My Blog List

Wednesday, January 15, 2020

ನಿರ್ಭಯಾ ಹಂತಕರ ಗಲ್ಲು ಜಾರಿಗೆ ಸುಪ್ರಿಂಕೋರ್ಟ್ ಮುದ್ರೆ

ನಿರ್ಭಯಾ  ಹಂತಕರ  ಗಲ್ಲು ಜಾರಿಗೆ ಸುಪ್ರಿಂಕೋರ್ಟ್  ಮುದ್ರೆ
ಇಬ್ಬರು ಅಪರಾಧಿಗಳ ಕ್ಯುರೇಟಿವ್ ಅರ್ಜಿ ವಜಾ, .೨೨ರಂದು ಮರಣದಂಡನೆ ಜಾರಿ
ನವದೆಹಲಿ: ನಿರ್ಭಯಾ ಅತ್ಯಾಚಾರ, ಕೊಲೆ ಪ್ರಕರಣದ ಅಪರಾಧಿಗಳಾದ ವಿನಯ್ ಕುಮಾರ್ ಶರ್ಮ ಮತ್ತು ಮುಖೇಶ್ ಸಿಂಗ್ ಅವರು ಮರಣ ದಂಡನೆ ವಿರುದ್ಧ ಸಲ್ಲಿಸಿದ್ದ ಕ್ಯುರೇಟಿವ್ ಅರ್ಜಿಗಳನ್ನು ಸುಪ್ರೀಂಕೋರ್ಟ್ ಪಂಚ ಸದಸ್ಯ ಪೀಠವು  2020 ಜನವರಿ 14ರ ಮಂಗಳವಾರ ವಜಾಗೊಳಿಸಿತು. ಇದರೊಂದಿಗೆ ಜನವರಿ ೨೨ರಂದು ನಾಲ್ಕೂ ಮಂದಿ ಅಪರಾಧಿಗಳ ಮರಣದಂಡನೆ ಜಾರಿಗೆ ಮಾರ್ಗ ಸುಗಮಗೊಂಡಿತು.

ನಿರ್ಭಯಾ ಪ್ರಕರಣದಲ್ಲಿ ಕೊನೆಯ ಕಾನೂನು ಅವಕಾಶ ಬಳಸಿಕೊಂಡು ಗಲ್ಲುಶಿಕ್ಷೆಯನ್ನು ಪ್ರಶ್ನಿಸಿ ವಿನಯ್ ಕುಮಾರ್ ಮತ್ತು ಮುಖೇಶ್ ಸಲ್ಲಿಸಿದ್ದ ಕ್ಯುರೇಟಿವ್ ಅರ್ಜಿಯನ್ನು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಎನ್ ವಿ ರಮಣ ನೇತೃತ್ವದ ಪಂಚಸದಸ್ಯ ಪೀಠವು ಕೊಠಡಿಯ ಒಳಗೆ ವಿಚಾರಣೆ ನಡೆಸಿ ವಜಾಗೊಳಿಸಿತು.

ಸಾಮೂಹಿಕ ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ನಾಲ್ವರು ಅಪರಾಧಿಗಳಿಗೆ ದೆಹಲಿ ನ್ಯಾಯಾಲಯವು ಡೆತ್ ವಾರಂಟ್ ಹೊರಡಿಸಿತ್ತು. ಆದೇಶದ ಬಳಿಕ ದಿನದೊಳಗೆ ಕೊನೆಯ ಕಾನೂನುಬದ್ಧ ಪರಿಹಾರವಾಗಿ ಕ್ಯುರೇಟಿವ್ ಅರ್ಜಿ ಸಲ್ಲಿಸಬಹುದಾಗಿತ್ತು.

ಮರಣದಂಡನೆಯನ್ನು ಜೀವಾವಧಿ ಶಿಕ್ಷೆಗೆ ಇಳಿಸುವಂತೆ ಕೋರಿ ರಾಷ್ಟ್ರಪತಿಗೆ ಕ್ಷಮಾದಾನ ಅರ್ಜಿ ಸಲ್ಲಿಸಬಹುದಾದ ಕೊನೆಯ ಅವಕಾಶ ಮಾತ್ರವೇ ಈಗ ಅಪರಾಧಿಗಳಿಗೆ ಉಳಿದಿದೆ ಎಂದು ವರದಿ ತಿಳಿಸಿತು.

ನಾಲ್ವರು ಅಪರಾಧಿಗಳನ್ನು ಜನವರಿ ೨೨ರಂದು ಬೆಳಗ್ಗೆ ೭ಗಂಟೆಗೆ ಗಲ್ಲಿಗೇರಿಸುವಂತೆ ದೆಹಲಿಯ ಸಾಕೇತ್ ನ್ಯಾಯಾಲಯವು ಡೆತ್ ವಾರಂಟ್ ಹೊರಡಿಸಿತ್ತು.

ತಿಹಾರ್ ಸೆರೆಮನೆಯಲ್ಲಿ ನಾಲ್ಕೂ ಮಂದಿ ಅಪರಾಧಿಗಳನ್ನು ಗಲ್ಲಿಗೇರಿಸುವ ಪ್ರಕ್ರಿಯೆಗೆ ಸಿದ್ಧತೆಗಳು ನಡೆದಿವೆ ಎಂದು ವರದಿ ತಿಳಿಸಿತು.

ನ್ಯಾಯಮೂರ್ತಿಗಳಾದ ಎನ್.ವಿ. ರಮಣ, ಅರುಣ್ ಮಿಶ್ರ, ಆರ್.ಎಫ್. ನಾರಿಮನ್, ಆರ್. ಭಾನುಮತಿ ಮತ್ತು ಅಶೋಕ ಭೂಷಣ್ ಅವರನ್ನು ಒಳಗೊಂಡ ಪಂಚ ಸದಸ್ಯ ಪೀಠವು ಅರ್ಜಿಗಳ ಮೇಲಿನ ಅಹವಾಲನ್ನು ಆಲಿಸಿದ ಬಳಿಕ ಅರ್ಜಿಗಳಲ್ಲಿ ಯಾವುದೇ ಅರ್ಹತೆಯೂ ಇಲ್ಲ ಎಂಬುದಾಗಿ ಹೇಳಿತು.

ತಮಗುಳಿದಿದ್ದ ಕೊನೆಯ ಕಾನೂನು ಪರಿಹಾರದ ಅವಕಾಶವನ್ನು ಬಳಸಿಕೊಂಡು ವಿನಯ್ ಮತ್ತು ಮುಖೇಶ್ ಡೆತ್ ವಾರಂಟ್ ಜಾರಿಯಾದ ಬಳಿಕ ಕ್ಯುರೇಟಿವ್ ಅರ್ಜಿ ಸಲ್ಲಿಸಿದ್ದರು.

ಇದೀಗ ಇನ್ನಿಬ್ಬರು ಅಪರಾದಿಗಳಾದ ಪವನ್ ಮತ್ತು ಅಕ್ಷಯ್ ಜೊತೆಗೆ ವಿನಯ್ ಮತ್ತು ಮುಖೇಶ್ ಅವರನ್ನೂ ತಿಹಾರ್ ಸೆರೆಮನೆಯಲ್ಲಿ ಗಲ್ಲಿಗೇರಿಸಲಾಗುವುದು.

ಬಡವರ ವಿರುದ್ಧ ವ್ಯವಸ್ಥಿತ ಪಕ್ಷಪಾತ ನಡೆಯುತ್ತಿದೆ ಎಂದು ಆಪಾದಿಸಿದ ವಿನಯ್, ಜೆಸ್ಸಿಕಾ ಲಾಲ್ ಕೊಲೆ ಪ್ರಕರಣವನ್ನು ತನ್ನ ಅರ್ಜಿಯಲ್ಲಿ ಉಲ್ಲೇಖಿಸಿದ್ದ. ರಕ್ಷಣೆ ರಹಿತ ಮಹಿಳೆಯ ಕ್ರೂರ ಅಪ್ರಚೋದಿತ ಕೊಲೆಯನ್ನು ಮಾಡಿದ್ದರ ಹೊರತಾಗಿಯೂ ಸಿದ್ಧಾರ್ಥ ವಶಿಷ್ಠ/ ಮನುಶರ್ಮನಿಗೆ ಮರಣದಂಡನೆ ನೀಡಿಲ್ಲ, ಬದಲಾಗಿ ಜೀವಾವಧಿ ಶಿಕ್ಷೆ ನೀಡಲಾಗಿದೆ ಎಂದು ವಿನಯ್ ವಾದಿಸಿದ್ದ.

ಪ್ರಕರಣದಲ್ಲಿ ಅಪರಾಧಿ ರಾಜಕೀಯ ಕುಟುಂಬವೊಂದರ ಬಲಾಢ್ಯ ವ್ಯಕ್ತಿಯಾಗಿದ್ದಾನೆ.
ಅರ್ಜಿದಾರನ ಪ್ರಕರಣ ಮತ್ತು ಪ್ರಸ್ತಾಪಿತ ಪ್ರಕರಣದ ತೀರ್ಪುಗಳು ಕ್ರಿಮಿನಲ್ ನ್ಯಾಯ ವ್ಯವಸ್ಥೆಯಲ್ಲಿನ ಮೂಲಭೂತ ವಿಭಜನೆಯನ್ನು ಎತ್ತಿ ತೋರಿಸುತ್ತದೆ. ಬಡವರು ಮತ್ತು ದುರ್ಬಲರು ಯಾವಾಗಲೂ ನಿಕೃಷ್ಟ ಶಿಕ್ಷೆಗಳಿಗೆ ಒಳಗಾಗಿ ನರಳುತ್ತಾರೆ. ಇತರ ವರ್ಗಗಳ ಜನರು ಬರ್ಬರ, ಹೀನ ಅಪರಾಧಗಳನ್ನು ಎಸಗಿಯೂ ನಿಕೃಷ್ಟ ಶಿಕ್ಷೆಗಳಿಂದ ಪಾರಾಗುತ್ತಾರೆ. ವ್ಯವಸ್ಥೆಯು ಬಡವರ ವಿರುದ್ಧ ಪಕ್ಷಪಾತ ಮಾಡುತ್ತಿದೆ ಎಂಬುದನ್ನು ಕೂಡಾ ಇದು ತೋರಿಸುತ್ತದೆ. ಅರ್ಜಿದಾರನಿಗೆ ಪೂರ್ವಾಗ್ರಹ ಬಾಧೆ ತಟ್ಟಿದೆಎಂದು ಅರ್ಜಿ ಹೇಳಿದೆ.

ತನ್ನ ಕ್ಯುರೇಟಿವ್ ಅರ್ಜಿಯಲ್ಲಿ ಶರ್ಮ ತನ್ನ ಎಳೆಯ ವಯಸ್ಸನ್ನೂ ತಪ್ಪಾಗಿ ಗ್ರಹಿಸಿ ನಿರ್ಲಕ್ಷಿಸಲಾಗಿದೆ ಎಂದು ಪ್ರತಿಪಾದಿಸಿದ್ದಾನೆ. ನಂತರದ ತೀರ್ಪುಗಳು ಮರಣದಂಡನೆಯನ್ನು ಜೀವಾವಧಿ ಶಿಕ್ಷೆಗೆ ಇಳಿಸಲು ಅನುಮತಿ ನೀಡುವ ಮೂಲಕ ಭಾರತದಲ್ಲಿ ಮರಣದಂಡನೆಯ ಕಾನೂನುಗಳನ್ನು ಖಚಿತವಾಗಿ ಬದಲಾಯಿಸಿದ್ದರೂ ತನಗೆ ಅವಕಾಶ ನೀಡದೇ ಇರುವುದರಿಂದ ತೀರ್ಪು ಕಾನೂನು ಪ್ರಕಾರ ಕೆಟ್ಟ ತೀರ್ಪು ಆಗಿದೆ ಎಂದು ಆತ ಪ್ರತಿಪಾದಿಸಿದ್ದ.

ಪ್ರಕರಣಕ್ಕೆ ಸಂಬಂಧಿಸಿದಂತೆ ೨೦೧೭ರಲ್ಲಿ ಸುಪ್ರೀಂಕೋರ್ಟ್ ತೀರ್ಪು ಪ್ರಕಟಗೊಂಡ ಬಳಿಕ, ಸುಮಾರು ೧೭ ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳಲ್ಲಿ ಸುಪ್ರೀಂಕೋರ್ಟಿನ ವಿವಿಧ ತ್ರಿಸದಸ್ಯ ಪೀಠಗಳು ಮರಣ ದಂಡನೆಯನ್ನು ಇಳಿಸಿ ತೀರ್ಪು ನೀಡಿವೆ ಎಂದು ಶರ್ಮ ಸಲ್ಲಿಸಿದ್ದ ಅರ್ಜಿ ತಿಳಿಸಿತ್ತು.

ನಿರ್ಭಯಾಎಂಬುದಾಗಿ ಹೆಸರಿಸಲಾದ ೨೩ರ ಹರೆಯದ ಅರೆ ವೈದ್ಯಕೀಯ ವಿದ್ಯಾರ್ಥಿನಿಯ ಮೇಲೆ ದಕ್ಷಿಣ ದೆಹಲಿಯಲ್ಲಿ ೨೦೧೨ರ ಡಿಸೆಂಬರ್ ೧೬-೧೭ರ ನಡುವಣ ರಾತ್ರಿ ಆರು ಮಂದಿ ಆರೋಪಿಗಳು ಚಲಿಸುವ ಬಸ್ಸಿನಲ್ಲಿ ಸಾಮೂಹಿಕ ಅತ್ಯಾಚಾರ ಎಸಗಿ ಕ್ರೂರ ಚಿತ್ರಹಿಂಸೆ ಸಹಿತವಾದ ಹಲ್ಲೆ ನಡೆಸಿ ಬಸ್ಸಿನಿಂದ ಹೊರಕ್ಕೆ ಎಸೆದಿದ್ದರು. ತೀವ್ರ ಗಾಯಗೊಂಡಿದ್ದ ಆಕೆ ಜೀವನ್ಮರಣ ಹೋರಾಟದ ಬಳಿಕ ೨೦೧೨ರ ಡಿಸೆಂಬರ್ ೨೯ರಂದು ಸಿಂಗಾಪುರದ  ಮೌಂಟ್ ಎಲಿಜಬೆತ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು.

ಪ್ರಕರಣಕ್ಕೆ ದೇಶಾದ್ಯಂತ ತೀವ್ರ ಸ್ವರೂಪದ ಜನಾಕ್ರೋಶ ವ್ಯಕ್ತಗೊಂಡಿತ್ತು.
೨೦೧೮ರ ಜುಲೈ ೯ರಂದು ಸುಪ್ರೀಂಕೋಟ್ ಪ್ರಕರಣದ ಇತರ ಮೂವರು ಅಪರಾಧಿಗಳು ಸಲ್ಲಿಸಿದ್ದ ಪುನರ್ ಪರಿಶೀಲನಾ ಅರ್ಜಿಗಳನ್ನು ವಜಾಗೊಳಿಸಿತ್ತು. ೨೦೧೭ರ ತೀರ್ಪಿನ್ನು ಪುನರ್ ಪರಿಶೀಲನೆ ಮಾಡಬಹುದಾದ ಯಾವುದೇ ನೆಲೆಗಳೂ ಪುನರ್ ಪರಿಶೀಲನಾ ಅರ್ಜಿಗಳಲ್ಲಿ ಇಲ್ಲ ಎಂಬುದಾಗಿ ಸುಪ್ರೀಂಕೋರ್ಟ್ ಹೇಳಿತ್ತು.

ಆರು ಮಂದಿ ಆರೋಪಿಗಳ ಪೈಕಿ ಒಬ್ಬನಾದ ರಾಮ್ ಸಿಂಗ್ ತಿಹಾರ್ ಸೆರೆಮನೆಯಲ್ಲಿ ವಿಚಾರಣಾ ವೇಳೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದ ಎಂದು  ಆಪಾದಿಸಲಾಗಿತ್ತು.

ಅಪ್ರಾಪ್ತ ವಯಸ್ಸಿನ ಆರನೇ ಆರೋಪಿಯನ್ನು ಅಪ್ರಾಪ್ತ ನ್ಯಾಯಮಂಡಳಿಯು ಮೂರೂವರೆ ವರ್ಷಗಳ ಸುಧಾರಣಾ ಶಿಕ್ಷೆ ಅನುಭವಿಸಿದ ಬಳಿಕ ಸುಧಾರಣಾ ಗೃಹದಿಂದ ಬಿಡುಗಡೆ ಮಾಡಿತ್ತು.

ಅಪರಾಧಿಗಳಿಗೆ ವಿಚಾರಣಾ ನ್ಯಾಯಾಲಯ ನೀಡಿದ್ದ ಮರಣದಂಡನೆಯನ್ನು ಎತ್ತಿ ಹಿಡಿದ ದೆಹಲಿ ಹೈಕೋರ್ಟ್ ತೀರ್ಪನ್ನು ೨೦೧೭ರಲ್ಲಿ ಸುಪ್ರೀಂಕೋರ್ಟ್ ಕೂಡಾ ಪುರಸ್ಕರಿಸಿತ್ತು.

ತಿಹಾರ್ ಸೆರೆಮನೆಯಲ್ಲಿ ಭಾನುವಾರ ನಿರ್ಭಯಾ ಪ್ರಕರಣದ ನಾಲ್ವರು ತಪ್ಪಿತಸ್ಥರಿಗೆ ವಿಧಿಸಲಾಗುವ ಮರಣದಂಡನೆ ಜಾರಿಯ ಅಣಕು ಪ್ರಕ್ರಿಯೆ ನಡೆಸಲಾಯಿತು ಎಂದು ಸೆರೆಮನೆ ಅಧಿಕಾರಿಗಳು ಹೇಳಿದರು. ಅಪರಾಧಿಗಳ ತೂಕದಷ್ಟೇ ಭಾರತದ ಅವಶೇಷ ಮತ್ತು ಕಲ್ಲುಗಳನ್ನು ತುಂಬಲಾದ ಚೀಲಗಳನ್ನು ಬಳಸಿ ಪ್ರಕ್ರಿಯೆ ನಡೆಸಲಾಯಿತು ಎಂದು ಹಿರಿಯ ಸೆರೆಮನೆ ಅಧಿಕಾರಿ ನುಡಿದರು.

ತಿಹಾರ್ ಸೆರೆಮನೆಯ ಸೆರೆಮನೆ ನಂಬರ್ ೩ರಲ್ಲಿ ಅಪರಾಧಿಗಳನ್ನು ಗಲ್ಲುಗಂಬಕ್ಕೆ ಏರಿಸಲಾಗುವುದು. ನಾಲ್ಕೂ ಮಂದಿಯನ್ನು ಗಲ್ಲಿಗೇರಿಸಲು ಮೀರತ್ ನಿಂದ ಪವನ್ ಜಲ್ಲದ್ ಎಂಬ ವಧಕಾರನನ್ನು ಕರೆಸಲಾಗಿದೆ ಎಂದು ಸೆರೆಮನೆ ಅಧಿಕಾರಿಗಳು ದೃಢಪಡಿಸಿದರು.

No comments:

Advertisement