
ಬೇಕಾದ್ದು 'ಸಾಲ' ಶಿಕ್ಷಣವೋ?
'ಉಳಿತಾಯ' ಶಿಕ್ಷಣವೋ?
ಸಾಲವನು ಕೊಂಬಾಗ ಹಾಲೋಗರುಂಡಂತೆ, ಸಾಲಿಗನು ಬಂದು ಸೆಳೆವಾಗ ಕಿಬ್ಬದಿಯ ಕೀಲು ಮುರಿದಂತೆ' ಎಂಬುದಾಗಿ ಸರ್ವಜ್ಞ ತನ್ನ ವಚನಗಳಲ್ಲಿ ಹೇಳಿದ್ದು ನಮಗೆ ಮರೆತು ಹೋಗುತ್ತಿದೆಯೇ?
ನೆತ್ರಕೆರೆ ಉದಯಶಂಕರ
ದೇಶದ ಎಲ್ಲಾ ಮಕ್ಕಳಿಗೆ ಸದ್ಯದಲ್ಲೇ ಸಾಲ ಪಡೆಯುವ ವಿಧಾನ ಕಲಿಸುವ ಬಗ್ಗೆ ಕೇಂದ್ರ ಸರ್ಕಾರ ಪರಿಶೀಲಿಸುತ್ತಿದೆ ಎಂಬ ವರದಿಯೊಂದು ಬಂದಿದೆ. ದೇಶದ ಎಲ್ಲ ಶಾಲಾ ಮಕ್ಕಳೂ ಬ್ಯಾಂಕ್ ಖಾತೆ ತೆರೆಯುವುದು, ಕ್ರೆಡಿಟ್ ಕಾರ್ಡ್ ಬಳಸುವುದು, ಹಾಗೂ ಸಾಲ ಪಡೆಯುವ ವಿಧಾನವನ್ನು ಕಲಿಯಲಿದ್ದು ಇಂತಹ ವಿಷಯಗಳ ಬಗ್ಗೆ ಪಠ್ಯಕ್ರಮ ಆರಂಭಿಸುವ ಬಗ್ಗೆ ಪರಿಶೀಲನೆ ನಡೆದಿದೆ.
ಕೇಂದ್ರ ಹಣಕಾಸು ಇಲಾಖೆಯ ಜಂಟಿ ಕಾರ್ಯದರ್ಶಿ (ಬಂಡವಾಳ ಮಾರುಕಟ್ಟೆ) ಕೆ.ಪಿ. ಕೃಷ್ಣನ್ ಅವರ ಪ್ರಕಾರ ಕೇಂದ್ರ ಹಣಕಾಸು ಸಚಿವಾಲಯವು ಈ ವಿಷಯಗಳಿಗೆ ಸಂಬಂಧಿಸಿದಂತೆ ಪಠ್ಯಕ್ರಮ ಆರಂಭಿಸಲು ಮಾನವ ಸಂಪನ್ಮೂಲ ಇಲಾಖೆಯ ಜೊತೆ ಸಮಾಲೋಚನೆ ನಡೆಸುತ್ತಿದೆ.
ಆದಷ್ಟು ಬೇಗ ಶಾಲಾ ಶಿಕ್ಷಣ ಪಠ್ಯಗಳಲ್ಲಿ ಆರ್ಥಿಕ ಶಿಕ್ಷಣ ವಿಧಾನವನ್ನು ಸೇರಿಸುವಂತೆ ಎನ್ ಸಿಇಆರ್ ಟಿಗೆ ಹಣಕಾಸು ಸಚಿವಾಲಯ ಸೂಚಿಸಿದೆ. ದೇಶೀಯ ಬಂಡವಾಳ ಹೂಡಿಕೆದಾರರು ಹಣಕಾಸು ಶಿಕ್ಷಣದ ಕೊರತೆಯಿಂದ ಮಾರುಕಟ್ಟೆಯಲ್ಲಿ ಸಂಕಷ್ಟ ಎದುರಿಸುತ್ತಿರುವುದು ಸರ್ಕಾರದ ಈ ನಿಲುವಿಗೆ ಕಾರಣ ಎಂಬುದು ಅವರ ಸಮರ್ಥನೆ.
'ಸಾಲವನು ಕೊಂಬಾಗ ಹಾಲೋಗರುಂಡಂತೆ, ಸಾಲಿಗನು ಬಂದು ಸೆಳೆವಾಗ ಕಿಬ್ಬದಿಯ ಕೀಲು ಮುರಿದಂತೆ' ಎಂಬುದಾಗಿ ಸರ್ವಜ್ಞ ತನ್ನ ವಚನಗಳಲ್ಲಿ ಹೇಳಿದ್ದು ನಮಗೆ ಮರೆತು ಹೋಗುತ್ತಿದೆಯೇ?
ಸಾಲ ಎಂದರೆ ಸಾಕು ಹರದಾರಿ ಓಡುತ್ತಿದ್ದ ಕಾಲ ಮುಗಿದು ಹೋಗಿದೆ. ಬ್ಯಾಂಕುಗಳು ಕೈಕಾಲು ಹಿಡಿದು ಸಾಲ ನೀಡ

ನಮ್ಮ ಸರ್ಕಾರಗಳಂತೂ ಸಾಲ ಸಿಗುವ ಯಾವುದೇ ಅವಕಾಶ ಇದ್ದರೂ ಬಿಡದೆ ಸಾಲ ಪಡೆಯಲು ದುಂಬಾಲು ಬೀಳುತ್ತಿದೆ.
ಎಲ್ಲದರ ಪರಿಣಾಮ ಎಂದರೆ ಇಂದು ದೇಶದಲ್ಲಿ ಹುಟ್ಟುವ ಪ್ರತಿ ಮಗುವಿನ ತಲೆಯ ಮೇಲೂ ಸಹಸ್ರಾರು ರೂಪಾಯಿಗಳ ಸಾಲದ ಹೊರೆ ಇದೆ!
ಇದೆಲ್ಲದರ ಮಧ್ಯೆ ಈಗ ಶಾಲಾ ಹಂತದಲ್ಲೇ ಮಕ್ಕಳಿಗೆ 'ಸಾಲ ಪಡೆವ ಶಿಕ್ಷಣ' ನೀಡಲು ಸರ್ಕಾರ ಮುಂದಾಗಿದೆ! ಇದರಿಂದಾಗಿ ನಾವು ಪ್ರಗತಿಯ ಹೆಸರಿನಲ್ಲಿ ಮುಂದಕ್ಕೆ ಅಡಿ ಇಡುತ್ತಿದ್ದೇವೆಯೋ ಅಥವಾ ದಿನದಿಂದ ದಿನಕ್ಕೆ ಹಿಂದಕ್ಕೆ ಅಡಿ ಇಡುತ್ತಿದ್ದೇವೆಯೋ ಎಂಬ ಪ್ರಶ್ನೆ ಪ್ರಜ್ಞಾವಂತರನ್ನು ಕಾಡುವಂತಾಗಿದೆ.
ಆರ್ಥಿಕತೆ ಸದೃಢಗೊಳ್ಳುವುದು ಜನರಲ್ಲಿ ಉತ್ಪಾದಕತೆ ಹಾಗೂ ಉಳಿತಾಯದ ಮನೋವೃತ್ತಿ ಬಲಗೊಳ್ಳುವುದರಿಂದ ಹೊರತು ಸಾಲ ಪಡೆಯುವ ಮನೋವೃತ್ತಿ ಹೆಚ್ಚುವುದರಿಂದಲ್ಲ.
ನಮ್ಮ ದೇಶದಲ್ಲಿ ಇರುವುದು ಶೇಕಡಾ 70ಕ್ಕಿಂತಲೂ ಹೆಚ್ಚು ಕೃಷಿಕರು. ಆದರೆ ಸ್ವಾತಂತ್ರ್ಯ ಲಭಿಸಿದ ಕಳೆದ 60 ವರ್ಷಗಳಲ್ಲಿ ನಾವು ಕೃಷಿ ಉತ್ಪಾದಕತೆ ಹೆಚ್ಚಳ, ಕೃಷಿ ವೆಚ್ಚ ತಗ್ಗಿಸುವ ವಿಚಾರದಲ್ಲಿ ಮಕ್ಕಳಿಗೆ ಪಾಠ ಹೇಳಿಕೊಡುವ ಆಸಕ್ತಿ ತೆಗೆದುಕೊಂಡಿಲ್ಲ.
ಕೃಷಿಗೆ ಬೇಕಾಗುವ ಒಳಸುರಿಗೆ ಮಾಡುತ್ತಿರುವ ವೆಚ್ಚ ತಗ್ಗಿಸುವ, ಲಕ್ಷಾಂತರ ರೂಪಾಯಿ ಸಾಲ ಮಾಡಿ ಕೊಳವೆಬಾವಿಗಳನ್ನು ಕೊರೆಸುವ ಬದಲು ಮಳೆ ನೀರು ಇಂಗಿಸಿ ಭೂಮಿಯೊಳಗಿನ ಜಲಮಟ್ಟ ವೃದ್ಧಿಸುವ ದಾರಿ ಹೇಳಿಕೊಟ್ಟಿದ್ದಲ್ಲಿ, ಕೃಷಿಯ ಉತ್ಪನ್ನಗಳಿಂದ ಉಪ ಉತ್ಪನ್ನ, ಸಿದ್ಧವಸ್ತುಗಳನ್ನು ನಿರ್ಮಿಸುವ ಕೌಶಲ ಕಲಿಸಿಕೊಟ್ಟಿದ್ದಲ್ಲಿ ದೇಶದ ಅನ್ನದಾತರು ಸಹಸ್ರಾರು ಸಂಖ್ಯೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿ ದೇಶದಲ್ಲಿ ನಿರ್ಮಾಣ ಆಗುತ್ತಿರಲಿಲ್ಲ.
ನಮ್ಮ ಯುವಕರು ಹಳ್ಳಿಗಳಿಂದ ಉದ್ಯೋಗ ಅರಸುತ್ತಾ ನಗರಗಳಿಗೆ ಆಂಡಲೆಯಬೇಕಾದ ಸ್ಥಿತಿ ಬರುತ್ತಿರಲಿಲ್ಲ.
'ಸಾಲ ಪಡೆಯುವುದಕ್ಕೆ ಮಹತ್ವ' ಕೊಟ್ಟಿರುವ ನಮ್ಮ ಸರ್ಕಾರ ಈಗ ಬ್ಯಾಂಕುಗಳ ಮೂಲಕ ಸಾಲದ ಹೊರೆ ಹೊರಿಸಿ ಮಕ್ಕಳಿಗೆ ಒದಗಿಸುತ್ತಿರುವ ಶಿಕ್ಷಣವನ್ನು ಪಡೆಯುವ ಇಂದಿನ ಮಕ್ಕಳು ಕೂಡಾ ದೇಶದ ಬೆನ್ನೆಲುಬಾಗಿರುವ ಕೃಷಿ ಕ್ಷೇತ್ರವನ್ನು ಬಲಪಡಿಸುವ ಶಿಕ್ಷಣವನ್ನೇನೂ ಪಡೆಯುತ್ತಿಲ್ಲ.
ಪಡೆದ ಬೆರಳೆಣಿಕೆ ಮಂದಿಯೂ ನಗರಗಳಿಗೆ ಎಡತಾಕುವ ಮನೋವೃತ್ತಿ ಬೆಳೆಸಿಕೊಳ್ಳುತ್ತಾರೆ ಹೊರತು ಹಳ್ಳಿಗಳ ಅಭಿವೃದ್ಧಿಯತ್ತ ಅಥವಾ ದೇಶಕ್ಕೆ ಅನ್ನ ಒದಗಿಸುವ ಕೃಷಿಯ ಅಭಿವೃದ್ದಿಯತ್ತ ಅಲ್ಲ.
ನಮ್ಮ ಮಕ್ಕಳಿಗೆ 'ಆರ್ಥಿಕ ಶಿಕ್ಷಣ' ಖಂಡಿತ ಬೇಕು. ಆದರೆ, ಅದರ ಹೆಸರಿನಲ್ಲಿ ಸಾಲ ಮಾಡಲು ಕಲಿಸುವ ಶಿಕ್ಷಣ ಅಲ್ಲ. ಬ್ಯಾಂಕು ಖಾತೆ ತೆರೆಯುವ ಶಿಕ್ಷಣ ಬೇಕು, ಆದರೆ ಅಲ್ಲಿ ಉಳಿತಾಯ ಮಾಡುವುದು ಹೇಗೆ ಎಂಬ ಶಿಕ್ಷಣ ಅಗತ್ಯ.
ಮೊದಲು ಉಳಿತಾಯ ಮಾಡುವುದನ್ನು ಕಲಿತು ಆ ಉಳಿತಾಯದಿಂದಲೇ ಸಣ್ಣ ಮಟ್ಟದ ಸಾಲ ಪಡೆಯುತ್ತಾ ಆರ್ಥಿಕವಾಗಿ ಸಬಲವಾಗುವ ಶಿಕ್ಷಣವನ್ನು ದೇಶದಾದ್ಯಂತ ಸ್ವ ಸಹಾಯ ಸಂಘಗಳು ನಮ್ಮ ಜನರಿಗೆ, ವಿಶೇಷವಾಗಿ ಮಹಿಳೆಯರಿಗೆ ಕಲಿಸಿಕೊಟ್ಟು ಅವರು ಪ್ರಗತಿ ಪಥದಲ್ಲಿ ಮುನ್ನಡೆಯುವಂತೆ ಮಾಡುತ್ತಿವೆ.
ಮಕ್ಕಳಿಗೂ ಇಂತಹ ಶಿಕ್ಷಣದ ಜೊತೆಗೆ ತಾವು ಬೆಳೆದ ಅಥವಾ ಉತ್ಪಾದಿಸಿದ ವಸ್ತುಗಳಿಗೆ ಮಾರುಕಟ್ಟೆ ಪಡೆಯುವ ಕೌಶಲ್ಯವನ್ನೂ ಶಾಲೆಯಲ್ಲಿ ಹೇಳಿಕೊಟ್ಟದ್ದೇ ಆದರೆ ದೇಶೀಯ ಬಂಡವಾಳಗಾರರಿಗೆ ಬೇಕಾಗುವ ಬಂಡವಾಳವನ್ನು ಉಳಿತಾಯದ ಮೂಲಕವೇ ಒದಗಿಸಿಕೊಡುವಲ್ಲಿ ಮುಂದಿನ ಮುಂದಿನ ಜನಾಂಗ ಎಂದಿಗೂ ಹಿಂದೆ ಬೀಳದು ಎಂಬುದನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕು.
ನಮ್ಮ ತಲೆ ಮೇಲೆ 12,585ರೂ. ಸಾಲವಿದೆ !

ಕೇಂದ್ರ ಕೃಷಿ ಖಾತೆ ರಾಜ್ಯ ಮಂತ್ರಿ ಕಾಂತಿಲಾಲ ಭುರಿಯಾ ಇತ್ತೀಚೆಗೆ ಲೋಕಸಭೆಯಲ್ಲಿ ಲಿಖಿತ ಉತ್ತರದಲ್ಲಿ ಈ ಮಾಹಿತಿ ಒದಗಿಸಿದರು. ಆಂಧ್ರ ಪ್ರದೇಶ ಮತ್ತು ರಾಜಸ್ಥಾನ ರಾಜ್ಯಗಳ ಕೃಷಿಕ ಕುಟುಂಬಗಳ ತಲಾ ಆದಾಯಕ್ಕಿಂತ ಸಾಲದ ಸರಾಸರಿಯೇ ಹೆಚ್ಚಾಗಿದೆ ಎಂದು ಅವರು ಹೇಳಿದರು.
ಆದರೆ ಕೃಷಿಕರ ಸಾಲದ ಪ್ರಮಾಣ ಹೆಚ್ಚುತ್ತಿರುವುದಕ್ಕೆ ಮುಕ್ತವಾಗಿ ಸಾಂಸ್ಥಿಕ ಸಾಲ ದೊರಕುತ್ತಿರುವುದೇ ಕಾರಣ ಎಂಬ ಆರೋಪಗಳನ್ನು ಅವರು ನಿರಾಕರಿಸಿದರು.
89.45 ದಶಲಕ್ಷ ಕೃಷಿಕ ಕುಟುಂಬಗಳ ಪೈಕಿ 43.42 ದಶಲಕ್ಷ ಕೃಷಿಕ ಕುಟುಂಬಗಳು ಸಾಲದ ಹೊರೆ ಹೊತ್ತುಕೊಂಡಿವೆ. ಸಾಲ ಹೊತ್ತ ಕೃಷಿಕರ ಪೈಕಿ ಶೇಕಡಾ 54ರಷ್ಟು ದಶಲಕ್ಷ ಕೃಷಿಕ ಕುಟುಂಬಗಳು ಖಾಸಗಿ ಲೇವಾದೇವಿಗಾರರಿಂದ ಸಾಲ ಪಡೆದಿದ್ದು ಶೇಕಡಾ 46 ಕುಟುಂಬಗಳು ಬ್ಯಾಂಕ್, ಸಹಕಾರ ಸಂಸ್ಥೆಗಳು ಮತ್ತು ಸರ್ಕಾರದಿಂದ ಅಧಿಕೃತವಾಗಿ ಸಾಲ ಪಡೆದಿವೆ.
(ಕೃಪೆ: ಭಾರತೀಯ ಕೃಷಿ ವೈಭವ)
No comments:
Post a Comment