Friday, April 18, 2008

ಇಂದಿನ ಇತಿಹಾಸ History Today ಏಪ್ರಿಲ್ 17

ಇಂದಿನ ಇತಿಹಾಸ

ಏಪ್ರಿಲ್ 17

ಇಪ್ಪತ್ತೈದು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ನವದೆಹಲಿಯ ಚಿನ್ನದ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಅತ್ಯಂತ ಗರಿಷ್ಠ ಮಟ್ಟಕ್ಕೆ ಅಂದರೆ ಪ್ರತಿ 10 ಗ್ರಾಮಿಗೆ 9000 ರೂಪಾಯಿಗಳಿಗೆ, ಬೆಳ್ಳಿಯ ಬೆಲೆ ಪ್ರತಿ ಕಿ.ಗ್ರಾಂ.ಗೆ 20,000 ರೂಪಾಯಿಗಳಗೆ ಮುಟ್ಟಿತು.

ವಿಶ್ವ ಕುಸುಮ ದಿನ. ವಿಶ್ವ ಕುಸುಮ (ಹಿಮೋಫಿಲಿಯಾ) ರೋಗ ದಿನಾಚರಣೆಯನ್ನು ಪ್ರತಿ ವರ್ಷ ಏಪ್ರಿಲ್ 17ರಂದು ಹಮ್ಮಿಕೊಳ್ಳಲಾಗುತ್ತದೆ. ವಿಶ್ವ ಹಿಮೋಫಿಲಿಯಾ ಸಂಘಟನೆಯ ಸಂಸ್ಥಾಪಕ ಫ್ರ್ಯಾಂಕ್ ಶ್ಯಾನ್ ಬೆಲ್ನ ಸ್ಮರಣೆಯಲ್ಲಿ ಈ ದಿನವನ್ನು ಆಚರಿಸಲಾಗುತ್ತದೆ. 1989ರಿಂದ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗುತ್ತ್ದಿದು, ಜನರಲ್ಲಿ ಕುಸುಮ ರೋಗದ ಕುರಿತು ಜಾಗೃತಿ ಮೂಡಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಈ ರೋಗಕ್ಕೆ ಸಂಬಂಧಿಸಿದಂತೆ ಜನರಲ್ಲಿ ಇರುವ ತಪ್ಪು ಕಲ್ಪನೆ ಕೊನೆಗಾಣಿಸುವುದು ಸಂಘಟನೆಯ ಇನ್ನೊಂದು ಪ್ರಮುಖ ಉದ್ದೇಶ.

2007: ಖ್ಯಾತ ಕಾದಂಬರಿಕಾರ ತರಾಸು. ಅವರ ಪತ್ನಿ ಅಂಬುಜಾ ತರಾಸು (80) ಅವರು ಮೈಸೂರಿನ ಯಾದವಗಿರಿಯಲ್ಲಿನ ಗಿರಿಕನ್ನಿಕಾದಲ್ಲಿ ನಿಧನರಾದರು.

2007: ಭಾರತ ಸಂಜಾತೆ ಉಷಾ ಲೀ ಮೆಕ್ ಫಾರ್ಲಿಂಗ್ ಅವರನ್ನು ಒಳಗೊಂಡಿರುವ `ಲಾಸ್ ಏಂಜೆಲೀಸ್ ಟೈಮ್' ತಂಡಕ್ಕೆ ಪುಲಿಟ್ಜರ್ ಪ್ರಶಸ್ತಿ ಲಭಿಸಿತು.

2007: ಭಾರತೀಯ ಮೂಲದ ಅಮೆರಿಕನ್ ಗಗನಯಾನಿ ಸುನೀತಾ ವಿಲಿಯಮ್ಸ್ ಅವರು ಪೃಥ್ವಿಯಿಂದ 210 ಮೈಲಿ ದೂರದ ಬಾಹ್ಯಾಕಾಶದ ಅಟ್ಟಣಿಗೆಯಲ್ಲಿ ಟ್ರೆಡ್ ಮಿಲ್ (ನಡಿಗೆ ಯಂತ್ರ) ಮೇಲೆ ಓಡಿ ಬೋಸ್ಟನ್ ಮ್ಯಾರಥಾನ್ ಸ್ಪರ್ಧೆಯಲ್ಲಿ ಭಾಗವಹಿಸಿ ಯಶಸ್ವಿಯಾಗುವುದರೊಂದಿಗೆ ಮತ್ತೊಂದು ವಿಶಿಷ್ಟ ಸಾಧನೆ ಮಾಡಿದರು. ಬಾಹ್ಯಾಕಾಶ ಅಟ್ಟಣಿಗೆಯು ಗಂಟೆಗೆ ಎಂಟು ಮೈಲಿ ವೇಗದಲ್ಲಿ ದಿನಕ್ಕೆ ಎರಡು ಬಾರಿ ಭೂಪ್ರದಕ್ಷಿಣೆ ಮಾಡುವಾಗ ಸುನೀತಾ ಅವರು ಟ್ರಡ್ ಮಿಲ್ ನಲ್ಲಿ 4 ಗಂಟೆ 24 ನಿಮಿಷಗಳಲ್ಲಿ ಮ್ಯಾರಥಾನ್ ಗುರಿ ತಲುಪಿದರು. ಬೋಸ್ಟನ್ನಿನಲ್ಲಿ 24,000 ಸ್ಪರ್ಧಿಗಳು ಕೊರೆಯುವ ಚಳಿ ಹಾಗೂ ಇಬ್ಬನಿಯ ಪ್ರತಿಕೂಲ ವಾತಾವರಣದಲ್ಲಿ ಓಡುವ ಮೂಲಕ ಮ್ಯಾರಥಾನ್ ಓಟದಲ್ಲಿ ಪಾಲ್ಗೊಂಡರು.

2007: ಅಮೆರಿಕದ ಷೇರು ಕಂಪೆನಿಗಳನ್ನು ಬಯಲಿಗೆಳೆದ್ದಿದಕ್ಕಾಗಿ 2006ರಲ್ಲಿ ಸಾರ್ವಜನಿಕ ಸೇವಾ ಪ್ರಶಸ್ತಿಯೂ ಸೇರಿದಂತೆ ವಾಲ್ ಸ್ಟ್ರೀಟ್ ನಿಯತಕಾಲಿಕೆಯು ಎರಡು ಪುಲಿಟ್ಜರ್ ಪ್ರಶಸ್ತಿಗಳನ್ನು ಪಡೆಯಿತು.

2007: ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಈದಿನದಿಂದ ಜಾರಿಯಾಗುವಂತೆ ಬಿಹಾರ ಸರ್ಕಾರದ ಎಲ್ಲ ಸಿಬ್ಬಂದಿಗೆ 15 ದಿನಗಳ `ಪಿತೃತ್ವ ರಜೆ'ಗೆ ಅವಕಾಶ ಕಲ್ಪಿಸಿದರು. ಆದರೆ ಈ ಸವಲತ್ತು ಪಡೆಯಲು ಒಂದು ಕಠಿಣ ಷರತ್ತು ವಿಧಿಸಲಾಯಿತು. ಯಾರು ಕಡ್ಡಾಯವಾಗಿ ಇಬ್ಬರು ಮಕ್ಕಳನ್ನು ಹೊಂದಿರುತ್ತಾರೋ ಅವರಿಗಷ್ಟೇ ಈ ಸವಲತ್ತು ಲಭಿಸುತ್ತದೆ ಎಂಬುದೇ ಈ ಷರತ್ತು. ಅರ್ಹತಾ ಸಮಿತಿಯು ಕಳುಹಿಸಿದ ಪ್ರಸ್ತಾವದ ಬಗ್ಗೆ ಸುದೀರ್ಘ ಚರ್ಚೆಯ ಬಳಿಕ ಈ ನಿಟ್ಟಿನಲ್ಲಿ ಸರ್ಕಾರಿ ಆದೇಶವನ್ನು ಹೊರಡಿಸಲಾಯಿತು. ಮಹಿಳಾ ನೌಕರರ `ಮಾತೃತ್ವ ರಜೆ'ಯನ್ನು 90 ದಿನಗಳಿಂದ 135 ದಿನಗಳಿಗೆ ಏರಿಸಬೇಕು ಎಂಬುದಾಗಿ ಅರ್ಹತಾ ಸಮಿತಿಯು ಮಾಡಿದ ಸಲಹೆಗೂ ಸರ್ಕಾರ ಒಪ್ಪಿಗೆ ನೀಡಿತು. ಇದಕ್ಕೆ ಮುನ್ನ ಜನವರಿ 1ರಂದು ನಿತೀಶ್ ಕುಮಾರ್ ಸರ್ಕಾರವು ದೈನಂದಿನ ಕೆಲಸದ ಸಮಯವನ್ನು ಹೆಚ್ಚು ಮಾಡಿ ಐದು ದಿನಗಳ ಕೆಲಸದ ವಾರ ವ್ಯವಸ್ಥೆಯನ್ನು ಜಾರಿಗೆ ತಂದಿತ್ತು.
2007: ಏಪ್ರಿಲ್ 1ರಿಂದ ಜಾರಿಗೆ ಬರುವಂತೆ ಆನ್ ಲೈನ್ ಲಾಟರಿ, ಪೇಪರ್ ಲಾಟರಿ ಸೇರಿದಂತೆ ಎಲ್ಲ ಬಗೆಯ ಲಾಟರಿ ನಿಷೇಧಿಸಿ ಕರ್ನಾಟಕ ಸರ್ಕಾರವು ಮಾರ್ಚ್ 27ರಂದು ಹೊರಡಿಸಿದ್ದ ಅಧಿಸೂಚನೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿತು.

2006: ಇಪ್ಪತ್ತೈದು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ನವದೆಹಲಿಯ ಚಿನ್ನದ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಅತ್ಯಂತ ಗರಿಷ್ಠ ಮಟ್ಟಕ್ಕೆ ಅಂದರೆ ಪ್ರತಿ 10 ಗ್ರಾಮಿಗೆ 9000 ರೂಪಾಯಿಗಳಿಗೆ, ಬೆಳ್ಳಿಯ ಬೆಲೆ ಪ್ರತಿ ಕಿ.ಗ್ರಾಂ.ಗೆ 20,000 ರೂಪಾಯಿಗಳಗೆ ಮುಟ್ಟಿತು.

2006: ದೇಶದ ಕ್ಷೀರ ಕ್ರಾಂತಿಯ ಹರಿಕಾರ ವರ್ಗೀಸ್ ಕುರಿಯನ್ ಅವರನ್ನು ಅಲಹಾಬಾದ್ ವಿಶ್ವವಿದ್ಯಾಲಯದ ಕುಲಪತಿಯನ್ನಾಗಿ ನೇಮಕ ಮಾಡಲಾಯಿತು.

2006: ನರ್ಮದಾ ಸರೋವರ ಅಣೆಕಟ್ಟೆಯ ನಿರ್ಮಾಣ ಕಾಮಗಾರಿ ಮತ್ತು ಅಣೆಕಟ್ಟೆ ನಿರ್ಮಾಣದಿಂದ ಮನೆಮಠ ಕಳೆದುಕೊಳ್ಳುವವರಿಗೆ ಪರಿಣಾಮಕಾರಿ ಪುನರ್ ವಸತಿ ಈ ಎರಡೂ ಕಾರ್ಯ ಜೊತೆ ಜೊತೆಯಾಗಿಯೇ ಸಾಗಬೇಕು ಎಂದು ಸುಪ್ರೀಂಕೋರ್ಟ್ ನಿರ್ದೇಶಿಸಿತು. ತೀರ್ಪಿನ ಬೆನ್ನಲ್ಲೇ ಸರ್ದಾರ್ ಸರೋವರ ಯೋಜನೆಯಲ್ಲಿ ಸಂತ್ರಸ್ತರಾಗುವ ಮಂದಿಗೆ ಸೂಕ್ತ ಪರಿಹಾರ ನೀಡುವುದರ ಜೊತೆಗೆ ಮರುವಸತಿ ಕಲ್ಪಿಸಬೇಕು ಎಂದು ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳಿಗೆ ಆದೇಶ ನೀಡಿತು.
2006: ನರ್ಮದಾ ಅಣೆಕಟ್ಟೆಯಿಂದ ನಿರಾಶ್ರಿತರಾದವರಿಗೆ ಪರಿಣಾಮಕಾರಿ ಪುನರ್ ವಸತಿ ಕಲ್ಪಿಸದೇ ಇದ್ದರೆ ಮೇ 1ರಿಂದ ಅಣೆಕಟ್ಟೆ ಕಾಮಗಾರಿ ನಿಲ್ಲಿಸುವುದಾಗಿ ಸುಪ್ರೀಂಕೋರ್ಟ್ ಎಚ್ಚರಿಕೆ ನೀಡಿದ್ದನ್ನು ಅನುಸರಿಸಿ ನರ್ಮದಾ ಬಚಾವೊ ಆಂದೋಲನದ ನಾಯಕಿ ಮೇಧಾ ಪಾಟ್ಕರ್ ತಮ್ಮ 20 ದಿನಗಳ ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಿದರು.

2006: ರಾಯ್ ಬರೇಲಿ ಲೋಕಸಭಾ ಕ್ಷೇತ್ರ ಉಪಚುನಾವಣೆಗೆ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಕಾಂಗ್ರೆಸ್ ಅಭ್ಯರ್ಥಿಯಾಗಿ ರಾಯ್ ಬರೇಲಿಯಲ್ಲಿ ನಾಮಪತ್ರ ಸಲ್ಲಿಸಿದರು.

2006: ದೇಶದ ಮೊದಲ ಬೃಹತ್ ಜೈವಿಕ ತಂತ್ರಜ್ಞಾನ ಕೇಂದ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಬಯೋಕಾನ್ ಫಾರ್ಮಾಸ್ಯೂಟಿಕಲ್ಸ್ ಕೇಂದ್ರಕ್ಕೆ ಬೆಂಗಳೂರು ಹೊರವಲಯದ ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದಲ್ಲಿ ಕೇಂದ್ರ ಹಣಕಾಸು ಸಚಿವ ಪಿ. ಚಿದಂಬರಂ ಚಾಲನೆ ನೀಡಿದರು.

2006: ಅಲಿಪ್ತ ಸದಸ್ಯ ರಾಷ್ಟ್ರಗಳ ಸುದ್ದಿ ಸಂಸ್ಥೆಗಳನ್ನು ಒಂದುಗೂಡಿಸಿ `ಅಲಿಪ್ತ ಸುದ್ದಿ ಸಂಸ್ಥೆ'ಯನ್ನು (ಎನ್ಎನ್ಎನ್) ಕ್ವಾಲಾಂಲಂಪುರದಲ್ಲಿ ಅಧಿಕೃತವಾಗಿ ಆರಂಭಿಸಲಾಯಿತು. ಜಗತ್ತಿಗೆ ಪರಿಣಾಮಕಾರಿಯಾಗಿ ತಮ್ಮ `ಕಥೆ' ಹೇಳಲು 114 ರಾಷ್ಟ್ರಗಳಿಗೆ ಅನುಕೂಲವಾಗುವಂತೆ ಈ ಮಾಧ್ಯಮವನ್ನು ಆರಂಭಿಸಲಾಯಿತು. ಮಲೇಷ್ಯಾದ `ಮೆದುಳಿನ ಕೂಸು' ಆಗಿರುವ ಈ ಸುದ್ದಿ ಸಂಸ್ಥೆಗೆ ಬೆರ್ನಾಮಾ ಎನ್ಎನ್ಎನ್ ಮುಖ್ಯಸ್ಥ ಮಲೇಷ್ಯನ್ ನ್ಯೂಸ್ ಏಜೆನ್ಸಿಯ ಬೆರ್ನಾಮ ಜಮೀಲ್ ಸೈಯದ್ ಜಾಫರ್ ಅವರೇ ಹಣಕಾಸು ಒದಗಿಸುವರು. ಇಂಟರ್ನೆಟ್ ಆಧಾರಿತ ಸಂಸ್ಥೆಯಾಗಿ ಇದು ಜೂನ್ ನಿಂದ ಕಾರ್ಯ ನಿರ್ವಹಿಸುವುದು ಎಂದು ಪ್ರಕಟಿಸಲಾಯಿತು.

2006: ದುಜೈಲ್ ಪಟ್ಟಣದಲ್ಲಿ 1982ರಲ್ಲಿ ಸದ್ದಾಂ ಹುಸೇನ್ ಅವರ ಹತ್ಯೆ ಯತ್ನ ನಡೆದ ಬಳಿಕ ನಡೆದ 148 ಶಿಯಾ ಮುಸ್ಲಿಮರ ಹತ್ಯೆ ಹಾಗೂ ಸೆರೆಮನೆಯಲ್ಲಿ ಅನೇಕರಿಗೆ ನೀಡಲಾದ ಚಿತ್ರಹಿಂಸೆಗೆ ಸಂಬಂಧಿಸಿದ ದಾಖಲೆಗಳಲ್ಲಿನ ಸಹಿ ಪದಚ್ಯುತ ಇರಾಕಿ ನಾಯಕ ಸದ್ದಾಂ ಹುಸೇನ್ ಅವರದ್ದೇ ಎಂದು ತಜ್ಞರು ದೃಢಪಡಿಸಿದರು. ಕೈಬರಹ ತಜ್ಞರ ವರದಿಯ ಪ್ರಕಾರ ಶಿಯಾ ಮುಸ್ಲಿಮರ ವಿರುದ್ಧದ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಜಾಗೃತಾ ಏಜೆಂಟರಿಗೆ ಬಹುಮಾನಗಳನ್ನು ಮಂಜೂರು ಮಾಡಿದ ದಾಖಲೆಗಳಲ್ಲಿ ಇರುವ ಸಹಿ ಸದ್ದಾಂ ಹುಸೇನ್ ಅವರದೇ ಎಂದು ಖಚಿತಗೊಂಡಿದೆ ಎಂದು ಬಾಗ್ದಾದಿನಲ್ಲಿ ಪುನರಾರಂಭವಾದ ಸದ್ದಾಂ ಹುಸೇನ್ ಹಾಗೂ 7 ಸಹಚರರ ವಿಚಾರಣೆ ಕಾಲದಲ್ಲಿ ಪ್ರಾಸಿಕ್ಯೂಟರ್ಗಳು ತಿಳಿಸಿದರು.

1961: ಭಾರತದ ಬಿಲಿಯರ್ಡ್ಸ್ ಆಟಗಾರ ಗೀತ್ ಸೇಥಿ ಹುಟ್ಟಿದ ದಿನ. ಬಿಲಿಯರ್ಡ್ಸ್ ನಲ್ಲಿ ಇವರು ಒಟ್ಟು 7 ವಿಶ್ವ ಪ್ರಶಸ್ತಿಗಳನ್ನು ಪಡೆದುದಲ್ಲದೆ 1985ರಲ್ಲಿ ವಿಶ್ವ ಅಮೆಚೂರ್ ಬಿಲಿಯರ್ಡ್ಸ್ ಚಾಂಪಿಯನ್ ಶಿಪ್ ಗೆದ್ದ ಅತ್ಯಂತ ಕಿರಿಯ ಆಟಗಾರ ಎಂಬ ಹೆಸರು ಪಡೆದರು.

1916: ಸಿರಿಮಾವೋ ಬಂಡಾರನಾಯಕೆ ಜನ್ಮದಿನ. ಈಕೆ ಇಂದಿನ ಶ್ರೀಲಂಕೆಯ (ಆಗಿನ ಸಿಲೋನ್) 1960ರ ಮಹಾಚುನಾವಣೆಯಲ್ಲಿ ತನ್ನ ಪಕ್ಷದ ಭಾರೀ ವಿಜಯಕ್ಕೆ ಕಾರಣರಾಗಿ ಪ್ರಧಾನಿ ಸ್ಥಾನಕ್ಕೆ ಏರಿದರು. ಈಕೆಗೆ ಜಗತ್ತಿನಲ್ಲೇ ಮೊತ್ತ ಮೊದಲ ಮಹಿಳಾ ಪ್ರಧಾನಿ ಎಂಬ ಹೆಗ್ಗಳಿಕೆ ಬಂತು.

1894: ನಿಕಿಟ ಖ್ರುಶ್ಚೇವ್ (1894-1971) ಜನ್ಮದಿನ. ಸೋವಿಯತ್ ಒಕ್ಕೂಟದ ಪ್ರಧಾನಿಯಾಗಿದ್ದ ಇವರು ರಾಷ್ಟ್ರದ ಮೇಲಿದ್ದ ಸ್ಟಾಲಿನ್ ಪ್ರಭಾವವನ್ನು ನಿವಾರಿಸುವ ನೀತಿಗಳನ್ನು ಅನುಷ್ಠಾನಕ್ಕೆ ತಂದರು.

1799: ಬ್ರಿಟಿಷರು ಮತ್ತು ಟಿಪ್ಪು ಸುಲ್ತಾನ್ ಮಧ್ಯೆ ನಡೆದ 4ನೇ ಮೈಸೂರು ಯುದ್ಧದ ಸಂದರ್ಭದಲ್ಲಿ ಶ್ರೀರಂಗಪಟ್ಟಣಕ್ಕೆ ಮುತ್ತಿಗೆ ಹಾಕಲಾಯಿತು. ಮೇ 4ರಂದು ಟಿಪ್ಪು ಸುಲ್ತಾನ್ ಸಾವಿನೊಂದಿಗೆ ಈ ಮುತ್ತಿಗೆ ಕೊನೆಗೊಂಡಿತು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement