ಗ್ರಾಹಕರ ಸುಖ-ದುಃಖ

My Blog List

Friday, June 20, 2008

ಇಂದಿನ ಇತಿಹಾಸ History Today ಜೂನ್ 17

ಇಂದಿನ ಇತಿಹಾಸ

ಜೂನ್ 17

ದುಬೈಯಲ್ಲಿ ನಡೆದ ಐಐಎಫ್ಐ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಂಜಯ ಲೀಲಾ ಬನ್ಸಾಲಿ ನಿರ್ದೇಶನದ ಹಿಂದಿ ಚಿತ್ರ `ಬ್ಲ್ಯಾಕ್' ಪ್ರಶಸ್ತಿಗಳನ್ನು ಕೊಳ್ಳೆ ಹೊಡೆಯಿತು.

2007: ತೆರೆ ಕಂಡ ಮೊದಲ ದಿನವೇ 60 ಲಕ್ಷ ರೂಪಾಯಿ (5,60,00 ರಿಂಗೆಟ್ಸ್) ಸಂಗ್ರಹಿಸುವ ಮೂಲಕ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ `ಶಿವಾಜಿ' ಮಲೇಷ್ಯಾದಲ್ಲೂ ಹಿಂದಿನ ದಾಖಲೆ ಮುರಿದು ಹೊಸ ದಾಖಲೆ ಸೃಷ್ಟಿಸಿತು.

2007: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರನ್ನು ಎಚ್ಐವಿ/ಏಡ್ಸ್ ಬಗ್ಗೆ ಜಾಗೃತಿ ಉಂಟುಮಾಡಲು ಅವರು ನೀಡಿದ ಕೊಡುಗೆಯನ್ನು ಪರಿಗಣಿಸಿ `ಸಿಲ್ವರ್ ಸ್ಟಾರ್' ಪ್ರಶಸ್ತಿ ನೀಡಿ ಗೌರವಿಸಲಾಯಿತು. ಲಂಡನ್ನಿನ ಬ್ರಿಟನ್ ವಿದೇಶ ಮತ್ತು ಕಾಮನ್ ವೆಲ್ತ್ ಕಚೇರಿಯ ದರ್ಬಾರ್ ಕೋರ್ಟಿನಲ್ಲಿ ಈದಿನ ರಾತ್ರಿ ನಡೆದ ಕಾರ್ಯಕ್ರಮದಲ್ಲಿ ಬ್ರಿಟನ್ ಸಂಸತ್ತಿನ ಕೆಳಮನೆನಾಯಕ ಜಾಕ್ ಸ್ಟ್ರಾ 31ರ ಹರೆಯದ ಶಿಲ್ಪಾ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಲೇಬರ್ ಪಕ್ಷದ ಸಂಸದ ಕೀತ್ ವಾಜ್ ಅವರು ಚುನಾಯಿತಗೊಂಡ 20ನೇ ವರ್ಷಾಚರಣೆಯ ಪ್ರಯುಕ್ತ ಸಮಾರಂಭ ಏರ್ಪಡಿಸಲಾಗಿತ್ತು.

2007: ಸ್ಕಾಟ್ಲೆಂಡಿನ 22 ವರ್ಷ ವಯಸ್ಸಿನ ಹವ್ಯಾಸಿ ಫುಟ್ಬಾಲ್ ಆಟಗಾರ ಅಲೆಕ್ಸ್ ಮೆಕ್ ಗ್ರೆಗೊರ್ ಅವರು ಪಂದ್ಯದ ಆರಂಭದ ಮೂರೇ ನಿಮಿಷದ ಅವಧಿಯಲ್ಲಿ `ಹ್ಯಾಟ್ರಿಕ್' ಸಾಧನೆ ಮಾಡಿ, ಗಿನ್ನೆಸ್ ವಿಶ್ವ ದಾಖಲೆಗೆ ಸೇರ್ಪಡೆಯಾದರು. ಲಂಡನ್ನಿನ ಫುಟ್ಬಾಲ್ ಲೀಗ್ ಪಂದ್ಯವೊಂದರಲ್ಲಿ ಕುಲ್ಲೆನ್ ಕ್ಲಬ್ ವಿರುದ್ಧ ಬಿಷಪ್ ಮಿಲ್ ವಿಲ್ಲಾ ಕ್ಲಬ್ ತಂಡದ ಪರವಾಗಿ ಆಡಿದ ಅಲೆಕ್ಸ್ ತೀರ ಕಡಿಮೆ ಅವಧಿಯಲ್ಲಿ ಮೂರು ಬಾರಿ ಚೆಂಡನ್ನು ಗುರಿ ಮುಟ್ಟಿಸಿ, ಗಮನ ಸೆಳೆದರು. ಶೌಚಾಲಯ ದುರಸ್ತಿ ಮಾಡುವ ಉದ್ಯೋಗದಲ್ಲಿರುವ ಅಲೆಕ್ಸ್ ಈ ಪಂದ್ಯದಲ್ಲಿ ಒಟ್ಟು ನಾಲ್ಕು ಗೋಲು ಗಳಿಸಿದರು. ವಿಜಯ ಸಾಧಿಸಿದ ಬಿಷಪ್ ಮಿಲ್ ಪರ ಹನ್ನೊಂದು ಗೋಲುಗಳು ದಾಖಲಾದವು. ಈ ಸಾಧನೆಯೊಂದಿಗೆ ಅಲೆಕ್ಸ್ ಹೆಸರು ಗಿನ್ನೆಸ್ ವಿಶ್ವ ದಾಖಲೆ ಪುಸ್ತಕ ಸೇರಿತು.

2007: ಮರಗಳನ್ನು ಸ್ಥಳಾಂತರಿಸುವ ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್ಸಿಎಲ್)ದ ಯೋಜನೆ ಈಗ ಯಶಸ್ಸಿನತ್ತ ಸಾಗುವ ಸಾಧ್ಯತೆ ಕಂಡುಬಂದಿತು. ಎಂ.ಜಿ.ರಸ್ತೆಯಿಂದ ಪಕ್ಕದ ಮಾಣಿಕ್ ಷಾ ಪೆರೇಡ್ ಮೈದಾನಕ್ಕೆ ಸ್ಥಳಾಂತರಗೊಳಿಸಲಾದ ಐದು ಮರಗಳಲ್ಲಿ ಮೂರರಲ್ಲಿ ಹೊಸ ಚಿಗುರು ಮೂಡಿದ್ದು ಬೆಳಕಿಗೆ ಬಂದಿತು. ಮರಗಳ ಸ್ಥಳಾಂತರ ಕಾರ್ಯ ಮೇ 28ರಿಂದ ಪ್ರಾರಂಭವಾಗಿತ್ತು. ಮೊದಲ ದಿನ ಸತತ ಆರು ಗಂಟೆಗಳ ಕಾಲ ನಡೆದ ಕಾರ್ಯಾಚರಣೆಯಲ್ಲಿ ಕ್ರೇನ್ಗಳ ಸಹಾಯದಿಂದ ತುಬುಯಿಯಾ ರೋಸಾ ಜಾತಿಯ ಒಂದು ಮರವನ್ನು ಸ್ಥಳಾಂತರ ಮಾಡಲಾಗಿತ್ತು. ಬಳಿಕ ಹಂತ ಹಂತವಾಗಿ ಎಂ.ಜಿ. ರಸ್ತೆಯಿಂದ ಈ ಮೈದಾನಕ್ಕೆ ಒಟ್ಟು ಐದು ಮರಗಳನ್ನು ಸ್ಥಳಾಂತರಿಸಲಾಗಿತ್ತು. ಚೆನ್ನೈನ `ಲ್ಯಾಂಡ್ ಸ್ಕೇಪ್ ಆರ್ಕಿಟೆಕ್ಟ್ಸ್' ಸಂಸ್ಥೆಯ ಸಿಬ್ಬಂದಿ ಈ ಕೆಲಸವನ್ನು ನಿರ್ವಹಿಸ್ದಿದರು. ಬೆಂಗಳೂರು ಪರಿಸರ ಸಂಘ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗಳು ಮರಗಳನ್ನು ಸ್ಥಳಾಂತರಿಸುವ ಕಾರ್ಯಕ್ಕೆ ಸಹಭಾಗಿತ್ವ ನೀಡಿದ್ದವು.

2007: ಪುಣೆಯ ಗ್ರಾಮವೊಂದರಲ್ಲಿ ಇಕ್ಕಟ್ಟಾದ ಕೊಳವೆಬಾವಿಯೊಳಗೆ ಬಿದ್ದ ಶಿರೂರ್ ತಾಲ್ಲೂಕಿನ ವಡಗಾಂವ್ ರಸಾಯಿ ಗ್ರಾಮದ ಬಾಲಕ ಸೋನು ಶಿವಾಜಿ ದೇಶಮುಖ್ ಎಂಬ ಐದು ವರ್ಷದ ಬಾಲಕನನ್ನು ಮೇಲಕ್ಕೆ ಕರೆತರಲಾಯಿತು. ಆದರೆ ಆತ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ. ಈತ 150 ಅಡಿ ಆಳದ ಕೊಳವೆಬಾವಿಯಲ್ಲಿ ಬಿದ್ದು, 20 ಅಡಿ ಅಂತರದಲ್ಲೇ ಸಿಕ್ಕಿಹಾಕಿಕೊಂಡ. ಏಳು ತಾಸುಗಳ ಹರಸಾಹಸದ ನಂತರ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಬಾಲಕನನ್ನು ರಕ್ಷಿಸಿ ಮೇಲಕ್ಕೆ ಕರೆತಂದು ಆಸ್ಪತ್ರೆಗೆ ಸೇರಿಸಲಾಗಿತ್ತು.

2007: ಆಫ್ಘಾನಿಸ್ಥಾನದ ರಾಜಧಾನಿ ಕಾಬೂಲಿನಲ್ಲಿ ಸಂಭವಿಸಿದ ಮೂರು ಸ್ಫೋಟಗಳಲ್ಲಿ ಪೊಲೀಸರು ಸೇರಿ ಒಟ್ಟು 35 ಜನ ಬಲಿಯಾದರು. ಈ ಕೃತ್ಯಕ್ಕೆ ತಾನೇ ಕಾರಣ ಎಂದು ತಾಲಿಬಾನ್ ಉಗ್ರಗಾಮಿಗಳು ಘೋಷಿಸಿದರು.

2006: ದುಬೈಯಲ್ಲಿ ನಡೆದ ಐಐಎಫ್ಐ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಂಜಯ ಲೀಲಾ ಬನ್ಸಾಲಿ ನಿರ್ದೇಶನದ ಹಿಂದಿ ಚಿತ್ರ `ಬ್ಲ್ಯಾಕ್' ಪ್ರಶಸ್ತಿಗಳನ್ನು ಕೊಳ್ಳೆ ಹೊಡೆಯಿತು. ಉತ್ತಮ ಚಿತ್ರ, ಉತ್ತಮ ನಿರ್ದೇಶಕ, ಉತ್ತಮ ನಟ (ಅಮಿತಾಭ್ ಬಚ್ಚನ್), ಉತ್ತಮ ನಟಿ (ರಾಣಿ ಮುಖರ್ಜಿ), ಉತ್ತಮ ಪೋಷಕ ನಟಿ (ಆಯೇಷಾ ಕಪೂರ್), ಉತ್ತಮ ಛಾಯಾಗ್ರಹಣ, ಉತ್ತಮ ಸಂಕಲನ, ಉತ್ತಮ ಧ್ವನಿ ಗ್ರಹಣ ಮತ್ತು ಉತ್ತಮ ಹಿನ್ನೆಲೆ ಸಂಗೀತ ಪ್ರಶಸ್ತಿಗಳು `ಬ್ಲ್ಯಾಕ್'ಗೆ ಲಭಿಸಿದವು.

2006: ಮರಾಠಿಯ ಹೆಸರಾಂತ ಸಂಗೀತಗಾರ ಸ್ನೇಹಲ್ ಭಾಟ್ಕರ್ ಮತ್ತು ಹಿಂದಿಯ ಪ್ರಸಿದ್ಧ ಹಿನ್ನೆಲೆ ಗಾಯಕ ಮನ್ನಾ ಡೇ ಅವರನ್ನು 2004-05ನೇ ಸಾಲಿನ ಪ್ರತಿಷ್ಠಿತ ಲತಾ ಮಂಗೇಶ್ಕರ್ ಪ್ರಶಸ್ತಿಗೆ ಮಹಾರಾಷ್ಟ್ರ ಸರ್ಕಾರವು ಆಯ್ಕೆ ಮಾಡಿತು.

1980: ಅಮೆರಿಕದ ಟೆನಿಸ್ ಆಟಗಾರ್ತಿ ವೀನಸ್ ವಿಲಿಯಮ್ಸ್ ಜನನ.

1973: ಭಾರತದ ಟೆನಿಸ್ ಆಟಗಾರ ಲಿಯಾಂಡರ್ ಪೇಸ್ ಜನ್ಮದಿನ. ಇವರು ಮಹೇಶ್ ಭೂಪತಿ ಅವರೊಂದಿಗೆ ಫ್ರೆಂಚ್ ಓಪನ್, ವಿಂಬಲ್ಡನ್ ಡಬಲ್ಸ್ ಪ್ರಶಸ್ತಿಗಳನ್ನು ಗೆದ್ದುಕೊಂಡವರು.

1972: ವಾಟರ್ ಗೇಟ್ ಕಟ್ಟಡದಲ್ಲಿದ್ದ ಡೆಮಾಕ್ರಟಿಕ್ ಪಾರ್ಟಿ ನ್ಯಾಷನಲ್ ಕಮಿಟಿಯ ಕೇಂದ್ರ ಕಚೇರಿಗೆ ನುಗ್ಗಿದ್ದಕ್ಕಾಗಿ ಐವರನ್ನು ವಾಷಿಂಗ್ಟನ್ ಪೊಲೀಸರು ಬಂಧಿಸಿದರು. ಈ ಪ್ರಕರಣ ಉಲ್ಬಣಿಸುತ್ತಾ ಹೋಗಿ `ವಾಟರ್ಗೇಟ್ ಹಗರಣ' ಎಂದೇ ಖ್ಯಾತಿ ಪಡೆಯಿತು. ಅಷ್ಟೇ ಅಲ್ಲ 1974ರಲ್ಲಿ ಅಮೆರಿಕದ ಅಧ್ಯಕ್ಷ ರಿಚರ್ಡ್ ನಿಕ್ಸನ್ ರಾಜೀನಾಮೆಯೊಂದಿಗೆ ಪರ್ಯವಸಾನಗೊಂಡಿತು.

1958: ಗ್ವಾಲಿಯರ್ ಸಮೀಪದ ಕೊತಾಹ್-ಕಿ-ಸರಾಯ್ ರಣಾಂಗಣದಲ್ಲಿ ಅಶ್ವದಳ ಸೈನಿಕನಂತೆ ವೇಷ ಧರಿಸಿ ಹೋರಾಡುತ್ತಿದ್ದ ಝಾನ್ಸಿ ರಾಣಿ ಲಕ್ಷ್ಮೀಬಾಯಿ ಬ್ರಿಟಿಷ್ ಸೈನಿಕ ಹುಸ್ಸಾರ್ನಿಂದ ಹತಳಾದಳು. ಹುಸ್ಸಾರ್ ಗೆ ತನ್ನಿಂದ ಹತಳಾದ ವ್ಯಕ್ತಿ ಯಾರೆಂದು ಗೊತ್ತಿರಲಿಲ್ಲ. ಆಕೆ ಲಕ್ಷ್ಮೀಬಾಯಿ ಎಂದು ಅರಿವಾಗುತ್ತಿದ್ದಂತೆಯೇ ಜನರಲ್ ಹ್ಯೂಗ್ ರೋಸ್ `ಇಲ್ಲಿ ಮಲಗಿರುವುದು ಬಂಡುಕೋರರ ನಡುವಿನ ಏಕೈಕ ಪುರುಷ' ಎಂದು ಹೇಳಿ ಆಕೆಗೆ ಗೌರವ ಸಲ್ಲಿಸಿದ.

1950: ಷಿಕಾಗೋದಲ್ಲಿ ಮೊದಲ ಬಾರಿಗೆ ಮೂತ್ರಪಿಂಡ ಕಸಿ ಚಿಕಿತ್ಸೆ.

1939: ವಿಚಾರವಾದಿ, ಚಿಂತಕ, ಸಾಹಿತಿ ಡಾ. ಜಿ. ರಾಮಕೃಷ್ಣ ಅವರು ಸುಬ್ರಹ್ಮಣ್ಯಂ- ನರಸಮ್ಮ ದಂಪತಿಯ ಪುತ್ರನಾಗಿ ಮಾಗಡಿ ಬಳಿಯ ಕೆಂಪಸಾಗರದಲ್ಲಿ ಜನಿಸಿದರು.

1933: ಭಾರತದಲ್ಲಿ ಅಸಹಕಾರ ಚಳವಳಿ ಮುಕ್ತಾಯ.

1929: ಟೈಗ್ರನ್ ವಿ. ಪೆಟ್ರೋಸಿಯನ್ (1924-84) ಜನ್ಮದಿನ. ಈ ಸೋವಿಯತ್ ಚೆಸ್ ಗ್ರ್ಯಾಂಡ್ ಮಾಸ್ಟರ್ 1963ರಲ್ಲಿ ಜಾಗತಿಕ ಚೆಸ್ ಚಾಂಪಿಯನ್ ಶಿಪ್ ಗೆದ್ದುಕೊಂಡರು. 1969ರಲ್ಲಿ ತನ್ನ ಜನ್ಮದಿನದಂದೇ ಬೋರಿಸ್ ಸ್ಪಾಸ್ಕಿ ಎದುರು ಸೋತು ವಿಶ್ವ ಚೆಸ್ ಚಾಂಪಿಯನ್ ಶಿಪ್ ಕಳೆದುಕೊಂಡರು.

1917: ಅಹಮದಾಬಾದಿನ ಸಬರಮತಿ ಆಶ್ರಮದ ಹೃದಯಕುಂಜದಲ್ಲಿ ಮಹಾತ್ಮ ಗಾಂಧಿ ಮತ್ತು ಕಸ್ತೂರಿಬಾ ವಾಸ ಆರಂಭ.

1867: ಗ್ಲಾಸ್ಗೋದಲ್ಲಿ ಜೋಸೆಫ್ ಲಿಸ್ಟರ್ ತನ್ನ ಸಹೋದರಿ ಇಸಬೆಲ್ಲಾಳಿಗೆ ಸೆಪ್ಟಿಕ್ (ನಂಜು) ನಿರೋಧಕ ನೀಡಿ ಮೊತ್ತ ಮೊದಲ ಶಸ್ತ್ರಚಿಕಿತ್ಸೆ ನಡೆಸಿದ.

1674: ಶಿವಾಜಿಯ ತಾಯಿ ಜೀಜಾಬಾಯಿ ನಿಧನ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement