My Blog List

Saturday, November 9, 2019

ದೇವೇಂದ್ರ ಫಡ್ನವಿಸ್ ರಾಜೀನಾಮೆ, ಶರದ್ ಪವಾರ್ ಮನೆಗೆ ರಾವತ್ ದೌಡು

 ದೇವೇಂದ್ರ ಫಡ್ನವಿಸ್ ರಾಜೀನಾಮೆ,
ಶರದ್ ಪವಾರ್ ಮನೆಗೆ ರಾವತ್ ದೌಡು
ಮುಂಬೈ: ಮಹಾರಾಷ್ಟ್ರ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ- ಶಿವಸೇನಾ ಮೈತ್ರಿಕೂಟವು ಸರಳ ಬಹುಮತ ಪಡೆದ ೧೫ ದಿನಗಳ ಬಳಿಕ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು, ನೂತನ ಸರ್ಕಾರ ರಚನೆಗೆ ಇರುವ ಗಡುವಿಗೆ ಒಂದು ದಿನ ಮುಂಚಿತವಾಗಿ, 2019 ನವೆಂಬರ್ 08ರ ಶುಕ್ರವಾರ ಸಂಜೆ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರಿಗೆ ತಮ್ಮ ರಾಜೀನಾಮೆಯನ್ನು ಸಲ್ಲಿಸಿದರು. ಮಹಾರಾಷ್ಟ್ರದ ಹಾಲಿ ವಿಧಾನಸಭೆಯ ಅವಧಿ ನವೆಂಬರ್ 09ರ ಶನಿವಾರಕ್ಕೆ ಮುಕ್ತಾಯವಾಗುತ್ತದೆ.

ರಾಜೀನಾಮೆಯ ಬಳಿಕ ಫಡ್ನವಿಸ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಬಗೆಗಿನ ಟೀಕೆಗಳಿಗಾಗಿ ಶಿವಸೇನೆಯ ವಿರುದ್ಧ ಪ್ರಹಾರ ನಡೆಸಿದರೆ,  ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆಮಹಾರಾಷ್ಟ್ರದಲ್ಲಿ ನಾವು ಸರ್ಕಾರ ರಚಿಸಬಲ್ಲೆವು, ಅದಕ್ಕೆ ಅಮಿತ್ ಶಾ ಅಥವಾ ಫಡ್ನವಿಸ್ ನೆರವು ಬೇಕಾಗಿಲ್ಲಎಂದು ಘೋಷಿಸಿದರು.

ದೇವೇಂದ್ರ ಫಡ್ನವಿಸ್ ಅವರು ರಾಜೀನಾಮೆ ಸಲ್ಲಿಸಿದ ವೇಳೆಯಲ್ಲಿಯೇ ಶಿವಸೇನಾ ನಾಯಕ ಸಂಜಯ್ ರಾವತ್ ಅವರು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್ಸಿಪಿ) ಶರದ್ ಪವಾರ್ ಅವರ ಮನೆಗೆ ಧಾವಿಸಿ ಮಾತುಕತೆ ನಡೆಸಿದರು.  ಬಳಿಕ ರಾಜ್ಯದ ಕಾಂಗ್ರೆಸ್ ನಾಯಕರೂ ಶರದ್ ಪವಾರ್ ಬಳಿ ತೆರಳಿ ಮಾತುಕತೆ ನಡೆಸಿದರು.

ಬಿಜೆಪಿಯಿಂದ ಮುಖ್ಯಮಂತ್ರಿ ಅಭ್ಯರ್ಥಿ ಎಂಬುದಾಗಿಯೇ ಬಿಂಬಿತರಾಗಿದ್ದ ಫಡ್ನವಿಸ್ ಅವರು ಉದ್ಧವ್ ಠಾಕ್ರೆ ನೇತೃತ್ವದ ಮಿತ್ರ ಪಕ್ಷ ಶಿವಸೇನೆಯು ೩೦ ತಿಂಗಳ ಬಳಿಕ ಮುಖ್ಯಮಂತ್ರಿ ಹುದ್ದೆ ನೀಡುವ ಬಗ್ಗೆ ಲಿಖಿತ ಭರವಸೆ ಬೇಕು ಎಂದು ಪಟ್ಟುಹಿಡಿದ ಹಿನ್ನೆಲೆಯಲ್ಲಿ ನಡೆದ ಗುದ್ದಾಟದ ಬಳಿಕ, ರಾಜ್ಯಪಾಲರಿಗೆ ರಾಜೀನಾಮೆ ಸಲ್ಲಿಸಿದರಾದರೂ ಮತ್ತೆ ಸರ್ಕಾರ ರಚನೆಗೆ ಹಕ್ಕು ಮಂಡಿಸಲಿಲ್ಲ.
ಸಮಾನ ಅಧಿಕಾರಕ್ಕಾಗಿ ಶಿವಸೇನೆ ಹಿಡಿದ ಪಟ್ಟು ಹೆಚ್ಚಿನ ಖಾತೆಗಳನ್ನು ಪಡೆಯಲು ನಡೆಸಿದ ತಂತ್ರ ಎಂಬುದಾಗಿ ಬಿಜೆಪಿ ನಾಯಕರು ಹೇಳುತ್ತಲೇ ಬಂದರು. ಆದರೆ ಫಡ್ನವಿಸ್ ಅವರ ಮುಖ್ಯಮಂತ್ರಿ ಸ್ಥಾನ ಹಂಚಿಕೊಳ್ಳುವ ಬಗ್ಗೆ ಯಾವುದೇ ಒಪ್ಪಂದವೂ ಮಿತ್ರ ಪಕ್ಷಗಳ ಮಧ್ಯೆ ಆಗಿಲ್ಲ ಎಂಬುದಾಗಿ ಘೋಷಿಸಿದ ಬಳಿಕ ಶಿವಸೇನೆ ಫಡ್ನವಿಸ್ ಅವರ ಕಾಲ ಕೆಳಗೆ ಹಳ್ಳತೋಡಲು ಗಟ್ಟಿ ಹೆಜ್ಜೆ ಇಟ್ಟಿತು.
ರಾಜೀನಾಮೆ ನೀಡಿದ ಫಡ್ನವಿಸ್ ಅವರಿಗೆ ರಾಜ್ಯಪಾಲರು ನೂತನ ಸರ್ಕಾರ ರಚನೆಯಾಗುವವರೆಗೆ ಅಥವಾ ಪರ್ಯಾಯ ವ್ಯಸ್ಥೆ ಆಗುವವರೆಗೆ ಹಂಗಾಮೀ ಮುಖ್ಯಮಂತ್ರಿಯಾಗಿ ಮುಂದುವರೆಯುವಂತೆ ಸೂಚಿಸಿದರು.

ರಾಜ್ಯಪಾಲರಿಗೆ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದ ಬಳಿಕ ಟೆಲಿವಿಷನ್ ಕ್ಯಾಮರಾಗಳ ಮುಂದೆ ಬಂದ ಮುಖ್ಯಮಂತ್ರಿ ಮಹಾರಾಷ್ಟ್ರದ ಮುಂದಿನ ಮುಖ್ಯಮಂತ್ರಿ ಬಿಜೆಪಿಯವರೇ ಆಗಲಿದ್ದಾರೆ ಎಂದು ಭವಿಷ್ಯ ನುಡಿದರು. ತಮ್ಮ ಪಕ್ಷವು ಸರ್ಕಾರ ರಚನೆಯ ಯತ್ನಗಳನ್ನು ಮಾಡುತ್ತಿರುವ ಬಗ್ಗೆ ಹೇಳಲು ಫಡ್ನವಿಸ್ ಅವರು ಮಾಧ್ಯಮಗಳ ಮುಂದೆ ಬಂದದ್ದು ಇದೇ ಪ್ರಥಮವಾಗಿತ್ತು.

ಮಹಾರಾಷ್ಟ್ರದ ಜನತೆಯ ಸೇವೆ ಸಲ್ಲಿಸಲು ಅವಕಾಶ ನೀಡಿದ್ದಕ್ಕಾಗಿ ತಮ್ಮ ಪಕ್ಷ,ಅದರ ನಾಯಕರು, ಬಿಜೆಪಿಯೊಂದಿಗೆ ಮುನಿಸಿಕೊಂಡಿರುವ ಮಿತ್ರ ಪಕ್ಷ ಶಿವಸೇನೆಗೆ ಧನ್ಯವಾದಗಳನ್ನು ಅರ್ಪಿಸುತ್ತಾ ಫಡ್ನವಿಸ್ ತಮ್ಮ ಮಾತು ಆರಂಭಿಸಿದರು. ಆದರೆ ಬಳಿಕ ಶಿವಸೇನೆ ಮತ್ತು ಅದರ ನಾಯಕರ ವಿರುದ್ಧ ಕಟು ಟೀಕಾ ಪ್ರಹಾರ ನಡೆಸಿದರು.

ಜನಾದೇಶದ ಹೊರತಾಗಿಯೂ ನಮಗೆ ಸರ್ಕಾರ ರಚಿಸಲು ಆಗಿಲ್ಲ ಎಂಬ ಕಾರಣಕ್ಕಾಗಿ ನನಗೆ ನೋವಾಗಿದೆಎಂದು ಹೇಳಿದ ಅವರು ಬಿಜೆಪಿಯ ಶಿವಸೇನೆಯ ಜೊತೆಗೆ ಮಾತುಕತೆಯನ್ನೇ ನಡೆಸಿಲ್ಲ ಎಂಬ ಭಾವನೆಯನ್ನು ನಿವಾರಿಸಲು ಯತ್ನಿಸಿದರು. ’ನಾನು ಸಂಪರ್ಕಿಸಲು ಯತ್ನಿಸಿದ್ದೆ. ಆದರೆ ಉದ್ಧವ್ ಜಿ ನನ್ನ ಕರೆಗಳನ್ನೇ ಸ್ವೀಕರಿಸಲಿಲ್ಲಎಂದು ಫಡ್ನವಿಸ್ ನುಡಿದರು. 
ಅವರು ನಮ್ಮ ಜೊತೆಗೆ ಮಾತುಕತೆ ನಡೆಸುವುದನ್ನು ನಿಲ್ಲಿಸಿದರು. ಅವರು ಭ್ರಮನಿರಸನ ಗೊಂಡಿರಬಹುದು ಮತ್ತು ನಮ್ಮ ಜೊತೆಗೆ ಮಾತುಕತೆ ನಡೆಸಲು ಅವರಿಗೆ ಕಾಲಾವಕಾಶ ಬೇಕಿದ್ದಿರಬಹುದು. ಆದರೆ, ದುರದೃಷ್ಟಕರ ವಿಷಯ ಏನೆಂದರೆ, ಇದೇ ಸಮಯದಲ್ಲಿ ಅವರು ಕಾಂಗ್ರೆಸ್ ಮತ್ತು ಎನ್ಸಿಪಿ ಜೊತೆಗೆ ಮಾತನಾಡುತ್ತಿದ್ದರು, ಅದೂ ದಿನಕ್ಕೆ ಎರಡು, ಮೂರು ಬಾರಿಎಂದು ಫಡ್ನವಿಸ್ ಹೇಳಿದರು. 
ಮುಖ್ಯಮಂತ್ರಿ ಸ್ಥಾನವನ್ನು ರೊಟೇಶನ್ ಸೂತ್ರದಂತೆ ಹಂಚಿಕೊಳ್ಳಲು ನಿರ್ಧರಿಸಿದ ಅಥವಾ ಚರ್ಚಿಸಿ ಯಾವುದೇ ಸಭೆಯಲ್ಲಿ ನಾನು ಪಾಲ್ಗೊಂಡಿಲ್ಲ. ಬಿಜೆಪಿ ಮುಖ್ಯಸ್ಥ ಅಮಿತ್ ಶಾ ಮತ್ತು ಉದ್ಧವ್ ಠಾಕ್ರೆ ಜೊತೆಗೆ ಇಂತಹದ್ದೇನಾದರೂ ನಡೆದಿದ್ದರೆ ನನಗೆ ಅದರ ಅರಿವಿಲ್ಲಎಂದು ಫಡ್ನವಿಸ್ ಒತ್ತಿ ಹೇಳಿದರು.

ಸರ್ಕಾರ ರಚನೆಗಾಗಿ ನಾವು ಯಾವುದೇ ಕುದುರೆವ್ಯಾಪಾರಕ್ಕೆ ಇಳಿಯುವುದಿಲ್ಲಎಂದೂ ಮುಖ್ಯಮಂತ್ರಿ ನುಡಿದರು.

೨೦೧೪ರಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಏರಿದಂದಿನಿಂದ ಇದೇ ಮೊದಲ ಬಾರಿಗೆ ಶಿವಸೇನೆಯ ವಿರುದ್ಧ ಅತ್ಯಂತ ಕಟು ಪದಗಳಲ್ಲಿ ವಾಕ್ ಪ್ರಹಾರ ನಡೆಸಿದ ಫಡ್ನವಿಸ್, ’ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೂಡಾ ತನ್ನ ದಾಳಿಯಿಂದ ಬಿಡದ ಶಿವಸೇನೆಯು ಮಿತ್ರಪಕ್ಷವಾಗಿ ಮುಂದುವರೆಯಲು ಯೋಗ್ಯವೇ?’ ಎಂದು ಪ್ರಶ್ನಿಸಿದರು.

ಅವರ ಹೇಳಿಕೆಗಳು, ವಿಶೇಷವಾಗಿ ಪ್ರಧಾನಿ ವಿರುದ್ಧದ ಹೇಳಿಕೆಗಳನ್ನು ನೋಡಿ ನನಗೆ ಅಚ್ಚರಿಯಾಗಿದೆ ಮತ್ತು ನೋವಾಗಿದೆ. ಬಿಜೆಪಿಯಿಂದ ಯಾರೊಬ್ಬರೂ ಬಾಳ್ ಠಾಕ್ರೆ (ಸೇನಾ ಸ್ಥಾಪಕ) ಅವರನ್ನು ಅಥವಾ ಉದ್ಧವ್ ಠಾಕ್ರೆ ಅವರನ್ನು ಗುರಿಮಾಡಿ ಟೀಕಿಸಿಲ್ಲ. ಆದರೆ ಪ್ರತಿಸ್ಪರ್ಧಿಗಳು ಕೂಡಾ ಮಾಡದಂತಹ ದಾಳಿಯನ್ನು ಸೇನೆಯು ನಿರಂತರವಾಗಿ ಮೋದಿ ಜಿ ವಿರುದ್ಧ ಮಾಡುತ್ತಿರುವುದನ್ನು ನೋಡಿದರೆ, ನಾವು ಅವರನ್ನು ಸ್ವೀಕರಿಸಲು ಸಾಧ್ಯವಿಲ್ಲ. ಸೇನೆಗೆ ಮೈತ್ರಿ ಮುಂದುವರೆಸಲು ಆಸಕ್ತಿ ಇದ್ದಂತಿಲ್ಲಎಂದು ಫಡ್ನವಿಸ್ ನುಡಿದರು. ’ಎಲ್ಲ ಆಯ್ಕೆಗಳೂ ಮುಕ್ತವಾಗಿವೆ ಎಂಬ ಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರ ಹೇಳಿಕೆ ನಮಗೆ ಅಚ್ಚರಿ ಉಂಟು ಮಾಡಿದೆ ಎಂದು ಅವರು ಹೇಳಿದರು.

ಜನರು ಬಿಜೆಪಿ ಅಥವಾ ಶಿವಸೇನೆಗೆ ಮತಕೊಟ್ಟಿಲ್ಲ. ಕಳೆದ ೧೫ ದಿನಗಳಿಂದ ಶಿವಸೇನೆ ನೀಡುತ್ತಿರುವ ಹೇಳಿಕೆಗಳು ಅಥವಾ ಅವರ ಬೇಡಿಕೆಗಳ ಬಗ್ಗೆ ಎಂದೂ ಮಾತುಕತೆಗಳೇ ನಡೆದಿಲ್ಲಎಂದು ಅವರು ನುಡಿದರು.

ಕಳೆದ ತಿಂಗಳು ನಡೆದ ಚುನಾವಣೆಯಲ್ಲಿ ಸರಳ ಬಹುಮತ ಗಳಿಸಿದ ಕೆಲವೇ ಗಂಟೆಗಳಲ್ಲಿ ಆರಂಭವಾದ ಬಿಕ್ಕಟ್ಟನ್ನು ಬಗೆಹರಿಸಿಕೊಳ್ಳುವಲ್ಲಿ  ಬಿಜೆಪಿ - ಶಿವಸೇನೆ ವಿಫಲವಾದವು. ಅಕ್ಟೋಬರ್ ೨೪ರಂದು ಉದ್ಧವ್ ಠಾಕ್ರೆ ಅಧಿಕಾರದ ಸಮಾನ ಹಂಚಿಕೆ ಮತ್ತು ಮುಖ್ಯಮಂತ್ರಿ ಸ್ಥಾನವನ್ನು ತಲಾ ಎರಡೂವರೆ ವರ್ಷ ಹಂಚಿಕೊಳ್ಳುವ ಪ್ರಸ್ತಾಪದ ಬಗ್ಗೆ ಮಾತನಾಡಲು ಆರಂಭಿಸಿದ್ದರು. ಆದರೆ ಫಡ್ನವಿಸ್ ಅದನ್ನು ತಳ್ಳಿಹಾಕಿದರು. ಬಿಜೆಪಿಯು ಉಪಮುಖ್ಯಮಂತ್ರಿ ಸ್ಥಾನ ಮತ್ತು ಕೆಲವು ಪ್ರಮುಖ ಸಚಿವ ಸ್ಥಾನ ನೀಡುವ ಇಂಗಿತ ವ್ಯಕ್ತ ಪಡಿಸಿದರೂ, ಶಿವಸೇನೆ ಅದಕ್ಕೆ ಒಪ್ಪಲಿಲ್ಲ.

ಬಿಜೆಪಿಯು ಮೈತ್ರಿ ಮುರಿಯಲು ಬಯಸುತ್ತಿಲ್ಲ. ಮೈತ್ರಿ ರೂಪಿಸಲು ಬಯಸುತ್ತಿದೆ. ಠಾಕ್ರೆಯವರಿಗೆ ನಮ್ಮ ಜೊತೆಗೆ ಮಾತನಾಡಲು ಮನಸ್ಸಿಲ್ಲ, ಎನ್ಸಿಪಿ, ಕಾಂಗ್ರೆಸ್ ಜೊತೆ ದಿನಕ್ಕೆ ಮೂರು ಬಾರಿ ಮಾತನಾಡುತ್ತಾರೆ. ಶಿವಸೇನೆಯು ರೀತಿಯಾಗಿ ಸರ್ಕಾರ ರಚಿಸಲು ಸಾಧ್ಯವಿಲ್ಲ. ಬಿಜೆಪಿ ತನ್ನದೇ ಮುಖ್ಯಮಂತ್ರಿಯೊಂದಿಗೆ ಸರ್ಕಾರ ರಚಿಸುತ್ತದೆಎಂದು ಫಡ್ನವಿಸ್ ಹೇಳಿದರು.

ಈಗ ರಾಜಭವನದ ಆಯ್ಕೆ ಏನು ಎಂಬುದು ಸ್ಪಷ್ಟವಾಗಿಲ್ಲ. ೫೬ ಸ್ಥಾನಗಳೊಂದಿಗೆ ಎರಡನೇ ದೊಡ್ಡ ಪಕ್ಷವಾದ ಶಿವಸೇನೆಯನ್ನು ಸರ್ಕಾರ ರಚನೆಗೆ ರಾಜ್ಯಪಾಲರು ಆಹ್ವಾನಿಸಬಹುದು ಎಂಬ ಅಭಿಪ್ರಾಯವಿದೆ. ಸೇನೆಯು ಎಂದು ಮಂದಿ ಪಕ್ಷೇತರರ ಬೆಂಬಲವನ್ನೂ ಹೊಂದಿದೆ.

ಫಡ್ನವಿಸ್ ರಾಜಭವನ ತಲುಪಿದ್ದ ವೇಳೆಯಲ್ಲೇ ಶಿವಸೇನೆಯ ಸಂಸದ ಸಂಜಯ್ ರಾವತ್ ಅವರು ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರನ್ನು ಭೇಟಿ ಮಾಡಿದ್ದಾರೆ. ಆದರೆ ಪವಾರವರು ಸರ್ಕಾರ ರಚನೆ ಸಂಬಂಧ ತಮ್ಮ ಯೋಜನೆ ಬಹಿರಂಗ ಪಡಿಸಿಲ್ಲ. ರಾವತ್ ಅವರೂ ಬಗ್ಗೆ ಸ್ಪಷ್ಟ ಪಡಿಸಿಲ್ಲ.
ಸೇನೆಯು ಎನ್ಸಿಪಿ ಜೊತೆ ಸರ್ಕಾರ ರಚನೆಯ ತೀರ್ಮಾನ ಮಾಡಿದರೆ, ಅದು ರಾಜ್ಯಪಾಲರಿಗೆ ತನಗೆ ಸರ್ಕಾರ ರಚನೆಗೆ ಬೇಕಾದ ಅಗತ್ಯ ಬೆಂಬಲ ಇರುವುದನ್ನು ಖಾತರಿ ಪಡಿಸಬೇಕು. ಅದು ರಾಜ್ಯಪಾಲರಿಗೆ ೧೪೫ ಶಾಸಕರ ಪಟ್ಟಿ ಸಲ್ಲಿಸಬೇಕಾಗಬಹುದು.

ಯಾವುದೇ ಪಕ್ಷಕ್ಕೆ ಬಹುಮತ ಇಲ್ಲ ಎಂದು ಅನಿಸಿದರೆ ರಾಜ್ಯಪಾಲರು ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸು ಮಾಡಲೂ ಬಹುದು.

No comments:

Advertisement