My Blog List

Thursday, May 8, 2008

ಇಂದಿನ ಇತಿಹಾಸ History Today ಮೇ 8

ಇಂದಿನ ಇತಿಹಾಸ

ಮೇ 8

ಇಂದು ವಿಶ್ವ ರೆಡ್ ಕ್ರಾಸ್ ದಿನ. ರೆಡ್ ಕ್ರಾಸ್ ಸಂಸ್ಥೆಯ ಸ್ಥಾಪನೆಗೆ ಕಾರಣನಾದ ಸ್ವಿಸ್ ವ್ಯಾಪಾರಿ ಹೆನ್ರಿ ಡ್ಯೂನಾಟ್ ಅವರ ಜನ್ಮದಿನ. 1859ರಲ್ಲಿ ಸೆಲ್ಫೋರಿನೋ ಎಂಬಲ್ಲಿ ಬರುತ್ತಿದ್ದಾಗ ಯುದ್ಧದಲ್ಲಿ ಸಹಸ್ರಾರು ಜನ ಸತ್ತು ಹಲವಾರು ಗಾಯಗೊಂಡು ನರಳುತ್ತಿದ್ದುದನ್ನು ಡ್ಯೂನಾಟ್ ನೋಡಿದರು. ತತ್ ಕ್ಷಣವೇ ತಮ್ಮ ಕೆಲಸ ಬದಿಗಿಟ್ಟು ಸ್ಥಳೀಯರ ನೆರವು ಪಡೆದು ಗಾಯಾಳುಗಳಿಗೆ ಸಹಾಯ ಮಾಡಿದರು. ಇದರೊಂದಿಗೆ ಹುಟ್ಟಿದ ರೆಡ್ ಕ್ರಾಸ್ ಸಂಸ್ಥೆ ಈಗ ವಿಶ್ವವ್ಯಾಪಿ. ಜಾತಿ, ಧರ್ಮ, ಪ್ರದೇಶ, ರಾಜಕೀಯ ಇತ್ಯಾದಿ ಯಾವುದರ ಆಧಾರದ ಮೇಲೆ ತಾರತಮ್ಯ ಮಾಡದೆ ತೊಂದರೆಯಲ್ಲಿ ಇರುವ ಜನರಿಗೆ ನೆರವಾಗುತ್ತದೆ.

2007: ಏಪ್ರಿಲ್ ಒಂದರಿಂದ ಜಾರಿಗೆ ಬರುವಂತೆ ಎಲ್ಲ ಬಗೆಯ ಲಾಟರಿ ನಿಷೇಧ ಮಾಡಿ ಸರ್ಕಾರ ಕಳೆದ ಮಾರ್ಚ್ 27ರಂದು ಹೊರಡಿಸಿದ್ದ ಅಧಿಸೂಚನೆಯನ್ನು ಕರ್ನಾಟಕ ಹೈಕೋರ್ಟ್ ಎತ್ತಿ ಹಿಡಿಯಿತು. ಕೊನೆಯ ಪಕ್ಷ ನಾಲ್ಕು ವಾರಗಳ ಮಟ್ಟಿಗಾದರೂ ಈ ತೀರ್ಪಿಗೆ ತಡೆ ನೀಡಿ ಲಾಟರಿ ಮುಂದುವರೆಸಲು ಅವಕಾಶ ನೀಡುವಂತೆ ಅರ್ಜಿದಾರರು ಮಾಡಿದ್ದ ಮನವಿಯನ್ನು ನ್ಯಾಯಮೂರ್ತಿ ವಿ. ಜಗನ್ನಾಥ ತಿರಸ್ಕರಿಸಿದರು.

2007: ಎಂಟು ವರ್ಷಗಳ ಹಿಂದೆ ಸಿಪಿಐ- ಎಂ.ಎಲ್. ಕಾರ್ಯಕರ್ತ ಛೋಟೆಲಾಲ್ ಗುಪ್ತ ಅವರನ್ನು ಅಪಹರಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿವಾನ್ ವಿಶೇಷ ನ್ಯಾಯಾಲಯವು ಆರ್ ಜೆ ಡಿ ಸಂಸತ್ ಸದಸ್ಯ ಮೊಹಮ್ಮದ್ ಷಹಾಬ್ದುದೀನ್ ಅವರಿಗೆ ಜೀವಾವಧಿ ಶಿಕ್ಷೆ ನೀಡಿತು. ಸಿವಾನಿನ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಗ್ಯಾನೇಶ್ವರ ಪ್ರಸಾದ್ ಅವರು ಷಹಾಬುದ್ದೀನ್ ಅವರಿಗೆ 10,000 ರೂಪಾಯಿಗಳ ದಂಡವನ್ನೂ ವಿಧಿಸಿದರು. 1999ರ ಫೆಬ್ರುವರಿ 7ರಂದು ಸಿಪಿಐ-ಎಂ.ಎಲ್ ಕಾರ್ಯಕರ್ತ ಛೋಟೆಲಾಲ್ ಅವರನ್ನು ಕೊಲ್ಲುವ ಸಲುವಾಗಿ ಅಪಹರಿಸಿದ ಪ್ರಕರಣದಲ್ಲಿ ಷಹಾಬ್ದುದೀನ್ ತಪ್ಪಿತಸ್ಥರು ಎಂದು ನ್ಯಾಯಾಲಯ ಮೇ 5ರಂದು ತೀರ್ಪು ನೀಡಿತ್ತು.

2007: ವಿಶ್ವದಲ್ಲೇ ಅತ್ಯಂತ ದೊಡ್ಡದಾದ ನಾಗರಿಕ ವಿಮಾನ ಯಾನಿ ಸೂಪರ್ ಜಂಬೋ ವಿಮಾನ ಏರ್ ಬಸ್ ಎ 380 ಈದಿನ ದೆಹಲಿಯಿಂದ ಹೊರಟು ಮುಂಬೈಯಲ್ಲಿ ಬಂದಿಳಿಯಿತು.

2007: ಹಿಂದೆಂದೂ ಕಂಡು ಕೇಳರಿಯದಂತಹ ಅತ್ಯಂತ ಪ್ರಖರ ಮತ್ತು ಭಾರಿ ನಕ್ಷತ್ರಪುಂಜದ ಸ್ಫೋಟ (ಸೂಪರ್ ನೋವಾ) ತಾರಾಮಂಡಲದಲ್ಲಿ ಇತ್ತೀಚೆಗೆ ನಡೆದುದನ್ನು ಪತ್ತೆ ಹಚ್ಚಿರುವುದಾಗಿ ವಿಜ್ಞಾನಿಗಳು ಪ್ರಕಟಿಸಿದರು. ಸೂಪರ್ ನೋವಾ ಎಂದು ಕರೆಯಲಾಗುವ ಪ್ರಕ್ರಿಯೆಯನ್ನು ನಾಸಾದ ಚಂದ್ರ ಎಕ್ಸ್ರೇ ದೂರದರ್ಶಕ ಮತ್ತು ವೀಕ್ಷಣಾಲಯ ದಾಖಲಿಸಿದೆ. ಸೂಪರ್ ನೋವಾ ಸರಣಿಗಳಲ್ಲೇ ಇದು ಅತ್ಯಂತ ದೊಡ್ಡದು ಎನ್ನಲಾಗಿದ್ದು ಸೂರ್ಯ ಒಂದು ಕೋಟಿ ವರ್ಷಕಾಲ ನೀಡುವಷ್ಟು ಓಜಸ್ಸು (ಶಕ್ತಿ) ಈ ಸ್ಫೋಟವೊಂದರಲ್ಲೇ ಬಿಡುಗಡೆಯಾಗಿದೆ. ಸ್ಫೋಟದ ಅಲೆಗಳು ಇಡೀ ನಕ್ಷತ್ರ ಸಮೂಹದ ಅನಿಲವನ್ನೇ ಅಲುಗಾಡಿಸಿದೆ. ಸೌರಮಂಡಲ ಸೃಷ್ಟಿಯಾದ ಆರಂಭದಲ್ಲಿದ್ದ ನಕ್ಷತ್ರಗಳ ಅವನತಿಗೆ ಕಾರಣವೇನು ಎಂಬುದಕ್ಕೆ ಈ ಸೂಪರ್ ನೋವಾ ಉತ್ತರ ಒದಗಿಸಿದೆ. ಭೂಮಿಯಿಂದ 2.4 ಕೋಟಿ ಜ್ಯೋತಿರ್ ವರ್ಷಗಳಷ್ಟು ದೂರದಲ್ಲಿರುವ ಆಕಾಶ ಗಂಗೆ ಎನ್ಜಿಸಿ 1260ರಲ್ಲಿ ಈ ಸ್ಫೋಟ ಸಂಭವಿಸಿದೆ ಎಂದು ಬರ್ಕಲಿಯದಲ್ಲಿನ ಕ್ಯಾಲಿಫೋರ್ನಿಯಾ ವಿ.ವಿ. ವಿಜ್ಞಾನಿ ನಾಥನ್ ಸ್ಮಿತ್ ವಿವರಿಸಿದರು. ಭಾರಿ ನಕ್ಷತ್ರಗಳು ಶಕ್ತಿ ಅಥವಾ ಇಂಧನ ಕಳೆದುಕೊಂಡು ತಮ್ಮ ಸ್ವಂತ ಗುರುತ್ವಾಕರ್ಷಣದಲ್ಲೇ ಕುಸಿದು ಬಿದ್ದಾಗ ಇಂತಹ ಸ್ಫೋಟಗಳು ಸಂಭವಿಸುತ್ತವೆ.

2007: ಕ್ಯೂಬಾದ ರಾಜಧಾನಿ ಹವಾನಾದಲ್ಲಿ ಶ್ರೇಷ್ಠ ಕವಿ ರಬೀಂದ್ರನಾಥ ಟ್ಯಾಗೋರ್ ಅವರ 146ನೇ ಜಂತಿ ಆಚರಿಸಿ ಅವರ ಪ್ರತಿಮೆ ಅನಾವರಣ ಮಾಡಲಾಯಿತು.

2006: ಲಾಭದಾಯಕ ಹುದ್ದೆ ಹೊಂದಿದ್ದಾರೆ ಎಂಬ ಕಾರಣಕ್ಕೆ ರಾಜ್ಯಸಭೆ ಸದಸ್ಯತ್ವದಿಂದ ಅನರ್ಹಗೊಳಿಸಿದ್ದ ಕ್ರಮವನ್ನು ಪ್ರಶ್ನಿಸಿ ಜಯಾ ಬಚ್ಚನ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ತಳ್ಳಿಹಾಕಿತು. ಜಯಾ ಅವರು ಲಾಭದಾಯಕ ಹುದ್ದೆ ಹೊಂದಿದ್ದಾರೆಂದು ಆಪಾದಿಸಿ ಅವರನ್ನು ರಾಜ್ಯಸಭೆ ಸದಸ್ಯತ್ವದಿಂದ ಅನರ್ಹಗೊಳಿಸುವಂತೆ ಚುನಾವಣಾ ಆಯೋಗ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರಿಗೆ ಶಿಫಾರಸು ಮಾಡಿತ್ತು. ಈ ಶಿಫಾರಸನ್ನು ಅನುಸರಿಸಿ ರಾಷ್ಟ್ರಪತಿ ಜಯಾ ಅವರನ್ನು ಅನರ್ಹಗೊಳಿಸಿ ಆದೇಶ ಹೊರಡಿಸಿದ್ದರು.

2006: ಟೈಟಾನಿಕ್ ಹಡಗು ದುರಂತದ ಐತಿಹಾಸಿಕ ಘಟನೆಯನ್ನು ಕಣ್ಣಾರೆ ಕಂಡ ಸಾಕ್ಷಿಗಳ ಪೈಕಿ ಜೀವಿಸಿದ್ದ ಕೊನೆಯ ವ್ಯಕ್ತಿ ಲಿಲಿಯೆನ್ ಜೆರ್ ಟ್ರೂಡ್ ಆಸ್ಟ್ಲೆಂಡ್ ಈದಿನ ನಿಧನರಾದರು. 1912ರಲ್ಲಿ ರಾತ್ರಿ ವೇಳೆಯಲ್ಲಿ ದುರಂತ ಸಂಭವಿಸಿದಾಗ ಆಸ್ಟ್ಲೆಂಡ್ ಕೇವಲ ಐದರ ಹರೆಯದ ಬಾಲಕಿ. ಈ ಮಹಾನ್ ದುರಂತದಲ್ಲಿ ಆಕೆ ತನ್ನ ತಂದೆ ಹಾಗೂ ಚಿಕ್ಕಪ್ಪನ ಅವಳಿ ಮಕ್ಕಳೂ ಸೇರಿದಂತೆ ಮೂವರು ಸಹೋದರರನ್ನು ಕಳೆದುಕೊಂಡಿದ್ದರು. ದುರಂತದಲ್ಲಿ ಬದುಕಿ ಉಳಿದ ಬಾರ್ಬರಾ ಜಾಯ್ಸ್ ವೆಸ್ಟ್ ಡೇಂಟೆನ್ ಹಾಗೂ ಎಲಿಜಬೆತ್ ಗ್ಲಾಡಿಸ್ ಅವರಿಗೆ ಆಗ ಕ್ರಮವಾಗಿ ಕೇವಲ 10 ತಿಂಗಳು ಮತ್ತು ಎರಡು ತಿಂಗಳ ವಯಸ್ಸಾಗಿದ್ದದ್ದರಿಂದ ಇಬ್ಬರಿಗೂ ಘಟನೆಯ ಬಗ್ಗೆ ಯಾವುದೇ ನೆನಪೂ ಉಳಿದಿಲ್ಲ.

2006: ಆಂಡ್ರ್ಯೂ ಫ್ಲಿಂಟಾಫ್ ಹಾಗೂ ಕ್ಯಾಥರೀನ್ ಬ್ರಂಟ್ ಅವರು ಕ್ರಮವಾಗಿ ಇಂಗ್ಲೆಂಡಿನ ವರ್ಷದ ಕ್ರಿಕೆಟ್ ಆಟಗಾರ ಮತ್ತು ಆಟಗಾರ್ತಿ ಗೌರವಕ್ಕೆ ಪಾತ್ರರಾದರು. ಈ ದಿನ ರಾತ್ರಿ ಲಂಡನ್ನಿನಲ್ಲಿ ಈ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು.

2006: ಏಪ್ರಿಲ್ ತಿಂಗಳಲ್ಲಿ ನಡೆದ ಥಾಯ್ಲೆಂಡ್ ಮಹಾ ಚುನಾವಣೆಯನ್ನು ಸಂವಿಧಾನ ವಿರೋಧಿ ಎಂದು ತೀರ್ಪು ನೀಡಿದ ಸುಪ್ರೀಂಕೋರ್ಟ್ ಹೊಸದಾಗಿ ಚುನಾವಣೆ ನಡೆಸುವಂತೆ ಆದೇಶ ನೀಡಿತು. ಮಹಾಚುನಾವಣೆಯಲ್ಲಿ ವಿರೋಧ ಪಕ್ಷಗಳು ಭಾಗವಹಿಸಲಿಲ್ಲ. ಆದರೂ ಸಂಸತ್ತಿನ 400 ಸ್ಥಾನಗಳಿಗೆ ಚುನಾವಣೆ ನಡೆಯಿತು. ಇದರಲ್ಲಿ ಉಸ್ತುವಾರಿ ಪ್ರಧಾನಿ ತಕ್ ಸಿನ್ ಶಿನವರ್ತ ನೇತೃತ್ವದ ಥಾಯ್ ರಾಕ್ ಥಾಯ್ ಪಕ್ಷ ಮಾತ್ರವೇ ಭಾಗವಹಿಸಿದ್ದರೂ ಪ್ರಧಾನಿ ಸರ್ಕಾರ ರಚಿಸಲು ವಿಫಲವಾದರು. ಚುನಾವಣೆಗೆ ಸಿದ್ಧತೆ ನಡೆಸಲು ಸಮಯ ಸಿಗಲಿಲ್ಲ ಎಂದು ವಿರೋಧ ಪಕ್ಷಗಳು ಆಪಾದಿಸಿದ ಹಿನ್ನೆಲೆ ಹಾಗೂ ಚುನಾವಣೆಯ ಬಗ್ಗೆ ಪರಿಶೀಲನೆ ನಡೆಸುವಂತೆ ದೇಶದಲ್ಲಿ ಪೂಜ್ಯ ಸ್ಥಾನ ಪಡೆದುಕೊಂಡಿರುವ ದೊರೆ ಭುಮಿಬೋಲ್ ಅಡುಲ್ ಯಾದೇಜ್ ನ್ಯಾಯಾಲಯವನ್ನು ಕೋರಿದ್ದರು.

1971: ಕನ್ನಡ ಸಾಹಿತಿ ದೊಡ್ಡಬೆಲೆಯ ಡಿ.ಎಲ್.ಎನ್. (27-10-1906- 8-5-1971) ಮೃತರಾದರು. ಸಂಶೋಧನೆ, ವಿಮರ್ಶಾ ಕ್ಷೇತ್ರದ್ಲಲಿ ಹೆಚ್ಚಿನ ಸಾಧನೆ ಮಾಡಿರುವ ಇವರು `ವಡ್ಡಾರಾಧನೆ', `ಪಂಪರಾಮಾಯಣ ಸಂಗ್ರಹ', `ಭೀಷ್ಮಪರ್ವ' ಇತ್ಯಾದಿ ಕೃತಿಗಳ ಮೂಲಕ ಖ್ಯಾತರು.

1971: ಕನ್ನಡ ಸಾಹಿತಿ ಧಾರವಾಡದ ಉತ್ತಂಗಿ ಚನ್ನಪ್ಪ (28-10-1881ರಿಂದ 8-5-1971) ನಿಧನರಾದರು. `ಹಿಂದೂ ಸಮಾಜದ ಹಿತಚಿಂತಕ', `ಮಕ್ಕಳ ಶಿಕ್ಷಣಪಟ' ಇತ್ಯಾದಿ ಕೃತಿಗಳನ್ನು ರಚಿಸಿದ ಇವರು 1949ರಲ್ಲಿ 32ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

1928: ಇಂಗ್ಲಿಷ್, ಕನ್ನಡ, ಸಂಸ್ಕೃತ ಭಾಷಾ ವಿದ್ವಾಂಸ, ಸಂಗೀತ ವಿಮರ್ಶಕ ಶಂಕರ ಮೊಕಾಶಿ ಪುಣೇಕರ ಹುಟ್ಟಿದ ದಿನ. ಧಾರವಾಡದಲ್ಲಿ ರಾವಜಿ ರಾವ್- ಸುಂದರಾಬಾಯಿ ದಂಪತಿಯ ಪುತ್ರನಾಗಿ 1928ರಲ್ಲಿ ಈದಿನ ಜನಿಸಿದ ಮೊಕಾಶಿ ಕೇಂದ್ರ ಸಾಹಿತ್ಯ ಅಕಾಡೆಮಿ, ರಾಜ್ಯ ಸಾಹಿತ್ಯ ಅಕಾಡೆಮಿ, ಕರ್ನಾಟಕ ಚಲನಚಿತ್ರ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ.

1917: ಅಮೆರಿಕದ ಚಾರ್ಲ್ಸ್ `ಸೋನ್ನಿ' ಲಿಸ್ಟನ್ (1917-70) ಹುಟ್ಟಿದ ದಿನ. 1962ರಿಂದ 1964ರವರೆಗೆ ಈತ ಜಾಗತಿಕ ಹೆವಿವೈಟ್ ಬಾಕ್ಸಿಂಗ್ ಚಾಂಪಿಯನ್ ಆಗಿದ್ದ. 1964ರಲ್ಲಿ ಮೊಹಮ್ಮದಾಲಿ ಈತನನ್ನು ಸೋಲಿಸಿದ.

1916: ಸ್ವಾಮಿ ಚಿನ್ಮಯಾನಂದ ಸರಸ್ವತಿ ಎಂದೇ ಖ್ಯಾತರಾದ ಬಾಲಕೃಷ್ಣ ಮೆನನ್ (1916-93) ಜನ್ಮದಿನ. ಚಿನ್ಮಯ ಮಿಷನನ್ನು ಸ್ಥಾಪಿಸಿದ ಇವರು 1993ರಲ್ಲಿ ಚಿಕಾಗೋದಲ್ಲಿ ನಡೆದ ಜಾಗತಿಕ ಧಾರ್ಮಿಕ ಸಂಸತ್ತಿನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು.

1891: ಥಿಯೋಸೋಫಿಕಲ್ ಸೊಸೈಟಿಯ ಸಹ ಸಂಸ್ಥಾಪಕಿ ಮೇಡಂ ಹೆಲೆನಾ ಬ್ಲಾವಟ್ ಸ್ಕಿ ನಿಧನರಾದರು.

1884: ಹ್ಯಾರಿ ಎಸ್. ಟ್ರೂಮನ್ (1884-1972) ಜನ್ಮದಿನ. ಅಮೆರಿಕದ 33ನೇ ಅಧ್ಯಕ್ಷನಾಗಿದ್ದ ಈತ ಸೋವಿಯತ್ ಮತ್ತು ಚೀನೀ ಕಮ್ಯೂನಿಸಂ ವಿರುದ್ಧದ ಅಂತಾರಾಷ್ಟ್ರೀಯ ಹೋರಾಟದತ್ತ ತನ್ನ ರಾಷ್ಟ್ರವನ್ನು ಮುನ್ನಡೆಸಿದ.

1794: ಆಧುನಿಕ ರಸಾಯನ ಶಾಸ್ತ್ರದ ಪಿತಾಮಹನೆಂದೇ ಖ್ಯಾತನಾದ ಫ್ರೆಂಚ್ ವಿಜ್ಞಾನಿ ಆಂಟೋನಿ ಲಾವೋಯಿಸೀರ್ ನನ್ನು ಗಿಲೋಟಿನ್ಗೆ ಗುರಿಪಡಿಸಿ ಕೊಲ್ಲಲಾಯಿತು. `ಆ ತಲೆ ಕಡಿಯಲು ಕ್ಷಣ ಸಾಕಾಯಿತು. ಆದರೆ ಇನ್ನೂ ನೂರು ವರ್ಷ ಕಳೆದರೂ ಅಂತಹ ಇನ್ನೊಂದು ತಲೆ ಉತ್ಪಾದಿಸಲು ಸಾಧ್ಯವಾಗಲಾರದು' ಎಂದು ಗಣಿತ ತಜ್ಞ ಜೋಸೆಫ್ ಲೂಯಿ ಉದ್ಗರಿಸಿದ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement