My Blog List

Tuesday, February 9, 2010

ಇಂದಿನ ಇತಿಹಾಸ History Today ಜನವರಿ 07

ಇಂದಿನ ಇತಿಹಾಸ

ಜನವರಿ 07

ಹೈದರಾಬಾದ್ ಮೂಲದ ಸತ್ಯಂ ಕಂಪ್ಯೂಟರ್ ಸರ್ವಿಸಸ್ ಲಿಮಿಟೆಡ್ ಅಧ್ಯಕ್ಷ ರಾಮಲಿಂಗರಾಜು ಅವರಿಂದ, ಅವರೇ ಹುಟ್ಟುಹಾಕಿದ ಕಂಪೆನಿಗೆ 8 ಸಾವಿರ ಕೋಟಿ ರೂಪಾಯಿಗೂ ಅಧಿಕ ವಂಚನೆ ಅದದ್ದು ಬೆಳಕಿಗೆ ಬಂತು. ಸಂಸ್ಥೆಯ ಪ್ರವರ್ತಕ, ರಾಜು ತಾವು ಕಂಪೆನಿಗೆ ಎಸಗಿದ ಮೋಸದ ಬಗ್ಗೆ ತಪ್ಪೊಪ್ಪಿಕೊಂಡು ಕಂಪೆನಿಯ ನಿರ್ದೇಶಕರಿಗೆ ಸುದೀರ್ಘ ಪತ್ರ ಬರೆದರು. ತಮ್ಮ ಹ್ದುದೆಗೆ ರಾಜೀನಾಮೆಯನ್ನೂ ಸಲ್ಲಿಸಿದರು.

2009: ಹೈದರಾಬಾದ್ ಮೂಲದ ಸತ್ಯಂ ಕಂಪ್ಯೂಟರ್ ಸರ್ವಿಸಸ್ ಲಿಮಿಟೆಡ್ ಅಧ್ಯಕ್ಷ ರಾಮಲಿಂಗರಾಜು ಅವರಿಂದ, ಅವರೇ ಹುಟ್ಟುಹಾಕಿದ ಕಂಪೆನಿಗೆ 8 ಸಾವಿರ ಕೋಟಿ ರೂಪಾಯಿಗೂ ಅಧಿಕ ವಂಚನೆ ಅದದ್ದು ಬೆಳಕಿಗೆ ಬಂತು. ಸಂಸ್ಥೆಯ ಪ್ರವರ್ತಕ, ರಾಜು ತಾವು ಕಂಪೆನಿಗೆ ಎಸಗಿದ ಮೋಸದ ಬಗ್ಗೆ ತಪ್ಪೊಪ್ಪಿಕೊಂಡು ಕಂಪೆನಿಯ ನಿರ್ದೇಶಕರಿಗೆ ಸುದೀರ್ಘ ಪತ್ರ ಬರೆದರು. ತಮ್ಮ ಹ್ದುದೆಗೆ ರಾಜೀನಾಮೆಯನ್ನೂ ಸಲ್ಲಿಸಿದರು. ಆ ಮೂಲಕ ಕಳೆದ ಹಲವು ವರ್ಷಗಳಿಂದ ಕಂಪೆನಿಗೆ ಸುಳ್ಳು ಲೆಕ್ಕಪತ್ರ ತೋರಿಸುತ್ತಾ ಬಂದಿದ್ದುದನ್ನು ಹಾಗೂ ಒಟ್ಟು 4,000 ಕೋಟಿ ರೂ.ನಷ್ಟು ವಂಚಿಸಿರುವುದನ್ನೂ ವಿವರವಾಗಿ ದಾಖಲಿಸಿದರು. ಪರಿಣಾಮವಾಗಿ ದೇಶದ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ನಾಲ್ಕನೇ ಅತಿ ದೊಡ್ಡ ಪ್ರತಿಷ್ಠಿತ ಕಂಪೆನಿ ಸತ್ಯಂ ಕಂಪ್ಯೂಟರಿನಿಂದ ದೇಶಕ್ಕೆ, ಕಾನೂನಿಗೆ, ಕಂಪೆನಿಗೆ- ನಿರ್ದೇಶಕರಿಗೆ, ಹೂಡಿಕೆದಾರರಿಗೆ ಭಾರೀ ಮೋಸವಾದದ್ದು ಜಗಜ್ಜಾಹೀರಾಯಿತು. ಸತ್ಯಂನ 53 ಸಾವಿರ ಸಿಬ್ಬಂದಿ ಪರಿಸ್ಥಿತಿ ಅತಂತ್ರವಾಯಿತು.

2009: ಅತ್ಯುತ್ತಮ ಕಾರ್ಪೊರೇಟ್ ಆಡಳಿತಕ್ಕಾಗಿ ಸತ್ಯಂ ಕಂಪ್ಯೂಟರ್‌ಗೆ ನೀಡಲಾಗಿದ್ದ ದೇಶದ ಪ್ರತಿಷ್ಠಿತ ಪ್ರಶಸ್ತಿ 'ಸ್ವರ್ಣ ಮಯೂರ'ವನ್ನು ವಾಪಸ್ ಪಡೆಯಲಾಯಿತು. ವಂಚನೆ ಹಗರಣದಲ್ಲಿರುವ ಸತ್ಯಂ ಪ್ರಶಸ್ತಿಯ ಗೌರವವನ್ನೇ ಕಳೆದಿದೆ ಎಂದು ಇನ್‌ಸ್ಟಿಟ್ಯೂಟ್ ಆಫ್ ಡೈರೆಕ್ಟರ್ಸ್‌(ಐಒಡಿ)ಯ ಭಾರತೀಯ ಸಚಿವಾಲಯದ ನಿರ್ದೇಶಕ ಮನೋಜ್ ರಾವತ್ ವಿಷಾದ ವ್ಯಕ್ತಪಡಿಸಿದರು. ಕಂಪೆನಿ ಆಡಳಿತದ ಉನ್ನತ ರೀತಿ-ನೀತಿ ಪಾಲಿಸುವ ಸಂಸ್ಥೆಗಳನ್ನು ಗೌರವಿಸಲೆಂದೇ 'ಸ್ವರ್ಣ ಮಯೂರ' ಪ್ರಶಸ್ತಿ ನೀಡಲಾಗುತ್ತದೆ.

2009: ಮುಂಬೈ ಮೇಲೆ ದಾಳಿ ನಡೆಸಿದವರ ಪೈಕಿ ಸೆರೆ ಸಿಕ್ಕ ಏಕೈಕ ಭಯೋತ್ಪಾದಕ ಅಜ್ಮಲ್ ಕಸಾಬ್ ತನ್ನ ಪ್ರಜೆಯೇ ಹೌದು ಎಂದು ಪಾಕಿಸ್ಥಾನ ಕಡೆಗೂ ಅಧಿಕೃತವಾಗಿ ಒಪ್ಪಿಕೊಂಡಿತು. ಪಾಕಿಸ್ಥಾನದ ವಾರ್ತಾ ಸಚಿವ ಶೆರಿ ರೆಹಮಾನ್ ಲಿಖಿತ ಹೇಳಿಕೆಯೊಂದನ್ನು ಬಿಡುಗಡೆ ಮಾಡಿ, 'ಕಸಾಬ್ ನಮ್ಮ ಪ್ರಜೆ ಎಂಬುದು ನಾವು ನಡೆಸಿದ ತನಿಖೆಗಳಿಂದ ದೃಢಪಟ್ಟಿದೆ' ಎಂದರು.

2009: ಗುಲ್ಬರ್ಗ ನಗರ ಹೊರವಲಯದ ಸೇಡಂ ರಸ್ತೆಯಲ್ಲಿ ಕುಸನೂರು ಬಳಿ ಸಿದ್ಧಾರ್ಥ ವಿಹಾರ ಟ್ರಸ್ಟ್ ವತಿಯಿಂದ ನಿರ್ಮಿಸಲಾದ ಬುದ್ಧ ವಿಹಾರವನ್ನು ದೀಪ ಬೆಳಗಿ ಉದ್ಘಾಟಿಸುವ ಮೂಲಕ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ನಾಡಿಗೆ ಸಮರ್ಪಿಸಿದರು. 'ನಿಮ್ಮನ್ನು ನೋಡಿ ಆನಂದವಾಗಿದೆ. ನಿಮಗೆ ಹೊಸ ವರ್ಷದ ಶುಭಾಶಯಗಳು. ಈ ಬುದ್ಧ ವಿಹಾರ ಉದ್ಘಾಟಿಸಲು ನನಗೆ ಸಂತೋಷವಾಗಿದೆ' ಎಂದು ರಾಷ್ಟ್ರಪತಿಗಳು ಭಾಷಣದ ಆರಂಭದಲ್ಲಿ ಕನ್ನಡದಲ್ಲಿ ಹೇಳಿದಾಗ 60 ಸಾವಿರಕ್ಕೂ ಹೆಚ್ಚು ಜನರಿಂದ ತುಂಬಿದ್ದ ಸಭೆ ಹರ್ಷೋದ್ಗಾರ ತೆಗೆಯಿತು. ಮಾಜಿ ಮುಖ್ಯಮಂತ್ರಿಗಳಾದ ಮಹಾರಾಷ್ಟ್ರದ ವಿಲಾಸರಾವ್ ದೇಶಮುಖ್ ಹಾಗೂ ಧರ್ಮಸಿಂಗ್, ರಾಜ್ಯಪಾಲ ರಾಮೇಶ್ವರ ಠಾಕೂರ್, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಿದ್ಧಾರ್ಥ ವಿಹಾರ ಟ್ರಸ್ಟಿನ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಧಾಬಾಯಿ ಖರ್ಗೆ ಹಾಜರಿದ್ದರು.

2009: ಅಮೆರಿಕದ ಅತ್ಯುನ್ನತ ಸರ್ಜನ್ ಜನರಲ್ ಹುದ್ದೆಗೆ ಭಾರತೀಯ- ಅಮೆರಿಕನ್ ಸಂಜಯ್ ಗುಪ್ತಾ ಅವರನ್ನು ನಿಯೋಜಿತ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಆಯ್ಕೆ ಮಾಡಿದರು. ನರಶಸ್ತ್ರ ಚಿಕಿತ್ಸಾ ತಜ್ಞರಾಗಿರುವ ಸಂಜಯ್ ಅವರು ಸಿಎನ್‌ಎನ್ ವಾಹಿನಿಗೆ ಆರೋಗ್ಯ ವಿಷಯಗಳ ಕುರಿತು ವಿಶೇಷ ಬಾತ್ಮಿದಾರ.

2008: ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ. ಹಿರಿಯ ರಂಗ ಕರ್ಮಿ ಹಾಗೂ ಚಲನಚಿತ್ರ ನಟ, `ವಿನೋದ ರತ್ನಾಕರ' ಎಂದೇ ಖ್ಯಾತರಾದ ಪೆರ್ಡೂರು ರಾಮಕೃಷ್ಣ ಕಲ್ಯಾಣಿ (77) ನಿಧನರಾದರು. ನಿವೃತ್ತ ಅಧ್ಯಾಪಕರಾಗಿದ್ದ ಅವರು ಪೆರ್ಡೂರಿನ ಬಿ. ಎಂ. ಖಾಸಗಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾರ್ಯಕ್ರಮ ನಡೆಯುತ್ತಿದ್ದ ಸಂದರ್ಭದಲ್ಲಿ ಕುಸಿದು ಬಿದ್ದು ಮೃತರಾದರು. ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿಗೆ ಪಾತ್ರರಾಗಿದ್ದ ಕಲ್ಯಾಣಿ, `ಚೋಮನ ದುಡಿ', `ಅಖಂಡ ಬ್ರಹ್ಮಾಚಾರಿಗಳು', `ಜನುಮದಾತ', `ಕೊಟ್ಟ', `ಚೆನ್ನಿ' ಮೊದಲಾದ ಕನ್ನಡ ಸಿನಿಮಾಗಳಲ್ಲಿ, 'ಕೋಟಿ ಚೆನ್ನಯ' ಮತ್ತು `ಕರಿಯಣಿ ಕಟ್ಟಂದಿ ಕಂಡನಿ' ತುಳು ಸಿನಿಮಾಗಳಲ್ಲಿ ಹಾಗೂ `ಓ ನನ್ನ ಬೆಳಕೇ' ಎಂಬ ಧಾರಾವಾಹಿಯಲ್ಲಿ ನಟಿಸಿದ್ದರು. 1950ರಲ್ಲಿ ಕಲಾ ಸೇವಾ ಮಂಡಳಿ ನಾಟಕ ಸಂಸ್ಥೆಯೊಂದಿಗೆ ತೊಡಗಿಸಿಕೊಂಡಿದ್ದರು. ಮಂಗಳೂರು ಆಕಾಶವಾಣಿಯಲ್ಲಿ ಅನೇಕ ನಾಟಕ, ಯಕ್ಷಗಾನ, ತಾಳ ಮದ್ದಳೆಗಳಲ್ಲಿ ಪಾತ್ರ ನಿರ್ವಹಿಸಿದ್ದರು.

2008: ಸಿಖ್ ಕೈದಿಯೊಬ್ಬರ ಬಲವಂತದ ಕೇಶಮುಂಡನ ಯತ್ನ, ಜೈಲಿನಲ್ಲಿನ ಕಳಪೆ ಜೀವನ ಮಟ್ಟ, ವೈದ್ಯಕೀಯ ಸೇವೆ ಸೇರಿದಂತೆ ಹಲವಾರು ಕೊರತೆಗಳಿಂದ ತುಂಬಿಹೋದ ಜಲಂಧರ್ ಕೇಂದ್ರ ಕಾರಾಗೃಹದ 1,500 ಕೈದಿಗಳು ದಾಂಧಲೆ ನಡೆಸಿ ವಸತಿ ಭಾಗವೊಂದನ್ನು ಸುಟ್ಟು ಹಾಕುವ ಮೂಲಕ ತೀವ್ರ ಪ್ರತಿಭಟನೆ ವ್ಯಕ್ತಪಡಿಸಿದರು. ಸುಮಾರು ಎರಡು ಗಂಟೆ ಕಾಲ ನಡೆದ ಈ ಗಲಭೆಯನ್ನು ಹತ್ತಿಕ್ಕಲು ಜೈಲು ಸಿಬ್ಬಂದಿ ಗಾಳಿಯಲ್ಲಿ ಗುಂಡು ಹಾರಿಸಿ ಅಶ್ರವಾಯು ಪ್ರಯೋಗಿಸಬೇಕಾಯಿತು. ಕಿಟಕಿ, ಬಾಗಿಲುಗಳು, ಪೀಠೋಪಕರಣಗಳನ್ನು ಮುರಿದ ಕೈದಿಗಳು ಜೈಲಿನಿಂದ ಪಲಾಯನ ಮಾಡಲು ಯತ್ನಿಸದೆ ಇದ್ದುದು ವಿಶೇಷವಾಗಿತ್ತು. ಪರಿಸ್ಥಿತಿ ನಿಯಂತ್ರಿಸಲು ಹೆಚ್ಚುವರಿ ಪೊಲೀಸ್ ಪಡೆಯನ್ನು ಸ್ಥಳಕ್ಕೆ ಕರೆಸಲಾಯಿತು. ಹಲವು ಬೇಗುದಿಗಳಿಂದ ಬಳಲುತ್ತಿದ್ದ ಕೈದಿಗಳಲ್ಲಿ ಕೆಲವರನ್ನು ಜೈಲು ಸಿಬ್ಬಂದಿ ಥಳಿಸಿದ್ದರು. ಇದನ್ನು ಖಂಡಿಸಿ ಕೆಲವರು ಉಪವಾಸ ಸತ್ಯಾಗ್ರಹ ಕೈಗೊಂಡಿದ್ದರು. ಈ ಸಂದರ್ಭದಲ್ಲಿ ಪೊಲೀಸರು ನಡೆಸಿದ ಲಾಠಿ ಚಾರ್ಜ್ ಎಲ್ಲ ಕೈದಿಗಳೂ ಆಕ್ರೋಶ ವ್ಯಕ್ತಪಡಿಸಲು ಕಾರಣವಾಯಿತು.

2008: ಆಫ್ ಸ್ಪಿನ್ನರ್ ಹರಭಜನ್ ಸಿಂಗ್ ವಿರುದ್ಧದ ನಿಷೇಧ ಶಿಕ್ಷೆ ಪ್ರಕರಣವು ಮತ್ತಷ್ಟು ಬಿಗಡಾಯಿಸಿತು. ಹರಭಜನ್ ಸಿಂಗ್ ಗೆ ವಿಧಿಸಿರುವ ನಿಷೇಧ ಶಿಕ್ಷೆಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ತಡೆಹಿಡಿಯುವವರೆಗೆ ಸಿಡ್ನಿಯಲ್ಲೇ ಉಳಿಯುವಂತೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತನ್ನ ಆಟಗಾರರಿಗೆ ಸೂಚನೆ ನೀಡಿತು. ಇದರಿಂದಾಗಿ ಭಾರತ ತಂಡದ ಆಸ್ಟ್ರೇಲಿಯಾ ಪ್ರವಾಸ ಮುಂದುವರಿಯುವುದರ ಬಗ್ಗೆ ಅನಿಶ್ಚಿತತೆ ತಲೆದೋರಿತು.

2008: ವೃದ್ಧಾಪ್ಯ ಸಮೀಪಿಸುತ್ತಿದ್ದಂತೆ ಬುದ್ಧಿ ಕಡಿಮೆಯಾಗುತ್ತದೆ ಎಂಬ ನಂಬಿಕೆಯನ್ನು ಹುಸಿ ಎಂದು ಸಾಬೀತುಪಡಿಸುವ ವರದಿಯೊಂದು ಲಂಡನ್ನಿನಲ್ಲಿ ಪ್ರಕಟವಾಯಿತು. ವಯಸ್ಸು ಹೆಚ್ಚಾದಂತೆ ಮೆದುಳು ಹೆಚ್ಚು ಕ್ರಿಯಾಶೀಲವಾಗುತ್ತದೆ ಹಾಗೂ ಬುದ್ಧಿಮತ್ತೆಯೂ ಬೆಳೆಯುತ್ತದೆ ಎಂದು ಯೂರೋಪಿನ ಸಂಶೋಧಕ ಪ್ರಾಧ್ಯಾಪಕ ಲಾರ್ಸ್ ಲಾರ್ಸೆನ್ ಅಭಿಪ್ರಾಯಪಟ್ಟರು. `ಹದಿಹರೆಯದ ನಂತರ ಬುದ್ಧಿಮತ್ತೆ ಹಾಗೂ ಮಾತುಗಾರಿಕೆ ಮತ್ತಷ್ಟು ಚುರುಕಾಗುತ್ತದೆ' ಎಂಬುದು ಅವರ ವಿಶ್ಲೇಷಣೆ. ಸುಮಾರು 4,300 ಅಮೆರಿಕದ ಉದ್ಯೋಗಿಗಳ ಮೇಲೆ ಅಧ್ಯಯನ ನಡೆಸಿ ಅವರು ಈ ಅಭಿಪ್ರಾಯ ಮಂಡಿಸಿದರು. ಜೀವನಾನುಭವ ಹೆಚ್ಚಿದಂತೆ ಹಾಗೂ ಹಲವಾರು ಸಮಸ್ಯೆಗಳನ್ನು ಎದುರಿಸಿರುವುದರಿಂದ ಬುದ್ಧಿ ಮತ್ತಷ್ಟು ತೀಕ್ಷ್ಣವಾಗುತ್ತದೆ ಹಾಗೂ ಮಾತುಗಾರಿಕೆ ಚುರುಕಾಗುತ್ತದೆ ಎಂಬುದು ಅವರ ವಾದ.

2008: ಅಲ್ ಖೈದಾ ಸಂಪರ್ಕ ಹೊಂದಿದ ಉಗ್ರರು ಪಾಕಿಸ್ಥಾನದಲ್ಲಿ ಸರ್ಕಾರಿ ಪ್ರಾಯೋಜಿತ ಶಾಂತಿಪಾಲನಾ ಕಚೇರಿಗಳ ಮೇಲೆ ನಡೆಸಿದ ದಾಳಿಯಲ್ಲಿ 8 ಜನ ಮೃತರಾದರು. ಪಾಕಿಸ್ಥಾನದ ವಾಯವ್ಯ ಭಾಗದಲ್ಲಿರುವ ವಾನಾ ಬಜಾರ್ ಮತ್ತು ಶಿಕಾಯ್ ಶಾಂತಿ ಸಮಿತಿ ಕಚೇರಿಗಳ ಮೇಲೆ ಉಗ್ರರು ಈ ದಾಳಿ ನಡೆಸಿದ್ದಾರೆ ಎಂದು ಮಿಲಿಟರಿ ಮೂಲಗಳು ತಿಳಿಸಿದವು.

2008: ಕುಟುಂಬಕ್ಕೆ ಒಂದೇ ಮಗು ಕಾಯ್ದೆಯನ್ನು ಉಲ್ಲಂಘಿಸಿದ ಹುಬೈ ಪ್ರಾಂತ್ಯದ 500 ಸದಸ್ಯರನ್ನು ಕಮ್ಯುನಿಸ್ಟ್ ಪಕ್ಷ ಉಚ್ಛಾಟಿಸಿತು. ಕಮ್ಯುನಿಸ್ಟ್ ಸದಸ್ಯರಲ್ಲದೆ ಸರ್ಕಾರಿ ಅಧಿಕಾರಿಗಳು, ರಾಜಕಾರಣಿಗಳು ಸೇರಿದಂತೆ ಸುಮಾರು ಒಂದು ಲಕ್ಷ ಕುಟುಂಬಗಳು ಈ ನೀತಿಯನ್ನು ಉಲ್ಲಂಘಿಸಿವೆ. ವಿಶ್ವದಲ್ಲಿಯೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಚೀನಾ, ಜನಸಂಖ್ಯೆಯನ್ನು ನಿಯಂತ್ರಿಸಲು ಕಳೆದ ಎರಡು ದಶಕಗಳಿಂದ ಜನನ ನಿಯಂತ್ರಣ ಕಾಯ್ದೆಯನ್ನು ಜಾರಿಗೆ ತಂದಿದೆ. ನಗರದಲ್ಲಿ ವಾಸಿಸುವ ಕುಟುಂಬಗಳಿಗೆ ಒಂದು ಮಗು, ಗ್ರಾಮಾಂತರ ಕುಟುಂಬಗಳಿಗೆ ಎರಡು ಮಗು ಎಂದು ಸರ್ಕಾರ ನಿಯಂತ್ರಣ ಹೇರಿದೆ.

2008: ಖ್ಯಾತ ಸೌಂದರ್ಯತಜ್ಞೆ ಶಹನಾಜ್ ಹುಸೇನ್ ಅವರ ಮಗ ಸಮೀರ್ (30) ಪಟ್ನಾದಲ್ಲಿ ಆತ್ಮಹತ್ಯೆ ಮಾಡಿಕೊಂಡರು. ತಮ್ಮ ತಾಯಿಯ ವೃತ್ತಿಯಲ್ಲಿ ಸಹಕರಿಸುತ್ತಿದ್ದ ಸಮೀರ್, ತಾವು ವಾಸಿಸುತ್ತಿದ್ದ ಆರಂತಸ್ತಿನ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡರು ಎಂದು ಪೊಲೀಸರು ಶಂಕೆ ವ್ಯಕ್ತ ಪಡಿಸಿದರು.

2008: ತಮಿಳುನಾಡು ಸರ್ಕಾರ 2008ರ `ತಿರುವಳ್ಳುವರ್ ಪ್ರಶಸ್ತಿ'ಯನ್ನು ಆಧ್ಯಾತ್ಮಿಕ ನೇತಾರ ಕುಂದ್ರಕುಡಿ ಪೊನ್ನಂಬಳ ಅಡಿಗರ್ ಅವರಿಗೆ ಘೋಷಿಸಿತು. `ತಂತೈ ಪೆರಿಯಾರ್' ಪ್ರಶಸ್ತಿಯನ್ನು ಕವಿತಾ ಪಿತನ್ ಅವರಿಗೆ ಹಾಗೂ `ಅರಿಗ್ನಾರ್ ಅಣ್ಣಾ' ಪ್ರಶಸ್ತಿಯನ್ನು ಶಾರದ ನಂಬಿ ಅವರಿಗೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಕರುಣಾನಿಧಿ ಪ್ರಕಟಿಸಿದರು.

2008: ಆನೇಕಲ್ ತಾಲ್ಲೂಕಿನ ಇಗ್ಗಲೂರು ಬಳಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವತಿಯಿಂದ ಸ್ಥಾಪಿಸಲು ಉದ್ದೇಶಿಸಲಾದ ಕಸಾಯಿಖಾನೆ ನಿರ್ಮಾಣಕ್ಕಾಗಿ ಭೂಮಾಪನಕ್ಕಾಗಿ ಬಂದಿದ್ದ ಅಧಿಕಾರಿಗಳ ವಿರುದ್ಧ ಸ್ಥಳೀಯರು ಹಾಗೂ ವಿವಿಧ ರಾಜಕೀಯ ಪಕ್ಷಗಳು, ಸಂಘಟನೆಗಳ ಮುಖಂಡರು ಪ್ರತಿಭಟನೆ ನಡೆಸಿದಾಗ ಮಾಜಿ ಶಾಸಕ ಎ.ನಾರಾಯಣ ಸ್ವಾಮಿ ಸೇರಿದಂತೆ ನೂರಾರು ಜನರನ್ನು ಪೊಲೀಸರು ಬಂಧಿಸಿದರು. ಬೆಂಗಳೂರಿನಲ್ಲಿರುವ ಕಸಾಯಿಖಾನೆಯನ್ನು ಬೆಂಗಳೂರು ನಗರದ ಹೊರವಲಯಕ್ಕೆ ವರ್ಗಾಯಿಸುವಂತೆ ಕರ್ನಾಟಕ ಹೈಕೋರ್ಟ್ ಆಜ್ಞಾಪಿಸಿತ್ತು. ಈ ಹಿನ್ನೆಲೆಯಲ್ಲಿ ಇಗ್ಗಲೂರಿಗೆ ಅದನ್ನು ವರ್ಗಾಯಿಸಲು ಬಿಬಿಎಂಪಿ ತೀರ್ಮಾನಿಸಿತ್ತು. ಇದಕ್ಕೆ ಸ್ಥಳೀಯರಿಂದ ತೀವ್ರ ಪ್ರತಿರೋಧ ವ್ಯಕ್ತಗೊಂಡಿತು.

2008: ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು 20,813 ಅಂಶಗಳಿಗೆ ಏರಿ ಇನ್ನೊಂದು ಸಾರ್ವಕಾಲಿಕ ದಾಖಲೆ ಬರೆಯಿತು. ಅಮೆರಿಕದಲ್ಲಿ ಉದ್ಭವಿಸಿದ ಆರ್ಥಿಕ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಕಳವಳಕಾರಿ ಬೆಳವಣಿಗೆ ಮತ್ತು ಜಾಗತಿಕ ಪೇಟೆಯ ನಿರುತ್ತೇಜನದ ಹೊರತಾಗಿಯೂ ಪೇಟೆಯಲ್ಲಿ ಷೇರು ಖರೀದಿ ಭರಾಟೆ ವ್ಯಕ್ತವಾಯಿತು. ಹೀಗಾಗಿ ಸೂಚ್ಯಂಕವು ಹೊಸ ಎತ್ತರಕ್ಕೆ ಏರಿಕೆ ಕಂಡಿತು.

2007: ವಿಶೇಷ ಆರ್ಥಿಕ ವಲಯ ಸ್ಥಾಪನೆಗೆ ಕೃಷಿಭೂಮಿ ಸ್ವಾಧೀನ ವಿರುದ್ಧ ಪಶ್ಚಿಮ ಬಂಗಾಳದ ಪೂರ್ವ ಮಿಡ್ನಾಪುರ ಜಿಲ್ಲೆಯನಂದಿಗ್ರಾಮದಲ್ಲಿ ಹಿಂಸಾಚಾರ ಭುಗಿಲೆದ್ದು 6 ಜನ ಅಸು ನೀಗಿದರು. ಇಂಡೋನೇಷ್ಯದ ಸಲೀಂ ಸಮೂಹ ಸಂಸ್ಥೆಗೆ ಕೃಷಿ ಭೂಮಿ ಒದಗಿಸುವ ವಿರುದ್ಧ ಭೂಮಿ ಉಚೇದ್ ಬಿರುದಿ ಸಮಿತಿ (ಭೂ ವಶ ತಡೆ ಸಮಿತಿ) ಮತ್ತು ಆಡಳಿತಾರೂಢ ಸಿಪಿಎಂ ಕಾರ್ಯಕರ್ತರ ಮಧ್ಯೆ ಸಂಘರ್ಷ ಆರಂಭಗೊಂಡು, ಹಿಂಸೆಗೆ ತಿರುಗಿ ಹಲವರು ಗಾಯಗೊಂಡರು.

2007: ಜೈವಿಕ ತಂತ್ರಜ್ಞಾನ ಕಾರ್ಯದರ್ಶಿ ಡಾ. ಎಂ.ಕೆ. ಭಾನ್ ಅವರನ್ನು ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿಯ (ಸಿ ಎಸ್ ಐ ಆರ್) ಮಹಾನಿರ್ದೇಶಕರನ್ನಾಗಿ ನೇಮಕ ಮಾಡಲಾಯಿತು.

2007: ಹಿರಿಯ ಸ್ವಾತಂತ್ರ್ಯ ಹೋರಾಟಗಾರ್ತಿ ತೀರ್ಥಹಳ್ಳಿಯ ಸಾವಿತ್ರಮ್ಮ ರಾಮಶರ್ಮ (88) ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ತರೀಕರೆ ತಾಲ್ಲೂಕು ಲಿಂಗದಹಳ್ಳಿಯಲ್ಲಿ ಜನಿಸಿದ ಸಾವಿತ್ರಮ್ಮ 1956ರಿಂದ ನಿರಂತರ ಸಮಾಜ ಸೇವೆಯಲ್ಲಿ ತೊಡಗಿದ್ದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣಕ್ಕೆ ಸಲ್ಲಿಸಿದ ಸೇವೆಗಾಗಿ 1982ರಲ್ಲಿ ರಾಷ್ಟ್ರ ಹಾಗೂ ರಾಜ್ಯ ಪ್ರಶಸ್ತಿ ಪಡೆದಿದ್ದರು. 1996ರಲ್ಲಿ ಬಸವಾನಿಯ ಹೊಳೆಕೊಪ್ಪದಲ್ಲಿ ವೃದ್ಧರಿಗಾಗಿ `ಅಭಯಾಶ್ರಮ' ಅರಂಭಿಸಿದ್ದ ಅವರು ಅದಕ್ಕೂ ಮುನ್ನ ತೀರ್ಥಹಳ್ಳಿಯಲ್ಲಿ ಕಸ್ತೂರಿಬಾ ಆಶ್ರಮ ನಡೆಸಿ ಹೆರಿಗೆ ಸೌಲಭ್ಯ ಕಲ್ಪಿಸಿದ್ದರು. ಅವರ ಪತಿ ವಾಮನಶರ್ಮ ಕೂಡಾ ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.

2007: ಅತ್ಯಧಿಕ ಬಾರಿ ಚುನಾವಣೆಗಳಲ್ಲಿ ಸ್ಪರ್ಧಿಸಿ `ಗಿನ್ನೆಸ್' ದಾಖಲೆಗೆ ಸೇರಿದ `ಹೊಟ್ಟೆ ಪಕ್ಷ' ರಂಗಸ್ವಾಮಿ (74) ಬೆಂಗಳೂರಿನಲ್ಲಿನಿಧನರಾದರು. 1967ರಲ್ಲಿ ಹೊಟ್ಟೆ ಪಕ್ಷವನ್ನು ಕಟ್ಟ್ದಿದ ರಂಗಸ್ವಾಮಿ 86 ಚುನಾವಣೆಗಳಲ್ಲಿ ಸ್ಪರ್ಧಿಸಿ `ಗಿನ್ನೆಸ್' ದಾಖಲೆಗೆ ಸೇರ್ಪಡೆಯಾದರು. ಆದರೆ ಅವರು ನಿರಂತರವಾಗಿ ಉಂಡದ್ದು ಸೋಲನ್ನೇ. 1967ರಲ್ಲಿ ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ವಿರುದ್ಧ ಸ್ಪರ್ಧಿಸುವ ಮೂಲಕ ರಾಜಕೀಯ ಸೋಲಿನ ಅಭಿಯಾನ ಅರಂಭಿಸಿದ ಅವರು ನಂತರ ಪ್ರತಿಯೊಂದು ಸಾರ್ವತ್ರಿಕ ಚುನಾವಣೆಯಲ್ಲೂ ಸ್ಪರ್ಧಿಸಿದ್ದರು. ಚಿಕ್ಕಮಗಳೂರಿನಲ್ಲಿ ಮಾಜಿ ಪ್ರಧಾನಿ ಇಂದಿರಾಗಾಂಧಿ ವಿರುದ್ಧವೂ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಬಡವರಿಗೆ ಕಿಲೋಗ್ರಾಂಗೆ ಒಂದು ರೂಪಾಯಿಗೆ ಅಕ್ಕಿ ವಿತರಿಸುವ ಮೂಲಕ ಪ್ರಚಾರ ನಡೆಸುತ್ತಿದ್ದುದು ಅವರ ವೈಶಿಷ್ಟ್ಯವಾಗಿತ್ತು.

2007: ಮಾಜಿ ವೇಗಿ ವಕಾರ್ ಯೂನಿಸ್ ಅವರು ಪಾಕಿಸ್ತಾನ ಕ್ರಿಕೆಟ್ ತಂಡದ ಬೌಲಿಂಗ್ ಕೋಚ್ ಹುದ್ದೆಗೆ ರಾಜೀನಾಮೆ ನೀಡಿದರು.

2006: ಸಾಗರೋತ್ತರ ಭಾರತೀಯರಿಗೆ ಕಿರಿಕಿರಿ ಮುಕ್ತವಾದ ಅಜೀವ ಪರ್ಯಂತ ಪ್ರವೇಶ ವೀಸಾ ಸೌಲಭ್ಯದ ಭಾರತ ಸಾಗರೋತ್ತರ ನಾಗರಿಕ (ಒಸಿಐ) ಯೋಜನೆಗೆ ಪ್ರಧಾನಿ ಮನಮೋಹನ್ ಸಿಂಗ್ ಹೈದರಾಬಾದಿನ ಅನಿವಾಸಿ ಭಾರತೀಯ ನಿವಾಸಿ ಸಮಾವೇಶದಲ್ಲಿ ಚಾಲನೆ ನೀಡಿದರು. ಅಮೆರಿಕದಲ್ಲಿ ನೆಲೆಸಿರುವ ಭಾರತೀಯರಾದ ನಿವೃತಿ ರಾಯ್ ಮತ್ತು ಇಫ್ತಿಕಾರ್ ಷರೀಫ್ ಅವರಿಗೆ ಅನಿವಾಸಿ ಭಾರತೀಯ ಪೌರತ್ವ ಚೀಟಿಗಳನ್ನು ಪ್ರಧಾನಿ ಹಸ್ತಾಂತರಿಸಿದರು.

2006: ಖ್ಯಾತ ವಿಜ್ಞಾನಿ ಪ್ರೊ. ಸಿ. ಎನ್.ಆರ್. ರಾವ್ ಮತ್ತು ವಿಪ್ರೊ ಸಂಸ್ಥೆಯ ಮುಖ್ಯಸ್ಥ ಅಜೀಂ ಎಚ್. ಪ್ರೇಮ್ ಜಿ ಅವರಿಗೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಿಂದ ಡಾಕ್ಟರ್ ಆಫ್ ಸೈನ್ಸ್ ಪದವಿ ಪ್ರದಾನ ಮಾಡಲಾಯಿತು. ರಾಜ್ಯಪಾಲ ಟಿ.ಎನ್. ಚತುರ್ವೇದಿ ಪ್ರಶಸ್ತಿ ಪ್ರದಾನ ಮಾಡಿದರು.

2000: ಟಿಬೆಟಿನ ಬೌದ್ಧ ನಾಯಕ 14 ವರ್ಷದ 17ನೇ ಕರ್ಮಪಾ ಅವರು ಚೀನೀ ಆಡಳಿತಕ್ಕೊಳಪಟ್ಟ ಟಿಬೆಟಿನಿಂದ ಭಾರತಕ್ಕೆ ಪಲಾಯನಗೈದರು. 1959ರಲ್ಲಿ ದಲಾಯಿಲಾಮಾ ಅವರು ದೇಶದಿಂದ ಪಲಾಯನಗೈದ ಬಳಿಕ ಚೀನೀ ಆಡಳಿತಕ್ಕೆ ಒಳಪಟ್ಟ ಟಿಬೆಟ್ನಿಂದ ದೇಶ ತ್ಯಜಿಸಿದ ಮಹತ್ವದ ವ್ಯಕ್ತಿ ಎನಿಸಿದರು.

1999: ಅಮೆರಿಕದ ಅಧ್ಯಕ್ಷ ಬಿಲ್ ಕ್ಲಿಂಟನ್ ಅವರ `ವಾಗ್ದಂಡನಾ ವಿಚಾರಣೆ' (ಇಂಪೀಚ್ ಮೆಂಟ್ ಟ್ರಯಲ್) ಸೆನೆಟಿನಲ್ಲಿ ಆರಂಭವಾಯಿತು. ಶ್ವೇತಭವನದಲ್ಲಿ ಕೆಲಸ ಮಾಡುತ್ತಿದ್ದ ಮೋನಿಕಾ ಲೆವೆನ್ ಸ್ಕಿ ಹಾಗೂ ಅಧ್ಯಕ್ಷರಿಗೆ ಸಂಬಂಧಿಸಿದ ಲೈಂಗಿಕ ಹಗರಣದ್ಲಲಿ ಅಧ್ಯಕ್ಷರಿಂದ ನ್ಯಾಯಕ್ಕೆ ಅಡ್ಡಿ ಉಂಟಾಗುತ್ತಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಈ ವಿಚಾರಣೆ ನಡೆಯಿತು. ವಿಚಾರಣೆ ಬಳಿಕ ಕ್ಲಿಂಟನ್ ಅವರನ್ನು ಆರೋಪಮುಕ್ತ ಗೊಳಿಸಲಾಯಿತು.

1989: ಜಪಾನ್ ಇತಿಹಾಸದಲ್ಲಿ ಅತ್ಯಂತ ದೀರ್ಘಕಾಲ ಆಳ್ವಿಕೆ ನಡೆಸಿದ ಚಕ್ರವರ್ತಿ ಹಿರೊಹಿತೊ ಅವರು ಟೋಕಿಯೋದಲ್ಲಿ ತಮ್ಮ 88ನೇ ವಯಸ್ಸಿನಲ್ಲಿ ನಿಧನರಾದರು. ಅವರು 1926ರಿಂದ 1989ರವರೆಗೆ ಜಪಾನನ್ನು ಆಳಿದರು.

1988: ತಮಿಳುನಾಡಿನ ಮುಖ್ಯಮಂತ್ರಿಯಾಗಿ ಜಾನಕಿ ರಾಮಚಂದ್ರನ್ ಅಧಿಕಾರ ಸ್ವೀಕರಿಸಿದರು.

1973: ಕಲಾವಿದೆ ವಾಣಿ ಕೃಷ್ಣಸ್ವಾಮಿ ಜನನ.

1953: ಬಾಳೆಹೊನ್ನೂರಿನ ರಂಭಾಪುರಿ ಮಠದ ವೀರಸೋಮೇಶ್ವರ ಜಗದ್ಗುರುಗಳ ಜನ್ಮದಿನ.

1951: ಕವಿ, ಚಿಂತಕ, ಸಂಘಟಕ ಬಿ.ಎಸ್ ಚಂದ್ರಶೇಖರ್ ಹುಟ್ಟಿದ ದಿನ. ಇವರ ಕಾಣುತಿಹುದೀಗಿಷ್ಟೆ ಕೃತಿಗೆ ತ.ರಾ.ಸು ಪ್ರಶಸ್ತಿ, ಪುಟ್ಟಿಯ ಕನಸು ಕೃತಿಗೆ ಆರ್ಯಭಟ ಪ್ರಶಸ್ತಿ ಲಭಿಸಿದೆ.

1948: ಲೇಖಕಿ ಈಶ್ವರಿಭಟ್ ಹುಟ್ಟಿದ ದಿನ.

1936: ಸಾಹಿತಿ ಜಿ.ಎಸ್. ಅನ್ನದಾನಿ ಹುಟ್ಟಿದ ದಿನ.

1917: ಹಾರ್ಮೋನಿಯಂ ಸ್ವತಂತ್ರ ವಾದಕರಾಗಿ ಅಪಾರ ಖ್ಯಾತಿ ಗಳಿಸಿದ ಪಂಡಿತ ಆರ್. ಕೆ. ಬಿಜಾಪೂರೆ ಅವರು ಕಲ್ಲೋಪಂತ ಬಿಜಾಪೂರೆ- ರುಕ್ಮಿಣಿಬಾಯಿ ದಂಪತಿಯ ಮಗನಾಗಿ ಬೆಳಗಾವಿ ಜಿಲ್ಲೆಯ ಕಾಗವಾಡದಲ್ಲಿ ಜನಿಸಿದರು.

1909: `ಫಿಯರ್ ಲೆಸ್ ನಾಡಿಯಾ' ಎಂದೇ ಖ್ಯಾತಿ ಪಡೆದಿದ್ದ ಭಾರತದ ಚಿತ್ರನಟಿ ಮೇರಿ ಈವಾನ್ಸ್ ನಾಡಿಯಾ (1909-1996) ಜನಿಸಿದರು.

1859: 1857ರ ದಂಗೆಯಲ್ಲಿ (ಭಾರತೀಯರ ಮೊದಲ ಮೊದಲ ಸ್ವಾತಂತ್ರ್ಯ ಸಂಗ್ರಾಮ) ಪಾಲ್ಗೊಂಡ್ದದಕ್ಕಾಗಿ ಕೊನೆಯ ಮೊಘಲ್ ಚಕ್ರವರ್ತಿ ಎರಡನೆಯ ಬಹಾದುರ್ ಶಹಾ ಅವರ ವಿಚಾರಣೆ ಆರಂಭವಾಯಿತು.

1827: ಸ್ಕಾಟಿಷ್ ಸಂಜಾತ ಕೆನಡಿಯನ್ ಸರ್ವೇಯರ್ ಹಾಗೂ ರೈಲ್ವೇ ಎಂಜಿನಿಯರ್ ಸರ್ ಸ್ಯಾಂಡ್ ಫೋರ್ಡ್ ಫ್ಲೆಮಿಂಗ್ (1827-1915) ಹುಟ್ಟಿದ ದಿನ. ಈತ ಜಗತ್ತನ್ನು `ಟೈಮ್ ಝೋನ್'ಗಳಾಗಿ ವಿಂಗಡಿಸಿದ. ಇದು ಈತನಿಗೆ `ಫಾದರ್ ಆಫ್ ಸ್ಟಾಂಡರ್ಡ್ ಟೈಮ್' ಎಂಬ ಹೆಸರನ್ನು ತಂದುಕೊಟ್ಟಿತು.

1789: ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದ ಮೊದಲ ಅಧ್ಯಕ್ಷರಾಗಿ ಜಾರ್ಜ್ ವಾಷಿಂಗ್ಟನ್ ಆಯ್ಕೆಯಾದರು. ಆದರೆ ಏಪ್ರಿಲ್ 30ರಂದು ಅಧಿಕಾರ ಸ್ವೀಕರಿಸಿದರು. 1797ರ ಮಾರ್ಚ್ 3ರವರೆಗೆ ಅವರು ಅಧ್ಯಕ್ಷರಾಗಿದ್ದರು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement