ವಿದೇಶೀ ಜಮಾತ್ ಕಾರ್ಯಕರ್ತರ ಗಡೀಪಾರು: ಕೇಂದ್ರ ಆದೇಶ
ಕ್ವಾರಂಟೈನ್ಗೆ ೨೦,೦೦೦ ರೈಲ್ವೇ ಬೋಗಿ, ವೈದ್ಯಕೀಯ ಸೇವೆಗೆ ವಿಮಾನಗಳು ಸಜ್ಜು
ನವದೆಹಲಿ: ದೇಶದಲ್ಲಿ ಕೊರೋನಾವೈರಸ್ ಸೋಂಕಿನ ಕೇಂದ್ರವಾಗಿ ಪರಿಣಮಿಸಿರುವ ನಿಜಾಮುದ್ದೀನ್ ಮಸೀದಿಯ ತಬ್ಲಿಘಿ ಜಮಾತ್ ನ
ಎಲ್ಲ ವಿದೇಶೀಯರನ್ನೂ ಸಮಗ್ರ ತಪಾಸಣೆಗೆ ಒಳ ಪಡಿಸುವಂತೆ ಮತ್ತು ಲಭ್ಯವಿರುವ ಮೊದಲ ವಿಮಾನದಲ್ಲೇ ಸಾಗಹಾಕುವಂತೆ ಕೇಂದ್ರ ಸರ್ಕಾರವು 2020 ಏಪ್ರಿಲ್ 01ರ ಬುಧವಾರ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿತು.
ಇದೇ ವೇಳೆಗೆ ೨೦೦೦೦ ರೈಲ್ವೆ ಬೋಗಿಗಳನ್ನು ನವೀಕರಿಸುವ ಮೂಲಕ ೩.೨ ಲಕ್ಷ ಐಸೋಲೇಷನ್ ಮತ್ತು ಕ್ವಾರಂಟೈನ್ ಹಾಸಿಗೆಗಳನ್ನು ಒದಗಿಸಲು ರೈಲ್ವೆ ಇಲಾಖೆ ಹಾಗೂ ವೈದ್ಯಕೀಯ ಸರಕು ಸಾಗಣೆಗಾಗಿ ವಿಮಾನಗಳು ಸಜ್ಜಾಗಿವೆ.
೩೮೬ ಹೊಸ ಪ್ರಕರಣಗಳೊಂದಿಗೆ ದೇಶದಲ್ಲಿ ಕೊರೋನಾ ಸೋಂಕಿನ ಪ್ರಕರಣಗಳ ಸಂಖ್ಯೆ ೧೬೩೭ಕ್ಕೆ ಏರಿಕೆಯಾಗಿದ್ದು, ೩೮ ಮಂದಿ ಅಸು ನೀಗಿದ್ದಾರೆ.
‘ತಬ್ಲಿಘಿ
ಜಮಾತಿಗೆ ಸಂಬಂಧಿಸಿದ ಎಲ್ಲ ವಿದೇಶೀಯರನ್ನೂ ಸಮಗ್ರ ತಪಾಸಣೆಗೆ ಒಳಪಡಿಸಿ. ತಪಾಸಣೆಯಲ್ಲಿ ಕೋವಿಡ್ -೧೯ ಮುಕ್ತರು
ಎಂಬುದಾಗಿ ಕಂಡು ಬರುವ ಯಾರೇ ವಿದೇಶೀಯನನ್ನು ತತ್ ಕ್ಷಣವೇ ಲಭ್ಯವಿರುವ ಮೊದಲ ವಿಮಾನದಲ್ಲೇ ಗಡೀಪಾರು ಮಾಡಬೇಕು ಎಂದು ಕೇಂದ್ರ ಸರ್ಕಾರದ ಗೃಹ ವ್ಯವಹಾರಗಳ
ಸಚಿವಾಲಯ ಸೂಚಿಸಿತು.
ಅಲ್ಲಿಯವರೆಗೆ, ಅಂತಹ ವ್ಯಕ್ತಿಗಳನ್ನು ದಿಗ್ಬಂಧನಕ್ಕೆ ಒಳಪಡಿಸಬೇಕು ಮತ್ತು ಅವರ ಅತಿಥೇಯ ಸಂಸ್ಥೆಯ ಮೂಲಕ ಪ್ರತ್ಯೇಕವಾಸಕ್ಕೆ ಒಳಪಡಿಸಬೇಕು’ ಎಂದು ಸರ್ಕಾರ ಸಲಹೆ ಮಾಡಿತು.
ಜಮಾತ್ನ ವಿದೇಶೀ ತಂಡಗಳು ಭಾರತದ ಒಳನಾಡಿನಲ್ಲಿ ಪ್ರವಾಸನಿರತವಾಗಿವೆ ಮತ್ತು ಕೊರೋನಾವೈರಸ್ ವಾಹಕರಾಗುವ ಸಾಧ್ಯತೆಗಳು ಕಂಡು ಬಂದಿವೆ ಎಂದೂ ಕೇಂದ್ರ ಸರ್ಕಾರ ಹೇಳಿತು.
ಭಾರತದ ತಬ್ಲಿಘಿ ಜಮಾತ್ ಕಾರ್ಯಕರ್ತರು ಫೆಬ್ರುವರಿ ೨೭ರಿಂದ ಮಾರ್ಚ್ ೦೧ರವರೆಗೆ ಮಲೇಶ್ಯಾದ ಕ್ವಾಲಾಲಂಪುರದ ಮಸೀದಿಯೊಂದರಲ್ಲಿ ನಡೆದ ಧಾರ್ಮಿಕ ಸಮಾವೇಶದಲ್ಲಿ ಪಾಲ್ಗೊಂಡಿದ್ದರು ಎಂಬ ವರದಿಗಳಿವೆ. ಈ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಹಲವರಲ್ಲಿ ಕೊರೋನಾವೈರಸ್ ಸೋಂಕು ದೃಢಪಟ್ಟ ವರದಿಗಳೂ ಇವೆ. ಆದ್ದರಿಂದ ಮಲೇಶ್ಯಾದಿಂದ ವಾಪಸಾದವರನ್ನು ತುರ್ತಾಗಿ ಸಮಗ್ರ ವೈದ್ಯಕೀಯ ತಪಾಸಣೆಗೆ ಒಳಪಡಿಸಬೇಕಾದ ಅಗತ್ಯವಿದೆ ಎಂದೂ ಕೇಂದ್ರ ಸೂಚಿಸಿದೆ.
ಪ್ರಸ್ತುತ ೭೦ಕ್ಕೂ ಹೆಚ್ಚು ರಾಷ್ಟ್ರಗಳ ೨೦೦೦ಕ್ಕೂ ಹೆಚ್ಚು ವಿದೇಶೀಯರು ಪ್ರವಾಸೀ ವೀಸಾಗಳಲ್ಲಿ ಭಾರತಕ್ಕೆ ಬಂದಿದ್ದು ತಬ್ಲಿಘಿ ಕೆಲಸಕ್ಕಾಗಿ ದೇಶದ ವಿವಿಧ ಕಡೆಗಳಲ್ಲಿ ಹರಡಿದ್ದಾರೆ ಎಂದು ಅಂದಾಜು ಮಾಡಲಾಗಿದೆ. ಈ ದೇಶದಲ್ಲಿ
ಅವರ ವಾಸ್ತವ್ಯವದ ಅವಧಿ ೬ ತಿಂಗಳುಗಳು.
ದೆಹಲಿಯ ನಿಜಾಮುದ್ದೀನ್ನಲ್ಲಿನ ತಬ್ಲಿಘಿ ಕೇಂದ್ರ ಕಚೇರಿಯು ಎಲ್ಲ ವಿದೇಶೀ ತಬ್ಲಿಘಿ ತಂಡಗಳನ್ನು ವಿವಿಧ ರಾಜ್ಯಗಳಿಂದ ವಾಪಸ್ ಕರೆಸಿಕೊಂಡ ಅವರವರ ರಾಷ್ಟ್ರಕ್ಕ ಮರಳಿ ಕಳಿಸುವ ಪ್ರಕ್ರಿಯೆಯಲ್ಲಿ ತೊಡಗಿದೆ ಎಂಬ ವರದಿಗಳಿವೆ ಎಂದೂ ಕೇಂದ್ರ ಸರ್ಕಾರ ತಿಳಿಸಿದೆ.
ಆರು ಅಂತಸ್ತಿನ ಜಮಾತ್ ಕೇಂದ್ರ ಕಚೇರಿಯು ಪ್ರಸ್ತುತ ದೇಶದಲ್ಲಿ ಕೊರೋನಾವೈರಸ್ ಸೋಂಕಿನ ಅತಿದೊಡ್ಡ ’ಹಾಟ್ ಸ್ಪಾಟ್’ ಆಗಿ ಪರಿಣಮಿಸಿದೆ. ವಿವಿಧ ರಾಷ್ಟ್ರಗಳಿಗೆ ಸೇರಿದ ಒಂದೇ ರೀತಿಯ ಉಡುಪು ಮತ್ತು ತಲೆಗೆ ಸ್ಕಲ್ ಕ್ಯಾಪ್ ಹಾಕಿಕೊಂಡ ಸುಮಾರು ೨,೫೦೦ ಸುನ್ನಿ ಮುಸ್ಲಿಮರು ದೆಹಲಿಯ ನಿಜಾಮುದ್ದೀನ್ ಪ್ರದೇಶದ ಮರ್ಕಜ್ ಹೆಸರಿನ ಈ ಕಟ್ಟಡಕ್ಕೆ
ಮಾರ್ಚ್ ಆದಿಯಲ್ಲಿ ವಾರ್ಷಿಕ ಸಮಾವೇಶಕ್ಕಾಗಿ ಆಗಮಿಸಿದ್ದರು.
ಭಾನುವಾರ ಮತ್ತು ಸೋಮವಾರದ ಅವಧಿಯಲಿ ದೆಹಲಿಯೊಂದರಲ್ಲಿಯೇ ೨೪ ಮಂದಿ ಬೋಧಕರಿಗೆ ಕೊರೋನಾವೈರಸ್ ಸೋಂಕು ತಗುಲಿದ್ದು ಖಚಿತವಾಗಿರುವುದರಂದಿಗೆ ಇದೀಗ ಈ ಮರ್ಕಜ್ ಕೊರೋನಾ ಸೋಂಕಿನ ಪ್ರಸಾರ ಕೇಂದ್ರವಾಗುವ ಹಾದಿಯಲ್ಲಿದೆ ಎಂದು ಅಧಿಕಾರಿಗಳು ಇದೀಗ ಭೀತಿ ಪಟ್ಟಿದ್ದಾರೆ.
ತಬ್ಲಿಘಿ ಜಮಾತ್ನಲ್ಲಿ ಭಾಗವಹಿಸಿದ್ದ ೧೮೦೦ ಮಂದಿಯನ್ನು ೯ ಆಸ್ಪತ್ರೆ
ಮತ್ತು ಕ್ವಾರಂಟೈನ್ ಕೇಂದ್ರಗಳಲ್ಲಿ ದಾಖಲಿಸಲಾಗಿದೆ. ಇತ್ತೀಚೆಗೆ ಕೋವಿಡ್ -೧೯ ರೋಗ ಪ್ರಕರಣ ಸಂಖ್ಯೆಯಲ್ಲಾದ ವರ್ಧನೆ ದೇಶದ ಪ್ರಕರಣಗಳನ್ನು ಪ್ರತಿನಿಧಿಕರಿಸುವುದಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗರವಾಲ್ ಬುಧವಾರ ಸಂಜೆ ತಿಳಿಸಿದರು.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅಗರವಾಲ್, ೨೦೦೦೦ ರೈಲ್ವೆ ಬೋಗಿಗಳನ್ನು ನವೀಕರಿಸುವ ಮೂಲಕ ೩.೨ ಲಕ್ಷ ಐಸೋಲೇಷನ್ ಮತ್ತು ಕ್ವಾರಂಟೈನ್ ಹಾಸಿಗೆಗಳನ್ನು ಒದಗಿಸಲು ರೈಲ್ವೆ ಸಿದ್ಧತೆ ನಡೆಸುತ್ತಿದೆ. ೫೦೦೦ ಬೋಗಿಗಳ ನವೀಕರಣ ಕಾರ್ಯ ನಡೆದು ಬರುತ್ತಿದೆ. ಟೆಸ್ಟಿಂಗ್ ಕಿಟ್, ಔಷಧಿ, ಮಾಸ್ಕ್ಗಳ ಸಾಗಾಟಕ್ಕಾಗಿ ವಿಮಾನಗಳು ಸಂಚರಿಸಲು ಆರಂಭಿಸಿವೆ ಎಂದು ಹೇಳಿದರು.
ದೇಶದಲ್ಲಿ ಈವರೆಗೆ ೧೬೩೭ ಕೋವಿಡ್-೧೯ ಪ್ರಕರಣಗಳು ವರದಿಯಾಗಿವೆ. ೩೮೬ ಹೊಸ ಪ್ರಕರಣಗಳು ಇದರಲ್ಲಿ ಸೇರಿವೆ. ೩೮ ಮಂದಿ ಪ್ರಾಣ ಕಳೆದುಕೊಂಡಿದ್ದು. ೧೩೨ ಮಂದಿ ಗುಣಮುಖರಾಗಿದ್ದಾರೆ . ಮಂಗಳವಾರದಿಂದ ಸೋಂಕು ದೃಢಪಟ್ಟಿರುವ ಪ್ರಕರಣಗಳ ಸಂಖ್ಯೆ ಜಾಸ್ತಿಯಾಗಿದೆ. ತಬ್ಲಿಘಿ ಜಮಾತ್ ಸದಸ್ಯರು ಪ್ರಯಾಣ ಕೈಗೊಂಡಿದ್ದೇ ಇದಕ್ಕೆ ಕಾರಣ ಎಂದು ಅಗರವಾಲ್ ನುಡಿದರು.
ತಪ್ಪಾದ ಮಾಹಿತಿಗಳನ್ನು ಪರೀಕ್ಷಿಸಬೇಕು ಎಂದು ಸುಪ್ರೀಂಕೋರ್ಟ್ ಹೇಳಿದೆ. ಅದಕ್ಕಾಗಿ ನಾವು technicalquery.covid19@gov.in
ಎಂಬ ಇಮೇಲ್ ಐಡಿ ಕ್ರಿಯೇಟ್ ಮಾಡಿದ್ದೇವೆ. ಆರೋಗ್ಯ ಇಲಾಖೆಯ ಜಂಟಿ ಕಾರ್ಯದರ್ಶಿ ಶ್ರೇಣಿಯ ಅಧಿಕಾರಿಗಳು ಮತ್ತು ಏಮ್ಸ್ ವಿಶೇಷ ತಜ್ಞರು ಈ ಇಮೇಲ್ ಗಳಿಗೆ ತಾಂತ್ರಿಕ ಬೆಂಬಲ ನೀಡಲಿದ್ದಾರೆ ಎಂದು ಅಗರವಾಲ್ ಹೇಳಿದರು.
ರಾಜ್ಯಗಳು ವಲಸೆ ಕಾರ್ಮಿಕರಿಗೆ ಆಹಾರ ಮತ್ತು ವಸತಿ ವ್ಯವಸ್ಥೆ ಕಲ್ಪಿಸುತ್ತಿವೆ. ೨೧,೪೮೬ ನಿರಾಶ್ರಿತ ಶಿಬಿರಗಳಲ್ಲಿ ೬,೭೫,೧೩೩ ಜನರಿಗೆ ಆಶ್ರಯ ನೀಡಲಾಗುತ್ತಿದೆ ಎಂದು ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಪುಣ್ಯ ಸಾಲಿನಾ ಶ್ರೀವಾಸ್ತವ ಹೇಳಿದರು.
ನಾವು ಇಲ್ಲಿಯವರೆಗೆ ೪೭,೯೫೧ ಪರೀಕ್ಷೆಗಳನ್ನು ನಡೆಸಿದ್ದೇವೆ. ಐಸಿಎಂಆರ್ ನೆಟ್ವರ್ಕಿನಲ್ಲಿ ೧೨೬ ಪ್ರಯೋಗಾಲಯಗಳಿವೆ. ಅನುಮತಿ ಪಡೆದ ೫೧ ಖಾಸಗಿ ಪ್ರಯೋಗಾಲಯಗಳಿವೆ ಎಂದು ಐಸಿಎಂಆರ್ ನ ಆರ್. ಗಂಗಾ ಕೇತ್ಕರ್ ಹೇಳಿದರು.
No comments:
Post a Comment