Friday, July 17, 2020

ಭಾರೀ ಮಳೆ: ಮುಂಬೈ ಕಟ್ಟಡ ಕುಸಿತ, ಉತ್ತರಾಖಂಡದಲ್ಲಿ ಭೂಕುಸಿತ

ಭಾರೀ ಮಳೆ: ಮುಂಬೈ ಕಟ್ಟಡ ಕುಸಿತ,
ಉತ್ತರಾಖಂಡದಲ್ಲಿ ಭೂಕುಸಿತ

ಮುಂಬೈ: ಭಾರೀ ಮಳೆಯ ಪರಿಣಾಮವಾಗಿ ಮುಂಬೈಯಲ್ಲಿ 2020 ಜುಲೈ 16ರ ಗುರುವಾರ ಎರಡು ಕಟ್ಟಡಗಳು ಕುಸಿದಿದ್ದು ಹಲವರು ಸಿಕ್ಕಿಹಾಕಿಕೊಂಡಿದ್ದಾರೆ ಎಂದು ವರದಿಗಳು ಹೇಳಿವೆ. ಇದೇ ವೇಳೆಗೆ ಉತ್ತರಾಖಂಡದಲ್ಲಿ ಧಾರಾಕಾರ ಮಳೆಗೆ ಹಲವಡೆಗಳಲ್ಲಿ ಭೂಕುಸಿತಗಳು ಉಂಟಾಗಿ, ಬದರೀನಾಥದ ಚಾರ್ ಧಾಮಕ್ಕೆ ಹೋಗುವ ಹೆದ್ದಾರಿ ಸೇರಿ ಮೂರು ಹೆದ್ದಾರಿಗಳು ಬಂದ್ ಆಗಿವೆ.

ಮುಂಬೈಯ ಮಲಾಡ್‌ನ ಮಾಲ್ವಾನಿ ಪ್ರದೇಶ ಮತ್ತು ಕೋಟೆ ಪ್ರದೇಶದಲ್ಲಿ ಕಟ್ಟಡಗಳು ಕುಸಿದಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು.

ಗುರುವಾರ ಮಧ್ಯಾಹ್ನ ಕೋಟೆ ಪ್ರದೇಶದಲ್ಲಿ ನೆಲ ಮತ್ತು ಆರು ಅಂತಸ್ತಿನ ವಸತಿ ಕಟ್ಟಡದ ದೊಡ್ಡ ಭಾಗ ಕುಸಿಯಿತು. ಇಲ್ಲಿಯವರೆಗೆ ಯಾವುದೇ ಸಾವು ನೋವುಗಳು ವರದಿಯಾಗಿಲ್ಲ ಆದರೆ ಕೆಲವು ನಿವಾಸಿಗಳು ಅವಶೇಷಗಳ ಅಡಿಯಲ್ಲಿ ಸಿಕ್ಕಿಬಿದ್ದಿದ್ದಾರೆ ಎನ್ನಲಾಗಿದೆ.

ಲಕ್ಕಿ ಹೌಸ್ ಬಳಿಯ ಕೋಟೆಯ ಮಿಂಟ್ ರಸ್ತೆಯಲ್ಲಿರುವ ಭಾನುಶಾಲಿ ಕಟ್ಟಡದಲ್ಲಿ ಸಂಜೆ .೪೩ ಸುಮಾರಿಗೆ ಘಟನೆ ಘಟಿಸಿತು. ಎಂಟು ಅಗ್ನಿಶಾಮಕ ವಾಹನಗಳು, ಎರಡು ರಕ್ಷಣಾ ವ್ಯಾನ್‌ಗಳು ಮತ್ತು ಸುಮಾರು ೧೦ ಆಂಬುಲೆನ್ಸ್‌ಗಳನ್ನು ಸ್ಥಳಕ್ಕೆ ರವಾನಿಸಲಾಗಿದೆ. ಶೋಧ ಕಾರ್‍ಯಾಚರಣೆ ಪ್ರಗತಿಯಲ್ಲಿದೆ.

ಜನರು ಭಗ್ನಾವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದಾರೆ ಮತ್ತು ಕೆಲವರು ಕಟ್ಟಡದ ಉಳಿದ ಭಾಗದಲ್ಲಿ ಸಿಲುಕಿಕೊಂಡಿದ್ದಾರೆ. ಸಿಕ್ಕಿಬಿದ್ದ ವ್ಯಕ್ತಿಗಳಿಗಾಗಿ ಹುಡುಕಾಟ ಕಾರ್ಯಾಚರಣೆ ಪ್ರಗತಿಯಲ್ಲಿದೆ ಎಂದು ಮುಖ್ಯ ಅಗ್ನಿಶಾಮಕ ಅಧಿಕಾರಿ ಪ್ರಭಾತ್ ರಹಂಗ್‌ಡೇಲ್ ಹೇಳಿದರು.

ಕಟ್ಟಡವನ್ನು ಎಂಎಚ್‌ಎಡಿಎ ಖಾಲಿ ಮಾಡಿತ್ತು ಮತ್ತು ದುರಸ್ತಿ ಕಾರ್ಯ ಪ್ರಗತಿಯಲ್ಲಿತ್ತು. ಕಟ್ಟಡವನ್ನು ಖಾಲಿ ಮಾಡಿದ್ದರೂ ಸಹ, ಕೆಲವು ನಿವಾಸಿಗಳು ಅದರಲ್ಲಿ ವಾಸಿಸುತ್ತಿದ್ದರು ಎಂದು ಹಿರಿಯ ನಾಗರಿಕ ಅಧಿಕಾರಿಯೊಬ್ಬರು ತಿಳಿಸಿದರು.

ಮುಂಬೈಯಲ್ಲಿ ಕಳೆದ ಎರಡು ದಿನಗಳಿಂದ ಭಾರಿ ಮಳೆಯಾಗುತ್ತಿದೆ. ನಗರದ ಹಲವು ಪ್ರದೇಶಗಳಲ್ಲಿ ತಗ್ಗು ಪ್ರದೇಶಗಳಲ್ಲಿ ನೀರು ನಿಂತಿರುವ ವರದಿಗಳು ಬಂದಿವೆ. ವೆಸ್ಟರ್ನ್ ಎಕ್ಸ್‌ಪ್ರೆಸ್ ಹೆದ್ದಾರಿ ಸೇರಿದಂತೆ ನಗರದ ವಿವಿಧ ಭಾಗಗಳಲ್ಲಿ ಸಂಚಾರ ನಿಧಾನಗೊಂಡಿರುವ ವರದಿ ಬಂದಿದೆ.

ಉತ್ತರಾಖಂಡ ವರದಿ: ಭಾರಿ ಮಳೆಯಿಂದ ಉಂಟಾದ ಭೂಕುಸಿvದಿಂದಾಗಿ, ಮೂರು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚಾರ ಸ್ಥಗಿತಗೊಂಡಿದೆ.

ರಾತ್ರಿಯ ಮಳೆಯಿಂದ ಉಂಟಾದ ಭೂಕುಸಿತಗಳ ಪರಿಣಾಮವಾಗಿ ಗುರುವಾರ ಬೆಳಿಗ್ಗೆಯಿಂದ ಚಾರ್ ಧಾಮ್ ದೇಗುಲವಿರುವ ಬದ್ರಿನಾಥಕ್ಕೆ ಹೋಗುವ ರಾಷ್ಟ್ರೀಯ ಹೆದ್ದಾರಿ ಸ್ಥಗಿತಗೊಂಡಿದೆ.

ಉತ್ತರಕಾಶಿ ಜಿಲ್ಲೆಯ ಭಟ್ವಾಡಿ ಬಳಿಯ ಪರ್ವತಗಳಿಂದ ಭಗ್ನಾವಶೇಷಗಳು ಬಿದ್ದು, ಹೃಷಿಕೇಶ-ಗಂಗೋತ್ರಿ ರಾಷ್ಟ್ರೀಯ ಹೆದ್ದಾರಿ ಸ್ಥಗಿತಗೊಂಡಿದೆ ಎಂದು ಉತ್ತರಾಖಂಡ ಸರ್ಕಾರ ಗುರುವಾರ ಬೆಳಿಗ್ಗೆ ಪ್ರಕಟಿಸಿತು.

ದಾಬರ್ ಕೋಟ್ ಬಳಿ ಹೃಷಿಕೇಶ-ಯಮುನೋತ್ರಿ ರಾಷ್ಟ್ರೀಯ ಹೆದ್ದಾರಿ ಸಂಚಾರ ಸ್ತಬ್ಧಗೊಂಡಿದೆ. ಆದರೆ, ಯಮುನೋತ್ರಿ ಮತ್ತು ಗಂಗೋತ್ರಿ ಎರಡೂ ಹೆದ್ದಾರಿಗಳನ್ನು ಗುರುವಾರ ಮಧ್ಯಾಹ್ನದೊಳಗೆ ದುರಸ್ತಿ ಪಡಿಸಿ ಸಂಚಾರಕ್ಕೆ ತೆರೆಯಲಾಯಿತು.

ತೆಹ್ರಿ ಗರ್ವಾಲ್ ಜಿಲ್ಲೆಯಲ್ಲಿ, ಮುನಿ ಕಿ ರೆತಿ ತಪೋವನದಿಂದ ದೇವಪ್ರಯಾಗ ಕಡೆಗೆ ಸಾಗುವ ರಸ್ತೆಯನ್ನು ತಿಮಲು ಬಳಿ ಪರ್ವತಗಳಿಂದ ಬಂಡೆ ಬಿದ್ದ ಕಾರಣ ವಾಹನಗಳು ಸಂಚರಿಸದಂತೆ ಮುಚ್ಚಲಾಗಿದೆ.

ಉತ್ತರಕಾಶಿಯಲ್ಲಿ ಮೇಘಸ್ಫೋಟವಾಗಿ ಧಾರಾಕಾರ ಮಳೆ ಸುರಿದಿದೆ ಎಂದು ವರದಿಗಳು ಹೇಳಿವೆ.

No comments:

Advertisement