ಇಂದಿನ ಇತಿಹಾಸ
ಜೂನ್ 18
ಅಮೆರಿಕದ ಪ್ರಜೆಯಾಗಿರುವ ಭಾರತೀಯ ಸಂಜಾತೆ ಬಾಲಾ ಕೃಷ್ಣಮೂರ್ತಿ ಅವರು ತಂತ್ರಜ್ಞಾನ ಅಭಿವೃದ್ಧಿಗೆ ನೀಡಲಾಗುವ ಎಂಜೆಲ್ ಬರ್ಗರ್ ರೊಬೋಟಿಕ್ಸ್ ನ (ಯಂತ್ರ ಮಾನವ ವಿಜ್ಞಾನ) ಪ್ರಶಸ್ತಿಗೆ ಭಾಜನರಾದ ಮೊದಲ ಮಹಿಳೆ ಎಂಬ ಗೌರವಕ್ಕೆ ಪಾತ್ರರಾದರು.
2007: ಅಮೆರಿಕದ ಪ್ರಜೆಯಾಗಿರುವ ಭಾರತೀಯ ಸಂಜಾತೆ ಬಾಲಾ ಕೃಷ್ಣಮೂರ್ತಿ ಅವರು ತಂತ್ರಜ್ಞಾನ ಅಭಿವೃದ್ಧಿಗೆ ನೀಡಲಾಗುವ ಎಂಜೆಲ್ ಬರ್ಗರ್ ರೊಬೋಟಿಕ್ಸ್ ನ (ಯಂತ್ರ ಮಾನವ ವಿಜ್ಞಾನ) ಪ್ರಶಸ್ತಿಗೆ ಭಾಜನರಾದ ಮೊದಲ ಮಹಿಳೆ ಎಂಬ ಗೌರವಕ್ಕೆ ಪಾತ್ರರಾದರು. ಏವೋಲಿನ್ ಇಂಕ್ ಸ್ಥಾಪಕ ಮತ್ತು ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಬಾಲಾ ಕೃಷ್ಣಮೂರ್ತಿ ಅವರು ಕಳೆದ 25 ವರ್ಷಗಳಿಂದ ವಿವಿಧ ತಂತ್ರಾಂಶ, ಸಂಪರ್ಕಜಾಲ ಮತ್ತು ಯಂತ್ರ ಮಾನವ ವಿಜ್ಞಾನದ ಅಭಿವೃದ್ಧಿಗೆ ಪೂರಕವಾದ ಅನೇಕ ಸಾಫ್ಟ್ ವೇರ್ ಅಭಿವೃದ್ಧಿಗೊಳಿಸಿದ್ದು, ಈ ಸಾಧನೆಗಾಗಿ ಅವರನ್ನು ಈಪ್ರಶಸ್ತಿಗೆ ಆಯ್ಕೆ ಮಾಡಲಾಯಿತು.
2007: ಗಿನ್ನೆಸ್ ವಿಶ್ವ ದಾಖಲೆಗಳ ಪುಸ್ತಕದಿಂದ ಅಧಿಕೃತ ಪ್ರಮಾಣ ಪತ್ರ ಪಡೆಯುವುದರೊಂದಿಗೆ ಜಪಾನಿನ 111 ವರ್ಷದ ತೊಮೊಜಿ ತನಾಬೆ ಅವರು ಅಧಿಕೃತವಾಗಿ ವಿಶ್ವದ ಅತ್ಯಂತ ವೃದ್ಧ ಎಂಬ ಹೆಗ್ಗಳಿಕಗೆ ಪಾತ್ರರಾದರು.
2007: ಲಂಡನ್ನಿನಲ್ಲಿ ನಡೆದ ಬಿಗ್ ಬ್ರದರ್ ರಿಯಾಲಿಟಿ ಶೋ ಸಂದರ್ಭದಲ್ಲಿ ಜನಾಂಗೀಯ ನಿಂದನೆಗೆ ಒಳಗಾಗಿದ್ದ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರು ಅದೇ ಲಂಡನ್ ನಗರದಲ್ಲಿ ತನ್ನದೇ ಹೆಸರಿನ ಪರಿಮಳ ದ್ರವ್ಯ ಬಿಡುಗಡೆ ಮಾಡಿದರು. ಇದರಿಂದಾಗಿ ಶಿಲ್ಪಾ ಅವರು ಹಾಲಿವುಡ್ಡಿನ ಖ್ಯಾತ ತಾರೆಯರಾದ ಜೆನಿಫರ್ ಲೋಪೆಜ್, ಪ್ಯಾರಿಸ್ ಹಿಲ್ಟನ್ ಅವರಿಗೆ ಸರಿ ಸಮಾನವಾಗಿ ಕಾಣಿಸಿಕೊಂಡರು.
2007: ಅಟ್ಲಾಂಟಿಸ್ ಅಂತರಿಕ್ಷ ಯಾನದ ಅಂಗವಾಗಿ ಅಮೆರಿಕದ ಇಬ್ಬರು ಗಗನಯಾತ್ರಿಗಳು ಕೊನೆಯ ಬಾರಿ ಅಂತರಿಕ್ಷ ನಡಿಗೆ ಕೈಗೊಂಡರು. ಇದರೊಂದಿಗೆ ಅಟ್ಲಾಂಟಿಸ್ ನೌಕೆ ಭೂಮಿಗೆ ವಾಪಸಾಗಲು ಸಜ್ಜಾಯಿತು.
2007: ಬಾಂಗ್ಲಾದೇಶದ ಸ್ಥಾಪನೆಗೆ ಕಾರಣರಾದ ಷೇಕ್ ಮುಜಿಬುರ್ ರಹಮಾನ್ ಅವರನ್ನು ಕೊಂದು ತಲೆ ಮರೆಸಿಕೊಂಡು ಅಮೆರಿಕದಲ್ಲಿದ್ದ ನಿವೃತ್ತ ಸೇನಾ ಅಧಿಕಾರಿ ಮೇಜರ್ ಎ.ಕೆ. ಮೊಹಿಯ್ದುದೀನ್ ಭಾರಿ ಭದ್ರತೆಯ ಮಧ್ಯೆ ಬಾಂಗ್ಲಾದೇಶಕ್ಕೆ ವಾಪಸಾದ. ಆತನನ್ನು ಮ್ಯಾಜಿಸ್ಟ್ರೇಟರ ನ್ಯಾಯಾಲಯದಲ್ಲಿ ಹಾಜರು ಪಡಿಸಿದ ಬಳಿಕ ಢಾಕಾ ಸೆಂಟ್ರಲ್ ಜೈಲಿಗೆ ಕಳುಹಿಸಲಾಯಿತು.
2007: ತಾರಾ ಅಯ್ಯರ್ ಅವರು ಪೋರ್ಚುಗಲ್ಲಿನ ಮೊಂಟೆ ಮೋರ್- ಒ - ನೋವಾದಲ್ಲಿ ಮುಕ್ತಾಯವಾದ ಹತ್ತು ಸಾವಿರ ಅಮೆರಿಕನ್ ಡಾಲರ್ ಮೊತ್ತದ ಬಹುಮಾನ ಐಟಿ ಎಫ್ ಮಹಿಳಾ ಟೆನಿಸ್ ಟೂರ್ನಿಯ ಸಿಂಗಲ್ಸ್ ಪ್ರಶಸ್ತಿ ಪಡೆದುಕೊಂಡರು.
2007: ಕಾಂಗ್ರೆಸ್ ಮತ್ತು ಬಿಜೆಪಿಗೆ ಪರ್ಯಾಯ ಶಕ್ತಿಯನ್ನು ಹುಟ್ಟು ಹಾಕುವ ನಿಟ್ಟಿನಲ್ಲಿ ಎಂಟು ಪ್ರಾದೇಶಿಕ ಪಕ್ಷಗಳು ಚೆನ್ನೈಯಲ್ಲಿ ಸಭೆ ಸೇರಿ `ಸಂಯುಕ್ತ ರಾಷ್ಟ್ರೀಯ ಪ್ರಗತಿಪರ ಮೈತ್ರಿಕೂಟ' (ಯುಎನ್ಪಿಎ) ಹೆಸರಿನಲ್ಲಿ ಹೊಸದಾಗಿ ತೃತೀಯ ರಂಗ ರಚಿಸಿಕೊಂಡವು. ಎಐಎಡಿಎಂಕೆ ನಾಯಕಿ ಜಯಲಲಿತಾ ಅವರ ನಿವಾಸದಲ್ಲಿ ಈ ಸಭೆ ನಡೆಯಿತು.
2006: ಕಳೆದ 44 ವರ್ಷಗಳಿಂದ ಮುಚ್ಚಲ್ಪಟ್ಟ್ದಿದ ಆಯಕಟ್ಟಿನ `ನಾಥು ಲಾ ಪಾಸ್' ಮೂಲಕ ಜುಲೈ 6ರಿಂದ ಗಡಿ ವ್ಯಾಪಾರ ಪುನರಾರಂಭಿಸುವ ಐತಿಹಾಸಿಕ ಒಪ್ಪಂದಕ್ಕೆ ಭಾರತ ಮತ್ತು ಚೀನಾ ಸಮ್ಮತಿಸಿದವು. ಈ ಮಾರ್ಗವನ್ನು ತೆರೆಯುವುದರಿಂದ ಗಡಿ ಮುಚ್ಚಿದ್ದ ಏಷ್ಯಾದ ಎರಡು ಬೃಹತ್ ರಾಷ್ಟ್ರಗಳ ಪರ್ವತ ಪ್ರಾಂತ್ಯಗಳ ಸ್ಥಳೀಯ ಆರ್ಥಿಕತೆ ಮತ್ತು ದ್ವಿಪಕ್ಷೀಯ ವ್ಯಾಪಾರ ವೃದ್ಧಿಗೆ ಹೆಚ್ಚಿನ ನೆರವಾಗಲಿದೆ. ಈ ಸಂಬಂಧ ಒಪ್ಪಂದಕ್ಕೆ ಸಹಿ ಹಾಕಲಾಗಿದ್ದು, ಇದು ಎರಡೂ ರಾಷ್ಟ್ರಗಳ ಗಡಿಭಾಗದಲ್ಲಿ ವಾಸಿಸುವ ಜನರಿಗೆ 1991, 1992 ಹಾಗೂ 2003ರ ಗಡಿ ವ್ಯಾಪಾರ ಒಪ್ಪಂದದಲ್ಲಿ ಪ್ರಸ್ತಾಪಿಸಿರುವ ಸುಮಾರು 30 ವಸ್ತುಗಳನ್ನು ರಫ್ತು ಮಾಡಿಕೊಳ್ಳಲು ಅವಕಾಶ ಕಲ್ಪಿಸಿದೆ.
2006: ಸತತ 30 ಗಂಟೆಗಳ ಕಾಲ ಮೃದಂಗ ನುಡಿಸುವ ಮೂಲಕ ಕೇರಳದ ಪಾಲಕ್ಕಾಡಿನ ಯುವ ಕಲಾವಿದ ವಿನೀತ್ (17) ಶಾರದಾ ಪೀಠ ಪ್ರವಚನ ಮಂದಿರದಲ್ಲಿ ವಿಶೇಷ ಸಾಧನೆ ಮೆರೆದರು.
1980: ಭಾರತದ ಶಕುಂತಲಾದೇವಿ ಅವರು ಲಂಡನ್ನಿನ ಇಂಪೀರಿಯಲ್ ಕಾಲೇಜಿನ ಕಂಪ್ಯೂಟರ್ ವಿಭಾಗದಲ್ಲಿ 13 ಅಂಕಿಗಳ ಎರಡು ಸಂಖ್ಯೆಯನ್ನು ತೆಗೆದುಕೊಂಡು ಕೇವಲ 28 ಸೆಕೆಂಡುಗಳಲ್ಲಿ ಅವುಗಳನ್ನು ಗುಣಿಸಿ ಉತ್ತರ ಹೇಳಿದರು. ಅವರು ತೆಗೆದುಕೊಂಡಿದ್ದ ಸಂಖ್ಯೆಗಳು: 7,686,369,774,870 ಮತ್ತು 2,465,099,745,779. ಈ ಎರಡು ಸಂಖ್ಯೆಗಳನ್ನು ಗುಣಿಸಿ ಆಕೆ ನೀಡಿದ ಸಮರ್ಪಕ ಉತ್ತರ: 18,947,668,177,995,426,462,773,730.
1968: ವೈವಿಧ್ಯಮಯ ಕಲಾಕೃತಿಗಳ ಮೂಲಕ ಅಂತಾರಾಷ್ಟ್ರೀಯ ಮನ್ನಣೆ ಗಳಿಸಿರುವ ಎಸ್. ಮಂಜುನಾಥ ಆಚಾರ್ಯ ಅವರು ಎಸ್. ಶಂಕರನಾರಾಯಣಾಚಾರ್ಯ- ಸಿದ್ದಮ್ಮ ದಂಪತಿಯ ಮಗನಾಗಿ ಕೋಲಾರ ಜಿಲ್ಲೆ ಮುಳಬಾಗಲು ತಾಲ್ಲೂಕಿನ ಶಿವಾರ ಪಟ್ಟಣದಲ್ಲಿ ಜನಿಸಿದರು.
1942: ಶಂಶ ಐತಾಳ ಜನನ.
1939: ಚಂದ್ರಶೇಖರ ಪಾಟೀಲ (ಚಂಪಾ) ಜನನ.
1928: ಬಿ.ಎಸ್. ಅಣ್ಣಯ್ಯ ಜನನ.
1928: ವಿಮಾನಯಾನಿ ಅಮೇಲಿಯಾ ಈಯರ್ ಹಾರ್ಟ್ ಅಟ್ಲಾಂಟಿಕ್ ಸಾಗರದ ಮೇಲಿನಿಂದ ವಿಮಾನ ಮೂಲಕ ಕ್ರಮಿಸಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಆಕೆ ನ್ಯೂಫೌಂಡ್ ಲ್ಯಾಂಡ್ ನಿಂದ ವೇಲ್ಸ್ ವರೆಗೆ ವಿಮಾನದಲ್ಲಿ ಪೈಲಟ್ ವಿಲ್ಮರ್ ಸ್ಟಲ್ಜ್ ಜೊತೆಗೆ ಪ್ರಯಾಣಿಕಳಾಗಿ 21 ಗಂಟೆಗಳ ಕಾಲ ಪಯಣಿಸಿದರು.
1918: ಸಾಹಿತಿ ಸಿದ್ಧಯ್ಯ ಪುರಾಣಿಕ ಜನನ.
1912: ವಿಶಿಷ್ಟ ನವೋದಯ ಕಥೆಗಾರರೆಂದು ಖ್ಯಾತಿ ಪಡೆದಿದ್ದ ಅಶ್ವತ್ಥ ನಾರಾಯಣ ರಾವ್ ಅವರು ಸೋಮಯ್ಯ- ಲಕ್ಷ್ಮಮ್ಮ ದಂಪತಿಯ ಪುತ್ರನಾಗಿ ಮೈಸೂರಿನಲ್ಲಿ ಜನಿಸಿದರು.
1817: ಜಂಗ್ ಬಹದ್ದೂರ್ (1817-1877) ಜನ್ಮದಿನ. 1846ರಿಂದ 1877ರವರೆಗೆ ನೇಪಾಳದ ಪ್ರಧಾನಮಂತ್ರಿ ಹಾಗೂ ಆಡಳಿತಗಾರನಾಗಿದ್ದ ಈತ ರಾಣಾ ವಂಶವನ್ನು ಪ್ರಧಾನಮಂತ್ರಿಗಳ ವಂಶವಾಗಿ ಪ್ರತಿಷ್ಠಾಪಿಸಿದ. 1951ರವರೆಗೂ ಪ್ರಧಾನಮಂತ್ರಿಗಳ ಹುದ್ದೆ ಈ ವಂಶದಲ್ಲೇ ಮುಂದುವರಿಯಿತು.
1815: ವೆಲ್ಲಿಂಗ್ಟನ್ನಿನ ಮೊದಲ ಡ್ಯೂಕ್ ಆರ್ಥರ್ ವೆಲ್ಲೆಸ್ಲ್ಲೆ ಮತ್ತು ಪ್ರಷಿಯಾದ ಜನರಲ್ ಗ್ಲೆಭರ್ಡ್ ಬ್ಲುಚರ್ ಒಟ್ಟಾಗಿ ಬ್ರಸೆಲ್ಸಿನಿಂದ ದಕ್ಷಿಣಕ್ಕೆ ನಾಲ್ಕು ಕಿ.ಮೀ. ದೂರದ ವಾಟರ್ಲೂನಲ್ಲಿ ನೆಪೋಲಿಯನ್ ಬೋನಪಾರ್ಟೆ ವಿರುದ್ಧ ಹೋರಾಡಿ ಆತನನ್ನು ಸೋಲಿಸಿದರು. ನಾಲ್ಕು ದಿನಗಳ ಬಳಿಕ ನೆಪೋಲಿಯನ್ ಎರಡನೇ ಬಾರಿಗೆ ಪದತ್ಯಾಗ ಮಾಡಿದ.
1769: ರಾಬರ್ಟ್ ಸ್ಟೀವರ್ಟ್ ವೈಕೌಂಟ್ ಕ್ಯಾಸೆಲ್ ರೀಗ್ (1769-1822) ಜನ್ಮದಿನ. ಬ್ರಿಟಿಷ್ ವಿದೇಶಾಂಗ ಕಾರ್ಯದರ್ಶಿಯಾಗಿದ್ದ ಈತ ವಿಯೆನ್ನಾ ಕಾಂಗೆಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ. ವಿಯೆನ್ನಾ ಕಾಂಗ್ರೆಸ್ 1815ರಲ್ಲಿ ಯುರೋಪಿನ ನಕ್ಷೆಯನ್ನು ಬದಲಾಯಿಸಿತು.
1633: ಕೊಂಕಣಿ ಭಾಷಾ ನಿಘಂಟು ತಯಾರಕ ರೆವೈರು ಡಿಗೊ ನಿಧನ.
(ಸಂಗ್ರಹ: ನೆತ್ರಕೆರೆ ಉದಯಶಂಕರ)
1 comment:
ವ್ಹಾರೆವ್ಹಾ... ನಿಮ್ಮ ಬ್ಲಾಗ್ ಅದು ಬ್ಲಾಗಾಗಿರಬಾದಿತ್ತು. ಬದಲಿಗೆ ವೆಬ್ ಸೈಟ್ ಆಗಬೇಕಿತ್ತು.ಅಷ್ಟೊಂದು ವಿಚಾರ ಗಳಿವೆ. ಎನ್ಸೈಕ್ಲೋಪಿಡಿಯಾ ಅಂದರೂ ತಪ್ಪಾಗಲಿಕಿಲ್ಲ... ನಿಮ್ಮ ಶ್ರಮ , ಶ್ರದ್ಧೆ, ಈ ಕಾರ್ಯದಲ್ಲಿ ಎದ್ದು ಕಾಣುತ್ತಿದೆ. good luck... please dont stop it
Post a Comment