರಿಯ ಸಾಹಿತಿ ಎಸ್. ಬಿ. ವಸಂತರಾಜಯ್ಯ ಅವರನ್ನು 2006-07ರ ಸಾಲಿನ `ಚಾವುಂಡರಾಯ ಪ್ರಶಸ್ತಿ'ಗೆ ಕನ್ನಡ ಸಾಹಿತ್ಯ ಪರಿಷತ್ ಆಯ್ಕೆ ಮಾಡಿತು. 15ಕ್ಕೂ ಅಧಿಕ ಜೈನ ಸಾಹಿತ್ಯ ಕೃತಿಗಳನ್ನು ಅವರು ರಚಿಸಿದ್ದಾರೆ.

2006: ಫಿಜಿಯಲ್ಲಿ ಕ್ಷಿಪ್ರಕ್ರಾಂತಿ ನಡೆಸಿದ್ದ ಸೇನಾ ದಂಡನಾಯಕ ಫ್ರಾಂಕ್ ಬೈನಿಮರಮ ರಾಷ್ಟ್ರದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಷಿ, ಸಂಸತ್ ವಿಸರ್ಜಿಸುವ ಮೂಲಕ ತಮ್ಮ ಹಿಡಿತ ಭದ್ರಗೊಳಿಸಿದರು.

2005: ರಾಷ್ಟ್ರಧ್ವಜವನ್ನು ವಸ್ತ್ರ ಮತ್ತು ಸಮವಸ್ತ್ರವಾಗಿ ಗೌರವಾರ್ಹ ರೂಪದಲ್ಲಿ ಧರಿಸಲು ಅವಕಾಶ ನೀಡುವ ರಾಷ್ಟ್ರೀಯ ಗೌರವ (ತಿದ್ದುಪಡಿ) ಮಸೂದೆಗೆ ಲೋಕಸಭೆ ಅಂಗೀಕಾರ ನೀಡಿತು. ರಾಷ್ಟ್ರಧ್ವಜವನ್ನು ಇನ್ನು ಮುಂದೆ ಉಡುಪು, ಸಮವಸ್ತ್ರದ ಮೇಲೆ ಗೌರವಯುತ ರೀತಿಯಲ್ಲಿ ಬಳಸಿಕೊಳ್ಳಬಹುದು. ಆದರೆ ರಾಷ್ಟ್ರಧ್ವಜವನ್ನು ಸೊಂಟದ ಕೆಳಗೆ ಹಾಗೂ ಕುಷನ್, ಕರವಸ್ತ್ರಗಳು, ನ್ಯಾಪ್ ಕಿನ್, ಒಳ ಉಡುಪು ಮುಂತಾದ ನಿತ್ಯಬಳಕೆಯ ವಸ್ತುಗಳ ಮೇಲೆ ಬಳಸುವಂತಿಲ್ಲ. ಧ್ವಜದ ಮೇಲೆ ಕಸೂತಿ ಅಥವಾ ಮುದ್ರಣ ಮಾಡುವಂತಿಲ್ಲ. ಗೃಹಖಾತೆಯ ರಾಜ್ಯಸಚಿವ ಮಾಣಿಕ್ ರಾವ್ ಗವಿಟ್ ಲೋಕಸಭೆಯಲ್ಲಿ ಈ ಮಸೂದೆಯನ್ನು ಮಂಡಿಸಿದರು.

2005: ಸಿಲಿಕಾನ್ ಲೋಹದ ಅಸ್ಪಟಿಕ ರೂಪ (ಎಮಾರ್ಫಸ್ ಸಿಲಿಕಾನ್) ಪತ್ತೆ ಕ್ಷೇತ್ರದಲ್ಲಿ ಹೆಸರು ಮಾಡಿದ ಭಾರತೀಯ ಮೂಲದ ಅಮೆರಿಕನ್ ವಿಜ್ಞಾನಿ ಸುಬೇಂದು ಗುಹಾ ಅವರು ಇಂಧನ ಕ್ಷೇತ್ರದ ಪ್ರತಿಷ್ಠಿತ 2005ನೇ ಸಾಲಿನ ಜಾಗತಿಕ ತಂತ್ರಜ್ಞಾನ ಪ್ರಶಸ್ತಿಗೆ ಆಯ್ಕೆಯಾದರು. ಸ್ಯಾನ್ ಫ್ರಾನ್ಸಿಸ್ಕೊದಲ್ಲಿ ನಡೆದ ವಿಶ್ವತಂತ್ರಜ್ಞಾನ ಶೃಂಗಸಭೆಯಲ್ಲಿ ಈ ಪ್ರಶಸ್ತಿಯನ್ನು ಪ್ರಕಟಿಸಲಾಯಿತು.

2005: ಕೇಂದ್ರ ಸಂಪುಟಕ್ಕೆ ತಮ್ಮ ರಾಜೀನಾಮೆ ನೀಡುವ ನಿರ್ಧಾರವನ್ನು ಕೇಂದ್ರ ದ ಖಾತಾ ರಹಿತ ಸಚಿವ ಕೆ. ನಟವರ್ಸಿಂಗ್ ಅವರು ನವದೆಹಲಿಯಲ್ಲಿ ನಡುರಾತ್ರಿ ಪ್ರಕಟಿಸಿದರು. ವೋಲ್ಕರ್ ವರದಿ ಹಿನ್ನೆಲೆಯಲ್ಲಿ ಭುಗಿಲೆದ್ದ ಭಾರೀ ವಿವಾದದ ಹಿನ್ನೆಲೆಯಲ್ಲಿ ಇದಕ್ಕೆ ಮೊದಲು ಅವರು ವಿದೇಶಾಂಗ ಖಾತೆಯನ್ನು ಕಳೆದುಕೊಂಡಿದ್ದರು. ಡಿಸೆಂಬರ್ 5 ರ ರಾತ್ರಿ ಕಾಂಗ್ರೆಸ್ ಪಕ್ಷದ ಚಾಲನಾ ಸಮಿತಿಯಿಂದ ಕಿತ್ತು ಹಾಕಲಾಯಿತು. ಕ್ರೊಯೇಷಿಯಾ ರಾಯಭಾರಿಯಾಗಿದ್ದ ಅನಿಲ್ ಮಥೆರಾನಿ ಅವರು ಆಹಾರಕ್ಕಾಗಿ ತೈಲ ಪ್ರಕರಣದ ಮುಖ್ಯ ಫಲಾನುಭವಿ ನಟವರ್ ಸಿಂಗ್ ಎಂಬುದಾಗಿ ಹೇಳಿದ ಹಿನ್ನೆಲೆಯಲ್ಲಿ ನಟವರ್ ರಾಜೀನಾಮೆ ನೀಡಬೇಕು ಎಂದು ಪಟ್ಟು ಹಿಡಿದು ವಿರೋಧಪಕ್ಷಗಳು ಸಂಸತ್ತಿನ ಕಲಾಪಗಳನ್ನು ಸ್ಥಗಿತಗೊಳಿಸುತ್ತಾ ಬಂದಿದ್ದವು.

2005: ಇರಾನಿನ ಟೆಹರಾನಿನಲ್ಲಿ ಸೇನೆಯ ಸರಕುಸಾಗಣೆ ವಿಮಾನ 10 ಅಂತಸ್ತಿನ ಕಟ್ಟಡಕ್ಕೆ ಅಪ್ಪಳಿಸಿ 119 ಜನ ಅಸುನೀಗಿದರು. ಪತ್ರಕರ್ತರೇ ಅಧಿಕ ಸಂಖ್ಯೆಯಲ್ಲಿದ್ದ ವಿಮಾನದೊಳಗಿನ 94 ಮಂದಿ ಸತ್ತರೆ, ಕಟ್ಟಡದಲ್ಲಿದ್ದ 25 ಮಂದಿ ಮೃತರಾಗಿ 80ಕ್ಕೂ ಹೆಚ್ಚು ಜನ ಗಾಯಗೊಂಡರು. ಪತ್ರಕರ್ತರು ಬಂಡಾ ಅಬ್ಬಾಸ್ ಪಟ್ಟಣಕ್ಕೆ ಸೇನಾ ಕವಾಯತು ವರದಿಗಾಗಿ ಹೊರಟಿದ್ದರು.

2005: ಪರಿಸರ ಶಿಕ್ಷಣಕ್ಕೆ ಆಂದೋಲನದ ರೂಪ ನೀಡಿದ ಮೈಸೂರಿನ ಪಕ್ಷಿ ತಜ್ಞ ಕೆ. ಮನು ಅವರಿಗೆ ಹಸಿರು ಶಿಕ್ಷಕ ಪ್ರಶಸ್ತಿ ಘೋಷಿಸಲಾಯಿತು. ಪ್ರತಿಷ್ಠಿತ ಸ್ಯಾಂಚುರಿ ಏಷ್ಯಾ ಪತ್ರಿಕೆ ಮತ್ತು ಎಬಿಎನ್ ಆಮ್ರೊ ಬ್ಯಾಂಕಿನ ಸಹಯೋಗದಲ್ಲಿ ಈ ಪ್ರಶಸ್ತಿ ಸ್ಥಾಪಿಸಲಾಗಿದೆ.

2005: ಹುಬ್ಬಳ್ಳಿಯಲ್ಲಿ ರಾಷ್ಟ್ರೀಯ ಹಿಂದೂಸೇನೆ ಉದಯ. ಭಜರಂಗದಳದಿಂದ ಶಿವಸೇನೆ ಸೇರಿ ಅಲ್ಲಿಂದಲೂ ಹೊರಬಂದ ಪ್ರಮೋದ್ ಮುತಾಲಿಕ್ ಈ ಸೇನೆಯ ಅಧ್ಯಕ್ಷರಾಗಿದ್ದು ಗಾಜಿನಮನೆಯಲ್ಲಿ ಹೊಸ ಪಕ್ಷದ ಉದಯವನ್ನು ಘೋಷಿಸಿದರು.

2001: ಕಾರುಗಳಲ್ಲಿ ಮುಂಭಾಗದಲ್ಲಿ ಕುಳಿತು ಪ್ರಯಾಣ ಮಾಡುವವರು ಸೀಟ್ ಬೆಲ್ಟ್ಗಳನ್ನು ಧರಿಸುವುದು ಕಡ್ಡಾಯ ಎಂದು ಭಾರತದ ಸುಪ್ರೀಂ ಕೋರ್ಟ್ ತೀರ್ಪು ನೀಡಿತು.

1992: ಉತ್ತರ ಪ್ರದೇಶದ ಅಯೋಧ್ಯೆಯ ಬಾಬರಿ ಮಸೀದಿ- ರಾಮಜನ್ಮಭೂಮಿ ವಿವಾದಕ್ಕೆ ಸಂಬಂಧಿಸಿದಂತೆ ತೀವ್ರಗೊಳ್ಳುತ್ತಾ ನಡೆದ ಸರಣಿ ಘಟನೆಗಳು ಈ ದಿನ ಅಯೋಧ್ಯೆಯಲ್ಲಿ ವಿವಾದಿತ ರಾಮಜನ್ಮಭೂಮಿ- ಬಾಬರಿ ಮಸೀದಿ ಕಟ್ಟಡ ಧ್ವಂಸದೊಂದಿಗೆ ಪರ್ಯವಸಾನಗೊಂಡವು.

1956: ಭಾರತೀಯ ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷ ಭೀಮರಾವ್ ರಾಮ್ ಜಿ ಅಂಬೇಡ್ಕರ್ ತಮ್ಮ 65ನೇ ವಯಸ್ಸಿನಲ್ಲಿ ನಿಧನರಾದರು. ಇವರು ಭಾರತ ಸರ್ಕಾರದ ಪ್ರಥಮ ಕಾನೂನು ಸಚಿವರಾಗಿದ್ದರು. ಈ ದಿನವನ್ನು ಮಹಾರಾಷ್ಟ್ರದಲ್ಲಿ `ಮಹಾಪರಿನಿವರ್ಾಣ ದಿನ' ಆಗಿ ಆಚರಿಸಲಾಗುತ್ತದೆ.

1955: ಸಾಹಿತಿ ಪೂರ್ಣಿಮಾ ರಾಮಣ್ಣ ಜನನ.

1949: ಸಾಹಿತಿ ಶಿವಳ್ಳಿ ಕೆಂಪೇಗೌಡ ಜನನ.

1947: ಸಾಹಿತಿ ಡಾ. ಡಿ.ಎಸ್. ಜಯಪ್ಪ ಗೌಡರ ಜನನ.

1934: ಪ್ರಾಧ್ಯಾಪಕ, ಜಾನಪದ ತಜ್ಞ, ಮಹಾದೇವಯ್ಯ ಅವರು ರುದ್ರಯ್ಯ- ಹೊನ್ನಮ್ಮ ದಂಪತಿಯ ಮಗನಾಗಿ ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ತಿಪ್ಪೂರು ಗ್ರಾಮದಲ್ಲಿ ಜನಿಸಿದರು.

1898: ಜರ್ಮನ್ ಸಂಜಾತ ಛಾಯಾಗ್ರಾಹಕ ಆಲ್ ಫ್ರೆಡ್ ಐಸೆನ್ ಸ್ಟೇಟ್ (1898-1995) ಹುಟ್ಟಿದ ದಿನ. `ಲೈಫ್' ಪತ್ರಿಕೆಗೆ ಇವರು ಒದಗಿಸುತ್ತಿದ್ದ ಛಾಯಾಚಿತ್ರಗಳು ಅಮೆರಿಕಾದ `ಫೊಟೋ ಜರ್ನಲಿಸಂ'ನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದವು.

1877: ಅಮೆರಿಕನ್ ಸಂಶೋಧಕ ಥಾಮಸ್ ಆಲ್ವಾ ಎಡಿಸನ್ ಅವರಿಂದ ಮೊತ್ತ ಮೊದಲ ಧ್ವನಿ ಮುದ್ರಣ ನಡೆಯಿತು. ನ್ಯೂ ಜೆರ್ಸಿಯ ವೆಸ್ಟ್ ಆರೆಂಜಿನಲ್ಲಿ ನಡೆದ ಪ್ರದರ್ಶನದಲ್ಲಿ ಎಡಿಸನ್ ಫೋನೋಗ್ರಾಫ್ ಎದುರು `ಮೇರಿ ಹ್ಯಾಡ್ ಎ ಲಿಟ್ಲ್ ಲ್ಯಾಂಬ್' ಹಾಡಿದಾಗ ಅದು ಮುದ್ರಣಗೊಂಡು ನಂತರ ಪುನಃ ಆಲಿಸಲು ಸಾಧ್ಯವಾಯಿತು.

1823: ಈ ದಿನ ಜರ್ಮನ್ ಭಾಷಾ ತಜ್ಞ ಮ್ಯಾಕ್ಸ್ ಮುಲ್ಲರ್ (1823-1900) ಜನ್ಮದಿನ. `ದಿ ಸೇಕ್ರೆಡ್ ಬುಕ್ಸ್ ಆಫ್ ಈಸ್ಟ್' ನ್ನು ಸಂಪಾದಿಸಿದ್ದು ಇವರ ಮಹತ್ತರ ಸಾಧನೆ. `ಋಗ್ವೇದ' ಸಂಪಾದಿಸಿದ ಹೆಗ್ಗಳಿಕೆಯೂ ಇವರಿಗಿದೆ.

No comments:

Advertisement