My Blog List

Monday, August 24, 2015

ಟೀ ಟ್ರೀ ಸಾರದಿಂದ ಅಗ್ಗದ ಗ್ರಾಫೇನ್ Graphene from Tea Tree Extract

ಟೀ ಟ್ರೀ ಸಾರದಿಂದ ಅಗ್ಗದ ಗ್ರಾಫೇನ್


ಮೆಲ್ಬೋರ್ನ್: ‘ಟೀ ಟ್ರೀ’ಯ ಸಾರವನ್ನು ಬಳಸಿ ‘ಅದ್ಭುತ ವಸ್ತು’ ಗ್ರಾಫೇನ್​ನನ್ನು ತಯಾರಿಸುವ ತ್ವರಿತವಾಗಿ ಮತ್ತು ಅಗ್ಗದಲ್ಲಿ ತಯಾರಿಸುವ ವಿಧಾನವನ್ನು ಭಾರತೀಯ ಮೂಲದ ವಿಜ್ಞಾನಿಯನ್ನೂ ಒಳಗೊಂಡ ವಿಜ್ಞಾನಿಗಳ ತಂಡವೊಂದು ಅಭಿವೃದ್ಧಿ ಪಡಿಸಿದೆ.

ಗ್ರಾಫೇನ್ ಅಂದರೆ ಜೇನುಗೂಡಿನ ರೀತಿಯಲ್ಲಿ ಇರುವ ಶುದ್ಧ ಇಂಗಾಲದ ತೆಳುವಾದ ಪರೆ. ಕಾಗದಕ್ಕಿಂತ 10 ಲಕ್ಷ ಪಟ್ಟು ತೆಳ್ಳಗಿರುತ್ತದೆ. ಆದರೆ ವಜ್ರಕ್ಕಿಂತಲೂ ಬಲಿಷ್ಠವಾಗಿದ್ದು ಬೇರೆ ಯಾವುದೇ ವಸ್ತುವಿಗಿಂತ ಉತ್ತಮವಾಗಿ ವಿದ್ಯುತ್ ವಾಹಕ ಹಾಗೂ ಶಾಖ ವಾಹಕವಾಗಿ ವರ್ತಿಸುವ ಸಾಮರ್ಥ್ಯ ಹೊಂದಿದೆ. ಎಲೆಕ್ಟ್ರಾನಿಕ್ ಉಪಕರಣದಿಂದ ಹಿಡಿದು ಎಲೆಕ್ಟ್ರಿಕಲ್ ಉಪಕರಣಗಳವರೆಗೂ ಇದನ್ನು ಬಳಸಬಹುದು.

ಪ್ಲಾಸ್ಟಿಕ್, ಜಿರಲೆಗಳು, ನಾಯಿಯ ಮುಖ ಇತ್ಯಾದಿ ವಸ್ತುಗಳಿಂದ ಗ್ರಾಫೇನ್ ತಯಾರಿಸಬಹುದು. ಅಂದರೆ ಯಾವುದೇ ಇಂಗಾಲ ಸಂಪನ್ಮೂಲದಿಂದಲೂ ಇದನ್ನು ತಯಾರಿಸಬಹುದು ಎನ್ನುತ್ತದೆ ಸಿದ್ಧಾಂತ.

ಆದರೂ ಸುಸ್ಥಿರವಾದ ಮತ್ತು ಆರ್ಥಿಕವಾಗಿ ಕಡಿಮೆ ವೆಚ್ಚದಲ್ಲಿ ಗ್ರಾಫೇನ್ ತಯಾರಿಸುವ ಮಾರ್ಗವನ್ನು ವಿಜ್ಞಾನಿಗಳು ಹುಡುಕಾಡುತ್ತಲೇ ಇದ್ದಾರೆ. ಗ್ರಾಫೇನ್ ಆಧಾರಿತ ವಸ್ತುಗಳಿಗೆ ವಿಶ್ವಮಟ್ಟದಲ್ಲಿ ವ್ಯಾಪಕ ಬೇಡಿಕೆ ಇರುವುದೇ ಇದಕ್ಕೆ ಕಾರಣ.

ಈಗ ಆಸ್ಟ್ರೇಲಿಯಾದ ಜೇಮ್್ಸ ಕುಕ್ ವಿಶ್ವವಿದ್ಯಾಲಯದ ಸಂಶೋಧಕರು ಆಸ್ಟ್ರೇಲಿಯಾ, ಸಿಂಗಾಪುರ, ಜಪಾನ್ ಮತ್ತು ಅಮೆರಿಕದ ಸಂಸ್ಥೆಗಳ ಸಹಯೋಗದೊಂದಿಗೆ ಪರಂಪರಾಗತ ಔಷಧಗಳಲ್ಲಿ ಅಗತ್ಯ ತೈಲ ತಯಾರಿಸಲು ಬಳಸುವ ’ಮೆಲಾಲೆಯುಕಾ ಆಲ್ಟರ್​ನಿಫೋಲಿಯಾ’ ಎಂಬುದಾಗಿ ಕರೆಯಲಾಗುವ ‘ಟೀ ಟ್ರೀ’ಯಿಂದ ಗ್ರಾಫೇನ್ ತಯಾರಿಸುವ ವಿಧಾನ ಕಂಡು ಹಿಡಿದಿದ್ದಾರೆ.

‘ಟೀ ಟ್ರೀ’ ತೈಲದಿಂದ ದೋಷರಹಿತವಾದ ಗ್ರಾಫೇನ್ ಫಿಲಂಗಳನ್ನು ತಯಾರಿಸಬಹುದು. ಅದೂ ಕೆಲವೇ ಸೆಕೆಂಡ್​ಗಳಲ್ಲಿ. ಹಾಲಿ ವಿಧಾನದಲ್ಲಿ ಗ್ರಾಫೇನ್ ಫಿಲಂ ತಯಾರಿಸಲು ಹಲವು ಗಂಟೆಗಳು ಬೇಕಾಗುತ್ತವೆ.

ಹಾಲಿ ವಿಧಾನಗಳಿಗೆ ವ್ಯತಿರಿಕ್ತವಾಗಿ ಹೊಸ ವಿಧಾನವು ಕಡಿಮೆ ತಾಪಮಾನದಲ್ಲಿ ಕೆಲಸ ಮಾಡುತ್ತದೆ. ಇದಕ್ಕೆ ಕೆಟಲಿಸ್ಟ್​ಗಳು (ವೇಗವರ್ಧಕಗಳು) ಬೇಕಿಲ್ಲ. ಮಿಥೇನ್ ಅಥವಾ ಇತರ ನವೀಕರಿಸಲಾಗದಂತಹ, ನಂಜಿನ ಅಥವಾ ಸ್ಪೋಟಕಾರಿ ಪೂರ್ವಸೂಚಕಗಳು ಬೇಕಾಗುವುದಿಲ್ಲ.

ಈ ಸಂಶೋಧನೆಯು ಉತ್ತಮ ಗುಣಮಟ್ಟದ, ಕಡಿಮೆ ಪದರಗಳ ಗ್ರಾಫೇನ್​ನ್ನು ಪರಿಸರ ಮಿತ್ರ ವಿಧಾನದಲ್ಲಿ ತಯಾರಿಸುವಂತೆ ಮಾಡಿದೆ ಎಂದು ಜೇಮ್್ಸ ಕುಕ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಮೋಹನ್ ವಿ ಜಾಕೋಬ್ ಹೇಳಿದರು.


ಪ್ಲಾಸ್ಮಾ -ಎನ್​ಹ್ಯಾನ್ಸಡ್ ಕೆಮಿಕಲ್ ವೇಪರ್ ಡೆಪೊಸಿಷನ್ ಎಂಬುದಾಗಿ ಕರೆಯಲಾಗುವ ತಂತ್ರಜ್ಞಾನವನ್ನು ಸಂಶೋಧಕರು ಗ್ರಾಫೇನ್ ತಯಾರಿಗೆ ಬಳಸಿದ್ದಾರೆ. ಅವರು ಬಾಷ್ಪೀಕರಿಸಿದ ಟೀ ಟ್ರೀ ಸಾರವನ್ನು ಹಿಂದೆ ಮಿಥೇನ್ ಅನಿಲವನ್ನು ಮಾಡಿದಂತೆಯೇ ಬಿಸಿಯಾದ ನಳಿಕೆಯೊಳಕ್ಕೆ ಸೇರಿಸಿದರು. ಎಲೆಕ್ಟ್ರೋಡ್ ಬಳಸಿ ಪ್ಲಾಸ್ಮಾದ ಗುಂಡಿ ಅದುಮಿದೊಡನೆಯೇ ಬಾಷ್ಪೀಕರಿಸಿದ ಟೀ ಟ್ರೀ ಸಾರವು ತತ್ ಕ್ಷಣವೇ ಗ್ರಾಫೇನ್ ಆಗಿ ಪರಿವರ್ತನೆಗೊಂಡಿತು ಎಂದು ಜಾಕೋಬ್ ವಿವರಿಸುತ್ತಾರೆ..

No comments:

Advertisement