
ಅಶ್ವಮೇಧದ ಕುದುರೆಗೆ 'ಲಗಾಮು'..!
ಜಾಗತೀಕರಣ ಎಂಬ ಅಶ್ವಮೇಧದ ಕುದುರೆಯನ್ನು ಹಿಡಿದು ಕಟ್ಟಿಹಾಕಿ ಪಳಗಿಸಿ ಅದರ ಮೂಲಕ ತಮ್ಮ ಕನ್ನಡ ಅಕ್ಷರಕ್ಕೆ ಹೊಸ ವಿನ್ಯಾಸ ನೀಡಿ ಚಂದ ಮಾಡಲು ಮನೋಹರ ಆಚಾರ್ಯ ಯತ್ನಿಸಿದ್ದಾರೆ. ಹೌದು! ಅವರ 'ಚಂದದ ಕನ್ನಡ' ರೂಪುಗೊಂಡದ್ದು ಹೇಗೆ?
ನೆತ್ರಕೆರೆ ಉದಯಶಂಕರ
ಜಾಗತೀಕರಣ ಎಂದರೆ ಅಶ್ವಮೇಧದ ಕುದುರೆ.! ಯಾರು ಅದನ್ನು ಹಿಡಿದು ಕಟ್ಟಿ ಹಾಕಬಲ್ಲರೋ ಅವರು ಅದಕ್ಕೆ ಅಧಿಪತಿಯಾಗುತ್ತಾರೆ. ಅದನ್ನು ತಮಗೆ ಬೇಕಾದಂತೆ ಪಳಗಿಸುತ್ತಾರೆ. ಅದರಿಂದ ತಮಗೆ ಬೇಕಾದ ಲಾಭ ಪಡೆಯುತ್ತಾರೆ.
ಈ ಅಶ್ವಮೇಧದ ಕುದುರೆಯನ್ನು ಕಟ್ಟಿ ಹಾಕಿ ನಮಗೆ ಬೇಕಾದಂತೆ ಪಳಗಿಸುವ ವಿದ್ಯೆಯನ್ನು ನಾವು ಇಂದು ಕರಗತ ಮಾಡಿಕೊಳ್ಳಬೇಕು.
ಹಿರಿಯ ಕಲಾವಿದ, ವಿನ್ಯಾಸಕಾರ, ಪತ್ರಕರ್ತ ಮನೋಹರ ಆಚಾರ್ಯ ಅವರ ವಿಚಾರ ಲಹರಿ ಹೀಗೆ ಓಡುತ್ತಿತ್ತು.
'ಕನ್ನಡ ಅಕ್ಷರಗಳ ವಿನ್ಯಾಸಕ್ಕೆ ಸಂಬಂಧಪಟ್ಟಂತೆಯೂ ಅಷ್ಟೇ. ನಾವು ಜಾಗತೀಕರಣದ ಅಶ್ವಮೇಧದ ಕುದುರೆಯನ್ನು ಕಟ್ಟಿ ಹಾಕುವ ಪ್ರಯತ್ನವನ್ನೇ ಮಾಡಿಲ್ಲ. ಇಂಗ್ಲಿಷ್ ಅಕ್ಷರಗಳ ವಿನ್ಯಾಸ ನೋಡಿ.. ಅವರು ಅದನ್ನು ಪಳಗಿಸಿದ ಬಗೆ ನೋಡಿ..'
'ನಾನು ಈಗ ಇಲ್ಲಿ ಅಂತಹ ಒಂದು ಯತ್ನ ಮಾಡಿದ್ದೇನೆ. ಕನ್ನಡ ಅಕ್ಷರಗಳಿಗೆ 'ವಿನ್ಯಾಸ'ದ ಹೊಸ ರೂಪ ನೀಡಲು ಪ್ರಯತ್ನಿಸಿದ್ದೇನೆ. ಜಾಗತೀಕರಣವೆಂಬ ಕುದುರೆಯನ್ನು ಅದಕ್ಕೆ ಬಳಸಿಕೊಂಡಿದ್ದೇನೆ'
ಮಂಗಳೂರಿನಲ್ಲಿ ಮಾರ್ಚ್ 14ರಿಂದ 18ರವರೆಗೆ ನಡೆಯಲಿರುವ ತಮ್ಮ 'ಚಂದದ ಕನ್ನಡ' ಪ್ರದರ್ಶನ ಬಗ್ಗೆ ಮಾತನಾಡುತ್ತಾ ಮನೋಹರ ಆಚಾರ್ಯ ಅವರು ಕನ್ನಡ ಅಕ್ಷರಗಳಿಗೆ ನೀಡಬಹುದಾದ ಹೊಸತನದ ಸಾಧ್ಯತೆಗಳ ಕುರಿತು ತಮ್ಮ ಮನದಾಳದ ಮಾತುಗಳನ್ನು ಬಿಚ್ಚಿಟ್ಟ ಬಗೆ ಇದು.
ನಮ್ಮ ಪತ್ರಿಕೋದ್ಯಮ ಇರಬಹುದು, ಪುಸ್ತಕೋದ್ಯಮವೇ ಇರಬಹುದು. ಇಷ್ಟವರೆಗೂ ವಿಜೃಂಭಿಸುತ್ತಾ ಬಂದದ್ದು ವಿನ್ಯಾಸ ಅಲ್ಲ. ಕೇವಲ ಅಕ್ಷರಗಳು. ಈ ಅಕ್ಷರಗಳ ಮೇಲೆ ವಿನ್ಯಾಸ ಸವಾರಿ ಮಾಡಿದರೆ ಅದರ ಸೊಬಗೇ ಬೇರೆ. ವಿನ್ಯಾಸ ಇಲ್ಲದ ಮನೆ ಹೇಗೆ ಬಡವಾಗುತ್ತದೋ ಅದೇ ರೀತಿ ವಿನ್ಯಾಸ ಇಲ್ಲದ ಅಕ್ಷರ ಕೂಡಾ.
ಆಟದ ಅಂಗಳಕ್ಕೆ ಹೋಗಿ ನೋಡಿ. ಒಲಿಂಪಿಕ್ ಪ್ರವೇಶ ಬಯಸುವ ಕ್ರೀಡಾಳು ನೇರವಾಗಿ ಒಲಿಂಪಿಕ್ ಅಂಗಣಕ್ಕೆ ಧುಮುಕಿದರೆ ಏನಾಗುತ್ತದೆ, ಅದೇ ಆತ ಒಂದಷ್ಟು ತರಬೇತಿ ಪಡೆದು ನಂತರ ಅಂಗಣ ಪ್ರವೇಶಿಸಿದರೆ ಹೇಗಿರುತ್ತದೆ?
ತರಬೇತಿಯೇ ಇಲ್ಲದೆ ಪ್ರವೇಶಿಸಿದ ಓಟಗಾರ ಮೊದಲಿಗೇ ಮುಗ್ಗರಿಸಿದರೆ, ಒಂದಷ್ಟು ಪ್ರವೇಶ ಪಡೆದವ ಮುಂದಕ್ಕೆ ಓಡಲು ಶಕ್ತನಾಗುತ್ತಾನೆ.
ಕನ್ನಡ ಅಕ್ಷರಗಳಿಗೆ ಹೀಗೆ 'ವಿನ್ಯಾಸ'ದ ತರಬೇತಿ ಬೇಕು. ಆಗ ಬರುತ್ತದೆ ಅದಕ್ಕೊಂದು ಚಂದ. ಇಲ್ಲಿ 'ಚಂದದ ಕನ್ನಡ' ಅನಾವರಣಗೊಂಡಿರುವುದೂ ಇದೇ ಚಿಂತನೆಯ ಮೂಸೆಯಲ್ಲಿ ಎನ್ನುತ್ತಾರೆ ಮನೋಹರ ಆಚಾರ್ಯ.
ಬಹಳ ವರ್ಷಗಳಿಂದ ತಮ್ಮದೇ ಚಿಂತನೆಯಲ್ಲಿ ಮುಳುಗಿ 'ಚಂದದ ಕನ್ನಡ' ಹೇಗಿರಬೇಕು ಎಂದು ಕನಸು ಕಾಣುತ್ತಾ ಅದಕ್ಕೊಂದು ರೂಪಕೊಟ್ಟ ಮನೋಹರ ಆಚಾರ್ಯ ಅವರ ಕಲ್ಪನೆಯ ಕೂಸು ಇದೀಗ ಮಂಗಳೂರಿನ ಬಲ್ಲಾಳಬಾಗಿನಲ್ಲಿ ಇರುವ ಪ್ರಸಾದ ಆರ್ಟ್ ಗ್ಯಾಲರಿಯಲ್ಲಿ ಕಣ್ಣು ಬಿಡುತ್ತಿದೆ.
ಆಳ್ವಾಸ್ ಫೌಂಡೇಷನ್ನಿನ ಡಾ. ಎಂ. ಮೋಹನ ಆಳ್ವ ಅವರು ಮಾರ್ಚ್ 14ರ ಸಂಜೆ 4.30ಕ್ಕೆ ಪ್ರದರ್ಶನವನ್ನು ಉದ್ಘಾಟಿಸಿದರೆ, ಕಲಾವಿದ ಗಣೇಶ ಸೋಮಯಾಜಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುತ್ತಿದ್ದಾರೆ.
ಮಾರ್ಚ್ 14ರಿಂದ 18ರವರೆಗೆ ಈ 'ಚಂದದ ಕನ್ನಡ' ನೋಡಲು ತೆರೆದಿರುತ್ತದೆ.
ಹಾಂ. ಹೇಳಲು ಮರೆತದ್ದು- ದೀರ್ಘಕಾಲದಿಂದ 'ಸುಧಾ' 'ಪ್ರಜಾವಾಣಿ', 'ಮಯೂರ' ಬಳಗದಲ್ಲಿ ಸೇವೆ ಸಲ್ಲಿಸುತ್ತಿರುವ ಮನೋಹರ ಆಚಾರ್ಯ ಮೂಲತಃ ದಕ್ಷಿಣ ಕನ್ನಡದವರೇ.
ಆಚಾರ್ಯ ಅವರ ವಿನ್ಯಾಸದ ಮುಷ್ಠಿಯೊಳಗೆ ಪಳಗಿದ 'ಚಂದದ ಕನ್ನಡ'ವನ್ನು ನೋಡಲು, ನಿಮ್ಮ ಅಭಿಪ್ರಾಯವನ್ನು ನೋಂದಾಯಿಸಲು ಆರ್ಟ್ ಗ್ಯಾಲರಿಯತ್ತ ಹೆಜ್ಜೆ ಹಾಕುತ್ತಿರಲ್ಲ?
No comments:
Post a Comment