My Blog List

Wednesday, March 4, 2020

ದೆಹಲಿ ಹಿಂಸಾಚಾರ: ಪೊಲೀಸರತ್ತ ಪಿಸ್ತೂಲ್ ತೋರಿಸಿದ್ದ ವ್ಯಕ್ತಿಯ ಬಂಧನ

ದೆಹಲಿ ಹಿಂಸಾಚಾರ: ಸಿಟ್ಟಿನ ಭರದಲ್ಲಿ ಗುಂಡು ಹಾರಿಸಿದನಂತೆ..!
ಪೊಲೀಸರತ್ತ ಪಿಸ್ತೂಲ್ ತೋರಿಸಿದ್ದ ವ್ಯಕ್ತಿಯ ಬಂಧನ
ನವದೆಹಲಿ: ಈಶಾನ್ಯ ದೆಹಲಿ ಹಿಂಸಾಚಾರದ ವೇಳೆಯಲ್ಲಿ ಜಾಫ್ರಾಬಾದಿನಲ್ಲಿ ಪೊಲೀಸರತ್ತ ಪಿಸ್ತೂಲ್ ಗುರಿ ಹಿಡಿದಿದ್ದ ಯುವಕನನ್ನು ದೆಹಲಿ ಅಪರಾಧ ಶಾಖೆಯ ಪೊಲೀಸರು ಬಂಧಿಸಿದ್ದಾರೆ. ಮೊಹಮ್ಮದ್ ಶಾರುಖ್ ಎಂಬುದಾಗಿ ಗುರುತಿಸಲಾಗಿರುವ ವ್ಯಕ್ತಿಯನ್ನು ಉತ್ತರ ಪ್ರದೇಶದ ಶಾಮ್ಲಿಯಲ್ಲಿ 2020 ಮಾರ್ಚ್ 03ರ ಮಂಗಳವಾರ ಬಂಧಿಸಲಾಯಿತು.

ವ್ಯಕ್ತಿಗೆ ಯಾವುದೇ ಕ್ರಿಮಿನಲ್ ಹಿನ್ನೆಲೆಯಿಲ್ಲ, ಸಿಟ್ಟಿನ ಭರದಲ್ಲಿ ತಾನು ಗುಂಡು ಹಾರಿಸಿದುದಾಗಿ ಈತ ಹೇಳಿದ್ದಾನೆ ಎಂದು ಪೊಲೀಸರು ತಿಳಿಸಿದರು.

ಬಂಧಿತ ವ್ಯಕ್ತಿ ಪಿಸ್ತೂಲ್ ಹಿಡಿದು ಫೆಬ್ರುವರಿ ೨೪ರಂದು ಜಾಫ್ರಾಬಾದ್ ರಸ್ತೆಗಳಲ್ಲಿ ನಡೆದಾಡುತ್ತಿದ್ದುದು ಕಂಡು ಬಂದಿತ್ತು. ಪರಾರಿಯಾಗುವ ಮುನ್ನ ಪೊಲೀಸ್ ಅಧಿಕಾರಿಯ ಎದುರಲ್ಲೆ ಈತ ಗಾಳಿಯಲ್ಲಿ ಗುಂಡು ಹಾರಿಸಿದ್ದ. ಈತ ಪೊಲೀಸರತ್ತ ಪಿಸ್ತೂಲ್ ಗುರಿ ಹಿಡಿದ ಮತ್ತು ಗಾಳಿಯಲ್ಲಿ ಗುಂಡು ಹಾರಿಸಿದ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಈತ ಬಳಸಿದ್ದ ಪಿಸ್ತೂಲ್ ಪತ್ತೆ ಹಚ್ಚಲು ನಾವು ಯತ್ನಿಸುತ್ತಿದ್ದೇವೆ. ಸಿಟ್ಟಿನ ಭರದಲ್ಲಿ ತಾನು ಗುಂಡು ಹಾರಿಸಿದ್ದಾಗಿ ಶಾರೂಕ್ ಹೇಳಿದ್ದಾನೆ. ಈತನ ವಿರುದ್ಧ ಯಾವುದೇ ಕ್ರಿಮಿನಲ್ ದಾಖಲೆಗಳು ಇಲ್ಲ. ಆದರೆ ಈತನ ತಂದೆಯ ವಿರುದ್ಧ ಮಾದಕ ದ್ರವ್ಯ ಮತ್ತು ಖೋಟಾ ನೋಟಿಗೆ ಸಂಬಂಧಿಸಿದ ಪ್ರಕರಣಗಳು ದಾಖಲಾಗಿವೆ ಎಂದು ಅಪರಾಧ ಶಾಖೆಯ ಅಡಿಷನಲ್ ಕಮೀಷನರ್ ಆಫ್ ಪೊಲೀಸ್ ಅಜಿತ್ ಕುಮಾರ್ ಸಿಂಘಾಲ ಹೇಳಿದರು.

ಬಂಧಿಸಿದ ಬಳಿಕ ಶಾರೂಕ್ನನ್ನು ಕೇಂದ್ರ ದೆಹಲಿಯ ಐಟಿಒದಲ್ಲಿನ ದೆಹಲಿ ಪೊಲೀಸರ ಹಳೆ ಕೇಂದ್ರ ಕಚೇರಿಗೆ ಕರೆತರಲಾಗಿದೆ.

ಶಾರುಖ್ ವಿರುದ್ಧ ಕ್ರಮವಾಗಿ ಭಾರತೀಯ ದಂಡ ಸಂಹಿತೆ (ಐಪಿಸಿ) ಮತ್ತು ಸಶಸ್ತ್ರ ಕಾಯ್ದೆಯ ಸೆಕ್ಷನ್ ೩೦೭ (ಕೊಲೆ ಯತ್ನ), ೧೮೬ ಮತ್ತು ೩೫೩ರ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ. ವಿಚಾರಣೆಯ ಬಳಿಕ ಅಗತ್ಯವಿದ್ದಲ್ಲಿ ಇತರ ಸೆಕ್ಷನ್ ಗಳ  ಅಡಿಯಲ್ಲಿ ಪ್ರಕರಣ ದಾಖಲಿಸಲಾಗುವುದು. ಆತನ ಸೆರೆವಾಸವನ್ನು ಗರಿಷ್ಠಗೊಳಿಸಲು ನಾವು ಯತ್ನಿಸುತ್ತೇವೆ ಎಂದು ಸಿಂಘಾಲ ನುಡಿದರು.

ಪೌರತ್ವ ತಿದ್ದುಪಡಿ ಕಾಯ್ದೆಯ (ಸಿಎಎ) ಪರ ಹಾಗೂ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಗುಂಪುಗಳ ಮಧ್ಯೆ ಘರ್ಷಣೆ ಸಂಭವಿಸುವುದರೊಂದಿಗೆ ದೆಹಲಿಯಲ್ಲಿ ಕಳೆದವಾರ ಹಿಂಸಾಚಾರ ಭುಗಿಲೆದ್ದಿತ್ತು. ಸಿಎಎ ವಿರುದ್ಧ ಪ್ರತಿಭಟಿಸುತ್ತಿದ್ದ ಗುಂಪಿನ ಮಧ್ಯೆ ಪಿಸ್ತೂಲ್ ಹಿಡಿದುಕೊಂಡು ಶಾರೂಕ್ ಪ್ರತ್ಯಕ್ಷನಾಗಿದ್ದ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದರು.

ಶಾರೂಕ್ ಸಾಗುತ್ತಿದ್ದಾಗ ಆತನ ಹಿಂದಿನಿಂದ ಬರುತ್ತಿದ್ದ ದಂಗೆಕೋರರ ಗುಂಪು ಕಲ್ಲುಗಳನ್ನು ಎಸೆಯುತ್ತಾ ಬರುತ್ತಿದ್ದದು ಒಂದು ವಿಡಿಯೋದಲ್ಲಿ ದಾಖಲಾಗಿದ್ದರೆ, ತಾರಸಿ ಮೇಲಿನಿಂದ ಚಿತ್ರೀಕರಿಸಲಾದ ಇನ್ನೊಂದು ವಿಡಿಯೋದಲ್ಲಿ ಆತನ ಸುತ್ತ ಕಲ್ಲುಗಳು ಇದ್ದುದನ್ನು ತೋರಿಸಿತ್ತು.

ಶಾರುಖ್ ತನ್ನತ್ತ ಪಿಸ್ತೂಲು ಗುರಿ ಹಿಡಿದು ಬರುತ್ತಿದ್ದುದನ್ನು ಕಂಡು ಪೊಲೀಸ್ ಒಬ್ಬರು ಮೊದಲಿಗೆ ಹಿಂದಡಿ ಇಟ್ಟಿದ್ದರು. ಕೆಲ ಕ್ಷಣಗಳ ಬಳಿಕದ ಇನ್ನೊಂದು ವಿಡಿಯೋದಲ್ಲಿ ಲಾಠಿಯನ್ನು ಮಾತ್ರವೇ ಹಿಡಿದಿದ್ದ ಪೊಲೀಸ್ ಪುನಃ ಆತನತ್ತ ಹೆಜ್ಜೆ ಹಾಕುತಿದ್ದುದನ್ನು ತೋರಿಸಿತ್ತು.

ವ್ಯಕ್ತಿ ಬಳಿಕ ಪೊಲೀಸ್ ಪೇದೆಯತ್ತ ತನ್ನ ಪಿಸ್ತೂಲನ್ನು ಗುರಿ ಹಿಡಿದದ್ದನ್ನು ವಿಡಿಯೋ ತೋರಿಸಿತ್ತು. ಕೆಲವೇ ಸೆಕೆಂಡ್ಗಳಲ್ಲಿ ಆತ ಪೊಲೀಸ್ ಪೇದೆಯನ್ನು ತಳ್ಳಿ ಆತನ ಬಲಭಾಗದಲ್ಲಿದ್ದ ರಸ್ತೆ ವಿಭಜಕಕ್ಕೆ ಗುಂಡು ಹಾರಿಸಿದ್ದುದೂ ವಿಡಿಯೋದಲ್ಲಿ ದಾಖಲಾಗಿತ್ತು.

ಕಳೆದ ವಾರ ಸಂಭವಿಸಿದ್ದ ಈಶಾನ್ಯ ದೆಹಲಿ ಹಿಂಸಾಚಾರದಲ್ಲಿ ಸತ್ತವರ ಸಂಖ್ಯೆ ೪೬ಕ್ಕೆ ಏರಿದ್ದು, ೨೦೦ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.

No comments:

Advertisement