Friday, December 18, 2020

ಕೊರೋನಾ ಕಾಳ್ಗಿಚ್ಚಿನಂತೆ ಹರಡಿದೆ: ಸುಪ್ರೀಂಕೋರ್ಟ್

 ಕೊರೋನಾ ಕಾಳ್ಗಿಚ್ಚಿನಂತೆ ಹರಡಿದೆ: ಸುಪ್ರೀಂಕೋರ್ಟ್

ನವದೆಹಲಿ: ಮಾರ್ಗಸೂಚಿಗಳು ಮತ್ತು ಎಸ್ಒಪಿಗಳ ಅನುಷ್ಠಾನದ ಕೊರತೆಯ ಕಾರಣ ಕೋವಿಡ್ -೧೯ ಸಾಂಕ್ರಾಮಿಕ ರೋಗವು ಕಾಳ್ಗಿಚ್ಚಿನಂತೆ (ಕಾಡಿನ ಬೆಂಕಿ) ಹರಡಿದೆ ಎಂದು ಸುಪ್ರೀಂ ಕೋರ್ಟ್ 2020 ಡಿಸೆಂಬರ್ 18ರ ಶುಕ್ರವಾರ ಹೇಳಿತು.

ಜಗತ್ತಿನ ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯಲ್ಲಿ ಬಳಲುತ್ತಿದ್ದಾರೆ. ಹೋರಾಟವು ಕೋವಿಡ್ -೧೯ ವಿರುದ್ಧದ ವಿಶ್ವ ಸಮರವಾಗಿದೆ ಎಂದು ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಆರ್ ಸುಭಾಷ್ ರೆಡ್ಡಿ ಮತ್ತು ಎಂ.ಆರ್.ಶಾ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ಪೀಠ ಹೇಳಿತು.

ಹೆಚ್ಚಿನ ಜಾಗರೂಕತೆ ಮತ್ತು ಕಣ್ಗಾವಲು ವಹಿಸುವಂತೆ ಕರೆ ನೀಡಿದ ನ್ಯಾಯಪೀಠ, ಅಧಿಕಾರಿಗಳು ಕರ್ಫ್ಯೂ ಅಥವಾ ಲಾಕ್ಡೌನ್ ವಿಧಿಸಲು ನಿರ್ಧರಿಸುವುದಾದರೆ, ಅದನ್ನು ಮೊದಲೇ ಪ್ರಕಟಿಸಬೇಕು. ಇದರಿಂದ ಜನರು ತಮ್ಮ ಜೀವನೋಪಾಯಕ್ಕೆ ಅವಕಾಶಗಳನ್ನು ಕಲ್ಪಿಸಿಕೊಳ್ಳಬಹುದು ಎಂದು ಸಲಹೆ ಮಾಡಿತು.

ಕೋವಿಡ್ -೧೯ ಮಾರ್ಗಸೂಚಿಗಳು ಮತ್ತು ಎಸ್ಒಪಿಗಳನ್ನು ಉಲ್ಲಂಘಿಸುವವರ ವಿರುದ್ಧ ಅವರ ಸ್ಥಾನಮಾನ ಲೆಕ್ಕಿಸದೆ ಕಠಿಣಾತಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಸೂಚಿಸಿತು.

ಜನರ ಸಂದಣಿ ಹೆಚ್ಚುವಂತಹ ಆಹಾರ/ ತಿನಿಸುಗಳ ಮಾರಾಟದ ಸ್ಥಳಗಳು, ನ್ಯಾಯಾಲಯಗಳು, ತರಕಾರಿ ಮಾರುಕಟ್ಟೆಗಳು, ಸಬ್ಜಿ ಮಂಡಿಗಳು, ಬಸ್ ನಿಲ್ದಾಣಗಳು, ರೈಲ್ವೆ ನಿಲ್ದಾಣಗಳು ಮುಂತಾz ಕಡೆಗಳಲ್ಲಿ ಹೆಚ್ಚಿನ ಪೊಲೀಸ್ ಸಿಬ್ಬಂದಿ ಇರಬೇಕು ಎಂದು ನ್ಯಾಯಪೀಠ ಹೇಳಿತು.

ಯಾವುದೇ ಆಚರಣೆಗೆ ಸಾಧ್ಯವಾದಷ್ಟೂ ಅನುಮತಿ ನೀಡಬಾರದು. ಅಂತಹ ಸಭೆಗೆ ಹಾಜರಾಗುವ ಜನರ ಸಂಖ್ಯೆಯನ್ನು ಪರಿಶೀಲಿಸಲು ಯಾಂತ್ರಿಕ ವ್ಯವಸ್ಥೆ ಇರಬೇಕು ಎಂದು ಸುಪ್ರೀಂಕೋರ್ಟ್ ಹೇಳಿತು.

ಕೊರೋನಾವೈರಸ್ ಸಾಂಕ್ರಾಮಿಕ ಪತ್ತೆಗಾಗಿ ಹೆಚ್ಚು ಹೆಚ್ಚು ಪರೀಕ್ಷೆಗಳು ನಡೆಸಬೇಕು ಮತ್ತು ಸರಿಯಾದ ಸಂಗತಿಗಳು ಮತ್ತು ಅಂಕಿಅಂಶಗಳನ್ನು ಘೋಷಿಸುವುದರತ್ತ ಗಮನ ಹರಿಸಬೇಕು ಎಂದೂ ಪೀಠ ಹೇಳಿತು.

"ಕೊರೋನಾ ಸೋಂಕಿತ ವ್ಯಕ್ತಿಗಳ ಪರೀಕ್ಷೆ ಮತ್ತು ನೈಜ ಮತ್ತು ಅಂಕಿಅಂಶಗಳನ್ನು ಘೋಷಿಸುವಲ್ಲಿ ಪಾರದರ್ಶಕತೆ ಅಗತ್ಯ. ಇಲ್ಲದಿದ್ದರೆ, ಜನರನ್ನು ದಾರಿ ತಪ್ಪಿಸಿದಂತಾಗುತ್ತದೆ ಮತ್ತು ಎಲ್ಲವೂ ಸರಿಯಾಗಿದೆ ಎಂದುಕೊಂಡು ಜನರು ನಿರ್ಲಕ್ಷ್ಯ ವಹಿಸುತ್ತಾರೆ ಎಂದು ಪೀಠ ಹೇಳಿತು.

ವಾರಾಂತ್ಯದಲ್ಲಿ / ರಾತ್ರಿಯಲ್ಲಿ ಕರ್ಫ್ಯೂ ಹೇರುವುದನ್ನು, ಇಂತಹ ಕ್ರಮ ಕೈಗೊಳ್ಳದ ರಾಜ್ಯಗಳು ಪರಿಗಣಿಸಬಹುದು. ಹೇಗಾದರೂ, ಕರ್ಫ್ಯೂ ಅಥವಾ ಲಾಕ್ ಡೌನ್ ವಿಧಿಸುವ ಯಾವುದೇ ನಿರ್ಧಾರವನ್ನು ಸಾಕಷ್ಟು ಮುಂಚಿತವಾಗಿಯೇ  ಘೋಷಿಸಬೇಕು, ಇದರಿಂದ ಜನರು ಪಡಿತರದಂತೆ ಜೀವನೋಪಾಯ ವ್ಯವಸ್ಥೆ ಮಾಡಿಕೊಳ್ಳಬಹುದು. ಸರ್ಕಾರಕ್ಕೂ ಅವುಗಳನ್ನು ಒದಗಿಸಲು ಅವಕಾಶವಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿತು.

"ಮತ್ತೊಂದು ಪ್ರಮುಖ ವಿಷಯವೆಂದರೆ ಮುಂಚೂಣಿ ಆರೋಗ್ಯ ಅಧಿಕಾರಿಗಳ ಆಯಾಸ. ಎಂಟು ತಿಂಗಳ ಕಾಲ ದಣಿವರಿಯದ ಕೆಲಸದಿಂದಾಗಿ ಅವರು ಈಗಾಗಲೇ ದೈಹಿಕವಾಗಿ ಮತ್ತು ಮಾನಸಿಕವಾಗಿ ದಣಿದಿದ್ದಾರೆ. ಅವರಿಗೆ ಮಧ್ಯಂತರ ವಿಶ್ರಾಂತಿ ನೀಡಲು ಕೆಲವು ಕಾರ್ಯವಿಧಾನಗಳು ಬೇಕಾಗಬಹುದು ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿತು.

No comments:

Advertisement