Sunday, July 26, 2020

ಕಾರ್ಗಿಲ್ ಯೋಧರ ಶೌರ್ಯ ಸ್ಮರಿಸಿದ ಪ್ರಧಾನಿ ಮೋದಿ

ಕಾರ್ಗಿಲ್ ಯೋಧರ ಶೌರ್ಯ ಸ್ಮರಿಸಿದ ಪ್ರಧಾನಿ ಮೋದಿ

ನವದೆಹಲಿ: ಕಾರ್ಗಿಲ್ ಸಮರದ ವೇಳೆಯಲ್ಲಿ ಸಶಸ್ತ್ರ ಪಡೆಗಳು ಪ್ರದರ್ಶಿಸಿದ ಶೌರ್ಯವನ್ನು 2020 ಜುಲೈ 26ರ ಭಾನುವಾರ ನೆನಪಿಸಿ ಶ್ಲಾಘಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಯೋಧರ ನೈತಿಕತೆಯನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಮಾತನಾಡುವಂತೆ ಮತ್ತು ಕೆಲಸ ಮಾಡುವಂತೆ ಜನರಿಗೆ ಸೂಚಿಸಿದರು.

ಯುದ್ಧಗಳು ಗಡಿಗಳಲ್ಲಿ ಮಾತ್ರವೇ ನಡೆಯುವುದಿಲ್ಲ, ದೇಶದ ಒಳಗೂ ಹಲವಾರು ರಂಗಗಳಲ್ಲಿ ನಡೆಯುತ್ತವೆ ಎಂದು ಅವರು ನುಡಿದರು.

೨೧ನೇ ಕಾರ್ಗಿಲ್ ವಿಜಯದಿನದಂದೇ ಕಾಕತಾಳೀಯವಾಗಿ ಬಂದ ತಮ್ಮಮನ್ ಕಿ ಬಾತ್ ಬಾನುಲಿ ಕಾರ್‍ಯಕ್ರಮದಲ್ಲಿ ಕಾರ್ಗಿಲ್ ಸಮರದಲ್ಲಿ ಪ್ರದರ್ಶಿಸಿದ ಕೆಚ್ಚೆದೆಯನ್ನು ಪ್ರಧಾನಿ ನೆನಪು ಮಾಡಿಕೊಂಡರು. ಕಾರ್ಗಿಲ್ ಬಿಕ್ಕಟ್ಟಿಗಾಗಿ ಪಾಕಿಸ್ಥಾನವನ್ನು ತರಾಟೆಗೆ ತೆಗೆದುಕೊಂಡ ಪ್ರಧಾನಿನವದೆಹಲಿಯ ಸ್ನೇಹಹಸ್ತಕ್ಕೆ ಪಾಕಿಸ್ತಾನ ಬೆನ್ನ ಹಿಂದಿನಿಂದ ಇರಿಯಿತು ಎಂದು ಹೇಳಿದರು.

ಭಾರತೀಯ ಯೋಧರು ಪಾಕಿಸ್ತಾನಿ ಸೈನಿಕರನ್ನು ಹಿಮ್ಮೆಟ್ಟಿಸಿದ ಬಳಿಕ ೧೯೯೯ರ ಜುಲೈ ೨೬ರಂದು ಕಾರ್ಗಿಲ್ ಕದನ ಮುಗಿದಿದೆ ಎಂದು ಘೋಷಿಸಲಾಗಿತ್ತು.

ತಮ್ಮ ಹೇಳಿಕೆಗಳು ಮತ್ತು ವರ್ತನೆ ಯೋಧರಿಗೆ ಗೌರವ ಸಲ್ಲಿಸುವಂತಿರಬೇಕು ಮತ್ತು ಅವರ ಸ್ಥೈರ್‍ಯವನ್ನು ವೃದ್ಧಿಸುವಂತಿರಬೇಕು ಎಂಬುದನ್ನು ಜನರು ನೆನಪಿಟ್ಟುಕೊಳ್ಳಬೇಕು ಎಂದು ಹೇಳಿದ ಪ್ರಧಾನಿರಾಷ್ಟ್ರೀಯ ಏಕತೆಗಾಗಿ ಪ್ರತಿಯೊಬ್ಬರೂ ತಮಗೆ ಸಾಧ್ಯವಿರುವುದರಲ್ಲವನ್ನೂ ಮಾಡಬೇಕು ಎಂದು ನುಡಿದರು.

ಎಕತೆಯ ದಾರದಿಂದ ಬಂಧಿಸಲ್ಪಟ್ಟ ಜನತೆ ಮತ್ತು ರಾಷ್ಟ್ರವು ಎಲ್ಲಕ್ಕಿಂತ ದೊಡ್ಡದು ಎಂಬ ಮಂತ್ರ ನಮ್ಮ ಸೈನಿಕರ ಸ್ಥೈರ್‍ಯ ಮತ್ತು ಶಕ್ತಿಯನ್ನು ಸಹಸ್ರಪಟ್ಟು ಹೆಚ್ಚಿಸುತ್ತದೆ ಎಂದು ಮೋದಿ ಹೇಳಿದರು.

ಸಾಮಾಜಿಕ ಮಾಧ್ಯಮದ ಅಪಾಯಗಳ ಬಗ್ಗೆ ಕೂಡಾ ಪ್ರಧಾನಿ ಮಾತನಾಡಿದರು. ಎಷ್ಟೋ ಬಾರಿ, ಸಾgವನ್ನು ಗಮನಿಸದೆಯೇ ಜನರು ರಾಷ್ಟ್ರಕ್ಕೆ ಹಾನಿಕಾರಕವಾದ ಕೆಲವೊಂದು ವಿಷಯಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರೋತ್ಸಾಹಿಸುತ್ತಾರೆ. ಕೇವಲ ಕುತೂಹಲದಿಂದ ಎಷ್ಟೋ ವಿಷಯಗಳನ್ನು ಮುಂದಕ್ಕೆ ಕಳುಹಿಸುವ ಜನರಿದ್ದಾರೆ. ತಪ್ಪೆಂದು ಗೊತ್ತಿದ್ದರೂ ನಾವು ಇದನ್ನು ಮಾಡುತ್ತಿರುತ್ತೇವೆ. ಈಗಿನ ದಿನಗಳಲ್ಲಿ ಯುದ್ಧವು ಕೇವಲ ಗಡಿಗಳಲ್ಲಿ ನಡೆಯುವುದಲ್ಲ, ದೇಶದ ಒಳಗೂ ಹಲವಾರು ಕ್ಷೇತ್ರಗಳಲ್ಲಿ ಅವು ಏಕ ಕಾಲಕ್ಕೆ ನಡೆಯುತ್ತಿರುತ್ತವೆ ಎಂದು ಪ್ರಧಾನಿ ಹೇಳಿದರು.

ಪ್ರತಿಯೊಬ್ಬ ನಾಗರಿಕನೂ ಇಂತಹ ವಿಷಯಗಳಲ್ಲಿ ತಮ್ಮ ಪಾತ್ರ ಏನು ಎಂಬುದಾಗಿ ನಿರ್ಧರಿಸಬೇಕು. ಯೋಧರು ಗಡಿಗಳಲ್ಲಿ ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿ ಹೋರಾಡುತ್ತಿದ್ದಾರೆ ಎಂಬುದನ್ನು ಮನಸ್ಸಿನಲ್ಲಿ ಇಟ್ಟುಕೊಂಡು ನಮ್ಮ ಪಾತ್ರವನ್ನು ನಾವು ನಿರ್ಧರಿಸಬೇಕು ಎಂದು ಅವರು ನುಡಿದರು.

ಭಾರತ ಮತ್ತು ಚೀನೀ ಸೇನೆಗಳು ಲಡಾಖ್‌ನಲ್ಲಿ ಮುಖಾಮುಖಿ ಘರ್ಷಣೆಯ ಬಿಕ್ಕಟ್ಟು ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ಅವರಿಂದ ಮಾತುಗಳು ಬಂದಿವೆ.

ಕಾರ್ಗಿಲ್ ಸಮರದ ಬಳಿಕ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರು ಮಾಡಿದ್ದ ಸ್ವಾತಂತ್ರ್ಯ ದಿನೋತ್ಸವ ಭಾಷಣವನ್ನು ಮೋದಿ ನೆನಪು ಮಾಡಿಕೊಂಡರು. ವಾಜಪೇಯಿ ಅವರು  ಆಡಿದ್ದ ಮಾತುಗಳು ಇಂದಿಗೂ ಪ್ರಸ್ತುತ ಎಂದು ಮೋದಿ ಹೇಳಿದರು.

ಬಿಕ್ಕಟ್ಟಿನ ಸಂದರ್ಭದಲ್ಲಿ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬುದನ್ನು ನಿರ್ಧರಿಸಲು ವ್ಯಕ್ತಿಯು ಭಾರತದ ಅತ್ಯಂತ ಬಡವ ಹಾಗೂ ಅಸಹಾಯಕ ವ್ಯಕ್ತಿಯ ಬಗ್ಗೆ ಯೋಚಿಸಬೇಕು, ಮಾಡುವ ಕೆಲಸವು ನಿರ್ದಿಷ್ಟ ವ್ಯಕ್ತಿಗೆ ಅನುಕೂಲವಾಗುವುದೇ ಅಥವಾ ಇಲ್ಲವೇ ಎಂಬುದಾಗಿ ಚಿಂತಿಸಬೇಕು ಎಂಬ ಮಾತುಗಳ ಮೂಲಕ ಮಹಾತ್ಮ ಗಾಂಧಿಯವರು ರಾಷ್ಟ್ರಕ್ಕೆ  ನೀಡಿದ್ದ ಮಂತ್ರವನ್ನು ಆಗ ವಾಜಪೇಯಿ ಅವರು ನೆನಪಿಸಿದ್ದರು.

ಗಾಂಧೀಜಿಯವರ ಚಿಂತನೆಯಿಂದಾಚೆಗೆ ಸಾಗಿದ ಅಟಲ್ ಜಿಕಾರ್ಗಿಲ್ ಯುದ್ಧವು ನಮಗೆ ಇನ್ನೊಂದು ಮಂತ್ರವನ್ನು ನೀಡಿದೆ. ಯಾವುದೇ ಪ್ರಮುಖ ನಿರ್ಧಾರ ಕೈಗೊಳ್ಳುವ ಮುನ್ನ ನಾವು ನಮ್ಮ ನಿರ್ಧಾರವು ದೂರದ ಪರ್ವತ ಪ್ರದೇಶದಲ್ಲಿ ತಮ್ಮ ಪ್ರಾಣಾರ್ಪಣೆ ಮಾಡಿದ ಯೋಧರ ಗೌರವವನ್ನು ಹೆಚ್ಚಿಸುವಂತಿದೆಯೇ ಎಂದು ಚಿಂತಿಸಬೇಕು ಎಂದು ಹೇಳಿದ್ದರು ಎಂದು ಹೇಳಿ, ವಾಜಪೇಯಿ ಅವರ ಭಾಷಣದ ಧ್ವನಿ ಸುರುಳಿಯನ್ನು ತಮ್ಮ ಮಾತಿನ ಮಧ್ಯೆ ನುಡಿಸಿ ಕೇಳಿಸಿದರು.

ಘರ್ಷಣೆ ನಡೆದ ಸಂದರ್ಭವನ್ನು ಭಾರತ ಎಂದಿಗೂ ಮರೆಯುವುದಿಲ್ಲ ಎಂದು ಮೋದಿ ಒತ್ತಿ ಹೇಳಿದರು.

ಭಾರತೀಯ ನೆಲದೊಳಕ್ಕೆ ಅತಿಕ್ರಮಣ ಮಾಡಿ, ತನ್ನ ನೆಲದೊಳಗಿನ ಆಂತರಿಕ ಕಚ್ಚಾಟದಿಂದ ಗಮನವನ್ನು ಬೇರೆ ಕಡೆಗೆ ಸೆಳೆಯುವ ದುಸ್ಸಾಹಸಕ್ಕೆ ಪಾಕಿಸ್ತಾನ ಕೈಹಾಕಿತ್ತು. ಭಾರತವು ಹಂತದಲ್ಲಿ ಪಾಕಿಸ್ತಾನದ ಜೊತೆಗಿನ ಬಾಂಧವ್ಯ ವೃದ್ಧಿಯ ಯತ್ನಗಳ ಪ್ರಕಿಯೆಯಲ್ಲಿ ತಲ್ಲೀನವಾಗಿತ್ತು ಎಂದು ಪ್ರಧಾನಿ ನುಡಿದರು.

ಸಂಸ್ಕೃತದಲ್ಲಿನ ಹಳೆಯ ಮಾತನ್ನು ಉಲ್ಲೇಖಿಸಿದ ಮೋದಿ, "ದುಷ್ಟರಿಗೆ, ಒಬ್ಬರೊಂದಿಗಿನ ದ್ವೇಷ ಮತ್ತು ಯಾವುದೇ ಕಾರಣವಿಲ್ಲದೆ ಸ್ವಾಭಾವಿಕವಾಗಿ ಬರುವುದಿಲ್ಲ. ಅಂತಹ ಮನೋಭಾವವಿರುವ ಜನರು ತಮ್ಮ ಹಿತೈಷಿಗಳಿಗೆ ಸಹ ಹಾನಿ ಮಾಡುವ ಬಗ್ಗೆ ಯೋಚಿಸುತ್ತಲೇ ಇರುತ್ತಾರೆ. ಅದಕ್ಕಾಗಿಯೇ ಭಾರತ ಸ್ನೇಹಕ್ಕಾಗಿ ಕೈ ಚಾಚಿದಾಗ, ಪಾಕಿಸ್ತಾನ ಬೆನ್ನಿಗೆ ಇರಿಯುವ ಮೂಲಕ ಪ್ರತಿಕ್ರಿಯಿಸಲು ಪ್ರಯತ್ನಿಸಿತು ಎಂದು ನುಡಿದರು.

ಭಾರತೀಯ ಸೇನೆಯು ಶೌರ್ಯ ಪ್ರದರ್ಶಿಸಿದಾಗ, ಭಾರತ ತನ್ನ ಶಕ್ತಿಯನ್ನು ಪ್ರದರ್ಶಿಸಿದಾಗ, ಇಡೀ ಜಗತ್ತು ಅದನ್ನು ವೀಕ್ಷಿಸಿತು ಎಂದು ಪ್ರಧಾನಿ ಹೇಳಿದರು.

ನೀವು ಕಲ್ಪಿಸಿಕೊಳ್ಳಿ.. ವೈರಿಯು ಪರ್ವತದ ತುದಿಯಿಂದ ದಾಳಿ ಮಾಡುತ್ತಿದ್ದರೆ, ನಮ್ಮ ಸಶಸ್ತ್ರ ಪಡೆಗಳು ಕೆಳಗಿನಿಂದ ವೈರಿಯನ್ನು ಎದುರಿಸಿದವು. ಆದರೆ ಅದು ಎತ್ತರ ಪ್ರದೇಶದಲ್ಲಿ ಸಾಧಿಸಿದ್ದ ವಿಜಯವಷ್ಟೇ ಅಲ್ಲ. ಅದು ಉನ್ನತ ನೈತಿಕತೆ ಮತ್ತು ನಮ್ಮ ಪಡೆಗಳ ನೈಜ ಕೆಚ್ಚೆದೆಯ ವಿಜಯವಾಗಿತ್ತು ಎಂದು ಅವರು ನುಡಿದರು.

ತಮಗೆ ಕೂಡಾ ಕಾರ್ಗಿಲ್‌ಗೆ ಭೇಟಿ ನೀಡುವ ಮತ್ತು ನಮ್ಮ ಯೋಧರ ಶೌರ್‍ಯವನ್ನು ವೀಕ್ಷಿಸುವ ಸದವಕಾಶ ಲಭಿಸಿತ್ತು. ಅವಕಾಶ ಲಭಿಸಿದ್ದ ದಿನ ತಮ್ಮ ಬದುಕಿನ ಅತ್ಯಂತ ಅಮೂಲ್ಯ ಕ್ಷಣಗಳಲ್ಲಿ ಒಂದಾಗಿತ್ತು ಎಂದು ಮೋದಿ ಹೇಳಿದರು.

ಪ್ರಸ್ತುತ ವರ್ಷದ ಸ್ವಾತಂತ್ರ್ಯೋತ್ಸವ ದಿನದ ಬಗ್ಗೆ ಉಲ್ಲೇಖಿಸಿದ ಪ್ರಧಾನಿ, ಇದು ಕೋವಿಡ್-೧೯ ಸಾಂಕ್ರಾಮಿಕದ ಮಧ್ಯೆ ಬಂದಿದೆ ಮತ್ತು ಸಂಪೂರ್ಣ ಭಿನ್ನವಾಗಿರುತ್ತದೆ ಎಂದು ಹೇಳಿದರು.

ಆಗಸ್ಟ್ ೧೫ರಂದು ಸಾಂಕ್ರಾಮಿಕದಿಂದ ಸ್ವಾತಂತ್ರ್ಯ ಪಡೆಯುವ ಪ್ರತಿಜ್ಞೆ ಕೈಗೊಳ್ಳುವಂತೆ ಯುವಕರನ್ನು ಆಗ್ರಹಿಸಿದ ಮೋದಿ, ’ಆತ್ಮ ನಿರ್ಭರ ಭಾರತದ (ಸ್ವಯಂ ಸ್ವಾವಲಂಬಿ ಭಾರತ) ನಿರ್ಧಾರ ಕೈಗೊಳ್ಳಿ. ಹೊಸತನ್ನು ಕಲಿಯುವ ಮತ್ತು ಕಲಿಸುವ ನಿರ್ಧಾರ ಕೈಗೊಳ್ಳಿ ಮತ್ತು ನಮ್ಮ ಕರ್ತವ್ಯಗಳನ್ನು ಪಾಲಿಸುವ ನಿರ್ಧಾರ ಕೈಗೊಳ್ಳಿ ಎಂದು ಸೂಚಿಸಿದರು.

ದೇಶಾದ್ಯಂತ ಪ್ರವಾಹ ಮತ್ತು ಭಾರೀ ಮಳೆಯಿಂದ ತೊಂದರೆಗೆ ಒಳಗಾದವರಿಗೆ ಬೆಂಬಲವನ್ನೂ ಅವರು ವ್ಯಕ್ತ ಪಡಿಸಿದರು. ಕೇಂದ್ರ, ರಾಜ್ಯ ಸರ್ಕಾರಗಳು, ಸ್ಥಳೀಯ ಆಡಳಿತಗಳು, ರಾಷ್ಟ್ರೀಯ ವಿಕೋಪ ಪರಿಹಾರ ಪಡೆ (ಎನ್‌ಡಿಆರ್‌ಎಫ್) ಮತ್ತು ಸಾಮಾಜಿಕ ಸಂಘಟನೆಗಳು ಸಂತ್ರಸ್ಥರಿಗೆ ಸಾಧ್ಯವಿರುವ ಎಲ್ಲ ನೆರವು ನೀಡಲು ಯತ್ನ ನಡೆಸುತ್ತಿವೆ ಎಂದು ಪ್ರಧಾನಿ ಹೇಳಿದರು.

ಸಾಂಕ್ರಾಮಿಕದ ಸಂಕಟ ಸಮಯವನ್ನು ಅವಕಾಶಗಳಾಗಿ ಬದಲಾಯಿಸಿಕೊಂಡ ಜನರ ಉದಾಹರಣೆಗಳನ್ನು ಪ್ರಧಾನಿ ನೀಡಿದರು. ಬಿಹಾರ, ಜಾರ್ಖಂಡ್ ಮತ್ತು ಈಶಾನ್ಯ ಭಾರತದ ಜನರು ಸ್ಥಳೀಯ ಉತ್ಪನ್ನಗಳು ಮತ್ತು ಕೌಶಲಗಳನ್ನು ಸಾಂಕ್ರಾಮಿಕದ ಕಾಲದಲ್ಲಿ ಬಳಸಿದ್ದನ್ನು ಅವರು ಶ್ಲಾಘಿಸಿದರು.

ತಮ್ಮ ಭಾಷಣದ ವೇಳೆಯಲ್ಲಿ ಪ್ರಧಾನಿಯವರು ಮಂಡಳಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳ ಜೊತೆ ಸಂವಹನ ನಡೆಸಿದರು.

No comments:

Advertisement