Monday, July 6, 2020

ಉದ್ವಿಗ್ನತೆ ಶಮನ: ಭಾರತ-ಚೀನಾ ಭರವಸೆ

ಉದ್ವಿಗ್ನತೆ ಶಮನ: ಭಾರತ-ಚೀನಾ ಭರವಸೆ

ನವದೆಹಲಿ
: ಉಭಯ ರಾಷ್ಟ್ರಗಳು ಗಡಿಯಿಂದ ಸೇನಾ ಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳಲು ನಿರ್ಧರಿಸಿರುವುದರಿಂದ ಗಡಿಯಲ್ಲಿ ಉದ್ವಿಗ್ನತೆ ಶಮನದ ಬಗ್ಗೆ ಹೆಚ್ಚಿನ ಭರವಸೆ ಮೂಡಿದೆ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ಚೀನೀ ವಿದೇಶಾಂಗ ಸಚಿವ ವಾಂಗ್ ಅವರ ವಿಶೇಷ  ಮಾತುಕತೆಗಳ ಬಳಿಕ ಭಾರತ 2020 ಜುಲೈ 06ರ ಸೋಮವಾರ  ಹೇಳಿಕೆ ನೀಡಿತು.

ಭಾನುವಾರ ನಡೆದ ಮಾತುಕತೆಯಲ್ಲಿ ಉಭಯ ಕಡೆಗಳೂ ಆದಷ್ಟೂ ಬೇಗ ನೈಜ ನಿಯಂತ್ರಣ ರೇಖೆಯಲ್ಲಿನ ಪಡೆಗಳನ್ನು ಸಂಪೂರ್ಣವಾಗಿ ಹಿಂದಕ್ಕೆ ಕರೆಸಿಕೊಳ್ಳುವುದು ಮತ್ತು ಗಡಿಯಲ್ಲಿ ಉದ್ವಿಗ್ನತೆ ನಿವಾರಿಸಿ ಪೂರ್ಣ ಪ್ರಮಾಣದ ಶಾಂತಿಸ್ಥಾಪನೆ ಅತ್ಯಗತ್ಯ ಎಂಬುದಾಗಿ ಒಪ್ಪಿವೆ ಎಂದು ಸರ್ಕಾರ ತಿಳಿಸಿತು.

ಮಾತುಕತೆಗಳಿಗೆ ಸಂಬಂಧಿಸಿದಂತೆ ಚೀನಾವು ಹೇಳಿಕೆಯೊಂದನ್ನು ಬಿಡುಗಡೆ ಮಾಡಿ ಭಾರತ ಮತ್ತು ಚೀನಾ ಏರಿಳಿತಗಳ ಪರೀಕ್ಷೆಯನ್ನು  ತಡೆದುಕೊಂಡಿವೆ ಮತ್ತು ಈದಿನದ ಬೆಳವಣಿಗೆಯ ಸಾಧನೆ ಸುಲಭದ್ದಾಗಿರಲಿಲ್ಲ. ಕೆಲವೇ ದಿನಗಳ ಹಿಂದೆ ಗಲ್ವಾನ್ ಕಣಿವೆಯಲ್ಲಿ ಏನಾಗಿತ್ತು ಎಂಬುದು ಅತ್ಯಂತ ಸ್ಪಷ್ಟ. ಚೀನಾವು ಪರಿಣಾಮಕಾರಿಯಾಗಿ ತನ್ನ ಪ್ರಾದೇಶಿಕ ಸಾರ್ವಭೌಮತೆಯನ್ನು ರಕ್ಷಿಸುವುದು ಎಂದು ಹೇಳಿತು.

ಇದೇ ವೇಳೆಗೆ ಪ್ಯಾಂಗೊಂಗ್ ತ್ಸೊದಲ್ಲಿ ಸೇನಾ ಪಡೆಗಳ ವಾಪಸಾತಿ ಕುರಿತ ವರದಿಗಳನ್ನು ಭಾರತೀಯ ಸೇನೆ ನಿರಾಕರಿಸಿತು. ಪ್ಯಾಂಗೊಂಗ್ ತ್ಸೋದಲ್ಲಿ ಫಿಂಗರ್ ಪಾಯಿಂಟ್‌ವರೆಗೂ ಬಂದಿದ್ದ ಪಿಎಲ್‌ಎ ಬಂಕರ್ ಗಳನ್ನು ನಿರ್ಮಿಸಿ ಡೇರೆ ಸ್ಥಾಪನೆಗೂ ಮುಂದಾಗಿತ್ತಲ್ಲದೆ ಸಣ್ಣ ವಿಮಾನದಾಣವನ್ನೂ ನಿರ್ಮಿಸಿತ್ತು. ಭಾರತೀಯ ಸೈನಿಕರು ಫಿಂಗರ್ ಪಾಯಿಂಟ್‌ವರೆಗಿನ ಮುಂಚೂಣಿಯ ನೆಲೆಗಳಿಂದ ಪಹರೆ ನಡೆಸುವುದನ್ನು ಪಿಎಲ್‌ಎ ನಿರಾಕರಿಸಿತ್ತು. ಪ್ರದೇಶವು ನೈಜ ನಿಯಂತ್ರಣ ರೇಖೆಯ ವ್ಯಾಪ್ತಿಯಲ್ಲಿದೆ ಎಂಬುದಾಗಿ ಭಾರತದ ಹೇಳಿದೆ.

ಮಾಜಿ ಉತ್ತರ ಸೇನಾ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಡಿಎಸ್ ಹೂಡಾ ಅವರು ಸೋಮವಾರದ ಬೆಳವಣಿಗೆಯನ್ನು ಧನಾತ್ಮಕ ಎಂಬುದಾಗಿ ಬಣ್ಣಿಸಿದ್ದಾರೆ. ಹಿಂಸೆ ಇಲ್ಲದಿದ್ದರೆ, ಅದು ಮಾತುಕತೆ ಮತ್ತು ಒಪ್ಪಂದಗಳನ್ನು ರೂಪಿಸಲು ವೇದಿಕೆ ನಿರ್ಮಿಸುತ್ತದೆ. ಮೊದಲ ಕೋರ್ ಕಮಾಂಡರ್ ಸಭೆಯ ಬಳಿಕ, ಉತ್ತರದಿಂದ ಅಂದರೆ ಗಲ್ವಾನ್ ನಿಂದ ಹಂತ ಹಂತವಾಗಿ ಸೇನಾ ಪಡೆಗಳನ್ನು ತೆರವುಗೊಳಿಸುವ ಬಗ್ಗೆ ಸೇನಾ ಮುಖ್ಯಸ್ಥರು ಹೇಳಿದ್ದರು ಎಂದು ಹೂಡಾ ನುಡಿದರು.

ಇದನ್ನು ಹಾಳುಗೆಡವಿದ್ದು ಜೂನ್ ೧೫ರ ಹಿಂಸಾಚಾರ. ಈಗ ಹಿಂದಡಿ ಇಡುವ ಮೂಲಕ ಚೀನೀಯರು ಧನಾತ್ಮಕ ಸಂಕೇತವನ್ನು ನೀಡಿದ್ದಾರೆ. ಚುಮಾರ್, ಡೆಸ್ಪಾಂಗ್ ಮತ್ತು ಡೊಕ್ಲಾಮ್ ಬಿಕ್ಕಟ್ಟುಗಳು ರಾಜತಾಂತ್ರಿಕವಾಗಿ ಬಗೆಹರಿದಿವೆ. ಹಿಂಸಾಚಾರ ಇಲ್ಲದೇ ಇದ್ದದ್ದು ಇದಕ್ಕೆ ನೆರವಾಗಿತ್ತು ಎಂದು ಅವರು ಹೇಳಿದರು.

ಎನ್ ಎಸ್ ದೋವಲ್ ಮತ್ತು ಚೀನೀ ವಿದೇಶಾಂಗ ಸಚಿವರ ನಡುವಣ ರಾಜತಾಂತ್ರಿಕ ಮಟ್ಟದ ಮಾತುಕತೆ ತಿಂಗಳ ಕೊನೆಗೆ ಮುಂದುವರೆಯಲಿವೆ, ಜೊತೆಗೇ ಸೇನಾ ಮಟ್ಟದ ಮಾತುಕತೆಗಳೂ ಮುಂದುವರೆಯಲಿವೆ.

ಆದಾಗ್ಯೂ, ಚೀನಾದ ನಡೆ ನುಡಿಗಳ ಬಗ್ಗೆ ಭಾರತೀಯ ಸೇನೆ ಇನ್ನೂ ಎಚ್ಚರಿಕೆಯ ನಡೆಯನ್ನೇ ಅನುಸರಿಸಿದೆ. ಸೇನಾ ಪಡೆಗಳ ವಾಪಸಾತಿ ಪ್ರಕ್ರಿಯೆ ಆರಂಭವಾಗಿದ್ದರೂ, ಉದ್ವಿಗ್ನತೆ ಶಮನ ದೂರದ ಮಾತೇ ಎಂದು ಸೇನೆ ಹೇಳಿದೆ. ಈಗಾಗಲೇ ಚೀನೀ ಸೇನಾ ಪಡೆಗಳ ಜಮಾವಣೆಗೆ ವಿರುದ್ಧವಾಗಿ ಪೂರ್ವ ಲಡಾಖ್‌ನಲ್ಲಿ ನಿಯೋಜಿಸಲಾಗಿರುವ ೪೦,೦೦೦ ಪಡೆಗಳಿಗೆ ಚಳಿಗಾಲಕ್ಕೆ ಬೇಕಾದ ಸಿದ್ಧತೆಗಳನ್ನು ನಾವು ಆರಂಭಿಸಿದ್ದೇವೆ ಎಂದು ಸೇನಾ ಮೂಲಗಳು ಹೇಳಿವೆ.

ಪಿಎಲ್‌ಎ ತನ್ನ ಪಡೆಗಳು ಮತ್ತು ಯುದ್ಧೋಪಕರಣಗಳನ್ನು ಸಂಪೂರ್ಣವಾಗಿ ಹಿಂದಕ್ಕೆ ಒಯ್ಯುವವರೆಗೂ ಏಪ್ರಿಲ್ ಆದಿಯಲ್ಲಿದ್ದ ಯಥಾಸ್ಥಿತಿ ಮರಳುವುದಿಲ್ಲ. ಅವರು ವಾಪಸ್ ಬರಬಹುದಾದ ಅಪಾಯ ಯಾವಾಗಲೂ ಇದ್ದದ್ದೇ ಎಂದು ಅಧಿಕಾರಿಯೊಬ್ಬರು ಹೇಳಿದರು.

No comments:

Advertisement