Wednesday, March 4, 2020

ಸಿಎಎ: ಸುಪ್ರೀಂಗೆ ವಿಶ್ವಸಂಸ್ಥೆ ಮಾನವ ಹಕ್ಕುಗಳ ಹೈಕಮೀಷನರ್ ಅರ್ಜಿ

ಸಿಎಎ: ಸುಪ್ರೀಂಗೆ ವಿಶ್ವಸಂಸ್ಥೆ ಮಾನವ ಹಕ್ಕುಗಳ ಹೈಕಮೀಷನರ್ ಅರ್ಜಿ
ಆಂತರಿಕ ವಿಚಾರದಲ್ಲಿ ಕೈಹಾಲಾಗದು: ಭಾರತದ ಎದಿರೇಟು
ನವದೆಹಲಿ: ಭಾರತದ ಮೇಲೆ ಒತ್ತಡ ಹೆಚ್ಚಿಸುವ ಸೂಚನೆಯಾಗಿ ಅಸಾಧಾರಣ ಕ್ರಮವೊಂದರಲ್ಲಿ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈ ಕಮೀಷನರ್ ಅವರು ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧ ದಾಖಲಾಗಿರುವ ಪ್ರಕರಣದಲ್ಲಿ ತಮ್ಮನ್ನೂ ಕಕ್ಷಿದಾರರಾಗಿ ಸೇರಿಸಿಕೊಳ್ಳುವಂತೆ ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿದ್ದಾರೆ. ಆದರೆ ಭಾರತದ ಆಂತರಿಕ ವಿಷಯದಲ್ಲಿ ಮೂಗು ತೂರಿಸಲಾಗದು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ 2020 ಮಾರ್ಚ್ 03ರ ಮಂಗಳವಾರ ಇದಕ್ಕೆ ಎದಿರೇಟು ನೀಡಿತು.

ಪ್ರಕರಣದಲ್ಲಿ ತನ್ನನ್ನು ಕಕ್ಷಿದಾರರಾಗಿ ಸೇರಿಸಿಕೊಳ್ಳುವಂತೆ ಸಲ್ಲಿಸಿದ ಅರ್ಜಿಯಲ್ಲಿ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈಕಮೀಷನರ್, ಚಿಲಿಯ ಮಾಜಿ ಅಧ್ಯಕ್ಷರಾದ ಮಿಶೆಲ್ ಬಚ್ಲೆಟ್ ಅವರು ಕಾನೂನಿನಲ್ಲಿ ಮಾಡಲಾಗಿರುವ ತಾರತಮ್ಯಗಳು ಆಕ್ಷೇಪಾರ್ಹವಾದವುಗಳು ಎಂದು ಹೇಳಿದ್ದಾರೆ.

ವಿಶ್ವಸಂಸ್ಥೆ ಮಾನವ ಹಕ್ಕುಗಳ ಅಧ್ಯಕ್ಷರ ಕ್ರಮಕ್ಕೆ ತೀಕ್ಷ್ಣ ಪದಗಳನ್ನು ಬಳಸಿದ ಹೇಳಿಕೆ ಮೂಲಕ ಎದಿರೇಟು ನೀಡಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಪೌರತ್ವ ತಿದ್ದುಪಡಿ ಕಾಯ್ದೆಯು (ಸಿಎಎ) ಆಂತರಿಕ ವಿಷಯವಾಗಿದೆ ಮತ್ತು ಭಾರತದ ಸಾರ್ವಭೌಮತ್ವಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಯಾರೇ ವಿದೇಶೀ ಕಕ್ಷಿದಾರರಿಗೆ ಯಾವುದೇ ಸ್ಥಾನಾಧಿಕಾರವೂ (ಲೋಕಸ್ ಸ್ಟಾಂಡಿ) ಇರುವುದಿಲ್ಲ ಎಂದು ಹೇಳಿತು..

ಪೌರತ್ವ ತಿದ್ದುಪಡಿ ಕಾಯ್ದೆಯು ಆಂತರಿಕ ವಿಷಯವಾಗಿದೆ ಮತ್ತು ಭಾರತೀಯ ಸಂಸತ್ತಿನ ಶಾಸನ ರಚನೆಯ ಸಾರ್ವಭೌಮ ಹಕ್ಕಿಗೆ ಸಂಬಂಧಿಸಿದ್ದಾಗಿದೆ. ಯಾವ ವಿದೇಶೀ ಕಕ್ಷಿದಾರರಿಗೂ ಭಾರತದ ಸಾರ್ವಭೌಮತ್ವಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಸ್ಥಾನಾಧಿಕಾರ (ಲೋಕಸ್ ಸ್ಟಾಂಡಿ) ಇರುವುದಿಲ್ಲ ಎಂಬುದು ನಮ್ಮ ಪ್ರಬಲವಾದ ನಂಬಿಕೆ ಎಂದು ವಿದೇಶಾಂಗ ಸಚಿವಾಲಯ ಹೇಳಿತು.
ತಾನು ಪ್ರಕರಣದಲ್ಲಿ ಕಕ್ಷಿದಾರನಾಗಲು ಸುಪ್ರೀಂಕೋರ್ಟಿನಲ್ಲಿ ಅರ್ಜಿ ಸಲ್ಲಿಸಿರುವ ವಿಚಾರವನ್ನು ಮಿಶೆಲ್ ಅವರು ಜಿನೇವಾದಲ್ಲಿದ ಭಾರತದ ಕಾಯಂ ಮಿಷನ್ ಗೆ ತಿಳಿಸಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಹೇಳಿತು.

ವಿಶ್ವಸಂಸ್ಥೆ ಮಾನವ ಹಕ್ಕುಗಳ ಕಮೀಷನರ್ ಅವರು ಭಾರತದ ಪ್ರಸ್ತುತ ಪ್ರತಿಭಟನೆಗಳ ಬಗ್ಗೆ ಕಠಿಣ ಅಭಿಪ್ರಾಯ ತಳೆದಿದ್ದಾರೆ. ಫೆಬ್ರುವರಿ ೨೭ರಂದು ಜಿನೇವಾದಲ್ಲಿ ನಡೆದ ಮಾನವ ಹಕ್ಕುಗಳ ಮಂಡಳಿಯ ೪೩ನೇ ಸಮಾವೇಶದಲ್ಲಿ ಮಂಡಿಸಿದ ಜಾಗತಿಕ ವರದಿಯಲ್ಲಿ  ಬಚ್ಲೆಟ್ ಅವರು  ಕಳೆದ ಡಿಸೆಂಬರಿನಲ್ಲಿ ಅಂಗೀಕರಿಸಿದ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಬಗ್ಗೆ ತೀವ್ರ ಕಳವಳ ವ್ಯಕ್ತ ಪಡಿಸಿದ್ದರು. ಎಲ್ಲ ಸಮುದಾಯಗಳಿಗೆ ಸೇರಿದ ಭಾರತೀಯರು ಭಾರೀ ಸಂಖ್ಯೆಯಲ್ಲಿ ಬಹುತೇಕ ಶಾಂತಿಯುತವಾಗಿ ಕಾಯ್ದೆಗೆ ತಮ್ಮ ವಿರೋಧವನ್ನು ವ್ಯಕ್ತ ಪಡಿಸಿ, ರಾಷ್ಟ್ರವು ದೀರ್ಘ ಕಾಲದಿಂದ ಅನುಸರಿಸುತ್ತಾ ಬಂದಿರುವ ಜಾತ್ಯತೀತತೆಯ ಪರಂಪರೆಯನ್ನು ಬೆಂಬಲಿಸಿದ್ದಾರೆ ಎಂದು ತಿಳಿಸಿದ್ದರು.

ದೆಹಲಿ ಗಲಭೆಗಳ ಕಾಲದ ಪೊಲೀಸ್ ನಿಷ್ಕ್ರಿಯತೆ ಬಗೆಗೂ ಅವರು ಕಳವಳ ವ್ಯಕ್ತ ಪಡಿಸಿದ್ದರು.
ಬಚ್ಲೆಟ್ ಅವರು ವರದಿ ಮಂಡಿಸಿದ ದಿನವೇ ಹಿರಿಯ ರಾಜತಾಂತ್ರಿP ಮತ್ತು ವಿದೇಶಾಂಗ ವ್ಯವಹಾರ ಸಚಿವಾಲಯದಲ್ಲಿನ ಕಾರ್ಯದರ್ಶಿ (ಪಶ್ಚಿಮ) ವಿಕಾಸ್ ಸ್ವರೂಪ್ ಅವರು ಆಕೆಯನ್ನು ಭೇಟಿ ಮಾಡಿದ್ದರು. ಮತ್ತು ಬಳಿಕ ದೇಶದ ಎಲ್ಲ ನಾಗರಿಕರಿಗೂ ಮಾನವ ಹಕ್ಕುಗಳನ್ನು ಖಾತರಿ ಪಡಿಸುವ  ಭಾರತದ ಬದ್ಧತೆಯನ್ನು ಪುನಃ ದೃಢ ಪಡಿಸಿ ಟ್ವೀಟ್ ಮಾಡಿದ್ದರು. ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈಕಮೀನಷನರ್ ಮಿಶೆಲ್ ಬಚ್ಲೆಟ್ ಜೊತೆಗೆ ಉತ್ತಮ ಮಾತುಕತೆ ನಡೆಸಿದ್ದೇನೆ ಎಂದು ಅವರು ಟ್ವೀಟಿನಲ್ಲಿ ತಿಳಿಸಿದ್ದರು.

ಪೌರತ್ವ ತಿದ್ದುಪಡಿ ಕಾಯ್ದೆಯು (ಸಿಎಎ) ಭಾರತದ ಆಂತರಿಕ ವಿಷಯವಾಗಿದ್ದು ಭಾರತೀಯ ಸಂಸತ್ತಿನ ಕಾನೂನು ರಚನೆಗೆ ಸಾರ್ವಭೌಮ ಹಕ್ಕಿಗೆ ಸಂಬಂಧಿಸಿದ್ದಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮಂಗಳವಾರ ಹೇಳಿತು.
ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈಕಮೀಷನರ್ (ಮಿಶೆಲ್ ಬಚ್ಲೆಟ್) ಅವರು ತಮ್ಮ ಕಚೇರಿಯು ಭಾರತದ ಸುಪ್ರೀಂಕೋರ್ಟಿಲ್ಲಿ ೨೦೧೯ರ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರಕರಣದಲ್ಲಿ ತನ್ನನ್ನು ಕಕ್ಷಿದಾರರಾಗಿ ಸೇರಿಸಿಕೊಳ್ಳುವಂತೆ ಕೋರಿ ಅರ್ಜಿ ಸಲ್ಲಿಸಿರುವುದಾಗಿ ಜಿನೇವಾದಲ್ಲಿನ ನಮ್ಮ ಕಾಯಂ ಮಿಷನ್ಗೆ ಸೋಮವಾರ ಸಂಚೆ ತಿಳಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಇಲಾಖೆಯ ವಕ್ತಾರ ರವೀಶ ಕುಮಾರ್ ಹೇಳಿದರು.

ಯಾರೇ ವಿದೇಶೀ ಕಕ್ಷಿದಾರರಿಗೆ ಭಾರತದ ಸಾರ್ವಭೌಮತ್ವಕ್ಕೆ ಸಂಬಂಧಪಟ್ಟ ವಿಷಯಗಳಲ್ಲಿ ಯಾವುದೇ ಸ್ಥಾನಾಧಿಕಾರ (ಲೋಕಸ್ ಸ್ಟಾಂಡಿ) ಇಲ್ಲ ಎಂಬುದು ನಮ್ಮ ಪ್ರಬಲ ನಂಬಿಕೆ. ಸಿಎಎ ಸಂವಿಧಾನಬದ್ಧವಾಗಿ ಸಕ್ರಮವಾಗಿದ್ದು ತನ್ನ ಸಂವಿಧಾನದ ಎಲ್ಲ ಮೌಲ್ಯಗಳಿಗೆ ಅನುಗುಣವಾಗಿದೆ ಎಂಬ ಬಗ್ಗೆ ಭಾರತಕ್ಕೆ ಸ್ಪಷ್ಟತೆ ಇದೆ ಎಂದು ಕುಮಾರ್ ನುಡಿದರು.

ಇದು ಭಾರತದ ವಿಭಜನೆಯ ದುರಂತದಿಂದ ಉದ್ಭವಿಸಿದ ಮಾನವ ಹಕ್ಕುಗಳಿಗೆ ಸಂಬಂಧಿಸಿದ ನಮ್ಮ ಸುದೀರ್ಘವಾದ ರಾಷ್ಟ್ರೀಯ ಬದ್ಧತೆಯ ಪ್ರತಿಫಲನವಾಗಿದೆ ಎಂದು ಅವರು ಹೇಳಿದರು.
ಭಾರತವು ಕಾನೂನಿನ ಆಳ್ವಿಕೆ ಇರುವ ಪ್ರಜಾತಾಂತ್ರಿಕ ರಾಷ್ಟ್ರ. ನಮ್ಮ ಸ್ವತಂತ್ರ ನ್ಯಾಯಾಂಗದಲ್ಲಿ ನಮಗೆ ಅಪ್ರತಿಮ ಗೌರವ ಮತ್ತು ಸಂಪೂರ್ಣ ನಂಬಿಕೆ ಇದೆ. ನಮ್ಮ ಸಮರ್ಪಕವಾದ ಮತ್ತು ಕಾನೂನುಬದ್ಧ ಸುಸ್ಥಿರ ಸ್ಥಾನಮಾನವನ್ನು ಸುಪ್ರೀಂಕೋರ್ಟ್ ಸಮರ್ಥಿಸುವುದು ಎಂಬ ವಿಶ್ವಾಸ ನಮಗಿದೆ ಎಂದು ಅವರು ನುಡಿದರು.

ಪೌರತ್ವ ತಿದ್ದುಪಡಿ ಕಾಯೆಯನ್ನು ವಿರೋಧಿಸಿ ಸಲ್ಲಿಸಲಾಗಿರುವ ಸುಮಾರು ೧೪೪ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂಕೋರ್ಟ್ ನಡೆಸುತ್ತಿದೆ. ಜನವರಿ ೨೨ರಂದು ನ್ಯಾಯಾಲಯವು ಕೇಂದ್ರ ಸರ್ಕಾರಕ್ಕೆ ತನ್ನ ಉತ್ತರ ನೀಡಲು ನಾಲ್ಕು ವಾರಗಳ ಕಾಲಾವಕಾಶ ನೀಡಿತ್ತು. ಆದರೆ ಸಿಎಎ ಜಾರಿಗೆ ಯಾವುದೇ ತಡೆಯಾಜ್ಞೆಯನ್ನೂ ನೀಡಿರಲಿಲ್ಲ. ಏನಿದ್ದರೂ, ಅಸ್ಸಾಂ ಮತ್ತು ತಿಪುರಾಕ್ಕೆ ಸಂಬಂಧ ಪಟ್ಟ ಪ್ರಕರಣಗಳನ್ನು ಪ್ರತ್ಯೇಕವಾಗಿ ಆಲಿಸಲಾಗುವುದು  ಎಂದು ನ್ಯಾಯಾಲಯವು ತಿಳಿಸಿತ್ತು.

No comments:

Advertisement