Sunday, January 17, 2010

ಇಂದಿನ ಇತಿಹಾಸ History Today ಡಿಸೆಂಬರ್ 17


ಇಂದಿನ ಇತಿಹಾಸ

ಡಿಸೆಂಬರ್ 17


ಸತತ ಮೂರನೇ ಅವಧಿಗೆ ಮುಖ್ಯಮಂತ್ರಿಯಾಗಿ ಅಧಿಕಾರದ ಗದ್ದುಗೆ ಏರುವ ಮೂಲಕ ಶೀಲಾ ದೀಕ್ಷಿತ್ ಅವರು ಇಡೀ ದೇಶದಲ್ಲಿಯೇ ಅತ್ಯಂತ ಪ್ರಭಾವಶಾಲಿ ರಾಜಕಾರಣಿಗಳಲ್ಲಿ ತಾವೂ ಒಬ್ಬರು ಎನ್ನುವುದನ್ನು ಸಾಬೀತುಪಡಿಸಿದರು. ದೆಹಲಿಯ ಲೆಫ್ಟಿನೆಂಟ್ ಗವರ್ನರ್ ತೇಜೇಂದರ್ ಖನ್ನಾ ತಮ್ಮ ಅಧಿಕೃತ ನಿವಾಸದಲ್ಲಿ ದೀಕ್ಷಿತ್ ಅವರಿಗೆ ಅಧಿಕಾರ ಗೋಪ್ಯತೆಯ ಪ್ರಮಾಣ ವಚನ ಬೋಧಿಸಿದರು. ಇತರ ಆರು ಸಚಿವರು ದೀಕ್ಷಿತ್ ಜೊತೆಗೆ ಪ್ರಮಾಣವಚನ ಸ್ವೀಕರಿಸಿದರು.

2014: ಲಂಡನ್: ಪ್ರಪಂಚದಾದ್ಯಂತ ಸಮುದ್ರಗಳು ಪ್ಲಾಸ್ಟಿಕ್ ಕಸದ ತೊಟ್ಟಿಯಾಗಿ ಪರಿವರ್ತನೆಯಾಗಿದ್ದು ಸಾಗರದ ಜಲಚರಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿವೆ ಎಂದು ಅಧ್ಯಯನವೊಂದು ತಿಳಿಸಿತು.. ಪ್ಲೆಮೌತ್ ವಿಶ್ವವಿದ್ಯಾಲಯ ಮತ್ತು ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂ ವಿಜ್ಞಾನಿಗಳು ನಡೆಸಿದ ಅಧ್ಯಯನದಿಂದ ಸಾಗರ ತಳದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಅತೀ ಹೆಚ್ಚಿನ ಪ್ರಮಾಣದಲ್ಲಿ ಜಮೆಯಾಗಿರುವುದು ತಿಳಿದು ಬಂದಿತು. ಸಮುದ್ರದ ತಳದಲ್ಲಿ ಪ್ರತೀ ಚದರ ಕಿ.ಮೀ. ನಲ್ಲಿ ನಾಲ್ಕು ಬಿಲಿಯನ್ ಸೂಕ್ಷ್ಮ ಪ್ಲಾಸ್ಟಿಕ್ ತುಂಡುಗಳು ಜಮೆಯಾಗಿವೆ ಎಂಬ ಆಘಾತಕಾರಿ ಅಂಶ ಬಯಲಾಯಿತು. ಸಮುದ್ರದಲ್ಲಿ ಜಮೆಯಾಗಿರುವ ಪ್ಲಾಸ್ಟಿಕ್ನಿಂದಾಗಿ ಜಲಚರಗಳ ಜೀವನ ಚಕ್ರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಇದೊಂದು ಜಾಗತಿಕ ಸಮಸ್ಯೆಯಾಗಿದ್ದು, ಇದರಿಂದಾಗಿ ಪ್ರವಾಸೋದ್ಯಮ, ಮೀನುಗಾರಿಕೆ ಮತ್ತು ನೌಕಾಯಾನದ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತಿದೆ. ಕಸದ ರೂಪದಲ್ಲಿ ಸಮುದ್ರ ಸೇರುತ್ತಿರುವ ಪ್ಲಾಸ್ಟಿಕ್ ಸಣ್ಣ ಸಣ್ಣ ಚೂರುಗಳಾಗಿ ವಿಭಜನೆ ಹೊಂದಿ ಸಮುದ್ರದ ತಳದಲ್ಲಿ ಜಮೆಯಾಗುತ್ತಿವೆ. 2-3 ಮಿ.ಮೀ. ಗಾತ್ರದ ತುಂಡುಗಳಾಗಿ ವಿಭಜನೆ ಹೊಂದುವ ಪ್ಲಾಸ್ಟಿಕ್ ಸಾಮಾನ್ಯವಾಗಿ ನೀಲಿ, ಕಪ್ಪು, ಹಸಿರು ಅಥವಾ ಕೆಂಪು ಬಣ್ಣ ಹೊಂದಿರುತ್ತವೆ. ಜತೆಗೆ ಮಾನವ ನಿರ್ವಿುತ ಪಾಲಿಮರ್ಗಳಾದ ಪಾಲಿಯಸ್ಟರ್, ಪಾಲಿಮೈಡ್ಸ್, ಅಸಿಟೇಟ್ ಮತ್ತು ಆಕ್ರಲಿಕ್ ಹೆಚ್ಚಾಗಿ ಸಮುದ್ರದಲ್ಲಿ ಕಂಡು ಬಂದಿದೆ ಎಂದು ತಜ್ಞರು ತಿಳಿಸಿದರು.

2014:  ನವದೆಹಲಿ: ಪಾಕಿಸ್ತಾನದ ಪೇಶಾವರ ನಗರದಲ್ಲಿ 16-12-2014ರ ಮಂಗಳವಾರ ನಡೆದ ಭೀಭತ್ಸ ತಾಲಿಬಾನ್ ದಾಳಿಯಲ್ಲಿ ತಮ್ಮ ಪ್ರಾಣಗಳನ್ನು ಕಳೆದುಕೊಂಡವರ ಸ್ಮರಣೆಗಾಗಿ ಲೋಕಸಭೆಯು ಈದಿನ ಸಂಕ್ಷಿಪ್ತ ಮೌನ ಪ್ರಾರ್ಥನೆ ಸಲ್ಲಿಸಿತು. ಸದನ ಸಮಾವೇಶಗೊಂಡ ತತ್ ಕ್ಷಣವೇ ಲೋಕಸಭಾಧ್ಯಕ್ಷೆ ಸುಮಿತ್ರಾ ಮಹಾಜನ್ ಅವರು ಮೌನ ಆಚರಿಸುವಂತೆ ಮತ್ತು ದಾಳಿಯನ್ನು ಖಂಡಿಸುವಂತೆ ಸದಸ್ಯರನ್ನು ಕೋರಿದರು. ಪ್ರಧಾನಿ ನರೇಂದ್ರ ಮೋದಿ ಅವರೂ ಈ ಸಂದರ್ಭದಲ್ಲಿ ಸದನದಲ್ಲಿ ಹಾಜರಿದ್ದರು. ಪಾಕಿಸ್ತಾನಿ ತಾಲೀಬಾನ್ ಸಂಘಟನೆ ಸಶಸ್ತ್ರಧಾರಿ, ಆತ್ಮಾಹುತಿ ಬಾಂಬ್ ದಾಳಿಕೋರರ ಮೂಲಕ ಪೇಶಾವರ ನಗರದಲ್ಲಿ ಸೇನೆಯ ವತಿಯಿಂದ ನಡೆಯುವ ಶಾಲೆಯಲ್ಲಿ ರಕ್ತಪಾತ ಎಸಗಿ 148ಕ್ಕೂ ಹೆಚ್ಚು ಜನರನ್ನು ಕೊಂದಿತ್ತು. ಮೃತರಲ್ಲಿ 132ಕ್ಕೂ ಹೆಚ್ಚಿನ ಮಂದಿ ಮಕ್ಕಳಾಗಿದ್ದರು. ಅನಧಿಕೃತ ವರದಿಗಳ ಪ್ರಕಾರ ಸತ್ತವರ ಸಂಖ್ಯೆ 160ಕ್ಕೂ ಹೆಚ್ಚು. ಮಕ್ಕಳನ್ನು ಭಯಭೀತರನ್ನಾಗಿ ಮಾಡಲು ಭಯೋತ್ಪಾದಕರು ಅವರ ಎದುರಿನಲ್ಲಿಯೇ ಶಿಕ್ಷಕರೊಬ್ಬರನ್ನು ಸಜೀವವಾಗಿ ಸುಟ್ಟು ಹಾಕಿದ್ದರು.

2014:  ನವದೆಹಲಿ: ಇಂಚೋನ್ ಏಷಿಯನ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ಸ್ವೀಕರಿಸಲು ನಿರಾಕರಿಸಿದ್ದ ಭಾರತದ ಬಾಕ್ಸರ್ ಸರಿತಾ ದೇವಿ ಅವರನ್ನು ವಿಶ್ವ ಬಾಕ್ಸರ್ ಸಂಸ್ಥೆ ಎಐಬಿಎ ಒಂದು ವರ್ಷದ ಅವಧಿಗೆ ನಿಷೇಧಿಸಿತು. 1000 ಸಿಎಚ್ಎಫ್ (ಸ್ವಿಸ್ ಫ್ರಾಂಕ್) ದಂಡವನ್ನೂ ಆಕೆಗೆ ವಿಧಿಸಲಾಯಿತು. ವಿವಾದಾತ್ಮಕ ಪ್ರತಿಭಟನೆಯ ಹಿನ್ನೆಲೆಯಲ್ಲಿ ಸರಿತಾ ದೇವಿ ಅವರ ಬಗೆಗಿನ ನಿರ್ಧಾರವನ್ನು ದೀರ್ಘಕಾಲದಿಂದ ನನೆಗುದಿಯಲ್ಲಿ ಇಟ್ಟಿದ್ದ ಎಐಬಿಎ ಕಡೆಗೂ ಗುಮಾನಿಗೆ ತೆರೆ ಎಳೆಯಿತು. ಸರಿತಾ ಪ್ರತಿಭಟನೆ ಸಂದರ್ಭದಲ್ಲಿ ಅವರ ಪಕ್ಷ ವಹಿಸಿದ್ದಕ್ಕಾಗಿ ಭಾರತದ ವಿದೇಶೀ ಕೋಚ್ ಬಿ.ಐ. ಫರ್ನಾಂಡೆಸ್ ಅವರಿಗೂ ಎಐಬಿಎ ಎರಡು ವರ್ಷಗಳ ನಿಷೇಧ ಹೇರಿತು. ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಕೋಚ್ ಜಿ.ಎಚ್. ಸಂಧು ಅವರನ್ನು ಆರೋಪಮುಕ್ತ ಗೊಳಿಸಿತು.

2014: ಮುಂಬೈ: ಭಾರತೀಯ ಬಾಕ್ಸರ್ ಎಲ್. ಸರಿತಾ ದೇವಿ ವೃತ್ತಿಜೀವನ ಅಂತ್ಯಗೊಳ್ಳುವ ರೀತಿಯಲ್ಲಿ ಯಾವುದೇ ಕ್ರಮ ಜರುಗಿಸದಂತೆ ವಿಶ್ವ ಬಾಕ್ಸಿಂಗ್ ಸಂಸ್ಥೆಗೆ (ಎಐಬಿಎ) ಪತ್ರ ಬರೆದಿರುವುದಾಗಿ ಭಾರತದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಮುಂಬೈಯಲ್ಲಿ ತಿಳಿಸಿದರು. ಮಹಿಳಾ ಬಾಕ್ಸಿಂಗ್ ಮೇಲೆ ಇದು ಗಂಭೀರ ಪರಿಣಾಮ ಬೀರುತ್ತದೆನ್ನುವ ಅಭಿಪ್ರಾಯ ವ್ಯಕ್ತಪಡಿಸಿರುವ ಸಚಿನ್, ಸರಿತಾ ದೇವಿ ಮಾಡಿರುವ ಸಣ್ಣ ತಪ್ಪಿಗೆ ವೃತ್ತಿಜೀವನವೇ ಅಂತ್ಯಗೊಳ್ಳಬಾರದು. ಈ ಕಾಳಜಿಯೊಂದಿಗೆ ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದಾಗಿ ಹೇಳಿದರು. ಇಂಚೋನ್ನಲ್ಲಿ ನಡೆದ ಏಷ್ಯನ್ ಗೇಮ್ಸ್ನಲ್ಲಿ ಸರಿತಾದೇವಿ ವಿವಾದಾತ್ಮಕ ನಿರ್ಣಯವನ್ನು ಪ್ರತಿಭಟಿಸಿ, ಆಕ್ರೋಶದಿಂದ ಸ್ಥಳದಲ್ಲೇ ತಮ್ಮ ಪಾಲಿಗೆ ಸಂದ ಕಂಚಿನ ಪದಕ ಸ್ವೀಕರಿಸುವುದಿಲ್ಲ ಎಂದು ಹೇಳಿದ್ದರು. ಇದು ಎಐಬಿಎ ಕಣ್ಣು ಕೆಂಪಗಾಗಿಸಿತ್ತು. ನಿಯಮದಂತೆ ಅಂಪೈರ್ ನಿರ್ಣಯವನ್ನು ಗೌರವಿಸಬೇಕಿದ್ದ ಸರಿತಾ ಟೀಕೆಗೆ ಗುರಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಸರಿತಾಗೆ ಎಐಬಿಎ ಒಂದು ವರ್ಷ ನಿಷೇಧ ಮತ್ತು ಸಾವಿರ ರೂ. ದಂಡ ವಿಧಿಸಿತ್ತು.  ಸರಿತಾದೇವಿಗೆ ಒಂದು ವರ್ಷ ನಿಷೇಧ ಹೇರಿರುವುದರ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಸರ್ಕಾರ ಕೂಡಾ ನಿಷೇಧ ತೆರವುಗೊಳಿಸಲು ಪರಿಶೀಲಿಸುವಂತೆ ಮನವಿ ಮಾಡುವುದಾಗಿ ಹೇಳಿತು. ಈ ಬಗ್ಗೆ ಪ್ರತಿಕ್ರಿಯಿಸಿರುವ ಕ್ರೀಡಾ ಸಚಿವ ಸರನಾನಂದ ಸೊನೊವಾಲ್, ನಿಷೇಧದಿಂದ ಸರಿತಾದೇವಿ ಪ್ರದರ್ಶನದ ಮೇಲೆ ಪರಿಣಾಮ ಬೀರುತ್ತದೆ. ಪ್ರತಿಭಾವಂಥ ಬಾಕ್ಸರ್ ಇದರಿಂದ ಆತ್ಮವಿಶ್ವಾಸ ಕಳೆದುಕೊಳ್ಳಬಹುದು. ಜೊತೆಗೆ ಮಹಿಳಾ ಬಾಕ್ಸಿಂಗ್ ಕ್ಷೇತ್ರದ ಪ್ರಗತಿ ಮೇಲೂ ಪರಿಣಾಮ ಬೀರಲಿದೆ. ಕಾರಣ ನಿಷೇಧ ತೆರವು ಮಾಡಲು ಪರಿಶೀಲಿಸುವಂತೆ ಮನವಿ ಮಾಡುವುದಾಗಿ ಹೇಳಿದರು

2014: ನವದೆಹಲಿ: ತೈಲ ಕಂಪೆನಿಗಳು ಇಂಧನ ಪೂರೈಕೆಗೆ ನಿರಾಕರಿಸಿದ್ದನ್ನು ಅನುಸರಿಸಿ ಕಡಿಮೆ ಬಜೆಟ್ ವಾಹಕ ಸ್ಪೈಸ್ ಜೆಟ್ ಕಾರ್ಯಾಚರಣೆ ಈದಿನ ಬೆಳಗ್ಗೆಯಿಂದ ಸ್ಥಗಿತಗೊಂಡರೂ ಸಂಜೆ 4 ಗಂಟೆ ವೇಳೆಗೆ ಸಂಚಾರ ಪುನರಾರಂಭಿಸಿತು.  ಸ್ಪೈಸ್ ಜೆಟ್ ಹೇಳಿಕೆ ಪ್ರಕಾರ ಸಂಸ್ಥೆಗೆ ಇಂಧನ ಸರಬರಾಜಿಗೆ ತೈಲ ಕಂಪೆನಿಗಳು ನಿರಾಕರಿಸಿದ ಬಳಿಕ ಒಂದೇ ಒಂದು ಸ್ಪೈಸ್ ಜೆಟ್ ವಿಮಾನವೂ ಸಂಚರಿಸಲಿಲ್ಲ. ಈ ಮಧ್ಯೆ, ಬಿಕ್ಕಟ್ಟಿನಿಂದ ಪಾರಾಗುವ ಸಲುವಾಗಿ ಸ್ಪೈಸ್ ಜೆಟ್ಗೆ 600 ಕೋಟಿ ರೂಪಾಯಿಗಳಷ್ಟು ಕೆಲಸ ಬಂಡವಾಳ ಸಾಲ ಒದಗಿಸುವಂತೆ ನಾಗರಿಕ ವಿಮಾನಯಾನ ಸಚಿವಾಲಯವು ಬ್ಯಾಂಕುಗಳಿಗೆ ಸೂಚಿಸಿತು. ಪ್ರವರ್ತಕರಿಂದ ಖಚಿತ ಸಾಲದ ಭರವಸೆ ಬಂದ ಬಳಿಕ ಸ್ಪೈಸ್ ಜೆಟ್ಗೆ ಈ ತಾತ್ಕಾಲಿಕ ಪರಿಹಾರ ಸಿಕ್ಕಿತು. ಸಚಿವಾಲಯದಿಂದ ಈ ಪ್ರಕಟಣೆ ಹೊರಬೀಳುವುದಕ್ಕೆ ಮುನ್ನ ಬ್ಯಾಂಕುಗಳು ಸಾಲ ನೀಡುವ ಸಾಧ್ಯತೆಗಳಿಲ್ಲ ಎಂದು ಪ್ರವರ್ತಕರು ಭ್ರಮನಿರಸನಗೊಂಡಿದ್ದರು. ಕಿಂಗ್ಫಿಶರ್ ಏರ್ಲೈನ್ಸ್ ವಿಮಾನಯಾನ ಸಂಸ್ಥೆ ನೆಲಕಚ್ಚಿದ ಅನುಭವದ ಹಿನ್ನೆಲೆಯಲ್ಲಿ ಸ್ಪೈಸ್ಜೆಟ್ಗೆ ಸಾಲರೂಪದ ನೆರವು ನೀಡಲು ಬ್ಯಾಂಕುಗಳು ಹಿಂದೇಟು ಹಾಕಿದ್ದವು. 'ಹಾಲಿ ಪರಿಸ್ಥಿತಿ ಮುಂದುವರೆದರೆ, ಏರ್ಲೈನ್ಗೆ ದಯಾಮರಣ ನೀಡುವುದರ ಹೊರತು ಬೇರೆ ಪರ್ಯಾಯವೇ ಇಲ್ಲ' ಎಂದು ಸನ್ಗ್ರೂಪ್ನ ಎಕ್ಸಿಕ್ಯೂಟಿವ್ ಒಬ್ಬರು ಹೇಳಿದ್ದರು. ಆದರೆ ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಸಂಸ್ಥೆಗಳು ಸ್ಪೈಸ್ ಜೆಟ್ಗೆ ಎರಡು ವಾರಗಳ ಸಾಲ ಸವಲತ್ತು ಆಧಾರದಲ್ಲಿ ಇಂಧನ ಸರಬರಾಜು ಮಾಡುವ ಬಗ್ಗೆ ಸಂಜೆವರೆಗೂ ನಿರ್ಧಾರ ಕೈಗೊಂಡಿರಲಿಲ್ಲ. 'ವಿಮಾನಗಳ ಹಾರಾಟ ಶೀಘ್ರದಲ್ಲೇ ಮಾಮೂಲಿಗೆ ಬರುವ ನಿರೀಕ್ಷೆ ಇದೆ ಎಂದು ಏರ್ಲೈನ್ ವಕ್ತಾರರು ತಮ್ಮನ್ನು ಸಂರ್ಪಸಿದ ಮಾಧ್ಯಮಗಳಿಗೆ ತಿಳಿಸಿದರು. ನಷ್ಟದೆಡೆಗೆ ಹೊರಳಿದ ವಿಮಾನಯಾನ ಕಂಪೆನಿಯ ನೆರವಿಗೆ ಬಂದ ನಾಗರಿಕ ವಿಮಾನಯಾನ ಸಚಿವಾಲಯವು 'ಏರ್ ಲೈನ್ಸ್ ರಕ್ಷಣೆ ಸಲುವಾಗಿ ಸ್ಪೈಸ್ ಜೆಟ್ಗೆ 15 ದಿನಗಳ ಸಾಲ ಸವಲತ್ತು ಕಲ್ಪಿಸುವಂತೆ ತೈಲ ಕಂಪೆನಿಗಳು ಮತ್ತು ವಿಮಾನ ನಿಲ್ದಾಣ ನಿರ್ವಾಹಕರಿಗೆ  ಮನವಿ ಮಾಡುವುದಾಗಿ ಭರವಸೆ ನೀಡಿತ್ತು.

2014: ಆಗ್ರಾ: ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಅವರ ಜನವರಿ 26ರ ಭಾರತ ಭೇಟಿಗೆ ಮುಂಚಿತವಾಗಿಯೇ ಅಮೆರಿಕದ ಭದ್ರತಾ ಸಲಹೆಗಾರರು, ಉಭಯ ಸದನಗಳ ಪ್ರತಿನಿಧಿಗಳು ಮತ್ತು ಪತ್ರಕರ್ತರನ್ನು ಒಳಗೊಂಡ 40 ಮಂದಿಯ ತಂಡವೊಂದು ಆಗ್ರಾದ ತಾಜ್ ಮಹಲ್ಗೆ ಭೇಟಿ ನೀಡಿ ಭದ್ರತಾ ವ್ಯವಸ್ಥೆ ಹಾಗೂ ಸಾಮಾನು ಸರಂಜಾಮು ಇಳಿಸುವ ಸ್ಥಳ ಪರಿಶೀಲನೆ ನಡೆಸಿತು. ಅಮೆರಿಕದ ಅಧ್ಯಕ್ಷರು ಆಗ್ರಾದಲ್ಲಿನ ತಾಜ್ವುಹಲ್ಗೆ ಭೇಟಿ ನೀಡುವ ನಿರೀಕ್ಷೆ ಇದೆ ಎಂದು ಅಧಿಕಾರಿಗಳು ತಿಳಿಸಿದರು. ಏನಿದ್ದರೂ ಆಗ್ರಾ ಭೇಟಿಯ ದಿನಾಂಕ ಇನ್ನೂ ಅಂತಿಮಗೊಂಡಿಲ್ಲ ಎಂದು ಅವರು ನುಡಿದರು. ಅಮೆರಿಕದ ಭದ್ರತಾ ತಂಡ 16-12-2014ರಂದು ಮಧ್ಯಾಹ್ನ ಖೇರಿಯಾ ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಭಾರತೀಯ ಪುರಾತತ್ವ ಸಮೀಕ್ಷಾ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿತು.

2014: ನವದೆಹಲಿ: ಪಾಕಿಸ್ತಾನದ ಪೇಶಾವರದಲ್ಲಿ ಶಾಲೆಯ ಮೇಲೆ ಭಯೋತ್ಪಾದಕ ದಾಳಿ ನಡೆದ ಹಿನ್ನೆಲೆಯಲ್ಲಿ ಎಲ್ಲ ಕಡೆ ಅದರಲ್ಲೂ ವಿಶೇಷವಾಗಿ ಶಿಕ್ಷಣ ಸಂಸ್ಥೆಗಳಲ್ಲಿ ಭದ್ರತೆ ಬಿಗಿಗೊಳಿಸುವಂತೆ ಕೇಂದ್ರ ಸರ್ಕಾರವು ರಾಜ್ಯಗಳಿಗೆ ಸೂಚನೆ ನೀಡಿತು. 'ಈ ನಿಟ್ಟಿನಲ್ಲಿ ಎಲ್ಲಾ ರಾಜ್ಯ ಸರ್ಕಾರಗಳಿಗೂ ಸಲಹಾತ್ಮಕ ನಿರ್ದೇಶನ ನೀಡಲಾಗಿದೆ' ಎಂದು ಗೃಹ ಸಚಿವ ರಾಜನಾಥ್ ಸಿಂಗ್ ಅವರು ಸಂಸತ್ತಿನ ಹೊರಗೆ ಪತ್ರಕರ್ತರ ಜೊತೆಗೆ ಮಾತನಾಡುತ್ತಾ ಹೇಳಿದರು. ಪೇಶಾವರ ಶಾಲೆಯ ಮೇಲೆ ಭಯೋತ್ಪಾದಕ ದಾಳಿ ನಡೆದ ಹಿನ್ನೆಲೆಯಲ್ಲಿ ರಾಷ್ಟ್ರದ ಶಾಲೆಗಳಲ್ಲಿ ಭದ್ರತಾ ಖಾತರಿಗೆ ಸರ್ಕಾರ ಕೈಗೊಂಡಿರುವ ಕ್ರಮಗಳೇನು ಎಂಬುದಾಗಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಸಚಿವರು ಉತ್ತರಿಸಿದರು.

2014: ನವದೆಹಲಿ: ಭಾರತದಲ್ಲಿ 5,200 ಪಾಕಿಸ್ತಾನೀಯರು ನಿಗದಿತ ಅವಧಿ ಮೀರಿದ ವಾಸ್ತವ್ಯ ಹೊಂದಿದವರಾಗಿದ್ದಾರೆ ಎಂದು ಸರ್ಕಾರ ಅಧಿಕೃತವಾಗಿ ತಿಳಿಸಿತು. ದಾಖಲೆಗಳ ಸಹಿತ ಭಾರತಕ್ಕೆ ಆಗಮಿಸಿದ್ದ ಪಾಕಿಸ್ತಾನಿಗಳಲ್ಲಿ ಇಷ್ಟು ಮಂದಿ ಅವಧಿ ಮುಗಿದರೂ ಇನ್ನೂ ವಾಸವಿದ್ದಾರೆ ಎನ್ನುವುದನ್ನು ರಾಜ್ಯಸಭೆಗೆ ಲಿಖಿತವಾಗಿ ತಿಳಿಸಿದ ಗೃಹ ಸಚಿವಾಲಯದ ರಾಜ್ಯ ಸಚಿವ ಕಿರೆಣ್ ರಿಜಿಜು, 2014, ಜೂನ್ನಲ್ಲಿ ದಾಖಲಿಸಲಾದ ಮಾಹಿತಿಯಂತೆ ದೇಶದಲ್ಲಿ 5,200 ಪಾಕಿಸ್ತಾನೀಯರು ಅನಧಿಕೃತವಾಗಿ ವಾಸವಿದ್ದಾರೆ ಎನ್ನುವ ಮಾಹಿತಿ ನೀಡಿದರು. ಪಾಕಿಸ್ತಾನದಲ್ಲಿ ನಡೆದ ವಿಶ್ವವನ್ನೇ ನಡುಗಿಸಿದ ಉಗ್ರರ ಅಟ್ಟಹಾಸದ ಹಿನ್ನೆಲೆಯಲ್ಲಿ ಮತ್ತು ಸಿಡ್ನಿಯಲ್ಲಿ ನಡೆದ ಘಟನೆಯ ಬಳಿಕ ಭಾರತದಲ್ಲೂ ಇದೇ ಮಾದರಿಯಲ್ಲೇ ದಾಳಿ ನಡೆಸುತ್ತೇವೆಂದು ಉಗ್ರರು ಬೆದರಿಕೆಯೊಡ್ಡಿದ ಹಿನ್ನೆಲೆಯಲ್ಲಿ ಈಗ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಿದೆ. ಕಾರಣ ಭಾರತದಲ್ಲಿರುವ ಪಾಕಿಸ್ತಾನೀಯರ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಮೂಲಗಳು ಹೇಳಿದವು.

2014: ಪೇಶಾವರ: ಪೇಶಾವರ ನಗರದ ಸೇನಾ ಶಾಲೆಯ ಮೇಲೆ ದಾಳಿ ನಡೆಸಿದ ತಾಲಿಬಾನ್ ಭಯೋತ್ಪಾದಕರು ಬಹುತೇಕ ಮಕ್ಕಳು ಸೇರಿದಂತೆ 150ಕ್ಕೂ ಹೆಚ್ಚು ಮಂದಿಯನ್ನು ಬಲಿತೆಗೆದುಕೊಂಡ ಒಂದು ದಿನದ ಬಳಿಕ ಪೇಶಾವರದಲ್ಲಿ ಮಾತನಾಡಿದ ಪಾಕಿಸ್ತಾನಿ ಪ್ರಧಾನಿ ನವಾಜ್ ಷರೀಫ್ ಅವರು ಭಯೋತ್ಪಾದನಾ ಪ್ರಕರಣಗಳಲ್ಲಿ ಮರಣ ದಂಡನೆ ಮೇಲಿನ ನಿಷೇಧವನ್ನು ರದ್ದು ಪಡಿಸಲಾಗುವುದು ಎಂದು ಘೋಷಿಸಿದರು. ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ರಾಷ್ಟ್ರವು ಏಕತೆಯಿಂದಿದೆ ಎಂದು ಅವರು ನುಡಿದರು. ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಪಾಕಿಸ್ತಾನದ ಎಲ್ಲಾ ಪಕ್ಷಗಳೂ ಒಂದಾಗಿವೆ ಎಂದು ನವಾಜ್ ಷರೀಫ್ ತಿಳಿಸಿದರು. ಮಕ್ಕಳ ಮಾರಣಹೋಮ ಘಟನೆಯ ಹಿನ್ನೆಲೆಯಲ್ಲಿ ಇಲ್ಲಿನ ಗವರ್ನರ್ ಭವನದಲ್ಲಿ ಪ್ರಧಾನಿ ಕರೆದಿದ್ದ ಸಭೆಯಲ್ಲಿ ಎಲ್ಲಾ ಪಕ್ಷಗಳ ಧುರೀಣರೂ ಪಾಲ್ಗೊಂಡಿದ್ದರು. 'ಪಾಕಿಸ್ತಾನದ ಇತಿಹಾಸದಲ್ಲಿ ಇದು ಅತ್ಯಂತ ಬೇಸರದ ದಿನ' ಎಂದು ಸಭೆಯಲ್ಲಿ ಪಾಲ್ಗೊಂಡದ್ದಕ್ಕಾಗಿ ಎಲ್ಲಾ ಪಕ್ಷಗಳ ಧುರೀಣರಿಗೆ ಧನ್ಯವಾದ ಹೇಳುತ್ತಾ ಷರೀಫ್ ನುಡಿದರು. 'ನಮ್ಮ ಮಕ್ಕಳ ಬಲಿದಾನ ವ್ಯರ್ಥವಾಗಲು ನಾವು ಬಿಡಬಾರದು. ಪೇಶಾವರ ಮುತ್ತಿಗೆ ಕ್ಷಣಗಳ ಎಲ್ಲಾ ಚಿತ್ರಗಳನ್ನೂ ನಾವು ನಮ್ಮ ಮನಸ್ಸಿನಲ್ಲಿ ಇಟ್ಟುಕೊಳ್ಳಬೇಕು ಮತ್ತು ಭಯೋತ್ಪಾದನೆ ವಿರುದ್ಧದ ಸಮರದಲ್ಲಿ ಹೆಚ್ಚಿನ ಹುಮ್ಮಸ್ಸಿನೊಂದಿಗೆ ಸಾಗಬೇಕು. ತಾಲಿಬಾನ್ ಜೊತೆಗಿನ ಮಾತುಕತೆಯಿಂದ ಯಾವ ಪ್ರಯೋಜನವೂ ಆಗಿಲ್ಲ' ಎಂದು ಅವರು ಹೇಳಿದರು. ಪಾಕಿಸ್ತಾನವು ದೀರ್ಘಕಾಲದಿಂದ ಭಯೋತ್ಪಾದನೆ ವಿರುದ್ಧ ಹೋರಾಟ ಮಾಡುತ್ತಿದೆ. ಈ ಹೋರಾಟವು ನಮ್ಮ ಆರ್ಥಿಕತೆ ಮೇಲೂ ಪರಿಣಾಮ ಬೀರಿದೆ. ಮಕ್ಕಳ ಮೇಲಿನ ದಾಳೀಯ ಭೀಕರ ಘಟನೆ ನಮ್ಮ ಕಣ್ಣು ತೆರೆಸಬೇಕು. ನಾವು ಝುರ್ಬ್-ಇ-ಅಝರ್  ಕಾರ್ಯಾಚರಣೆ ಮೂಲಕ ಭಯೋತ್ಪಾದನೆ ವಿರುದ್ಧ ಹೋರಾಡುತ್ತಿದ್ದೇವೆ. ನಾವು ಯಶಸ್ವಿಯಾಗುತ್ತಿದ್ದೇವೆ. ಈ ಹಾವಳಿಯನ್ನು ಮಟ್ಟಹಾಕಲು ನಾವು ಇನ್ನೂ ಸ್ವಲ್ಪ ಶ್ರಮ ಹಾಕಬೇಕು ಎಂದು ಷರೀಫ್ ನುಡಿದರು. ಭಯೋತ್ಪಾದನೆ ಪ್ರಕರಣಗಳಲ್ಲಿ ಮರಣದಂಡನೆ ಮೇಲೆ ವಿಧಿಲಾಗಿರುವ ನಿಷೇಧವನ್ನು ರದ್ದು ಪಡಿಸಲಾಗುವುದು. ಇದರಿಂದ ಮರಣದಂಡನೆಗೆ ಗುರಿಯಾಗಿರುವ ಭಯೋತ್ಪಾದಕರನ್ನು ಗಲ್ಲಿಗೇರಿಸಲು ಅನುಕೂಲವಾಗುವುದು ಎಂದು ಅವರು ಹೇಳಿದರು.

2014: ಬಾಗಲಕೋಟೆ: ಕರ್ನಾಟಕದ ನಾರಾಯಣಪುರ ಜಲಾಶಯ ಹಿನ್ನೀರಿನಲ್ಲಿ ತೆಪ್ಪ ಮುಳುಗಿ 6 ಜನರು ನಾಪತ್ತೆಯಾದರು. ಇಬ್ಬರು ಈಜಿ ದಡ ಸೇರಿ ಅಪಾಯದಿಂದ ಪಾರಾದರು. ಕೌಜಗನೂರ ಗ್ರಾಮದ ಒಂದೇ ಕುಟುಂಬಕ್ಕೆ ಸೇರಿದ ಮಲ್ಲವ್ವ ಯಲ್ಲಪ್ಪ ಮಡಿವಾಳರ(38), ಸಾವಿತ್ರಿ ಯಮನಪ್ಪ ಮಡಿವಾಳರ(6), ಸಚಿನ್ ಯಮನಪ್ಪ ಮಡಿವಾಳರ(5), ಮಂಜುಳಾ ಭೀಮಪ್ಪ ಮಡಿವಾಳರ(18), ಹುಲಿಗೆವ್ವ ಮಹಾಂತೇಶ ಮಡಿವಾಳರ(16) ಹಾಗೂ ಅಮರವಾಡಿ ಗ್ರಾಮದ ನಾವಿಕ ಕರಿಯಪ್ಪ ಪರಸಪ್ಪ ಅಂಬಿಗೇರ(29) ಹಿನ್ನೀರಿನಲ್ಲಿ ನಾಪತ್ತೆ ಆದವರು. ಇದೇ ಗ್ರಾಮದ ಮಹಾಂತೇಶ ಮಡಿವಾಳರ(20) ಹಾಗೂ ರೇಣುಕಾ ಮಡಿವಾಳರ(35) ಹಿನ್ನೀರಿನಲ್ಲಿ ಈಜಿ ಇಂದವಾರ ದಡ ತಲುಪಿದರು. ಹುನಗುಂದ ತಾಲೂಕಿನ ಕೌಜಗನೂರ ಗ್ರಾಮದಿಂದ ಅಮರವಾಡಿ ಗ್ರಾಮಕ್ಕೆ ಮದುವೆಗೆಂದು ಮಡಿವಾಳ ಕುಟುಂಬದ ಏಳು ಜನರು ತೆರಳಿದ್ದರು. ತಮ್ಮೂರಿನಿಂದ ಇಂದವಾರ ಗ್ರಾಮಕ್ಕೆ ಕಾಲ್ನಡಿಗೆಯಲ್ಲಿ ಸಾಗಿ ಅಲ್ಲಿಂದ ತೆಪ್ಪದ ಮೂಲಕ ಅಮರವಾಡಿಗೆ ಹೋಗಿದ್ದರು. ಮದುವೆ ಮುಗಿಸಿ ಬರುತ್ತಿದ್ದಾಗ ಭಾರ ಹೆಚ್ಚಾಗಿ ತೆಪ್ಪ ಮುಳುಗಿ ಈ ದುರ್ಘಟನೆ ಸಂಭವಿಸಿತು.

2014:ಪೇಶಾವರ: ಸೇನಾ ಆಡಳಿತದ ಶಾಲೆಯ ಮೇಲೆ ನಡೆದ ಉಗ್ರರ ದಾಳಿಯಿಂದ ತತ್ತರಿಸಿದ ಪಾಕಿಸ್ತಾನದಲ್ಲಿ ಈದಿನ ಸಂಜೆ ಇನ್ನೆರಡು ಭಾರಿ ಪ್ರಮಾಣದ ಬಾಂಬ್ ಸ್ಪೋಟಗಳು ಸಂಭವಿಸಿದವು. ಪೇಶಾವರ ಸಮೀಪದ ದೇರಾ ಇಸ್ಮೇಲ್ ಖಾನ್ನಲ್ಲಿರುವ ಬಾಲಕಿಯರ ಕಾಲೇಜು ಬಳಿ ಘಟನೆ ಸಂಭವಿಸಿತು. ಸ್ಪೋಟದ ಹೊಣೆಯನ್ನು ಯಾವುದೇ ಉಗ್ರ ಸಂಘಟನೆಗಳು ಹೊತ್ತಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿದವು.

2008: ಮುಂಬೈ ಮೇಲಿನ ಉಗ್ರರ ದಾಳಿ ಹಿನ್ನೆಲೆಯಲ್ಲಿ ಸರ್ಕಾರ ಮಂಡಿಸಿದ ರಾಷ್ಟ್ರೀಯ ತನಿಖಾ ಸಂಸ್ಥೆ ರಚನೆಯ ಮಸೂದೆ (ಎನ್‌ಐಎ) ಮತ್ತು ಕಾನೂನು ಬಾಹಿರ ಚಟುವಟಿಕೆ ನಿಯಂತ್ರಣ ತಿದ್ದುಪಡಿ ಮಸೂದೆಗಗಳಿಗೆ (ಯುಎಪಿಎ) ಲೋಕಸಭೆಯಲ್ಲಿ ಸರ್ವಾನುಮತದಿಂದ ಅಂಗೀಕಾರ ಲಭಿಸಿತು. ಇದಕ್ಕೂ ಮುನ್ನ, ಕೇಂದ್ರ ಗೃಹ ಸಚಿವ ಪಿ.ಚಿದಂಬರಂ ಅವರು ಈ ಮಸೂದೆಗಳನ್ನು ಒಮ್ಮತದಿಂದ ಅಂಗೀಕರಿಸುವಂತೆ ಎಲ್ಲ ಲೋಕಸಭಾ ಸದಸ್ಯರಿಗೂ ಕೈಜೋಡಿಸಿ ಮನವಿ ಮಾಡಿದರು. ವಿವಿಧ ರಾಜಕೀಯ ಪಕ್ಷಗಳು ಹಾಗೂ ಕಾನೂನು ತಜ್ಞರ ಸಲಹೆಗಳನ್ನು ಪಡೆದೇ ಈ ಮಸೂದೆಗಳನ್ನು ಮಂಡಿಸಲಾಗಿದೆ ಎಂದು ಅವರು ಸದನಕ್ಕೆ ಸ್ಪಷ್ಟಪಡಿಸಿದ್ದರು. ಈ ಮಸೂದೆಗಳಲ್ಲಿರುವ ಕೆಲವೊಂದು ಅನುಕೂಲಗಳ ಕುರಿತು ಮಾತನಾಡಿದ ಅವರು, 'ಇದು ಒಕ್ಕೂಟ ವ್ಯವಸ್ಥೆ ವಿರೋಧಿಸುವುದಿಲ್ಲ, ಭಯೋತ್ಪಾದನಾ ಪ್ರಕರಣಗಳ ತನಿಖೆ ನಡೆಸುವ ರಾಜ್ಯ ಸರ್ಕಾರಗಳ ಅಧಿಕಾರವನ್ನೂ ಗೌರವಿಸುತ್ತದೆ' ಎಂದು ಹೇಳಿದ್ದರು.

2008: ಬ್ರಿಟಿಷ್ ನಿರ್ದೇಶಕ ಡ್ಯಾನಿ ಬಾಯ್ಲೆ ಅವರ 'ಸ್ಲಮ್‌ಡಾಗ್ ಮಿಲಿಯನೇರ್' ಚಿತ್ರಕ್ಕೆ ನೀಡಿದ ಸಂಗೀತಕ್ಕಾಗಿ ಖ್ಯಾತ ಸಂಗೀತ ನಿರ್ದೇಶಕ ಎ. ಆರ್. ರೆಹಮಾನ್ ಅಂತಾರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾದರು. ಈ ಚಿತ್ರಕ್ಕೆ ಒದಗಿಸಿದ ಅತ್ಯುತ್ತಮ ಸಂಗೀತ ಸಂಯೋಜನೆಗಾಗಿ ಅಂತಾರಾಷ್ಟ್ರೀಯ ಪ್ರೆಸ್ ಅಕಾಡೆಮಿಯ ವಾರ್ಷಿಕ ಪ್ರಶಸ್ತಿಯನ್ನು ರೆಹಮಾನ್ ಬಾಚಿಕೊಂಡರು. ಇದೇ ಚಿತ್ರಕ್ಕಾಗಿ ಬಾಯೆಗ್ಲೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ನೀಡಲಾಯಿತು. ಅತ್ಯುತ್ತಮ ಕಥಾ ರೂಪಕದ ಪ್ರಶಸ್ತಿಯೂ ಚಿತ್ರದ ಪಾಲಾಯಿತು. ಮುಂಬೈಯ ಕೊಳೆಗೇರಿಯ 18 ವರ್ಷದ ಅನಾಥ ಗೌತಮ ಬಾಲಕ ಗೇಮ್ ಷೋ ಒಂದರಲ್ಲಿ 2 ಕೋಟಿ ರೂ. ಬಹುಮಾನ ಗೆದ್ದು ರಾತ್ರೋರಾತ್ರಿ ಸಿರಿವಂತನಾಗುವ ಮನಮಿಡಿಯುವ ಕಥೆಯನ್ನು ಈ ಚಿತ್ರ ಹೊಂದಿದೆ.

2008: ಸತತ ಮೂರನೇ ಅವಧಿಗೆ ಮುಖ್ಯಮಂತ್ರಿಯಾಗಿ ಅಧಿಕಾರದ ಗದ್ದುಗೆ ಏರುವ ಮೂಲಕ ಶೀಲಾ ದೀಕ್ಷಿತ್ ಅವರು ಇಡೀ ದೇಶದಲ್ಲಿಯೇ ಅತ್ಯಂತ ಪ್ರಭಾವಶಾಲಿ ರಾಜಕಾರಣಿಗಳಲ್ಲಿ ತಾವೂ ಒಬ್ಬರು ಎನ್ನುವುದನ್ನು ಸಾಬೀತುಪಡಿಸಿದರು. ದೆಹಲಿಯ ಲೆಫ್ಟಿನೆಂಟ್ ಗವರ್ನರ್ ತೇಜೇಂದರ್ ಖನ್ನಾ ತಮ್ಮ ಅಧಿಕೃತ ನಿವಾಸದಲ್ಲಿ ದೀಕ್ಷಿತ್ ಅವರಿಗೆ ಅಧಿಕಾರ ಗೋಪ್ಯತೆಯ ಪ್ರಮಾಣ ವಚನ ಬೋಧಿಸಿದರು. ಇತರ ಆರು ಸಚಿವರು ದೀಕ್ಷಿತ್ ಜೊತೆಗೆ ಪ್ರಮಾಣವಚನ ಸ್ವೀಕರಿಸಿದರು.

2008: ಸೆಪ್ಟೆಂಬರ್ 13ರಂದು ದೆಹಲಿಯಲ್ಲಿ ಸಂಭವಿಸಿದ ಸರಣಿ ಬಾಂಬ್ ಸ್ಫೋಟದ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ನವದೆಹಲಿ ಮೆಟ್ರೋಪಾಲಿಟನ್ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದರು. ಶಂಕಿತ 'ಇಂಡಿಯನ್ ಮುಜಾಹಿದ್ದೀನ್' ಸಂಘಟನೆಯ ಐವರು ಉಗ್ರರನ್ನು ಆರೋಪಪಟ್ಟಿಯಲ್ಲಿ ಆರೋಪಿಗಳನ್ನಾಗಿ ಹೆಸರಿಸಲಾಯಿತು. ಸೆಪ್ಟೆಂಬರ್ 13ರಂದು ದೆಹಲಿಯ ಕರೋಲ್ ಬಾಗ್‌ನಲ್ಲಿ ಸಂಭವಿಸಿದ ಈ ಬಾಂಬ್ ಸ್ಫೋಟದಲ್ಲಿ ಒಟ್ಟು 26 ಜನರು ಮೃತರಾಗಿದ್ದರು.

2008: ಕನ್ನಡಿಗ ಎಚ್.ಎಲ್.ದತ್ತು ಸೇರಿದಂತೆ ಅಶೋಕ ಕುಮಾರ ಗಂಗೂಲಿ ಮತ್ತು, ಆರ್.ಎಂ.ಲೋಧಾ ಅವರು ಸುಪ್ರೀಂಕೋರ್ಟಿನ ನ್ಯಾಯಮೂರ್ತಿಗಳಾಗಿ ನವದೆಹಲಿಯಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಈ ಮೂವರೂ ನ್ಯಾಯಮೂರ್ತಿಗಳ ನೇಮಕದಲ್ಲಿ ಸೇವಾ ಹಿರಿತನ ನಿರ್ಲಕ್ಷಿಸಲಾಗಿದೆ ಎನ್ನುವ ಕೇಂದ್ರ ಸರ್ಕಾರದ ಅಕ್ಷೇಪಗಳನ್ನು ಸುಪ್ರೀಂಕೋರ್ಟ್ ಕಡೆಗಣಿಸಿತು. ಸರಳ ಸಮಾರಂಭವೊಂದರಲ್ಲಿ ಮುಖ್ಯ ನ್ಯಾಯಮೂರ್ತಿ ಕೆ.ಜಿ.ಬಾಲಕೃಷ್ಣನ್ ಅವರು ಪ್ರಮಾಣ ವಚನ ಬೋಧಿಸಿದರು. ಸುಪ್ರೀಂಕೋರ್ಟಿನಲ್ಲಿ 26 ನ್ಯಾಯಮೂರ್ತಿಗಳ ಹುದ್ದೆಗಳಿದ್ದು, ಸದ್ಯಕ್ಕೆ 24 ಹುದ್ದೆಗಳನ್ನು ಭರ್ತಿ ಮಾಡಿದಂತಾಯಿತು.

2008: ಪ್ರಸಕ್ತ ವರ್ಷದ ವಾರ್ಷಿಕ ತೀರ್ಥ ಯಾತ್ರೆಯ ಮೊದಲ ತಿಂಗಳಾಂತ್ಯದಲ್ಲೇ ಕೇರಳದ ಖ್ಯಾತ ಶಬರಿಮಲೆ ದೇವಸ್ಥಾನದ ಆದಾಯ 51 ಕೋಟಿ ರೂಪಾಯಿಯ ಗಡಿ ದಾಟಿತು. ರಾಜ್ಯದ ಮುಜರಾಯಿ ಇಲಾಖೆ ಸಚಿವ ಜಿ. ಸುಧಾಕರನ್ ಅವರು ಈ ದಾಖಲೆ ಗಳಿಕೆಗೆ ಹೆಚ್ಚಿದ ಭಕ್ತಾದಿಗಳ ಸಂಖ್ಯೆಯೆ ಕಾರಣ ಎಂದು ಹೇಳಿದರು.

2008: ಭಾರತೀಯ ಮೂಲದ ಕಫಿಲ್ ಅಹ್ಮದ್ ಜೊತೆ ಬರ್ಸೊಲ್ ವಿಮಾನ ನಿಲ್ದಾಣ ಉಡಾಯಿಸುವ ಸಂಚು ರೂಪಿಸಿದ್ದ ಇರಾಕ್ ವೈದ್ಯ ಬಿಲಾಲ್ ಅಬ್ದುಲ್ಲಾಗೆ ಲಂಡನ್ ನ್ಯಾಯಾಲಯ 32 ವರ್ಷಗಳ ಜೈಲು ಶಿಕ್ಷೆ ವಿಧಿಸಿತು. ವೂಲ್‌ವಿಚ್ ಕ್ರೌನ್ ನ್ಯಾಯಾಲಯದಲ್ಲಿ ಒಂಬತ್ತು ವಾರಗಳ ಕಾಲ ಬಿಲಾಲ್ ಅಬ್ದುಲ್ಲಾ ವಿಚಾರಣೆ ನಡೆಸಿದ್ದ ನ್ಯಾಯಾಧೀಶರು ಆತ ತಪ್ಪಿತಸ್ಥ ಎಂದು ಘೋಷಿಸಿದ್ದರು. ಸಾಮೂಹಿಕ ಕೊಲೆ ಹಾಗೂ ಸ್ಫೋಟದ ಸಂಚು ರೂಪಿಸಿದ ಆರೋಪ ಬಿಲಾಲ್ ಮೇಲಿತ್ತು. ಈದಿನ ಆತನಿಗೆ ಶಿಕ್ಷೆಯ ಪ್ರಮಾಣ ಘೋಷಿಸಲಾಯಿತು. ಅಬ್ದುಲ್ಲಾ ಧಾರ್ಮಿಕ ಮೂಲಭೂತವಾದಿ ಹಾಗೂ ಮತಾಂಧ ಎಂದು ನ್ಯಾಯಾಧೀಶ ಮೆಕಾಯ್ ಹೇಳಿದರು. 2007ರ ಜೂನ್ 30ರಂದು ಬಿಲಾಲ್ ಅಬ್ದುಲ್ಲಾ ಹಾಗೂ ಕಫೀಲ್ ಅಹ್ಮದ್ ಬರ್ಸೋಲ್ ವಿಮಾನ ನಿಲ್ದಾಣಕ್ಕೆ ಸ್ಫೋಟಕ ತುಂಬಿದ್ದ ಜೀಪ್ ನುಗ್ಗಿಸಿ ನಿಲ್ದಾಣ ಉಡಾಯಿಸಲು ಯತ್ನಿಸಿದ್ದರು.

2008: ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ರೀಡರ್ ಡಾ. ಪ್ರೀತಿ ಶುಭಚಂದ್ರ ಅವರ 'ಸೃಜನೆಯ ಮೂಡು' ಕೃತಿಗೆ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ 'ಮಾತೋಶ್ರೀ ರತ್ನಮ್ಮ ಹೆಗ್ಗಡೆ ಮಹಿಳಾ ಗ್ರಂಥ ಬಹುಮಾನ ಯೋಜನೆ'ಯ ಬಹುಮಾನ ದೊರಕಿತು. ಬಹುಮಾನದ ಮೊತ್ತ ರೂ 10 ಸಾವಿರ. ಡಾ. ಪ್ರೀತಿ ಶುಭಚಂದ್ರ ಅವರು ಕಳೆದ ಮೂವತ್ತು ವರ್ಷಗಳಲ್ಲಿ ಬರೆದ ಮೂವತ್ತೊಂದು ಮಹಿಳಾ ಪರ ಕಾಳಜಿಯ ಲೇಖನಗಳನ್ನು ಒಳಗೊಂಡ 'ಸೃಜನೆಯ ಮೂಡು' ಕೃತಿಗೆ ಈ ಬಹುಮಾನ ಲಭಿಸಿದೆ ಎಂದು ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಪ್ರೊ. ಬಿ.ವಿ. ಗುಂಜೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದರು.

2007: ಬಿಜೆಪಿ ಧುರೀಣ ಪ್ರಮೋದ್ ಮಹಾಜನ್ ಅವರನ್ನು 2006ರಲ್ಲಿ ಕೊಲೆಗೈಯಲಾದ ಪ್ರಕರಣದಲ್ಲಿ ಅವರ ಸಹೋದರ ಪ್ರವೀಣ್ ಮಹಾಜನ್ ತಪ್ಪಿತಸ್ಥ ಎಂದು ಮುಂಬೈ ಸೆಷನ್ಸ್ ನ್ಯಾಯಾಲಯ ಘೋಷಿಸಿತು. ಪ್ರವೀಣ್ ಮಹಾಜನ್ ಗಂಭೀರ ಅಪರಾಧ ಎಸಗುವ ಉದ್ದೇಶದಿಂದಲೇ ಮನೆಯೊಳಕ್ಕೆ ಅತಿಕ್ರಮ ಪ್ರವೇಶ ಮಾಡಿ, ಕೊಲೆ ನಡೆಸಿದ ಅಪರಾಧಿ ಎಂದು ಎಂದು ಸೆಷನ್ಸ್ ನ್ಯಾಯಾಧೀಶ ಎಸ್.ಪಿ. ದಾವರೆ ತೀರ್ಪು ನೀಡಿದರು. 2006ರ ಏಪ್ರಿಲ್ 22ರಂದು ಪ್ರಮೋದ್ ಮಹಾಜನ್ ಅವರ ಮನೆಯಲ್ಲಿ ಪ್ರವೀಣ್ ಮಹಾಜನ್ ತನ್ನ ಹಿರಿಯ ಸಹೋದರನ ಮೇಲೆ ನಾಲ್ಕು ಸುತ್ತು ಗುಂಡು ಹಾರಿಸಿದ್ದರು. ಮುಂಬೈ ಆಸ್ಪತ್ರೆಯಲ್ಲಿ 12 ದಿನಗಳ ಕಾಲ ಜೀವನ್ಮರಣ ಹೋರಾಟ ನಡೆಸಿದ ಬಳಿಕ ಪ್ರಮೋದ್ ಮಹಾಜನ್ ಅಸು ನೀಗಿದ್ದರು. ಹತ್ತೊಂಬತ್ತು ತಿಂಗಳ ಕಾಲ ವಿಚಾರಣೆ ನಡೆಸಿದ ನ್ಯಾಯಾಧೀಶ ಎಸ್.ಪಿ.ದಾವರೆ ಒಟ್ಟು 32 ಸಾಕ್ಷಿಗಳ ವಿಚಾರಣೆಯ ನಂತರ ಭಾರತೀಯ ದಂಡ ಸಂಹಿತೆ (ಐಪಿಸಿ) 302 ಮತ್ತು 449ರ ಅಡಿಯಲ್ಲಿ ಪ್ರವೀಣ್ ತಪ್ಪಿತಸ್ಥ ಎಂದು ತೀರ್ಪು ನೀಡಿದರು.

2007: ಜಾಗತಿಕ ಷೇರುಪೇಟೆಯ ಕುಸಿತವು ಮುಂಬೈ ಷೇರುಪೇಟೆ ಮೇಲೆ ಕರಾಳ ಛಾಯೆ ಬೀರಿತು. ಸಂವೇದಿ ಸೂಚ್ಯಂಕವು, ಅನಿರೀಕ್ಷಿತವಾಗಿ 769 ಅಂಶಗಳಷ್ಟು ಕುಸಿತ ದಾಖಲಿಸಿತು. ಈ ಮೂಲಕ 20 ಸಾವಿರ ಅಂಶಗಳ ಗಡಿಯಿಂದ ಸೂಚ್ಯಂಕವು ಹಠಾತ್ತಾಗಿ ಹಿನ್ನಡೆ ಕಂಡಿತು. ಷೇರುಪೇಟೆ ಇತಿಹಾಸದಲ್ಲಿ ಇದು ಎರಡನೇ ದೊಡ್ಡ ಕುಸಿತ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಗಮನಾರ್ಹ ಪ್ರಮಾಣದಲ್ಲಿ (ಎಫ್ ಐ ಐ) ಬಂಡವಾಳ ಹಿಂದೆ ತೆಗೆದುಕೊಂಡದ್ದೇ ಈ ಹಿನ್ನಡೆಗೆ ಮುಖ್ಯ ಕಾರಣ.

2007: ವಿದ್ಯುನ್ಮಾನ ಸಮಾಜ ನಿರ್ಮಾಣಕ್ಕೆ ಅವಕಾಶ ಮಾಡಿಕೊಡುವ `ಕಂಪ್ಯೂಟಿಂಗ್ ಮತ್ತು ಇಂಟರ್ನೆಟ್ ತಾಂತ್ರಿಕತೆ' ಕುರಿತ ನಾಲ್ಕನೇ ಅಂತಾರಾಷ್ಟ್ರೀಯ ಸಮ್ಮೇಳನಕ್ಕೆ ಬೆಂಗಳೂರಿನಲ್ಲಿ ಚಾಲನೆ ನೀಡಲಾಯಿತು. ಒರಿಸ್ಸಾದ ಕಳಿಂಗ ಕೈಗಾರಿಕಾ ತಂತ್ರಜ್ಞಾನ ಸಂಸ್ಥೆ ವಿಶ್ವವಿದ್ಯಾಲಯ ಹಾಗೂ ಮಕಾವೊದ ಸಂಯುಕ್ತ ಸಂಸ್ಥಾನ ವಿಶ್ವವಿದ್ಯಾಲಯಗಳ ಜಂಟಿ ಆಶ್ರಯದಲ್ಲಿ ಹಮ್ಮಿಕೊಳ್ಳಲಾದ ನಾಲ್ಕು ದಿನಗಳ ಸಮ್ಮೇಳನವನ್ನು ರಾಜ್ಯಪಾಲ ರಾಮೇಶ್ವರ ಠಾಕೂರ್ ಉದ್ಘಾಟಿಸಿದರು.

2007: ಭೂದಾಖಲೆ ನೀಡಲು ಲಂಚ ಪಡೆದ ಗ್ರಾಮ ಲೆಕ್ಕಿಗನಿಗೆ ಮೂರು ತಿಂಗಳ ಜೈಲು ಶಿಕ್ಷೆ ವಿಧಿಸಿದ ಕರ್ನಾಟಕ ರಾಜ್ಯ ಹೈಕೋರ್ಟ್ ತೀರ್ಪನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿಯಿತು. ಹಾಸನ ಜಿಲ್ಲೆಯ ಕೌಶಿಕ ವೃತ್ತದ ಗ್ರಾಮ ಲೆಕ್ಕಿಗನಾಗಿದ್ದ ಡಿ.ಕೆ. ರಾಮಸ್ವಾಮಿ ಭೂದಾಖಲೆ ನೀಡಲು ರಮೇಶ ಎಂಬುವವರಿಂದ 600 ರೂಪಾಯಿ ಲಂಚ ಪಡೆಯುತ್ತಿರುವಾಗ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದಿದ್ದರು. ವಿಚಾರಣೆ ನಡೆಸಿದ ಸ್ಥಳೀಯ ನ್ಯಾಯಾಲಯ ರಾಮಸ್ವಾಮಿ ಅವರನ್ನು ಆರೋಪಮುಕ್ತಗೊಳಿಸಿತ್ತು. ಆದರೆ ಸರ್ಕಾರದ ಮೇಲ್ಮನವಿ ಅರ್ಜಿಯನ್ನು ಪುರಸ್ಕರಿಸಿದ ಹೈಕೋರ್ಟ್ ಅವರಿಗೆ ಮೂರು ತಿಂಗಳ ಜೈಲು ಶಿಕ್ಷೆ ವಿಧಿಸಿತ್ತು. ರಾಮಸ್ವಾಮಿ ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು.

2007: ಬ್ರಿಟಿಷ್ ರಾಣಿ ದ್ವಿತೀಯ ಎಲಿಜಬೆತ್ ಅವರು ದೇಶದ ಇತಿಹಾಸದಲ್ಲೇ `ದೀರ್ಘಾವಧಿ ಬದುಕಿದ ಅತ್ಯಂತ ಹಿರಿಯ ರಾಣಿ' ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ ಎಂದು ಅರಮನೆ ಮೂಲಗಳು ತಿಳಿಸಿದವು. ಎಲಿಜಬೆತ್ ಅವರಿಗೆ 2008ರ ಏಪ್ರಿಲ್ 21ಕ್ಕೆ 82 ವರ್ಷ ತುಂಬಲಿದೆ. ಇವರು 1901ರ ಜನವರಿ 22ರಂದು ಮೃತರಾದ ತಮ್ಮ ಮುತ್ತಜ್ಜಿ ವಿಕ್ಟೋರಿಯಾ ಅವರ 81 ವರ್ಷ ಬದುಕಿದ ದಾಖಲೆಯನ್ನು ಮುರಿಯಲಿದ್ದಾರೆ. 81 ವರ್ಷ 239 ದಿನ ಬದುಕಿ, 1820ರಲ್ಲಿಮೃತರಾದ ತೃತೀಯ ಜಾರ್ಜ್ ಬ್ರಿಟನ್ನಿನ ಅತ್ಯಂತ ಹಿರಿಯ ರಾಜ ಎಂಬ ದಾಖಲೆ ಹೊಂದಿದ್ದಾರೆ.

2006: ಪೋಪ್ 16ನೇ ಬೆನೆಡಿಕ್ಟ್ ಅವರು ಭಾರತದ ಬಾಹ್ಯಾಕಾಶ ವಿಜ್ಞಾನಿ, 2003ರವರೆಗೆ ಇಸ್ರೋ ಸಂಸ್ಥೆಯ ಮುಖ್ಯಸ್ಥರಾಗಿದ್ದ ಕೆ. ಕಸ್ತೂರಿ ರಂಗನ್ ಅವರನ್ನು ರೋಮ್ ಮೂಲದ ಪ್ರತಿಷ್ಠಿತ `ಪಾಂಟಿಫಿಕಲ್ ವಿಜ್ಞಾನ ಅಕಾಡೆಮಿ'ಯ ಸದಸ್ಯರನ್ನಾಗಿ ನೇಮಕ ಮಾಡಿದರು. 403 ವರ್ಷಗಳಷ್ಟು ಹಳೆಯದಾದ ಈ ಅಕಾಡೆಮಿಗೆ 89-90 ಮಂದಿ ಸದಸ್ಯರನ್ನು ವ್ಯಾಪಕ ಪರಿಶೀಲನೆಯ ಬಳಿಕ ನೇಮಿಸಲಾಗುತ್ತದೆ. ಗಣಿತ, ಭೌತ, ಸಹಜ ವಿಜ್ಞಾನಗಳ ಪ್ರಗತಿ ಸಾಧನೆಯ ಗುರಿ ಹೊಂದಿರುವ ಈ ಅಕಾಡೆಮಿಗೆ ಸ್ವತಃ ಪೋಪ್ ಅವರ ರಕ್ಷಣೆಯಲ್ಲೇ ಕಾರ್ಯ ಎಸಗುತ್ತದೆ. ಈ ಗೌರವ ಪ್ರಾಪ್ತಿಯಾದುದು ತಮಗೆ ಅತೀವ ಸಂತಸ ಉಂಟು ಮಾಡಿದೆ, ಸ್ವತಃ ಪೋಪ್ ಅವರಿಂದ ನೇಮಕಾತಿ ಪತ್ರ ಪಡೆಯುವುದು ಅತ್ಯಂತ ದೊಡ್ಡ ಗೌರವ ಎಂದು ಕಸ್ತೂರಿ ರಂಗನ್ ಹರ್ಷ ವ್ಯಕ್ತಪಡಿಸಿದರು.

2006: ಸಮುದ್ರ ಈಜಿನಲ್ಲಿ ಈ ಹಿಂದೆ ದಾಖಲೆ ಮಾಡಿದ್ದ ಉಡುಪಿ ತಾಲ್ಲೂಕಿನ ಬ್ರಹ್ಮಾವರ ಕೋಡಿ ಕನ್ಯಾನದ ನಿವಾಸಿ ಗೋಪಾಲ ಖಾರ್ವಿ ತನ್ನ ಕೈ ಕಾಲುಗಳಿಗೆ ಬೇಡಿ ತೊಟ್ಟು ಸಮುದ್ರದಲ್ಲಿ 10 ಕಿ.ಮೀ. ದೂರವನ್ನು ನಿರಂತರ 2 ಗಂಟೆ 20 ನಿಮಿಷದಲ್ಲಿ ಈಜಿ ಹೊಸ ದಾಖಲೆ ನಿರ್ಮಿಸಿದರು. ಬೆಳಗ್ಗೆ 6.55ಕ್ಕೆ ಸೈಂಟ್ ಮೇರೀಸ್ ದ್ವೀಪದಿಂದ ಕೈಗೆ ಕೋಳ ತೊಡಿಸಿಕೊಂಡು ಕಾಲುಗಳನ್ನು ಕಟ್ಟಿ ಸಮುದ್ರಕ್ಕೆ ಧುಮುಕಿದ ಅವರು ಬೆಳಗ್ಗೆ 9.15ಕ್ಕೆ ಮಲ್ಪೆ ಕರಾವಳಿಗೆ ತಲುಪಿ ನೂತನ ದಾಖಲೆ ಸೃಷ್ಟಿಸಿದರು.

2006: ಭಾರತೀಯ ಮೂಲದ ಗಗನಯಾನಿ ಸುನೀತಾ ವಿಲಿಯಮ್ಸ್ ಅವರು ಬಾಹ್ಯಾಕಾಶದಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಹೊರಬಂದು ಬಾಹ್ಯಾಕಾಶದಲ್ಲಿ ತಮ್ಮ ಚೊಚ್ಚಲ ನಡಿಗೆ ನಡೆಸಿದರು.

2006: ಶಿಯಾಗಳ ಪವಿತ್ರ ನಗರವಾದ ಕರ್ಬಾಲಾದಲ್ಲಿ 30 ಶವಗಳಿದ್ದ ಸದ್ದಾಂ ಹುಸೇನ್ ಕಾಲದ ಗೋರಿಯೊಂದು ಪತ್ತೆಯಾಯಿತು. ವ್ಯಕ್ತಿಯೊಬ್ಬ ಮನೆ ಕಟ್ಟಿಸಲು ಪಾಯ ತೋಡುವಾಗ ಮನುಷ್ಯರ ಮೂಳೆಗಳು ಹಾಗೂ ಜೀರ್ಣವಾದ ಬಟ್ಟೆಗಳು ದೊರಕಿದವು. ಇದು 1991ರ ಕೊಲ್ಲಿ ಯುದ್ಧದ ಸಮಯದಲ್ಲಿ ಬಂಡೆದ್ದ ಶಿಯಾಗಳನ್ನು ಸಾಮೂಹಿಕವಾಗಿ ಹತ್ಯೆ ನಡೆಸಿದ್ದಾಗಿರಬಹುದು ಎಂದು ನಂಬಲಾಗಿದೆ.

2005: ಆಸ್ಟ್ರೇಲಿಯಾ ತಂಡದ ಶೇನ್ ವಾರ್ನ್ ಅವರು ಪರ್ತ್ನಲ್ಲಿ ನಡೆದ ಮೊದಲ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಮೂರು ವಿಕೆಟ್ ಉರುಳಿಸುವ ಮೂಲಕ ವರ್ಷವೊಂದರಲ್ಲಿ ಅತಿ ಹೆಚ್ಚು ವಿಕೆಟ್ ಉರುಳಿಸಿದ ವಿಶ್ವದಾಖಲೆಯ ಸಾಧನೆ ಮಾಡಿದರು. ಆಸ್ಟ್ರೇಲಿಯಾ ಪರ ಉತ್ತಮ ದಾಳಿ ನಡೆಸಿದ ಶೇನ್ ವಾರ್ನ್ ಈ ವರ್ಷದಲ್ಲಿ ತಮ್ಮ ವಿಕೆಟ್ ಗಳಿಕೆಯನ್ನು 87ಕ್ಕೆ ಹೆಚ್ಚಿಸಿಕೊಂಡರು. ಇದರೊಂದಿಗೆ ಶೇನ್ ವಾರ್ನ್ 1981ರಲ್ಲಿ ಡೆನ್ನಿಸ್ ಲಿಲ್ಲಿ ಸ್ಥಾಪಿಸಿದ್ದ 85 ವಿಕೆಟುಗಳ ವಿಶ್ವದಾಖಲೆ ಬದಿಗೊತ್ತಿದರು.

2005: ಇಂದೋರಿನ ಉನ್ನತ ತಂತ್ರಜ್ಞಾನ ಕೇಂದ್ರಕ್ಕೆ (ಸಿಎಟಿ) ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರು ಖ್ಯಾತ ಪರಮಾಣು ವಿಜ್ಞಾನಿ ದಿವಂಗತ ರಾಜಾರಾಮಣ್ಣ ಉನ್ನತ ತಂತ್ರಜ್ಞಾನ ಕೇಂದ್ರ ಎಂಬುದಾಗಿ ಮರುನಾಮಕರಣ ಮಾಡಿದರು.

1998: ಲೋಕಸಭೆಯ ಉಪಾಧ್ಯಕ್ಷರಾಗಿ ಕಾಂಗ್ರೆಸ್ಸಿನ ಪಿ.ಎಂ. ಸಯೀದ್ ಅವಿರೋಧ ಆಯ್ಕೆಯಾದರು.

1988: ನ್ಯೂಜಿಲ್ಯಾಂಡಿನ ವಿರುದ್ಧ ಬರೋಡದಲ್ಲಿ ನಡೆದ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯದಲ್ಲಿ ಮಹಮ್ಮದ್ ಅಜರ್ದುದೀನ್ ಅವರು ಕೇವಲ 62 ಚೆಂಡೆಸೆತಗಳಿಗೆ 100 ರನ್ ಸೇರಿಸಿ ಭಾರತದ ಅತ್ಯಂತ ವೇಗದ ಶತಕ ಸಿಡಿಸಿದರು.

1931: ಪಿ.ಸಿ. ಮಹಾಲನಾವೊಬಿಸ್ ಅವರು ಭಾರತೀಯ ಸಾಂಸ್ಥಿಕ ಸಂಸ್ಥೆಯನ್ನು (ಇಂಡಿಯನ್ ಸ್ಟಾಟಿಸ್ಟಿಕಲ್ ಇನ್ಸ್ಟಿಟ್ಯೂಟ್) ಕಲ್ಕತ್ತಾದಲ್ಲಿ (ಈಗಿನ ಕೋಲ್ಕತ್ತ) ಸ್ಥಾಪಿಸಿದರು.

1929: ಭಾರತದ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಬ್ರಿಟಿಷ್ ಪೊಲೀಸ್ ಅಧಿಕಾರಿ ಜೆ.ಪಿ. ಸ್ಯಾಂಡರ್ಸ್ ನನ್ನು ಗುಂಡಿಟ್ಟು ಕೊಲೆಗೈದರು. ಈ ಅಧಿಕಾರಿಯನ್ನು ಲಾಲಾ ಲಜಪತರಾಯ್ ಅವರ ಮೇಲೆ ಲಾಠಿ ಪ್ರಹಾರ ಮಾಡಲು ಆದೇಶಿಸಿದ ಸ್ಕಾಟ್ ಎಂಬುದಾಗಿ ಭಗತ್ಸಿಂಗ್ ತಪ್ಪಾಗಿ ಭಾವಿಸಿದ್ದರು.

1903: ಒರಿವಿಲ್ ರೈಟ್ ಅವರು ಇಂಧನ ಚಾಲಿತ ವಿಮಾನದ (ಏರ್ ಪ್ಲೇನ್) ಮೊದಲ ಹಾರಾಟವನ್ನು ದಾಖಲಿಸಿದರು. ಉತ್ತರ ಕರೋಲಿನಾದ ಕಿಟ್ಟಿ ಹಾಕ್ ಸಮೀಪ 12 ಸೆಕೆಂಡುಗಳ ಕಾಲ ಬಾನಿನಲ್ಲಿ ಹಾರಿದ ಈ ವಿಮಾನ 120 ಅಡಿಗಳಷ್ಟು ದೂರ ಚಲಿಸಿತು.

No comments:

Advertisement