Friday, July 17, 2020

ಸಚಿನ್- ಗೆಹ್ಲೋಟ್ ಜಟಾಪಟಿ: ಹೈಕೋರ್ಟ್ ಮೆಟ್ಟಿಲಿಗೆ

ಸಚಿನ್- ಗೆಹ್ಲೋಟ್ ಜಟಾಪಟಿ: ಹೈಕೋರ್ಟ್ ಮೆಟ್ಟಿಲಿಗೆ

ನವದೆಹಲಿ: ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಬಂಡಾಯದಿಂದ ರಾಜಸ್ಥಾನದಲ್ಲಿ ಉದ್ಭವಿಸಿರುವ ಬಿಕ್ಕಟ್ಟು 2020 ಜುಲೈ 16ರ ಗುರುವಾರ ರಾಜಸ್ಥಾನ ಹೈಕೋರ್ಟ್ ಮೆಟ್ಟಿಲೇರಿದೆ. ವಿಧಾನಸಭಾ ಅಧ್ಯಕ್ಷ ಸಿಪಿ ಜೋಶಿ ಅವರು ನೀಡಿರುವ ಅನರ್ಹತೆ ನೋಟಿಸ್  ಗಂಭೀರ ಕಿಡಿಗೇಡಿತನ ಎಂದು ದೂರಿದ ಪೈಲಟ್ ಮತ್ತು ರಾಜಸ್ಥಾನದ ೧೮ ಶಾಸಕರು ನೋಟಿಸ್ ರದ್ದು ಪಡಿಸುವಂತೆ ಹೈಕೋರ್ಟಿಗೆ ಮನವಿ ಮಾಡಿದರು.

ಅರ್ಜಿಯು ರಾಜಸ್ಥಾನ ವಿಧಾನಸಭೆಯ ನಿಯಮಾವಳಿಗಳನ್ನು ಪ್ರಶ್ನಿಸಿರುವ ಕಾರಣ ಅದನ್ನು ದ್ವಿಸದಸ್ಯ ವಿಭಾಗೀಯ ಪೀಠಕ್ಕೆ ಒಪ್ಪಿಸುವುದಾಗಿ ನ್ಯಾಯಮೂರ್ತಿ ಸತೀಶ್ ಶರ್ಮ ಸಂಜೆ ಪ್ರಕಟಿಸಿದರು.

ವಿಧಾನಸಭೆಯ ಹೊರಗಿನ ಕೆಲವು ನಾಯಕರು ನಿರ್ಣಯಗಳು ಮತ್ತು ನೀತಿಗಳನ್ನು ಒಪ್ಪದ ಕಾರಣಕ್ಕಾಗಿ ತಮ್ಮ ವಿರುದ್ಧ ಪಕ್ಷಾಂತರ ನಿಷೇಧ ಕಾನೂನನ್ನು ಅನ್ವಯಿಸಲು ಸಾಧ್ಯವಿಲ್ಲ ಎಂದು ಬಂಡಾಯ ಸದಸ್ಯರು ರಾಜಸ್ಥಾನ ಹೈಕೋರ್ಟಿನ ಜೈಪುರ ಪೀಠಕ್ಕೆ ಸಲ್ಲಿಸಿದ ತಮ್ಮ ಅರ್ಜಿಯಲ್ಲಿ ಪ್ರತಿಪಾದಿಸಿದ್ದಾರೆ.

ವಿಧಾನಸಭಾಧ್ಯಕ್ಷರ ನೋಟಿಸ್ ವಿರುದ್ಧ ರಾಜಸ್ಥಾನ ಹೈಕೋರ್ಟ್ ಮೆಟ್ಟಿಲೇರುವ ಸಚಿನ್ ಪೈಲಟ್ ಕ್ರಮವು ಅವರು ಮುಖ್ಯಮಂತ್ರಿ ಅಶೋಕ ಗೆಹ್ಲೋಟ್ ಜೊತೆಗಿನ ತಮ್ಮ ಸಮgವನ್ನು ಅದರ ತಾರ್ಕಿಕ ತೀರ್‍ಮಾನಕ್ಕೆ ಒಯ್ಯಲು ಉದ್ದೇಶಿಸಿರುವುದರ ಸಂಕೇತವಾಗಿದೆ ಎಂದು ರಾಜಕೀಯ ವಲಯಗಳು ಅಭಿಪ್ರಾಯಪಟ್ಟಿವೆ.

ಪೈಲಟ್ ಬೆಂಬಲಿಗರ ಗುಂಪನ್ನು ವಿಧಾನಸಭೆಯಿಂದ ಅನರ್ಹಗೊಳಿಸಿದರೆ, ಅದು ವಿಧಾನಸಭೆಯ ಬಲವನ್ನು ಕುಗ್ಗಿಸುತ್ತದೆ ಮತ್ತು ಅಲ್ಪ ಮತಗಳ ಅಂತರದೊಂದಿಗೆ ಸ್ಥಾನಗಳಿಗೆ ಚುನಾವಣೆ ನಡೆಯುವವರೆಗೆ ಪೈಲಟ್ ಬಲವಾದ ಹೆಜ್ಜೆಗಳನ್ನು ಇಡಲು ಸಾಧ್ಯವಾಗುತ್ತದೆ ಎಂದು ಕಾಂಗ್ರೆಸ್ ನಾಯಕರು ಲೆಕ್ಕ ಹಾಕಿದ್ದಾರೆ.

ಸಚಿನ್ ಪೈಲಟ್ ಮತ್ತು ಬೆಂಬಲಿಗ ಶಾಸಕರ ಜಂಟಿ ಅರ್ಜಿಯನ್ನು ಹೈಕೋರ್ಟ್‌ನ ನ್ಯಾಯಮೂರ್ತಿ ಸತೀಶ್ ಶರ್ಮಾ ಅವರು ಗುರುವಾರ ಮಧ್ಯಾಹ್ನ ಕೈಗೆತ್ತಿಕೊಂಡರು. ಆದರೆ ಅರ್ಜಿದಾರರನ್ನು ಪ್ರತಿನಿಧಿಸುತ್ತಿರುವ ಹಿರಿಯ ವಕೀಲ ಹರೀಶ್ ಸಾಳ್ವೆ, ಅರ್ಜಿಯನ್ನು ವ್ಯಾಪ್ತಿ ವಿಸ್ತರಿಸುವ ಸಲುವಾಗಿ ತಿದ್ದುಪಡಿ ಮಾಡಲು ಕಾಲಾವಕಾಶ ಕೋರಿದರು.

ಅವರು ವಿಧಾನಸಭಾಧ್ಯಕ್ಷ ನೋಟಿಸಿನ ಬದಲಿಗೆ ರಾಜಸ್ಥಾನ ವಿಧಾನಸಭೆ ಸದಸ್ಯರ (ಪಕ್ಷ ಬದಲಾವಣೆ ಆಧಾರದಲ್ಲಿ ಅನರ್ಹಗೊಳಿಸುವ) ನಿಯಮಾವಳಿಗಳು, ೧೯೮೯ ಇದನ್ನೇ ಪ್ರಶ್ನಿಸುತ್ತಿದ್ದಾರೆ. ನಿಯಮಾವಳಿಗಳನ್ನು, ಬೈಲಾಗಳು ಮತ್ತು ತಿದ್ದುಪಡಿಗಳನ್ನು ಪ್ರಶ್ನಿಸುವ ಅರ್ಜಿಗಳನ್ನು ಕೇವಲ ವಿಭಾಗೀಯ ಪೀಠ ಆಲಿಸಬಹುದು ಎಂದು ವಿಧಾನಸಭಾಧ್ಯಕ್ಷ ಸಿಪಿ ಜೋಶಿ ಪರ ವಕೀಲ ಪ್ರತೀಕ್ ಕಸ್ಲಿವಾಲ್ ವಾದಿಸಿದರು.

ಕೆಲವು ಗಂಟೆಗಳ ಬಳಿಕ ಗಂಟೆಗೆ ಪ್ರಕರಣದ ವಿಚಾರಣೆ ಪುನಾರಂಭ ಮಾಡಿದ ನ್ಯಾಯಮೂರ್ತಿ ಶರ್ಮ ಅವರು ರಾಜಸ್ಥಾನ ವಿಧಾನಸಭೆಯ ನಿಯಮಾವಳಿಗಳನ್ನು ಪ್ರಶ್ನಿಸಿರುವ ಹೊಸ ರೂಪದ ಅರ್ಜಿಯನ್ನು ದ್ವಿಸದಸ್ಯ ವಿಭಾಗೀಯ ಪೀಠಕ್ಕೆ ಒಪ್ಪಿಸಿದರು ಎಂದು ಕಸ್ಲಿವಾಲ್ ಅವರು ಬಳಿಕ ವಿವರಿಸಿದರು.

ಶಾಸಕಾಂಗ ಪಕ್ಷದ ಎರಡು ಸಭೆಗಳಿಗೆ ಹಾಜರಾಗದೇ ಇರುವುದು ಪಕ್ಷಾಂತರಕ್ಕೆ ಸಮವಾಗುವುದಿಲ್ಲ. ಸಂವಿಧಾನದ ಹತ್ತನೇ ಶೆಡ್ಯೂಲ್  ಪ್ರಕಾರ, ಸದಸ್ಯರೊಬ್ಬರು ರಾಜಕೀಯ ಪಕ್ಷದ ಸದಸ್ಯತ್ವವನ್ನು ಸ್ವಯಂಪ್ರೇರಣೆಯಿಂದ ತ್ಯಜಿಸಿದರೆ ಅಥವಾ ವಿಧಾನಸಭೆಯಲ್ಲಿ ಪಕ್ಷದ ನಿರ್ದೇಶನಕ್ಕೆ ವಿರುದ್ಧವಾಗಿ ಮತ ಚಲಾಯಿಸಿದರೆ ಪಕ್ಷಾಂತರ ವಿರೋಧಿ ನಿಬಂಧನೆಗಳು ಪ್ರಾರಂಭವಾಗುತ್ತವೆ ಎಂದು ಸಚಿನ್ ಪೈಲಟ್ ಮತ್ತು ಇತರ ಬೆಂಬಲಿಗ ಶಾಸಕರು ತಮ್ಮ ಪ್ರಾಥಮಿಕ ಅರ್ಜಿಯಲ್ಲಿ  ವಾದಿಸಿದ್ದರು.

ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಪ್ರಭಾವಕ್ಕೆ ಒಳಗಾಗಿ ಸಭಾಧ್ಯಕ್ಷ ಸಿಪಿ ಜೋಶಿ ಕಾರ್ಯನಿರ್ವಹಿಸಿರಬಹುದು ಎಂದು ಪೈಲಟ್ ಹೇಳಿದ್ದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸದಸ್ಯರ ವಾಕ್ ಸ್ವಾತಂತ್ರ್ಯ ಮತ್ತು ನ್ಯಾಯೋಚಿತ ಪಾತ್ರವನ್ನು ನಿರ್ವಹಿಸದಂತೆ ತಡೆಯಲು ಬಹುಮತೀಯ ಅಭಿಪ್ರಾಯಗಳನ್ನು ಹೇರಲು ಸಂವಿಧಾನದ ಹತ್ತನೇ ಶೆಡ್ಯೂಲನ್ನು ಬಳಸುವ ಯತ್ನ ನಡೆದಿದೆ ಎಂದೂ ಅರ್ಜಿ ಹೇಳಿತು.

ಪಕ್ಷದ ಕೆಲವು ಸದಸ್ಯರ ನಿರ್ಣಯಗಳು ಅಥವಾ ನೀತಿಗಳನ್ನು ವಿರೋಧಿಸುವ ಚುನಾಯಿತ ಪ್ರತಿಗಳನ್ನು ಪಕ್ಷದ ಹಿತಾಸಕ್ತಿಗಳಿಗೆ ವಿರುದ್ಧವಾಗಿ ವರ್ತಿಸುತ್ತಿದ್ದಾರೆ ಎಂದು ಪರಿಗಣಿಸುವಂತಿಲ್ಲ. ರಾಜಕೀಯ ಪಕ್ಷವೊಂದರ ನೀತಿಗಳ ಗುಣಾವಗುಣಗಳ ಬಗೆಗಿನ ಆರೋಗ್ಯಶಾಲಿ ಚರ್ಚೆಗಳನ್ನು ಪಕ್ಷಾಂತರ ವಿರೋಧಿ ಕಾನೂನು ಅಡಿಯಲ್ಲಿ ಸ್ವಯಂ ಆಗಿ ಪಕ್ಷದ ಸದಸ್ಯತ್ವ ಬಿಡುತ್ತಿದ್ದಾರೆ ಎಂಬುದಾಗಿ ಅರ್ಥೈಸಲು ಸಾಧ್ಯವಿಲ್ಲ ಎಂದು ಅರ್ಜಿ ಹೇಳಿದೆ.

ನಾವು ಎಂದೂ ಕಾಂಗ್ರೆಸ್ ಬಿಡುವ ಬಗೆಗಾಗಲೀ, ಗೆಹ್ಲೋಟ್ ಸರ್ಕಾರವನ್ನು ಉರುಳಿಸಲು ಪ್ರಯತ್ನಿಸುತ್ತಿರುವುದಾಗಿಯಾಗಲೀ ಮಾತನಾಡಿಲ್ಲ ಎಂದು ಅವರು ಬೊಟ್ಟು ಮಾಡಿದ್ದಾರೆ.

ನಮ್ಮ ವಿರುದ್ಧದ ದೂರುಗಳೆಲ್ಲ ಕೇವಲ ಊಹೆಗಳನ್ನು ಆಧರಿಸಿದ್ದಾಗಿದ್ದು, ಅವು ಯಾವುದೇ ಪೂರಕ ವಾಸ್ತವಾಂಶಗಳನ್ನು ಆಧರಿಸಿದ್ದಲ್ಲ ಎಂದೂ ಅರ್ಜಿ ಹೇಳಿದೆ.

ಕೇವಲ ಊಹೆಗಳ ಆಧಾರದಲ್ಲಿ ಅರ್ಜಿದಾರರ ಮೇಲೆ ವಿಧಾನಸಭೆಯಲ್ಲಿ ದಿಗ್ಬಂಧನ ವಿಧಿಸುವಕಿಡಿಗೇಡಿತನ ಸಾಧಿಸಲು ಹೊರಟಿದ್ದಾರೆ ಎಂದೂ ಅರ್ಜಿ ಹೇಳಿದೆ. ಕಾಂಗ್ರೆಸ್ ಪಕ್ಷದತ್ತ ದಾಟಿದ ಬಹುಜನ ಸಮಾಜ ಪಕ್ಷದ ಶಾಸಕರನ್ನು ಅನರ್ಹಗೊಳಿಸುವಂತೆ ನೀಡಲಾದ ದೂರಿನ ಬಗ್ಗೆ ನಿಷ್ಕ್ರಿಯರಾಗಿರುವ ವಿಧಾನಸಭಾಧ್ಯಕ್ಷರು, ಕಾಂಗ್ರೆಸ್ ಮುಖ್ಯ ಸಚೇತಕ ಮಹೇಶ ಜೋಶಿಯವರ ದೂರು ಬಂದ ಕೆಲವೇ ಗಂಟೆಗಳ ಒಳಗೆ ಜುಲೈ ೧೪ರಂದು ನಮಗೆ ನೋಟಿಸ್ ಜಾರಿಮಾಡಿದ್ದಾರೆ ಎಂದೂ ಅರ್ಜಿ ಗಮನ ಸೆಳೆದಿದೆ.

ಪಕ್ಷದಿಂದ ಉಚ್ಚಾಟನೆಗೊಂಡ ಶಾಸಕನಿಗೆ ವಿಧಾನಸಭೆಯ ಸದಸ್ಯನಾಗಿ ಮುಂದುವರೆಯಲು ಕಾನೂನಿನಲ್ಲಿ ಅವಕಾಶವಿದೆ ಎಂದು ಹೇಳಿದ ೧೯ ಶಾಸಕರ ಅರ್ಜಿ, ’ಕೇವಲ ಪಕ್ಷ ನಾಯಕರ ಇಷ್ಟಾನಿಷ್ಟಕ್ಕೆ ಅನುಗುಣವಾಗಿ ಶಾಸಕರೊಬ್ಬರು ತಮ್ಮ ಸದಸ್ಯತ್ವ ಕಳೆದುಕೊಂಡರೆ ಅದು ಗಂಭೀರ ಪರಿಣಾಮಗಳನ್ನು ಉಂಟು ಮಾಡಬಹುದು ಎಂದೂ ಹೇಳಿದೆ.

No comments:

Advertisement