Wednesday, May 7, 2008

ಇಂದಿನ ಇತಿಹಾಸ History Today ಮೇ 7

ಇಂದಿನ ಇತಿಹಾಸ

ಮೇ 7

ರಬೀಂದ್ರನಾಥ್ ಟ್ಯಾಗೋರ್ (1861-1941) ಜನ್ಮದಿನ. ಬಂಗಾಳಿ ಕವಿ, ಸಾಹಿತಿಯಾದ ಇವರು 1913ರಲ್ಲಿ ಸಾಹಿತ್ಯಕ್ಕಾಗಿ ನೊಬೆಲ್ ಪ್ರಶಸ್ತಿ ಪಡೆದ ಮೊದಲ ಏಷಿಯನ್ನರೆಂಬ ಹೆಗ್ಗಳಿಕೆ ಪಡೆದವರು. ಗಾಂಧೀಜಿಯವರನ್ನು ಮೊತ್ತ ಮೊದಲ ಬಾರಿಗೆ `ಮಹಾತ್ಮ' ಎಂಬುದಾಗಿ ಕರೆದದ್ದು ರಬೀಂದ್ರನಾಥ್ ಟ್ಯಾಗೋರ್ ಅವರೇ.

2007: ನೊಬೆಲ್ ಪ್ರಶಸ್ತಿ ಪುರಸ್ಕೃತ ಅಮರ್ತ್ಯಸೇನ್ ಅವರು ಮೊದಲ `ವಿಶ್ವ ಆರ್ಥಿಕ ಪ್ರಶಸ್ತಿ'ಗೆ ಆಯ್ಕೆಯಾದರು. ಅರ್ಥ ವ್ಯವಸ್ಥೆ ಮತ್ತು ಕಲ್ಯಾಣ ಕಾರ್ಯಕ್ರಮಗಳಲ್ಲಿನ ಮೂಲಭೂತ ಸಮಸ್ಯೆಗಳ ಸಂಶೋಧನೆಗೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಜರ್ಮನ್ ಮಾಜಿ ಚಾನ್ಸಲರ್ ಹೆಲ್ಮಂಡ್ ಶ್ಮಿಂಡ್ ಅವರೊಂದಿಗೆ ಸೇನ್ ಅವರನ್ನೂ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು.

2007: ಮೊದಲ ಸ್ವಾತಂತ್ರ್ಯ ಸಂಗ್ರಾಮದ 150ನೇ ವಾರ್ಷಿಕೋತ್ಸವದ ಅಂಗವಾಗಿ ಮೀರತ್ ನಿಂದ ದೆಹಲಿಗೆ ದೇಶಭಕ್ತಿ ಗೀತೆಗಳನ್ನು ಹಾಡುತ್ತಾ ಹೊರಟ 10,000ಕ್ಕೂ ಹೆಚ್ಚು ಯುವಕರ `ಯಾತ್ರೆ'ಗೆ ಮೀರತ್ ನಲ್ಲಿ ಕ್ರೀಡಾ ಮತ್ತು ಯುವಜನ ವ್ಯವಹಾರಗಳ ಸಚಿವ ಮಣಿ ಶಂಕರ ಅಯ್ಯರ್ ಚಾಲನೆ ನೀಡಿದರು.

2007: ಕಾವೇರಿ ನ್ಯಾಯಮಂಡಳಿ ನೀಡಿದ್ದ ಅಂತಿಮ ತೀರ್ಪನ್ನು ಪ್ರಶ್ನಿಸಿ ಕರ್ನಾಟಕ, ಕೇರಳ, ಮತ್ತು ತಮಿಳುನಾಡು ಸಲ್ಲಿಸಿದ್ದ ವಿಶೇಷ ಮೇಲ್ಮನವಿಗಳನ್ನು ಅಂಗೀಕರಿಸಿ ಅದನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸಲು ನಿರ್ಧರಿಸುವ ಮೂಲಕ ಸುಪ್ರೀಂಕೋರ್ಟ್ ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಇನ್ನೊಂದು ಸುತ್ತಿನ ಕಾನೂನು ಸಮರಕ್ಕೆ ಹಸಿರು ನಿಶಾನೆ ತೋರಿತು.

2007: ಢಾಕ್ಕಾಕ್ಕೆ ಮರಳುವುದಕ್ಕೆ ಕೊನೆ ಕ್ಷಣದಲ್ಲಿ ವಿಮಾನ ಏರಲು ಅವಕಾಶ ನಿರಾಕರಿಸಲಾದ 15 ದಿನಗಳ ನಂತರ ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ (60) ಅವರು ಲಂಡನ್ನಿನಿಂದ ಸ್ವದೇಶಕ್ಕೆ ಪ್ರಯಾಣ ಬೆಳೆಸಿದರು.

2007: ತೀವ್ರ ಹಣಾಹಣಿಯಿಂದ ಕೂಡಿದ್ದ ಫ್ರಾನ್ಸಿನ ಅಧ್ಯಕ್ಷೀಯ ಚುನಾವಣೆಯಲ್ಲಿ ಬಲಪಂಥೀಯ ಅಭ್ಯರ್ಥಿ ನಿಕೋಲಾಸ್ ಸರ್ಕೋಜಿ ಆಯ್ಕೆಯಾದ ಹಿನ್ನೆಲೆಯಲ್ಲಿ ರಾಷ್ಟ್ರದಾದ್ಯಂತ ಹಿಂಸಾಚಾರ ಭುಗಿಲೆದ್ದಿತು.

2006: ಇರಾನಿನ ದಕ್ಷಿಣಕ್ಕಿರುವ ಜರಾಂದ್ ಪಟ್ಟಣ ಹಾಗೂ ತೈವಾನಿನ ಕರಾವಳಿಯಲ್ಲಿ ರಿಕ್ಟರ್ ಮಾಪಕದಲ್ಲಿ 5.2ರಷ್ಟು ಪ್ರಮಾಣದ ಭಾರಿ ಭೂಕಂಪ ಸಂಭವಿಸಿತು. 74 ಮಂದಿ ಗಾಯಗೊಂಡು, ಬಹುತೇಕ ಮನೆಗಳು ಅಪಾರ ಪ್ರಮಾಣದಲ್ಲಿ ಹಾನಿಗೊಂಡವು.

2006: ಗ್ರಾಮೀಣ ಉನ್ನತೀಕರಣಕ್ಕೆ ವಿಜ್ಞಾನ ಮತ್ತು ತಂತ್ರಜ್ಞಾನದ ಬಳಕೆ `ಅಸ್ತ್ರ' ಸಂಸ್ಥೆಯ ಸ್ಥಾಪಕ ಎಕೆಎನ್ ಎಂದೇ ಖ್ಯಾತರಾಗಿದ್ದ ಪ್ರೊ. ಅಮೂಲ್ಯ ಕುಮಾರ ನಾರಾಯಣ ರೆಡ್ಡಿ (75) ಮೂತ್ರಪಿಂಡದ ವೈಫಲ್ಯದ ಪರಿಣಾಮವಾಗಿ ಬೆಂಗಳೂರಿನಲ್ಲಿ ಅಸು ನೀಗಿದರು. ಸೆಂಟ್ರಲ್ ಎಲೆಕ್ಟ್ರೋ ಕೆಮಿಕಲ್ ರೀಸರ್ಚ್ ಇನ್ ಸ್ಟಿಟ್ಯೂಟಿನಲ್ಲಿ ಸಂಶೋಧನಾ ಅಧಿಕಾರಿಯಾಗಿ ಹಾಗೂ ಭಾರತೀಯ ವಿಜ್ಞಾನ ಸಂಸ್ಥೆಯ ಭೌತ ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದ ರೆಡ್ಡಿ, ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ `ಅಸ್ತ್ರ' ಸಂಸ್ಥೆಯನ್ನು ಹುಟ್ಟು ಹಾಕಿದ್ದರು. ಎನರ್ಜಿ ಫಾರ್ ಸಸ್ಟೈನೇಬಲ್ ವರ್ಲ್ಡ್ಡ್ ಸಂಸ್ಥೆಯು ಇವರಿಗೆ 2000ದಲ್ಲಿ ವೋಲ್ವೊ ಪ್ರಶಸ್ತಿ ನೀಡಿ ಗೌರವಿಸಿತ್ತು. 2002ರಲ್ಲಿ ಸರ್. ಎಂ. ವಿಶ್ವೇಶ್ವರಯ್ಯ ರಾಜ್ಯ ಪ್ರಶಸ್ತಿ ಕೂಡಾ ಇವರಿಗೆ ಲಭಿಸಿತ್ತು.

2006: ಮಧ್ಯಪ್ರದೇಶ ಸರ್ಕಾರದ ಸಂಸ್ಕೃತಿ ಇಲಾಖೆಯು ಲಘು ಸಂಗೀತದಲ್ಲಿ ಮಾಡಿದ ಸಾಧನೆಗೆ ನೀಡುವ ಲತಾ ಮಂಗೇಶ್ಕರ್ ರಾಷ್ಟ್ರೀಯ ಪ್ರಶಸ್ತಿಯನ್ನು ಖ್ಯಾತ ಹಿನ್ನಲೆ ಗಾಯಕಿ ಕವಿತಾ ಕೃಷ್ಣಮೂರ್ತಿ ಅವರಿಗೆ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಇಲ್ಲಿನ ನೆಹರೂ ಕ್ರೀಡಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಪ್ರದಾನ ಮಾಡಿದರು. ಪ್ರಶಸ್ತಿಯು ಒಂದು ಲಕ್ಷ ರೂಪಾಯಿ ನಗದು ಬಹುಮಾನ ಹಾಗೂ ಪ್ರಶಸ್ತಿ ಫಲಕವನ್ನು ಹೊಂದಿದೆ.

1978: ಇಟಲಿಯ ರೀನ್ ಹೋಲ್ಡ್ ಮೆಸ್ನರ್ ಮತ್ತು ಆಸ್ಟ್ರಿಯಾದ ಪೀಟರ್ ಹಬೆರ್ಲರ್ ಆಮ್ಲಜನಕ ಇಲ್ಲದೆಯೇ ಮೊತ್ತ ಮೊದಲ ಬಾರಿಗೆ ಮೌಂಟ್ ಎವರೆಸ್ಟ್ ಏರಿದರು.

1956: ಕಲಾವಿದ ವಲ್ಲೀಶ್ ವಿ. ಜನನ.

1955: ಕಲಾವಿದ ರಮೇಶ ಟಿ.ಎನ್. ಜನನ.

1949: ಸಂಗೀತ ಹಾಗೂ ಶಿಕ್ಷಣ ತಜ್ಞ ಡಾ. ಎಸ್.ವಿ. ರಮಣಕುಮಾರ್ ಅವರು ಜಿ.ಎಲ್. ಸೂರಪ್ಪ- ಕಮಲಮ್ಮ ದಂಪತಿಯ ಮಗನಾಗಿ ಕೋಲಾರ ಜಿಲ್ಲೆಯ ಶ್ರೀನಿವಾಸಪುರದಲ್ಲಿ ಜನಿಸಿದರು.

1945: ಕಲಾವಿದ ಶೆಲ್ವ ನಾರಾಯಣ ಜನನ.

1915: ಜರ್ಮನಿಯ ಯು-139 ಜಲಾಂತರ್ಗಾಮಿ ಮೂಲಕ ಸಿಡಿಸಿದ ಜಲಕ್ಷಿಪಣಿ (ಟಾರ್ಪೆಡೊ) ಐರಿಷ್ ಕರಾವಳಿಯ ಬಳಿ ಇದ್ದ ಬ್ರಿಟಿಷ್ ನೌಕೆ ಲುಸಿಟಾನಿಯಾವನ್ನು ಮುಳುಗಿಸಿತು. ಅದರಲ್ಲಿದ್ದ ಸುಮಾರು 1200 ಜನ ಮೃತರಾದರು.

1888: ಜಾರ್ಜ್ ಈಸ್ಟ್ ಮನ್ ಮೊದಲ ಬಾರಿಗೆ ಅಮೆರಿಕನ್ ಮಾರುಕಟ್ಟೆಗೆ ಕೊಡಕ್ ಕ್ಯಾಮರಾವನ್ನು ಪರಿಚಯಿಸಿದ. `ನೀವು ಬಟನ್ ಒತ್ತಿರಿ, ಉಳಿದದ್ದನ್ನೆಲ್ಲ ನಾವು ಮಾಡುತ್ತೇವೆ' ಎಂಬ ಘೋಷಣೆಯೊಂದಿಗೆ ಆತ ಈ ಕ್ಯಾಮರಾವನ್ನು ಮಾರುಕಟ್ಟೆಗೆ ಬಿಟ್ಟ. ಕೈಯಲ್ಲಿ ಹಿಡಿದುಕೊಳ್ಳಬಹುದಾದ ಈ ಸರಳ ಬಾಕ್ಸ್ ಕ್ಯಾಮರಾದಿಂದ 100 ಫ್ರೇಮುಗಳ ರೋಲ್ ಹಾಕಿ ಫೋಟೋ ತೆಗೆಯಬಹುದಿತ್ತು. ಫಿಲ್ಮ್ ಮುಗಿದ ಬಳಿಕ ಡೆವಲಪ್ಪಿಂಗ್, ಪ್ರಿಂಟಿಂಗ್, ರಿಲೋಡಿಂಗಿಗೆ ಕ್ಯಾಮರಾವನ್ನೇ ಉತ್ಪಾದಕರಿಗೆ ಕಳುಹಿಸಬಹುದಾಗಿತ್ತು.

1861: ರಬೀಂದ್ರನಾಥ್ ಟ್ಯಾಗೋರ್ (1861-1941) ಜನ್ಮದಿನ. ಬಂಗಾಳಿ ಕವಿ, ಸಾಹಿತಿಯಾದ ಇವರು 1913ರಲ್ಲಿ ಸಾಹಿತ್ಯಕ್ಕಾಗಿ ನೊಬೆಲ್ ಪ್ರಶಸ್ತಿ ಪಡೆದ ಮೊದಲ ಏಷಿಯನ್ನರೆಂಬ ಹೆಗ್ಗಳಿಕೆ ಪಡೆದವರು. ಗಾಂಧೀಜಿಯವರನ್ನು ಮೊತ್ತ ಮೊದಲ ಬಾರಿಗೆ `ಮಹಾತ್ಮ' ಎಂಬುದಾಗಿ ಕರೆದದ್ದು ರಬೀಂದ್ರನಾಥ್ ಟ್ಯಾಗೋರ್ ಅವರೇ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement